ಉತ್ತರ ಕರ್ನಾಟಕದ ಗೀತಪ್ರಧಾನ ಮೇಳಗಳಲ್ಲಿ ಅತ್ಯಂತ ಜನಪ್ರಿಯವಾದುದು ಗೀಗೀ ಮೇಳ. ಗೀಗೀ ಎನ್ನುವಂಥದ್ದು ಲಾವಣಿ ಮೇಳದ ಒಂದು ಲಘು ಪ್ರಕಾರ ಮತ್ತು ಹಾಡಿನ ಪ್ರತಿಯೊಂದು ಸಾಲಿನ ಅಂತ್ಯದಲ್ಲೂ ಹಿಮ್ಮೇಳದವರು ಹಾಡಲು ಎತ್ತಿಕೊಳ್ಳುವ ಒಂದು ಪದಗುಂಪನ. ಗೀಗೀ ಮೇಳದಲ್ಲಿ ಸಾಮಾನ್ಯವಾಗಿ ಮೂವರು ಕಲಾವಿದರಿರುತ್ತಾರೆ. ಪುರುಷರು, ಮಹಿಳೆಯರು ಒಟ್ಟಾಗಿ ಮೇಳದಲ್ಲಿರುತ್ತಾರೆ. ಇಲ್ಲವೆ ಪುರುಷರೇ ಪ್ರತ್ಯೇಕವಾಗಿರುತ್ತಾರೆ. ಕಾಸೆಯುಟ್ಟ ಬಿಳಿಯ ಧೋತರ, ಬಿಳಿಯ ನಿಲುವಂಗಿ, ಅದರ ಮೇಲೊಂದು ತೋಳಿಲ್ಲದ ಅರೆ ಕೋಟು, ಸೊಂಟಕ್ಕೆ ನಡುಕಟ್ಟು, ಹೆಂಗಸಾದರೆ ದಿನನಿತ್ಯದ ಸೀರೆ ರವಿಕೆ. ಗಂಡಸರು ತಲೆಗೆ ರುಮಾಲು ಇಲ್ಲವೆ ಗಾಂಧಿ ಟೋಪಿ ಧರಿಸುವುದುಂಟು. ಇವು ಗೀಗೀ ಮೇಳದವರ ಸಾಮಾನ್ಯ ಉಡುಗೆ. ಮುಮ್ಮೇಳದ ಹಾಡುಗಾರ ಹಲಗೆ ಅಥವಾ ದಪ್ಪು ಬಾರಿಸುತ್ತಾ ಹಾಡಿದರೆ ಹಿಮ್ಮೇಳದವರು ಏಕತಾರಿ, ತುಂತುಣಿಗಳನ್ನು ಬಾರಿಸುತ್ತಾ ಹಾಡಿನ ಪ್ರತೀ ಸಾಲಿಗೊಮ್ಮೆ
`
ಗೀಯ ಗೀಯ ಗಾಗೀಯ ಗೀಯ' ಎಂದು ಹೇಳುತ್ತಿರುತ್ತಾರೆ.
ಗೀಗೀ ಮೇಳದ ಸೊಗಸಿರುವುದೇ ಈ ಅಂತ್ಯದ ಸೊಲ್ಲಿನಲ್ಲಿ. ಹಾಡಿನ ಮಧ್ಯೆ ಮುಮ್ಮೇಳದವರಿಗೆ ಸ್ಫೂರ್ತಿ ತುಂಬಲು ಹಿಮ್ಮೇಳದವರು `ಹಾಂ, ಹೌದಪ್ಪ, ಹೇಳಪ್ಪಾ, ಹೇಳವ್ವಾ' ಎಂದು ಪ್ರಚೋದಿಸುತ್ತಿರುತ್ತಾರೆ.
ಗೀಗೀ ಮೇಳದವರು ಹಾಡುಗಳ ಮೂಲಕ ಜನರಿಗೆ ಧರ್ಮ, ತತ್ವ ಮತ್ತು ನೀತಿಯನ್ನು ಬೋಧಿಸುತ್ತಾರೆ. ರಾಮಾಯಣ, ಮಹಾಭಾರತದಂತಹ ಪೌರಾಣಿಕ ಪ್ರಸಂಗಗಳಿಂದ ಮೊದಲುಗೊಂಡು ಕಿತ್ತೂರು ಚನ್ನಮ್ಮ, ಸಂಗೊಳ್ಳಿರಾಯಣ್ಣ, ನರಗುಂದದ ಬಾಬಾಸಾಹೇಬರನ್ನು ಕುರಿತಾದ ಚಾರಿತ್ರಿಕ ಸಂಗತಿಗಳನ್ನು ವೈವಿಧ್ಯಮಯ ಮಟ್ಟುಗಳಲ್ಲಿ ಹಾಡುತ್ತಾರೆ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೀಗೀ ಮೇಳವು ವಹಿಸಿದ ಪಾತ್ರ ಅದ್ಭುತವಾದುದು. ಗಾಂಧೀಜಿ, ನೇತಾಜಿಯವರ ಸಂದೇಶಗಳನ್ನು ಮನೆ ಮನೆಗಳಿಗೆ ತಲುಪಿಸಿದ ಸ್ವಾತಂತ್ರ್ಯ ಸಂದೇಶ ಪ್ರಸಾರಕರಾಗಿದ್ದರು. ಸಾಕ್ಷರತೆ, ವರದಕ್ಷಿಣೆ ಪಿಡುಗು, ಕುಟುಂಬ ಯೋಜನೆಯಂತಹ ಸಮಕಾಲೀನ ಸಂಗತಿಗಳನ್ನು ಸ್ವಾರಸ್ಯಕರವಾದ ರೀತಿಯಲ್ಲಿ ಹಾಡು ಕಟ್ಟಿ ಹೇಳುವ ಆಶು ಕವಿಗಳು. ಪ್ರೇಕ್ಷಕರಿಗೆ ಬೇಸರ ಉಂಟಾಗದಂತೆ ಹಾಸ್ಯದ ಚುಟುಕುಗಳನ್ನು ಸೇರಿಸಿ ಹಾಡುತ್ತಾರೆ.
