ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ಸ್ವಿಟ್ಜ಼ರ್ ಲ್ಯಾಂಡಿನಲ್ಲಿ ಸೋಪಿಗಾಗಿ ಜಗಳ!!

ಟೋನಿ
 
ರೂಮಿನ ವ್ಯವಸ್ಥೆ ಮಾಡುತ್ತೇನೆಂದು ನಮ್ಮನ್ನು ಕೂರಿಸಿ ಹೋದ ಜ್ಯೂಜ಼ರ್ ಸುಮಾರು ಹೊತ್ತಾದರೂ ಬರಲಿಲ್ಲ. ಸೋಫಾ ಮೇಲೆ ಕೂತಿದ್ದ ನನ್ನ ರೂಮ್ ಮೇಟ್ ಆಗಲೇ ಗೊರಕೆ ಹೊಡೆಯತೊಡಗಿದ್ದರು. ನಿಶ್ಯಬ್ಧವಾಗಿದ್ದ ವಾತಾವರಣದಲ್ಲಿ ಅವರ ಗೊರಕೆಯ ಸದ್ದು ಮಾರ್ದನಿಸುತ್ತಿತ್ತು. ರೂಮಿಗೆ ಹೋಗಿ ಬಟ್ಟೆ ಬದಲಿಸಿ ಫ್ರೆಶ್ಶಾಗಿ ಕೆಳಗಿಳಿಯತೊಡಗಿದ್ದ ನಮ್ಮವರೆಲ್ಲಾ ಆಶ್ಚರ್ಯದಿಂದ ನಮ್ಮನ್ನೇ ದಿಟ್ಟಿಸತೊಡಗಿದ್ದರು. ನಾವಿಬ್ಬರೂ ಸುಮ್ಮನೆ ರಿಸೆಪ್ಶನಿಸ್ಟ್ ಬಳಿ ಕೂತಿದ್ದರೆ ಅವರ್ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನಾವು ನಮ್ಮ ಲಗೇಜಿನ ಸಮೇತ ಅಲ್ಲಿ ಕೂತಿದ್ದುದು, ನನ್ನ ರೂಮ್ ಮೇಟ್ ಸೋಫಾದ ಮೇಲೆಯೇ ಶಬ್ದ ಹೊರಡಿಸಿಕೊಂಡು ಶಯನಿಸುತ್ತಿದ್ದುದು ಕಂಡು ಅವರಿಗೆಲ್ಲಾ ಆಶ್ಚರ್ಯವೆನಿಸಿತ್ತು.
 
 
 
ಭಟ್ಟರು ಹತ್ತಿರ ಬಂದವರೇ ’ಇದೇನ್ ಮಾರಾಯ್ರಾ, ನೈಟ್ ರೌಂಡ್ಸ್ ಹೊರಟ್ರಾ ಹೆಂಗೆ’ ಅಂದ್ರು. ’ರೌಂಡ್ಸೂ ಇಲ್ಲ ಎಂಥದೂ ಇಲ್ಲಾ ಕಣ್ರೀ, ಜ್ಯೂಜ಼ರ್ ನಮಗೆ ಸಿಂಗಲ್ ರೂಮ್ ಕೊಟ್ಟು ಅದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಮಲಗಿ ಅಂದ. ಆ ಸಣ್ಣ ರೂಮಿನಲ್ಲಿ ಹೇಗೆ ಮಲಗಕ್ಕಾಗ್ತದೆ ಆಗಲ್ಲ ನಮಗೆ ಬೇರೆ ರೂಮ್ ಕೊಡು ಅಂಥ ಕೇಳಿದ್ದಕ್ಕೆ ಆತ ಬೇರೆ ರೂಮಿನ ವ್ಯವಸ್ಥೆ ಮಾಡುವುದಾಗಿ ಹೇಳಿ ಹೋದವ ಬರಲೇ ಇಲ್ಲ ಕಣ್ರೀ, ಅವನನ್ನು ಕಾಯ್ಕಂಡ್ ಕೂತಿದ್ದೀವಿ’ ಅಂದೆ. ’ಮತ್ತೆ ಇವರು ಇಲ್ಲೇ ಗೊರಕೆ ಹೊಡೀತಿದ್ದಾರಲ್ಲಾ, ಹೋಗಿ ರೂಮಲ್ಲಾದರೂ ಮಲಗದಲ್ವಾ, ಹೆಂಗೋ ಅಡ್ಜಸ್ಟ್ ಮಾಡ್ಕೊಳ್ಳೀ’ ಅಂದ್ರು. ನನಗೆ ರೇಗಿ ’ರೀ ಭಟ್ರೇ, ಬನ್ರೀ’ ಅಂಥ ಅವರನ್ನು ನಮಗೆ ಕೊಟ್ಟಿದ್ದ ರೂಮನ್ನು ತೋರಿಸಲು ಕರೆದುಕೊಂಡು ಹೋದೆ. ರೂಮನ್ನು ನೋಡಿದ ಭಟ್ಟರು ’ಛೆಛೆ! ಇದು ಸಿಂಗಲ್ ಮಂಚ. ಇಲ್ಲಿ ಹೇಗೆ ಇಬ್ಬರು ಮಲಗಲಿಕ್ಕಾಗ್ತದೆ ಮಾರಾಯ್ರೆ?! ಆಗಲ್ಲ ಬಿಡಿ’ ಅಂದ್ರು.
 
 
 
