ಅಂಗಳ      ಒಂದೂರಂತೆ
Print this pageAdd to Favorite

ದೊಡ್ಡ ಹೊನ್ನಿ  ಚಿಕ್ಕ ಹೊನ್ನಿ

 
ಒಂದ್ ದೊಡ್ ಊರಿತ್ತು. ಆ ಊರಲಿ ಒಂದ್ ಹೆಣ್ ನಾಯಿ ಹೊಟ್ಟೆ ಹೊರ್ಕಂಡು ಸುತ್ತಾ ಇತ್ತು. ಬೆಳಿಗಿಂದ್ ಅದ್ಕೆ ತಿನ್ನಕೆ ಏನೂ ಸಿಕ್ಕಿರ್ಲಿಲ್ಲ. ಓಡಾಡ್ತ ನಾಯಿ ಆ ಊರ ರಾಜ್ನ ಮನೆ ಹಿತ್ತಲ ಕಡಿಕೆ ಬಂತು. ಆ ನಾಯಿ ಅಲ್ಲಿಗೆ ಬಂದಾಗ್ಲೇ ಆ ರಾಜ್ನ ಮನೆ ಕೆಲಸ್ದೋಳು ಒಂದು ಎಲೆ ದೊನ್ನೆಲಿದ್ದ ಪಾಯಸವನ್ನ ಅಲ್ಲೆ ಕಸದ್ ತಿಪ್ಪೆ ಹತ್ರ ಸುರಿದು ಹೋದ್ಲು. ನಾಯಿ ಗಬಗಬ ಅಂತ ಅಲ್ಲಿ ಚೆಲ್ಲಿದ್ ಪಾಯಸವನ್ನ ತಿಂದು ನೆಲನೆಲ್ಲಾ ನೆಕ್ಕಿ ಚೊಕ್ಕ ಮಾಡ್ತು. ಮುಂದಿನ ದಾರಿ ಹಿಡಿತು.
 
ಈ ಕಡೆ ಅವತ್ತು ಆ ಊರಿನ ರಾಜ ಅವನಿಗೆ ಮಕ್ಳಾಗಿಲ್ಲ ಅಂತ ಕೊರಗಿ ಶಿವನ ಪೂಜೆ ಮಾಡಿಸಿದ್ದ. ಶಿವ ಅವನೆದುರ್ಗೆ ಬಂದು ಒಂದು ದೊನ್ನೆಲಿ ಪಾಯಸ ಕೊಟ್ಟು ಇದನ್ನ ನಿನ್ನ ರಾಣಿಗೆ ಕೊಡು ಅವಳಿಗೆ ಮಕ್ಳಾಗ್ತವೆ ಅಂದ. ಅದ್ಕೆ ರಾಜ ಆ ದೊನ್ನೆನ ತನ್ನ ಮನೆ ಕೆಲಸದವಳಿಗೆ ಕೊಟ್ಟು ಇದನ್ನ ರಾಣಿಗೆ ಕೊಟ್ಟು ಬಾರಮ್ಮ ಅಂದ. ಆ ಕೆಲಸದವಳು ಆ ಪಾಯಸನ ಮೂಸಿ ನೋಡಿ ಅಯ್ಯೋ ನಮ್ ರಾಣಿಗೆ ಈ ತರದ್ ಪಾಯಸ ಇಷ್ಟ ಆಗಲ್ಲ, ರಾಜರ್ಗೆ ಗೊತ್ತಾಗದೆ ಕೊಟ್ಟವ್ರೆ. ನಾನೇ ನಮ್ ರಾಣಿಗೆ ಚನ್ನಾಗಿರೋ ಬೇರೆ ಪಾಯಸ ಮಾಡಿ ಕೊಡ್ತಿನಿ ಅಂದ್ಕೊಂಡು ಅದನ್ನು ಹಿತ್ತಲಿಗೆ ಚೆಲ್ಲಿ ಬಂದಿದ್ಲು. ಅವ್ಳಿಗೆ ಆ ಪಾಯ್ಸ ಶಿವ ಕೊಟ್ಟಿದ್ದು ಅಂತ ಗೊತ್ತಿರ್ಲಿಲ್ಲ. ಆ ನಾಯಿ ಅದೇ ಪಾಯ್ಸವನ್ನು ಕುಡ್ಕೊಂಡಿತ್ತು.
 