ಗೀಗೀ ಮೇಳಗಳ ಸಾಹಿತ್ಯರೂಪ ವಿಸ್ತಾರವಾದುದು. ನೀತಿ, ಶೃಂಗಾರ, ತತ್ವಗಳನ್ನು ಸಾರುವಂತಹ ಕಿರು ರಚನೆಗಳಲ್ಲದೆ, ಇಡೀ ರಾತ್ರಿ ಹಾಡಿದರೂ ಮುಗಿಯದ ಸವಾಲ್-ಜವಾಬ್ ಲಾವಣಿ, ಕಥನ ಲಾವಣಿಗಳ ಸರಕು ಗೀಗೀ ಮೇಳದವರಲ್ಲಿದೆ. ಇವರಲ್ಲಿ ಉತ್ತಮ ಹಾಡುಗಾರಿಕೆಯ ಜತೆಗೆ ಸೊಗಸಾದ ಲಾಲಿತ್ಯಪೂರ್ಣವಾದ ಕುಣಿತವೂ ಇದೆ. ಗೆಜ್ಜೆ ಕಟ್ಟಿದ ಕಾಲುಗಳನ್ನು ಅತ್ತಿಂದಿತ್ತ ಆಡಿಸುತ್ತಾ, ರಂಗದ ಆ ಬದಿಯಿಂದ ಈ ಬದಿಗೆ ಲಘುವಾಗಿ ನೆಗೆಯುವ ಗಮ್ಮತ್ತು ತೋರುತ್ತಾರೆ. ನಿಂತಲ್ಲೇ ಸುತ್ತುಗುಣಿಯುತ್ತಾರೆ. ಕತ್ತು ಹೊರಳಿಸುತ್ತಾ ಮಾತು ಮಾತಿಗೆ ಅಥವಾ ಪಲ್ಲವಿಗೊಂದು ಸಾರಿ `ಚ್ಯಾಲಿ'ನ ಏರಿಳಿತಗಳಿಗೆ ಅನುಗುಣವಾಗಿ ಕೈ ಬೀಸುವುದನ್ನು ನೋಡುವುದು ಚಂದ.
ಗೀಗೀ ಮೇಳದಲ್ಲಿ ಕಲ್ಗಿ-ತುರಾ ಎಂಬ ಅತ್ಯುತ್ತಮ ಪ್ರಕಾರವಿದೆ. ಇದಕ್ಕೆ ಹರದೇಶಿ-ನಾಗೇಶಿ, ಸವಾಲ್-ಜವಾಬ್ ಲಾವಣಿ ಎಂದೂ ಕರೆಯುತ್ತಾರೆ. ಒಂದು ತಂಡ ಗಂಡಿನ ಮೇಲ್ಮೆಯನ್ನು ಎತ್ತಿ ಹಿಡಿದು ಹಾಡಿದರೆ, ಮತ್ತೊಂದು ತಂಡ ಗಂಡಿನ ದೌರ್ಬಲ್ಯಗಳನ್ನು ಪಟ್ಟಿ ಮಾಡುತ್ತಾ ಹೆಣ್ಣಿನ ಮೇಲ್ಮೆಯನ್ನು ಎತ್ತಿಹಿಡಿದು ಹಾಡುತ್ತಾದೆ. ಈ ಮೇಳಗಳಲ್ಲಿ ಮುಂದೆ ನಿಂತು ಹಾಡುವವರು ಮಹಿಳೆಯರು. ಕಲ್ಗಿ-ತುರಾ ಮೇಳದಲ್ಲಿ ಪ್ರೇಕ್ಷಕ ಗುಂಪಿನಲ್ಲಿ ಹೆಂಗಸರು ಗಂಡಸರೆಲ್ಲರೂ ಪಾಲ್ಗೊಳ್ಳುತ್ತಾರೆ. ತಂತಮ್ಮ ಪಕ್ಷಗಳ ಮೆಚ್ಚುಗೆ ಬಂದಾಗ ಕೈ ಎತ್ತಿ ಅಭಿಮಾನದಿಂದ ಗಾಯಕರನ್ನು ಪ್ರಶಂಸಿಸುತ್ತಾರೆ.
ಹಬ್ಬ ಹರಿದಿನಗಳಲ್ಲಿ, ಜಾತ್ರೆ-ಉತ್ಸವಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಗೀಗೀ ಮೇಳಗಳು ಪ್ರದರ್ಶನಗೊಳ್ಳುತ್ತವೆ. ವೃತ್ತಿಗಾಯನ ಕಲೆಯಾಗಿ ಉಳಿದಿರುವ ಗೀಗೀ ಮೇಳವು ಇಂದಿಗೂ ತನ್ನ ವೈಶಿಷ್ಟ್ಯ ಮತ್ತು ಜನಪ್ರಿಯತೆಗಳನ್ನು ಉಳಿಸಿಕೊಂಡು ಬಂದಿದೆ.
ಪುಂಗಿರಂಗರೆಂಬ ನಿರೂಪಕರು ಸ್ವಾಮೀಜಿಗಳು ಪರಸ್ಪರ ಕಿತ್ತಾಡುವುದನ್ನು ಕಂಡು ಪುಂಗಿರಂಗರ ತಲೆ ಕೆಡುತ್ತಿತ್ತು. ತಾನಾಗಿ ಕ್ರಾಂತಿಕಾರಿ ಸ್ವಾಮಿಯನ್ನು ಈ ಚರ್ಚೆಗೆ ಕರೆದಿರದಿದ್ದರೂ ಅವರು ತಮ್ಮ ಶಿಷ್ಯರೊಂದಿಗೆ ಬಂದಿದ್ದು ಅವರಿಗೆ ನುಂಗಲಾರದ ತುತ್ತಾಗಿತ್ತು. ಬೋಳುಮಠದ ಬೋಳುವಾರ್ತ ಸ್ವಾಮಿ ಹಾಗೂ ಅವರ ಅನುಚರರಾಗಿ ಬಂದಿದ್ದ ಕಮಂಡಲೀಸ್ವಾಮಿ, ವಿಧವಿಧದ ಬಣ್ಣದ ಪಟ್ಟೆಗಳನ್ನು ಹಣೆ, ಭುಜ ಹಾಗು ದೇಹದ ತೆರವಿದ್ದ ಜಾಗದ ಮೇಲೆಲ್ಲಾ ಬಳಿದುಕೊಂಡಿದ್ದ ಪಟ್ಟೆಧಾರೀಮರಿಸ್ವಾಮಿ ಇನ್ನಿತರ ಚಿಲ್ಲರೆ ಸ್ವಾಮಿಗಳನ್ನು ತಾನು ಹೇಗಾದರೂ ಸಮಾಧಾನ ಪಡಿಸಬಹುದಾದರೂ ಈ ಕ್ರಾಂತಿಕಾರಿ ಸ್ವಾಮಿ ಹಾಗೂ ಅವರ ಶಿಷ್ಯರುಗಳನ್ನು ಸಮಾಧಾನ ಪಡಿಸುವುದು ದೊಡ್ಡ ಪ್ರಾಬ್ಲಮ್ ಎಂದುಕೊಂಡ ಪುಂಗಿರಂಗರಿಗೆ ತನ್ನ ಕಚೇರಿಯ ಕೆಲವು ಸಹ ಸಿಬ್ಬಂದಿಗಳೇ ಈ ಕಾರ್ಯಕ್ರಮವನ್ನು ಹಾಳು ಮಾಡಬೇಕೆಂಬ ಕಾರಣದಿಂದ ಕ್ರಾಂತಿಕಾರಿ ಸ್ವಾಮಿಯ ಶಿಷ್ಯರಿಗೆ ತಿಳಿಸಿರಬಹುದೆಂದುಕೊಂಡರು. ಈ ಕಾರ್ಯಕ್ರಮದ ಮಾಹಿತಿಯನ್ನು ಯಾರು ಲೀಕ್ ಮಾಡಿರಬಹುದೆಂಬುದರ ಬಗ್ಗೆ ಆತ ಯೋಚಿಸಲಾರಂಬಿಸಿದ್ದರು. ಅಷ್ಟರಲ್ಲಿ ಬ್ರೇಕ್ ನ ಸಮಯ ಮುಗಿದಿದ್ದರಿಂದ ಬೋಳುಮಠದ ಬೋಳುವಾರ್ತಸ್ವಾಮಿಗಳು ತಮ್ಮ ಜಲಬಾಧೆಯನ್ನು ತೀರಿಸಿಕೊಂಡು ಬಂದು ಕುಳಿತುಕೊಂಡರು.
