ಅಂಗಳ      ಸಂಜೆ ದನಿ
Print this pageAdd to Favorite

 
 
ಡಾ.ಎಚ್.ಎಸ್. ರಾಘವೇಂದ್ರ ರಾವ್
 
 
(ಈ ಅಂಕಣದಲ್ಲಿ ನಾನು ಹಂಚಿಕೊಳ್ಳಲು ಬಯಸುವ ಸಂಗತಿಗಳು ನನ್ನನ್ನು ಎಂದಿನಿಂದಲೂ ಕಾಡಿವೆ, ಈಗಲೂ ಕಾಡುತ್ತಿವೆ. ಈ ಇಳಿವಯಸ್ಸಿನಲ್ಲಿ, ಇವುಗಳನ್ನು ನಿಮ್ಮೊಂದಿಗೆ ಹೇಳಿಕೊಳ್ಳುವ ಹಂಬಲ ನನ್ನದು. ಆಲೋಚನೆ ಎನ್ನುವುದು ಬದಲಾವಣೆಯ ಮೊದಲ ಹೆಜ್ಜೆ. ಇಲ್ಲಿ ಸವೆದುಹೋದ ಗಾಡಿಜಾಡುಗಳು ಅಪಾಯಕರ. ಈ ಬರಹಗಳಲ್ಲಿ ಉತ್ತರಗಳಿಗಿಂತ ಹೆಚ್ಚಾಗಿ ಪ್ರಶ್ನೆಗಳು ಇರುತ್ತವೆ. ಅವು ನನ್ನ ಪ್ರಶ್ನೆಗಳು ಮಾತ್ರವಲ್ಲ, ನಿಮ್ಮವೂ ಹೌದು. ‘ನಾನು ಉತ್ತರಗಳನ್ನು ಕೊಡಬಲ್ಲೆ, ಅವೇ ಸರಿಯಾದ ಉತ್ತರಗಳು’ ಎಂಬ ಅಹಂಕಾರ ನನಗಿಲ್ಲ. ಹಾಗೆ ನೋಡಿದರೆ, ಯಾರೂ ಯಾರಿಗೂ ದಾರಿ ತೋರಿಸುವುದು ಸಾಧ್ಯವಿಲ್ಲ, ಸರಿಯಲ್ಲ. ಆದರೆ, ಪ್ರಶ್ನೆಗಳನ್ನು ಕೇಳುವುದೆಂದರೆ, ಮನಸ್ಸು ಎಂಬ ತಿಳಿಗೊಳದಲ್ಲಿ ಕಲ್ಲುಗಳನ್ನು ಎಸೆದ ಹಾಗೆ. ನಿಮ್ಮ ಮನಸ್ಸಿನಲ್ಲಿ ಏಳುವ ಅಲೆಗಳು ನಿಮ್ಮವೇ ಆಗಿರುತ್ತವೆ. ಜೀವನದಲ್ಲಿ, ನಮಗೇ ತಿಳಿಯದಂತೆ ನಮ್ಮ ನಡವಳಿಕೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ಕೆಲವು ಸಂಗತಿಗಳನ್ನು ಎದುರಿಸದೆ ಬೇರೆ ದಾರಿಯಿಲ್ಲ. ನಾನು ಸಾಹಿತ್ಯದ ವಿದ್ಯಾರ್ಥಿಯಾದರೂ ಈ ಬರಹಗಳ ಹಿಂದೆ ಇರುವ ಪ್ರೇರಣೆ ಬೇರೆ ಬಗೆಯದು.)  
 