ಇದಾಗಿ ಒಂದಷ್ಟ್ ತಿಂಗಳುಗಳು ಕಳೆದ್ವು. ಆ ನಾಯಿ ಬಸಿರಾಗಿ ಎರಡ್ ಮುದ್ದಾಗಿರೋ ಹೆಣ್ ಮಕ್ಕಳನ್ ಹಡೀತು. ದೊಡ್ ಮಗ್ಳಿಗೆ ದೊಡ್ಡ ಹೊನ್ನಿ, ಚಿಕ್ ಮಗಳಿಗೆ ಚಿಕ್ಕ ಹೊನ್ನಿ ಅಂತ ಹೆಸರಿಟ್ಟು ಇಬ್ಬರ್ನೂ ಭಾಳ ಜೋಪಾನ್ವಾಗಿ ಸಾಕಿತು. ತನ್ ಮಕ್ಳನ್ನ ಯಾರೂ ಕದ್ಕೊಂಡು ಹೋಗ್ದೆ ಇರ್ಲಿ ಅಂತ ಅವರಿಬ್ಬರ್ನೂ ಊರ ಪಕ್ಕ ಇದ್ದ ಒಂದು ಕಾಡಿಗೆ ಕರ್ಕಂಡ್ ಬಂದು ಅಲ್ಲಿ ಒಂದು ಕಾಲಿ ಗವಿ ಹುಡ್ಕಿ ಸಂಸಾರ ಶುರು ಮಾಡ್ತು. ನಾಯಿ ಪ್ರತೀ ಸರಿ ಮನೆ ಬಿಟ್ಟು ಹೊರಕ್ಕೆ ಹೋಗ್ವಾಗ್ಲೂ ಮಕ್ಕಳ್ಗೆ ’ಗಟ್ಟಿಯಾಗಿ ಬಾಗಿಲ್ ಹಾಕಳಿ, ಯಾರು ಬಂದ್ರೂ ತೆಗಿಬೇಡಿ, ಯಾರ್ಗೂ ಕಾಣಿಸ್ಕಬೇಡಿ, ನಿಮ್ಮವ್ವ ಯಾರು ಅಂದ್ರೆ ಯಾರ್ಗೂ ಏನೂ ಹೇಳ್ಬೇಡಿ’ ಅಂತ ಹೇಳ್ಕೊಟ್ಟಿತ್ತು. ಮಕ್ಳೂ ಅವ್ವ ಹೇಳ್ಕೊಟ್ಟಂಗೇ ನಡ್ಕೊತಾ ಇದ್ರು. ಸುಮಾರು ವರ್ಷ ಆದ್ವು. ಆ ಹೆಣ್ ಮಕ್ಳು ಚೆಂದುಳ್ಳಿ ಚೆಲುವೆರಾಗಿ ಬೆಳೆದ್ರು. ಮನೆ ಸುತ್ತ ತೋಟ ಮಾಡಿಕಂಡು, ಅಡಿಗೆ ಮಾಡಿಕಂಡು ಅವ್ವನ್ನ ಚನ್ನಾಗಿ ನೋಡಿಕಂಡ್ ಇದ್ರು. ಒಂದಿನ ಹಿಂಗೇ ನಾಯಿ ಮನೆ ಬಿಟ್ಟು ತಿರ್ಗಕೆ ಹೊರಡ್ತು. ’ಜೋಪಾನ ಕಣ್ರವ್ವಾ...ಮನೆ ಬಾಗಿಲ್ ಯಾರಿಗೂ ತೆಗಿಬೇಡಿ...ಮನೆ ಹೊರಕ್ ಬರ್ಬೇಡಿ...ನಾನಿಲ್ದಾಗ ಜೋಪಾನಾ ಕೂಸ್ಗಳಾ...’ಅಂತ ಹೇಳಿ ಮಕ್ಕಳ್ಗೆ ಮುದ್ ಮಾಡಿ ಹೊರಡ್ತು.
 
ನಾಯಿ ಹೋಗಿ ಎರಡ್ ಮೂರ್ ದಿನ ಆಗಿತ್ತು. ಒಂದಿನ ದೊಡ್ ಹೊನ್ನಿ ಚಿಕ್ ಹೊನ್ನಿ ತಮ್ಮ ಗವಿ ಒಳಗಡೆ ಚನ್ನೆಮಣೆ ಆಡ್ತಾ ಕೂತಿದ್ರು. ಹೊರಗಡೆ ಯಾರೋ ಬಾಗಿಲ್ ತಟ್ಟಿದ್ ಸದ್ದಾಯ್ತು! ’ಇದ್ಯಾರಿರಬೌದು’ ಅಂತ ಇಬ್ರೂ ಒಬ್ಬರನ್ನೊಬ್ರು ನೋಡಿಕಂಡ್ರು. ಮತ್ತೆ ಬಾಗಿಲ್ ತಟ್ಟಿದ ಸದ್ದು. ಚಿಕ್ ಹೊನ್ನಿ ’ಅಕ್ಕ ಬಾರೆ ಯಾರ್ ಬಂದರೆ ಅಂತ ನೋಡನಾ...’ ಅಂದ್ಳು. ’ಬೇಡ ಕಣವ್ವಾ ಅವ್ವ ಬಾಗಿಲ್ ತೆಗಿಬೇಡಿ ಅಂತ ಹೇಳ್ಕೊಟ್ಟವಳೆ...ಸುಮ್ಮನಿರು’ ಅಂದ್ಳು ದೊಡ್ದ ಹೊನ್ನಿ. ಬಾಗಿಲು ಬಡಿಯದು ನಿಲ್ಲಲಿಲ್ಲ. ಚಿಕ್ಕ ಹೊನ್ನಿ ಬಾಗಿಲ್ ತೆಗೆಯಣ ಬಾ ಅಂತ ಹಟ ಮಾಡಿದ್ಲು. ತಂಗಿ ಹಟ ತಡಿಲಾರ್ದೆ ದೊಡ್ದ ಹೊನ್ನಿ ಅವಳ್ನ ಕರೆದುಕೊಂಡು ಹೋಗಿ ಒಲೆ ಮುಂದೆ ಇದ್ದ ಬೂದಿ ತಗಂಡು ಅವಳ ಮುಕ-ಕೈಗೆಲ್ಲಾ ಹಚ್ಚಿ, ತಾನೂ ಹಚ್ಚಿಕೊಂಡು ಬಾಗಿಲ್ ಹತ್ರ ಬಂದ್ಲು. ಯಾರೋ ಮತ್ತೆ ಬಾಗಿಲ್ ಬಡಿದ್ರು.
’ಯಾರದು?’ ದೊಡ್ ಹೊನ್ನಿ ಕೇಳಿದ್ಲು.
’ಬಾಗಿಲ್ ತೆಗಿರಿ ನಾವು ಬೇಟೆಗೆ ಅಂತ ಬಂದಿರೋ ಪಕ್ಕದ್ ಊರಿನ ರಾಜಕುಮಾರ್ರು...’ ಅಂದ್ರು
’ಏನ್ ಬೇಕಿತ್ತು ನಿಮ್ಗೆ?’ ದೊಡ್ಡ ಹೊನ್ನಿ ಮತ್ತೆ ಕೇಳಿದ್ಲು.
’ನೀರಡಿಕೆ ಆಗಿದೆ... ಕುಡಿಯಕೆ ಸಲ್ಪ ನೀರು ಬೇಕಿತ್ತು’ ಆಕಡಿಂದ ಮಾತಾಡಿದ್ರು.
ದೊಡ್ಡ ಹೊನ್ನಿಗೆ ಬಾಗಿಲ್ ತೆಗೆಯಕೆ ಭಯ. ಆದ್ರೆ ಚಿಕ್ಕ ಹೊನ್ನಿ ಕುಣ್ದಾಡ್ತ ಇದ್ಲು. ’ಬಾರೆ ಅಕ್ಕ ಬಾಗಿಲ್ ತೆಗೆದು ನೀರ್ ಕೊಡನಾ’ ಅಂತ. ಸರಿ ದೈರ್ಯ ಮಾಡಿ ಬಾಗಿಲ್ ತೆಗೆದು ಅಲ್ಲಿ ನಿಂತಿದ್ದ ಇಬ್ರು ಗಂಡಸ್ರಿಗೆ ಒಂದು ಚೊಂಬ್ ನೀರು ಕೊಟ್ರು.
 