ಬೋಳುವಾರ್ತ ಸ್ವಾಮಿಯನ್ನು ಮುಜುಗರಕ್ಕೀಡು ಮಾಡದಂತೆ ಕಾರ್ಯಕ್ರಮವನ್ನು ಮುಂದುವರೆಸಬೇಕೆಂದು ನಿರ್ಧರಿಸಿದ ಪುಂಗಿರಂಗರು ’ಪ್ರಿಯ ವೀಕ್ಷಕರೇ ಮತ್ತೊಮ್ಮೆ ಕಾರ್ಯಕ್ರಮಕ್ಕೆ ತಮಗೆ ಸ್ವಾಗತ’ ಎಂದು ಕ್ರಾಂತಿಕಾರಿ ಸ್ವಾಮಿಗಳತ್ತ ತಿರುಗಿ ’ ಸ್ವಾಮಿಗಳೇ ನೀವು ಸಮಾಜದಲ್ಲಿ ಬದಲಾವಣೆ ತರಬೇಕೆಂದು ಬಯಸಿದವರು. ನಿಮ್ಮ ಹಲವಾರು ಕ್ರಾಂತಿಕಾರಿ ವಿಷಯಗಳು ಸಮಾಜದಲ್ಲಿ ಜಾಗೃತಿಯನ್ನು ಉಂಟು ಮಾಡಿವೆ. ಈಗ ನೀವು ಶಾಸನ ಸಭೆಯಲ್ಲಿ ಸಚಿವರುಗಳು ನಡೆದುಕೊಂಡ ರೀತಿಯ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸುತ್ತೀರಿ’ ಎಂದರು.
ಪುಂಗಿರಂಗರು ಕ್ರಾಂತಿಕಾರಿ ಸ್ವಾಮಿಯನ್ನು ಹೊಗಳಿದ್ದನ್ನು ಕೇಳಿದ ಬೋಳುವಾರ್ತ ಸ್ವಾಮಿಯವರಿಗೆ ಉರಿದು ಹೋಯಿತು. ಎಲಾ ಇವನ!! ನನ್ನ ಬಳಿ ಬೇಕಾದಷ್ಟು ಅನುಕೂಲವನ್ನು ಪಡೆದುಕೊಂಡು ಆ ಸ್ವಾಮಿಯನ್ನು ಸಮಾಜದಲ್ಲಿ ಬದಲಾವಣೆ ತರುವವರೆಂದು ಹೇಳುತ್ತಿದ್ದಾನಲ್ಲಾ, ಇವನೇನಾದರು ಆ ಕ್ರಾಂತಿಕಾರಿ ಸ್ವಾಮಿಯಿಂದಲೂ ಡೀಲು ಮಾಡಿಕೊಂಡಿರಬಹುದೇ ಎಂದುಕೊಂಡವರು ಮೊದಲೇ ಪುರಂದರದಾಸನಾಗಿರುವ ಕ್ರಾಂತಿಕಾರಿ ಸ್ವಾಮಿ ಇವನಿಗಿನ್ನೇನು ತಾನೆ ಕೊಡುತ್ತಾನೆಂಬ ಯೋಚನೆಯಲ್ಲಿ ತಲೆಕೆಡಿಸಿಕೊಳ್ಳಲು ಶುರುಮಾಡಿದರು.
ತನ್ನ ಶಿಷ್ಯರನ್ನೊಮ್ಮೆ ದಿಟ್ಟಿಸಿದ ಕ್ರಾಂತಿಕಾರಿ ಸ್ವಾಮಿ ತನ್ನ ಗಡ್ಡವನ್ನೊಮ್ಮೆ ಎಡಗೈನಿಂದ ನೇವರಿಸಿಕೊಂಡು ’ನೋಡೀ ಇವರೇ, ನಮ್ಮ ಜನ ಪ್ರತಿನಿಧಿಗಳೆನಿಸಿಕೊಂಡವರು ಜವಾಬ್ದಾರಿಯಿಂದ ವರ್ತಿಸಬೇಕಿದೆ. ಇಂದು ಹಣದ ಬಲದಿಂದಲೇ ಇಂಥವರು ಆಯ್ಕೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂಥ ನಾಯಕರುಗಳನ್ನು ಜನತೆಯೇ ಮುಂದಿನ ಚುನಾವಣೆಯಲ್ಲಿ ವಿಚಾರಿಸಿಕೊಳ್ಳಬೇಕಿದೆ. ಇವರು ಯಾವ ನೈತಿಕತೆಯಿಟ್ಟುಕೊಂಡು ಜನಪ್ರತಿನಿಧಿಗಳಾಗಿ ಮುಂದುವರೆಯುತ್ತಾರೆ?? ಇಂಥವರನ್ನು ನಮ್ಮ ಜಾತಿಯವರೆಂಬ ಕಾರಣಕ್ಕೆ ಕೆಲವು ಜಗದ್ಗುರುಗಳು ಬೆಂಬಲಿಸುತ್ತಿರುವುದು ಖಂಡನೀಯ. ಸಮಾಜದಲ್ಲಿ ಬದಲಾವಣೆ ಆಗಬೇಕಾದರೆ ಮೊದಲು ಈ ರಾಜಕಾರಣಿಗಳನ್ನೂ ಇವರನ್ನು ಬೆಂಬಲಿಸುವವರನ್ನೂ ಮುಖ ಮುಸುಡಿ ನೋಡದೆ, ಬಂಧಿಸಿ ಜೈಲಿಗಟ್ಟಬೇಕು. ಮೋಜು ಮಾಡಬೇಕೆಂದರೆ ಇವರಿಗೆ ಶಾಸನ ಸಭೆಯೇ ಬೇಕಾಗಿತ್ತಾ?!! ನಮ್ಮ ನಾಡಿನ ಜನತೆ ಬರದಿಂದ ಬಸವಳಿದಿದ್ದಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಈ ಜನ ಪ್ರತಿನಿಧಿಗಳು ತಾವು ಏರ್ ಕಂಡೀಶನ್ ಕೊಠಡಿಯಲ್ಲಿ ಕೂತು ಮೋಜು ಮಾಡುತ್ತಾರೆಂದರೆ ಇವರನ್ನೆಲ್ಲಾ ಎಳೆದುಕೊಂಡು ಹೋಗಿ ನಮ್ಮ ಬಯಲುಸೀಮೆಯ ಬಿರುಬಿಸಿಲಿನಲ್ಲಿ ಕಟ್ಟಿಹಾಕಿ ಒಣಗಿಸಬೇಕು. ಆಗಲೇ ಇವರಿಗೆ ಬುದ್ದಿ ಬರುವುದು...’ ಎಂದು ಬಿಸಿಯಾಗಿ ಮಾತಾಡುತ್ತಿರುವಾಗ ಮಧ್ಯೆ ಪ್ರವೇಶಿಸಿದ ಪುಂಗಿರಂಗರು ’ಈ ಬಗ್ಗೆ ನಮ್ಮ ಬೋಳುವಾರ್ತ ಸ್ವಾಮಿಗಳು ಏನೆನ್ನುತ್ತಾರೆ ಕೇಳೋಣ ಬನ್ನಿ’ ಎಂದು ಬೋಳುವಾರ್ತ ಸ್ವಾಮಿಗಳತ್ತ ತಿರುಗಿದರು.