 

ನೇಪಾಳದಲ್ಲಿ ಶಾಶ್ವತಕುಮಾರಿ ಮತ್ತು ಮಡಿವಾಳ ಮಾಚಮ್ಮನ ಪ್ರಸಂಗ

 
ಕಳೆದ ವಾರ, ನಾನು ಮತ್ತು ಹಲವು ಆತ್ಮೀಯ ಗೆಳೆಯರು ನೇಪಾಳಕ್ಕೆ ಹೋಗಿ ಬಂದೆವು. ಹಿಮಾಲಯದ ಬಗ್ಗೆ, ಮಾತುಗಳಲ್ಲಿ ಏನು ಬರೆದರೂ ಅದು ಅನ್ಯಾಯ, ಅಹಂಕಾರ. ಆದರೆ, ಆ ಪರ್ವತದ ಶೀತಲ ಶಿಖರಗಳಿಗಿಂತ ತಣ್ಣಗೆ ಕೊರೆಯುವ ಒಂದು ಘಟನೆ ಮತ್ತು ಮನಸ್ಸಿಗೆ ಮುದನೀಡಿದ ಇನ್ನೊಂದು ಪ್ರಸಂಗಗಳನ್ನು ಹಂಚಿಕೊಂಡು, ಆ ಮೂಲಕ ನಿಮ್ಮೊಂದಿಗೆ ಮಾತನಾಡುವ ಹಂಬಲ ನನಗೆ.
 
 
ಘಟನೆ ೧:ಶಾಶ್ವತಕುಮಾರಿಯ ಹಾಡು-ಪಾಡು ನೇಪಾಳದ ರಾಜಧಾನಿಯಾದ ಕಠ್ಮಂಡು ನಗರದಲ್ಲಿ...
 
 ಕಠ್ಮಂಡು, ‘ಕಾಷ್ಠಮಂಟಪ’ ಎಂಬ ಸಂಸ್ಕೃತಪದದ ನೇಪಾಳೀ ರೂಪವಂತೆ. ಅಲ್ಲಿನ ದೇವಾಲಯಗಳಲ್ಲಿ ಮರದ ಬಳಕೆ ಬಹಳ ಜಾಸ್ತಿ. ‘ದರ್ಬಾರಾ ಸ್ಕ್ವೈರ್’ ಆ ಊರಿನ ಆಕರ್ಷಕ ‘ಟೂರಿಸ್ಟ್ ಸ್ಪಾಟ್’. ಅಲ್ಲಿನ ಜಂಗುಳಿಯಲ್ಲಿ ಸುಮ್ಮನೆ ಹೆಜ್ಜೆ ಹಾಕುವಾಗ, ಒಂದು ಕಡೆ ಜನರ ಗುಂಪು ಕಾಣಿಸಿತು. ಏನೆಂದು ಕೇಳಿದರೆ, ‘ಅದು ಕುಮಾರೀ ಮಾತಾ ಅವರ ಮಂದಿರ’, ಎಂದರು. ಸರಿ, ನಾವೆಲ್ಲರೂ ಅಲ್ಲಿ ಜಮಾಯಿಸಿದೆವು.
 
 
’ಕುಮಾರಿ’ ಆ ಮನೆಯಲ್ಲಿ ವಾಸಿಸುವ ಪುಟ್ಟ ಹುಡುಗಿ. ಅವಳನ್ನು ದುರ್ಗಾ ದೇವತೆಯ ಅವತಾರವೆಂದು ತಿಳಿಯಲಾಗುತ್ತದೆ. ಈ ಸಂಪ್ರದಾಯವು ಬೌದ್ಧರು ಮತ್ತು ಹಿಂದೂಗಳು ಇಬ್ಬರಲ್ಲಿಯೂ ಬೇರುಬಿಟ್ಟಿದೆ. ಕುಮಾರಿಯನ್ನು, ಮೂರರಿಂದ ಐದು ವರ್ಷಗಳ ವಯೋಮಿತಿಯಲ್ಲಿರುವ ನೂರಾರು ಹೆಣ್ಣುಮಕ್ಕಳ ಪೈಕಿ ಆರಿಸುತ್ತಾರೆ. ಅವಳು ಬೌದ್ಧ ಶಾಕ್ಯ ಸಮುದಾಯಕ್ಕೆ ಸೇರಿದವಳಾಗಿರಬೇಕು. ಅವಳಿಗೆ ಮೂವತ್ತೈದು ಶುಭಲಕ್ಷಣಗಳಿರಬೆಕು. ಆ ಲಕ್ಷಣಗಳು ಬಹುಮಟ್ಟಿಗೆ ಪರಿಪೂರ್ಣ ಸೌಂದರ್ಯಕ್ಕೆ ಸಂಬಂಧಿಸಿದವು. ಅದೂ ಅಲ್ಲದೆ ಅವು ದೇವಿಯ ಯಾವುದೋ ಒಂದು ಗುಣದ ಸಂಕೇತವೂ ಆಗಿರುತ್ತವೆ.
 
