ಅಂಗಳ      +++

 ಕಾವೇರಿ ವಿವಾದಕ್ಕೆ ತಮಿಳುನಾಡಿನ ದುರಾಸೆಯೇ ಕಾರಣ-೩

 
ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್

ಕಾವೇರಿ ನದಿ ನೀರು ಹಂಚಿಕೆಯ ವಿವಾದ ಈಗಾಗಲೇ ನಾವು ಚರ್ಚಿಸಿರುವಂತೆ ಇಂದು ನೆನ್ನೆಯದಲ್ಲ. ಅದಕ್ಕೆ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಕರ್ನಾಟಕದಲ್ಲಿ ಕಾವೇರಿ ನದಿಗೆ ಕೃಷ್ಣರಾಜಸಾಗರ ಅಣೆಕಟ್ಟೆಯನ್ನು ಕಟ್ಟುವುದಕ್ಕೂ ಮುಂಚೆ ಬಹಳ ಹಿಂದಿನಿಂದಲೂ ಕೆರೆ ಮತ್ತು ಸಣ್ಣ ಸಣ್ಣ ಜಲಾಶಯಗಳ ಮೂಲಕ ನೀರಾವರಿಯನ್ನು ಅಭಿವೃದ್ದಿಪಡಿಸಲಾಗುತ್ತಿತ್ತು. ಸರ್ ಎಮ್. ವಿಶ್ವೇಶ್ವರಯ್ಯನವರ ಸತತ ಪರಿಶ್ರಮದಿಂದಾಗಿ ೧೯೧೧ರ ಹೊತ್ತಿಗೆ ಬೃಹತ್ ಜಲಾಶಯಗಳನ್ನು ನಿರ್ಮಿಸುವಂತಹ ಕಾರ್ಯಕ್ಕೆ ಅಂದಿನ ಮೈಸೂರು ರಾಜ್ಯದ ಒಡೆಯರು ಕಾರಣವಾಗಿದ್ದರು. ಕಾವೇರಿ ನದಿಗೆ ಮಂಡ್ಯ ಜಿಲ್ಲೆಯಲ್ಲಿ ಅಣೆಕಟ್ಟೆಯನ್ನು ಕಟ್ಟಲು ಅಂದಿನ ಮೈಸೂರು ಅರಸರು ಮುಂದಾದುದು ತಮಿಳುನಾಡಿನ ಕಣ್ಣನ್ನು ಕೆಂಪಾಗಿಸಿತ್ತು. (ಈಗಾಗಲೇ ಓದುಗರಿಗೆ ತಿಳಿದಿರುವಂತೆ ಇಂದಿನ ತಮಿಳುನಾಡು ಅಂದು ಮದ್ರಾಸು ರಾಜ್ಯವಾಗಿದ್ದು ಅದು ಬ್ರಿಟಿಷರ ನೇರ ಆಳ್ವಿಕೆಯಲ್ಲಿತ್ತು) ಸಾಮ್ರಾಟರಾಗಿದ್ದ ಬ್ರಿಟಿಷರು ತಮಿಳರ ಒತ್ತಾಯಕ್ಕೆ ಮಣಿದು ಈ ಯೋಜನೆಗೆ ತಕರಾರು ತೆಗೆದರು. ಅವರಿಗೆ ತಕರಾರು ತೆಗೆಯಲು ನೆರವಾದದ್ದು ಅವರೇ ರಚಿಸಿದ್ದ ಮೈಸೂರು ರಾಜ್ಯಕ್ಕೆ ಅತ್ಯಂತ ಮಾರಕವಾಗಿದ್ದ ೧೮೯೨ರ ಕರಾಳ ಒಪ್ಪಂದ.
 
