ನನ್ನೊಳಗಿನ ತೇಜಸ್ವಿ
ಪ್ರೊ. ಜಿ.ಎಚ್. ನಾಯಕ
 
(ಕನ್ನಡ ಸಾಹಿತ್ಯಾಸಕ್ತರಲ್ಲಿ ಜಿ ಎಚ್ ನಾಯಕ್ ಗೊತ್ತಿಲ್ಲ ಎನ್ನುವವರಿಲ್ಲ. ಜಿ ಎಚ್ ಕೇವಲ
ವಿಮರ್ಶಕರಲ್ಲ, ವಿಮರ್ಶೆಯ ಗುರು. ಕೇವಲ ಸಾಹಿತಿಯಲ್ಲ, ಅವರು ಕನ್ನಡ ಸಂಸ್ಕೃತಿಯ ಧೀಮಂತ ವಕ್ತಾರ. ಬದುಕಿ ಬರೆದ, ಅಂದಂತೆ ನಡೆದುಕೊಂಡ ಒಂದು ಸಾತ್ವಿಕ ತೇಜಸ್ಸು. ಜಿ ಎಚ್ ನಾಯಕರೇ ಬೇರೆ. ಅವರಂತೆ ಬದುಕಿದವರು ಬೇರೆ ಇಲ್ಲ. ಕುವೆಂಪು, ತೇಜಸ್ವಿಯಂತೆ ಕರ್ನಾಟಕದ ಒಂದು ಸಾಂಸ್ಕೃತಿಕ ಮಹಾಮಾದರಿ. ಅವರ ಬರಹ ಕರ್ನಾಟಕದ ’ನಿಜದನಿ’. ಅವರು ಕನ್ನಡ ಸಂಸ್ಕೃತಿಯ ಸತ್ವದ ಸಂಕೇತ. ಜಿ ಎಚ್ ಆಯಾಮ ಪರಿವಾರದ ಅತ್ಯಂತ ಆಪ್ತ ಮನಸ್ಸು. ನಮ್ಮ ಪ್ರಯತ್ನ-ಭರವಸೆಯ ಆಧಾರ ಸ್ಥಂಭ. ಅವರ ಪ್ರೀತಿ ನಮ್ಮನ್ನು ಸದಾ ಬೆಳಗಲಿ.
ಜಿ ಎಚ್ ನಾಯಕರು ತಮ್ಮ ಆತ್ಮೀಯ ಮಿತ್ರ ಪೂರ್ಣಚಂದ್ರ ತೇಜಸ್ವಿಯವರ ನಿಧನಾನಂತರ ಈ ಲೇಖನದ ಮೂಲಕ ತಮ್ಮೊಳಗಿನ ತೇಜಸ್ವಿಯವರ ನೆನಪುಗಳನ್ನು ಹಂಚಿಕೊಂಡಿದ್ದರು. ಮೊನ್ನೆ, ೨೦೧೦ ರ ಆಗಸ್ಟ್ ಕೊನೆಯ ವಾರದಲ್ಲಿ ಮೈಸೂರಿನಲ್ಲಿ ಅವರಿಗೆ ಪ್ರತಿಷ್ಟಿತ ಶಿವರಾಮ ಕಾರಂತ ಪ್ರಶಸ್ತಿ ಸಂದಿದೆ. ಆ ಸಂತೋಷದ ಸಲುವಾಗಿ ಆಯಾಮದ ಓದುಗರಿಗಾಗಿ ಅವರ ಈ ಬರಹ)

 
೧೯೯೭ `ಶ್ರೀ ರಾಮಾಯಣ ದರ್ಶನಂ' ದ ಹಸ್ತಪ್ರತಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸುವುದಕ್ಕೆ ತೇಜಸ್ವಿ ಅವರ ಆತ್ಮೀಯ ಮಿತ್ರ ಪ್ರೊ.ಬಿ.ಎನ್.ಶ್ರೀರಾಮ ಅವರ ನೆರವು ಪಡೆಯುತ್ತಿದ್ದರು. ಏಕೊ ಅವರಿಗೆ ಸ್ನೇಹಿತನಾದ ನನ್ನ ನೆರವೂ ಬೇಕೆನಿಸಿತು; ತಾವಾಗಿ ಕರೆದರು. ಆಗ ನಾನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕನಾಗಿದ್ದೆ. ಮೂಡಿಗೆರೆಯ ಅವರ ತೋಟದ ಮನೆಯಲ್ಲಿ ನಾನೂ ಅವರ ಜೊತೆ ತಿಂಗಳ ಕಾಲ ದುಡಿದೆ. ಟಿಪ್ಪಣಿ ಭಾಗವನ್ನು ನಾನು ಸಿದ್ಧಪಡಿಸಿಕೊಟ್ಟೆ.
 
ತೇಜಸ್ವಿ ದಿನಕ್ಕೆ ಹದಿನೇಳು ಹದಿನೆಂಟು ತಾಸು ಹಗಲು ರಾತ್ರಿ ಒಂದೇ ಸಮನೆ ಕಂಪ್ಯೂಟರ್ ಮೇಲೆ ಹಸ್ತಪ್ರತಿ ಮುದ್ರಣದಲ್ಲಿ ತೊಡಗಿರುತ್ತಿದ್ದರು. ಕೆಲಸ ಇಂಥ ದಿನಾಂಕದೊಳಗೆ ಮುಗಿಸಬೇಕೆಂಬ ಗಡುವು ಬೇರೆ ಹಾಕಿಕೊಂಡಿದ್ದರು. ಸ್ವಂತ ಬರವಣಿಗೆಯ ಬೇರೆ ಕೆಲಸಕ್ಕೆ ಜಿಗಿಯಲು ಅವರು ತುದಿಗಾಲ ಮೇಲೆ ನಿಂತಿದ್ದರು. ನಿಗದಿತ ಅವಧಿಯೊಳಗೆ ಮುಗಿಸಲು ನಾವೂ ಟೊಂಕಕಟ್ಟಿಯೊ ಮೈಬಗ್ಗಿಸಿಯೊ ದುಡಿಯಬೇಕಾಗಿತ್ತು.