ನೀರು ಕೊಡುವಾಗ ಚೊಂಬಿಂದ ಚೂರು ನೀರು ತುಳುಕಿ ದೊಡ್ದ ಹೊನ್ನಿ ಕೈ ಮೇಲೆ ಚೆಲ್ಲಿತು. ನೀರ್ ಕುಡಿತಿದ್ದ ರಾಜ ಕುಮಾರ ಅವಳ ಕೈ ಬಣ್ಣ ನೋಡಿದ. ಬಂಗಾರದ ಬಣ್ಣ! ಮುಖ ಮಾತ್ರ ಮಸಿ. ಯಾವೂರ ಚೆಲುವೆನಪ್ಪಾ ಇವಳು ಅಂತ ಅವನು ಅವಳ ಕೈ ಹಿಡಿದುಕೊಂಡ. ಇಬ್ಬರು ರಾಜಕುಮಾರ್ರೂ ’ನಿಮ್ಮಪ್ಪ-ಅಮ್ಮ ಯಾರು? ನೀವಿಲ್ಯಾಕಿದಿರಿ?’ ಅಂತೆಲ್ಲಾ ಕೇಳಿದರು. ಇವರು ಏನೂ ಹೇಳ್ಳಿಲ್ಲ. ’ಹಿಂಗೆ ಕಾಡ್ನಲ್ಲಿ ಇಬ್ಬಿಬ್ಬರೇ ಇರಬಾರ್ದು...ನಿಮಗೆ ನಾವು ಮೆಚ್ಚಿಗೆ ಆದ್ರೆ ನಮ್ಮನ್ನ್ ಲಗ್ನ ಮಾಡ್ಕಳಿ ಬನ್ನಿ’ ಅಂತ ಒತ್ತಾಯ ಮಾಡಿದ್ರು. ದೊಡ್ಡ ಹೊನ್ನಿಗೆ ಅವ್ವ ಇಲ್ಲದಾಗ ಹಿಂಗೆ ಯಾರ ಜೊತೇನೋ ಹೊರಟು ಬಿಡದು, ಲಗ್ನ ಮಾಡಿಕೊಳ್ಳದು ಯಾವುದೂ ಇಷ್ಟ ಇರಲಿಲ್ಲ. ಆದ್ರೆ ಚಿಕ್ಕ ಹೊನ್ನಿ ’ಇವರನ್ ಲಗ್ನ ಮಾಡಿಕೊಂಡ್ ಹೋಗಣ ಬಾರೇ ಅಕ್ಕ. ಇಲ್ಲೇನಿದೆ ಅಂತ ಇರದು...ನೀನ್ ಬರ್ಲಿಲ್ಲ ಅಂದ್ರೆ ನಾನ್ ಹೋಗ್ತಿನಿ...’ ಅಂತ ಪಟ್ ಹಿಡಿದ್ಲು. ಚಿಕ್ಕ ತಂಗಿನ ಒಬ್ಬಳ್ನೇ ಹೋಗಕೆ ಬಿಡದು ಸರಿಯಲ್ಲ ಅಂತ ಮನಸ್ಸಿಲ್ಲದಿದ್ರೂ ದೊಡ್ಡ ಹೊನ್ನಿ ಅವರ ಜೊತೆ ಹೊರಟ್ಳು. ರಾಜಕುಮಾರ್ರು ಗಾಡಿ ಮಾಡಿಕೊಂಡು ಬಂದಿದ್ರು. ಅದರಲ್ಲಿ ಎಲ್ಲರೂ ಕೂತುಕೊಂಡ್ರು. ನಾವೆಲ್ಲಿದ್ದೀವಿ ಅಂತ ನಮ್ಮವ್ವಂಗೆ ಗೊತ್ತಾಗ್ಲಿ ಅಂತ ದೊಡ್ದ ಹೊನ್ನಿ ಅವರವ್ವ ಅವಳಿಗೆ ಕೊಟ್ಟಿದ್ ಒಂದು ಮುತ್ತಿನ ಸರದಿಂದ ಒಂದೊಂದೇ ಮುತ್ತನ್ ಕಿತ್ತು ಯಾರಿಗೂ ಗೊತಾಗ್ದಂಗೆ ದಾರಿಗುಂಟ ಹಾಕ್ತಾ ಬಂದ್ಲು. ರಾಜ್ಕುಮಾರ್ರು ದೊಡ್ಡ ಹೊನ್ನಿ ಚಿಕ್ಕ ಹೊನ್ನಿನ ಮನೆಗ್ ಕರೆದುಕೊಂಡು ಬಂದು ಲಗ್ನ ಮಾಡಿಕೊಂಡ್ರು. ಸುಕವಾಗಿ ಸಂಸಾರ ಹೂಡಿಕೊಂಡ್ರು.
 