ಕ್ರಾಂತಿಕಾರಿ ನಮಗೆ ಹೆಚ್ಚು ಬೈಯದೆ ರಾಜಕಾರಣಿಗಳನ್ನಷ್ಟೇ ತರಾಟೆಗೆ ತೆಗೆದುಕೊಂಡಿದ್ದರಿಂದ ತುಸು ಸಮಾಧಾನರಾದ ಬೋಳುವಾರ್ತ ಸ್ವಾಮಿಗಳು ’ನೋಡೀ, ನಮ್ಮ ಭಕ್ತರು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ. ರಾಜಕಾರಣಿಗಳಲ್ಲೂ ನಮ್ಮ ಭಕ್ತರಾಗಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಏನೋ ಸಣ್ಣ ಅಚಾತುರ್ಯ ಮಾಡಿದ್ದರೆ. ಅದನ್ನೇ ದೊಡ್ಡದಾಗಿ ಮಾಡಬಾರದು. ಯಾವ ಮನುಷ್ಯ ತಪ್ಪು ಮಾಡುವುದಿಲ್ಲ ಹೇಳಿ?? ಈ ಕಾರಣವಿಟ್ಟುಕೊಂಡು ನಮ್ಮ ಸಚಿವರುಗಳ ರಾಜಿನಾಮೆಗೆ ಒತ್ತಾಯಿಸಬಾರದು. ಈಗಾಗಲೇ ನಮ್ಮ ಜನಾಂಗದ ಹಲವಾರು ದೊಡ್ಡ ದೊಡ್ಡ ತಲೆಗಳೇ ಅಧಿಕಾರದಿಂದ ಉರುಳಿವೆ. ಯಾವತ್ತೂ ಒಂದು ಸಮಾಜದಲ್ಲಿ ಇಂಥವುಗಳೆಲ್ಲಾ ನಡೆಯುತ್ತಿರುತ್ತವೆ. ಅದನ್ನೆಲ್ಲಾ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದು. ನೋಡಿ...ನಮ್ಮಂಥ ಸ್ವಾಮೀಜಿಗಳೊಬ್ಬರು ಮಠದಲ್ಲಿಯೇ ರಾಸಲೀಲೆ ನಡೆಸಿದ್ದರ ಬಗ್ಗೆ ನೀವುಗಳೇ ಟಿವಿಯಲ್ಲಿ ದಿನಗಟ್ಟಲೇ ತೋರಿಸಲಿಲ್ಲವೇ?! ಈಗಲೂ ಆ ಸ್ವಾಮಿಗಳು ಹೆಣ್ಣುಮಕ್ಕಳ ದಂಡನ್ನೇ ಕಟ್ಟಿಕೊಂಡು ದಿನನಿತ್ಯವೂ ಕುಣಿಯುತ್ತಿಲ್ಲವೇ...ಇವೆಲ್ಲಾ ಒಂದುಬಗೆಯಲ್ಲಿ ಸಹಜವಾದುದು’ ಎಂದು ಬ್ಯಾಕಪ್ ಗಾಗಿ ತಮ್ಮ ಶಿಷ್ಯ ಸ್ವಾಮಿಗಳತ್ತ ನೋಡಿದರು.
ಅವರು ಹಾಗೆ ತಮ್ಮತ್ತ ನೋಡಿದ ಕೂಡಲೇ ಪುಳಕಿತರಾದ ಶಿಷ್ಯ ಸ್ವಾಮಿಗಳು ತಮಗೇ ಮಾತಾಡಲು ಅನುಮತಿಯಿತ್ತರೆಂದು ತಿಳಿದುಕೊಂಡರು. ನಾನಾ ವಿಧದ ಬಣ್ಣದ ಪಟ್ಟೆಗಳನ್ನು ಮೈಮೇಲೆಲ್ಲಾ ಬಳಿದುಕೊಂಡಿದ್ದ ಪಟ್ಟೆಸ್ವಾಮಿಗಳು ಮೈಮೇಲೆ ಆವೇಶ ಬಂದವರಂತೆ ಸಡನ್ನಾಗಿ ’ನಿಜ ಮಹಾಸ್ವಾಮಿ, ನೀವು ಹೇಳಿದ್ದು ಹಂಡ್ರೆಡ್ ಪರ್ಸೆಂಟ್ ನಿಜ. ಇವತ್ತು ನಾವು ಸ್ವಾಮಿಗಳು ಒಗ್ಗಟ್ಟಾಗಬೇಕಿದೆ. ನಮ್ಮ ಮಠಕ್ಕೂ ಹೆಣ್ಣು ಮಕ್ಕಳು ಬರುತ್ತಾರೆ. ನಾವೇನು ಅವರನ್ನು ಬರಬೇಡಿರೆಂದು ಹೇಳಕ್ಕಾಗುತ್ತಾ?? ಏನೋ ಸಮಸ್ಯೆ ಹೇಳಿಕೊಂಡು ಬರುತ್ತಾರೆ. ನಮ್ಮ ಮಠಕ್ಕೆ ಮಕ್ಕಳಾಗಲಿಲ್ಲವೆಂದು ಬಂದವರಿಗೆಲ್ಲಾ ನಾವು ನಮ್ಮ ಅನುಗ್ರಹದಿಂದ ಮಕ್ಕಳನ್ನು ಕರುಣಿಸಿದ್ದೇವೆ. ಈಗಲೂ ಕರುಣಿಸುತ್ತಿದ್ದೇವೆ. ಅದು ತಪ್ಪಾ?? ಅದು ಮನುಷ್ಯಕುಲಕ್ಕೆ ನಾವು ಮಾಡುತ್ತಿರುವ ಮಹೋಪಕಾರ. ನಾವೆಲ್ಲಾ ಈಗ ಅರ್ಜೆಂಟಾಗಿ ಒಗ್ಗಟ್ಟಾಗಬೇಕಿದೆ. ನಮ್ಮ ಬಗ್ಗೆ ಬರೀ ಅಪಪ್ರಚಾರವನ್ನೇ ಮಾಡಲಾಗುತ್ತಿದೆ. ನಮ್ಮ ಶಿಷ್ಯರಾದವರು ಬ್ಲೂ ಫಿಲಂ ನೋಡಿರುವುದರಲ್ಲೂ, ಆ ವಿಷಯವನ್ನು ದೊಡ್ಡದಾಗಿ ಮಾಡಿರುವುಲ್ಲೂ ಯಾರದೋ ಷಡ್ಯಂತರವಿದೆ. ಇದಕ್ಕೆಲ್ಲಾ ನಾವು ಹೆದರಬಾರದು. ನಮ್ಮ ರಾಜಕಾರಣಿಗಳನ್ನು ರಕ್ಷಿಸಿಕೊಳ್ಳಬೇಕಿರುವುದು ನಮ್ಮ ಕರ್ತವ್ಯ...’ ಎಂದೆಲ್ಲಾ ತಾರಕ ಸ್ವರದಲ್ಲಿ ಕೂಗತೊಡಗಿದ್ದನ್ನು ಕೇಳಿ ಕ್ರಾಂತಿಕಾರಿ ಸ್ವಾಮಿಗಳು ಸಿಟ್ಟಿನಿಂದ ಪಟ್ಟೆಸ್ವಾಮಿಯ ಎದುರಿಗಿದ್ದ ಮೈಕನ್ನು ಕಿತ್ತುಕೊಂಡರು.
