ಬೆಳ್ಳಿಗಿಂತ ಬೆಲೆಕೊಡಿದಕೆ-ಬೆಳ್ಳುಳ್ಳಿ
ಲಿಲ್ಲಿ ಕುಟುಂಬಕ್ಕೆ ಸೇರಿ, ಭೂಮಿಯೊಳಗೆ ಅಡಗಿ ಬೆಳೆಯುವ ಬಿಳಿ ಸುಂದರಿ ಬೆಳ್ಳುಳ್ಳಿಯನ್ನು ಭೂಮಿಯ ಮೇಲುಳಿದಿರುವ ಅಮೃತದ ತೊಟ್ಟು ಎನಬಹುದು. ಈಕೆ ಈರುಳ್ಳಿಯ ಸೋದರ ಸಂಬಂಧಿ. ೫೦೦೦ ವರ್ಷಗಳಿಂದ ಆಹಾರ, ಔಷಧಿಯಾಗಿ ಚಾಲ್ತಿಯಲ್ಲಿರುವ ಬೆಳ್ಳುಳ್ಳಿ ಮೊದಲು ಕಂಡುಬಂದಿದ್ದು ಈಜಿಪ್ಟಿನಲ್ಲಿ ಎಂದು ಹೇಳಲಾಗುತ್ತದೆ. ಪುರಾತನ ಈಜಿಪ್ಷಿಯನ್ನರು ಬೆಳ್ಳುಳ್ಳಿಯನ್ನು ಅವರ ದೇವ ’ಪರೋ’ಹ’ರ ದೇಗುಲಗಳ ಮೇಲೆ ಇಡುತ್ತಿದ್ದರಂತೆ. ಹಾಗೇ ಎಡೆಬಿಡದೆ ಪಿರಮಿಡ್ಡುಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದ ಕೂಲಿಗಾರರಿಗೆ ಶಕ್ತಿವರ್ಧಕವಾಗಿ ತಿನ್ನಲು ಕೊಡಲಾಗುತ್ತಿತ್ತಂತೆ. ಈಜಿಪ್ಟಿನಿಂದ ಗ್ರೀಕರು ರೋಮನ್ನರನ್ನು ತಲುಪಿದ ಬೆಳ್ಳುಳ್ಳಿಗೆ ಅಲ್ಲಿಯೂ ಅದೇ ಆದರ. ಗ್ರೀಕ್, ರೋಮಿನ ಕ್ರೀಡಾಪಟುಗಳು ತಮ್ಮ ಕ್ರೀಡೆಗಳಲ್ಲಿ ಭಾಗವಹಿಸುವ ಮುನ್ನ ಮತ್ತು ಅಲ್ಲಿನ ಸೈನಿಕರು ಯುದ್ಧಕ್ಕೆ ಹೊರಡುವ ಮುನ್ನ ಚನ್ನಾಗಿ ಬೆಳ್ಳುಳ್ಳಿಯನ್ನು ಸೇವಿಸುತ್ತಿದ್ದರೆಂದು ಹೇಳಲಾಗುತ್ತದೆ. ತದನಂತರ ಭಾರತ, ಚೀನಾ, ಯೂರೋಪ್ ಮತ್ತಿತರ ಖಂಡಗಳಿಗೆ ಬೆಳ್ಳುಳ್ಳಿ ಹರಡಿತೆನ್ನಲಾಗಿದೆ. ಈಗಲೂ ಭಾರತ, ಯೂರೋಪಿನ ಜನಪದರು ದುರಾದೃಷ್ಟ-ಕೆಟ್ಟ ದೄಷ್ಟಿಯನ್ನು ತಡೆಯಲು, ವ್ಯಾಂಪೈರುಗಳೆಂಬ ಕ್ಷುದ್ರಶಕ್ತಿಯನ್ನು ಓಡಿಸಲು ಮನೆಗಳಲ್ಲಿ ಬೆಳ್ಳುಳ್ಳಿಯನ್ನು ನೇತುಹಾಕುವುದು ಕಂಡು ಬರುತ್ತದೆ.