ಶ್ರೀರಾಮ ಶಿಸ್ತಿನ ಕೆಲಸಗಾರ; ದುಡಿಮೆಗೆ ಜಗ್ಗದ ಬಂಟ. ಅವರೂ ಹಗಲು ರಾತ್ರಿ ಎನ್ನದೆ ಕೆಲಸದಲ್ಲಿಯೆ ತೊಡಗಿರುತ್ತಿದ್ದರು. ದಿನಕ್ಕೆ ೧೫-೧೬ ತಾಸಾದರೂ ಕೆಲಸ ಮಾಡುತ್ತಿದ್ದರು. ನನಗೊ ೧೨-೧೩ ತಾಸಿಗಿಂತ ಹೆಚ್ಚು ಕೆಲಸ ಮಾಡುವುದಕ್ಕೆ ಸಾಕುಬೇಕಾಗುತ್ತಿತ್ತು. ಹೆಜ್ಜೆ ಹೆಜ್ಜೆಗೂ ತೇಜಸ್ವಿಗೆ ಶ್ರೀರಾಮ ಬೇಕಾದಂತೆ ನನಗೂ ಬೇಕಾಗುತ್ತಿದ್ದರು. ಇಬ್ಬರು ಗಂಡಂದಿರ ಕಾಟ ಅಂತಾರಲ್ಲಾ ಅಂಥ ಅಡಕತ್ರಿಗೆ ಸಿಕ್ಕಿದಂಥ ಸ್ಥಿತಿಯಲ್ಲಿ ಶ್ರೀರಾಮ ಕೆಲಸ ಮಾಡಬೇಕಾಗಿತ್ತು. ಅವರ ವ್ಯವಹಾರ ವಿವೇಕ ಉನ್ನತ ಮಟ್ಟದ್ದು. ಏನೇ ಅನುಮಾನ ಬಂದರೂ ಅವರನ್ನು ಕೇಳಿ, ಚರ್ಚಿಸಿ ತೇಜಸ್ವಿ ಮುಂದುವರಿಯುತ್ತಿದ್ದರು. ಸರಿಯಾದ ಗ್ರಹಿಕೆಯಿಂದ ಸರಿ ತಪ್ಪುಗಳ ಬಗ್ಗೆ ನಿಖರವಾಗಿ ಸ್ವಪ್ರಶಂಸೆಯಿಲ್ಲದೆ, ಸ್ವಪ್ರತಿಷ್ಠೆ ಮೆರೆಸದೆ ತಿಳಿಸುವ ವ್ಯಕ್ತಿ ಶ್ರೀರಾಮ. ತೇಜಸ್ವಿ ಇಲ್ಲದೆ ಶ್ರೀರಾಮನನ್ನು ಕಲ್ಪಿಸಿಕೊಳ್ಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಶ್ರೀರಾಮ ತೇಜಸ್ವಿಗೆ ಅಂಥ ದೀರ್ಘಕಾಲದ ಆತ್ಮಸಖ.
ತಾಸುಗಳ ಲೆಕ್ಕವಿಲ್ಲದೆ ಮಲಗಿ ಓದುವ ಅಭ್ಯಾಸವಿದ್ದ ನನಗೆ ಅಷ್ಟು ಹೊತ್ತು ಕುಳಿತು ಕೆಲಸ ಮಾಡುವುದು ಹಿಂಸೆ ಅನಿಸುತ್ತಿತ್ತು. ತೇಜಸ್ವಿಯಂಥ ದೈತ್ಯ ದುಡಿಮೆಗಾರನಿಗೆ ನನ್ನ ಕೆಲಸದ ವೇಗ ಆಮೆ ನಡಿಗೆ ಅನಿಸಿರಬೇಕು. ಟಿಪ್ಪಣಿಯಾಗಿರಲಿ, ಲೇಖನವಾಗಿರಲಿ ಯಾವುದನ್ನು ಮಾಡಿದರೂ ನನ್ನ ಯೋಗ್ಯತೆಯ ಮಿತಿಯಲ್ಲಿಯೇ ಆದರೂ ಸರಿಯಾಗಿ, ಸಮರ್ಪಕವಾಗಿ ಮಾಡಬೇಕು ಎಂಬ ಜಾಯಮಾನದವನು ನಾನು. ತೀರ್ಮಾನದ ವಿಷಯದಲ್ಲಿ ದುಡುಕುವವನಲ್ಲ. ಅದರಿಂದಾಗಿ ನನ್ನ ಕೆಲಸದ ಗುಣಮಟ್ಟದಲ್ಲಿ ಹೆಚ್ಚಿನ ಕೊರತೆ ಕಾಣದಿದ್ದರೂ ನನ್ನ ಕೆಲಸದ ಪ್ರಮಾಣ ಕಡಿಮೆ ಆಗುತ್ತಿತ್ತು. ಅವರ ನಿರೀಕ್ಷೆಯ ವೇಗದಲ್ಲಿ ಸಾಗುತ್ತಿರಲಿಲ್ಲ.
ನನ್ನನ್ನು ಮಿತ್ರನಾಗಿ ಮಾತ್ರ ನೋಡದೆ ಮನೆಗೆ ಬಂದ ಗೌರವ ಅತಿಥಿಯಾಗಿಯೂ ತೇಜಸ್ವಿ, ರಾಜೇಶ್ವರಿ ನೋಡಿಕೊಳ್ಳುತ್ತಿದ್ದರು. `ಶ್ರೀರಾಮ್, ಎಂಥ ಶೋಂಬೇರಿ ರೀ ನೀವು? ಕೆಲಸ ಸಾಗುತ್ತಿಲ್ಲವಲ್ರೀ, ಒಳ್ಳೆ ಒಡ್ಡರ ಬಂಡಿ ವ್ಯವಹಾರ ಆಯ್ತಲ್ರೀ' ಎಂದು ಸ್ನೇಹದ ಸಲುಗೆಯಲ್ಲಿ ಆಗೀಗ ಕೆಲಸಕ್ಕೆ ಚುರುಕು ತರಲೆಂದು ತೇಜಸ್ವಿ ದಬಾಯಿಸಿದಾಗ ಆ ಮಾತಿನಿಂದ ನನಗೇ ಚುರುಕು ಮುಟ್ಟಿಸಿದಂತಾಗುತ್ತಿತ್ತು. ನಾನು ತುಸು `ನರ್ವಸ್' ಆಗುತ್ತಿದ್ದೆ. ಕೆಲಸದಲ್ಲಿ ಮಗ್ನವಾಗಿದ್ದಾಗ ಊಟ, ತಿಂಡಿಗೆ ನಿಗದಿತ ವೇಳಾಪಟ್ಟಿ ಇಲ್ಲದಂತೆ ತೇಜಸ್ವಿ ದುಡಿಯುತ್ತಿದ್ದರು. ಅವರನ್ನು ಊಟ, ತಿಂಡಿಗೆ ಎಬ್ಬಿಸುವುದಕ್ಕೆ ರಾಜೇಶ್ವರಿಯವರು ಒಂದು ಉಪಾಯ ಕಂಡುಕೊಂಡಿದ್ದರು. `ನಾಯಕರಿಗೆ ತಡವಾಗುತ್ತೆ ಕಣ್ರೀ' ಎಂದು ಅವರು ಹೇಳಿದರೆ ತೇಜಸ್ವಿ ಮರುಮಾತಾಡದೆ ಎದ್ದು ಬರುತ್ತಿದ್ದರು. ತೇಜಸ್ವಿಯವರ ಆತ್ಮೀಯ ವಲಯಕ್ಕೆ ನಾನು ಬಂದ ಕಾಲದಿಂದಲೂ - ೧೯೬೨ರ ಸುಮಾರಿನಿಂದಲೂ ಆತ್ಮೀಯ ಸ್ನೇಹದ ಸಲುಗೆಯ ಜೊತೆಗೆ ಘನತೆ ಗೌರವದ ಸ್ಪರ್ಶ ತಪ್ಪದಂತೆ ಸ್ನೇಹ-ಗೌರವ ಕಸಿಗೊಳಿಸಿದಂಥ ಒಂದು ಅಪರೂಪದ ಬಗೆಯ ರುಚಿ ವಿಶೇಷ ಸಂಬಂಧದಲ್ಲಿ ನನ್ನೊಡನೆ ಒಡನಾಡುತ್ತಿದ್ದರು. ಅಂಥ ಉಲ್ಲಾಸ, ಆನಂದ ನೀಡುವಂಥ ಸ್ನೇಹ ಸಂಬಂಧದ ಅನುಭವವನ್ನು ನಾನು ಬೇರೆ ಯಾರಿಂದಲೂ ಪಡೆದಿಲ್ಲ. ಅದು ನಾನು ತೇಜಸ್ವಿಯಿಂದ ಪಡೆದ ಹೋಲಿಕೆ ಇಲ್ಲದ ಸ್ನೇಹದ ಸೌಭಾಗ್ಯ.
 