ಹೀಗೆ ಮೊದಲ ಹಂತದಲ್ಲಿ ಆಯ್ಕೆಯಾದ ಹುಡುಗಿಯರ ಜಾತಕಕ್ಕೂ ಮತ್ತು  ಆಗ ನೇಪಾಳವನ್ನು  ಆಳುತ್ತಿರುವ ರಾಜನ ಜಾತಕಕ್ಕೂ ಹೊಂದಾಣಿಕೆಯಾಗಬೇಕು.
 
ಅದಾದ ಮೇಲೆ, ಆಯ್ಕೆಯಾದ ಹುಡುಗಿಯರ ಧೈರ್ಯಪರೀಕ್ಷೆ ! ಅವರನ್ನು ಕತ್ತಲುತುಂಬಿದ ಕೋಣೆಯಲ್ಲಿ ಕೂಡಿಹಾಕುತ್ತಾರೆ. ಅವರ ಸಂಗಡ, ಆಗತಾನೇ ಕತ್ತರಿಸಿ, ರಕ್ತ ಸುರಿಸುತ್ತಿರುವ ಕೋಣಗಳ ರುಂಡಗಳು. ಅವುಗಳ ಜೊತೆಗೆ, ಭಯಂಕರವಾದ ಭೂತಗಳ ಮುಖವಾಡಗಳನ್ನು ಹಾಕಿಕೊಂಡು ಕುಣಿಯುತ್ತಿರುವ ನರ್ತಕರು. ಸಾಮಾನ್ಯ ಹುಡುಗಿಯರು ಇಂಥದನ್ನು ನೋಡಿ ಹೆದರಿ ನಡುಗುತ್ತಾರೆ. ಆದರೆ ದೇವಿಯ ಅವತಾರವೇ ಆದ ಮಗು, ಇದಕ್ಕೆಲ್ಲ ಬೆದರದೆ, ಬೆಚ್ಚದೆ ಉಳಿಯತ್ತಾಳೆ. ಅವಳು ಮುಂದಿನ ಕುಮಾರಿ ಮಾತೆಯಾಗಿ ಆಯ್ಕೆಯಾಗುತ್ತಾಳೆ.
 
 
ಅನಂತರ, ಈ ಮನೆಯಲ್ಲಿ-ಮಂದಿರದಲ್ಲಿ ಅವಳ ದಿವ್ಯಜೀವನ ಮೊದಲಾಗುತ್ತದೆ. ಅವಳು ಆ ಮಂದಿರದ ಶಾಶ್ವತನಿವಾಸಿ...ಹೆಚ್ಚೆಂದರೆ ವರ್ಷದಲ್ಲಿ ಎರಡು ಮೂರು ಬಾರಿ, ಹಬ್ಬ ಹರಿದಿನಗಳಂದು, ಅವಳು ರಥದಲ್ಲಿ ಮೆರವಣಿಗೆ ಹೋಗಬಹುದು. ಮಂದಿರದ ಆವರಣದಲ್ಲಿ ಮಾತ್ರ. ಆಗಲೂ ಅವಳ ಕಾಲುಗಳು ನೆಲಕ್ಕೆ ಸೋಕುವಂತಿಲ್ಲ. ಅಧ್ಯಯನ-ಆರಾಧನೆ-ಪೂಜೆ ಮಾಡುವುದು-ಪೂಜಿತಳಾಗುವುದು ಇಷ್ಟೇ ಅವಳ ಕೆಲಸ. ಇಲ್ಲ, ಇನ್ನೂ ಒಂದು ಕೆಲಸ ಇದೆ. ಆ ಮಂದಿರದ ಮೊದಲ ಮಹಡಿಯಲ್ಲಿ ಒಂದು ದೊಡ್ಡ ಕಿಟಕಿಯಿದೆ. ಕುಮಾರಿಯು, ದಿನದಲ್ಲಿ ಎರಡು ಬಾರಿ, ಸರ್ವಾಲಂಕಾರಭೂಷಿತೆಯಾಗಿ ಆ ಕಿಟಕಿಯಲ್ಲಿ ಕಾಣಿಸಿಕೊಳ್ಳಬೇಕು; ಭಕ್ತಾದಿಗಳಿಗೆ ಆಶೀರ್ವಾದ ಮಾಡಬೇಕು. ಆ ದಿನ ಅಲ್ಲಿ ಸೇರಿದ್ದ ಭಕ್ತರ ಜಂಗುಳಿಯಲ್ಲಿ ಬೆಂಗಳೂರಿನಿಂದ ಬಂದ ನಾವು ಹದಿನೈದು ಜನರೂ ಇದ್ದೆವು. ಆ ಮಗು ಒಂದೆರಡು ನಿಮಿಷ ಅಲ್ಲಿ ನಿಂತುಕೊಂಡು, ಕೈ ಎತ್ತಿ ಭಕ್ತರಿಗೆ ಆಶೀರ್ವಾದಮಾಡಿ ಮತ್ತೆ ಒಳಗೆ ಹೋಯಿತು.
 
