ಅಂಗಳ      ಇನಿತೆನೆ

 
 

ಕನ್ನಡ ಸೊಗಡಿನ ಹುಡುಕಾಟ (ಹಿ.ಶಿ.ರಾ.)

ಮುಗ್ಗಲಮಕ್ಕಿಯ ಗುಡಿಸಲಿನಿಂದ... (ಬಿ.ಎಸ್. ನಾಗರತ್ನ) 

"ಆ ದಶಕ" -ಬಿಡುಗಡೆಯ ಮಾತು (ದೇವನೂರು)

ಗೀತಕ್ಕನ ಭಗವದ್ಗೀತೆ (ಜಾನಕಿ ಮಂಜುನಾಥಪುರ) 

ಗ್ರಾಮ ಪಂಚಾಯ್ತಿ ಎಲೆಕ್ಷನ್ ಗಳ ’ಆಪರೇಷನ್’ ಗೆ ಸಜ್ಜಾಗಿರುವ ಕಮಲ  

ನಿಮ್ಮೇರಿಯಾ ಕಾರ್ಪೋರೇಟರ್...ಕ್ವಾರ್ಟರ್ ಶಿವ (ಬಿ.ಎಸ್.ಎಸ್.)

ನಮಗೆ ಉಳಿದಿರುವ ಮಲೆನಾಡು (ಎಸ್.ಸಿರಾಜ್ ಅಹಮದ್) 

ಕಾವೇರಿ ನೀರು ಹಂಚಿಕೆ- ಜಗಳಕ್ಕೆ ಪರಿಹಾರವಿದೆಯೇ?-ಬಂಜಗೆರೆ 

ಜಗ್ಗಲಿಗೆ ಮೇಳ

ಎಸ್. ರಂಗಧರ
 
ಜಗ್ಗಲಿಗೆ ಒಂದು ದೊಡ್ಡ ತಮಟೆ ಅಥವ ಹಲಗೆ. ಕರ್ನಾಟಕ ಜನಪದ ಕಲೆಗಳಿಗೆ ಉತ್ತರ ಕರ್ನಾಟಕದ ಕೊಡುಗೆ. ೧೯೭೭ರ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಜಿ. ನಾರಾಯಣ್ ಅಧ್ಯಕ್ಷರಾಗಿದ್ದರು. ಅವರು ಆಗಿನ ಐ ಎ ಎಸ್ ಅಧಿಕಾರಿ ಎಚ್. ಎಲ್. ನಾಗೇಗೌಡರ ನೇತ್ರತ್ವದಲ್ಲಿ, ಆಗಿನ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ಗೊ.ರು. ಚನ್ನಬಸಪ್ಪ ಅವರ ಸಂಪಾದಕತ್ವದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನೂ ಜಾಲಾಡಿ ಜನಪದ ಕಲೆಗಳಿಗಾಗಿ ಹುಡುಕಿದರು. ಬಹುದೊಡ್ಡ ನಿಧಿಯಂತೆ ಆಗ ಸುಮಾರು ೧೪೫ ಜನಪದ ಕಲೆಗಳನ್ನು ಗುರುತಿಸಲಾಯಿತು. ಆಗ ಜಗ್ಗಲಿಗೆ ನಮ್ಮ ಕಣ್ಣಿಗೆ ಬೀಳಲಿಲ್ಲ. ಮುಂದೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಇದೇ ಕೆಲಸವನ್ನು ಕೈಗೆತ್ತಿಕೊಂಡು ಮತ್ತಷ್ಟು ಕಲೆಗಳಿಗಾಗಿ ಹುಡುಕಿದಾಗ ಈ ಜಗ್ಗಲಿಗೆ ಉತ್ತರಕರ್ನಾಟಕದಲ್ಲಿ ನಮ್ಮ ಎದುರಾಯಿತು. ಈ ಎಲ್ಲಾ ಕಲೆಗಳೂ ಜನಪದರ ಮಧ್ಯೆ ನಿರಂತರ ಪ್ರದರ್ಶನವಾಗುತ್ತಲೇ ಇದ್ದವು ಆದರೆ ದಾಖಲಾಗಿರಲಿಲ್ಲ. ನಗರದವರ ಹೊಸ ರುಚಿಗಾಗಿ ವಿದ್ಯಾವಂತರು ಹುಡುಕಿ ದಾಖಲಿಸಿದರು ಅಷ್ಟೇ!