ನಮ್ಮ ಪ್ರಾಬ್ಲಮ್ ಒಬ್ಬರಿಗಾದ್ರೂ ಅರ್ಥವಾಯಿತೆನ್ನುವ ಸಮಾಧಾನದಲ್ಲಿ ವಾಪಸ್ ರಿಸೆಪ್ಶನಿಸ್ಟ್ ಬಳಿಗೆ ಹಿಂದಿರುಗಿದಾಗ ನನ್ನ ರೂಮ್ ಮೇಟ್ ಗೊರಕೆ ಸೈರನ್ನಿನಂತಾಗಿತ್ತು. ’ನೋಡ್ರೀ ಭಟ್ರೇ, ಹೆಂಗಿದೆ ಗೊರಕೆ?! ಈ ಲೌಡ್ ಸ್ಪೀಕರ್ ಸೌಂಡ್ ಕೇಳ್ತಾ ಆ ಸಣ್ಣ ಮಂಚದ ಮೇಲೆ ಹೇಗೆ ಮಲಗೋದ್ರೀ?’ ಅಂದೆ. ’ಛೆ, ಛೇ ಆಗಲ್ಲ ಬಿಡೀ ಮಾರಾಯ್ರಾ’ ಅಂದವರಿಗೆ ’ಒಂದ್ ಕೆಲಸ ಮಾಡಿ ಭಟ್ರೇ...ನೀವು ಹೇಗೂ ಫ಼ಾಮಿಲೀ ಇದ್ದೀರಾ, ಬೇಕಿದ್ರೆ ನೀವು ಈ ರೂಮಿನಲ್ಲಿ ಮಲಗಿ...ನಾವು ನಿಮ್ಮ ರೂಮಿಗೆ ಹೋಗ್ತೀವಿ’ ಅಂದೆ. ಇವನು ನನಗೇ ಈ ರೂಮನ್ನು ತಗಲಾಕುವಂತೆ ಕಾಣ್ತಾ ಇದೆಯಲ್ಲಾ ಎಂದುಕೊಂಡರೇನೋ ಕೂತಿದ್ದವರು ಸಡನ್ನಾಗಿ ಎದ್ದವರೇ ’ಓ...ನಮ್ಮ ಹೆಂಗಸರು ಕಾಯ್ತಾ ಇರ್ತರೆ ಮಾರಾಯ್ರಾ...ಸಿಗ್ತೇನೆ’ ಎಂದು ದಡದಡಾ ರೂಮಿನತ್ತ ಓಡಿದರು. ಅವರು ಹೊರಗೆ ಹೊಗಬೇಕೆಂದು ಬಂದವರು ನಾನು ರೂಮನ್ನು ಬದಲಾಯಿಸಿಕೊಳ್ಳೋಣವೆಂದು ಹೇಳಿದ್ದೇ ತಡ ತಾವು ಬಂದ ಉದ್ದೇಶವನ್ನೇ ಮರೆತು ಇನ್ನೆಲ್ಲಿ ನನಗೆ ಈ ರೂಮನ್ನು ಗಂಟು ಹಾಕುತ್ತಾರೋ ಎಂಬ ಆತಂಕದಿಂದ ತಮ್ಮ ರೂಮಿನತ್ತ ಓಡಿದ್ದರು.
 
 
 
ಹೋಗಿ ಬರುವವರೆಲ್ಲಾ ಯಾವುದೋ ಮ್ಯಾಗಜ಼ೀನ್ ಅನ್ನು ತಿರುವಿ ಹಾಕುತ್ತಿದ್ದ ನನ್ನನ್ನೂ, ಗೊರಕೆ ಹೊಡೆಯುತ್ತಿದ್ದ ನನ್ನ ರೂಮ್ ಮೇಟ್ ಅನ್ನೂ ನೋಡಿ ಯಾಕೆಂದು ವಿಚಾರಿಸತೊಡಗಿದ್ದರು. ನನಗಂತೂ ಕೇಳಿದವರಿಗೆಲ್ಲಾ ಕರಕಂಡು ಹೋಗಿ ನಮಗೆ ನೀಡಿದ್ದ ರೂಮನ್ನು ತೋರಿಸಿ, ನನ್ನ ರೂಮ್ ಮೇಟ್ ಗೊರಕೆಯ ಬಗ್ಗೆ ವಿವರಿಸಿ ಸಾಕಾಗಿ ಹೋಯ್ತು. ಹೇಗೋ ಅಡ್ಜಸ್ಟ್ ಮಾಡಿಕೊಳ್ಳಿರೆಂದು ಪುಕ್ಕಟೆ ಸಲಹೆ ನೀಡಿದವರೆಲ್ಲಾ  ರೂಮನ್ನು ನೋಡಿದ ನಂತರ ಇಲ್ಲಿ ಇಬ್ಬರು ಮಲಗಲು ಸಾಧ್ಯವೇ ಇಲ್ಲವೆಂದು ಹೇಳಿ ತಮಗೇ ಈ ರೂಮನ್ನು ತಗಲಾಕಿದರೆ ಕಷ್ಟವೆಂದು ತರಾತುರಿಯಲ್ಲಿ ತಮ್ಮ ತಮ್ಮ ರೂಮಿಗೆ ತೆರಳಿದ್ದರು.
 
 
 
ಒಂದು ಗಂಟೆ ಕಳೆದ ನಂತರ ಜ್ಯೂಜ಼ರ್ ಬಂದ. ಅವನು ನಾವು ರೂಮಿನಲ್ಲಿ ಮಲಗಿರಬಹುದೆಂದು ಭಾವಿಸಿದ್ದನೇನೋ ನಾವಿನ್ನೂ ರಿಸೆಪ್ಷನಿಸ್ಟ್ ಬಳಿಯೇ ಇದ್ದುದನ್ನು ಕಂಡು ಆಶ್ಚರ್ಯಗೊಂಡವನಂತೆ ’ಇದೇನ್ ಇಲ್ಲೇ ಕೂತಿದ್ದೀರಲ್ಲಾ’ ಅಂದ. ನನಗೆ ಸಿಟ್ಟು ಬಂದು ’ಅಲ್ಲಯ್ಯಾ, ಮತ್ತೊಂದು ರೂಮಿನ ವ್ಯವಸ್ಥೆ ಮಾಡುವುದಾಗಿ ಹೇಳಿ ಹೋದವನು ಈಗ ಬಂದು ಇನ್ನೂ ಇಲ್ಲೇ ಇದ್ದೀರಾ ಅಂತಿದ್ದೀಯಲ್ಲಾ ಮೊದಲು ನನಗೆ ಬೇರೊಂದು ರೂಮ್ ಕೊಡು’ ಅಂದೆ. ಆತ ಹೋಟೆಲಿನ ಮೇನೇಜರ್ ಬಳಿಹೋಗಿ ಮತ್ತೊಂದು ರೂಮಿನ ಕೀ ತಂದು ಕೊಟ್ಟ. ಮಲಗಿದ್ದ ನನ್ನ ರೂಮ್ ಮೇಟ್ ಅನ್ನು ಏಳಿಸಿ ಮೊದಲು ನಮಗೆ ಕೊಟ್ಟಿದ್ದ ರೂಮಿಗೆ ಕಳಿಸಿ, ನಾನು ಮತ್ತೊಂದು ರೂಮಿಗೆ ಹೋದೆ. ಸಣ್ಣಗೆ ತುಂತುರು ಮಳೆ ಬೀಳುತ್ತಿದ್ದರಿಂದ ಹೊರಗೆ ಹೋಗಲು ಮನಸಾಗಲಿಲ್ಲ. ರೂಮಿನಲ್ಲಿ ಮಲಗಿದಾಗ ಬೇಗನೇ ನಿದ್ರೆ ಬರಲಿಲ್ಲ. ಯೂರೋಪ್ ಪ್ರವಾಸದುದ್ದಕ್ಕೂ ಮಲಗುವ ವೇಳೆ ನನ್ನ ರೂಮ್ ಮೇಟ್ ಗೊರಕೆಯ ಶಬ್ದ ಕೇಳಿ ಅಭ್ಯಾಸವಾಗಿದ್ದರಿಂದ ಇಂದು ಆ ಶಬ್ಧವಿಲ್ಲದ್ದರಿಂದಲೋ ಅಥವಾ ರಾತ್ರಿಯ ಅಲೆದಾಟವಿಲ್ಲದ್ದರಿಂದಲೋ ನಿದ್ರೆ ಬರುವುದು ತಡವಾಗಿತ್ತು.
 
