ಕಳೆದವರ್ಷ ಭಾರತವನ್ನು ಪೋಲಿಯೋ ರಹಿತ ದೇಶವೆಂದು ಬಹಳ ಹೆಮ್ಮೆಯಿಂದ ಘೋಷಿಸಲಾಗಿತ್ತು. ಭಾರತದಿಂದ ಪೋಲಿಯೋವನ್ನು ನಿರ್ನಾಮಗೊಳಿಸಲು ಸರ್ಕಾರ, ಸಂಘಸಂಸ್ಥೆಗಳು ಹಾಕಿದ ಶ್ರಮವನ್ನು ಮಾಧ್ಯಮಗಳೂ ಸೇರಿದಂತೆ ಎಲ್ಲೆಡೆಯಿಂದಲೂ ಶ್ಲಾಘಿಸಲಾಗಿತ್ತು. ಭಾರತ ಸರ್ಕಾರಕ್ಕೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ’ಪೋಲಿಯೋ ನಿರ್ಮೂಲನಕ್ಕಾಗಿ ನಾನಿಷ್ಟು ಮೂಲಧನ ಕೊಡುತ್ತೇನೆ...ನೀನದನ್ನು ಮುಂದುವರೆಸಿ ಯೋಜನೆಯನ್ನು ಸಂಪೂರ್ಣ ಕಾರ್ಯಗತ ಮಾಡಬೇಕು’ ಎನ್ನುವ ಷರತ್ತಿನೊಂದಿಗೆ ಈ ಯೋಜನೆಗೆ ಒತ್ತು ನೀಡಿತ್ತು.
ಆದರೆ ’ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್’ (IJME) ಎಂಬ ವೈದ್ಯಕೀಯ ನಿಯತಕಾಲೀಕವೊಂದರಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಲೇಖನವೊಂದು ಈ ಪೋಲಿಯೋ ಯೋಜನೆಯ ಮತ್ತೊಂದು ಕರಾಳ ಮುಖವನ್ನು ಎದುರಿಗಿಟ್ಟಿದೆ. ಈಗ ಕೊಡಲಾಗಿರುವ ಪೋಲಿಯೋ ಲಸಿಕೆಯ ಪರಿಣಾಮವಾಗಿ ಪೋಲಿಯೋರೋಗದ ಬದಲಿಗೆ, ಅದಕ್ಕಿಂತಲೂ ತೀವ್ರವಾದ ’ನಾನ್ ಪೋಲಿಯೋ ಅಕ್ಯೂಟ್ ಫ್ಲಾಸಿಡ್ ಪೆರಾಲಿಸಿಸ್’
(NPAFP) ಎಂಬ ವೈದ್ಯಕೀಯ ಪರಿಸ್ಥಿತಿ ಈಗ ಭಾರತದಲ್ಲಿ ತೀವ್ರವಾಗಿ ಏರುತ್ತಿದೆ. ಈ ರೋಗ ಪೋಲಿಯೋಗಿಂತಲೂ ಭಿನ್ನವಿದ್ದು ಪೋಲಿಯೋಗಿಂತಲೂ ದುಪ್ಪಟ್ಟು ಹಾನಿಕಾರಕವಾಗಿದೆ ಎಂದು ’ಆಫೀಸ್ ಆಫ್ ಮೆಡಿಕಲ್ ಅಂಡ್ ಸೈನ್ಸ್ ಜಸ್ಟಿಸ್’
(OMSJ) ಅಭಿಪ್ರಾಯ ಪಡುತ್ತದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.
