ಕಾವೇರಿ ಕಥನ: ೪
ಸಾಮಂತರ ಮೇಲೆ ಭರ್ಜರಿ ಸೇಡು ತೀರಿಸಿಕೊಂಡ ಸಾಮ್ರಾಟರು

 
ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್

ಬ್ರಿಟೀಷರ ಆಳ್ವಿಕೆಯಲ್ಲಿ ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆ ೧೮೯೨ ಹಾಗೂ ೧೯೨೪ ರಂದು ನೀಡಿದ್ದಂತಹ ಅವರ ಏಕಪಕ್ಷೀಯ ನಿರ್ಣಯದ ಒಪ್ಪಂದಗಳು ಕರ್ನಾಟಕಕ್ಕೆ ಬಹಳ ಅನ್ಯಾಯವೆಸಗಿದ್ದವು. ಸಾಮ್ರಾಟರು ತಮ್ಮ ವಿರುದ್ಧ ತಿರುಗುವ ಅಥವಾ ತಮಗೆ ಅನುಕೂಲಕ್ಕೆ ಬಾರದಿರುವ ಸಾಮಂತರ ಮೇಲೆ ಯಾವ ರೀತಿ ದಬ್ಬಾಳಿಕೆ ಮಾಡುತ್ತಾರೆ, ದೌರ್ಜನ್ಯವೆಸಗುತ್ತಾರೆಂಬುದಕ್ಕೆ ಈ ಒಪ್ಪಂದಗಳೇ ಜ್ವಲಂತ ನಿದರ್ಶನವಾಗಿದೆ. ಕಾವೇರಿ ಇತಿಹಾಸದ ಹಿಂದಿನ ಭಾಗಗಳಲ್ಲಿ ಇದರ ಸ್ಪಷ್ಟ ಉಲ್ಲೇಖವಿದೆ.
 
ಮೈಸೂರಿನ ರಾಜರು ಬ್ರಿಟಿಷ್ ಸಾಮ್ರಾಟರ ಸಾಮಂತರಾಗಿದ್ದರು. ಮೈಸೂರಿನ ಹುಲಿಯೆನಿಸಿದ್ದ ಟಿಪ್ಪು ಸುಲ್ತಾನ, ಅವನ ತಂದೆ ಹೈದರ್ ಅಲಿ ಇದೇ ಬ್ರಿಟಿಷರ ವಿರುದ್ದ ವೀರಾವೇಷದಿಂದ ಹೋರಾಡಿ ಅವರನ್ನು ಸಾಕಷ್ಟು ಗೋಳಾಡಿಸಿದ್ದರು. ಆ ಕಹಿ ನೆನಪನ್ನು ಬ್ರಿಟಿಷರು ಮರೆಯುವಂತಿರಲಿಲ್ಲ. ತಮ್ಮ ಸಾಮಂತರ ಮೇಲೆ ಸೇಡು ತೀರಿಸಿಕೊಳ್ಳುವ ಮನೋಭಾವದಿಂದ, ತಮ್ಮ ಅನುಕೂಲ ನೋಡಿಕೊಳ್ಳುವ ಏಕೈಕ ಉದ್ದೇಶದಿಂದ ಬ್ರಿಟೀಷರು ಕುರುಡು ನ್ಯಾಯ ಪದ್ದತಿಯನ್ನು ಅನುಸರಿಸಿದ್ದರು. ಕೇಂದ್ರದಲ್ಲಿ ಬ್ರಿಟೀಷರ ಆಳ್ವಿಕೆಯೇ ಇದ್ದುದರಿಂದ ಹಾಗೂ ಅವರು ಮದ್ರಾಸು ಪ್ರಾಂತ್ಯವನ್ನು ತಮ್ಮ ನೇರ ಹಿಡಿತದಲ್ಲಿಟ್ಟುಕೊಂಡು ತಮ್ಮ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳತೊಡಗಿದ್ದುದರಿಂದ ಅವರಿಗೆ ತೀರ ಪ್ರದೇಶವಾದ ಮದ್ರಾಸಿನಿಂದ ಹೆಚ್ಚಿಗೆ ಅನುಕೂಲವಿತ್ತು. ತಮಗೆ ಎಲ್ಲಾ ರೀತಿಯಿಂದಲೂ ಪ್ರಯೋಜನವಾಗಿದ್ದ ಮದ್ರಾಸಿನ ಹಿತ ಕಾಯುವುದು ಅಂದು ಅವರಿಗೆ ಮುಖ್ಯವಾಗಿತ್ತು. ತಮ್ಮ ಮೈಸೂರು ಅರಸರ ಮೇಲಿನ ತೀರ್ವ ಅಸಡ್ಡೆಯನ್ನು ಮೈಸುರು ಪ್ರಾಂತ್ಯದ ಮೇಲೆ ತೋರಿಸಿ, ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ಅವರು ಪೂರ್ಣವಾಗಿ ತಮಿಳುನಾಡಿನ ಪರವಾಗಿ ನಿಂತಿದ್ದರು.