 
ಆ ಮಂದಿರವಾಸದ ಅವಧಿಯಲ್ಲಿ, ಅವಳ ಮತ್ತು ಅವಳ ಮೇಲ್ವಿಚಾರಕರ ಖರ್ಚು-ವೆಚ್ಚಗಳನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಈ ಮಂದಿರವಾಸವು, ಕುಮಾರಿಯು ಮೈನೆರೆದ ದಿನ ಮುಗಿಯುತ್ತದೆ. ಅಷ್ಟೇ ಅಲ್ಲ, ಬೇರೆ ಯಾವುದೇ ಕಾರಣದಿಂದ ಗಾಯವಾಗಿ, ಒಂದೆರಡು ಹನಿ ರಕ್ತ ಚೆಲ್ಲಿದರೂ ಅವಳ ಕುಮಾರಿಪಟ್ಟ ಮುಗಿದಂತೆಯೇ. ಆಮೇಲೆ, ಅವಳು ತನ್ನ ಮನೆಗೆ ಹಿಂದಿರುಗಬೇಕು. ಆ ಮಗುವಿಗೆ ಪುಟ್ಟ ಮೊತ್ತದ ಪಿಂಚಣಿ ಕೂಡ ಸಿಗುತ್ತದೆ. ಆದರೆ, ಅವಳು ಜೀವಮಾನಪರ್ಯಂತ ಮದುವೆಯಾಗುವಂತಿಲ್ಲ. ಆ ಅರ್ಥದಲ್ಲಿ ಅವಳು ಕೊನೆಯ ಉಸಿರು ಇರುವವರೆಗೆ ಕುಮಾರಿಯೇ. ಅವಳ ಮನಸ್ಸಿನಲ್ಲಿ ಯಾವ ಭಾವನೆ, ಯಾವ ವಿಚಾರಗಳು ಮಿಂಚಿ ಮಾಯವಾಗುತ್ತಿರಬಹುದು ಎನ್ನುವುದರ ಬಗ್ಗೆ, ಸಮುದಾಯಗಳು ತೋರಿಸುವ ದಿವ್ಯನಿರ್ಲಕ್ಷ್ಯ, ಅಚ್ಚರಿ ಹುಟ್ಟಿಸುವಂತಹುದು.
 