 
 
ಬೆಳಿಗ್ಗೆ ಬೇಗನೇ ಎಚ್ಚರವಾಯಿತು. ವಾಕ್ ಮಾಡಲು ಕೆಳಗಿಳಿದು ಬಂದೆ. ರಿಸೆಫ್ಶನಿಸ್ಟ್ ಬಳಿ ಕಪ್ಪದ್ ಜೋರಾಗಿ ಕೂಗಾಡುತ್ತಿದ್ದರು. ಕುತೂಹಲದಿಂದ ಅವರ ಬಳಿಗೋಗಿ ವಿಷಯ ಏನೆಂದೆ. ತಮ್ಮ ಕೈಯಲಿದ್ದ ಸಣ್ಣ ಸೋಪು ತೋರಿಸಿ ’ನೋಡ್ರೀ, ಈ ಸಣ್ಣ ಸೋಪಿನಲ್ಲಿ ಅದ್ ಹ್ಯಾಂಗೆ ಮೂವರು ಸ್ನಾನ ಮಾಡೋದ್ರೀ? ಇವಳಿಗೆ ಇನ್ನೊಂದು ಸೋಪು ಕೊಡು ಅಂದ್ರೆ ರೂಮಿಗೊಂದೇ ಸೋಪು ಕೊಡೋದು ಅಂತಿದ್ದಾಳೆ! ಈ ಸೋಪು ನನಗೇ ಸಾಕಾಗುವುದಿಲ್ಲ ಇನ್ನುಳಿದವರು ಏನ್ ಮಾಡದ್ರೀ? ಇವಳಿಗೆ ಅರ್ಧಗಂಟೆಯಿಂದ ಕೇಳ್ತಿದ್ದೀನಿ... ಇನ್ನೊಂದು ಸೋಪು ಕೊಡಲ್ಲ ಅಂಥನೇ ಹಠ ಮಾಡ್ತಾಳ್ ನೋಡ್ರೀ’ ಅಂದ್ರು. ನಾವು ಉಳಿದುಕೊಂಡಿದ್ದ ಹೋಟೆಲಿನ ಮಾಲೀಕ ಪರಮ ಜುಗ್ಗನಿರಬಹುದು. ಸಿಂಗಲ್ ರೂಮಿನಲ್ಲೇ ಸಿಂಗಲ್ ಮಂಚ ಹಾಕಿ ಅದರ ಮೇಲೆರಡು ದಿಂಬುಗಳನ್ನಿಟ್ಟು ಡಬಲ್ ರೂಮಿನ ಲೆಕ್ಕದಲ್ಲಿ ಕೊಟ್ಟಿದ್ದ. ರೂಮಿನಲ್ಲಿ ಇಟ್ಟಿದ್ದು ಒಂದೇ ಒಂದು ಸಣ್ಣ ಸೋಪು. ಅದು ಒಬ್ಬರ ಸ್ನಾನಕ್ಕಷ್ಟೇ ಮುಗಿದು ಹೋಗುತ್ತಿತ್ತು. ಸದ್ಯ ನಾನು ಬೇರೆ ರೂಮಿನಲ್ಲಿ ಮಲಗಿದ್ದರಿಂದ ಸೋಪು ಸಾಕಾಗಿತ್ತು. ಇಲ್ಲದಿದ್ದಲ್ಲಿ ನಾನು ಮತ್ತು ನನ್ನ ರೂಮ್ ಮೇಟ್ ಬಂದು ಕಪ್ಪದ್ ರಿಗೆ ಜಗಳದಲ್ಲಿ ಸಾಥ್ ಕೊಡಬೇಕಾಗುತ್ತಿತ್ತು.
 
 
 
’ಮೇಡಂ, ಹೋಗ್ಲಿ ನಾಳೆಯ ಸೋಪನ್ನಾದರೂ ಕೊಡಿ,’ ಎಂದು ಕಪ್ಪದ್ ರಿಸೆಫ್ಶನಿಸ್ಟ್ ಅನ್ನು ಕೇಳಿದರು. ಅವಳು ’ನೊ, ನೋ, ಸೋಪು ಕೊಟ್ಟಿರುವುದು ಮೂರು ದಿನಕ್ಕೆ’ ಅಂದಳು. ಅವಳಿಗೆ ಇಂಗ್ಲಿಷ್ ಸ್ಪಷ್ಟವಾಗಿ ಮಾತಾಡಲು ಬರುತ್ತಿರಲಿಲ್ಲ. ಅಲ್ಲದೆ ಕಪ್ಪದ್ ಮಾತಾಡುತ್ತಿದ್ದುದೂ ಅವಳಿಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಆ ಸಣ್ಣ ಸೋಪು ಒಂದು ದಿನಕ್ಕೆ ಒಬ್ಬರಿಗೇ ಸಾಕಾಗುವುದಿಲ್ಲವೆಂದು  ಕೂಗಾಡುತ್ತಿದ್ದ ಕಪ್ಪದ್ ರಿಗೆ ಅವಳು ಮೂರೂ ದಿನಕ್ಕೂ ಒಂದೇ ಸೋಪು ಎಂದು ಹೇಳಿದ್ದು ಕೇಳಿ ಕೆರಳಿ ನಿಂತರು. ’ಏನಮ್ಮಾ, ಹಿಂಗತೀಯಾ?!! ಈ ಸೋಪಿನಲ್ಲಿ ನೀನು ಸ್ನಾನ ಮಾಡಿ ತೋರಿಸು ನೋಡೋಣ ಸಾಕಾಗುತ್ತಾ’ ಅಂಥ ಇಂಗ್ಲಿಷ್ ನಲ್ಲಿಯೇ ದಬಾಯಿಸಿದ್ರು’. ಅವಳು ’ನಾನ್ಯಾಕೆ ನಿಮಗೆ ಸ್ನಾನ ಮಾಡಿ ತೊರಿಸ್ಬೇಕು’ ಎಂತ ರಾಂಗಾದಳು. ಕಪ್ಪದ್ ರ ವಾದ ಯಾರನ್ನೂ ಗೊಂದಲಕ್ಕೆ ಹಾಕುತ್ತಿತ್ತು. ಆ ಸೋಪಿನಲ್ಲಿ ಅವಳು ಸ್ನಾನ ಮಾಡಿ...ಸೋಪು ಅವಳಿಗೆ ಸಾಕಾಗುತ್ತಾ ಅಂತ ಇವರು ನೋಡಬೇಕೆಂದದ್ದು ಸೋಪು ಸಾಕಾಗುವುದಿಲ್ಲವೆಂಬುದನ್ನು ಪ್ರೂವ್ ಮಾಡಲು ಮಾತ್ರವೇ ಹೊರತು ಬೇರೆ ದೃಷ್ಟಿಯಿಂದಲ್ಲ. ಅದು ನಮಗೆ ಗೊತ್ತಾಗುತ್ತೆ ಬಿಡಿ. ಆದರೆ ಆ ಇಂಗ್ಲಿಷ್ ಸರಿಯಾಗಿ ಬಾರದ ಆ ಸ್ವಿಸ್ ರಿಸೆಪ್ಷನಿಸ್ಟ್ ಹುಡುಗಿ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಜಗಳ ಬೇರೆ ಸ್ವರೂಪ ಪಡೆಯುವ ಸಾಧ್ಯತೆ ಶುರುವಾಗಿತ್ತು.
 