೧೮೯೨ರಲ್ಲಿ ಬ್ರಿಟಿಷರು ಹೇರಿದ ನಿರ್ಬಂಧ
 
ಅಂದಿನ ಮೈಸೂರು ರಾಜ್ಯದಲ್ಲಿ ನೀರಾವರಿ ಯೋಜನೆಗಳು ಕುಂಠಿತಗೊಳ್ಳಲು ೧೮೯೨ ಹಾಗೂ ೧೯೨೪ರಲ್ಲಿ ಬ್ರಿಟಿಷರು ಮೈಸೂರು ರಾಜ್ಯದ ಮೇಲೆ ಹೇರಿದ್ದ ಬಲವಂತದ ಒಪ್ಪಂದಗಳೇ ಕಾರಣವಾಗಿವೆ. ಅಂದಿನ ಮದ್ರಾಸು ರಾಜ್ಯ ಬ್ರಿಟಿಷ್ ಪ್ರೆಸಿಡೆನ್ಸಿ ಆಫ್ ಮದ್ರಾಸಿನ ಆಳ್ವಿಕೆಯಲ್ಲಿತ್ತು. ಅಂದರೆ ಅಂದಿನ ಸಾಮ್ರಾಟರೆನಿಸಿದ್ದ ಬ್ರಿಟಿಷರ ನೇರ ಆಳ್ವಿಕೆಯಿದ್ದುದರಿಂದ ಅಲ್ಲಿನ ಜನತೆಗೆ ಅನುಕೂಲವಾಗುವಂತೆಯೇ ಬ್ರಿಟಿಷರು ವರ್ತಿಸುತ್ತಿದ್ದುದು ಸಹಜವೇ ಆಗಿತ್ತು. ಆಗ ಮೈಸೂರು ಅರಸರ ಸಂಸ್ಥಾನವಾಗಿತ್ತು. ಮೈಸೂರಿನ ಅರಸರು ಸಾಮ್ರಾಟರಾಗಿದ್ದ ಬ್ರಿಟಿಷರಿಗೆ ಸಾಮಂತರಾಗಿದ್ದರು. ಬ್ರಿಟಿಷರು ತರುತ್ತಿದ್ದ ಕಾಯಿದೆ ಕಾನೂನುಗಳನ್ನೂ, ಒಪ್ಪಂದಗಳನ್ನೂ ತಿರಸ್ಕರಿಸುವ ಅಧಿಕಾರ ಮೈಸೂರು ಸಂಸ್ಥಾನದ ಅರಸರಿಗಿರಲಿಲ್ಲ. ಎಷ್ಟಾದರೂ ಸಾಮಂತರಾಗಿದ್ದವರಲ್ಲವೇ? ಸಾಮ್ರಾಟರ ಅಣತಿಗೆ ತಲೆಬಾಗುವ ಅನಿವಾರ್ಯತೆಯಿತ್ತು. ಇಂತಹ ಅಧಿಕಾರವನ್ನು ಬಳಸಿಕೊಂಡೇ ೧೮೯೨ರಲ್ಲಿ ಮೈಸೂರಿನ ಮೇಲೆ ಬ್ರಿಟಿಷರು ಹೇರಿದ ಒಪ್ಪಂದದ ಅಂಶಗಳ ತಿರುಳೆಂದರೆ:
ಮೈಸೂರು ರಾಜ್ಯವು ಅಸ್ತಿತ್ವದಲ್ಲಿರುವ ಯಾವುದೇ ನೀರಾವರಿ ವ್ಯವಸ್ತೆಯ ದುರಸ್ತಿ ಮಾಡಬೇಕಿದ್ದಲ್ಲಿ ಮದ್ರಾಸು ಪ್ರಾಂತ್ಯದ ಒಪ್ಪಂದವನ್ನು ಕಡ್ಡಾಯವಾಗಿ ಪಡೆಯಬೇಕಿತ್ತು. ಮೈಸೂರಿನ ಯಾವುದೇ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಿದ್ದರೂ ಅನುಮತಿ ಕಡ್ಡಾಯವಾಗಿತ್ತು.
ಮತ್ತೊಂದು ಅಂಶವೆಂದರೆ ಕಾವೇರಿ ಕಣಿವೆಯಲ್ಲಿ ಮೈಸೂರು ರಾಜ್ಯವು ಯಾವುದೇ ನೀರಾವರಿ ಯೋಜನೆಗಳನ್ನೂ ಸಹ ಕೈಗೊಳ್ಳುವಂತಿಲ್ಲವೆಂದು ಮೈಸೂರು ಸಂಸ್ಥಾನಕ್ಕೆ ಸ್ಪಷ್ಟ ನಿರ್ಬಂದನೆ ವಿಧಿಸಲಾಗಿತ್ತು. ಆದರೆ ಅದೇ ಮದ್ರಾಸು ಪ್ರಾಂತ್ಯಕ್ಕೆ ಕಾವೇರಿ ಕಣಿವೆ ಸೇರಿದಂತೆ ಇತರೆ ಯಾವುದೇ ನದಿಗಳ ನೀರಾವರಿ ಯೋಜನೆಗಳನ್ನು ತನ್ನ ಇಚ್ಚೆಯಂತೆ ಅಭಿವೃದ್ದಿಪಡಿಸಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು.
 
ಹೇಗಿದೆ ನೋಡಿ ಬ್ರಿಟಿಷರು ತಮಿಳರ ಆಗ್ರಹಕ್ಕೆ ಮಣಿದು ತಮ್ಮ ಸಾಮಂತರಾಗಿದ್ದ ಮೈಸೂರು ಜನತೆಯ ಮೇಲೆ ಹೇರಿದ್ದ ಕರಾಳ ಕಟ್ಟುಪಾಡು?! ಇದೇ ಕಟ್ಟುಪಾಡು ೧೯೨೪ನೆಯ ಇಸವಿಯವರೆಗೂ ಜಾರಿಯಲ್ಲಿತ್ತು. ಅಂದರೆ ಈ ಕಾನೂನಿಗೆ ತಲೆಬಾಗಿ ಕರ್ನಾಟಕದಲ್ಲಿ ೩೨ ವರ್ಷಗಳ ಕಾಲ ಯಾವುದೇ ನೀರಾವರಿ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನಂತಹ ಮಹಾನುಭಾವರೊಬ್ಬರು ಮೈಸೂರು ರಾಜ್ಯದಲ್ಲಿರದಿದ್ದಲ್ಲಿ ಇನ್ನೂ ಹಲವಾರು ದಶಕಗಳ ಕಾಲ ಕರ್ನಾಟಕದಲ್ಲಿ ಯಾವುದೇ ನೀರಾವರಿ ಯೋಜನೆಗಳು ಸಾಧ್ಯವಾಗುತ್ತಿರಲಿಲ್ಲವೇನೋ? ಆದರೆ ವಿಶ್ವೇಶ್ವರಯ್ಯನವರು ಅಂದಿನ ಮೈಸೂರು ಅರಸರ ಮೇಲೆ ತೀರ್ವವಾದ ಒತ್ತಡವನ್ನು ತಂದು ಕನ್ನಂಬಾಡಿ (ಇಂದಿನ ಕೄಷ್ಣರಾಜಸಾಗರ) ಅಣೆಕಟ್ಟೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದರು.
 