ಹಾಗೆ ಕ್ರಾಂತಿಕಾರಿ ಸ್ವಾಮಿಗಳು ಸಿಟ್ಟಾದ ಕೂಡಲೇ ಕಾರ್ಯಕ್ರಮದ ಸಭಿಕರಲ್ಲಿ ಸೇರಿದ್ದ ಅವರ ಕ್ರಾಂತಿಕಾರಿ ಶಿಷ್ಯರೂ ಎದ್ದು ನಿಂತು ಕೂಗಾಡತೊಡಗಿದರು. ಅದನ್ನು ಕಂಡು ಗಾಬರಿಯಾದ ಪಟ್ಟೆಸ್ವಾಮಿ ಸುಮ್ಮನೆ ಕೂತರು. ಪಟ್ಟೆಸ್ವಾಮಿಗಳನ್ನು ಸುಟ್ಟುಬಿಡುವಂತೆ ದಿಟ್ಟಿಸಿದ ಕ್ರಾತಿಕಾರಿ ಸ್ವಾಮಿ ’ಇಂಥಾ ಸ್ವಾಮಿಗಳಿರುವುದರಿಂದಲೇ ಸಮಾಜದಲ್ಲಿ ಅನೈತಿಕತೆ ಹೆಚ್ಚಾಗಿರುವುದು ಕಣ್ರೀ, ಇವರು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಅನುಗ್ರಹಿಸುವುದಾಗಿ ನಾಚಿಕೆಯಿಲ್ಲದೆ ಹೇಳಿಕೊಳ್ಳುತ್ತಾರಲ್ಲಾ, ಮಾನ ಮರ್ಯಾದೆ ಇರುವವರು ಹೇಳುವ ಮಾತಾ ಇದು. ಇಂಥಾ ಸ್ವಾಮೀಜಿಗಳನ್ನು ಹಿಡಿದುಕೊಂಡು ಬಂದು ಬೀದಿ ನಾಯಿಗಳ ನರ ಕಟ್ಟು ಮಾಡುವಂತೆ ಕಟ್ಟುಮಾಡಿ ಬಿಸಾಕಬೇಕು. ತಪ್ಪು ಯಾವ ಜಾತಿಯ ರಾಜಕಾರಣಿಯೇ ಮಾಡಿರಲಿ ಅದು ತಪ್ಪೇ. ಅದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಇವರು ಜಾತಿ, ಜನಾಂಗ ಅಂಥಾ ಒದರುತ್ತಾರಲ್ಲ. ನಿಜಕ್ಕೂ ಇಂಥವರ ನರಕಟ್ಟು ಮಾಡಿದರೇ ನಮ್ಮಂತವರಿಗೆ ಸಮಾಧಾನವಾಗುವುದು.’ ಎಂದು ಹೇಳುತ್ತಿರುವಾಗಲೇ ಅವರ ಶಿಷ್ಯರೆಲ್ಲಾ ಮೇಲೆದ್ದು ಪಟ್ಟೇಸ್ವಾಮಿಯತ್ತ ನುಗ್ಗಿಬಿಟ್ಟರು.
ಕ್ರಾಂತಿಕಾರಿ ಸ್ವಾಮಿಯ ಶಿಷ್ಯರು ಹಾಗೆ ನುಗ್ಗಿದ್ದನ್ನು ಕಂಡ ಪಟ್ಟೆಸ್ವಾಮಿಗಳು ಇವರು ಏಣು ಮಾಡಲೂ ಹೇಸರು ಎಂಬ ಭಯದಲ್ಲಿ ತಮ್ಮನ್ನು ರಕ್ಷಿಸುವಂತೆ ಬೋಳುವಾರ್ತ ಜಗದ್ಗುರುಗಳತ್ತ ಓಡಿದರು. ಈ ದಡ್ಡ ಎಲ್ಲವನ್ನೂ ಬಹಿರಂಗವಾಗಿ ಮಾತಾಡಿ ಎಲ್ಲರನ್ನೂ ಸಂಕಷ್ಟಕ್ಕೆ ಸಿಲುಕಿಸಿದನಲ್ಲಾ ಎಂದು ಬೋಳುವಾರ್ತ ಸ್ವಾಮಿಗಳು ಭಯಂಕರ ಸಿಟ್ಟಾದರು.
ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರವಾಗುತ್ತಿದೆ ಎಂದೇ ಹುರಿಗೊಂಡ ಕ್ರಾಂತಿಕಾರಿಸ್ವಾಮಿಯ ಶಿಷ್ಯರು ತಮ್ಮತ್ತ ನುಗ್ಗಿ ಬರಲು ಉತ್ಸುಕರಾಗಿರುವುದನ್ನು ನೋಡಿದರೆ ಅವರುಗಳು ನರ ಕಟ್ಟುಮಾಡುವುದು ಶತಸಿದ್ದವೆಂದುಕೊಂಡ ಬೋಳುವಾರ್ತ ಸ್ವಾಮಿಗಳು ತಮ್ಮನ್ನು ಮೊದಲು ರಕ್ಷಿಸಿಕೊಳ್ಳಲು ತೀರ್ಮಾನಿಸಿ ತೀರ್ವ ಜಲಭಾದೆಯಾಗಿದೆಯೆಂದು ಟಾಯ್ಲೆಟ್ ನತ್ತ ದೌಡಾಯಿಸಿದರು. ಅವರು ಹಾಗೆ ಹೋದುದನ್ನು ಕಂಡ ಕಮಂಡಲೀಸ್ವಾಮಿ ಬೋಳುವಾರ್ತ ಸ್ವಾಮಿಗಳು ನಿರ್ಗಮಿಸಿದ ದಿಕ್ಕಿನತ್ತಲೇ ತಾವೂ ಓಡಿದರು.