ನನ್ನ ಪಾಲಿನ ಕೆಲಸ ಮುಗಿಸಿ ಮೈಸೂರಿಗೆ ತಿರುಗಿ ಬರುವಾಗ, 'ತೇಜಸ್ವಿ, ನಿಮಗೂ ಅರವತ್ತಾಗುತ್ತಾ ಬಂತು. ಈ ರೀತಿ ದೈತ್ಯನಂತೆ ಕೆಲಸ ಮಾಡುವುದನ್ನು ದೇಹ ಸಹಿಸಬೇಕಲ್ಲಾ; ಸಂಕಲ್ಪ ಬಲಕ್ಕೇ ಎಲ್ಲವನ್ನೂ ನಿಭಾಯಿಸುವುದಕ್ಕೆ ಆಗುವುದಿಲ್ಲ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ಇರಲಿ' ಎಂದೆ. ಅದಕ್ಕೆ ತೇಜಸ್ವಿ, 'ಮಾರಾಯರಾ, ನಾಲ್ಕು ಜನ್ಮದಲ್ಲಿ ನನ್ನಿಂದ ಮಾಡಿ ಮುಗಿಸುವುದಕ್ಕೆ ಆಗದಷ್ಟು ಕೆಲಸಗಳು, ಯೋಜನೆಗಳು ನನ್ನ ತಲೆಯಲ್ಲಿ ಗೆಜ್ಜೆ ಕಟ್ಟಿ ದಿಮಿದಿಮಿ ಕುಣಿಯುತ್ತಾ ಇವೆ. ನಿನಗೆ ಇಷ್ಟು ವರ್ಷ ಆಯುಷ್ಯ ಮಾರಾಯ, ಎಂದು ಯಾರು ನಮಗೆ ಹೇಳಿ ಕಳಿಸಿದ್ದಾರೆ? ಎಷ್ಟು ಆಗುತ್ತೊ ಅಷ್ಟನ್ನು ಮಾಡ್ತಾ ಹೋಗೋದಷ್ಟೇ' ಅಂದರು. ಆಗ ನಾನು, 'ನಿಮಗೆ, ನಿಮ್ಮ ಸಾಧನೆಗೆ ಬರುವ ಪ್ರಶಸ್ತಿ, ಸನ್ಮಾನಕ್ಕಿಂತ ದೊಡ್ಡ ಪ್ರಶಸ್ತಿ, ಸನ್ಮಾನ ರಾಜೇಶ್ವರಿಯವರಿಗೆ ಸಲ್ಲಬೇಕು ಕಣ್ರೀ. ಅವರಿಗೆ, ಅವರ ತಾಳ್ಮೆಗೆ ನಮಸ್ಕಾರ' ಎಂದೆ. ತೇಜಸ್ವಿ ನಸು ನಕ್ಕರು. ಪ್ರತಿ ಮಾತನಾಡಲಿಲ್ಲ.