ನ್ಯಾಯಪರವಲ್ಲದ ಈ ಬಗೆಯ ಏಕಪಕ್ಷೀಯ ತೀರ್ಮಾನಗಳಿಂದಾಗಿ ಕರ್ನಾಟಕದ ಜನತೆ ಕಾವೇರಿ ನೀರಿನಿಂದಷ್ಟೇ ಅಲ್ಲದೆ ಕೃಷ್ಣಾ ನದಿ ನೀರಿನಿಂದಲೂ ವಂಚನೆಗೊಳಗಾಗಿದ್ದರು. ಏಕೆಂದರೆ ೧೮೯೨ ರಲ್ಲಿ ಕನ್ನಂಬಾಡಿ ಅಣೆಕಟ್ಟೆ ಕಟ್ಟುವ ಸಂದರ್ಭದಲ್ಲಿ ಅಂದು ಕಾವೇರಿ ನದಿಯದಷ್ಟೇ ಅಲ್ಲದೆ ಮೈಸೂರು ಪ್ರಾಂತ್ಯದ ಇತರೆ ಯಾವ ನದಿಗಳಿಗೆ ಜಲಾಶಯವನ್ನು ನಿರ್ಮಿಸಬೇಕಾದರೂ ಬ್ರಿಟೀಷ್ ಆಳರಸರ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿತ್ತು. ಇದು ಅಂದಿನ ಮೈಸೂರು ರಾಜ್ಯಕ್ಕೆ ಮಾತ್ರ ಅನ್ವಯಿಸುವಂತಹ ದ್ವೇಷದ ಷರತ್ತಾಗಿತ್ತು. ತಮಿಳುನಾಡಿನ ಕೊಳಕು ರಾಜಕಾರಣದಿಂದ ಬ್ರಿಟೀಷರ ಕಾಲದ ಆ ಷರತ್ತು ಇವತ್ತೂ ಚಲಾವಣೆಯಲ್ಲಿದೆ! ಅದು ಊರ್ಜಿತವಲ್ಲವೆಂದು ದಶಕಗಳಿಂದಲೂ ಕರ್ನಾಟಕ ಮಾಡುತ್ತಿರುವ ವಾದ ಖಂಡಿತಾ ನ್ಯಾಯಯುತವಾದುದೇ.

 
ಇಂದಿಗೂ ಚಲಾವಣೆಯಲ್ಲಿರುವ ೧೯೨೪ ರ ಒಪ್ಪಂದ!