ಉಳಿದವರೊಬ್ಬರೇ ಸನ್ಮಾನ್ಯ ಪಟ್ಟೆ ಸ್ವಾಮಿಗಳು! ಸಿಕ್ಕಿದ್ದೇ ಸೀರುಂಡೆಯೆಂಬಂತೆ ಅವರನ್ನೇ ಅಮರಿಕೊಂಡ ಕ್ರಾಂತಿಕಾರಿಸ್ವಾಮಿಗಳ ಶಿಷ್ಯರು ಅವರ ಅಂಗಿಗೇ ಕೈ ಹಾಕಿದ್ದರು.
ತನ್ನ ಮುಂದೆ ಆಗುತ್ತಿರುವುದನ್ನು ಚಿತ್ರಿಸುವುದೋ ಬಿಟ್ಟುಬಿಡುವಿದೋ ಗೊತ್ತಾಗದೇ ಭಯಂಕರ ಕನ್ಫ್ಯೂಶನ್ ನಲ್ಲಿದ್ದ ಕ್ಯಾಮೆರಾಮ್ಯಾನ್ ಮುರುಗನ್ ’ನೀನೇ ಡಿಸೈಡ್ ಮಾಡಿಕೋ ಮುರುಗಾ’ ಅಂತ ಮುರುಗನ ಮೇಲೆ ಭಾರಹಾಕಿ, ಕ್ಯಾಮರಾ ಆಫ್ ಮಾಡದೇ ಗೊಂದಲದಲ್ಲಿ ಪುಂಗಿರಂಗರತ್ತ ನೋಡುತ್ತಿದ್ದರು.
ಬ್ರೇಕ್! ಬ್ರೇಕ್!!! ಈಗೊಂದು ಬ್ರೇಕ್ ರೀ...ಕೂಡಲೇ ಬ್ರೇಕ್! ಎಂದು ಪುಂಗಿರಂಗರು ಕೂಗಿದ್ದು ಪಟ್ಟೆಸ್ವಾಮಿಗಳ ಮೇಲೆ ಬಿದ್ದಿದ್ದ ಕ್ರಾಂತಿಕಾರಿಶಿಷ್ಯರ ಕಿವಿಗೆ ತಲುಪಲಿಲ್ಲ. ತಕ್ಷಣ ಅಲ್ಲಿದ್ದ ಮಫ್ತಿಯಲ್ಲಿದ್ದ ಪೋಲೀಸರು ಇನ್ನು ನಮ್ಮ ಕೆಲಸ ಮಾಡೋಣ ಎಂದು ಆನಂದದಿಂದ ಕ್ರಾಂತಿಕಾರಿ ಶಿಷ್ಯರನ್ನು ಎಳೆದಾಡಿ ಪಟ್ಟೆಸ್ವಾಮಿಯನ್ನು ರಕ್ಷಿಸಲು ಮುಂದಾದರು. ಆಗಲೇ ಕ್ರಾಂತಿಕಾರಿ ಸ್ವಾಮಿಗಳು ಮಧ್ಯೆ ಪ್ರವೇಶಿಸಿ ತಮ್ಮ ಶಿಷ್ಯರನ್ನು ಸಮಾಧಾನ ಪಡಿಸಿದ್ದರಿಂದ ವಾತಾವರಣ ಕೊಂಚ ತಿಳಿಯಾಯಿತು. ಹಿಡಿತ ಸಡಿಲವಾದದ್ದೇ ತಡ, ಪಟ್ಟೆಸ್ವಾಮಿಗಳು ಬದುಕಿದೆಯಾ ಬಡಜೀವವೆಂಬಂತೆ ಅಲ್ಲಿಂದ ರೈಟುಹೇಳಿಬಿಟ್ಟರು.
ಬ್ರೇಕ್ ಹೇಳಿ ರೆಕಾರ್ಡಿಂಗ್ ರೂಮಿನ ಮೂಲೆಯಲ್ಲಿ ನಿಂತು ಬ್ರೇಕಾದ ಐದಾರು ಕುರ್ಚಿ ಮೈಕುಗಳನ್ನು ಎಣಿಸಿಕೊಂಡ ಪುಂಗಿರಂಗರು ಮತ್ತೆ ಕಾರ್ಯಕ್ರಮ ಆರಂಭಿಸುವುದಕ್ಕೇ ಆಗಲಿಲ್ಲ. ಅಷ್ಟರಲ್ಲಿ ಬೋಳುವಾರ್ತ ಸ್ವಾಮಿಗಳು ತಮ್ಮ ಲಕ್ಷುರಿ ಕಾರಿನಲ್ಲಿ ಅರ್ಧ ದೂರ ಹೊರಟು ಬಿಟ್ಟಿದ್ದರು. ಅವರ ಕಾರಿನಲ್ಲಿಯೇ ಜಾಗ ಗಿಟ್ಟಿಸಿಕೊಂಡಿದ್ದ ಕಮಂಡಲೀಸ್ವಾಮಿ ಇನ್ನೂ ಸುಧಾರಿಸಿಕೊಳ್ಳುತ್ತಿದ್ದರು. ನರ ಇದೆಯಾ ಕಟ್ಟಾಗಿ ಹೋಗಿದೆಯಾ ಎಂಬ ಆತಂಕದಲ್ಲಿ ನಡುಗುತ್ತಿದ್ದ ಪಟ್ಟೆಸ್ವಾಮಿಗಳನ್ನು ಅಲ್ಲಿದ್ದ ಪೋಲೀಸರು ತಮ್ಮ ವ್ಯಾನಿನಲ್ಲಿ ಸೇಫಾಗಿ ಕರೆದುಕೊಂಡು ಹೋಗಿ ಅವರ ಮಠಕ್ಕೆ ತಲುಪಿಸಿದರು.
ಇಲ್ಲಿಗೆ ಸಚಿವರುಗಳ ರಾಸಲೀಲೆಯ ಕಾರ್ಯಕ್ರಮ ರಣರಂಗವಾಗಿ ಅರ್ಧಕ್ಕೆ ನಿಂತು ಹೋಯಿತು. ಕ್ರಾಂತಿಕಾರಿಸ್ವಾಮಿಗಲ ಶಿಷ್ಯರು ಅವರ ಸ್ವಾಮಿಗಳ ದಯೆಯಿಂದ ಪೋಲೀಸರ ವಶವಾಗದೆ ಅಲ್ಲಿಂದ ತೆರಳಿಕೊಂಡರು.