ಈ ಕಡೆ ಅವರವ್ವ, ನಾಯಿ ದೇಶಾಂತರ ಹೋಗಿ ಮನೆಗೆ ವಾಪಸ್ ಬಂತು. ಮನೇಲಿ ಮಕ್ಳಿಲ್ಲ! ಅದ್ಕೆ ಹೊಸಬರ ವಾಸನೆ ಬಂತು. ನನ್ ಮಕ್ಕಳ್ನ ಯಾರು ಏನು ಮಾಡಿದ್ರೋ ಅಂತ ಭಯ ಪಡ್ತು. ನಾಯಿ ಎಲ್ಲಾ ಕಡೆ ಹುಡುಕ್ತು, ಅವ್ರ ಹೆಸರನ್ ಕರೀತು, ಅಳ್ತು, ಊಳಿಡ್ತು, ಗೋಳಾಡ್ತು. ಆ ಕಡೆ ಈ ಕಡೆ ಓಡಾಡಿದಾಗ ದೊಡ್ಡ ಹೊನ್ನಿಯ ಮುತ್ತಿನ ಸರದ ಮುತ್ತು ಬಿದ್ದಿರದು ಕಾಣಿಸ್ತು. ಅದರ ವಾಸನೆ ಹಿಡಿದುಕೊಂಡು ಹೋದಾಗ ಇನ್ನೊಂದು ಮುತ್ತು ಸಿಕ್ತು. ಇನ್ನೂ ಮುಂದೆ ಹೋದಾಗ ಮತ್ತೊಂದು! ನಾಯಿಗೆ ದೈರ್ಯ ಬಂತು. ಹಂಗೇ ವಾಸನೆ ಹಿಡಿದುಕೊಂಡು ಹೊರಡ್ತು. ಹೋಗೀ ಹೋಗೀ ಮಕ್ಕಳು ಮದುವೆಯಾಗಿ ಸೇರಿದ್ದ ಊರು ತಲುಪ್ತು. ನಾಯಿ ಮೊದಲು ಚಿಕ್ಕ ಹೊನ್ನಿ ಮನೆ ಹಿತ್ತಿಲ ಕಡೆ ಬಂತು. ಅವಳು ಬಟ್ಟೆ ಸೆಣಿತಿದ್ಲು. ಎದುರಿಗೆ ಬಟ್ಟೆ ಕಲ್ಲಿನ ಹತ್ರ ಬಂದ ನಾಯಿಯನ್ ನೋಡಿ ’ನಮ್ಮವ್ವ ಯಾಕೆ ಇಲ್ಲಿ ಬಂದವಳೇ? ನಾನು ನಾಯಿಯ ಮಗಳು ಅಂತ ಗೊತ್ತಾದ್ರೆ ನಮ್ಮೆಜಮಾನ್ರು ನನ್ನನ್ನು ಓಡಿಸಿ ಬಿಡ್ತಾರೆ’ ಅಂದುಕೊಂಡು ಒಳಗೆ ಹೋದವಳೇ ಒಂದು ತಪ್ಪಲೆ ಬಿಸಿ ನೀರು ತಂದು ನಾಯಿಯ ಮೇಲೆ ಸುರಿದು ಬಿಟ್ಲು! ಮಗಳ್ಅನ್ ನೋಡ್ತಾ ಇದ್ದ ನಾಯಿ ಬಿಸಿ ನೀರಿಗೆ ಕಯ್ಯಯ್ಯೋ ಕಯ್ಯಯ್ಯೋ ಅಂತ ಗೋಳಾಡ್ತ ಪಕ್ಕದಲ್ಲಿದ್ದ ದೊಡ್ಡ ಹೊನ್ನಿ ಮನೆಗೆ ಓಡಿ ಬಂತು. ದೊಡ್ಡ ಹೊನ್ನಿ ನರಳಾಡ್ತಾ ಇದ್ದ ಅವ್ವನನ್ನು ನೋಡಿ ಗಾಬರಿಯಾಗಿ ’ಯಾಕವ್ವಾ ಹಿಂಗಾಯ್ತು? ಏನವ್ವಾ ಆಯ್ತು?’ ಅಂತ ಅದನ್ನು ತೊಡೆ ಮೇಲೆ ಮಲಗಿಸಿಕೊಂಡು ಉಪಚಾರ ಮಾಡಿದ್ಲು. ನಾಯಿ ಅವಳಿಗೆ ನಡೆದ ಕತೆ ಹೇಳಿ ’ಮಗಳೇ ನಾನಿನ್ ಬದುಕಲ್ಲ. ನನ್ನನ್ನ ಒಂದು ಪೆಟ್ಟಿಗೆಲಿಟ್ಟು ಭದ್ರವಾಗಿ ಬೀಗ ಹಾಕಿ ಬಿಡವ್ವ’ ಅಂದು ಸತ್ತೇ ಹೊಯ್ತು. ಅವಳು ಗೋಳಾಡುತ್ತಾ ಅವರವ್ವ ಹೇಳಿದಂತೇ ಅದನ್ನು ಒಂದು ಹಳೇ ಸಂದೂಕದಲ್ಲಿಟ್ಟು ಬೀಗ ಹಾಕಿಟ್ಟಳು.
 