೨೦೧೧ರಲ್ಲಿ ಭಾರತ ಪೋಲಿಯೋರಹಿತ ದೇಶವೆಂದು ಘೋಷಿಸಿದಾಗಲೂ ಭಾರತದಲ್ಲಿ (NPAFP) ಖಾಯಿಲೆಯ ೪೭,೫೦೦ ಕೇಸುಗಳು ದಾಖಲಾಗಿದ್ದವು. ಇದರ ಜೊತೆಗೇ ’ವ್ಯಾಕ್ಸೀನ್ ಅಸೋಸಿಯೇಟೆಡ್ ಪೋಲಿಯೋ ಪೆರಾಲಿಸಿಸ್’ ((VAPP), ಅಂದರೆ ಲಸಿಕೆ ಹಾಕಿಸಿಕೊಂಡ ಕಾರಣಕ್ಕೇ ಪೋಲಿಯೋ ಸೋಂಕಿಗೆ ಒಳಗಾಗಿ, ಪೋಲಿಯೋಗೆ ಹೋಲುವ ಮತ್ತೊಂದು ರೋಗಕ್ಕೆ ತುತ್ತಾದ ಮಕ್ಕಳ ಸಂಖ್ಯೆಯೂ ಏರುತ್ತಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಭಾರತದ ’ನ್ಯಾಷನಲ್ ಪೋಲಿಯೋ ಸರ್ವೇಲೆನ್ಸ್ ಪ್ರಾಜೆಕ್ಟ್’ ನ ವರದಿಯಲ್ಲಿ ಭಾರತದಲ್ಲಿ ಪೋಲಿಯೋ ಲಸಿಕೆ ನೀಡಲಾದ ಸಂಖ್ಯೆಯಷ್ಟೇ ಪ್ರಮಾಣದಲ್ಲಿ (NPAFP) ಮತ್ತು (VAPP) ಹೊಸ ಕೇಸುಗಳ ಪತ್ತೆಯಾಗಿವೆ ಎಂದು ತಿಳಿಸಲಾಗಿದೆ! ಈ ಲಸಿಕೆ ಸಂಬಂಧಪಟ್ಟಂತೆ ಬರುವ ಪೋಲಿಯೋ (VAPP), ವೈದ್ಯಶಾಸ್ತ್ರ ಅಭ್ಯಸಿಸಿದ ಸಾಧಾರಣ ಪೋಲಿಯೋಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು ಪುಟ್ಟ ಮಕ್ಕಳಲ್ಲಿ ತೀವ್ರವಾದ ಮೆದುಳಿನ ಸೋಕಿಗೂ ಕಾರಣವಾಗುತ್ತೆ ಎನ್ನಲಾಗಿದೆ!
ಭಾರತದ ಪೋಲಿಯೋ ಲಸಿಕೆ ಹಾಕುವ ಯೋಜನೆ ಯಶಸ್ವಿಯಾಗುವ ಬದಲು ಪೋಲಿಯೋ ಸಂಬಂಧಪಟ್ಟ ಪೆರಾಲಿಸಿಸ್ ಅನ್ನು ಮೊದಲಿಗಿಂತಲೂ ೧೨ ಪಟ್ಟು ಹೆಚ್ಚಿಸಿರುವುದಾಗಿಯೂ, ದೇಶದ ಕೆಲವು ರಾಜ್ಯಗಳಲ್ಲಿ ೩೫ ಪಟ್ಟು ಹೆಚ್ಚಿರುವುದಾಗಿದೆಂದೂ
’ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್
’ (IJME) ಆತಂಕದ ವರದಿಯನ್ನು ಮುಂದಿಡುತ್ತದೆ.
ಭಾರತದಲ್ಲಿ ಪೋಲಿಯೋ ಲಸಿಕೆಯ ವ್ಯವಸ್ಥೆ ಮುಂಚಿನಿಂದಲೂ ಇತ್ತು. ಅದು ನಿಧಾನಕ್ಕೆ ಪರಿಣಾಮಕಾರಿಯಾಗುತ್ತಿತ್ತು. ಆದರೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಭಾರತ ಸರ್ಕಾರಕ್ಕೆ ಪೋಲಿಯೋ ನಿರ್ಮೂಲನೆಯ ಯೋಜನೆಗೆ ಸ್ವಲ್ಪ ಮೂಲಧನವನ್ನು ಒದಗಿಸಿ ಇದರ ಪರಿಣಾಮ ಅದ್ಭುತವಾಗಿರುತ್ತದೆಂಬಂತೆ ಭಾರತ ಸರ್ಕಾರವನ್ನು ಒಪ್ಪಿಸಿತ್ತು. ಸ್ವಲ್ಪ ಮೂಲಧನದ ಆಸೆಗೆ ಬಿದ್ದು ಅಷ್ಟರಲ್ಲಿಯೇ ಯೋಜನೆಯನ್ನು ಕಾರ್ಯಗತ ಮಾಡಬಹುದೆಂಬ ಯೋಚನೆಯಲ್ಲಿದ್ದ ಭಾರತಕ್ಕೆ ಈ ಯೋಜನೆಯನ್ನು ಮುಗಿಸುವ ಹೊತ್ತಿಗೆ ೨.೫ ಬಿಲಿಯನ್ ಡಾಲರ್ ಗಳ ಖರ್ಚಾಗಿತ್ತು. ಇದು ಅಂದಾಜು ಮಾಡಿದ್ದಕ್ಕಿಂತ ೧೦೦ ಶೇಕಡಾ ಹೆಚ್ಚಿನ ಖರ್ಚು! ಹಣದ ಖರ್ಚು ಪರವಾಗಿಲ್ಲ, ಆದರೆ ಈಗ ಮಕ್ಕಳಲ್ಲಿ ಆತಂಕಕಾರಿಯಾಗಿ ಹೆಚ್ಚಿರುವ ಪೋಲಿಯೋನ ಹೊಸ ರೂಪಗಳನ್ನು ಎದುರಿಸುವ ಬಗೆ?!!!