೧೯೨೪ ರ ಒಪ್ಪಂದ ೫೦ ವರ್ಷಗಳ ಕಾಲಕ್ಕೆ ನಿಗದಿಯಾಗಿದ್ದುದರಿಂದ ಅದು ೧೯೭೪ ನೆಯ ಇಸವಿಯಂದು ಕೊನೆಯಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದ ಮೇಲೆ ಹೇರಲ್ಪಟ್ಟಿದ್ದ ಒಪ್ಪಂದಗಳನ್ನು ಸ್ವಾತಂತ್ರ್ಯ ದೊರಕಿದ ನಂತರವೂ ತಮಿಳುನಾಡಿನ ರಾಜಕಾರಣಿಗಳು ತಮ್ಮ ಮೊಂಡುವಾದ-ಹಠದಿಂದ ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ವಾಸ್ತವವಾಗಿ ಬ್ರಿಟೀಷರು ಭಾರತ ಬಿಟ್ಟು ತೊಲಗಿದಾಗಲೇ ೧೯೨೪ ರ ಒಪ್ಪಂದ ಊರ್ಜಿತವಾಗುವುದಿಲ್ಲ. ಭಾಷಾವಾರು ರಾಜ್ಯಗಳಾಗಿ ವಿಂಗಡಣೆಯಾದ ನಂತರ ಪ್ರತಿಯೊಂದು ರಾಜ್ಯವೂ ಸಮಾನವಾದ ಹಕ್ಕುಗಳನ್ನು ಹೊಂದಿದ್ದು ತನ್ನ ನೆಲ ಜಲ ಗಡಿಯನ್ನು ರಕ್ಷಿಸಿಕೊಳ್ಳುವ ಸ್ವಾತಂತ್ರ್ಯವನ್ನು ಪಡೆದಿದೆ. ಆದರೆ ಇಂದಿಗೂ ಸಹ ತಮಿಳುನಾಡು ಸರ್ಕಾರ ಕಾವೇರಿ ನ್ಯಾಯಾಧಿಕರಣದ ಮುಂದೆ ೧೮೯೨ ಹಾಗೂ ೧೯೨೪ ರ ಒಪ್ಪಂದಗಳಿಗೆ ಒತ್ತು ಕೊಡುತ್ತಾ ಬಂದಿದೆ. ತಮಿಳುನಾಡಿನಲ್ಲಿ ಪ್ರಾದೇಷಿಕ ಪಕ್ಷಗಳದ್ದೇ ಕಾರುಬಾರಾದ್ದರಿಂದ ಅಲ್ಲಿನ ರಾಜಕಾರಣಿಗಳು ಪರಸ್ಪರ ಪೈಪೋಟಿಗಿಳಿದಂತೆ ಕಾವೇರಿ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನು ಹೇರುವಂತಹ ತಂತ್ರಗಳನ್ನು ಬಳಸಿಕೊಂಡೇ ಇಂದಿಗೂ ಬ್ರಿಟೀಷರ ಕಾಲದ ನಿಯಮಗಳನ್ನೇ ಇನ್ನಷ್ಟು ಹಠದಿಂದ ಹೇರುತ್ತಾ ಕರ್ನಾಟಕದ ನ್ಯಾಯಯುತವಾದ ನೀರಿನ ಪಾಲನ್ನು ಕಬಳಿಸುತ್ತಿದ್ದಾರೆ.
 