ಇಂದು ಮಂಡ್ಯ ಜಿಲ್ಲೆಯಲ್ಲಿ ಯಾವ ಮನೆಯಲ್ಲಿ ನೋಡಿದರೂ ಸರ್ ಎಮ್. ವಿಶ್ವೇಶ್ವರಯ್ಯನವರ ಫೋಟೊಗಳು ರಾರಾಜಿಸುತ್ತಿರುವುದಕ್ಕೆ ಕಾರಣ ಅವರು ಆ ಜಿಲ್ಲೆಗೆ ಸಲ್ಲಿಸಿರುವ ಅನುಪಮ ಸೇವೆ. ಇಂದು ಕರ್ನಾಟಕದ ಪಾಲಿಗೆ ಭಾಗ್ಯಶಿಲ್ಪಿಗಳೆಂದೇ ಮನೆಮಾತಾಗಿರುವ ಸರ್ ಎಮ್ ವಿಶ್ವೇಶ್ವರಯ್ಯನವರು ೧೫-೧೧-೧೯೦೯ ರಂದು ಅಂದಿನ ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್ ಆಗಿ ನೇಮಕಗೊಂಡರು. ಅವರು ಆ ಹುದ್ದೆಯನ್ನು ವಹಿಸಿಕೊಂಡ ಕೂಡಲೇ ಸುಮ್ಮನೆ ಕೂರಲಿಲ್ಲ. ಹಾಗೆ ಸುಮ್ಮನೆ ಕೂರುವ ಸ್ವಭಾವವೂ ಅವರದಾಗಿರಲಿಲ್ಲ. ಕರ್ನಾಟಕದ ಕಾವೇರಿ ನೀರು ತಮಿಳುನಾಡಿಗೆ ಹರಿದು ಪೋಲಾಗಿ ಸಮುದ್ರ ಸೇರುತ್ತಿದ್ದು, ಅದನ್ನು ತಡೆದು ರಾಜ್ಯಕ್ಕೆ ಅನುಕೂಲವಾಗುವಂತೆ ಕಾವೇರಿ ನದಿಗೆ ಅಣೆಕಟ್ಟೆಯನ್ನು ಕಟ್ಟುವ ಯೋಜನೆಯನ್ನು ಕೈಗೆತ್ತಿಕೊಂಡರು. ಅದೇನೂ ಸುಲಭದಲ್ಲಾಗುವ ಕೆಲಸವಾಗಿರಲಿಲ್ಲ ಏಕೆಂದರೆ ಅದಕ್ಕೆ ತಗಲುವ ವೆಚ್ಚ ಅಪಾರವಾಗಿತ್ತು. ಅಂದಿನ ಕಾಲಕ್ಕೇ ಬೃಹತ್ ಯೋಜನೆಯಾಗಿದ್ದ ಕನ್ನಂಬಾಡಿ ಅಣೆಕಟ್ಟೆಯ ನಿರ್ಮಾಣಕ್ಕೆ ಅಂದಿನ ಮೈಸೂರು ಮಹಾರಾಜರು ಆರಂಭದಲ್ಲಿ ಸುತರಾಂ ಒಪ್ಪಲಿಲ್ಲ. ಅದಕ್ಕೆ ಬಲವಾದ ಕಾರಣವೂ ಇತ್ತು. ಅಂದು ಆ ಯೋಜನೆಗೆ ತಗಲುವ ಒಟ್ಟು ವೆಚ್ಚ ೨೫೩ ಲಕ್ಷ ರೂಗಳಾಗಿದ್ದುದು. ಅದೇನೂ ಅಂದಿನ ಕಾಲಕ್ಕೆ ಕಡಿಮೆಯ ಮೊತ್ತವಲ್ಲ. ಈ ಯೋಜನೆಗೆ ಇಷ್ಟು ಅಪಾರವಾದ ಮೊತ್ತ ವ್ಯಯಮಾಡುವುದಕ್ಕೆ ಮಹಾರಾಜರಿಗೆ ಸಾಧ್ಯವಾಗುತ್ತಿರಲಿಲ್ಲ. ಆಗಿನ ಮೈಸೂರು ರಾಜ್ಯದ ಒಟ್ಟು ಅದಾಯವೇ ೨೫೦ ಲಕ್ಷ ರೂಪಾಯಿಗಳಾಗಿದ್ದವು. ಇಡೀ ರಾಜ್ಯದ ಒಟ್ಟು ಆದಾಯವನ್ನು ತೊಡಗಿಸಿದರೂ ಇನ್ನೂ ೩ ಲಕ್ಷ ರೂ ಗಳ ಕೊರತೆಯುಂಟಾಗುತ್ತಿತ್ತು. ಒಂದೇ ಯೋಜನೆಗೆ ರಾಜ್ಯದ ವರಮಾನವನ್ನೆಲ್ಲಾ ವಿನಿಯೊಗಿಸಿದಲ್ಲಿ ಇತರೆ ಅಭಿವೃದ್ದಿ ಕೆಲಸಗಳನ್ನು ಮಾಡಲು ಸಾದ್ಯವಾಗುವುದಿಲ್ಲ, ಅಲ್ಲದೆ ನೌಕರರ ಸಂಬಳ ಸಾರಿಗೆಗೂ ಹಣವಿಲ್ಲದಂತಾಗುತ್ತದೆನ್ನುವುದು ಮಹಾರಾಜರ ಆತಂಕವಾಗಿತ್ತು. ಇಷ್ಟು ಅಪಾರವಾದ ಹಣವನ್ನು ವ್ಯಯಿಸಿದರೂ ೧೮೯೨ರಲ್ಲಿ ಹೇರಲಾಗಿದ್ದ ಒಪ್ಪಂದದಂತೆ ಮದ್ರಾಸಿನ ಬ್ರಿಟಿಷ್ ಆಡಳಿತ ಅನುಮತಿ ನೀಡದಿದ್ದರೇನು ಮಾಡುವುದೆಂಬ ಆತಂಕವೂ ಅವರಿಗಿತ್ತು. ಆದ್ದರಿಂದಲೇ ಅವರು ಕನ್ನಂಬಾಡಿ ಯೋಜನೆಗೆ ಅನುಮತಿ ನೀಡಲಾಗದ ಅನಿವಾರ್ಯತೆಗೆ ಸಿಲುಕಿದ್ದರು. ಆದರೆ ವಿಶ್ವೇಶ್ವರಯ್ಯನವರು ತಮ್ಮ ಪಟ್ಟು ಸಡಿಲಿಸಲಿಲ್ಲ. ಅಂತಿಮವಾಗಿ ಯೋಜನೆಗೆ ಅನುಮತಿ ನೀಡದಿದ್ದಲ್ಲಿ ತಾನು ಮುಖ್ಯ ಎಂಜಿನಿಯರ್ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಒತ್ತಡ ಮಾಡಿದ್ದರಿಂದ ಅನಿವಾರ್ಯವಾಗಿ ಮೈಸೂರು ಮಹಾರಾಜರು ೧೯೧೧ ರಂದು ಒಪ್ಪಿಗೆ ನೀಡಬೇಕಾಯಿತು. ಆದರೆ ಯೋಜನೆಯನ್ನು ಜಾರಿಗೊಳಿಸಬೇಕಾದರೆ ಮದ್ರಾಸು ಪ್ರಾಂತ್ಯದ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿತ್ತು. ಮೈಸೂರಿನಲ್ಲಿ ಕಾವೇರಿಗೆ ಅಣೆಕಟ್ಟೆಯನ್ನು ಕಟ್ಟಲು ನಡೆಯುತ್ತಿರುವ ಸಿದ್ದತೆಗಳನ್ನು ಅರಿತ ತಮಿಳರು ಅದೇ ಸಮಯಕ್ಕೆ ಮದ್ರಾಸು ಸರಕಾರವೂ ತಮಿಳುನಾಡಿನ ಮೆಟ್ಟೂರಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಬೇಕೆಂದು ಒತ್ತಾಯಿಸತೊಡಗಿದ್ದರು. ತಮಿಳರ ಒತ್ತಾಯಕ್ಕೆ ಮಣಿದ ಮದ್ರಾಸ್ ಬ್ರಿಟಿಷ್ ಸರ್ಕಾರವೂ ಮೆಟ್ಟೂರಿನಲ್ಲಿ ಅಣೆಕಟ್ಟೆಯನ್ನು ಕಟ್ಟುವ ಯೋಜನೆಯನ್ನು ರೂಪಿಸತೊಡಗಿತ್ತು.
 