ಪೋಲಿಯೋ ಯೋಜನೆಗಾಗಿ ಖರ್ಚುಮಾಡಿರುವ ಹಣವನ್ನು, ಭಾರತದ ಜನತೆಗೆ ಅತ್ಯಗತ್ಯವಾಗಿ ಬೇಕಾಗಿರುವ, ನೈರ್ಮಲ್ಯ ಕಾಪಾಡಿಕೊಳ್ಳುವ ಮತ್ತು ನೀರಿನ ವ್ಯವಸ್ಥೆಗಳಿಗೆ ಬಳಸಿಕೊಳ್ಳದೇ ಮತ್ತಷ್ಟು ರೋಗವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಪೋಲುಮಾಡಿರುವುದನ್ನು ’ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್’ (IJME) ದುರಂತವೆಂದು ಅಭಿಪ್ರಾಯಪಟ್ಟಿದೆ. ("The Indian government finally had to fund this hugely expensive program, which cost the country 100 times more than the value of the initial grant,"...From India's perspective the exercise has been extremely costly both in terms of human suffering and in monetary terms. It is tempting to speculate what could have been achieved if the $2.5 billion spent on attempting to eradicate polio were spent on water and sanitation and routine immunization.")
ಅಂತರ್ರಾಷ್ಟ್ರೀಯ ಹಣಕಾಸಿನ ನೆರವಿಗಾಗಿಯೇ ಕಾದಿದ್ದು, ಅಥವಾ ಅಂತರ್ರಾಷ್ಟ್ರೀಯ ನೆರವಿನ ಆಸೆ ಅಥವಾ ಒತ್ತಡಕ್ಕೆ ಬಿದ್ದು ಅವುಗಳು ಹಾಕುವ ಷರತ್ತಿಗೆ ಒಪ್ಪಿ, ತನ್ನ ದೇಶದಲ್ಲಿನ ಅತ್ಯಗತ್ಯಗಳನ್ನೂ, ಯೋಜನೆಗಳು ಕಾರ್ಯಗತವಾಗುವ ರೀತಿಗಳನ್ನೂ ಪರಿಗಣಿಸದೇ, ಸರ್ಕಾರಗಳು ಭಾರೀ ಯೋಜನೆಗಳಿಗೆ ಸರಿಯಾದ ರೂಪುರೇಷೆಯ ಬೆನ್ನೆಲುಬಿಲ್ಲದೆ ಧುಮುಕಿದಾಗ ಆಗುವ ಅನಾಹುತಗಳು ಇಂಥವು ("nearly everything that is wrong with donor funded 'disease specific' vertical projects at the cost of investments in community-oriented primary health care (horizontal programs") ಎಂದು ’ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್’ (IJME)ನ ವರದಿ ಭಾರತ ಸರ್ಕಾರ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ನಿನ ಷರತ್ತಿಗೆ ಪ್ರಶ್ನಾತೀತವಾಗಿ ಒಪ್ಪಿದ್ದನ್ನು ಕಟುವಾಗಿ ವಿಮರ್ಶಿಸುತ್ತದೆ.