 
 
ನಾವು ಕೂಡ ಆ ಹುಡುಗಿಯನ್ನು ನೋಡಿದೆವು. ಆ ಮುಗ್ಧಮುಖದ ಹಾವಭಾವಗಳಿಗೆ ಸಾಕ್ಷಿಯಾದೆವು. ಒಂದಷ್ಟು ಹೊತ್ತು, ಮೂರು ಕಾಸು ಬೆಲೆಯಿಲ್ಲದ ನಿಟ್ಟುಸಿರು ಬಿಟ್ಟೆವು. ಸುತ್ತಮುತ್ತಲ ಶಿಲ್ಪ, ಚಿತ್ರಗಳ ಫೋಟೋ ಹಿಡಿದುಕೊಂಡು ಮನೆಗೆ ಬಂದೆವು. ಕರ್ನಾಟಕ ಕೂಡ ನೇಪಾಳಕ್ಕಿಂತ ಕಡಿಮೆಯಲ್ಲ ಎನ್ನುವುದು ನಮಗೂ ಗೊತ್ತು. ಧರ್ಮ, ಭಕ್ತಿ, ನಂಬಿಕೆ ಮುಂತಾದವುಗಳ ಹೆಸರಿನಲ್ಲಿ ನಮ್ಮ ನಡುವೆಯೇ ತುಂಬಿರುವ ಕಡುಕ್ರೌರ್ಯದ ಸಾಕ್ಷಿಯಾಗಿ ಆ ಮಗು ನನ್ನ ಮನಸ್ಸಿನಲ್ಲಿ ಈಗಲೂ ಮನೆಮಾಡಿದೆ.
 
*****
 

ಮಡಿವಾಳ ಮಾಚಮ್ಮನ ಕಥಾಪ್ರಸಂಗ...

 
ನಾನು ಹೇಳುತ್ತಿರುವ ಎರಡನೆಯ ಘಟನೆ: ಕಠ್ಮಂಡುವಿನಿಂದ ಇನ್ನೂರು ಕಿಲೋಮೀಟರ್ ದೂರವಿರುವ ಪೊಖಾರದಲ್ಲಿ ನಡೆದಿದ್ದು. ಮಂಜುಮುಸುಕಿದ ಸಂಜೆ. ಸಾಕಷ್ಟು ಜೋರಾಗಿ ಸುರಿಯುತ್ತಿರುವ ಮಳೆ. ಕಣ್ಣೆದುರಿಗೆ ಹರಿಯುತ್ತಿರುವ ನದಿಯಲ್ಲಿ ಬೋಟಿಂಗ್ ಹೋಗಬೇಕೆಂಬ ನಮ್ಮ ಆಸೆ ಕ್ಷಣಕ್ಷಣಕ್ಕೂ ಕರಗುತ್ತಿದೆ. ಆಗ, ನದಿಯ ಬದಿಯ ಷೆಲ್ಟರಿನಲ್ಲಿ ನಡುಗುತ್ತ ನಿಂತಿದ್ದ ನಮ್ಮಲ್ಲಿ ಕೆಲವರಿಗೆ ಕಾಣಿಸಿದ್ದು ಈ ನೋಟ. ನದಿಯ ದಂಡೆಯಲ್ಲಿಯೇ ಇನ್ನಷ್ಟು ಕೆಳಗೆ, ಮೊದಲು ಕಂಡಿದ್ದು ಎರಡು ಕೈಗಳು. ಆ ಕೈಗಳಲ್ಲಿ ಕಡುನೀಲಿ ಬಣ್ಣದ ಜೀನ್ಸ್ ಪ್ಯಾಂಟು. ಒಂದೆರಡು ಕ್ಷಣಗಳಲ್ಲಿ, ಆ ನೀರಿನಲ್ಲಿ ಆ ಪ್ಯಾಂಟನ್ನು ಒಗೆಯುತ್ತಿರುವ ಹದಿಹರೆಯದ ನೇಪಾಳೀ ಸುಂದರಿ. ಆ ಮಳೆಯಲ್ಲಿ ಹಾಗೆ ಬಟ್ಟೆಒಗೆಯುತ್ತಿರುವ ‘ಕರ್ಮಯೋಗಿನಿ’ಯನ್ನು ಕಂಡು ಅಚ್ಚರಿಯೆನಿಸಿತು. ನೇಪಾಳದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯೂನಿಸ್ಟ್ ಪಕ್ಷಕ್ಕೆ ಹೊಂದಿಕೊಳ್ಳುವಂತೆ, ಅವಳು ಕೆಂಪುಬಣ್ಣದ ಮೇಲುಡುಪು ಧರಿಸಿದ್ದಳು. ಉಳಿದಂತೆ ಯಥಾಪ್ರಕಾರ ಜೀನ್ಸು.
 
