ಅಂಗಳ      ಖುರಪುಟ


ಜೈ ಹೋ!!

ಭಾರತ ಸರ್ಕಾರ ಜನಾದೇಶವನ್ನು ಪರಿಗಣಿಸಿಬಿಟ್ಟಿದೆ! 

ಮೂಲತಹ ಅಮೆರಿಕಾದ ಬಹುರಾಷ್ಟೀಯ ಕಾರ್ಪೋರೇಷನ್ ಮೋನ್ಸ್ಯಾಂಟೋ ನ ಸಹಯೋಗದೊಂದಿಗೆ ಭಾರತದ ಮಹಾರಾಷ್ಟ್ರ ಹೈಬ್ರೀಡ್ ಕಂಪನಿ (ಮಹೈಕೊ) ಬಿ ಟಿ ಬದನೆ ಎಂಬ ಜೆನೆಟಿಕಲಿ ಮಾಡಿಫೈಡ್ ಅಥವಾ ಕುಲಾಂತರೀ ತಳಿಯನ್ನು ಹುಟ್ಟುಹಾಕಿತ್ತು. ಈ ತಳಿಯ ಸಸಿಗಳನ್ನು ಅಕ್ಟೋಬರ್ ೨೦೦೯ ರಿಂದ ಭಾರತದ ರೈತರಿಗೆ ಹಂಚುವ ಹುನ್ನಾರವೂ ನಡೆದಿತ್ತು. ಈ ರೀತಿ ಕಸಿಯಾದ ಸರಿಯಿಂದ ಇಳುವರಿ ಹೆಚ್ಚು ಮತ್ತು ಅದರ ಪೋಷಣೆಗೆ ಹೆಚ್ಚು ಗೊಬ್ಬರ-ಕ್ರಿಮಿ ನಾಶಕ ಬೇಡ ಎಂಬಂತೆ ತಲೆಸವರುವ ಜಾಹೀರಾತುಗಳೂ ನಡೆದಿದ್ದವು. ಬಿ ಟಿ ಬದನೆಯನ್ನು ವಿರೋಧಿಸಿ ಭಾರತದ ಪುಟ್ಟ ಪುಟ್ಟ ಹಳ್ಳಿಗಳಲ್ಲಿ, ನಗರಗಳಲ್ಲಿ ರೈತರಿಂದ, ಜನಪರ-ಪರಿಸರ ಪರ ಸಂಘ ಸಂಸ್ಥೆಗಳಿಂದ ಚುರುಕಾದ ವಿರೋಧವೂ ಕಂಡುಬಂದಿತ್ತು. ಇದನ್ನು ಗಣಿಸಿರುವ ಕೇಂದ್ರ ಸರ್ಕಾರ ಬಿ ಟಿ ಬದನೆಯ ಉಪಯೋಗ-ವ್ಯವಸಾಯವನ್ನು ಸಧ್ಯಕ್ಕೆ ತಡೆದಿದೆ. 

ಜೆನೆಟಿಕಲಿ ಮಾಡಿಫೈಡ್ ತಳಿಗಳ ವ್ಯವಸಾಯ-ಸೇವನೆಯಿಂದ ಜನರಿಗೆ ಮತ್ತು ಪರಿಸರಕ್ಕೆ ಯಾವ ರೀತಿಯ ತೊಂದರೆಯೂ ಆಗುವುದಿಲ್ಲ ಎಂದು ಖಾತ್ರಿಯಾಗಲು ಇನ್ನೂ ಅಧ್ಯಯನ ನಡೆಯಬೇಕಿದೆ ಆದ್ದರಿಂದ ಸಧ್ಯಕ್ಕೆ ಬಿ ಟಿ ಬದನೆಯನ್ನು ಬೆಳೆಸುವ ವಿಚಾರವನ್ನು ಕೈ ಬಿಟ್ಟಿದ್ದೇವೆ ಎಂದು ಕೇಂದ್ರ ಪರಿಸರ ಮಂತ್ರಿ ಜೈರಾಮ್ ರಮೇಶ್ ಹೇಳಿದ್ದಾರೆ. ಬಿಟಿ ಬದನೆಯ ಅಥವಾ ಯಾವುದೇ ರೀತಿಯ ಅತಿರೇಕದ ಕುಲಾಂತರೀ/ಜೆನೆಟಿಕಲಿ ಮಾಡಿಫೈಡ್ ತಳಿಗಳ ಬಳಕೆ ಭಾರತದಲ್ಲಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯದಾಗಬೇಕು. ತಮ್ಮ ಅವಿರತ ಹೋರಾಟದಿಂದ ಸರ್ಕಾರವನ್ನು ಕಟ್ಟಿಹಾಕಿರುವ ನಮ್ಮವರ ಶಕ್ತಿಗೆ ಜೈ ಹೋ! ಸಸ್ಟೇನಬಲ್ ಅಗ್ರಿಕಲ್ಚರ್-ಮುಂದಿನ ಲಾಭದಾಯಕ ಕ್ಷೇತ್ರ!