 
ವಾದ ಎತ್ತೆತ್ತಲೋ ಸಾಗುತ್ತಿರುವುದನ್ನು ಕಂಡ ನಾನು ’ರೀ ಕಪ್ಪದ್, ಈಗಾಗ್ಲೇ ಹೊರಗೆ ಹೊರಡುವ ಸಮಯವಾಗುತ್ತಿದೆ. ನೀವಿಲ್ಲಿ ಈ ಸೋಪನ್ನು ಹಿಡಿದುಕೊಂಡು ಬಂದು ಇವಳೊಂದಿಗೆ ಗಲಾಟೆ ಮಾಡುತ್ತಿದ್ದೀರಲ್ಲಾ, ನೀವು ಮೂವರಿದ್ದೀರಿ ನೀವೂ ಸ್ನಾನ ಮಾಡಿಲ್ಲ, ನೀವು ಸೋಪನ್ನು ಇಲ್ಲಿಗೆ ತಂದಿರುವುದರಿಂದ ನಿಮ್ಮ ರೂಮಿನಲ್ಲಿರುವ ಇನ್ನಿಬ್ಬರೂ ಸ್ನಾನ ಮಾಡದಂತೆ ಮಾಡಿದ್ದೀರಿ, ಅಲ್ಲದೆ ಆ ಸೋಪನ್ನು ಇವಳಿಗೆ ಕೊಟ್ಟು ಅವಳಿಗೂ ಸ್ನಾನ ಮಾಡುವಂತೆ ಒತ್ತಾಯಿಸುತ್ತಿದ್ದೀರಿ, ಮೊದಲೇ ಇವಳಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ. ನಿಮ್ಮ ಇಂಗ್ಲಿಷ್ ಇವಳಿಗೆ ಅರ್ಥವಾಗುತ್ತಲೂ ಇಲ್ಲ. ಹೀಗೆ ಸುಮ್ಮನೆ ಇವಳ ಬಳಿ ಮಾತಾಡುವುದರಿಂದ ಈಗ ಯಾವ ಪ್ರಯೋಜನವೂ ಇಲ್ಲ...ಸುಮ್ಮನೆ ಬೇಡದ ಫಜೀತಿಯಾಗುತ್ತೆ...ಮೊದಲು ಹೋಗಿ ಸ್ನಾನ ಮಾಡಿಕೊಂಡು ರೆಡಿಯಾಗಿ, ಆಮೇಲೆ ಜ್ಯೂಜ಼ರ್ ಬಳಿ ಇದರ ಬಗ್ಗೆ ಮಾತಾಡೋಣ. ಅವನು ಸೋಪನ್ನು ಹೋಟೆಲಿನವರ ಬಳಿಯಾದರೂ ಕೊಡಿಸಲಿ, ಅಥವಾ ಅವನೇ ಹಣಕೊಟ್ಟು ಹೊರಗಡೆಯಿಂದಲಾದರೂ ತಂದುಕೊಡಲಿ ನಮಗೇನಂತೆ! ಮೊದಲು ಹೋಗಿ ಸ್ನಾನ ಮಾಡಿ ಬೇಗ ರೆಡಿಯಾಗಿ ಬನ್ನಿ’ ಎಂದು ಅವರನ್ನು ರೂಮಿನತ್ತ ಸಾಗಹಾಕಿದೆ. ’ಜ್ಯೂಜ಼ರ್ ಬರ್ಲಿ, ಅವನಿಗೆ ಸರಿಯಾಗಿ ಕೇಳ್ತೀನಿ’ ಎಂದು ಗೊಣಗಾಡುತ್ತಾ ಹೋದರು.
 
 
ಹೊರಗೆ ಅಡ್ಡಾಡಿ ಬಂದಾಗ ಭಟ್ಟರು ಕೆಳಗಿಳಿದು ಬಂದರು. ಅವರದೂ ಸೋಪಿನ ಸಮಸ್ಯೆಯಾಗಿತ್ತು. ಕಪ್ಪದ್ ರ ರೂಮಿನಲ್ಲಿ ಮೂವರಿದ್ದರೆ ಭಟ್ಟರ ರೂಮಿನಲ್ಲಿ ನಾಲ್ಕು ಜನರಿದ್ದರು. ಇಬ್ಬರಿಗೇ ಸೋಪು ಮುಗಿದು ಹೋಗಿದ್ದರಿಂದ ಮತ್ತೊಂದು ಸೋಪಿಗಾಗಿ ಬಂದಿದ್ದ ಅವರಿಗೆ ಅಷ್ಟು ಹೊತ್ತೂ ಕಪ್ಪದ್ ಗಲಾಟೆ ಮಾಡಿಹೋಗಿದ್ದನ್ನು ಹೇಳಿ ’ ರೀ ಭಟ್ರೇ, ಆ ಹುಡುಗಿಗೆ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ ಕಣ್ರೀ, ನೀವು ಅವಳ ಹತ್ರ ಏನು ಮಾತಾಡಿದ್ರೂ ಪ್ರಯೋಜನವಿಲ್ಲ ಜ್ಯೂಜ಼ರ್ ಬಳಿ ಮತಾಡೋಣ ಬಿಡಿ’ ಎಂದೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ’ಸರಿ ಸರಿ ಮಾರಾಯ್ರಾ ನೀವು ಹೇಳುವುದು ಇಂಗ್ಲಿಷ್ ಬಾರದ ಅವಳ ಬಳಿ ನಾನೆಂಥಾ ಮಾತಾಡುವುದು’ ಅಂದು ಸದ್ಯ ಗಲಾಟೆ ಮಾಡುವ ಉಸಾಬರಿ ತಪ್ಪಿತೆಂದುಕೊಳ್ಳುತ್ತಾ ರೂಮಿನತ್ತ ಹೋದರು
 