೧೯೭೪ ರ ಹೊತ್ತಿಗೆ ೧೯೨೪ ರ ಒಪ್ಪಂದದ ಅವಧಿ ಮುಗಿದದ್ದರಿಂದ ಕಾವೇರಿ ನದಿ ಕಣಿವೆಯಲ್ಲಿನ ನೀರನ್ನು ಯಾವ ರಾಜ್ಯ ಎಷ್ಟು ಬಳಸಿಕೊಳ್ಳುತ್ತಿದೆ ಎಂಬುದರ ಅಧ್ಯಯನ ವರದಿ ನೀಡುವಂತೆ ಕೇಂದ್ರ ಸರ್ಕಾರ ತನ್ನ ಅಧೀನ ಕಾರ್ಯದರ್ಶಿಗಳಾದ ಸಿ.ಸಿ. ಪಟೇಲ್ ಎಂಬುವವರನ್ನು ನೇಮಕ ಮಾಡಿತ್ತು. ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿಗಳಾಗಿದ್ದ ಸಿ.ಸಿ. ಪಟೇಲ್ ೧೯೭೪ ರಲ್ಲಿ ಅಧ್ಯಯನ ನಡೆಸಿ ನೀಡಿದ ವರದಿಯ ಪ್ರಕಾರ ೧೯೭೨ ರ ವೇಳೆಗೇ ತಮಿಳುನಾಡು ೪೮೦ ಟಿ.ಎಮ್.ಸಿ. ಗಳಷ್ಟು ನೀರನ್ನು ಬಳಸಿಕೂಳ್ಳತೊಡಗಿತ್ತು. ಆದರೆ ಆ ಹೊತ್ತಿಗೆ ಕರ್ನಾಟಕ ತನ್ನ ನೀರಾವರಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದ ನೀರಿನ ಪ್ರಮಾಣ ಕೇವಲ ೧೭೭ ಟಿ.ಎಮ್.ಸಿ. ಗಳು. ಕಾವೇರಿ ನದಿ ನೀರಿನ ಒಟ್ಟು ಪ್ರಮಾಣದ ಶೇಕಡಾ ೫೩ ರಷ್ಟು ಪಾಲು ಕರ್ನಾಟಕದ್ದೇ ಆಗಿದ್ದರೂ ಅದರ ಬಳಕೆಯ ಪ್ರಮಾಣ ಕೇವಲ ೧೭೭ ಟಿ.ಎಮ್.ಸಿ. ಗಳಿಗೆ ಕೇಂದ್ರ ಸರ್ಕಾರ ನಿಯಂತ್ರಿಸಿತ್ತು! ಇದು ೧೯೭೪ ರಲ್ಲಿ ಕೇಂದ್ರ ಸರ್ಕಾರವೇ ನೀಡಿರುವ ಅಂಕಿ ಅಂಶ. ತಮಿಳುನಾಡು ತನ್ನ ಬಹುತೇಕ ಪ್ರಮಾಣದ ನೀರನ್ನು ಸಮುದ್ರಕ್ಕೆ ವ್ಯರ್ಥವಾಗಿ ಬಿಡುತ್ತಿತ್ತು. ಇಲ್ಲಿಯೂ ತಮಿಳುನಾಡಿನ ಕುತಂತ್ರ ಕೆಲಸ ಮಾಡಿರುವುದನ್ನು ನಾವು ಗಮನಿಸಬಹುದು. ೧೯೨೪ ರ ಒಪ್ಪಂದದಂತೆ ಕರ್ನಾಟಕ ತನಗೆ ಸತತವಾಗಿ ನೀರು ಬಿಡುತ್ತಲೇ ಇರಬೇಕಾದಲ್ಲಿ ತನ್ನ ಅವಶ್ಯಕತೆಗಿಂತಲೂ ಹೆಚ್ಚಿನ ನೀರನ್ನು ಪಡೆದು ಅದನ್ನು ಸಮುದ್ರಕ್ಕೆ ಬಿಟ್ಟರೆ ಕರ್ನಾಟಕದ ನೀರಾವರಿ ಯೋಜನೆಗಳನ್ನು ನಿಯಂತ್ರಿಸಬಹುದೆನ್ನುವುದೇ ತಮಿಳುನಾಡಿನ ಹುನ್ನಾರ.