ಕ್ಯಾಲಿಫೊರ್ನಿಯಾದ ಫಲವತ್ತಾದ ಚೆರ್ರಿ, ಏಪ್ರಿಕಾಟ್ ಮತ್ತು ಸ್ಟ್ರಾಬೆರಿ ತೋಟಗಳನ್ನು ಕಬಳಿಸಿ ಅಲ್ಲಿ ಸಮೃದ್ಧವಾಗಿ ಬೆಳೆದು ಆ ಕಣಿವೆಗೆ ಸಿಲಿಕಾನ್ ವ್ಯಾಲಿ ಎಂದೇ ಹೆಸರು ಉಳಿಯುವಂತೆ ಮಾಡಿದ್ದ ಅಲ್ಲಿನ ಮಾಹಿತಿ-ಕಂಪ್ಯೂಟರ್ ತಂತ್ರಜ್ನ್ಯಾನದ ಅತಿರಥ ಮಹಾರಥರು ಈಗ ವಿಶೇಷವಾದ ಕ್ಷೇತ್ರವೊಂದರಲ್ಲಿ ತಮ್ಮ ಹಣ-ಶಕ್ತಿ-ಯುಕ್ತಿಯನ್ನು ತೊಡಗಿಸಲು ಹೊರಟಿದ್ದಾರೆ. ಇನ್ನ್ಯಾವ ಹೊಸ ಕ್ಷೇತ್ರವನ್ನು ಕಂಡು ಹಿಡಿದಿದುಕೊಂಡಿದ್ದಾರೆಂದು ನಿಮಗೆ ಕುತೂಹಲ ಮೂಡಬಹುದು. ಅವರು ಈಗ "ಸಸ್ಟೇನಬಲ್ ಅಗ್ರಿಕಲ್ಚರ್" ನಲ್ಲಿ (ಅಂದರೆ ಪರಿಸರದ ಆರೋಗ್ಯಕ್ಕೆ ಒತ್ತು ಕೊಡುತ್ತಾ, ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಮಾಡಿಕೊಳ್ಳದೇ ಮುಂದಿನ ಪೀಳಿಗೆಗೂ ಅನುಕೂಲವಾಗುವಂತಹಾ ಕ್ರಮಗಳನ್ನು ಅನುಸರಿಸಿ, ಆರ್ಥಿಕವಾಗಿ ಲಾಭದಾಯಕವಾಗಿರುವಂತೆಯೂ, ಸಾಮಾಜಿಕ ಮತ್ತು ಆರ್ಥಿಕ ಜವಾಬ್ದಾರಿಯಿಂದ ನಡೆಸಲು ಅತಿ ಅಗತ್ಯವಿರುವ ವ್ಯವಸಾಯ/ಕೃಷಿ ಪದ್ಧತಿ) ಬೆಳವಣಿಗೆಯ, ಉಳಿವೆಯ ಭವಿಷ್ಯ ಕಂಡುಕೊಂಡಿದ್ದಾರೆ!
 