ಕನ್ನಂಬಾಡಿಯ ನೀರು ಸಂಗ್ರಹಣಾ ಸಾಮರ್ಥ್ಯ ೪೪ ಟಿ. ಎಮ್. ಸಿ ಗಳಾದರೆ ಮದ್ರಾಸಿನ ಮೆಟ್ಟೂರಿನ ಅಣೆಕಟ್ಟೆಯ ನೀರು ಸಂಗ್ರಹಣಾ ಸಾಮರ್ಥ್ಯ ನಮ್ಮದರ ಎರಡರಷ್ಟಿತ್ತು. ಮೈಸೂರು ರಾಜ್ಯ ಕನ್ನಂಬಾಡಿ ಜಲಾಶಯ ನಿರ್ಮಿಸಿದರೆ ತನ್ನ ಅಣೆಕಟ್ಟೆಗೆ ನೀರು ಸಾಕಾಗುವುದಿಲ್ಲವೆಂದು ಮದ್ರಾಸು ಸರ್ಕಾರ ತಕರಾರು ತೆಗೆಯಿತು. ಯಾವ ಕಾರಣಕ್ಕೂ ತಾನು ಅನುಮತಿ ನೀಡುವುದಿಲ್ಲವೆಂದು ತಮಿಳುನಾಡು ಹಠ ಹಿಡಿದು ಕುಳಿತಿತು. ಆದರೆ ವಿಶ್ವೇಶ್ವರಯ್ಯನವರ ಸತತ ಹೋರಾಟದಿಂದಾಗಿ ಕೊನೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕಾಯಿತು. ಅಂತಿಮವಾಗಿ ಕೇಂದ್ರದ ಅನುಮತಿಯನ್ನು ದೊರಕಿಸಿಕೊಳ್ಳುವಲ್ಲಿ ವಿಶ್ವೇಶ್ವರಯ್ಯನವರು ಯಶಸ್ವಿಯಾದರಾದರು ಕೇಂದ್ರ ಸರ್ಕಾರ ಕನ್ನಂಬಾಡಿಯ ಎತ್ತರವನ್ನು ೧೨೪ ಅಡಿಗಳ ಬದಲಿಗೆ ೮೦ ಅಡಿಗಳಿಗೆ ನಿರ್ಬಂಧಿಸಿದ್ದು ಅವರಿಗೆ ಅಘಾತವನ್ನುಂಟುಮಾಡಿತ್ತು.
 