 
ತಮಿಳುನಾಡು ೧೯೭೧ ರ ವೇಳೆಗೆ ತನ್ನ ನೀರಾವರಿ ಪ್ರದೇಶಗಳನ್ನು ೨೮,೨೪,೦೦೦ ಎಕರೆಗಳವರೆಗೆ ವಿಸ್ತರಿಸಿಕೊಂಡಿತ್ತು. ಕರ್ನಾಟಕ ಕನ್ನಂಬಾಡಿ ಅಣೆಕಟ್ಟೆಗೆ ಅನುಮತಿ ಕೋರಿದ್ದಾಗಲೇ ತಮಿಳುನಾಡು ಸರ್ಕಾರ ತನ್ನ ಭವಿಷ್ಯದ ಯೋಜನೆಗಳಿಗೆ ಬ್ರಿಟೀಷರ ಸರ್ಕಾರದಿಂದ ಅನುಮತಿ ಗಿಟ್ಟಿಸಿಕೊಂದು ತನ್ನ ನೀರಾವರಿ ಪ್ರದೇಶವನ್ನು ೧೨ ಲಕ್ಷ ಎಕರೆಗಳಿಗೆ ವಿಸ್ತರಿಸಿಕೊಂಡಿತ್ತು. ಹಾಗೇ ವಿಸ್ತರಿಸಿಕೊಳ್ಳುತ್ತಾ ೧೯೭೧ ರ ಹೊತ್ತಿಗೆ ತಮಿಳುನಾಡಿನ ನೀರಾವರಿ ಪ್ರದೇಶ ೨೮,೨೪,೦೦೦ ಎಕರೆಗಳಾಗಿತ್ತು. ಆದರೆ ಕರ್ನಾಟಕದ ನೀರಾವರಿ ಪ್ರದೇಶ ೧೯೭೧ ನೆಯ ಇಸವಿಯಲ್ಲಿ ಇದ್ದುದು ಕೇವಲ ೬,೮೨,೦೦೦ ಎಕರೆಗಳಷ್ಟೇ. ಅಂದರೆ ೧೯೭೧ ರ ವೇಳೆಗೆ ತಮಿಳುನಾಡಿನ ನೀರಾವರಿ ಪ್ರದೇಶ ಕರ್ನಾಟಕದಲ್ಲಿದ್ದ ನೀರಾವರಿ ಪ್ರದೇಶದ ನಾಲ್ಕು ಪಟ್ಟು ಹೆಚ್ಚಿತ್ತು.
 
ಮೆಟ್ಟೂರು ಅಣೆಕಟ್ಟೆ ಕಟ್ಟಲಾಗಿದ್ದೇ ಮೈಸೂರು ಕೊಟ್ಟ ವಿದ್ಯುತ್ತಿನಿಂದ!
ಕರ್ನಾಟಕದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿರದಿದ್ದರೂ ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆಗೆ ನೀರು ಬಿಡಲಿಲ್ಲವೆಂದು ಕೂಗಾಡುವ, ರಂಪ ಮಾಡುವ ತಮಿಳುನಾಡಿನ ರಾಜಕಾರಣಿಗಳು ಕರ್ನಾಟಕವನ್ನು ಜಗಳಗಂಟ ರಾಜ್ಯವೆಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸುವ ಹುನ್ನಾರವನ್ನು ದಶಕಗಳಿಂದ ನಡೆಸುತ್ತಿದ್ದಾರೆ. ಆದರೆ ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆ ಕನ್ನಡಿಗರ ಸಹಕಾರವಿಲ್ಲದಿದ್ದರೆ ಕಾರ್ಯರೂಪಕ್ಕೆ ಬರುವುದು ಸುಲಭವಾಗಿರಲಿಲ್ಲ ಎಂದು ತಮಿಳುನಾಡಿನ ರಾಜಕಾರಣಿಗಳಿಗೆ-ಜನತೆಗೆ ಅರಿವಿಲ್ಲ. ಒಂದು ವೇಳೆ ಅರಿವಿದ್ದರೂ ಅವರು ಕರ್ನಾಟಕ-ಕನ್ನಡಿಗರನ್ನು ಅದಕ್ಕಾಗಿ ಸ್ಮರಿಸುವುದಿಲ್ಲ. ಮೆಟ್ಟೂರು ಅಣೆಕಟ್ಟೆ ಪೂರ್ಣಗೊಳ್ಳಲು ಕರ್ನಾಟಕದಿಂದಲೇ ಸಂಪೂರ್ಣ ವಿದ್ಯುತ್ ಸರಬರಾಜು ಮಾಡಲಾಗಿತ್ತು. ಬೃಹತ್ ಯಂತ್ರೋಪಕರಣಗಳ ನಿರ್ವಹಣೆಗೆ ತಮಿಳುನಾಡಿಗೆ ವಿದ್ಯುತ್ ಅವಶ್ಯಕತೆ ಅತ್ಯಗತ್ಯವಾಗಿತ್ತು. ಅದನ್ನು ಪೂರೈಸಿದ್ದು ನಮ್ಮ ಮೈಸೂರು ರಾಜ್ಯ. ಅದರ ವಿವರ ಇಲ್ಲಿದೆ.