 
ಅವಳ ಕಥೆ ಅಲ್ಲಿಗೆ ಮುಗಿಯಲಿಲ್ಲ. ಕೆಲವು ನಿಮಿಷಗಳ ನಂತರ ಆ ನೀರಿನ ನಡುವೆ ಒಬ್ಬ ತರುಣ ಅವತರಿಸಿದ. ಸಾಕಷ್ಟು ಎತ್ತರದ ಕಡುಬಿಳಿಯ ಚೆಲುವ. ಅವನಿಗಂತೂ ಬನಿಯನ್ ಕೂಡ ಇಲ್ಲ. ಅವನು ಜೀನ್ಸ್ ಧರಿಸಿರುವ ‘ಅರೆ ಬಾಹುಬಲಿ’. ಆ ಮೇಲೆ ಶುರುವಾಯಿತು ಅವರ ಸ್ನಾನವೈಭವ. ಆ ಮಳೆಯಲ್ಲಿಯೇ ಒಂದು ಪ್ಲಾಸ್ಟಿಕ್ ಬಕೆಟ್ ತಂದಳು, ಅದರಲ್ಲಿ ನದಿಯ ನೀರನ್ನು ಮೊಗೆಮೊಗೆದು ಸುರಿದು ಅವನನ್ನು ಮೀಯಿಸಿದಳು. ಅವನ ಮೈಕೈಗಳನ್ನು ತಿಕ್ಕಿತಿಕ್ಕಿ ತೊಳೆದಳು. ನಾನು ಏನು ಕಡಿಮೆ ಎನ್ನುವಂತೆ ಅವನು ಕೂಡ ಆಗಾಗ ಅವಳಿಗೆ ಅಭಿಷೇಕ ಮಾಡುತ್ತಿದ್ದ. ಇದರ ನಡುವೆ ಪರಸ್ಪರ ನೀರೆರಚಿಕೊಳ್ಳುವ ಆಟ ಬೇರೆ. ಅಲ್ಲಿ ಸರಸ ಸಂಭಾಷಣೆ, ನಗು, ಹರ್ಷ, ಉಲ್ಲಾಸಗಳು ಕೋಡಿಒಡೆದು ಹರಿಯುತ್ತಿದ್ದವು. ಆದರೆ, ಪ್ರಮಾಣಮಾಡಿ ಹೇಳುತ್ತೇನೆ. ಇದೆಲ್ಲದರಲ್ಲಿ ಅಶ್ಲೀಲದ, ಲಂಪಟತೆಯ ಲವಲೇಶವೂ ಇರಲಿಲ್ಲ. ಇದ್ದದ್ದು ಕೇವಲ, ಕೇವಲ ಆನಂದ; ಅತ್ಯಂತ ಸಹಜವಾದ ಲೀಲೆ. ಗೆಳೆತನದ ಸಲಿಗೆಯಲ್ಲಿ ತೊಡಗಿದ್ದ ಆ ಎಳೆಯರಲ್ಲಿಯೂ ಅಷ್ಟೆ, ಪ್ರೀತಿಯಿಂದ ನೋಡುತ್ತಿದ್ದ ನಮ್ಮ ಕಣ್ಣುಗಳಲ್ಲಿಯೂ ಅಷ್ಟೆ.
 
 
ನಾವು, ನಮ್ಮಂತಹವರು ನೋಡುತ್ತಿದ್ದೇವೆ ಎನ್ನುವುದು ಅವರ ಸಹಜತೆಗೆ ಒಂದಿನಿತೂ ಭಂಗ ತರಲಿಲ್ಲ. ಅದು ನಿರ್ಲಜ್ಜೆ ಅಲ್ಲ, ಮುಗ್ಧಪ್ರೀತಿ. ದೇಶ-ಕಾಲಗಳ ಎಲ್ಲೆ ಮೀರಿ ನಮ್ಮೆದುರಿಗೆ ಅವತರಿಸಿದ ದೇವದಂಪತಿಗಳಂತೆ ಅವರು ನಮ್ಮೆದುರು ಮೆರೆದರು. ಕತೆ-ಕಾದಂಬರಿ ಓದಿರುವ ನನಗೆ, ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಐತ-ಪೀಂಚಲು ಜೋಡಿಯನ್ನು ಶಿವ-ಪಾರ್ವತಿಯರಿಗೆ ಹೋಲಿಸಿದ ನೆನಪು.
 