ಇಂದು ನಾವು ನಮಗೆ ನ್ಯಾಯಯುತವಾದ ಕಾವೇರಿ ನದಿ ನೀರಿನ ಪಾಲನ್ನು ಪಡೆಯಲು ಪ್ರಖ್ಯಾತವಾದ ವಕೀಲರುಗಳನ್ನು ನೇಮಿಸಿಕೊಂಡು ಅವರಿಗಾಗಿ ಕೋಟ್ಯಾಂತರ ಹಣವನ್ನು ನೀಡಿದ್ದರೂ ಸಹ ನಮಗೆ ಅವರಿಂದ ನ್ಯಾಯ ದೊರಕಲಿಲ್ಲ. ಆದರೆ ೧೯೧೧ ರಂದು ಮೈಸೂರು ಮಹಾಜರಿಂದ ಕನ್ನಂಬಾಡಿ ಯೋಜನೆಗೆ ಅನುಮತಿಯನ್ನು ಪಡೆದುಕೊಂಡರೂ ವಿಶ್ವೇಶ್ವರಯ್ಯನವರ ಮುಂದಿದ್ದ ಸವಾಲುಗಳೇನೂ ಸುಲಭದ್ದಾಗಿರಲಿಲ್ಲ. ಅವರು ಮದ್ರಾಸು ಪ್ರಾಂತ್ಯ ಅನುಮತಿಯನ್ನು ನೀಡದಿದ್ದಾಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರಾದರೂ ಅಂದಿನ ಕೇಂದ್ರ ಸರ್ಕಾರ ತನ್ನ ನೇರ ಅಧೀನದಲ್ಲಿದ್ದ ಮದ್ರಾಸು ರಾಜ್ಯದ ಜನತೆಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದಲೇ ಕನ್ನಂಬಾಡಿಯ ಎತ್ತರವನ್ನು ೮೦ ಅಡಿಗಳಿಗೆ ನಿರ್ಬಂಧಿಸಿತ್ತು. ಇದರಿಂದಾಗಿ ತೀರ್ವವಾಗಿ ನೊಂದುಕೊಂಡ ಸರ್ ಎಮ್. ವಿ. ಯವರು ಎದೆಗುಂದಲಿಲ್ಲ. ಕೇಂದ್ರ ಸರ್ಕಾರ ಕನ್ನಂಬಾಡಿಯ ಎತ್ತರವನ್ನು ೮೦ ಅಡಿಗಳಿಗೆ ಸೀಮಿತಗೊಳಿಸಿದ್ದರಿಂದ ಒಂದರ್ಥದಲ್ಲಿ ಮೈಸೂರಿನ ನೀರಾವರಿ ಯೋಜನೆಯೇ ವ್ಯರ್ಥವಾಗಲಿತ್ತು. ಮೈಸೂರು ಮಹಾರಾಜರೊಂದಿಗೆ ಎರಡು ವರ್ಷ ಹೆಣಗಾಡಿ ಅನುಮತಿ ಪಡೆದ ನಂತರ ಕೇಂದ್ರ ಇಂತಹ ನಿರ್ಬಂಧ ವಿಧಿಸಿದರೆ ಅವರಿಗೆ ಏನಾಗಬೇಡ? ಒಂದು ವೇಳೆ ಕೇಂದ್ರ ಸರ್ಕಾರ ತನ್ನ ನಿರ್ಬಂಧವನ್ನು ಸಡಿಲಿಸಿ ಅಣೆಕಟ್ಟೆಯ ಎತ್ತರವನ್ನು ೧೨೪ ಅಡಿಗಳಿಗೆ ಎತ್ತರಿಸಲು ಅನುಮತಿಯನ್ನು ಪುನರ್ ವಿಮರ್ಶಿಸದಿದ್ದಲ್ಲಿ ಮಹಾರಾಜರು ತಾವು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯೂ ಇತ್ತು. ಈ ಎಲ್ಲಾ ಸಾಧ್ಯತೆಯನ್ನು ಅರಿತಿದ್ದ ಅವರು ಕೇಂದ್ರ ಸರ್ಕಾರದ ಮುಂದೆ ೧೨೪ ಅಡಿಗಳಿಗೆ ಅನುಮತಿಯನ್ನು ನೀಡಬೇಕೆಂದು ಒತ್ತಾಯಿಸಿದ್ದರು. ಕನ್ನಂಬಾಡಿ ಅಣೆಕಟ್ಟೆಗೆ ತೊಂದರೆ ಕೊಡುತ್ತಿರುವ ತಮಿಳರ ಕುತಂತ್ರವನ್ನು ಅವರು ಕೇಂದ್ರಕ್ಕೆ ಮನವರಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಗೊಂದಲಕ್ಕೀಡಾದ ಕೇಂದ್ರ ಸರ್ಕಾರ ಈ ವ್ಯಾಜ್ಯವನ್ನು ಬಗೆ ಹರಿಸಲು ನ್ಯಾಯ ಪಂಚಾಯ್ತಿಯನ್ನು ನೇಮಿಸಿ ಕೈತೊಳೆದುಕೊಂಡಿತ್ತು.
 