 
ಒಬ್ಬೊಬ್ಬರಾಗಿ ಕೆಳಗಿಳಿದು ಬಂದವರೆಲ್ಲಾ ಆ ಹೋಟೆಲಿನ ಅವ್ಯವಸ್ಥೆಯ ಬಗ್ಗೆ ದೂರುಗಳ ಪಟ್ಟಿಯನ್ನೇ ನೀಡತೊಡಗಿದರು. ಸೋಪಿನದು ಎಲ್ಲರಿಗೂ ಸಾಮಾನ್ಯ ಸಮಸ್ಯೆಯಾದರೆ, ಕೆಲವರು ನಮ್ಮ ಬಾಥ್ ರೂಮ್ ತುಂಬಾ ಚಿಕ್ಕದೆಂದೋ...ಗಾಜಿನ ಬಾಗಿಲುಗಳಿದ್ದು ಸ್ನಾನ ಮಾಡುವುದಕ್ಕೆ ಮುಜುಗರವೆಂದೋ, ಇನ್ನು ಕೆಲವರು ಟಾಯ್ಲೆಟ್ ತುಂಬಾ ಚಿಕ್ಕದೆಂದೋ ಗೊಣಗಾಡತೊಡಗಿದ್ದರು. ನಾನು ನಿನ್ನೆ ರಾತ್ರಿ ರೂಮು ಚಿಕ್ಕದೆಂದು ಜ್ಯೂಜ಼ರ್ ಜತೆ ಗಲಾಟೆ ಮಾಡುತ್ತಿದ್ದಾಗ ಇದೇ ಕೆಲವರು ಹೇಗೋ ಅಡ್ಜಸ್ಟ್ ಮಾಡಿಕೊಳ್ಳಿರೆಂದು ಹೇಳಿದ್ದರು. ಈಗ ಅವರೇ ದೂರುಗಳ ಪಟ್ಟಿಯನ್ನು ಜ್ಯೂಜ಼ರ್ ನಿಗೆ ಒಪ್ಪಿಸುತ್ತಿದ್ದರು. ಜ್ಯೂಜ಼ರ್ ನನ್ನತ್ತ ನೋಡಿ ರಾತ್ರಿಯ ಗಲಾಟೆ ನೆನೆಸಿಕೊಂಡು ನಗತೊಡಗಿದ. ನಾನು ನಿನ್ನೆ ರಾತ್ರಿ ಮಾಡಿದ್ದ ಗಲಾಟೆಯ ಮುಂದುವರಿದ ಭಾಗವಾಗಿ ಇಂದು ಹಲವರು ಅವನ ಮೇಲೆ ಹೋಟೆಲಿನ ವಿಷಯವಾಗಿ ಮುಗಿಬಿದ್ದಿದ್ದರು. ಅವರೆಲ್ಲರ ನಾಯಕತ್ವವನ್ನು ಕಪ್ಪದ್ ವಹಿಸಿಕೊಂಡಿದ್ದರು.
 
 
 
’ಸಣ್ಣ ಸೋಪಿನಲ್ಲಿ ಹೇಗೆ ಸ್ನಾನ ಮಾಡದಿಕ್ಕಾಗುತ್ತೆ, ಈ ರಿಸೆಪ್ಷನಿಸ್ಟ್ ಬಾಯಿಗೆ ಬಂದಂತೆ ಮಾತಾಡ್ತಳೆ, ಇಷ್ಟು ದಿನ ಒಳ್ಳೊಳ್ಳೆ ಹೋಟೆಲಿನಲ್ಲಿ ನಮ್ಮನ್ನು ಉಳಿಸಿ ಇಲ್ಲಿ ಸ್ವಿಟ್ಜ಼ರ್ ಲ್ಯಾಂಡಿನಲ್ಲಿ ಇಂಥಾ ಕೆಟ್ ಹೋಟೆಲಿನಲ್ಲಾ ಉಳಿಸೋದು’ ಎಂದು ಕಪ್ಪದ್ ಶುರು ಮಾಡಿದ ದೂರಿನ ಆರಂಭವನ್ನು ಎಲ್ಲರೂ ಸಮ್ಮತಿಸಿ, ತಮ್ಮದೂ ಒಂದಿರಲಿ ಎಂಬಂತೆ ಕಪ್ಪದ್ ಹೇಳಿದ್ದನ್ನೇ ತಾವೂ ಪುನರುಚ್ಚಾರ ಮಾಡತೊಡಗಿದ್ದರು. ದೂರುಗಳ ಸರಮಾಲೆಯನ್ನು ಶಾಂತಚಿತ್ತನಾಗಿ ಆಲಿಸಿದ ಜ್ಯೂಜ಼ರ್ ’ಮೊದಲು ತಿಂಡಿ ತಿನ್ನೋಣ ಬನ್ನಿ, ನಂತರ ನಿಮ್ಮ ಸಮಸ್ಯೆಯನ್ನು ಬಗೆಹರಿಸಿದರಾಯ್ತು’ ಎಂದು ಎಲ್ಲರನ್ನೂ ಬ್ರೇಕ್ ಫಾಸ್ಟ್ ಹಾಲಿನತ್ತ ಕರೆದುಕೊಂಡು ಹೋದ.
 
 
(ಮುಂದುವರಿಯುವುದು)
 
 

ಸಾಲಕ್ಕೆ ಸೋಲದ ಸಹಜ ಜೀವನ?!