nowpublic.comಸಿಲಿಕಾನ್ ವ್ಯಾಲಿಯ ದೊರೆಗಳಿಗೆ ತಂತ್ರಜ್ಯ್ನಾನಕ್ಕಿಂತ ಇನ್ನು ಮುಂದೆ ಸಾವಯವ ವ್ಯವಸಾಯ ಮತ್ತು ಅದರ ಕುರಿತ ಸಂಶೋಧನೆಗಳಲ್ಲಿ ಹಣ-ಶಕ್ತಿ ಹೂಡಿದರೆ ಮಹತ್ವದ ಬೆಳವಣಿಗೆ ಸಾಧ್ಯ ಎನ್ನಿಸಿದೆಯಂತೆ. ಈಗಿನ ವ್ಯವಸಾಯ ಪದ್ಧತಿಯಿಂದ ಪರಿಸರಕ್ಕೆ, ಮನುಷ್ಯ-ಪ್ರಾಣಿಗಳ ಆರೋಗ್ಯಕ್ಕೆ ಆಗುತ್ತಿರುವ ಅನಾಹುತಗಳ ಕುರಿತು ಜನರಲ್ಲಿ ಅರಿವು ಮೂಡುತ್ತಿರುವುದರಿಂದ ವ್ಯವಸಾಯ ಒಂದು ರೀತಿಯಲ್ಲಿ ಹೊಸ ಚಾಲೆಂಜ್ ಗಳನ್ನು ಸೃಷ್ಟಿಸಿದೆ. ನೀರನ್ನು ಪೋಲು ಮಾಡದಂತೆ, ಕ್ರಿಮಿನಾಶಕ, ರಸಗೊಬ್ಬರಗಳ ಬಳಕೆಯಿಂದ ಪರಿಸರವನ್ನು-ಆರೋಗ್ಯವನ್ನು ಹಾಳು ಮಾಡಿಕೊಳ್ಳದೇ ಕೃಷಿ ಮಾಡಲು ಸಾಧ್ಯತೆಯಿದೆಯೇ ಎಂಬ ಪ್ರಶ್ನೆಯೇ ಹೊಸ ತಂತ್ರಜ್ನ್ಯಾನವನ್ನು ಸೄಷ್ಟಿಸಲು ಅದನ್ನು ಅಭಿವೃಧ್ಧಿ ಪಡಿಸಲು ಸಹಾಯ ಮಾಡುತ್ತದೆ ಎನ್ನುವುದು ಇವರ ಅಭಿಪ್ರಾಯ.

ಮುಂದಿನ ದಶಕಗಳಲ್ಲಿ ವಿಶ್ವವನ್ನು ಭಯಂಕರವಾಗಿ ಕಾಡಲಿರುವ ಆಹಾರ ಪದಾರ್ಥಗಳ ಕೊರತೆ, ಗ್ಲೋಬಲ್ ವಾರ್ಮಿಂಗ್ ಇತ್ಯಾದಿ ಸಮಸ್ಯೆಗಳನ್ನು ಸರಿಯಾಗಿ ಎದುರಿಸಲು ಸಾವಯವ-ಸಹಕಾರೀ ಕೃಷಿಗೆ ಸಿಲಿಕಾನ್ ವ್ಯಾಲಿಯ ಜಾಣ ಮಂದಿ ಒತ್ತು ಕೊಡುತ್ತಿರುವುದು ಶ್ಲಾಘನೀಯ. ಈ ರೀತಿಯ ಬೆಳವಣಿಗೆ ಮುಂದಿನ ದಿನಗಳಲ್ಲಿ ತೀವ್ರವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
ನ್ಯೂಯಾರ್ಕಿನಲ್ಲಿ ಸಾಂಕ್ರಾಮಿಕವಾಗುತ್ತಿರುವ ತಿಗಣೆಗಳು!


ನಾವು ಚಿಕ್ಕವರಿದ್ದಾಗ ಮನೆಯವರು ನಮ್ಮನ್ನು ಕೆಲವು ಸಿನೆಮಾ ಥಿಯೇಟರ್ ಗಳಿಗೆ ನಮ್ಮನ್ನು ಕಳಿಸುತ್ತಿರಲಿಲ್ಲ. ಅಲ್ಲಿಗೆ ಹೋದ್ರೆ ಮನೆಗೆ ಶನಿತರ ತಿಗಣೆ ತರ್ತೀರ ಅಂತ ಮನೆಯ ಹಿರಿಯರು ಬಯ್ಯುತ್ತಿದ್ದರು. ಕಾರಣ, ಅಲ್ಲೆಲ್ಲಾ ವಿಪರೀತ ತಿಗಣೆಗಳ ಕಾಟ. ಈಗ ಅವೇ ಪುಟಾಣಿ ತಿಗಣೆಗಳು ಅಂತರ ರಾಷ್ಟೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ.