ಒಂದೆರಡು ವರ್ಷ ಕಳೆದ್ವು. ದೊಡ್ಡ ಹೊನ್ನಿ ಗಂಡ ಒಂದ್ಸಲ ’ಲೇ ಅದೇನೆ ಆ ದೊಡ್ಡ ಸಂದೂಕದಲ್ಲಿರದು?’ ಅಂತ ಕೇಳಿದ. ಅವಳು ’ಏನಿಲ್ಲ ಬಿಡ್ರಿ...ನಮ್ಮಪ್ಪ-ಅಮ್ಮನ ಮನೆದು ಏನೋ ಹಳೇ ಸಾಮಾನು’ ಅಂತ ಅಂದಳು. ಒಂದೆರಡು ದಿನ ಆದ್ಮೇಲೆ ಗಂಡ ಮತ್ತೆ ’ಅದೇನ್ ಸಾಮಾನು ನೋಡಣ ತೋರ್ಸೇ ಅಂತ ಕೇಳಿದ. ’ಅಯ್ಯೋ ಏನಿಲ್ಲ ಬಿಡ್ರಿ..ಏನೋ ಹಳೇ ಪಾತ್ರೆ-ಚಿಂದಿ ಅಷ್ಟೆ’ ಅಂತ ಅವನನ್ನು ಸುಮ್ಮನಿರಿಸಿದಳು. ಇನ್ನೊಂದೆರಡು ದಿನ ಆದ್ಮೇಲೆ ಗಂಡ ಮತ್ತೆ ಆ ಸಂದೂಕದಲ್ಲೇನಿದೆ ನೋಡನ ಅಂತ ಹಟ ಹಿಡಿದ. ಅವಳು ಎಷ್ಟು ಬೇಡ ಅಂದ್ರೂ ಕೇಳಲಿಲ್ಲ. ಅವಳಿಗೆ ಭಯ ಆಯಿತು. ಗಂಡ ಸಂದೂಕ ತೆಗೆಯೋಕೆ ಅಟ್ಟ ಹತ್ತಿದ. ಅವಳು ಕಣ್ಮುಚ್ಚಿ ಅವರವ್ವನನ್ನು ನೆನೆಸಿದ್ಲು. ಇನ್ನು ನನ್ನ ಗಂಡ ನನ್ನ ಏನು ಮಾಡ್ತರೋ ಅಂತ ಹೆದರಿದ್ಲು. ರಾಜಕುಮಾರ ಸಂದೂಕ ಇಳಿಸಿ ಅದರ ಬೀಗ ತೆಗೆದ. ಇಡೀ ಸಂದೂಕದ ಗಾತ್ರದ ದೊಡ್ಡದೊಂದು ಚಿನ್ನದ ನಾಯಿಯ ಬೊಂಬೆ!! ಅದನ್ನು ನೋಡಿ ಇಬ್ಬರಿಗೂ ಆಶ್ಚರ್ಯ. ’ಇದೇನೇ ಇದು?!’ ರಾಜಕುಮಾರ ಕೇಳಿದ. ’ನಾನು ಚಿಕ್ಕವ್ಳಿದ್ದಾಗ ನಮ್ಮಮ್ಮ ನನಗೆ ಆಡಲು ಕೊಟ್ಟಿದ್ದ ಬೊಂಬೆ ಕಣ್ರಿ’ ಅಂದಳು ದೊಡ್ಡ ಹೊನ್ನಿ. ’ಹೌದೇನೆ?! ನಿಮ್ಮಪ್ಪ-ಅಪ್ಪ ಚಿನ್ನದ ನಾಯಿ ಬೊಂಬೆ ಕೊಡುವಷ್ಟು ದೊಡ್ಡ ಮನೆಯವ್ರಾ? ಹಂಗಾದ್ರೆ ನಡಿ ಒಂದ್ಸರಿ ನಿಮ್ಮ ಮನೆಗೆ ಹೋಗಿ ಬರಣ’ ಅಂದುಬಿಟ್ಟ. ದೊಡ್ದ ಹೊನ್ನಿ ಗಾಬರಿಯಾದ್ಲು. ’ಅಯ್ಯೋ ಶಿವಾ...ಒಂದು ಮುಗಿತು ಅಂದ್ರೆ ಇನ್ನೊಂದು ಕಷ್ಟ ಬಂತಲ್ಲಪ್ಪಾ...’ ಅಂದುಕೊಂಡು ’ಇಲ್ಲ ಕಣ್ರೀ ನಮ್ಮನೆ ದೂರ, ನಮ್ಮಮ್ಮ ಅಪ್ಪನಿಗೆ ಈಗ ವಯಸ್ಸಾಗಿದೆ’ ಅಂದಳು. ರಾಜಕುಮಾರ ಸುಮ್ಮನಾಗಲಿಲ್ಲ. ’ಪರವಾಗಿಲ್ಲ ಬಾ ಹೋಗೇ ಬರಣ’ ಅಂತ ಹಟ ಹಿಡಿದ. ದೊಡ್ಡ ಹೊನ್ನಿ ಅವರವ್ವನ್ನ ನೆನಪಿಸಿಕೊಂಡ್ ’ಆಯ್ತು ನನ್ ಸಂಸಾರ. ಇಷ್ಟೇ ಸುಕ ನನಗೆ, ಇನ್ನು ನಾನು ಪ್ರಾಣ ಬುಡ್ತಿನಿ’ ಅಂದುಕೊಂಡು ಗಂಡನ್ನ ಕರೆದುಕೊಂಡು ದಿಕ್ಕು ದೆಸೆಯಿಲ್ಲದ್ ಹಂಗೆ ಗಾಡಿ ಹೊಡೆದುಕೊಂಡು ಯಾವುದೋ ಕಾಡಿಗೆ ಬಂದರು. ’ಕತ್ಲೆ ಆಯ್ತು ಇಲ್ಲೇ ಮಲಗಿ ನಾಳೇ ನಮ್ಮನೆಗೆ ಹೋಗನ ಕಣ್ರಿ’ ಅಂದು ಅಲ್ಲೇ ಬಿಡಾರ ಹಾಕಿ ಮಲಗಿಕೊಂಡ್ರು.
 