ಸೈಲೆಂಟಾಗಿ ಎಲ್ಲವನ್ನೂ ಕ್ಯಾಮೆರಾಗೆ ತುಂಬಿಕೊಳ್ಳುತ್ತಿದ್ದ ಕ್ಯಾಮೆರಾಮ್ಯಾನ್ ಮುರುಗನ್ ಅಲ್ಲಿ ನಡುಗುತ್ತಾ ನಿಂತಿದ್ದ ಪುಂಗಿರಂಗರ ಕಡೆ ಅಸಹ್ಯದಿಂದ ನೋಡುತ್ತಾ...ಈ ರೀಲಿನ ಸಮೇತ ಈ ಚಾನೆಲ್ ಬಿಟ್ಟು ಬೇರೆ ಯಾವುದಾದರೂ ಬಿಸಿನೆಸ್ಸು ಮಾಡಲೋ ಅಥವಾ ಪಿಚ್ಚರಿಗೆ ಕ್ಯಾಮೆರಾ ಹಿಡಿಯಲೋ ಸೇರಿಕೊಳ್ಳಬೇಕೆಂದು ಮನಸ್ಸು ಮಾಡಿಕೊಂಡರು.
ಥಳಥಳ ಹೊಳೆಯುತ್ತಿದ್ದ ಸ್ಟುಡಿಯೋ ರೂಮನ್ನು ಒಂದೇ ಒಂದು ಗಂಟೆಯಲ್ಲಿ ಈ ಪಾಟಿ ಗಲೀಜು ಮಾಡಿಹೋದ ಸ್ವಾಮಿಗಳ ಶಕ್ತಿಗೆ ಬೆರಗಾಗುತ್ತಾ...ಗಲೀಜಾಗಿದ್ದ ಸ್ಟುಡಿಯೋವನ್ನು ಬೇಗ ಕ್ಲೀನು ಮಾಡಿ ಮನೆ ತಲುಪಿಕೊಳ್ಳುವ ಆಸೆಯಲ್ಲಿ ಕ್ಲೀನರ್ ನಂಜಮ್ಮ ಬರ್ಲು ಹಿಡಿದುಕೊಂಡು ಬಂದರು.
ನಮ್ ನಂಜಮ್ಮನಂತ ಕರ್ಮಯೋಗಿಗಳು ಮನಸ್ಸು ಮಾಡಿ ಕ್ಲೀನು ಮಾಡಲು ಶುರು ಮಾಡಿದರೆ ಯಾವ ಸ್ವಾಮಿ, ರಾಜಕಾರಣಿಯ ಗಲೀಜೂ ಎಲ್ಲೂ ಉಳಿಯುವುದಿಲ್ಲವೆಂದು ನಿಮಗೆ ಖಾತ್ರಿಮಾಡಿಸುತ್ತಾ... ಮುಂದಿನ ಸಂಚಿಕೆಯವರೆಗೆ ಯಾವುದೇ ಮಠಾದೀಶರ ಆಶೀರ್ವಾದದ ಸಹವಾಸಕ್ಕೆ ಹೋಗದೇ ಕರ್ಮಯೋಗಿಗಳಾಗಿ ಆಯಾಮಕ್ಕಾಗಿ ಕಾಯಿರೆನ್ನುತ್ತಾ...
ಸಹನಾ ಅಪ್ಡೇಟ್: ಬರ, ಬಣ ಮತ್ತು ಸೋನಿಯಮ್ಮನವರ ಸಿದ್ಧಗಂಗಾ ಪ್ರವಾಸ |
ರಾಜ್ಯದ ೧೭೬ ತಾಲೂಕು ಗಳ ಪೈಕಿ ೧೪೬ ತಾಲೂಕಿನಲ್ಲಿ ಬರ ತಾಂಡವ ಆಡುತ್ತಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲೇ ಬರದ ಛಾಯೆ ಕಂಡಿದ್ದರಿಂದ ಆಗ ಬರೀ ೭೦ ತಾಲೂಕಿನಲ್ಲಿ ಬರ ಎನ್ನಲಾಗಿತ್ತು. ಆದರೀಗ ಬರ ಇಡೀ ರಾಜ್ಯವನ್ನೇ ಆವರಿಸಿದಂತಿದೆ. ಕುಡಿಯುವ ನೀರಿಗಾಗಿ ನಗರ ಪ್ರದೇಶಗಳಲ್ಲಿ ಈಗ ಹಾಹಾಕಾರ. ೨೦೦೯ ರ ನೆರೆ ಹಾವಳಿಯಲ್ಲಿ ಮನೆ-ಮಠ ಕಳೆದುಕೊಂಡ ೫೯ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಇನ್ನೂ ವಸತಿ ಜೀವನಾವಕಾಶ ಕಲ್ಪಿಸದ ಸರ್ಕಾರದ ’ಆಸರೆ’ ಯೋಜನೆ ದಿಕ್ಕು ತಪ್ಪಿ ನಿಂತಿದೆ. ಈವರೆಗೆ ೨೯ ಸಾವಿರದಷ್ಟು ಕುಟುಂಬಗಳಿಗೆ ಮಾತ್ರ ’ಆಸರೆ’ ಮನೆ ಕಲ್ಪಿಸಿಕೊಡಲಾಗಿದೆ. ಉಳಿದವರು ಹರೋಹರ ಎನ್ನುವಂತಾಗಿದೆ. ಈಗ ಕೈ ಕಾಲು ಹಿಡಿದು ಒಂದು ಕೊಡ ನೀರಿಗೆ ಅಂಗಲಾಚುತ್ತಿರುವ ಗ್ರಾಮೀಣ ಮಹಿಳೆಯರನ್ನ ನೋಡಿದಾಗ ಮನಸ್ಸು ಮರುಗುತ್ತದೆ. ಬರೀ ಗ್ರಾಮೀಣ ಪ್ರದೇಶ ಮಾತ್ರ ಅಲ್ಲ, ರಾಜಧಾನಿ ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲಾ ಕೇಂದ್ರಗಳಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಕರ್ನಾಟಕದ ಆದಳಿತಶಾಹಿ ವ್ಯವಸ್ಥೆ ಕಿವಿ, ಕಣ್ಣು ಕಳೆದುಕೊಂಡು ಕೂತಿದೆ.