ಇಷ್ಟೆಲ್ಲಾ ಘಟನೆಗಳು ನಡೆಯುವಷ್ಟರಲ್ಲಿ ಮತ್ತೆ ೫ ವರ್ಷಗಳು ಕಳೆದು ಹೋಗಿದ್ದವು. ೧೯೧೬ರಲ್ಲಿ ಆರಂಭವಾದ ನ್ಯಾಯ ಪಂಚಾಯ್ತಿಯ ವಿಚಾರಣೆಯಲ್ಲಿ ಯಾವ ವಕೀಲರುಗಳನ್ನೂ ನೇಮಿಸಿಕೊಳ್ಳದ ವಿಶ್ವೇಶ್ವರಯ್ಯನವರು ಮೈಸೂರು ರಾಜ್ಯದ ಪರವಾಗಿ ತಾವೇ ವಾದ ಮಂಡಿಸಲು ಮುಂದಾದರು. ಏಕೆಂದರೆ ಈ ಯೋಜನೆ ಅವರಿಗೆ ಪ್ರತಿಷ್ಟೆಯಾಗಿತ್ತಲ್ಲದೆ ಮೈಸೂರು ರಾಜ್ಯದ ರೈತರ ಹಿತ ಕಾಯುವ ಭವಿಷ್ಯವೂ ಆಗಿತ್ತು. ಅಲ್ಲದೆ ನೀರಾವರಿ ವಿಷಯದಲ್ಲಿ ತಮಗಿಂತ ಚೆನ್ನಾಗಿ ವಕೀಲರು ವಾದಿಸಲಾರರೆಂಬುದರ ಅರಿವು ಅವರಿಗಿತ್ತು. ಈ ಎಲ್ಲಾ ಕಾರಣಗಳಿಂದ ತಾವೇ ನ್ಯಾಯ ಪಂಚಾಯ್ತಿಯ ಮುಂದೆ ವಾದಿಸತೊಡಗಿದ್ದರು. ತಮ್ಮ ಕೂಲಂಕುಷ ಅಧ್ಯಯನದಿಂದ ಸಂಗ್ರಹಿಸಿದ್ದ ಅಂಕಿ ಅಂಶಗಳ ಮೂಲಕ ತಮಿಳುನಾಡಿನ ಹುನ್ನಾರವನ್ನು ಬಯಲಿಗೆಳೆಯುವಲ್ಲಿ ವಿಶ್ವೇಶ್ವರಯ್ಯನವರು ಯಶಸ್ವಿಯಾಗಿದ್ದರು. ಅವರ ಪ್ರಕಾಂಡ ಬುದ್ದಿಮತ್ತೆಯ ಕಾರ್ಯ ವೈಖರಿಗೆ ಇಡೀ ನ್ಯಾಯ ಪಂಚಾಯ್ತಿಯ ಸದಸ್ಯರುಗಳೇ ತಲೆದೂಗಿದ್ದರು. ತಮ್ಮ ವಾದವನ್ನು ಪ್ರಖರವಾಗಿ ಮಂಡಿಸಿದ ಅವರು ಕಾವೇರಿ ನದಿಯಲ್ಲಿ ಶೇಖರಣೆಯಾಗುವ ಮುಕ್ಕಾಲು ಭಾಗ ನೀರು ಮೈಸೂರು ರಾಜ್ಯದ ಜಲಾನಯನ ಪ್ರದೇಶಗಳಿಂದಲೇ ಉತ್ಪತ್ತಿಯಾಗುವುದೆಂಬುದನ್ನು ಮನವರಿಕೆ ಮಾಡಿಕೊಟ್ಟರು. ನೀರಿನ ಬಹುಪಾಲು ಕರ್ನಾಟಕದ್ದೇ ಆದರೂ ಕೂಡ ಅದು ತನ್ನ ಯೋಜನೆಗಳಿಗಾಗಿ ಬಳಸಿಕೊಳ್ಳುತ್ತಿರುವ ನೀರಿನ ಪ್ರಮಾಣ ಶೇಕಡಾ ೮ ರಷ್ಟು ಮಾತ್ರ. ಇಂತಹ ಯೋಜನೆಗಳಿಂದ ಕರ್ನಾಟಕದಲ್ಲಿ ಕೇವಲ ೧,೧೫,೦೦೦ ಎಕರೆಗಳಷ್ಟು ಪ್ರದೇಶ ಮಾತ್ರನೀರಾವರಿಗೆ ಒಳಪಟ್ಟುದುದಾಗಿತ್ತು. ಆದರೆ ಅದೇ ವರ್ಷದಲ್ಲಿ ತಮಿಳುನಾಡಿನಲ್ಲಿದ್ದ ನೀರಾವರಿ ಪ್ರದೇಶದ ವಿಸ್ತೀರ್ಣ ೧೨,೨೫,೦೦೦ ಎಕರೆಗಳಷ್ಟು. ಅಂದರೆ ತಮಿಳುನಾಡಿನ ನೀರಾವರಿ ಪ್ರದೇಶಗಳ ವಿಸ್ತೀರ್ಣದ ಶೇಕಡಾ ೧೦ ಭಾಗವೂ ಕರ್ನಾಟಕದಲ್ಲಿ ನೀರಾವರಿಯಾಗಿರಲಿಲ್ಲ. ಬಹುಪಾಲು ನೀರು ಕರ್ನಾಟಕದಿಂದ ಹರಿದು ಹೋದರೂ ಕರ್ನಾಟಕದ ಕಾವೇರಿಕೊಳ್ಳದ ಬಹುತೇಕ ತಾಲೂಕುಗಳು ಬರಪೀಡಿತವಾಗಿರುವುದನ್ನು ವಿಶ್ವೇಶ್ವರಯ್ಯನವರು ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ಇವರ ಸಮರ್ಥವಾದ ವಾದವನ್ನೂ, ನಿಖರವಾದ ಅಂಕಿ ಅಂಶಗಳ ಮೂಲಕ ಅಂದಿನ ಮೈಸೂರು ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಸಾಬೀತು ಪಡಿಸಿದ ರೀತಿಗೆ ನ್ಯಾಯ ಪಂಚಾಯ್ತಿಗೆ ಕನ್ನಂಬಾಡಿ ಅಣೆಕಟ್ಟೆಯ ಎತ್ತರವನ್ನು ೧೨೪ ಅಡಿಗಳಿಗೆ ಎತ್ತರಿಸಿಕೊಳ್ಳಲು ನಿರಾಕರಿಸುವ ಯಾವ ಕಾರಣಗಳೂ ಕಾಣಲಿಲ್ಲ.
 
ಸರ್. ಎಮ್. ವಿಶ್ವೇಶ್ವರಯ್ಯನವರು ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಎಳೆ ಎಳೆಯಾಗಿ ನ್ಯಾಯ ಪಂಚಾಯ್ತಿಯ ಮುಂದೆ ಬಿಚ್ಚಿಟ್ಟಿದ್ದರ ಪರಿಣಾಮ ಮೈಸೂರು ರಾಜ್ಯಕ್ಕೆ ಕನ್ನಂಬಾಡಿಯ ಎತ್ತರವನ್ನು ೧೨೪ ಅಡಿಗಳಿಗೆ ಹೆಚ್ಚಿಸಿಕೊಳ್ಳುವಲ್ಲಿ ನೆರವಾಯಿತಾದರೂ ನ್ಯಾಯ ಪಂಚಾಯ್ತಿ ನೀಡಿದ್ದ ತೀರ್ಪು ಮತ್ತೆ ಕರ್ನಾಟಕಕ್ಕೆ ಅನ್ಯಾಯದ್ದೇ ಆಗಿತ್ತು. ಕನ್ನಂಬಾಡಿ ಗೆ ಅನುಮತಿ ಪಡೆಯುವಲ್ಲಿ ಕರ್ನಾಟಕಕ್ಕೆ ೧೩ ವರ್ಷಗಳಷ್ಟು ಸುದೀರ್ಘವಾದ ಸಮಯ ಕಾಯಬೇಕಾಗಿ ಬಂದಿತ್ತು. ೧೯೧೧ ರಿಂದ ೧೯೨೪ ರವರೆಗೆ ಕರ್ನಾಟಕದಲ್ಲಿ ಯಾವುದೇ ನೀರಾವರಿ ಯೋಜನೆಗಳನ್ನು ಮಾಡದ್ದರಿಂದ ೧೩ ವರ್ಷಗಳು ನಮ್ಮ ರೈತರು ಬರಗಾಲದ ಬವಣೆಯಲ್ಲಿಯೇ ಬದುಕು ಸಾಗಿಸಿದ್ದರು. ಇದು ಅಂದಿನ ಮೈಸೂರು ರಾಜ್ಯಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿತ್ತು. ಆದರೆ ಅದಕ್ಕಿಂತ ಆದ ದುರಂತವೆಂದರೆ ತಮಿಳರ ಕುಮ್ಮಕ್ಕಿನಿಂದಾಗಿ ನ್ಯಾಯ ಪಂಚಾಯ್ತಿ ಕೇಂದ್ರ ಸರ್ಕಾರದ ಅಣತಿಗೆ ತಲೆಬಾಗಿ ಮೈಸೂರು ರಾಜ್ಯದ ಮೇಲೆ ಮತ್ತೊಂದು ಒಪ್ಪಂದವನ್ನು ಹೇರಿತ್ತು.
 