ನಮ್ಮ ಕೆಲಸ ಮುಗಿಯುವುದಕ್ಕೆ ಇನ್ನೆರಡೊ ಮೂರೊ ದಿನ ಬೇಕಿತ್ತು. ನನ್ನ ಮಿತ್ರರಾದ
ಡಾ.ಹಿ.ಶಿ.ರಾಮಚಂದ್ರೇಗೌಡರ ಹೆಂಡತಿ ನಾಗರತ್ನ ಕುಮಾರಿ ಮೈಸೂರಿಂದ ಮೂಡಿಗೆರೆಗೆ ಬಂದರು. ರಾಜೇಶ್ವರಿ, ನಾಗರತ್ನ ಇಬ್ಬರೂ ಮೊದಲೇ ನಿಶ್ಚಯಿಸಿಕೊಂಡಿದ್ದಂತೆ ಕೆ.ವಿ.ಸುಬ್ಬಣ್ಣನವರ ನೀನಾಸಂನ ಸಂಸ್ಕೃತಿ ಶಿಬಿರಕ್ಕೆ ಹೆಗ್ಗೋಡಿಗೆ ಹೊರಟರು. ತೇಜಸ್ವಿ, ಶ್ರೀರಾಮ ಅವರಿಗೇ ಅವರ ಹೊಟ್ಟೆ, ನನ್ನ ಹೊಟ್ಟೆ ಯೋಗಕ್ಷೇಮ ನೋಡಿಕೊಳ್ಳುವ ಹೊಣೆ ಬಿತ್ತು. ಕೆಲಸದಲ್ಲಿ ಲೋಕ ಮರೆತವರಂತೆ ತಲ್ಲೀನರಾಗಿರುತ್ತಿದ್ದ ತೇಜಸ್ವಿ, ಶ್ರೀರಾಮ ಹನ್ನೆರಡೂವರೆ ಒಂದು ಘಂಟೆ ಹೊತ್ತಿಗೆ, ನನಗೆ ಊಟಕ್ಕೆ ತಡವಾಗುತ್ತದೆ ಎಂದು, ಮಾಡುತ್ತಿದ್ದ ಕೆಲಸ ನಿಲ್ಲಿಸಿ ಮೊದಲೇ ತಂದಿಟ್ಟದ್ದೊ, ಸ್ಕೂಟರಿನಲ್ಲಿ ಹತ್ತಿರದ ಮೂಡಿಗೆರೆ ಪೇಟೆಗೆ ಹೋಗಿ ಆಗಲೇ ತಂದೊ, ಮಾಂಸದ ಬಿರಿಯಾನಿಯನ್ನು `ಮುಖ್ಯ ಐಟಂ’ ಆಗಿ ಮಾಡಿ ಅದ್ಯಾವ ಮಾಯೆಯಲ್ಲೊ, ಅದೆಂಥ ಕೌಶಲದಲ್ಲೊ ಒಂದೇ ಒಂದು ತಾಸು, ಹೆಚ್ಚೆಂದರೆ ಇನ್ನು ಹದಿನೈದು ನಿಮಿಷದೊಳಗೆ ದಡಬಡ ದಡಬಡ ಅಡುಗೆ ಸಿದ್ಧಪಡಿಸುತ್ತಿದ್ದರು. ಈ ಭೀಮ, ಈ ನಳ ಇಬ್ಬರೂ ಕೂಡಿ ಅಡುಗೆ ಮಾಡುವ ಪರಿ ನೋಡುವಂತಿತ್ತು. ಊಟದ ಮೇಜಿನ ಮೇಲೆ ಹಬೆ ಎದ್ದು ಹಬ್ಬುತ್ತಿರುವಂಥ ಬಿಸಿಬಿಸಿ ರುಚಿ ರುಚಿಯಾದ ರಾಶಿ ರಾಶಿ ಬಿರಿಯಾನಿ, ಮತ್ತೆ ಅದೂ ಇದೂ ವ್ಯಂಜನಗಳನ್ನು ಜೊತೆಗೂಡಿಸಿಕೊಂಡು, ಬೇರೆಲ್ಲವನ್ನು ಮರೆತು ಊಟ ಮಾಡುತ್ತಿದ್ದಾಗಿನ ಅಮಿತ ಉತ್ಸಾಹ, ಅಡುಗೆ ಮಾಡುತ್ತಿರುವಾಗಿನಿಂದ ಊಟ ಮುಗಿಸಿ ಪಾತ್ರೆ ಪಗಡಿ, ಒಲೆ ಸುತ್ತಮುತ್ತ ಸ್ವಚ್ಛಗೊಳಿಸುತ್ತಿದ್ದಾಗಲೆಲ್ಲ ತೇಜಸ್ವಿ ಮತ್ತು ಶ್ರೀರಾಮರ ನಡುವೆ ಜುಗಲ್ಬಂದಿ ಥರದಲ್ಲಿ ನಡೆಯುತ್ತಿದ್ದ ಸಂವಾದ ಸ್ವಾರಸ್ಯ, ಉಕ್ಕುತ್ತಿದ್ದ ಹಾಸ್ಯ, ನಗೆಮೊರೆತ - ಇವೆಲ್ಲ ಯಾವುದೋ ಗಂಭೀರ ನಾಟಕದ ನಡುವೆ ಬರುವ ಅಡುಗೆ-ಊಟದ ಪ್ರಹಸನ ರೂಪದ ದೃಶ್ಯವೊಂದನ್ನು ನಾವು ಮೂವರೂ ಸೇರಿ ಅಭಿನಯಿಸುತ್ತಿದ್ದೇವೇನೊ, ನನ್ನದು ಮುಖ್ಯ ಅತಿಥಿಯ ಪಾತ್ರವೇನೊ ಎಂಬಂತೆ ನನಗೆ ಅನಿಸುತ್ತಿತ್ತು.
 
೨೦೦೭ರ ಏಪ್ರಿಲ್ ೫ ರಂದು ಮಧ್ಯಾಹ್ನ ತೇಜಸ್ವಿ ಬಿರಿಯಾನಿ ಊಟ ತೃಪ್ತಿಯಾಗುವಂತೆ ಉಂಡು ಎದ್ದು ಕೈಬಾಯಿ ತೊಳೆಯಲು ಹೋದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಕ್ಷಣಾರ್ಧದಲ್ಲಿ ಇಲ್ಲವಾದರೆಂಬ ಆಘಾತಕರ ಸುದ್ದಿ ಬಂತು. ಸುದ್ದಿ ಕೇಳಿದಾಗ, ಉಕ್ಕಿ ಬಂದ ದುಃಖದ ಜೊತೆ ಜೊತೆಗೇ, ಅವರೊಂದಿಗಿನ ನನ್ನ ಬೇರೆ ನೂರು ನೆನಪುಗಳಿದ್ದರೂ ಎಲ್ಲಾ ನೆನಪುಗಳನ್ನೂ ಹಿಂದೆ ನೂಕಿ ನುಗ್ಗಿ ಧುತ್ತೆಂದು ನನ್ನ ಕಣ್ಣಮುಂದೆ ಬಂದು `ಶ್ರೀ ರಾಮಾಯಣ ದರ್ಶನಂ' ಹಸ್ತಪ್ರತಿಯನ್ನು ಮುದ್ರಣಕ್ಕೆ ಸಿದ್ಧಗೊಳಿಸುತ್ತಿದ್ದಾಗಿನ ಅನುಭವ; ಅದರಲ್ಲಿಯೂ ರಾಜೇಶ್ವರಿ ಮನೆಯಲ್ಲಿಲ್ಲದ ಆ ಕೊನೆಯ ಎರಡು ದಿನಗಳ ತೇಜಸ್ವಿ, ಶ್ರೀರಾಮರ ಬಿರಿಯಾನಿ ಅಡುಗೆ-ಊಟದ ಪ್ರಹಸನ ಪ್ರಸಂಗ, ಆಮೇಲೆ ನಾನು ಮೂಡಿಗೆರೆಗೆ ಹೋಗಿಯೇ ಇರಲಿಲ್ಲ.
 