 ಕಾವೇರಿ ವಿವಾದಕ್ಕೆ ತಮಿಳುನಾಡಿನ ದುರಾಸೆಯೇ ಕಾರಣ-೩

 
ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್

ಕಾವೇರಿ ನದಿ ನೀರು ಹಂಚಿಕೆಯ ವಿವಾದ ಈಗಾಗಲೇ ನಾವು ಚರ್ಚಿಸಿರುವಂತೆ ಇಂದು ನೆನ್ನೆಯದಲ್ಲ. ಅದಕ್ಕೆ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಕರ್ನಾಟಕದಲ್ಲಿ ಕಾವೇರಿ ನದಿಗೆ ಕೃಷ್ಣರಾಜಸಾಗರ ಅಣೆಕಟ್ಟೆಯನ್ನು ಕಟ್ಟುವುದಕ್ಕೂ ಮುಂಚೆ ಬಹಳ ಹಿಂದಿನಿಂದಲೂ ಕೆರೆ ಮತ್ತು ಸಣ್ಣ ಸಣ್ಣ ಜಲಾಶಯಗಳ ಮೂಲಕ ನೀರಾವರಿಯನ್ನು ಅಭಿವೃದ್ದಿಪಡಿಸಲಾಗುತ್ತಿತ್ತು. ಸರ್ ಎಮ್. ವಿಶ್ವೇಶ್ವರಯ್ಯನವರ ಸತತ ಪರಿಶ್ರಮದಿಂದಾಗಿ ೧೯೧೧ರ ಹೊತ್ತಿಗೆ ಬೃಹತ್ ಜಲಾಶಯಗಳನ್ನು ನಿರ್ಮಿಸುವಂತಹ ಕಾರ್ಯಕ್ಕೆ ಅಂದಿನ ಮೈಸೂರು ರಾಜ್ಯದ ಒಡೆಯರು ಕಾರಣವಾಗಿದ್ದರು. ಕಾವೇರಿ ನದಿಗೆ ಮಂಡ್ಯ ಜಿಲ್ಲೆಯಲ್ಲಿ ಅಣೆಕಟ್ಟೆಯನ್ನು ಕಟ್ಟಲು ಅಂದಿನ ಮೈಸೂರು ಅರಸರು ಮುಂದಾದುದು ತಮಿಳುನಾಡಿನ ಕಣ್ಣನ್ನು ಕೆಂಪಾಗಿಸಿತ್ತು. (ಈಗಾಗಲೇ ಓದುಗರಿಗೆ ತಿಳಿದಿರುವಂತೆ ಇಂದಿನ ತಮಿಳುನಾಡು ಅಂದು ಮದ್ರಾಸು ರಾಜ್ಯವಾಗಿದ್ದು ಅದು ಬ್ರಿಟಿಷರ ನೇರ ಆಳ್ವಿಕೆಯಲ್ಲಿತ್ತು) ಸಾಮ್ರಾಟರಾಗಿದ್ದ ಬ್ರಿಟಿಷರು ತಮಿಳರ ಒತ್ತಾಯಕ್ಕೆ ಮಣಿದು ಈ ಯೋಜನೆಗೆ ತಕರಾರು ತೆಗೆದರು. ಅವರಿಗೆ ತಕರಾರು ತೆಗೆಯಲು ನೆರವಾದದ್ದು ಅವರೇ ರಚಿಸಿದ್ದ ಮೈಸೂರು ರಾಜ್ಯಕ್ಕೆ ಅತ್ಯಂತ ಮಾರಕವಾಗಿದ್ದ ೧೮೯೨ರ ಕರಾಳ ಒಪ್ಪಂದ.