ವಿಶ್ವವ್ಯಾಪಿಯಾಗಿ ತನ್ನ ಔಷಧೀಯ ಗುಣಗಳಿಗೆ ಮನೆಮಾತಾಗಿರುವ ಬೆಳ್ಳುಳ್ಳಿಯನ್ನು ಈಗ ಎಲ್ಲ ದೇಶಗಳಲ್ಲೂ, ಎಲ್ಲ ಆಹಾರ ಸಂಸ್ಕೃತಿಗಳ ಜನರೂ ಒಂದಿಲ್ಲೊಂದು ರೀತಿಯಲ್ಲಿ ಬಳಸುತ್ತಾರೆ. ಈಗಲೂ ದಕ್ಷಿಣ ಭಾರತದ ಹಳ್ಳಿಗಳಲ್ಲಿ ಅಥವಾ ಸಾಂಪ್ರದಾಯಿಕ, ಜನಪದ ಆಹಾರ ಪದ್ಧತಿಯನ್ನು ಅನುಸರಿಸುವ ಮನೆಗಳಲ್ಲಿ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿಯನ್ನು, ಒಂದು ಚಮಚ, ದಿನನಿತ್ಯ ತಿನ್ನುವ ಅಭ್ಯಾಸವಿರುವುದನ್ನು ನೀವು ಗಮನಿಸಬಹುದು.
ಹಾಗದರೆ...ಏನೆಲ್ಲಾ ಇದೆ ಈ ಬೆಳ್ಳುಳ್ಳಿಯಲ್ಲಿ?
ಒಂದೇ ಒಂದು ಹಿಕಳು ಬೆಳ್ಳುಳ್ಳಿಯಲ್ಲಿ ಶೇಕಡಾ ೯.೩ ರಷ್ಟು ವಿಟಮಿನ್ ಸಿ (ಸಿ ಅನ್ನಾಂಗ), ಶೇ ೧೫ ರಷ್ಟು ಮ್ಯಾಂಗನೀಸ್, ಶೇ ೧೧ ರಷ್ಟು ವಿಟಮಿನ್ ಬಿ೬, ಶೇ ೩.೬ ರಷ್ಟು ಸೆಲೇನಿಯಮ್, ಶೇ ೩.೨ ರಷ್ಟು ಕ್ಯಾಲ್ಷಿಯಂ, ಶೇ ೩.೧ ರಷ್ಟು ಟ್ರಿಪ್ಟೋಫನ್, ಶೇ ೨.೭ ರಷ್ಟು ಫೋಸ್ಪರಸ್, ಶೇ ೬ ರಷ್ಟು ಇಟಮಿನ್ ಬಿ ೧೨ ಮತ್ತು ಶೇ ೨.೫ ರಷ್ಟು ತಾಮ್ರ ಅಥವಾ ಕಾಪರ್ ಇರುತ್ತದೆ!! ಇಷ್ಟೆಲ್ಲಾ ಪೋಷಕಾಂಶಗಳಿರುವ ಒಂದು ಹಿಕಳು ಕೇವಲ ೧ ಕ್ಯಾಲೊರಿ ಇರುತ್ತದೆ!!
ಬೆಳ್ಳುಳ್ಳಿಯನ್ನು ಜಜ್ಜುವುದರಿಂದ ಅಥವಾ ಕತ್ತರಿಸುವುದರಿಂದ ಅದರಲ್ಲಿನ ಎನ್ಜ಼ೈಮುಗಳನ್ನು ಪ್ರೇರೇಪಿಸಿದಂತಾಗಿ ಬೆಳ್ಳುಳ್ಳಿಯಲ್ಲಿರುವ ’ಆಲ್ಲಿನ್’ ಎಂಬ ಪೈಥೋನ್ಯುಟ್ರಿಯಂಟ್ ’ಆಲ್ಲಿಸಿನ್’ ಎಂದು ರೂಪಾಂತರಹೊಂದುತ್ತದೆ. ಈ ’ಆಲ್ಲಿಸಿನ್’ ಬೆಳ್ಳುಳ್ಳಿಯ ಸಕಲ ಔಷಧೀಯ ಗುಣಗಳಿಗೆ ಮೂಲ. ಹೆಚ್ಚಿದ ಅಥವಾ ಜಜ್ಜಿದ ಬೆಳ್ಳುಳ್ಳಿಯನ್ನು ೪-೫ ನಿಮಿಷ ಹಾಗೇ ಬಿಟ್ಟುಬಿಡುವುದರಿಂದ ಅದರಲ್ಲಿನ ಹೆಚ್ಚಿನ ’ಆಲ್ಲಿಸಿನ್’ ಉಂಟಾಗಲು ಅನುವು ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಬೆಳ್ಳುಳ್ಳಿಯನ್ನು ಹೆಚ್ಚಿ/ಜಜ್ಜಿ ತಕ್ಷಣ ತಿನ್ನಲು ಅಥವಾ ಅಡಿಗೆಗೆ ಉಪಯೋಗಿಸುವುದಕ್ಕಿಂತ ಅದನ್ನು ೪-೫ ನಿಮಿಷ ಹಾಗೇ ತೆರೆದು ಬಿಟ್ಟಿದ್ದು ನಂತರ ಉಪಯೋಗಿಸಿದರೆ ಔಷಧೀಯ ಉಪಯೋಗ ಹೆಚ್ಚು.