 
(ಅಮೆರಿಕಾ ಪ್ರವಾಸ ಕಥನದ ಪುಟಗಳು)
 
ಶ್ರೀ ಮುರುಳೀಧರ ಕಳ್ಳಂಬೆಳ್ಳ
 
ಮುಕ್ತಮಾರುಕಟ್ಟೆಯ ಅಮೆರಿಕಾದ ಅರ್ಥ ವ್ಯವಸ್ಥೆಯಲ್ಲಿ ದುಡ್ಡಿದ್ದವನೇ ದೊಡ್ಡಪ್ಪ. ಈ ಶ್ರೀಮಂತ ಬಂಡವಾಳಶಾಹಿ ರಾಷ್ಟ್ರ ಹುಟ್ಟುಹಾಕಿರುವ ಕೊಳ್ಳುಬಾಕುತನ ಸಮಾಜದಲ್ಲಿ ಎಷ್ಟೇ ಸಂಪಾದಿಸಿದರೂ ಸಾಲದು ಎನಿಸುತ್ತದೆ. ಬೇಕಿರಲಿ, ಬೇಡವಿರಲಿ ವಸ್ತುಗಳನ್ನು ಇಲ್ಲಿಯ ಜನ ಕೊಳ್ಳುತ್ತಾರೆ. ಈ ಗೀಳಿಗೆ ಬೀಳಲು ಕಣ್ಣು ಕೋರೈಸುವ ಜಾಹೀರಾತುಗಳು, ಆಕರ್ಷಕ ಸರಕು ತುಂಬಿರುವ ಮಳಿಗೆಗಳು, ಇಂದು ಕೊಳ್ಳಿರಿ ವರ್ಷದ ನಂತರ ಹಣ ನೀಡಿ, ಬಡ್ಡಿ ಇಲ್ಲ, ಸುಲಭ ಕಂತು ಇತ್ಯಾದಿ ಜಾಹೀರಾತು ನೀಡಿ ಕೈಬೀಸಿ ಕರೆಯುವ ರಿಯಾಯಿತಿಗಳು. ಇಂಥಹ ಆಮಿಷಗಳಿಗೆ ಬಲಿಯಾಗದಿರುವುದು ಕಷ್ಟ ಸಾಧ್ಯ. ಇದರ ಮೇಲೆ ಕ್ರೆಡಿಟ್ ಕಾರ್ಡುಗಳು ಬೀಸುವ ಬಲೆ ಬೇರೆ. ಇದರಿಂದಾಗಿ ಹೆಚ್ಚಿನ ಅಮೆರಿಕನ್ನರು, ಅದರಲ್ಲೂ ಮಧ್ಯಮ ವರ್ಗದವರು, ಭಾರತೀಯ ಸಂಜಾತರು ಸಾಲದ ಮಡುವಿನಲ್ಲಿ ಮುಳುಗಿರುತ್ತಾರೆ. ಹಾಗೆ ನೋಡಿದರೆ ಅಮೆರಿಕಾ ಪ್ರಪಂಚದ ಬಡ ರಾಷ್ಟ್ರಗಳನ್ನು ಸಾಲದ ಶೂಲದಲ್ಲಿ ಸಿಲುಕಿಸಿದೆ. ಅಷ್ಟೆ ಅಲ್ಲ, ತನ್ನ ಪ್ರಜೆಗಳನ್ನೂ ಸಾಲಗಾರನನ್ನಾಗಿಸಿದೆ. ದುಬಾರಿ ಬಡ್ಡಿ ಹೊತ್ತು, ಸಾಲ ಹೊತ್ತು, ಬಾಳು ಸಾಗಿಸುವುದು ಅಮೆರಿಕಾದಲ್ಲಿ ಇರುವವರಿಗೆ ತುಂಬಾ ಸಲೀಸಾಗಿ ಬಿಟ್ಟಿದೆ. ಒಂದು ವರದಿ ಪ್ರಕಾರ (ಎರಡು ವರ್ಷ ಹಿಂದಿನದು) ಅಮೆರಿಕಾದಲ್ಲಿ ವಾಸವಾಗಿರುವವರು ಹಿಂತಿರುಗಿಸಬೇಕಾದ ಸಾಲದ ಮೊತ್ತ ೭.೩ ಟ್ರಿಲಿಯನ್ ಡಾಲರುಗಳು.
 
ಕಾರು, ಮನೆ, ಗೃಹ ಉಪಯೋಗಿ ವಸ್ತು, ಹೀಗೆ ಸಾಲದ ಕಂತುಗಳಲ್ಲಿ ಲಭ್ಯ. ವೇತನದ ಬಹುಭಾಗ ಸಾಲದ ಕಂತುಗಳಿಗೆ ಹೋಗುತ್ತದೆ. ಆರ್ಥಿಕ ಪ್ರಗತಿ ಏಕಪ್ರಕಾರವಾಗಿದ್ದರೆ ತೊಂದರೆಯಿಲ್ಲ. ಏರುಪೇರಾದಾಗ ಮಧ್ಯಮ ವರ್ಗದವರು ಭಾರೀ ಹೊಡೆತ ಅನುಭವಿಸುವ ಉದಾಹರಣೆಗಳಿವೆ.
 
ನಮ್ಮ ದೇಶದಲ್ಲಿ ಬಡಜನ ೧೦ ರೂಗಳಿಗೆ ಒಂದುದಿನಕ್ಕೆ ೧ ರೂ ಬಡ್ಡಿಕೊಡುವುದನ್ನು ನಾನು ಕಂಡಿದ್ದೇನೆ. ಈ ಬಡಿದರ ಲೆಕ್ಕ ಹಾಕಿದರೆ ಶೇ ೩೬೫ ಆಗುತ್ತದೆ. ೧೦೦ ರೂಗಳಿಗೆ ೨, ೩, ೫ರ ವರೆಗೂ ಬಡ್ಡಿ ತೆರುವುದು ರೂಢಿಯಲ್ಲಿದೆ. ಇವೆಲ್ಲ ಅನಧಿಕೃತ.
 
ಅಮೆರಿಕಾದಲ್ಲಿ ಹಾಗಲ್ಲ. ಅಧಿಕೃತವಾಗಿಯೇ ಈ ದರೋಡೆ ನಡೆಯುತ್ತಿದೆ. ಸಾಲ ಕೊಡುವ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸರ್ಕಾರದಿಮ್ದ ಪಡೆದುಕೊಂಡೇ ಈ ವ್ಯವಹಾರ ನಡೆಸುತ್ತಿದ್ದಾರೆ.
 
ಅಮೆರಿಕಾದ ಸ್ಥಳೀಯ ಪತ್ರಿಕೆ, ’ಡೆಟ್ರಾಯಿಟ್ ನ್ಯೂಸ್’ ಎಂಬ ಪತ್ರಿಕೆಯಲ್ಲಿ ’ವೇತನ ದಿನದ ಸಾಲದ ಶೂಲ’ ಎಂಬ ಶೀರ್ಷಿಕೆಯಲ್ಲಿ ಬಂದಿದ್ದ ವರದಿ ಓದಿ ದಿಗ್ಭ್ರಮೆಯಾಯಿತು.
 