ಮುಂದೆ ಓದಿ

 
 
 
 

ನಾಡ ರಕ್ಷಣಾ ನಡಿಗೆ/ಸ್ವಾಭಿಮಾನ ಯಾತ್ರೆ-ಕರ್ನಾಟಕದಲ್ಲಿ ನಡೆಯುತ್ತಿದೆ ತೆಲುಗು ಸಿನೆಮಾ!

 
’ಸಹನಾ’
ಕರ್ನಾಟಕದ ರಾಜಕೀಯ ಒಳ್ಳೆ ತೆಲುಗು ಸಿನಿಮಾ ನೋಡಿದ ರೀತಿ ಕಾಣ್ತಿದೆ. ಅದ್ಯಾಕೋ ಏನೋ ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ್ಲಿಂದ ಒಂದಲ್ಲ ಒಂದು ರಗಳೆ ಮುಂದುವರಿತಾನೆ ಇದೆ. ಕರ್ನಾಟಕ ರಾಜಕೀಯದ ಬೌದ್ದಿಕ ದಿವಾಳಿತನ ರಾಷ್ಟ್ರದಾದ್ಯಂತ ಮಾತುಕತೆಯಾಗಿದೆ ಅನ್ನೋದು ಮಾತ್ರ ಸತ್ಯ. ಕರ್ನಾಟಕದ ಇತಿಹಾಸದಲ್ಲಿ ಈ ರೀತಿಯ ಬೆಳವಣಿಗೆಗಳು ತೀರ ಅಪರೂಪ. ರಾಜ್ಯದ ಇತಿಹಾಸ ಪುಟಗಳನ್ನ ತಿರುವಿಹಾಕಿದರೆ ಘಟಾನುಘಟಿ ರಾಜಕಾರಣಿಗಳು ಇಟ್ಟ ದಿಟ್ಟ ಹೆಜ್ಜೆಗುರುತು ಇನ್ನೂ ಮಾಸದಂತೆ ಕಾಣುತ್ತವೆ. ಆದರೀಗ ಎಲ್ಲ ಭಿನ್ನ. ಆರೇಳು ವರ್ಷಗಳ ಹಿಂದೆ ಕೇಳುವವರಿಲ್ಲದ ಬಳ್ಳಾರಿ ಜಿಲ್ಲೆ ಈಗ ಇಡೀ ರಾಜ್ಯದ ಕೇಂದ್ರಬಿಂದು!