ಸರಿ ಮಧ್ಯರಾತ್ರಿಲಿ ದೊಡ್ಡ ಹೊನ್ನಿ ಎದ್ದು ಗಂಡನ್ನ ಬಿಟ್ಟು ಅಲ್ಲೇ ಇದ್ದ ಒಂದು ದೊಡ್ಡ ಹುತ್ತದ ಹತ್ತಿರ ಬಂದಳು. ’ನಾಳೆ ನನ ಗಂಡಂಗೆ ಎಲ್ಲಿಂದ ನನ ಮನೆ ತೋರಿಸ್ಲಿ? ಅದರ ಬದ್ಲು ಇವತ್ತೇ ನಾನು ಪ್ರಾಣ ಕಳೆದುಕೋತಿನಿ’ ಅಂತ ಹುತ್ತದೋಳಗಿರೋ ಹಾವಿನ ಕೈಲಿ ಕಡಿಸಿಕೊಳನ ಅಂತ ಹುತ್ತದೋಳಗೆ ಕೈ ಇಟ್ಲು. ಆ ಹುತ್ತದೊಳಗೆ ಒಂದು ನಾಗಪ್ಪ ಇತ್ತು. ಅದಕ್ಕೆ ಕಿವಿ ಮೇಲೆ ಒಂದು ಕುರ ಎದ್ದು ಭಾಳ ತ್ರಾಸ ಕೊಡುತ್ತಿತ್ತು. ದೊಡ್ಡ ಹೊನ್ನಿ ಹುತ್ತಕ್ಕೆ ಕೈ ಇಟ್ಟ ತಕ್ಷಣ ಅವಳ ಬೆರಳು ಹಾವಿನ ಕುರಕ್ಕೆ ತಾಕಿ ಅದು ಒಡೆದು ಅದರಲ್ಲಿ ತುಂಬಿದ್ದ ಕೀವೆಲ್ಲಾ ಸೋರಿ ಹಾವಿಗೆ ಭಾಳಾ ಸಂತೋಷ ಆಯ್ತು. ಅದು ಎದ್ದು ಹೊರಗೆ ಬಂತು. ಅಳ್ತಾ ಕೂತಿದ್ದ ದೊಡ್ದ ಹೊನ್ನಿನ ನೋಡ್ತು. ’ಯಾಕ್ ಮಗ ಅಳ್ತಿದಿಯಾ? ಏನ್ ಸಮಾಚಾರ?’ ಅಂತು. ಅವಳು ತನ್ನ ಕತೆನೆಲ್ಲ ಹೇಳಿ ’ನೀನು ನನ್ನ ಕಡಿದು ಸಾಯ್ಸಿಬಿಡು ನಾಗಪ್ಪಾ’ ಅಂತ ಗೋಳಾಡಿದಳು. ’ಅಯ್ಯೋ ಅಷ್ಟೇನಾ ಮಗಾ? ನೀನ್ ಯೋಚನೆ ಮಾಡಬೇಡ. ನನ್ನ ಕಿವಿ ಕುರಾನ ನೀನು ಗುಣ ಮಾಡಿದ್ದೀಯ. ನಾನು ನಿನಗೆ ಎಲ್ಲಾ ವ್ಯವಸ್ತೆ ಮಾಡ್ತಿನಿ. ನಾಳೆ ಬೆಳಿಗ್ಗೆ ಎದ್ದು ಇಲ್ಲಿಂದ ಮೂರು ಗಾವುದ ಉತ್ತರ ದಿಕ್ಕಿಗೆ ಹೋಗು. ಅಲ್ಲಿ ನಿನಗೆ ಒಂದು ಮನೆ ಕಾಣುತ್ತೆ. ಮೂರು ದಿನ ಮೂರು ಹಗಲು ಅಲ್ಲಿ ಚನ್ನಾಗಿರಿ. ಆಮೇಲೆ ಅಲ್ಲಿಂದ ಹೊರಟು ಒಂದು ಗಾವುದ ಬಂದು ಹಿಂದೆ ತಿರುಗಿ ನೋಡಿ. ಆಗ ನಿಮ್ಮ ಮನೆಗೆ ಬೆಂಕಿ ಬಿದ್ದು ಎಲ್ಲ ನಾಶವಾಗುತ್ತೆ. ನಿನ್ನ ಗಂಡನ್ನ ಕರೆದುಕೊಂಡು ಮನೆಗೆ ಹೋಗುವೆಯಂತೆ...’ ಅಂತು ನಾಗಪ್ಪ. ಅವಳು ಸಂತೋಷದಿಂದ ನಾಗಪ್ಪನ ಆಶೀರ್ವಾದ ತಗೊಂಡು ಬಂದು ಗಂಡನ ಪಕ್ಕ ಗೊತ್ತಾಗದಂತೆ ಮಲಗಿದಳು.
 
ಬೆಳಿಗ್ಗೆ ಆಯ್ತು. ದೊಡ್ಡ ಹೊನ್ನಿ ಬೇಗ ಎದ್ದು ಗಂಡನ್ನ ಏಳಿಸಿ ಸಂತೋಷದಿಂದ ನಾಗಪ್ಪ ಹೇಳಿದ ಕಡೆ ಹೊರಟ್ಲು. ಅಲ್ಲಿ ದೊಡ್ಡದೊಂದು ಅರಮನೆ ನಿಂತಿತ್ತು. ಇವಳನ್ನು ನೋಡಿದ ತಕ್ಷಣ ಅಲ್ಲಿದ್ದ ಜನ ’ಈಗ ಬಂದ್ಯೇನವ್ವಾ? ಹೆಂಗಿದಿಯವ್ವಾ? ನಿಮ್ಮೆಜಮಾನ್ರಾ ಇವರು?’ ಅಂತೆಲ್ಲಾ ಕೇಳಿ ಅವರನ್ನು ಚನ್ನಾಗಿ ಸತ್ಕಾರ ಮಾಡಿದರು. ಒಳ್ಳೆ ಊಟ ಹಾಕಿದರು. ಇದ್ದ ಮೂರೂ ದಿನ ಅವರನ್ನು ಮಾರಾಜ-ಮಾರಾಣಿ ಥರ ನೋಡಿಕೊಂಡ್ರು. ಹೊರಡುವ ದಿನ ಬಂತು. ಅವರಿಬ್ಬರಿಗೂ ಚಿನ್ನ-ಬೆಳ್ಳಿಯ ಉಡುಗೊರೆ ಕೊಟ್ಟು ಮನೆಯವರೆಲ್ರೂ ಕಳಿಸಿಕೊಟ್ರು. ದೊಡ್ದ ಹೊನ್ನಿ ಮನೆಯಿಂದ ಹೊರಟು ಸಲ್ಪ ದೂರ ಬಂದು ನಾಗಪ್ಪ ಹೇಳಿದಂಗೆ ತಿರುಗಿ ನೋಡಿದ್ಲು. ಇಡೀ ಮನೆಗೆ ಬೆಂಕಿ ಬಿದ್ದು ಉರಿದು ಹೋಗ್ತಿತ್ತು. ಗಂಡನೂ ನೋಡಿದ. ಇವಳು ಭೋರಾಡಿ ಅತ್ಲು. ಅವನು ಅವಳನ್ನು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಬಂದ.
 