ಆದರೆ ಬೆಳ್ಳುಳ್ಳಿಯನ್ನು ಜಜ್ಜಿ/ಹೆಚ್ಚಿ ಅದನ್ನು ಮೈಕ್ರೋವೇವ್ ಮಾಡಿದರೆ ಬೆಳ್ಳುಳ್ಳಿಯ ಔಷಧೀಯ ಸತ್ವಗಳು ನಾಶಹೊಂದುತ್ತವೆ!
ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಂದ ರಕ್ಷಣೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೆಳ್ಳುಳ್ಳಿಯನ್ನು ಮುಖ್ಯವಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಬ್ಯಾಕ್ಟೀರಿಯಾ, ವೈರಸ್ ಗಳ ಸೋಂಕನ್ನು ಯಶಸ್ವಿಯಾಗಿ ತಡೆಯುವುದರ ಜೊತೆಗೇ ಫಂಗೈ, ಯೀಸ್ಟ್ ಸೋಂಕು ಮತ್ತು ಹೊಟ್ಟೆಯಲ್ಲಿ ಬಾಧೆ ಕೊಡುವ ಜಂತುಗಳನ್ನೂ ತಡೆಯಬಲ್ಲದು. ಬಹುಕಾಲ ಆಂಟಿಬಯಾಟಿಕ್ಸ್ ಗಳನ್ನು ಸೇವಿಸಿ, ಬ್ಯಾಕ್ಟೀರಿಯಾಗಳಿಗೆ ನಿರೋಧಕ ಶಕ್ತಿಯನ್ನು ಕಳೆದುಕೊಂಡಿರುವಂತವರು ಬೆಳ್ಳುಳ್ಳಿಯ ಸೇವನೆ ಶುರು ಮಾಡಿದರೆ, ಬೆಳ್ಳುಳ್ಳಿ ಅವರಲ್ಲಿ ಮತ್ತೆ ಬ್ಯಾಕ್ಟೀರಿಯಾ ನಿರೋಧಕ ಶಕ್ತಿಯನ್ನು ಪೋಷಿಸಬಲ್ಲದು!
ಬೆಳ್ಳುಳ್ಳಿ ರಕ್ತದೊತ್ತಡವನ್ನು ಕ್ಷಿಪ್ರವಾಗಿ ಕಡಿಮೆ ಮಾಡುವ ಗುಣವನ್ನು ಹೊಂದಿದೆ. ದೇಹದಲ್ಲಿರುವ ಆಂಜಿಯೋಟೆನ್ಸಿನ್-೨ ಎಂಬ ಅಂಶ, ದೇಹಕ್ಕೆ ಆಹಾರದ ಮೂಲಕ ಸೇರುವ ಪೆಪ್ಟೈಡ್ ಎಂಬ ಪ್ರೊಟೀನ್ ಜೊತೆಗೆ ಸೇರಿ ರಕ್ತನಾಳಗಳನ್ನು ಕುಗ್ಗಿಸುವ ಕೆಲಸ ಮಾಡುತ್ತದೆ. ಆಗ ಸಾಧಾರಣವಾಗಿಯೇ ರಕ್ತದ ಸಲೀಸಾದ ಹರಿವಿಗೆ ತೊಂದರೆಯಾಗಿ ರಕ್ತದ ಒತ್ತಡ ಕಂಡುಬರುತ್ತದೆ. ಆದರೆ ಬೆಳ್ಳುಳ್ಳಿಯಲ್ಲಿರುವ ’ಆಲ್ಲಿನ್’ ಆಂಜಿಯೋಟೆನ್ಸಿನ್ ನ ಆಟವನ್ನು ತಡೆಗಟ್ಟುತ್ತದೆ. ಹೀಗಾಗಿ ರಕ್ತನಾಳಗಳು ಸುವ್ಯವಸ್ಥೆಯಲ್ಲಿ ಉಳಿದು ರಕ್ತದೊತ್ತಡ ನಿಯಂತಿತವಾಗುತ್ತದೆ.