ರಾಜ್ಯದ ಬಿಜೆಪಿ ಕತೆ ಶುರು ಮಾಡಿದರೆ ಕಿಸಬಾಯಿ ದಾಸನ ಕತೆ ಆಗುತ್ತೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ದಿನಕ್ಕೊಂದು ಹೇಳಿಕೆ ನೀಡಿ ಸಾವಿರಾರು ಕೋಟಿ ಖರ್ಚುಮಾಡಿ, ಉದ್ಧಾರ ಮಾಡುವ ಅಣಿಮುತ್ತುಗಳನ್ನ ಉದುರಿಸುತ್ತಿರುವುದು ಮಾಮೂಲಿ. ನಾಡಿಗೆ ಬರ ಬಂದರೆ ದೋಚುವವರಿಗೆ ಹಬ್ಬ, ಸುಗ್ಗಿ! ೧೯೭೨-೭೩ ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಬರದ ತೀವ್ರತೆಗೆ ಸರ್ಕಾರದ ನಿಧಾನಗತಿಯನ್ನು ವಿರೋಧಿಸಿ ಒಂದಷ್ಟು ಜನ ಸಚಿವರು ರಾಜಿನಾಮೆ ನೀಡಿ ತಮ್ಮ ಅಸಹಾಯಕತೆಯನ್ನ ತೋರಿದ್ದರು. ಆಗ ಜಿಲ್ಲಾ ಹಂತದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹಗಲು ರಾತ್ರಿ ಕೆಲಸ ಮಾಡಿಸಿದ್ದರು. ನಂತರ ೮೪-೮೫ ರಾಮಕೃಷ್ಣ ಹೆಗ್ಗಡೆ ಕಾಲದಲ್ಲೂ ಸುಮಾರು ಕೆಲಸ ನಡೆದಿತ್ತು. ಸಚಿವರು, ಶಾಸಕರೆನ್ನದೆ ಬೀದಿ ಬೀದಿ ಸುತ್ತಿ, ಹಣ, ಹುಲ್ಲು, ದವಸಧಾನ್ಯ ಸಂಗ್ರಹಿಸಿ ಬರ ಪ್ರದೇಶಕ್ಕೆ ಕಳಿಸಿ ಕೊಡಲಾಗಿತ್ತು. ಇತ್ತೀಚಿನ ೧೯೯೯ ರ ಎಸ್.ಎಂ ಕೃಷ್ಣ ಅವಧಿಯಲ್ಲೂ ಸತತ ನಾಲ್ಕು ವರ್ಷ ಬರ ರಾಜ್ಯವನ್ನು ಕಾಡಿತ್ತು. ವಿಜ್ನಾನ ತಂತ್ರಜ್ನಾನ ಏನೆಲ್ಲಾ ಮುಂದುವರಿದಿದ್ದರೂ, ರಾಜ್ಯ ಬರದ ಪರಿಸ್ಥಿತಿಯನ್ನು ನಿಭಾಯಿಸುವ ರೀತಿ ದಶಕದಿಂದ ದಶಕಕ್ಕೆ ಕೆಡುತ್ತಲೇ ಬಂದಿದೆ.
ಈಗ ಸರ್ಕಾರದಲ್ಲಿ ಕೂತಿರುವವರಿಗೆ ಬರಕ್ಕಿಂತ ಬಣವೇ ಮುಖ್ಯವಾಗಿಹೋಗಿದೆ. ಯಡ್ಯೂರಪ್ಪ ಬರ ಪರಿಸ್ಥಿತಿಯನ್ನು ಅವಲೋಕಿಸೋದಕ್ಕೆ ರಾಜ್ಯ ಸುತ್ತುವ ಯೋಜನೆ ಹಾಕಿಕೊಂಡಿದ್ದಾರೆ. ಸಧ್ಯಕ್ಕೆ, ಬರ ಪರಿಸ್ಥಿತಿ ಪರಸ್ಪರ ಆರೋಪ ಮಾಡಿಕೊಳ್ಳಲು, ತಮ್ಮ ತಮ್ಮ ಬಣವನ್ನು ಗಟ್ಟಿ ಮಾಡಲು ಒಂದು ಕಾರಣ ಮಾತ್ರ ಆಗಿದೆ.
ಯಡ್ಯೂರಪ್ಪನವರು ಬಿಜೆಪಿಯಲ್ಲಿ ಉಳಿಯುವುದು ಬಿಡುವುದು ನಿರ್ಧಾರವಾಗಬೇಕಿದೆ. ಈ ತೀರ್ಮಾನ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಯಡ್ಡಿ ಹಗರಣಗಳು ಸಿಬಿಐ ತನಿಖೆಗೆ ಬಂದರೆ ಯಡ್ಯೂರಪ್ಪನವರಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಸಿಗಲ್ಲ. ಈಗ ಬಹುಪಾಲು ಚುನಾವಣ ವರ್ಷವಾಗಿರುವುದರಿಂದ ಯಡಿಯೂರಪ್ಪ ಪಕ್ಷದ ಅಧ್ಯಕ್ಷಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಧ್ಯಕ್ಷರಾದರೆ ಪಕ್ಷ ಮತ್ತು ಸರ್ಕಾರದ ಮೇಲೆ ಮರು ಹತೋಟಿ ಸಾಧಿಸುವ ಲೆಕ್ಕಾಚಾರ ಅವರದು. ಪಕ್ಷದಲ್ಲಿ ಒಳ್ಳೆ ಸ್ಥಾನ ಸಿಗದಿದ್ದರೆ ಬೇರೆ ಪಕ್ಷ!! ಅಷ್ಟೆ.
ಈಗ ಕರ್ನಾಟಕದಲ್ಲಿ ಸಖತ್ ಸುದ್ದಿ ಎಂದರೆ ಸೋನಿಯಾ ಗಾಂಧಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಬರ್ತಿರೋದು!
ಈ ಭೇಟಿಯ ಹಿಂದೆ ಹಲವಾರು ತಂತ್ರಗಳು ಅಡಗಿವೆ. ಸಿದ್ದಗಂಗಾ ಮಠಕ್ಕೆ ಸೋನಿಯಾ ಬಂದು, ಲಿಂಗಾಯಿತರ ಬೆಂಬಲ ಕೋರುವುದು ಒಂದು ತಂತ್ರ. ಅದರ ಜೊತೆಗೇ ಅಕಸ್ಮಾತ್ ಯಡ್ಯೂರಪ್ಪ ಬಿಜೆಪಿಯನ್ನು ಬಿಟ್ಟು, ಲಿಂಗಾಯಿತರೆಲ್ಲ ಯಡ್ಯೂರಪ್ಪನವರ ಜೊತೆ ಹೋದರೆ ಚುನಾವಣೆಯ ನಂತರ ಆಯ್ಕೆಯಾದವರ ಜೊತೆ ಕಾಂಗ್ರೆಸ್ಸಿಗೆ ಒಳ ಹೊಂದಾಣಿಕೆ ಸುಲಭವಾಗುವಂತೆ ಮಾಡಿಕೊಳ್ಳಲು ಇದೊಂದು ಪುಟ್ಟ ಹೆಜ್ಜೆ. ಇದಲ್ಲದೇ ಯಡ್ಯೂರಪ್ಪನವರೇನಾದ್ರೂ ಕೋರ್ಟು-ತನಿಖೆ ಅಂತ ಚುನಾವಣೆಯಿಂದ ಹೊರಗುಳಿಯಬೇಕಾಗಿ ಬಂದರೆ ಯಡ್ಯೂರಪ್ಪನವರ ಬೆಂಬಲಿಗರಾಗಿರುವ ಲಿಂಗಾಯಿತರ ಬೆಂಬಲ ಕಾಂಗ್ರೆಸ್ಸ್ ಪರ ಇರಲಿ ಎನ್ನುವುದೂ ಕೂಡ ಇದರ ಹಿಂದಿನ ಉದ್ದೇಶ. ಇದನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇದೆಲ್ಲಾ ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ.
|