 
ಸ್ವಲ್ಪ ಹೊತ್ತಿನ ನಂತರ ಇನ್ನೊಬ್ಬ ಗೆಳೆಯ ಅವರನ್ನು ಸೇರಿಕೊಂಡ. ಅವನು ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ ಎನ್ನುವಂತೆ ಅವರು ನಡೆದುಕೊಂಡರು. ಯಾರಲ್ಲಿಯೂ ಕೆಟ್ಟ ಗಿಲ್ಟ್ ಇಲ್ಲ, ಕುತೂಹಲವಿಲ್ಲ. ಕಾಡುವ ಕಣ್ಣುಗಳ ‘ಇಣುಕುತೂಹಲ’ ಇಲ್ಲ. ಮಳೆ ನಿಂತಿತು. ನಾವು ಹೋಟೆಲ್ ಕಡೆ ಹೊರಟೆವು. ನಮ್ಮ ಪಕ್ಕದಲ್ಲೇ, ಆ ಮೂವರು, ಒಗೆದ ಬಟ್ಟೆಗಳೊಂದಿಗೆ, ಸೈಕಲ್ ತಳ್ಳಿಕೊಂಡು ಮುಂದೆಹೋದರು. ಅವರ ಮುಖಗಳ ಸೌಂದರ್ಯ, ಆಹ್ಲಾದ ಮತ್ತು ಮುಗ್ಧತೆಗಳು ನಮ್ಮೊಳಗಿನ ಕೊಳೆ ತೊಳೆದವು, ಒಳಗೆ ನೆಲೆಸಿದವು.
 
 
ಆದರೆ, ಇದೆಲ್ಲದರ ನಡುವೆ, ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ, ಕಲ್ಕತ್ತಾದ ಸೂಳೆಗೇರಿಗಳಲ್ಲಿ ಬಾಳುಸವೆಸುವ ಸಾವಿರ ಸಾವಿರ ನೇಪಾಳಿ ಹುಡುಗಿಯರ ನೆನಪೂ ಕಾಡುತ್ತಿತ್ತು. ನಮ್ಮ ನಾಗರಿಕತೆಯ ಬಗ್ಗೆ ನಾಚಿಕೆ ಎನ್ನಿಸುತ್ತಿತ್ತು.    
 