ದೊಡ್ಡ ಹೊನ್ನಿ-ಅವಳ ಗಂಡ ಎಲ್ಲಿಗೋ ಹೋಗಿ ಸಂಪತ್ತು ತಂದಿದ್ದು ಹೆಂಗೋ ಚಿಕ್ಕ ಹೊನ್ನಿಗೆ ಗೊತ್ತಾಯಿತು. ನನಗೂ ಹೇಳಿಕೊಡು ಅಂತ ದೊಡ್ಡ ಹೊನ್ನಿನ ಪೀಡಿಸಿದ್ಲು. ದೊಡ್ಡ ಹೊನ್ನಿ ಅವಳ ಕಾಟ ತಡಿಲಾರ್ದೆ ನಡೆದಿದ್ದನ್ನು ಹೇಳಿಬಿಟ್ಳು. ಚಿಕ್ಕ ಹೊನ್ನಿ ಮಾರನೇ ದಿನವೇ ಗಂಡನನ್ನು ಕರೆದುಕೊಂಡು ಗಾಡಿ ಹೂಡಿಕೊಂಡು ಕಾಡಿಗೆ ಹೊರಟ್ಲು. ರಾತ್ರಿ ಕಾಡು ತಲುಪಿ ಗಂಡ ನಿದ್ದೆ ಮಾಡಿದಾಗ ಅದೇ ಹುತ್ತದ ಹತ್ರ ಬಂದು ಕೈ ಬೆಟ್ಟು ಹಾಕಿದ್ಲು. ಅವಳ ಬೆಟ್ಟು ನೇರವಾಗಿ ಹೋಗಿ ನಾಗಪ್ಪನ ಕಣ್ಣಿಗೆ ಚುಚ್ಚಿತು. ಕೋಪದಿಂದ ನಾಗಪ್ಪ ಅವಳ ಬೆಟ್ಟನ್ನು ಕಚ್ಚಿಬಿಟ್ಟಿತು. ಅದರ ವಿಷ ಅಲ್ಲೇ ಏರಿ ಚಿಕ್ಕ ಹೊನ್ನಿ ಸತ್ತು ಬಿದ್ಲು.
(ಸಂಗ್ರಹ)
 
ಕಲೆಯಾಗಿ-ಕಥೆಯಾಗಿ ನಮ್ಮ ಜಾನಪದದಲ್ಲಿ, ಜನಪದರ ಜೀವನದಲ್ಲಿ ಹಾಸುಹೊಕ್ಕಾಗಿರುವ ಕೆಲವು ಅಭ್ಯಾಸಗಳನ್ನು, ವಸ್ತುಗಳನ್ನು ಆಯಾಮದ ಓದುಗರಿಗಾಗಿ ಪರಿಚಯಿಸಿಕೊಡಲಿದ್ದೇವೆ. ಒಂದೂರಂತೆ ಅಂಕಣದಲ್ಲಿ ಕಥೆಗಳೊಂದಿಗೆ ನೆಂಚಿಕೊಳ್ಳಿ. 
 
ಹಸಿರ ಮಚ್ಚೆ- ಮೈಮ್ಯಾಲೆ ಹಚ್ಚೆ...ಹಚ್ಚೆ ಕಲೆಯ ಪರಿಚಯ
ಚಿತ್ರ-ಲೇಖನ: ಜಿ.ಶ್ರೀನಿವಾಸಯ್ಯ
 

ಮನುಷ್ಯರೊಂದಿಗೆ ಶಾಶ್ವತವಾಗಿ ಬರುವಂತಹ ಏಕೈಕ ಆಸ್ತಿಯೆಂದು ಕರೆಯಲ್ಪಡುವ ಹಚ್ಚೆ ಕಲೆ ಜನಪದ ಕಲೆಗಳಲ್ಲಿ ಮುಖ್ಯವಾದುದಾಗಿದೆ. ಇದನ್ನು ಮನುಷ್ಯನ ಬದುಕಿನುದ್ದಕ್ಕೂ ಜೊತೆ ಜೊತೆಯಾಗಿ ಧಾರ್ಮಿಕ ಹಿನ್ನಲೆಯೊಂದಿಗೆ ಬೆಳೆದು ಬರುತ್ತಿರುವ ಕಲೆ ಎನ್ನಬಹುದು. ಹಚ್ಚೆ ಸೌಂದರ್ಯದ ಸಂಕೇತ, ಅದು ನಮ್ಮ ಜೊತೆಯಲ್ಲಿ ಬರುತ್ತದೆ, ಅದನ್ನು ಹಾಕಿಸಿರುವವರ ನೆನಪು ಸದಾ ಕಾಲವಿರುತ್ತದೆ ಎಂಬ ನಂಬಿಕೆಗಳಿವೆ. ಹೀಗಾಗಿ ಇದು ಪವಿತ್ರ ಸ್ಥಾನವನ್ನು ಪಡೆದಿದೆ. ಹೀಗೆ ಸೌಂದರ್ಯದ ಸಂಕೇತವಾಗಿ ಮಾನವನಲ್ಲಿ ಸೌಂದರ್ಯ ಪ್ರಜ್ಞೆ ಮೂಡಿದಂದಿನಿಂದ ವೈವಿಧ್ಯಮಯವಾಗಿ ಇದು ಜೊತೆಗೂಡಿ ಬರುತ್ತಲೇ ಇದೆ. ನಮ್ಮ ಸಂಸ್ಕೃತಿಯಲ್ಲಿ ಅದರಲ್ಲೂ ತಳ ಸಮುದಾಯದಲ್ಲಿ ಈ ಹಚ್ಚೆಗೆ ತುಂಬಾ ಗೌರವವಿದೆ.
ಹಚ್ಚೆ ಕಲೆ ಜಾತಿ ಮತ್ತು ಜನಾಂಗಿಕವಾಗಿ ವೈವಿಧ್ಯತೆಯನ್ನು ಪಡೆಯುತ್ತಾ ಹೋಗುತ್ತದೆ. ಅನ್ಯ ಜಾತಿಗಳಲ್ಲಿ ಹಚ್ಚೆಯನ್ನು ಹಾಕಿಸಿಕೊಳ್ಳುವುದು ಕಡಿಮೆ. ಹಾಕಿಸಿಕೊಂಡರೂ ಕೆಲವೊಂದು ಚಿತ್ರ ವಿನ್ಯಾಸಗಳನ್ನು ಹಾಕಿಸಿಕೊಳ್ಳುವುದುಂಟು. ವೈಷ್ಣವರು ಚಕ್ರಾಂಕನ, ಶೈವರಾದರೆ 'ತ್ರಿಪುಂಡ್ರ', 'ತ್ರಿಶೂಲ', ಲಿಂಗ, ಬಸವ, ನಂದಿ, ಧ್ವಜದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ಕ್ರೈಸ್ತರು ಶಿಲುಬೆ, ಪಕ್ಷಿಯನ್ನು ಹಾಕಿಸಿಕೊಳ್ಳುತ್ತಾರೆ. ಇತರೆ ಜನಾಂಗಗಳು ಆಂಜನೇಯ ಮುಂತಾದ ಚಿತ್ರಗಳನ್ನು ಹಾಕಿಸಿಕೊಳ್ಳುತ್ತಾರೆ. ಹಚ್ಚೆಯನ್ನು ಕಾಡಿಗೆ, ಚಿಮಣಿ ಎಣ್ಣೆಯ ದೀಪದಿಂದ ಸಂಗ್ರಹಿಸಿದ ಕಪ್ಪುಕುಡಿ, ತೋಡಿ ಸೊಪ್ಪು, ಕಾಡಿಗೆಗರುವಿನ ರಸದಲ್ಲಿ ಬೆರೆಸಿ ಮೂರು ಸೂಜಿಗಳಿಂದ ಚುಚ್ಚುತ್ತಾರೆ. ಕೊರವಂಜಿ, ಒಡ್ಡರು, ಬೇಡರು ಮತ್ತು ಕಿಳ್ಳೆಕ್ಯಾತರು ಹಚ್ಚೆಯನ್ನು ಹಾಕುತ್ತಾರೆ. ಜನಪದರು ಹಾಕಿಸಿಕೊಳ್ಳುವ ಹಚ್ಚೆಗಳನ್ನು ಅವುಗಳನ್ನು ಹಾಕುವ ಸ್ಥಳಗಳನ್ನು ಕೆಳಕಂಡಂತೆ ನೀಡಬಹುದು;
ಹಣೆಯ ಮೇಲಿನ ಹಚ್ಚೆ