ಬೆಳ್ಳುಳ್ಳಿಯಲ್ಲಿ ಸಲ್ಫರ್ ಯುಕ್ತ ಮೋಲೆಕ್ಯೂಲ್ ಗಳಾದ ಪಾಲಿಸಲ್ಪೈಡ್ಸ್ ಗಳಿವೆ. ಇದರಲ್ಲಿರುವ ಸಲ್ಫರ್ ಅಂಶಳಾದ ೧,೨ ವಿನಿಲ್ಡಿಥಿನ್ ಮತ್ತು ಥಿಯಾಕ್ರೆಮೋನ್ ಗಳು ಬೆಳ್ಳುಳ್ಳಿಯನ್ನು ಅಮೃತದ ಪಟ್ಟಕ್ಕೇರಿಸಲು ಸಹಾಯ ಮಾಡುತ್ತವೆ ಎನ್ನಬಹುದು. ಈ ಪಾಲಿಸಲ್ಫೈಡ್ ಗಳು ದೇಹದಲ್ಲಿನ ಕೆಂಪುರಕ್ತಕಣಗಳನ್ನು ಸೇರಿದಾಗ, ಕೆಂಪುರಕ್ತಕಣಗಳು ಹೈಡ್ರೋಜನ್ ಸಲ್ಫೈಡ್ (H2S) ಎಂಬ ಅನಿಲವನ್ನು ಉತ್ಪತ್ತಿ ಮಾಡುತ್ತವೆ. ವಿನಿಲ್ಡಿಥಿನ್ ಮತ್ತು ಥಿಯಾಕ್ರೆಮೋನ್ ಗಳಿಂದ ಬೆಳ್ಳುಳ್ಳಿಯಲ್ಲಿ ಉತ್ಪತ್ತಿಯಾಗುವ ಹೈಡ್ರೋಜನ್ ಸಲ್ಫೈಡ್ ಅನಿಲ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವಿಜ್ನಾನಿಗಳು ಸಾಬೀತು ಮಾಡಿದ್ದಾರೆ. ಬೆಳ್ಳುಳ್ಳಿ ರಕ್ತದ ಒತ್ತಡವನ್ನು ನಿಯಂತ್ರಿಸಿ, ರಕ್ತನಾಳಗಳು ಕಟ್ಟಿಕೊಳ್ಳದಂತೆ ತಡೆಯುವುದರ ಜೊತೆಗೇ ದೇಹದೊಳಗೆ ಸಂಚರಿಸುವ ರಕ್ತವು ಹೆಪ್ಪುಕಟ್ಟಿಕೊಳ್ಳದಂತೆಯೂ ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ ಒಂದು ಡಿಸಲ್ಫೈಡ್ ಅಂಶವಾದ ಅಜೋನ್ (Ajoene) ರಕ್ತಕಣಗಳನ್ನು (ಪ್ಲೇಟ್ಲೆಟ್) ಸುಸ್ಥಿತಿಯಲ್ಲಿ ಇಡುತ್ತದೆ. ಇದರ ಜೊತೆಗೇ ಬೆಳ್ಳುಳ್ಳಿ ರಕ್ತದಲ್ಲಿರುವ ಕೊಬ್ಬು, ಕೆಟ್ಟ ಕೊಲೆಸ್ಟ್ರಾಲ್ ಅಥವಾ ಟ್ರೈಗ್ಲಿಸರೈಡ್ಸ್ ಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಇದೆಲ್ಲ ಕಾರಣಗಳಿಂದಾಗಿಯೇ ಬೆಳ್ಳುಳ್ಳಿ ಹೃದಯದ ತೊಂದರೆಗಳಿಗೂ ಸಿದ್ದೌಷಧಿ! ಬೆಳ್ಳುಳ್ಳಿಯಲ್ಲಿರುವ ವಿಟಮಿನ್ ಸಿ, ವಿಟಮಿನ್ ಬಿ೬, ಸೆಲೆನಿಯಮ್ ಮತ್ತು ಮ್ಯಾಂಗನೀಸ್ ಗಳು ರಕ್ತದ ಹರಿವನ್ನು ಸ್ವಸ್ಥವಾಗಿಡುತ್ತವೆ. ರಕ್ತದಲ್ಲಿನ ಒಳ್ಳೆಯ ಕೊಬ್ಬಿನಾಂಶ ಅಥವಾ ಎಲ್.ಡಿ.ಎಲ್ ಕೊಲೆಸ್ಟ್ರಾಲ್ ಅನ್ನು ಸಂರಕ್ಷಿಸುತ್ತವೆ.