ಸುದ್ದಿ ಕೇಳಿದ್ದೇ ತಡ ನನ್ನ ಮಗಳು ಕೀರ್ತಿ, ಅಳಿಯ ಮದನ ಮೂಡಿಗೆರೆಗೆ ಹೊರಡಲು ತೀರ್ಮಾನಿಸಿದರು. ತೇಜಸ್ವಿ ಅಂದರೆ ಅವರಿಗೂ ಎಲ್ಲಿಲ್ಲದ ಪ್ರೀತಿ, ಅಭಿಮಾನ, ಗೌರವ. ತೇಜಸ್ವಿಯವರಿಗೆ ತೀವ್ರ ಹೃದಯಾಘಾತ ಆಗಿದೆ ಎಂಬ ಸುದ್ದಿ ತಿಳಿಸಲು ಶ್ರೀರಾಮ್ ನಮ್ಮ ಮನೆಗೆ ಫೋನ್ ಮಾಡಿದಾಗ ನಾನೇ ಎತ್ತಿಕೊಂಡಿದ್ದೆ. ನನ್ನ ದನಿ ಕೇಳಿದವರೇ ನನ್ನ ಆರೋಗ್ಯ ಸ್ಥಿತಿಯ ಹಿನ್ನೆಲೆಯ ಕಾರಣದಿಂದಾಗಿ ವಿಷಯ ಏನೆಂದು ನನಗೆ ಸುಳಿವನ್ನೂ ಕೊಡದೆ, `ಸ್ವಲ್ಪ ಮೀರಾಗೆ ಕೊಡಿ' ಎಂದವರು ಮೀರಾಗೆ ವಿಷಯ ತಿಳಿಸಿ, ಅವರು ಮೂಡಿಗೆರೆಗೆ ಹೊರಟಿದ್ದಾಗಿ ಹೇಳಿ ನನಗೆ ನಿಧಾನವಾಗಿ ವಿಷಯ ತಿಳಿಸಿ ಎಂದಿದ್ದರಂತೆ. `ನೀವು ಬರ್ತೀರಾ' ಎಂದು ನನ್ನನ್ನು ಕೇಳುವುದಕ್ಕೆ ನನ್ನ ಆರೋಗ್ಯದ ಸ್ಥಿತಿ ಬಲ್ಲ ಕೀರ್ತಿ, ಮದನರಿಗೆ ಧೈರ್ಯ ಬರಲಿಲ್ಲ. ನನಗೆ ಏನಾದರಾಗಲಿ ನಾನೂ ಹೋಗಲೇ ಬೇಕು. ಹೋಗದೆ ಇದ್ದರೆ ನಾನಿರುವಷ್ಟು ಕಾಲ ನಾನು ಕೊರಗುವುದು ತಪ್ಪುವಂತಿಲ್ಲ ಎಂದು ನನಗೆ ತೀವ್ರವಾಗಿ ಅನಿಸಿ ನಾನೂ ಅವರ ಜೊತೆಗೆ ಮೂಡಿಗೆರೆಗೆ ಹೊರಟು ನಿಂತೆ. ನನ್ನ ಮೊಮ್ಮಗಳು ಚಕಿತಾಗೆ ಪರೀಕ್ಷೆ ನಡೆಯುತ್ತಿತ್ತು. ನನ್ನ ಹೆಂಡತಿ ಮೀರಾಗೆ ಹೊರಡಲಿಕ್ಕೆ ಸಾಧ್ಯವೇ ಆಗದಂಥ ಬೇರೊಂದು ಕಾರಣವೂ ಇತ್ತು. ಅವಳು ಅಸಹಾಯಕಳಾಗಿದ್ದಳು. ಅದರಿಂದಾಗಿ ತುಂಬಾ ಚಡಪಡಿಸುತ್ತಿದ್ದಳು. ದಾರಿಯುದ್ದಕ್ಕೂ ನೆನಪುಗಳು ಒಂದಾದ ಮೇಲೆ ಒಂದು, ಒಂದರ ಜೊತೆಗೇ ಇನ್ನೊಂದು ಗಿಜಿಗಿಜಿಗೊಂಡು ನುಗ್ಗಿ ನುಗ್ಗಿ ಬಂದು ನನ್ನನ್ನು ಒಳಗೇ ಗುದ್ದಿ ಗುದ್ದಿ ಹಣ್ಣು ಮಾಡುತ್ತಲೇ ಇದ್ದವು.
೧೯೫೪-೫೫ರಲ್ಲಿ ನಾನು, ತೇಜಸ್ವಿ ಯುವರಾಜ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಜ್ಯೂನಿಯರ್ ಇಂಟರ್ನಲ್ಲಿ ಓದುತ್ತಿದ್ದೆವು. ತೇಜಸ್ವಿ ವಿಜ್ಞಾನ ವಿಷಯಗಳ ವಿದ್ಯಾರ್ಥಿ, ನಾನು ಕಲಾ ವಿಭಾಗದ ವಿದ್ಯಾರ್ಥಿ. ತೇಜಸ್ವಿಯವರ ತಂದೆ ಪ್ರೊ.ಕೆ.ವಿ.ಪುಟ್ಟಪ್ಪನವರು (ಕುವೆಂಪು) ಪಕ್ಕದ ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿದ್ದರು. ಮಹಾಕವಿ ಕೀರ್ತಿಯ ಪ್ರಭಾವಳಿಯೂ ಇದ್ದ ಕುವೆಂಪು `ಕೀರ್ತಿಶನಿ ತೊಲಗಾಚೆ' ಎಂದು ಹೇಳುತ್ತಿದ್ದರೂ ಯಶೋಲಕ್ಷ್ಮಿಯ ವಲ್ಲಭ ಎಂಬಂತಾಗಿಬಿಟ್ಟಿದ್ದರು. ಅಂಥ ಅನ್ಯಾದೃಶ ವ್ಯಕ್ತಿತ್ವದ ಪ್ರಭಾವಳಿಯ ಮಹಿಮಾವಂತ ತಂದೆಯ ಮಗ ಎಂಬ ಕಾರಣದಿಂದಾಗಿ ತೇಜಸ್ವಿ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾರೆ ಎಂಬುದೇ ಒಂದು ವಿಶೇಷ ಸುದ್ದಿಯಾಗಿತ್ತು. ನನಗೆ ಅವರನ್ನು ನೋಡಬೇಕೆಂಬ ಆಸೆ ಇತ್ತು. ಆದರೆ ನೋಡುವ ಅವಕಾಶ ಕೂಡಿ ಬಂದಿರಲಿಲ್ಲ. ಅದಕ್ಕೆ ಕಾರಣವಿತ್ತು. ಸ್ಥಳಾವಕಾಶದ ಕೊರತೆಯಿಂದಾಗಿ ನಮಗೆ ತರಗತಿಗಳು ಎಲ್ಲೆಲ್ಲಿಯೊ - ಕ್ರಾಫರ್ಡ್ ಭವನದ ಕೊಠಡಿಗಳಲ್ಲಿ ಕೂಡ - ಯಾವ ಯಾವಾಗಲೊ ನಡೆಯುತ್ತಿದ್ದವು. ಆ ವಿವರ ಇಲ್ಲಿ ಬೇಡ.
 