ನ್ಯೂಯಾರ್ಕಿನ ಜನ, ಮೇಯರ್ ಗಾಬರಿಯಾಗಿದ್ದಾರೆ. ಅಲ್ಲಿನ ಐಷಾರಾಮೀ ಹೋಟೆಲ್ ಗಳಲ್ಲಿ, ಅಂಗಡಿಗಳಲ್ಲಿ, ಅಪಾರ್ಟ್ಮೆಂಟ್ ಗಳಲ್ಲಿ, ಬ್ಯಾಂಕ್ ಗಳಲ್ಲಿ ಇದ್ದಕ್ಕಿದ್ದಂತೆ ತಿಗಣೆಗಳ ಕಾಟ ಸಾಂಕ್ರಾಮಿಕವಾಗಿ ಕಂಡುಬಂದಿದೆ. ಪರಿಸ್ಥಿತಿ ಮಿತಿ ಮೀರುವ ಹಂತ ಬರುವ ಮುಂಚೆಯೇ ಏನಾದರೂ ಕ್ರಮ ಕೈಗೊಳ್ಳಬೇಕೆಂದು ತಿಗಣೆಗಳ ವಿರುದ್ಧ ಸಮರ ನೀತಿ ಸಾರಿ ಐದು ನೂರು ಸಾವಿರ ಡಾಲರ್ಗಳನ್ನ ಮೀಸಲಿಟ್ಟಿದೆ. ಕಳೆದ ಎರಡು ವರ್ಷಗಳಲ್ಲಿಯೇ ನ್ಯೂಯಾರ್ಕಿನಲ್ಲಿ ತಿಗಣೆಗಳ ಕಾಟದ ದೂರುಗಳು ಶೇಕಡಾ ೫೪ರಷ್ಟು ಹೆಚ್ಚಿದೆ ಎಂದು ತಿಳಿಯಲಾಗಿದೆ.
 
ಯಾವ ಮಟ್ಟಕ್ಕೆ ಇವುಗಳ ಹಾವಳಿ ಹೆಚ್ಚಲಾಗಿದೆ ಎಂದರೆ ನ್ಯೂಯಾರ್ಕ್ ನ ಪ್ರತಿಷ್ಟಿತ ’ಸೋಹೋ’ ಪ್ರದೇಶದಲ್ಲಿನ ಎರಡು ವಿನ್ಯಾಸಗಾರರ (designer clothing) ಸಿದ್ದ ಉಡುಪುಗಳ ಅಂಗಡಿಗಳನ್ನು ಮುಚ್ಚಲಾಯಿತು. ತಿಗಣೆಗಳಿಗೆ ಬಡವ ಬಲ್ಲಿದರೆಂದಿದೆಯೇ? ಮ್ಯಾನ್ ಹ್ಯಾಟ್ಟನ್ ಪ್ರದೇಶದ ಅತ್ಯಂತ ಸಿರಿವಂತ-ಪ್ರತಿಷ್ಟಿತ ಮನೆಗಳಿಂದೆಲ್ಲಾ ತಿಗಣೆ ನಿವಾರಣೆಗೆ ಸಹಾಯ ಕೇಳಿ ಆರೋಗ್ಯ ಮತ್ತು ಸ್ವಚ್ಚತಾ ಘಟಕಕ್ಕೆ ದುಂಬಾಲು ಬಿದ್ದಿವೆಯಂತೆ. ತಿಗಣೆಗಳ ವಿರುದ್ಧ ತಿಳುವಳಿಕೆ ಮೂಡಿಸಲು ನ್ಯೂಯಾರ್ಕ್ ಸಿಟಿ ಸಧ್ಯದಲ್ಲೇ ವೆಬ್ ಸೈಟ್ ಒಂದನ್ನು ಆರಂಭಿಸಿದೆ. (http://newyorkvsbedbugs.org/)

ತಿಗಣೆಗಳು ಹಿಂದೆಂದೂ ಅಮೆರಿಕದಲ್ಲಿ ಇರಲೇ ಇಲ್ಲ ಎಂದೇನಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತರ ರಾಷ್ಟೀಯ  ಪ್ರಯಾಣ ಹೆಚ್ಚಾಗಿರುವುದರಿಂದ ಮತ್ತು ಡಿಡಿಟಿ ಯ ಬಳಕೆಯನ್ನು ಇಲ್ಲಿ ನಿರ್ಭಂದಿಸಿರುವುದರಿಂದ ಅವುಗಳ ಸಮಸ್ಯೆ ಅತಿಯಾಗಿದೆಯಂತೆ. ಈಗ ನ್ಯೂಯಾರ್ಕಿನಿಂದ ಇತರೆ ಕೆಲವು ಮಹಾನಗರಗಳಿಗೆ ಇದೇ ಸಮಸ್ಯೆ ಗಾಳಿಯಂತೆ ಹಬ್ಬುತ್ತಿದೆಯಂತೆ. ಜೋಪಾನ!