(ಆಸಕ್ತರು ಕೆಳಗಿನ ಲಿಂಕ್ ಗಳಲ್ಲಿ ಸಂಪೂರ್ಣ ಲೇಖನ ಮತ್ತು ಪತ್ರಿಕಾ ಬಿಡುಗಡೆಯನ್ನು ಪಡೆಯಬಹುದು.)
-------------------------
ಆಂಗ್ ಸ್ಯಾನ್ ಸೂ ಕೀ ಅವರನ್ನು ಬರ್ಮಾದ ಜನ ಅಕ್ಕರೆ ಗೌರವದಿಂದ ’ಚಿಕ್ಕಮ್ಮ’ ಎಂದು ಕರೆಯುತ್ತಾರಂತೆ. ಈಗ ಬರ್ಮಾದ ಚಿಕ್ಕಮ್ಮ ಅಲ್ಲಿನ ಪಾರ್ಲಿಮೆಂಟಿನ ಸದಸ್ಯರಾಗಿ ಜಯಭೇರಿ ಗಳಿಸಿದ್ದಾರೆ. ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (National League for Democracy)ಯ ಪ್ರತಿನಿಧಿಗಳು ಇತ್ತೀಚಿನ ಉಪಚುನಾವಣೆಗಳಲ್ಲಿ ಸಾರಾಸಗಟಾಗಿ ಗೆದ್ದು ಬಂದಿದ್ದಾರೆ. ಬರ್ಮಾದಲ್ಲಿ ಮಿಲಿಟರಿ ಆಳ್ವಿಕೆ ಕೊನೆಗೊಳ್ಳಬೇಕೆಂಬ ಸಾತ್ವಿಕ ಹಠದ ಜೊತೆಯಲ್ಲೇ ಶಾಂತಿ, ಸಮಾಧಾನಚಿತ್ತ, ಮುಗುಳ್ನಗೆಯನ್ನು ಬಿಟ್ಟುಕೊಡದೇ ಎರಡು ದಶಕ ವಾಸಸ್ಥಾನದಲ್ಲಿಯೇ ಬಂಧಿಯಾಗಿ, ತಮ್ಮ ಗಂಡ ಮಕ್ಕಳಿಂದ ದೂರವಿದ್ದು, ಬರ್ಮಾದಲ್ಲಿ ಬದಲಾವಣೆಯಾಗುವ ಸಮಯವನ್ನು ಆಶಾದಾಯಕವಾಗಿ ಎದುರು ನೋಡಿದ್ದ ಸೂ ಕೀ ಅವರ ಆಯ್ಕೆಯಾಗಿ, ನಿಜಕ್ಕೂ ಬರ್ಮಾದ ಮಿಲಿಟರಿ ಆಡಳಿತದಿಂದ ದೌರ್ಜನ್ಯಕ್ಕೊಳಗಾದ ಜನರಿಗೆ ಸ್ವಾತಂತ್ರ್ಯವನ್ನು ಅನುಭವಿಸಲು ಪೂರಕ ವಾತಾವರಣವನ್ನು ನಿರ್ಮಿಸಲು ಸಾಧ್ಯವಾದರೆ ಅವರ ಶ್ರಮ, ತಪಸ್ಸು ಸಾರ್ಥವಾದಂತೆ.