ಹಣೆಯ ಮೇಲಿನ ಹಚ್ಚೆಯ ಕಲೆಗಳನ್ನು ಗುಮ್ಮಡಿಗಿಂಜ (ಕುಂಬಳ ಬೀಜ), ಚಂದ್ರಮ (ಚಂದ್ರ), ಸೂರ್ಯ, ನಿಲುವನಾಮು(ಉದ್ದನೆಯ ನಾಮ) ಇತ್ಯಾದಿಗಳಾಗಿ ವಿಂಗಡಿಸಬಹುದು. ಸಾಮಾನ್ಯವಾಗಿ ನಿಲುವನಾಮವನ್ನು ಗಂಡಸರು ಹಾಕಿಸಿಕೊಳ್ಳುವುದುಂಟು. ಉಳಿದಂತೆ ಬಹುತೇಕ ಮುಖದ ಮೇಲಿನ ಹಚ್ಚೆ ಚಿತ್ತಾರಗಳನ್ನು ಹೆಂಗಸರು ಹಾಕಿಸಿಕೊಳ್ಳುತ್ತಾರೆ. ಅದರಲ್ಲೂ ತಳ ಸಮುದಾಯದ ಜನರಲ್ಲಿ ಕಡ್ಡಾಯವಾಗಿ ಹಾಕಿಸಿಕೊಳ್ಳುತ್ತಾರೆ.

ಮುಂಗೈ ಮೇಲಿನ ಹಚ್ಚೆಗಳು
ಗಂಡಸರು ಹಾಗೂ ಹೆಂಗಸರು ಹಾಕಿಸಿಕೊಳ್ಳುವ ಹಚ್ಚೆಗಳಲ್ಲಿ ಶ್ರೀ ಕೃಷ್ಣನ ತೊಟ್ಟಿಲು, ಮುತ್ಯಾಲಮುಗ್ಗು, ಆಂಜನೇಯ, ಮಲ್ಲಿಮೊಗ್ಗೆ, ಮುತ್ಯಾಲ ಆರತಿ, ಜಾಕಾಯಿಪೆಟ್ಟಿಗೆ, ಪಗಬಂಡಿ, ಶ್ರೀರಾಮುಲು ತೊಟ್ಲಿ (ಶ್ರೀರಾಮನ ತೊಟ್ಟಿಲು), ಮುಂಗೈಯ ಎದುರಿಗೆ ಹಾಕಿಸಿಕೊಳ್ಳುವ ಎದುರು ಬಾಸಿಂಗಾಲು(ಎದುರು ಬಾಸಿಂಗಗಳು) ಇತ್ಯಾದಿ
 
ಕೈ ಮತ್ತು ಬೆರಳುಗಳ ಮೇಲಿನ ಹಚ್ಚೆಗಳು
ವಿಶೇಷವಾಗಿ ಹೆಂಗಸರು ಹಾಕಿಸಿಕೊಳ್ಳುವ ಹಚ್ಚೆ ಚಿತ್ತಾರಗಳಲ್ಲಿ ಪೊಯ್ಯಿಗುಂಡ್ಲು (ಒಲೆಗುಂಡುಗಳು), ಮೊಲ್ಲಿಮೊಗ್ಗ (ಮಲ್ಲಿಗೆ ಮೊಗ್ಗು), ಸ್ಯಾಪಮುಳ್ಳು (ಮೀನಿನ ಮುಳ್ಳು,) ಇತ್ಯಾದಿ ಪ್ರಕಾರಗಳು ಪ್ರಮುಖವಾದವುಗಳು.
ಆಧುನಿಕತೆಯ ಅಬ್ಬರದಲ್ಲಿ ದೇಸಿ ಹಚ್ಚೆಕಲೆ ತನ್ನ ಸಾಚಾತನವನ್ನು ಕಳೆದುಕೊಳ್ಳುತ್ತಿದೆ. ದೇಸಿ ಹಚ್ಚೆಕಲೆಯ ಸ್ಥಾನವನ್ನು ಆಧುನಿಕ ಯಾಂತ್ರಿಕ ಹಚ್ಚೆ ಕಲೆ ಕಬಳಿಸುತ್ತಿದೆ. ಇದರಿಂದ ಪರಂಪರಾಗತ ಜನಪದ ಚಿತ್ತಾರಗಳು ಅವನತಿಯ ಹಂಚಿಗೆ ಬಂದು ತಲುಪಿವೆ.