ಇಲ್ಲಿ ಬಡ್ಡಿದರ ಸಾಲಿಯಾನ ಶೇಕಡ ೪೦೦ ರಿಂದ ೯೦೦ ರವರೆಗೆ ಇರುತ್ತದೆ. ’ಪೇ ಡೇ ಲೋನ್’ ಎಂಬ ಪೀಡೆ ಬೃಹದಾಕಾರವಾಗಿ ಬೆಳೆದಿದೆ. ಇದು ಬಹಳ ಸರಳವಾದದ್ದು; ವ್ಯಕ್ತಿಯ ಸಂಬಳದ ಮೇಲೆ ನೀಡುವ ಸಾಲ. ಇದಕ್ಕೆ ನಮ್ಮ ವೇತನಕ್ಕೆ ಅನುಸಾರವಾಗಿ ಚೆಕ್ ನೀದಬೇಕು. ಪ್ರತಿ ೧೦೦ ಡಾಲರಿಗೆ ೧೭.೫೦ ಡಾಲರನ್ನು ಬಡ್ಡಿ ಮುರಿದುಕೊಳ್ಳುತ್ತಾರೆ. ೫೦೦ ಡಾಲರ್ ಸಾಲ ಪಡೆದರೆ ೮೫ ಡಾಲರ್ ಹಿಡಿಯುತ್ತಾರೆ. ಇದು ಒಂದು ತಿಂಗಳಿಗೆ ಆಗಬಹುದು, ಇಲ್ಲವೇ ೨ ವಾರಗಳಿಗೆ ಆಗಬಹುದು. ನಿಗದಿಯಾದ ದಿನ ನಿಮ್ಮ ಚೆಕ್ ಕ್ಯಾಶ್ ಆಗುವ ಹಾಗೆ ಬ್ಯಾಂಕಿನಲ್ಲಿ ಹಣ ಇಡಬೇಕು. ಈ ಜಾಲದಲ್ಲಿ ಒಮ್ಮೆ ಸಿಲುಕಿಕೊಂಡರೆ ಬಿಡಿಸಿಕೊಳ್ಳುವುದಕ್ಕೂ ಆಗದು.
 
ಒಂದೆರಡು ಉದಾಹರಣೆಗಳನ್ನು ಗಮನಿಸಿ. ಈ ಪ್ರಮಾಣದ ಆಗಾಧತೆ ಆಗ ಅರಿವಾಗುತ್ತದೆ: ಮಿಶಿಗನ್ ರಾಜ್ಯ ಒಂದರಲ್ಲೇ ಸಂಬಳದ ಮೇಲೆ ಸಾಲ ನೀಡುವ ೬೫೦ ಕಂಪನಿಗಳು ಅಟಾರ್ನಿ ಜನರಲ್ ರವರ ಕಛೇರಿಯಲ್ಲಿ ರಿಜಿಸ್ಟರ್ ಮಾಡಿದಿವೆ. ೫೮೦ ಮಿಲಿಯನ್ ಗೂ ಹೆಚ್ಚು ವಹಿವಾಟು ಮಾಡುತ್ತಿವೆ.
 
ಸಾಮಾನ್ಯವಾಗಿ ಇಲ್ಲಿ ತಿಂಗಳಿಗೆ ೨೫೦೦ ಡಾಲರ್ ಸಂಬಳ, ಹಿತಮಿತ ಸಂಸಾರ ನಡೆಸಲು ಬೇಕಂತೆ. ಕನಿಷ್ಟ ವೇತನವೂ ಕೂಡಾ ಹೆಚ್ಚು ಕಡಿಮೆ ಅಷ್ಟೇ. ಗಂಟೆಗೆ ೮ ಡಾಲರ್. ಇದರಲ್ಲಿ ಅಪಾರ್ಟ್ಮೆಂಟ್ ಬಾಡಿಗೆ, ಊಟ, ತಿಂಡಿ, ಭರಿಸಬೇಕು. ಅದೇನೋ ಅಮೆರಿಕನ್ ಪ್ರಜೆಗಳ ತಿನ್ನಾಟ ಕೊಂಚ ಹೆಚ್ಚೇ. ಅವಕಾಶವಿದ್ದಾಗಲೆಲ್ಲ ಬಾಯಾಡಿದುತ್ತಾರೆ, ಹೀಗಾಗಿ ಇಲ್ಲಿ ಸ್ಥೂಲದೇಹಿಗಳಂತೂ ಎಲ್ಲೆಲ್ಲೂ ಕಾಣಸಿಗುತ್ತಾರೆ.
 
ಜೀವನ ನಿರ್ವಹಣೆಗೆ ಕೆಲಸ ಸಿಗುವುದಂತೂ ಖಚಿತ. ಆದರೆ ಇಂತದೇ ಕೆಲಸವೆಂಬ ಖಚಿತತೆ ಇಟ್ಟುಕೊಳ್ಳುವಂತಿಲ್ಲ. ’ಇದು ಅಮೆರಿಕಾ’.
 
ಕೆಲವರ್ಷಗಳ ಹಿಂದೆ, ನಾವು ಅಲ್ಲಿದ್ದ ಸಮಯದಲ್ಲಿ ರಹದಾರಿ (ಕಾನೂನಿನ ಅನುಮತಿ ) ಇಲ್ಲದೆ ಬಹುವರ್ಷಗಳಿಂದ ಅಮೆರಿಕದಲ್ಲಿರುವ ಬಹುತೇಕ ಮೆಕ್ಸಿಕೋ ದೇಶದ ಲಕ್ಷಾಂತರ ಪ್ರಜೆಗಳಿಗೆ (ನಾನ್ ಇಮಿಗ್ರೆಂಟ್) ಅವರ ಇರುವಿಕೆಯನ್ನು ಸಕ್ರಮಗೊಳಿಸುವ ಹಾಗೂ ಸಿಟಿಜ಼ನ್ಶಿಪ್/ಗ್ರೀನ್ ಕಾರ್ಡ್ ನೀಡುವ ಬಗ್ಗೆ ಅಂದಿನ ಅಧ್ಯಕ್ಷ ಜಾರ್ಜ್ ಬುಶ್ ಸರ್ಕಾರದಲ್ಲಿ ಬಿಲ್ಲನ್ನು ಪಾಸು ಮಾಡುವ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಸರ್ಕಾರವೇ ಮತ್ತೆ ಅಸ್ತಿತ್ವಕ್ಕೆ ಬರಲು ಬುಶ್ ಹೂಡಿರುವ ತಂತ್ರ ಇದು ಎಂದು ಜನರ ಅನಿಸಿಕೆ. ಇದರ ನಿಮಿತ್ತ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆದಿತ್ತು. ಓರ್ಲ್ಯಾಂಡೋ ಸೆಂಟಿನಲ್ ಪತ್ರಿಕೆ ಇಮ್ಗ್ರೇಶನ್ ಬಿಲ್ ಪಾಸ್ ಮಾಡಿದ್ದರ ಬಗ್ಗೆ ಪ್ರಕಟಿಸಿತ್ತು. ಅದಕ್ಕೆ ಅನುಗುಣವಾಗಿ ೫ ವರ್ಷಕ್ಕೆ ಮೇಲ್ಪಟ್ಟು ಅಮೆರಿಕಾದಲ್ಲಿ ಇರುವವರಿಗೆ ಸಕ್ರಮ ಪ್ರಜೆಪಟ್ಟ, ೨ ರಿಂದ ೫ ವರ್ಷದವರು ಸಕ್ರಮಕ್ಕೆ ಅರ್ಜಿ ಹಾಕಿ ಸಕ್ರಮ ಪಡೆಯಬಹುದು. ೨ ವರ್ಷ ಒಳಗಿನವರು ಅವರವರ ದೇಶಕ್ಕೆ ಕೂಡಲೇ ಹಿಂತಿರುಗಬೇಕು. ಸರ್ಕಾರ ಠರಾವು ಮಾಡಿ ಮುಗಿದಿದೆ. ಇದಕ್ಕೂ ಪ್ರತಿಭಟನೆ ನಡೆದಿತ್ತು.
 