ಬಳ್ಳಾರಿ ಜಿಲ್ಲೆಯ ಗಣಿಗಳಿಂದೇಳುತ್ತಿರುವ ಧೂಳು ಈಗ ರಾಜ್ಯದ ರಾಜಕೀಯವನ್ನೇ ಆವರಿಸಿಕೊಂಡುಬಿಟ್ಟಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಈಗ ಗಣಿ ಧೂಳನ್ನು ಕೊಡವಲು ಮುಂದಾಗಿರುವುದು ವಿಚಿತ್ರ ಮತ್ತು ವಿಪರ್ಯಾಸ! ಪ್ರವಾಹದಿಂದ ಮನೆ ಮಠ ಕಳೆದುಕೊಂಡ ಉತ್ತರಕರ್ನಾಟಕದ ಜನತೆಯ ಬಗ್ಗೆ ತೀರ ತಲೆಕೆಡಿಸಿಕೊಳ್ಳದಿದ್ದ ಕಾಂಗ್ರೆಸ್ ತಡವಾಗಿಯಾದ್ರೂ ಬಳ್ಳಾರಿಗೆ ಸಂಬಂಧಿಸಿದಂತೆ ರಸ್ತೆಗಿಳಿದಿರುವುದು ಪಕ್ಷದ ದೃಷ್ಟಿಯಿಂದ ಬಹಳ ಒಳ್ಳೇದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ಹೋರಾಟ, ಧರಣಿ ಸಾಮಾನ್ಯ. ಇನ್ನು ಪಕ್ಷ ರಾಜಕಾರಣದಲ್ಲಿ ಇವೆಲ್ಲವೂ ಸರ್ವೇ ಸಾಮಾನ್ಯ. ಆದರೆ ಈಗ ಕಾಂಗ್ರೆಸ್ ನವರು ಮಾಡ್ತಿರೋ ಪಾದಯಾತ್ರೆ ಗಣಿ ಸಾಮ್ರಾಜ್ಯದತ್ತ ಸಾಗಿರೋದರ ಉದ್ದೇಶ ಮಾತ್ರ ಪ್ರಶ್ನಾರ್ಹ! ವಿಧಾನಸಭೆಯಲ್ಲಿ ರೆಡ್ಡಿ ಧಣಿಗಳು ’ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’ ಎಂದು ಕರೆದದ್ದು ಜಡ ಕಾಂಗ್ರೆಸ್ ನಾಯಕರನ್ನು ಎದ್ದೇಳುವಂತೆ ಮಾಡಿದ್ದು ವಿಪರ್ಯಾಸವಲ್ಲದೆ ಮತ್ತೇನೂ ಅಲ್ಲ. ಕಾಂಗ್ರೆಸ್ ನವರ ತಾಕತ್ತಿನ ಪ್ರಶ್ನೆಗೆ ಇದು ಉತ್ತರ!! ತಮ್ಮ ತಾಕತ್ತಿನ ಸಹವಾಸಕ್ಕೆ ಬಂದರೆ ಸುಮ್ಮನಿರಲ್ಲ ಎಂಬುದನ್ನ ಬಳ್ಳಾರಿವರೆಗೂ ನಡೆಯುವುದರ ಮೂಲಕ ಕಾಂಗ್ರೆಸ್ ನಾಯಕರು ತೋರಿಸುತ್ತಿದ್ದಾರೆ. ಅಂದರೆ ಬಳ್ಳಾರಿಯಲ್ಲಿ-ಉತ್ತರಕರ್ನಾಟಕದಲ್ಲಿ ಇದುವರೆಗೂ ಆಗಿದ್ದ ಭ್ರಷ್ಟಾಚಾರ, ಲೂಟಿ ,ವಂಚನೆ, ಏನೆಲ್ಲಾ ಆಗಿದ್ದರೂ ಸಹಿಸಿಕೊಂಡು ತೆಪ್ಪಗೆ ಕೂತಿದ್ದ ಕಾಂಗ್ರೆಸ್ ನಾಯಕರಿಗೆ ಮೈಕೊಡವಿಕೊಂಡು ಎದ್ದೇಳುವಂತೆ ಮಾಡಿದ ಕೀರ್ತಿ ರೆಡ್ಡಿ ಸಹೋದರರಿಗೆ ಸಲ್ಲುತ್ತದೆ.

ವೈಭವದ ಇತಿಹಾಸದ ನೆನಪಿನಲ್ಲೇ ಉಸಿರಾಡುತ್ತಿದ್ದ ಕರ್ನಾಟಕ ಕಾಂಗ್ರೆಸ್ಸಿಗೆ ಈಗ ಒಂದು ರೀತಿ ಲವಲವಿಕೆ ಬಂದಿದೆ. ಆದ್ರೆ ಇದು ಸಾಂಧರ್ಬಿಕ ಅಷ್ಟೇ. ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ರೆಡ್ಡಿಗಳ ವಿರುದ್ದದ ಕಾಂಗ್ರೆಸ್ ನ ಈ ಹೋರಾಟಕ್ಕೆ ಉತ್ತರ ಕೊಡ್ತಾ ಇರೋದು ಬಿಜೆಪಿಯ ಆರೋಗ್ಯ ಸಚಿವ ಶ್ರೀರಾಮುಲು! ಒಂದುಕಡೆಯಿಂದ ಕಾಂಗ್ರೆಸ್ ದಂಡು ಮಾಡಿಕೊಂಡು ಹೊರಟರೆ, ಅತ್ತಕಡೆ ರೆಡ್ಡಿ ಬಳಗ ಶ್ರೀರಾಮುಲು ಮುಂದಾಳತ್ವದಲ್ಲಿ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಜಾಥ ಮಾಡ್ತಿರೋದು ನೋಡಿದ್ರೆ ತಮಾಷೆ ಅನ್ನಿಸುತ್ತೆ. ಅಬ್ಬಬ್ಬ... ಈ ಪ್ರಜಾಪ್ರಭುತ್ವ ಸಾಮಂತ ರಾಜರುಗಳು ನಡೆಸುತ್ತಿದ್ದ ಪಾಳೆಗಾರಿಕೆ ಸಂಸ್ಕೃತಿಯನ್ನು ನೆನಪಿಗೆ ತರಿಸುತ್ತೆ!