ಮುಂದಿನವಾರ ಸೂ ಕೀ ಪಾರ್ಲಿಮೆಂಟಿನ ಪ್ರವೇಶ ಮಾಡಬೇಕು. ಅವರು ಪಾರ್ಲಿಮೆಂಟಿಗೆ ಬಂದರೆ ಅವರ ಹೋರಾಟ
, ಬದ್ಧತೆಯ ಮೇಲೆ ನಂಬಿಕೆಯಿಟ್ಟು ಕೆಲವು ನಿರ್ಬಂಧಗಳನ್ನು ಸಡಿಲಿಸುವುದಾಗಿ ಆಸ್ಟ್ರೇಲಿಯಾ, ಅಮೆರಿಕಾ
, ಬ್ರಿಟನ್ ನಂತಹ ಪ್ರಭಾವೀ ರಾಷ್ಟ್ರಗಳು ಹೇಳಿಕೊಂಡಿವೆ
. ಇದನ್ನೇ ದಾಳವನ್ನಾಗಿಸಿಕೊಂಡಿರುವ ಸೂ ಕೀ ಯವರ ಪಕ್ಷ, ಬರ್ಮಾದಲ್ಲಿ ಚುನಾಯಿತರು ಪ್ರತಿಜ್ನೆ ತೆಗೆದುಕೊಳ್ಳಬೇಕಾದಾಗ ಬಳಸುವ
’ಸಂವಿಧಾನವನ್ನು ರಕ್ಷಿಸುತ್ತೇವೆ
’ ಎಂಬ ವಾಕ್ಯವನ್ನು
’ಸಂವಿಧಾನವನ್ನು ಗೌರವಿಸುತ್ತೇವೆ
’ ಎಂದಾಗಿ ಬದಲಿಸಬೇಕೆಂದು ಪ್ರಸ್ತುತ ಸರ್ಕಾರಕ್ಕೆ ಷರತ್ತು ಹಾಕಿದೆ. ಸರ್ಕಾರ ಸಧ್ಯಕ್ಕಂತೂ ಮಣಿದಿಲ್ಲ
. ಇದೊಂದು ಪದದ ಬದಲಾವಣೆಗೆ ಮಣಿಯದ ಸರ್ಕಾರ ಮುಂದೆ ಸೂ ಕೀ ಮತ್ತವರ ನಾಯಕತ್ವದಲ್ಲಿ ಅವರ ಪಕ್ಷ ಸೂಚಿಸಲಿರುವ ಸಾಮಾಜಿಕ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರಲು ಒಪ್ಪಬಹುದಾ
? ಸಧ್ಯದಲ್ಲಿಯೇ ಗೊತ್ತಾಗಲಿದೆ
. ಸಂವಿಧಾನವನ್ನು
’ರಕ್ಷಿಸುವುದು
’ ಮಿಲಿಟರಿ ಆಳ್ವಿಕೆಯನ್ನು ಉತ್ತೇಜಿಸುವುದನ್ನು ಸಂಕೇತಿಸುತ್ತದೆ
, ಸಂವಿಧಾನವನ್ನು
’ಗೌರವಿಸುವುದು
’ ಪ್ರಜಾಪ್ರಭುತ್ವವನ್ನು ಪ್ರೋತ್ಸಾಹಿಸುತ್ತದೆ ಎನ್ನುವುದು ಸೂ ಕೀ ಮತ್ತವರ ಬೆಂಬಲಿಗರ ನಂಬಿಕೆ
. ಅಧಿಕಾರಕ್ಕೆ ಬಂದಲ್ಲಿ, ಆಡಳಿತದಲ್ಲಿ ಮಿಲಿಟರಿಯ ಪ್ರಭಾವವನ್ನು ಸಂಪೂರ್ಣವಾಗಿ ಕತ್ತರಿಸಿಹಾಕುವುದು ಸೂ ಕೀ ಮತ್ತವರ ಪಕ್ಷದ ಉದ್ದೇಶ
.
'ಆಕೆ ತುಂಬ ಒಳ್ಳೆಯವರೇನೋ ನಿಜ. ಅವರಿಗೆ ನಮ್ಮ ಜನರ ಮೇಲೆ ತುಂಬಾ ಪ್ರೀತಿಯಿದೆ. ಆದರೆ ಬರ್ಮಾ ಪರಿಸ್ಥಿತಿ ಅಂದುಕೊಂಡಷ್ಟು ಸರಳವಾಗಿಲ್ಲ. ಸಧ್ಯದಲ್ಲಿ ಬರ್ಮಾದಲ್ಲಿ ಸುಧಾರಣೆ ತರಲಾಗುವುದು ಬಹಳ ಕಷ್ಟಸಾಧ್ಯ’ ಎನ್ನುತ್ತಾರೆ ಬರ್ಮಾದ ಮಿಲಿಟರಿ ಆಡಳಿತದಿಂದ ತಪ್ಪಿಸಿಕೊಂಡು ಬಂದು ಅಮೆರಿಕಾದಲ್ಲಿ ಆಶ್ರಯ ಪಡೆದಿರುವ ಕೆಲವು ಬರ್ಮೀ ಮಿತ್ರರು.