೧೯೨೪ ರ ಮತ್ತೊಂದು ಕರಾಳ ಒಪ್ಪಂದ
 
೧೮೯೨ರ ಒಪ್ಪಂದಕ್ಕಿಂತಲೂ ೧೯೨೪ರ ಒಪ್ಪಂದ ಯಾವ ರೀತಿಯಲ್ಲೂ ಭಿನ್ನವಾಗಿರಲಿಲ್ಲ. ೧೮೯೨ರಿಂದ ೧೯೨೪ ರವರೆಗೆ ಮೈಸೂರು ರಾಜ್ಯ ಯಾವ ರೀತಿಯ ನೀರಾವರಿ ಯೋಜನೆಗಳನ್ನೂ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಒಟ್ಟು ೩೨ ವರ್ಷ ನಮ್ಮ ಕಾವೇರಿ ಕರ್ನಾಟಕದಿಂದ ತಮಿಳುನಾಡಿಗೆ ಹರಿದು ಹೋಗಿದ್ದಳು. ಇತ್ತ ೩೨ ವರ್ಷಗಳಷ್ಟು ಕಾಲ ನಮ್ಮ ರೈತರು ಪಡಬಾರದ ಬವಣೆ ಅನುಭವಿಸಿದ್ದರು. ಕೇವಲ ಒಂದು ಕನ್ನಂಬಾಡಿ ಯೋಜನೆಗೆ ಅನುಮತಿ ದೊರಕಿಸಿಕೊಳ್ಳಲು ಕರ್ನಾಟಕ ಇನ್ನಷ್ಟು ಕಟ್ಟುಪಾಡಿಗೆ ಒಳಗಾಗಬೇಕಾಯಿತು. ಅದೇ ೧೯೨೪ ರ ಮತ್ತೊಂದು ಒಪ್ಪಂದ. ಮತ್ತೂ ದುರಂತವೆಂದರೆ ಈ ಒಪ್ಪಂದದ ನಿಯಮಗಳನ್ನು ೫೦ ವರ್ಷ ಕರ್ನಾಟಕ ಪಾಲಿಸಬೇಕಾದದ್ದು.
 
೧೮೯೨ ರ ವಿಕೃತ ರೂಪವೇ ೧೯೨೪ ರ ಒಪ್ಪಂದ. ಆ ಒಪ್ಪಂದದ ಪ್ರಕಾರ ಕಾವೇರಿ ನದಿಯಲ್ಲಿ ಕನಿಷ್ಟ ಮಟ್ಟಕ್ಕಿಂತ ಹೆಚ್ಚಿನ ನೀರು ಹರಿದಾಗ ಮಾತ್ರವೇ ಕರ್ನಾಟಕ ಆ ನೀರನ್ನು ಸಂಗ್ರಹಿಸಬಹುದಿತ್ತು. ಕನ್ನಂಬಾಡಿ ಯೋಜನೆಗೆ ಕರ್ನಾಟಕವು ಮುಂದಾದಾಗಲೇ ತಮಿಳುನಾಡು ಸಹ ಮೆಟ್ಟೂರು ಜಲಾಶಯಕ್ಕೆ ತಯಾರಿ ನಡೆಸಿತ್ತು. ಇನ್ನೂ ನಿರ್ಮಾಣವೇ ಆಗದಿದ್ದ ಮೆಟ್ಟೂರು ಜಲಾಶಯಕ್ಕೆ ಕರ್ನಾಟಕವು ಅನುವು ಮಾಡಿಕೊಡಬೇಕೆಂಬ ಅಂಶ ೧೯೨೪ ರಲ್ಲಿ ಆದ ಒಪ್ಪಂದದಲ್ಲಿ ಸೇರಿತ್ತು. ಮೆಟ್ಟೂರಿನ ಜಲಾಶಯದ ನೀರು ಸಂಗ್ರಹಣ ಸಾಮರ್ಥ್ಯ ೯೩.೫ ಟಿ. ಎಮ್. ಸಿ ಗಳಷ್ಟಾಗಿತ್ತು. ಇದರಿಂದ ೩,೦೧,೦೦೦ ಎಕೆರೆಗಳಷ್ಟು ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿತ್ತು. ಕೂಸು ಹುಟ್ಟುವುದಕ್ಕು ಮೊದಲೇ ಕುಲಾವಿ ಹೊಲೆಸಿದಂತೆ ತಮಿಳುನಾಡು ತನ್ನ ಯೋಜನೆಯನ್ನು ಇನ್ನೂ ಆರಂಭಿಸದಿದ್ದರೂ ಸಹ ಅದಕ್ಕೆ ಅನುಮತಿಯನ್ನು ಪಡೆದಿತ್ತು. ಈ ಒಪ್ಪಂದದಿಂದ ಕರ್ನಾಟಕದ ಕನ್ನಂಬಾಡಿಯ ನೀರು ಸಂಗ್ರಹ ಸಾಮರ್ಥ್ಯ ೪೪.೮೩ ಟಿ. ಎಮ್. ಸಿ ಗಳಿಗಷ್ಟೇ ಸೀಮಿತಗೊಳಿಸಿದ್ದರೆ ಮೆಟ್ಟೂರಿನ ಜಲಾಶಯದ ಸಾಮರ್ಥ್ಯ ಅದರ ಎರಡು ಪಟ್ಟಿಗಿಂತಲೂ ಹೆಚ್ಚಾಗಿತ್ತು. ಅಲ್ಲದೆ ಕನ್ನಂಬಾಡಿಗೆ ಅನುಮತಿ ಪಡೆಯಲು ಕರ್ನಾಟಕ ಆಗಲೇ ೧೩ ವರ್ಷಗಳಷ್ಟು ಸುದೀರ್ಘ ಸಮಯ ಸವೆಸಿತ್ತು. ಆದರೆ ೧೯೨೪ ರ ಒಪ್ಪಂದದಲ್ಲೇ ತಮಿಳುನಾಡು ತನ್ನ ಎಲ್ಲಾ ನೀರಾವರಿ ಯೋಜನೆಗಳಿಗೆ ಅನುಮತಿಯನ್ನು ಪಡೆದುಬಿಟ್ಟಿತ್ತು! ಮೆಟ್ಟೂರು ಜಲಾಶಯವಷ್ಟೇ ಅಲ್ಲದೆ ಮುಂದೆ ಕಾವೇರಿ ಮತ್ತು ಅದರ ಉಪ ನದಿಗಳಿಗೆ ತಮಿಳುನಾಡಿನಲ್ಲಿ ಅಣೆಕಟ್ಟೆಯನ್ನು ಕಟ್ಟಿಕೊಳ್ಳುವುದಕ್ಕೆ ಮುಂಗಡವಾಗಿಯೇ ಈ ಒಪ್ಪಂದದಿಂದಾಗಿ ಅನುಮತಿ ಗಿಟ್ಟಿಸಿಕೊಂಡಿತ್ತು. ಹೇಗಿದೆ ನೋಡಿ ತಮಿಳು ರಾಜಕಾರಣಿಗಳ ಕುತಂತ್ರ? ಅಲ್ಲದೆ ಮೆಟ್ಟೂರು ಜಲಾಶಯದ ನದಿ ಮುಖಜ ಭೂಮಿಯಲ್ಲಿ ತಾನು ಬೆಳೆಯಲಿರುವ ಎರಡನೇ ಬೆಳೆಗೂ ಕರ್ನಾಟಕ ತನ್ನ ಅಣೆಕಟ್ಟೆಯಿಂದ ನೀರನ್ನು ಒದಗಿಸಬೇಕೆಂದೂ ಈ ಒಪ್ಪಂದವು ಸೂಚಿಸಿತ್ತು.
 