********
 
ಕುಮಾರಿ ಮಾತಾ ಮತ್ತು ಮಡಿವಾಳ ಮಾಚಮ್ಮರನ್ನು ಅಕ್ಕಪಕ್ಕ ಇಟ್ಟು ನೋಡಿದಾಗ ನನ್ನಲ್ಲಿ ಮೂಡಿದ ಆಲೋಚನೆಗಳು ನಿಮ್ಮಲ್ಲಿಯೂ ಮೂಡಿರಬಹುದು. ಧರ್ಮ, ನೀತಿ ಮತ್ತು ನಡತೆಯನ್ನು ಕುರಿತ ನಮ್ಮ ಕಲ್ಪನೆಗಳು ಎಲ್ಲಿ ಹುಟ್ಟುತ್ತವೆ? ಪ್ರೀತಿ, ಸಮಾನತೆ ಮತ್ತು ಅನುಕಂಪಗಳ ನೆಲೆಯಲ್ಲಿಯೋ ಅಥವಾ ಭಯ, ನಿಯಂತ್ರಣ ಹಾಗೂ ಶೋಷಣೆಗಳ ಆಳದಿಂದಲೋ? ನಮ್ಮ ಧರ್ಮಗ್ರಂಥಗಳಲ್ಲಿ ಇಡಿಕಿರಿದಿರುವ ದೊಡ್ಡ ದೊಡ್ಡ ಮಾತುಗಳ ಬಗ್ಗೆ ನಾನು ಹೇಳುತ್ತಿಲ್ಲ. ನಮ್ಮಿಂದಲೇ ಹುಟ್ಟಿ, ನಮ್ಮನ್ನೇ ಆಳುತ್ತಿರುವ ನಂಬಿಕೆಗಳು, ಆಚರಣೆಗಳು ಮತ್ತು ವರ್ತನೆಗಳ ಬಗ್ಗೆ ಮಾತಾಡುತ್ತಿದ್ದೇನೆ. ಇವುಗಳಲ್ಲಿ ಅಡಗಿರುವ ಕ್ರೌರ್ಯ ಮತ್ತು ಅಮಾನವೀಯತೆಗಳ ಬಗ್ಗೆ ನಾವು ಕುರುಡಾಗಿದ್ದೇವೆ. ಕಳೆದ ಎರಡು ದಶಕಗಳಲ್ಲಿ ಇನ್ನಷ್ಟು, ಮತ್ತಷ್ಟು ಕುರುಡಾಗಿದ್ದೇವೆ. ನಾವು ಉಳಿದವರ ಮೇಲೆ ಹೇರುವ ನೈತಿಕತೆಯ ಮಾನದಂಡಗಳು ವಿಶ್ವವ್ಯಾಪಿಯಾದ ಸತ್ಯವೇನೋ, ಉಳಿದುದೆಲ್ಲವೂ ಹೊಲಸೇನೋ ಎನ್ನುವಂತೆ ವರ್ತಿಸುತ್ತೇವೆ. ‘ಮಗ್ದಲದ ಮರಿಯೆ’ಯರ (Mary of Magdalene) ಮೇಲೆ ಕಲ್ಲೆಸೆಯಲು ಸದಾ ಸಿದ್ಧರಾಗಿರುತ್ತೇವೆ. 
 
 
ಈಚಿನ ವರ್ಷಗಳಲ್ಲಿ ನಮ್ಮ ದೃಶ್ಯಮಾಧ್ಯಮಗಳು ಇಂತಹ ಸಂಗತಿಗಳನ್ನು ವೈಭವೀಕರಿಸುತ್ತಿರುವ ಬಗೆಯು ಅಸಹ್ಯ-ಅಚ್ಚರಿಗಳನ್ನು ಮೂಡಿಸುತ್ತದೆ. ನಿಜವಾದ ಸಂತೋಷವನ್ನು ಅನುಭವಿಸಲು ಬೇಕಾದ ಮುಗ್ಧತೆ, ಮುಕ್ತತೆಗಳನ್ನು ಕಳೆದುಕೊಂಡಿರುವ, ನಾವು ಮತ್ತು ನಮ್ಮ ಸಮಾಜ ಎಲ್ಲರನ್ನೂ ಉಸಿರುಕಟ್ಟಿಸುತ್ತಿವೆಯೇ? ಸ್ವಾತಂತ್ರ್ಯ ಮತ್ತು ಸಮಾನತೆಗಳ ಮಾತುಗಳನ್ನು ಆಡುತ್ತಲೇ, ನಮ್ಮ ಸುತ್ತಲೂ ಇರುವ ಪ್ರತಿಯೊಬ್ಬರ ಬಗ್ಗೆಯೂ ನಮ್ಮ ನಿಲುವುಗಳನ್ನು ಘೋಷಿಸುತ್ತಾ, ಟೀಕೆ-ಟಿಪ್ಪಣಿಗಳನ್ನು ಹೇರುತ್ತಾ ಹೋಗುವುದು ಎಷ್ಟರ ಮಟ್ಟಿಗೆ ಸರಿ?
 
ಕುಮಾರಿ ಮಾತಾ ಅವರ ಮೆರವಣಿಗೆ ಮತ್ತು ಬದುಕನ್ನು ತೋರಿಸುವ ವೀಡಿಯೋ ಲಿಂಕನ್ನು ಇಲ್ಲಿ ಕೊಟ್ಟಿದ್ದೇನೆ.
 
 
 
 
 
Copyright © 2011 Neemgrove Media
All Rights Reserved