ಪ್ರತಿನಿತ್ಯ ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ಕ್ಯಾನ್ಸರ್ ನಿಂದಲೂ ದೂರವಿರಬಹುದು. ಬೆಳ್ಳುಳ್ಳಿಯಲ್ಲಿರುವ ’ಆಲಿಲ್ ಸಲ್ಫೈಡ್’ ಗಳು ಎಲ್ಲ ಬಗೆಯ ಕ್ಯಾನ್ಸರ್ಗಳನ್ನೂ ತಡೆಗಟ್ಟುವುದರ ಜೊತೆಗೇ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗಳನ್ನು ಯಶಸ್ವಿಯಾಗಿ ನಿಯಂತ್ರಿಸುತ್ತವೆ. ಮಾಂಸವನ್ನು ಅತಿಯಾದ ಹೆಚ್ಚಿನ ಉಷ್ಣತೆಯಲ್ಲಿ ಬೇಯಿಸಿದಾಗ ಅದರಲ್ಲಿ ಹೆಟೆರೋಸಿಕ್ಲಿಕ್ ಎನ್ನುವ ಕ್ಯಾನ್ಸರ್ ಸಂಬಂಧಿ ಅಂಶಗಳು ಉತ್ಪತ್ತಿಯಾಗುತ್ತವೆ. ಹೀಗೆ ಉತ್ಪತ್ತಿಯಾಗುವ ’ಫಿಪ್’ (PhIP) ಎಂಬ ಹೆಟೆರೋಸಿಕ್ಲಿಕ್ ಅಂಶ ದೇಹದಲ್ಲಿ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಿದೆ ಎಂದು ವೈದ್ಯಶಾಸ್ತ್ರ ಅಭಿಪ್ರಾಯಪಡುತ್ತದೆ. ಆದರೆ ಬೆಳ್ಳುಳ್ಳಿಯಲ್ಲಿರುವ ’ಡಿಆಲ್ಲಿಲ್’ ಎನ್ನುವ ಮತ್ತೊಂದು ಸಲ್ಪರ್ ಅಂಶ ಬೇಯಿಸಿದ ಮಾಂಸದಲ್ಲಿ ’ಫಿಪ್’ ಉಂಟಾಗುವುದನ್ನು ತಡೆದುಬಿಡುತ್ತದೆ!
ಬೆಳ್ಳುಳ್ಳಿಯಲ್ಲಿರುವ ಸೆಲೆನಿಯಮ್ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಆಂಟೈಆಕ್ಸಿಡೆಂಟ್ಸ್ ಗಳನ್ನು ಒದಗಿಸುತ್ತವೆ. ದೇಹವು ಆಂತರಿಕವಾಗಿ ಉತ್ಪಾದಿಸುವ ’ಗ್ಲುಟಾಥಿಯೋನ್ ಪೆರಾಕ್ಸೈಡ್’ ಎಂಬ ಅತ್ಯಮೂಲ್ಯವಾದ ಆಂಟೈಆಕ್ಸಿಡೆಂಟ್ ನ ಉತ್ಪಾದನೆಯನ್ನು ಹೆಚ್ಚಿಸಲು ಸೆಲೆನಿಯಮ್ ಪೂರಕವಾಗಿದೆ. ಬೆಳ್ಳುಳ್ಳಿಯಲ್ಲಿರುವ ಡಿಆಲ್ಲಿಲ್ ಸಲ್ಪೈಡ್ ಮತ್ತು ಥಯಾಕ್ರೆಮೋನ್ ಗಳು ಮೂಳೆಗಳ, ಮಜ್ಜೆಗಳ ಚುರುಕನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಹಾಗೇ ದೇಹದಲ್ಲಿ ಯಾವುದೇ ಬಗೆಯ ಊತ ಕಂಡು ಬಂದಾಗ ಇವು ಊತವನ್ನು ಶಮನ ಮಾಡುವ ಗುಣವನ್ನೂ ಹೊಂದಿವೆ.