ಕನ್ನಂಬಾಡಿ ಅಣೆಕಟ್ಟೆಗೆ ಬ್ರಿಟೀಷರಿಂದ ಮಂಜೂರಾತಿ ಪಡೆಯಲು ವಿಶ್ವೇಶ್ವರಯ್ಯನವರು ಪಟ್ಟ ಹರಸಾಹಸದ ಪರಿಪಾಟಲಿನ ಬಗ್ಗೆ ಹಿಂದಿನ ಅಧ್ಯಾಯದಲ್ಲಿಯೇ ವಿವರಿಸಲಾಗಿದೆ. ಆ ಸಂಧರ್ಭದಲ್ಲಿಯೇ ತಮಿಳುನಾಡು ತನ್ನ ಮುಂದಿನ ನೀರಾವರಿ ಯೋಜನೆಗಳಿಗೆಲ್ಲಾ ೧೯೨೪ ರ ಒಪ್ಪಂದದಲ್ಲಿ ಬ್ರಿಟೀಷರ ಅನುಮತಿಯನ್ನು ಗಿಟ್ಟಿಸಿಕೊಂಡಿದ್ದು ಎಂದು ನಿಮಗೆ ಹಿಂದಿನ ಸಂಚಿಕೆಗಳ ಮಾಹಿತಿಗಳಿಂದ ಗೊತ್ತು. ಆದರೆ ಕರ್ನಾಟಕದ ಕನ್ನಂಬಾಡಿ ಜಲಾಶಯ ಪೂರ್ಣಗೊಂಡರೂ ಸಹ ಮೆಟ್ಟೂರು ಜಲಾಶಯದ ನಿರ್ಮಾಣವನ್ನು ಅದು ನಿಗದಿಯಾದ ದಿನಾಂಕದಂದು ಆರಂಭಿಸಲಿಲ್ಲ. ಜಲಾಶಯ ನಿರ್ಮಾಣಕ್ಕೆ ಬೇಕಾದ ವಿದ್ಯುತ್ತಿಗೆ ತಮಿಳುನಾಡಿನಲ್ಲಿ ಕೊರತೆ ಇತ್ತು. ಮದ್ರಾಸು ಪ್ರಾಂತ್ಯ ಮೆಟ್ಟೂರು ಅಣೆಕಟ್ಟೆ ಕಾಮಗಾರಿಗೆ ವಿದ್ಯುಚ್ಚಕ್ತಿ ಸರಬರಾಜು ಮಾಡುವಂತೆ ಮೈಸೂರು ರಾಜ್ಯಕ್ಕೆ ದುಂಬಾಲು ಬಿದ್ದಿತ್ತು. ಅಂದಿನ ಮೈಸೂರು ರಾಜ್ಯದ ವಿದ್ಯುತ್ ಇಲಾಖೆಯ ಪ್ರಧಾನ ಇಂಜಿನಿಯರ್ ಆಗಿದ್ದವರು ಎಸ್. ಜೆ. ಫೋರ್ಬ್ಸ್. ವಿದ್ಯುತ್ ಸರಬರಾಜಿಗಾಗಿ ಮದ್ರಾಸು ಪ್ರಾಂತ್ಯ ಫೋರ್ಬ್ಸ್ ರ ಮೇಲೆ ಬ್ರಿಟಿಷ್ ಪ್ರಭುಗಳಿಂದ ಸತತವಾಗಿ ಒತ್ತಡ ಹೇರಿತ್ತು. ಅದನ್ನು ಆಗ ಕನ್ನಡಿಗರು ವಿರೋಧಿಸಬಹುದಿತ್ತು, ನಮಗಾದ ಅನ್ಯಾಯಕ್ಕೆ ಪ್ರತಿಭಟಿಸಬಹುದಿತ್ತು. ಆದರೆ ಕೆಡುಕು ಮಾಡುವ ಮನೋಭಾವ ಕನ್ನಡಿಗರದ್ದಲ್ಲ. ಕಾವೇರಿ ನದಿ ವಿಷಯದಲ್ಲಿ ತೀರ್ವವಾದ ಅನ್ಯಾಯವಾಗಿದ್ದರೂ ಸಹ ಕನ್ನಡಿಗರು ಮೆಟ್ಟೂರು ಅಣೆಕಟ್ಟೆಗೆ ವಿದ್ಯುತ್ ನೀಡುವಂತಹ ಸೌಹಾರ್ದ-ಹೃದಯ ವೈಶಾಲ್ಯತೆಯನ್ನು ತೋರಿದುದು ಐತಿಹಾಸಿಕ ಸತ್ಯ. ಹಾಗೇ ಕರ್ನಾಟಕದ ರಾಜಕಾರಣ ಯಾವ ಪರಿಯಲ್ಲಿ ಕೇಂದ್ರದ ಹಿಡಿತದಲ್ಲಿತ್ತು ಎಂಬುದಕ್ಕೂ ನಿದರ್ಶನ.