ಅದೆಲ್ಲ ಇರಲಿ, ಇಲ್ಲಿ ನಿಜವಾಗಲು ರೆಡ್ಡಿ ಧಣಿಗಳು ಆಟ ಆಡ್ತಿರೋದು ಶ್ರೀರಾಮುಲು ಮೂಲಕ. ಬಳ್ಳಾರಿ ಜಿಲ್ಲೆಯಲ್ಲಿ ಇರುವ ನಾಯಕ ಸಮುದಾಯ ಶ್ರೀರಾಮುಲುವನ್ನು ತಮ್ಮ ನಾಯಕ ಅಂತ ಒಪ್ಪಿಕೊಂಡಿದ್ದಾರೆ. ಅವರಿಗೆ ಶ್ರೀರಾಮುಲು ಹೇಳಿದ್ದೇ ವೇದವಾಕ್ಯ. ರೆಡ್ಡಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಥವಾ ಬಿಜೆಪಿಗಿಂತ ರಾಮುಲುನೇ ಮುಖ್ಯ. ಅಲ್ಲಿ ರಾಮುಲು ಬಿಟ್ಟು ರೆಡ್ಡಿ ಧಣಿಗಳ ಆಟ ನಡೆಯೋಲ್ಲ. ಜೊತೆಗೆ ನಾಯಕ ಸಮುದಾಯದ ನಾಯಕನನ್ನಾಗಿ ಬೆಳೆಸಿ ಒಂದುದಿನ ನಿನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡ್ತೀವಿ ಅನ್ನೋದು ರೆಡ್ಡಿಗಳು ರಾಮುಲುಗೆ ಇಟ್ಟಿರುವ ಮೂಗಿನ ಮೇಲಿನತುಪ್ಪ! ರೆಡ್ಡಿಗಳು ನೀನೆ ಇಲ್ಲಿನ ಹಿಂದುಳಿದ ವರ್ಗದ ನಾಯಕ ಅನ್ನೋ ಇಮೇಜ್ ಅನ್ನು ಶ್ರೀರಾಮುಲು ತಲೆಗೆ ತುಂಬಿದ್ದಾರೆ. ಇತ್ತ ಕಾಂಗ್ರೆಸ್ ನವರು ನಡೆಸುತ್ತಿರೋ "ನಾಡ ರಕ್ಷಣಾ ನಡಿಗೆ" ಯ ಹಿಂದಿನ ಉದ್ದೇಶ ರೆಡ್ಡಿಗಳ ಗಣಿ ವ್ಯವಹಾರವನ್ನು ಬಂದ್ ಮಾಡಿಸಿ ಅವರ ಆಟವನ್ನು ಹದ್ದುಬಸ್ತಿಗಿಡಬೇಕು ಅಂತ. ಆದ್ರೆ ಅತ್ತ ಗಣಿಧಣಿ ಸಮೂಹ ಮಾಡ್ತಿರೋ "ಸ್ವಾಭಿಮಾನಿ ಯಾತ್ರೆ" ಯಾರ ವಿರುದ್ದ ಅನ್ನೋದೇ ಅನುಮಾನ! ಅವರದೇ ಸರ್ಕಾರದಲ್ಲಿ ಅವರೇ ಸ್ವಾಭಿಮಾನ ಯಾತ್ರೆ ಮಾಡ್ತಾರೆ ಅಂದ್ರೆ ಏನ್ ಹೇಳ್ಬೇಕು ಹೇಳಿ? ಈ ಯಾತ್ರೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ತಬ್ಬಿಬ್ಬಾಗಿದ್ದಾರೆ! ಹಾಗೇ ಅವರ ಪಕ್ಷ ಕೂಡಾ ಎಲ್ಲವನ್ನು ಮೌನವಾಗಿ ನೋಡ್ತಿರೋದನ್ನು ಗಮನಿಸಿದರೆ ರಾಜ್ಯ ಬಿಜೆಪಿ ಯಾವ ಸ್ಥಿತಿಯಲ್ಲಿ ಇದೆ ಅನ್ನುವುದು ಗೊತ್ತಾಗುತ್ತದೆ.