ಸ್ವಚ್ಚವಾದ ರಕ್ತ, ಸುಲಲಿತವಾದ ಹರಿವು, ಸುಸ್ಥಿತಿಯಲ್ಲಿರುವ ರಕ್ತನಾಳಗಳು, ಸಮಾಧಾನದಿಂದ ಬಡಿದು ಕೆಲಸ ಮಾಡುವ ಹೃದಯ, ಸ್ವಸ್ಥ ದೇಹ ಮತ್ತು ಆರೋಗ್ಯಕರ ಮನಸ್ಸು-ಈ ಅದೃಷ್ಟಕರ ಕಾಂಬಿನೇಷನ್ನು ನಿಮಗೂ ಬೇಕಾದಲ್ಲಿ ಬೆಳ್ಳುಳ್ಳಿಯನ್ನು ಅಡುಗೆಮನೆಗೂ ನಂತರ ನಿಯಮಿತವಾಗಿ ನಿಮ್ಮ ದೇಹಕ್ಕೂ ತುಂಬಿಸಿಕೊಳ್ಳಬಹುದು.
ಸುಲಭವಾಗಿ ಬೆಳ್ಳುಳ್ಳಿಯನ್ನು ಔಷಧೀಯವಾಗಿ ಸೇವಿಸುವ ಬಗೆ.
ಒಂದಷ್ಟು ಬೆಳ್ಳುಳ್ಳಿಗಳನ್ನು ಬಿಡಿಸಿಕೊಂಡು ಜಜ್ಜಿಟ್ಟುಕೊಳ್ಳಿ. ೧ ಟೇಬಲ್ ಸ್ಪೂನ್ ಬೆಣ್ಣೆ ಕಾಯಿಸಿದ ತುಪ್ಪವನ್ನು ಒಂದು ಸಣ್ಣ ಬಾಣಲಿಗೆ ಹಾಕಿ ಅದನ್ನು ಬೆಚ್ಚಗೆ ಮಾಡಿಕೊಳ್ಳಿ. ಈ ತುಪ್ಪಕ್ಕೆ ೧/೪ ಟೀ ಸ್ಪೂನ್ ಅರಿಸಿನವನ್ನು ಹಾಕಿ. ಜಜ್ಜಿಟ್ಟ ಬೆಳ್ಳುಳ್ಳಿಯನ್ನು ಅದಕ್ಕೆ ಹಾಕಿ ಒಂದೇ ನಿಮಿಷ ಅದನ್ನು ತುಪ್ಪದಲ್ಲಿ ಹುರಿದು (ಹೆಚ್ಚು ಹುರಿದಾಗ ಬೆಳ್ಳುಳ್ಳಿ ಕರಕಲು ಮತ್ತು ಕಹಿಯಾಗುತ್ತದೆ) ಬಾಣಲಿಯನ್ನು ಬಿಸಿಯಿಂದ ತೆಗೆದುಬಿಡಿ. ತುಪ್ಪ ಬಿಸಿ ಕಡಿಮೆಯಾದಾಗ ಟೀ ಸೋಸುವ ಉಪಕರಣವನ್ನು ಬಳಸಿ ಬೆಳ್ಳುಳ್ಳಿಯನ್ನು ತುಪ್ಪದಿಂದ ಸೋಸಿ ತೆಗೆದಿಟ್ಟುಕೊಳ್ಳಿ. ಹೀಗೆ ತುಪ್ಪದಲ್ಲಿ ಹಿತವಾಗಿ ಬಾಡಿಸಿದ ಬೆಳ್ಳುಳ್ಳಿಯನ್ನು ದಿನಾ ಒಂದು ಚಮಚ ಸೇವಿಸಿ. ಇದನ್ನು ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೂ ಸಣ್ಣ ಪ್ರಮಾಣದಲ್ಲಿ ಕೊಡಬಹುದು. ಬೆಳ್ಳುಳ್ಳಿ ಪರಿಮಳದ ತುಪ್ಪವನ್ನು ಚಪಾತಿ, ಅನ್ನ, ರೊಟ್ಟಿಯ ಜೊತೆಯಲ್ಲಿ ಬಳಸಬಹುದು.
|