 
ಅಂತೂ ಮೆಟ್ಟೂರು ಅಣೆಕಟ್ಟೆ ಕೆಲಸ ಆರಂಭವಾಗಿದ್ದು ಕರ್ನಾಟಕ ಕರೆಂಟು ನೀಡುವ ಭರವಸೆಯನ್ನು ನೀಡಿದ ನಂತರ. ಕರ್ನಾಟಕದ ಶಿವನಸಮುದ್ರದ ಜಲ ವಿದ್ಯುತ್ ಯೋಜನೆಯಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಮೆಟ್ಟೂರು ಅಣೆಕಟ್ಟೆ ನಿರ್ಮಾಣಕ್ಕಾಗಿ ಸತತ ೫ ವರ್ಷಗಳ ಕಾಲ ನೀಡಲಾಗಿತ್ತು. ಶಿವನಸಮುದ್ರದಲ್ಲಿ ತಯಾರಾದ ವಿದ್ಯುತ್ ಅನ್ನು ತಮಿಳುನಾಡಿನ ಮೆಟ್ಟೂರಿಗೆ ಸರಬರಾಜು ಮಾಡುವ ಕಾರ್ಯಕ್ರಮಕ್ಕೆ ೪-೧೧-೧೯೨೮ ರಂದು ಚಾಲನೆ ನೀಡಲಾಯಿತು. ಅಂದು ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸರಬರಾಜು ಮಾಡುವುದನ್ನು ಜಿ ಒ ಎಮ್ ಇ ಡಿ (ಗವರ್ನಮೆಂಟ್ ಆಫ್ ಮೈಸೂರ್ ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್) ಸಂಸ್ಥೆ ನಿರ್ವಹಿಸುತ್ತಿತ್ತು. ದಿನಾಂಕ ೪-೧೧-೧೯೨೮ ರಂದು ಆರಂಭವಾದ ವಿದ್ಯುತ್ ಪ್ರಸರಣ ಐದು ವರ್ಷಗಳ ಕಾಲ ಮುಂದುವರೆಯಿತು. ಭಾರತದ ಪ್ರಥಮ ಅಂತರರಾಜ್ಯ ವಿದ್ಯುತ್ ಪ್ರಸರಣ ಮಾರ್ಗ ಇದಾಗಿತ್ತು. ನಂತರ ೧೮-೩-೧೯೩೪ ರಂದು ಈ ಮಾರ್ಗವನ್ನು ತಟಸ್ಥಗೊಳಿಸಲಾಯಿತು. ಅಷ್ಟರಲ್ಲಿ ಮೆಟ್ಟೂರು ಅಣೆಕಟ್ಟೆ ಮುಗಿದಿತ್ತು, ಮತ್ತೆ ತಮಿಳುನಾಡು ಸರ್ಕಾರದ ತಗಾದೆ ಶುರುವಾಯಿತು.
 

ಮರಳಿ ಇನಿತೆನೆಗೆ