ಆದರೆ ಕರ್ನಾಟಕ ಮುಂದೆ ಕಾವೇರಿ ಹಾಗೂ ಅದರ ಉಪನದಿಗಳಿಗೆ ಜಲಾಶಯ ನಿರ್ಮಿಸಬೇಕಿದ್ದಲ್ಲಿ ಮತ್ತೆ ಅದಕ್ಕೆ ಅಂದಿನ ಮದ್ರಾಸು ಪ್ರಾಂತ್ಯದ ಪೂರ್ವಬಾವಿ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿತ್ತು. ಕೇವಲ ಒಂದು ಜಲಾಶಯದ ಅನುಮತಿಗಾಗಿ ೧೩ ವರ್ಷ ಕಾಯಬೇಕಾದ ಕರ್ನಾಟಕಕ್ಕೆ ೧೯೨೪ ರ ಒಪ್ಪಂದದಂತೆ ತನ್ನ ಜಲಾನಯನ ಪ್ರದೇಶಗಳಲ್ಲಿ ಮುಂದಿನ ನೀರಾವರಿ ಯೋಜನೆಗಳಿಗೆ ತಮಿಳುನಾಡಿನಿಂದ ಅನುಮತಿಯನ್ನು ಪಡೆಯುವುದು ದುಸ್ಸಾಧ್ಯವಾಗಿತ್ತು. ಹಾಗೆ ಒಂದು ವೇಳೆ ಜಲಾಶಯಕ್ಕೆ ಅನುಮತಿ ಪಡೆದರೂ ಅವುಗಳೆಲ್ಲದರ ಒಟ್ಟು ನೀರು ಸಂಗ್ರಹಣಾ ಸಾಮರ್ಥ್ಯ ೪೫ ಟಿ. ಎಮ್. ಸಿ. ಗಳನ್ನು ಮೀರಬಾರದೆಂದೂ, ಅಲ್ಲದೆ ಈ ಸಂಗ್ರಹಣೆಯನ್ನು ಕಾವೇರಿ ನದಿ ನೀರಿನ ಪ್ರಮಾಣ ಒಂದು ನಿರ್ದಿಷ್ಟ ಮಟ್ಟಕ್ಕಿಂತ ಜಾಸ್ತಿಯಾದಾಗ ಮಾತ್ರ ಮಾಡಬೇಕೆಂಬ ಷರತ್ತನ್ನು ಮೀರುವಂತಿರಲಿಲ್ಲ. ೧೯೨೪ ರ ಒಪ್ಪಂದ ಯಾವ ರೀತಿಯಲ್ಲೂ ಕರ್ನಾಟಕಕ್ಕೆ ನ್ಯಾಯವನ್ನು ಒದಗಿಸಲಿಲ್ಲ. ಬದಲಾಗಿ, ಅಂದಿನ ಮೈಸೂರು ರಾಜ್ಯದ ಅರಸರ ಮೇಲೆ ಇಲ್ಲ ಸಲ್ಲದ ಮಿತಿಗಳನ್ನೂ, ಷರತ್ತುಗಳನ್ನೂ ವಿಧಿಸಲಾಗಿತ್ತು. ಅಣೆಕಟ್ಟೆಯಿದ್ದರೂ ಪ್ರತಿ ತಿಂಗಳು ನಿರ್ದಿಷ್ಟ ಪ್ರಮಾಣಕ್ಕಿಂತ ನೀರು ಹೆಚ್ಚಾದಾಗ ಮಾತ್ರ ಸಂಗ್ರಹಿಸಬೇಕಾದ ಒತ್ತಡಕ್ಕೆ ನಮ್ಮನ್ನು ತಮಿಳರು ಕಟ್ಟಿಹಾಕಿಸುವಲ್ಲಿ ಯಶಸ್ವಿಯಾಗಿದ್ದರು. ಈ ಒಪ್ಪಂದ ೧೯೭೪ ರವರೆಗೆ ಅಂದರೆ ೫೦ ವರ್ಷಗಳಷ್ಟು ಕಾಲ ಜಾರಿಯಲ್ಲಿತ್ತು!

ಮರಳಿ ಇನಿತೆನೆಗೆ