ಸಾಮಾಜಿಕ ಕಳಕಳಿ, ರಾಜಕೀಯ ಬದ್ದತೆ, ನೈತಿಕತೆ ಅನ್ನೋದು ಇದ್ದಿದ್ರೆ ರಾಜ್ಯ ರಾಜಕಾರಣ ಈ ಸ್ಥಿತಿಗೆ ಬರಬೇಕಾಗಿರಲಿಲ್ಲ. ಒಂದು ಸರ್ಕಾರ ಕಣ್ಮುಚ್ಚಿ ಕೂತರೆ, ವಿರೋಧ ಪಕ್ಷ ನಿದ್ದೆ ಮಾಡ್ತಿದ್ರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಇವತ್ತು ಕರ್ನಾಟಕ ಸಾಕ್ಷಿ! ಇಲ್ಲಿ ರಾಜಕೀಯ ಸಂಚಲನಕ್ಕೆ ಜನಸಾಮಾನ್ಯರ ಬವಣೆಗಳಿಗಿಂತ ಬೇರೆಯದೇ ಅಜೆಂಡಾಗಳು ಮುಖ್ಯವಾಗುತ್ತವೆ ಅನ್ನೋದಂತೂ ನಿಜ. ಅದಕ್ಕೇ ಇದನ್ನೆಲ್ಲಾ ನೋಡ್ತಿದ್ರೆ ಯಾವುದೋ ತೆಲುಗು ಸಿನೆಮಾದ ದೃಶ್ಯಗಳು ಕಣ್ಮುಂದೆ ಹಾದು ಹೋದಂತೆ ಅನ್ನಿಸ್ತಿದೆ....ಪುಕ್ಕಟೆ ಮನರಂಜನೆ ಸಿಗ್ತಿದೆ. ಅತ್ತ ಬಳ್ಳಾರಿಯ ಜನ ಸ್ವಾಭಿಮಾನಕ್ಕಾಗಿ ಶ್ರೀರಾಮುಲು ಹಿಂದೆ ಯಾತ್ರೆ ಮಾಡಿದ್ರೆ ಇತ್ತ ಕಾಂಗ್ರೆಸ್ ನವರು ನಾಡ ರಕ್ಷಣೆ ನಡಿಗೆ ಮೂಲಕ ಇಷ್ಟು ದಿನ ತುಂಬಿದ್ದ ಜಡತ್ವದಿಂದ ಹೊರಬರಲಿಕ್ಕೆ ದಾರಿ ಹುಡುಕಿಕೊಂಡಿದ್ದಾರೆನಿಸುತ್ತಿದೆ. ಇದರಿಂದ ಯಾರಿಗೆ ಲಾಭ...ಯಾರಿಗೆ ನಷ್ಟ...ಅನ್ನೋದನ್ನ ಕಾಲ ತಿರ್ಮಾನಿಸುತ್ತೆ ಬಿಡಿ. ಅಲ್ಲಿಯವರೆಗೂ ಕರ್ನಾಟಕದ ನೆಲದಲ್ಲಿ ಚಿತ್ರಿತವಾಗಿರುವ ಈ ತೆಲುಗು ಸಿನೆಮಾ ಯಾವ ಯಾವ ತಿರುವು ತೆಗೆದುಕೊಳ್ಳುತ್ತೆ ಅನ್ನೋದನ್ನು ನೋಡೋಣ...