೧೯೫೫ರ ಮಾರ್ಚ್ ತಿಂಗಳ ಕೊನೆಯವಾರದ ಒಂದು ದಿನ; ಜ್ಯೂನಿಯರ್ ಇಂಟರ್ ಪರೀಕ್ಷೆ ಅದೇ ದಿನ ಮುಗಿದಿದ್ದವು. ಅದು ಪಬ್ಲಿಕ್ ಪರೀಕ್ಷೆಯಾಗಿರಲಿಲ್ಲ; ಕಾಲೇಜು ಪರೀಕ್ಷೆಯಾಗಿತ್ತು. ಕೊನೆಯ ವಿಷಯದ ಪರೀಕ್ಷೆ ಆಗತಾನೆ ಮುಗಿದಿತ್ತು. ಕಾಲೇಜಿನನ ಆಡಳಿತ ಕಚೇರಿಯವರು `ಫೀಸ್' ವಿಷಯವಾಗಿಯೊ ಏನೊ ನಾನೂ ಸೇರಿದಂತೆ ಕೆಲವು ವಿದ್ಯಾರ್ಥಿಗಳು ಕಚೇರಿಯ ಮುಖ್ಯ ಗುಮಾಸ್ತೆಯನ್ನು ನೋಡಬೇಕೆಂದು ನೋಟೀಸ್ ಬೋರ್ಡ್ನಲ್ಲಿ ಪ್ರಕಟಸಿದ್ದರು. ನಾನು ಕಚೇರಿ ಕಡೆ ಹೋಗಲು ಕಾಲೇಜಿನ ಮಹಡಿ ಮೆಟ್ಟಿಲುಗಳನ್ನು ಹತ್ತಿ ಹತ್ತಿ ಹೋಗುತ್ತಿದ್ದೆ. ಮಹಡಿಯ ಮೇಲುಗಡೆಯಿಂದ ಇಬ್ಬರು ಹುಡುಗರು ಮೆಟ್ಟಿಲುಗಳನ್ನು ಇಳಿದು ಬರುತ್ತಿದ್ದರು. ಅವರಲ್ಲಿ ಒಬ್ಬ ಕೈಯಲ್ಲಿದ್ದ ಪ್ರಶ್ನೆ ಪತ್ರಿಕೆಯನ್ನು ಎರಡೂ ಕೈಗಳಿಂದ ಮಡಚಿ ಮಡಚಿ ಸುರಳಿ ಮಾಡಿ, ನಡುವೆ ಬಾಯಿಹಾಕಿ ಕಚ್ಚಿ ಕಚ್ಚಿ ತುಂಡು ಮಾಡಿ, ಹರಿದು `ಸೀಬಯ್ಯನ ಅಜ್ಜೀ ತಲೇ' ಎಂದು ಎರಡೂ ಕೈಗಳನ್ನು ಮೇಲೆತ್ತಿ ದೊಡ್ಡ ದನಿಯಲ್ಲಿ ಕೂಗುತ್ತಾ ಕೆಳಗಿನ ಮೆಟ್ಟಿಲುಗಳ ಮೇಲೆ ಎಸೆದುಬಿಟ್ಟು ಸಂಭ್ರಮಿಸಿದ.
 
ನನ್ನ ಜೊತೆಯಲ್ಲಿಯೇ ಇದ್ದ ನನ್ನ ಸಹಪಾಠಿ, ಅವರು ಕೆ.ವಿ.ಪುಟ್ಟಪ್ಪನವರ ಮಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಎಂದು ನನಗೆ ಕೇಳಿಸುವಂತೆ ಪಿಸುಗುಟ್ಟಿದ. `ಕೋಗಿಲೆಯ ಮರಿಯೆಂದು ಕೈತುಡುಕಿದರೆ ಕಾಗೆ ಮರಿ ಕೂಗಿದವೊಲಾಯ್ತು.' ನಾನು ಅವಾಕ್ಕಾದೆ. ನಾನು ನೋಡಬೇಕೆಂದು ಹಂಬಲಿಸುತ್ತಿದ್ದ ಪೂರ್ಣಚಂದ್ರ ತೇಜಸ್ವಿಯವರನ್ನು ಈ `ಹನುಮನ ಅವತಾರ'ದಲ್ಲಿ ನೋಡುವಂತಾಗಿತ್ತು. ಆಗ ನನಗಾದ ನಿರಾಶೆ ಅಷ್ಟಿಷ್ಟಲ್ಲ. ನಾನು ದಿಗ್ಭ್ರಾಂತ, ಜೊತೆಗೆ ಕುಪಿತ ಮನಃಸ್ಥಿತಿಯಲ್ಲಿ, ಹತ್ತಿ ನಿಂತಿದ್ದ ಮೆಟ್ಟಿಲ ಮೇಲೆಯೆ ತೇಜಸ್ವಿ ಕೆಳಗಿಳಿದು ಹೋಗುವವರೆಗೂ ನಿಂತೇ ಇದ್ದೆ. ನಾನು ಯಾರು ಎಂದು ಗೊತ್ತೇ ಇಲ್ಲದ ಅವರು ಒಮ್ಮೆ ನನ್ನತ್ತ ನೋಡಿದಂತೆ ಮಾಡಿ `ಕ್ಯಾರೇ' ಅನ್ನದೆ ಕೆಳಗಿಳಿದು ಹೊರಟು ಹೋದರು.

ಬೇರೆ ರಾಜ್ಯದಿಂದ ಬಂದವನು ಎಂಬ ಕಾರಣಕ್ಕೆ ಪ್ರಿನ್ಸಿಪಾಲ್ ಡಾ.ಎಲ್. ಸೀಬಯ್ಯನವರು ನನ್ನ ಪ್ರಥಮ ದರ್ಜೆಗೆ ಸ್ಟಾಂಡರ್ಡ್ ಇದೆ ಎಂಬುದೇನು ಖಾತ್ರಿ? ಇತ್ಯಾದಿ ಅಸಂಬದ್ಧ ಮಾತುಗಳನ್ನಾಡಿ ಸಲ್ಲದ ರೀತಿಯಲ್ಲಿ ನಡೆದುಕೊಂಡು ನನಗೆ ಸೀಟು ಕೊಡಲು ಅತಿಯಾಗಿ ಸತಾಯಿಸಿದ್ದರು. ನಾನು ಕಣ್ಣೀರಿಡುವಂತೆ ಮಾಡಿದ್ದರು. ಆ ವಿವರ ಇಲ್ಲಿ ಬೇಡ. ಆ ಹಿನ್ನೆಲೆಯಿಂದಾಗಿ ಡಾ.ಸೀಬಯ್ಯನವರನ್ನು ತೇಜಸ್ವಿ ಲಘುವಾಗಿ ಅಂದ ಬಗ್ಗೆ ವೈಯಕ್ತಿಕವಾಗಿ ನನಗೇನೂ ಬೇಸರವಾಗಿರಲಿಲ್ಲ. ನಾನು ಅವರ ಬಗ್ಗೆ ಹೇಳಲಾಗದ್ದನ್ನು ತೇಜಸ್ವಿ ಹೇಳಿದ್ದರು. ಡಾ.ಸೀಬಯ್ಯನವರ ಬಗ್ಗೆ ಹಾಗೆ ಹೇಳುವುದಕ್ಕೆ ತೇಜಸ್ವಿಗೆ ಬೇರೆ ಏನು ಕಾರಣವಿತ್ತೊ ಗೊತ್ತಿಲ್ಲ. ಆದರೂ ವಿದ್ಯಾರ್ಥಿಯಾದವನಿಗೆ ಅಂಥ ವರ್ತನೆ ಭೂಷಣವಾಗಿರಲಿಲ್ಲ. ಒಂದಲ್ಲ ಎರಡಲ್ಲ, ನಾನು ಪಟ್ಟ ಮತ್ತು ಪಡುತ್ತಿದ್ದ ಪಾಡುಗಳ ನಡುವೆಯೂ ನಾನು ಪದವೀಧರನಾಗಲೇಬೇಕೆಂಬ ಛಲದಿಂದ ಕಷ್ಟಪಟ್ಟು ಓದುತ್ತಿದ್ದ ನನಗೆ ದೊಡ್ಡವರ ಮಗ ತೇಜಸ್ವಿಯ ಈ ಹೊಣೆಗೇಡಿ ವರ್ತನೆ ಕಂಡು ಸಿಟ್ಟು ಬಂದಿತ್ತು. ತೇಜಸ್ವಿ ಆ ವರ್ಷದ ಪರೀಕ್ಷೆಯಲ್ಲಿ ಫೇಲ್ ಆದರು. ಮುಂದೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಆರ್ಟ್ಸ್ ಓದಿದರು. ಅದೇ ತೇಜಸ್ವಿ ಮುಂದೆ ನನ್ನ ಕಣ್ಣೆದುರೇ ನಾನು ನೋಡುತ್ತ ನೋಡುತ್ತ ಇರುವಂತೆಯೇ ಸಾಹಿತಿಯಾಗಿ, ಚಿಂತಕನಾಗಿ, ಸಾಂಸ್ಕೃತಿಕ ವ್ಯಕ್ತಿತ್ವವಾಗಿ, ವೈಯಕ್ತಿಕವಾಗಿ ನನ್ನ ಸ್ನೇಹದ ಶಿಖರವಾಗಿ ಬೆಳೆದ ಅದ್ಭುತಕ್ಕೆ ಬೆರಗಾಗುವಂತಾಯಿತು.

(ಮುಂದುವರೆಯುವುದು)
 

ಕೀರಂನಾ-ಒಂದು ನೆನಪು

Credit - Ramu M Lifeblob
 
ಆಗಸ್ಟ್ ೮ರಂದು ಅಗಲಿದ ಸಾಹಿತಿ, ವಿಮರ್ಶಕ, ಗುರು, ಪ್ರಾಧ್ಯಾಪಕ, ಗೆಳೆಯ ಕೀರಂನಾಗರಾಜ್ ಅವರಿಗೆ ಆಯಾಮ ಪರಿವಾರದ ಪ್ರೀತಿಯ ನಮನ.
 
ದಡ್ಡ ಮೇಷ್ಟ್ರುಗಳಿಗೆ ಕೀರಂನಾ ಕಂದರೆ ಭಯ. ಅವರ ಹತ್ತಿರ ಸುಳಿಯಲೂ ಹೆದರುತ್ತಿದ್ದರು. ಏನೇನೋ ಹೇಳಿ ಸಿಕ್ಕಿಸಿಕೊಂಡರೆ! ಅವರು ಕೀರಂನಾರನ್ನು ಕರೆಯುತ್ತಿದ್ದುದು ’ಸಾಹಿತ್ಯ ಲೋಕದ ನಕ್ಷತ್ರಿಕ’ ಎಂದು. ಸಾಹಿತ್ಯಾಸಕ್ತರಿಗೆ ಕೀರಂನಾ ಎಂದರೆ ಸಾಹಿತ್ಯ ಸುಗ್ಗಿ. ಅವರು ಕಾವ್ಯವನ್ನು perform ಮಾಡುತ್ತಿದ್ದರು. ’ಕುಣಿಸಿ ನಗನೇ ಕುಮಾರವ್ಯಾಸನುಳಿದವರಾ..." ಎನ್ನುವಂತೆ ಕನ್ನಡ ಕಾವ್ಯ ಅವರ ಬೆರಳ ತುದಿಯಲ್ಲಿತ್ತು. ಸಾಹಿತ್ಯ ಅಧ್ಯಾಪಕ ಮತ್ತು ಓದುಗರಿಗಿಂತ ಅವರು ತೀರಾ ಭಿನ್ನ. ಕಾವ್ಯವನ್ನು ಕೂಲಿಗಾಗಿ ಅವರು ಓದಿದವರಲ್ಲ. ಪಾಠ ಮಾಡುವ ಕಾರಣಕ್ಕೆ ಅದರ ಬೆನ್ನು ಬಿದ್ದವರಲ್ಲ. ಕಾವ್ಯ ಅವರಿಗೆ ಚೈತನ್ಯ, ಜೀವನ.
ಬೇಂದ್ರೆಯವರ ರೂಪಕ ಶಕ್ತಿಗೆ, ಸಂಗೀತ ಮಾಧುರ್ಯಕ್ಕೆ ಅವರು ಮನಸ್ಸು ಕೊಟ್ಟುಕೊಂಡಿದ್ದರು. ಅವರೊಂದು ತಿರುಗಾಡುವ ಕನ್ನಡ ಕಾವ್ಯ, ಕನ್ನಡ ಧ್ವನಿ, ಕನ್ನಡ ನಿಧಿ. ಅವರಿಗೆ ಕುಟುಂಬ ಅಂತ ಎಲ್ಲಿ ಇತ್ತು? ಕನ್ನಡ ಕುಟುಂಬಿ ಅವರು. ಅವರ ಸುತ್ತ ಒಂದು ದೊಡ್ಡ ಕಾವ್ಯ ಬಳಗ-ಅದು ಹತ್ತಾರು ಅಲ್ಲ, ನೂರಾರು. ಕನ್ನಡ ಕಾವ್ಯದ ಜೀವನಾಡಿ ಬಲ್ಲವರೆಲ್ಲ ಅವರ ಕುಟುಂಬದಲ್ಲಿದ್ದರು. ಯುವರಿಗೆ ಕೀರಂನಾ ಎಂದರೆ ಕಿಂದರಿ ಜೋಗಿ. ಕೀರಂನಾ ಪಿಎಚ್ ಡಿ ಪದವಿ ಪಡೆದಿರಲಿಲ್ಲ. ಆದರೆ ಅನೇಕ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ, ಪರೋಕ್ಷ ಮಾರ್ಗದರ್ಶಕರಾಗಿದ್ದರು. ಸಂಶೋಧನಾ ವಿದ್ಯಾರ್ಥಿಗಳು ಅವರನ್ನು ಹುಡುಕಿಕೊಂಡು ಬರುತ್ತಿದ್ದರು. ಅವರಿಂದ ಕೇಳಿ ಕಲಿಯುವ ತಿಳಿಯುವ ಮಂದಿಯೇ ಅನೇಕರಿದ್ದರು.
 
ಹೊಸ ಹೊಸ ವಿಷಯಗಳನ್ನು ವಿಚಾರ ಸಂಕಿರಣದಲ್ಲಿ ಅಳವಡಿಸುವುದೆಂದರೆ ಅಲ್ಲಿ ಕೀರಂನಾ ಇರುತ್ತಿದ್ದರು. ಅವರು ಅಷ್ಟು ಫ್ರೆಶ್ ಮತ್ತು ಅಷ್ಟು ಪ್ರತಿಭಾವಂತ. ಕೀರಂನಾ ಬರೆದಿದ್ದು ಕಡಿಮೆ, ಕನ್ನಡವನ್ನು ಬದುಕಿದ್ದೇ ಹೆಚ್ಚು. ಅವರು ಎಷ್ಟು ಕೃತಿಗಳನ್ನು ಬರೆದರು ಎಂಬುದು ಬೇಡ. ಅವರ ದೇಹದ ಕಣಕಣಗಳಲ್ಲಿ ಕಾವ್ಯವಿತ್ತು, ವಿದ್ವತ್ತು ಇತ್ತು. ಬಹುಮುಖೀ ಜ್ನಾನದ ಆಗರವಾಗಿದ್ದರು ಅವರು. ಈಗ ಕೀರಂನಾ ಅವರ ದೇಹ ಭಸ್ಮವಾಗಿದೆ. ಅವರು ಸೃಷ್ಟಿಸಿದ ಕಾವ್ಯ ಚಿಂತನ ಧಾರೆ ನಮ್ಮನ್ನೆಲ್ಲಾ ಯಾವತ್ತೂ ಚೈತನ್ಯದಾಯಕವಾಗಿಟ್ಟಿದೆ.


 

ಹಗಲು ವೇಷ-ಅಷ್ಟು ಕಲೆ, ಒಂದಷ್ಟು ಪಾಡು(ಎಸ್. ರಂಗಧರ)

"ಸಾಂಗ್ ಆಫ್ ಲಾವಿನೋ" ದಿಂದ (ಎಚ್. ಎಸ್.ಆರ್)
ಉತ್ತರಗಳಿಲ್ಲ...ಆದರೆ ಪ್ರಶ್ನೆಗಳು?(ಡಾ. ಬಂಜಗೆರೆ)
 ’ಕವಲು’: ಒಂದು ಅವಲೋಕನ(’ಬೆ ಸ ನಾ’)