ಇವೆಲ್ಲ ಇದ್ದರೂ, ಅಮೆರಿಕಾದ ಭಾವಿ ಪ್ರಜೆಗಳಲ್ಲಿ ನಿರೀಕ್ಷಿಸಿದ ಮಟ್ಟದ ನೈತಿಕತೆ ನಶಿಸಿಹೋಗುತ್ತಿರುವುದರ ಬಗ್ಗೆ ಶಂಕೆ ಮೂಡುತ್ತಿದೆ.
 
ಸರ್ಕಾರ ಪ್ರತಿ ಮಗುವಿಗೆ ೧೮ ವರುಷ ತುಂಬುವವರೆಗೆ, ಹೈ ಸ್ಕೂಲ್ ವರೆಗೆ ಉಚಿತ ವಿದ್ಯಾಭ್ಯಾಸ ನೀಡಲು ಉತ್ತಮ ಶಾಲೆ ನಡೆಸುತ್ತದೆ. ಅನಂತರದ ಅಂದರೆ ೧೨ನೆ ತರಗತಿ ನಂತರದ ವಿದ್ಯಾಭ್ಯಾಸದ ಖರ್ಚು ಅವರ ತಂದೆ ತಾಯಿಯ ಹೊಣೆ. ಹಾಗಾದರೂ ಓದಿನಲ್ಲಿ ಆಸಕ್ತಿ ತೋರುವ ಮಕ್ಕಳಂತೂ ಇದ್ದೇ ಇರುತ್ತಾರೆ. ಉನ್ನತವ್ಯಾಸಂಗ ಪಡೆದು ಒಳ್ಳೆಯ ಉದ್ಯೋಗ ಹಿಡಿಯುವುದೂ ನೋಡಬಹುದು. ಅಪರೂಪವೇನಲ್ಲ.
 
ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿನ ವೈಭವದ ಜೀವನದಲ್ಲಿ, ವಿದ್ಯೆಗೆ ಆದ್ಯತೆ ಕಡಿಮೆಯಾಗುತ್ತಿದೆ. ಆಸಕ್ತಿ ಹೊಂದಿದ ಯುವಜನತೆಯ ಸಂಖ್ಯೆ ಕಡಿಮೆಯಾಗುತ್ತಿದೆ. ಉನ್ನತ ವಿದ್ಯಾಭ್ಯಾಸದತ್ತ ದಾಪುಗಾಲು ಹಾಕುವ ಯುವಕರಿಗಿಂತ, ತಮ್ಮ ಓದನ್ನು ನಿಲ್ಲಿಸಿ, ವಿದಾಯ ಹೇಳಿ, ಏನೋ ಒಂದು ಕೆಲಸ ಹಿಡಿಯುವ, ಚಿಕ್ಕ ವಯಸ್ಸಿನಲ್ಲೇ ಸಂಸಾರೊಂದಿಗರಾಗುತ್ತಿರುವವರ ಸಂಖ್ಯೆ ಕಡಿಮೆ ಏನಲ್ಲ. ಅಷ್ಟರಲ್ಲೇ ಅವರಿಗೆ ತೃಪ್ತಿ. ಒಟ್ಟು ವಿದ್ಯಾರ್ಥಿಗಳಲ್ಲಿ ಹೈಸ್ಕೂಲು ಮಟ್ಟದಲ್ಲೇ ಶಾಲೆ ಬಿಡುವವರ ಸಂಖ್ಯೆ ೩೦% ಎಂದು ಇತ್ತೀಚಿನ ಟೈಮ್ ಮ್ಯಾಗಜ಼ೀನ್ ನಲ್ಲಿ ವರದಿಯಾಗಿದೆ. ಹೀಗಾಗಿ ಅಮೆರಿಕಾದ ಮುಂದಿನ ಅಭಿವೃದ್ಧಿಗಾಗಿ ಶ್ರಮಿಸುವ ಯುವಪೀಳಿಗೆ ಕಡಿಮೆಯಾಗುತ್ತಿರುವುದೊಂದು ಆತಂಕದ ವಿಚಾರ. ಮುಕ್ತ ಲೈಂಗಿಕತೆ, ಹದಿಹರೆಯದ ಕೈಗೆಟುಕುವ ಲೈಂಗಿಕ ಸ್ವಾತಂತ್ರ್ಯ, ವೈಭವದ ಜೀವನದಲ್ಲಿ ತಮ್ದೆ/ತಾಯಿ ಮಕ್ಕಳಿಗೆ ಸಂಪರ್ಕವಿಲ್ಲದಂತಿರುವ ಸಂಸಾರ. ಅವಿವಾಹಿತ ತಾಯಂದಿರ ಸಮಸ್ಯೆ. ಬೇಡದ ಮಕ್ಕಳನ್ನು ಸಾಕಿ ಸಲಹುವ ಅನಾಥಾಲಯಗಳ ಹೆಚ್ಚಳ. ನೈತಿಕ ಮಟ್ಟದ ಕೆಳಮುಖ ಪಯಣ, ಹೆಚ್ಚುತ್ತಿರುವ ವಿವಾಹ ವಿಚ್ಚೇದನ ಪ್ರಕರನಗಳು, ನೈತಿಕ ಭದ್ರತೆ ಇಲ್ಲದ ಜೀವನ, ಸ್ವಾತಂತ್ರ್ಯದ ದುರುಪಯೋಗ. ನಾಳಿನ ಬಗ್ಗೆ ಕಾಳಜಿವಹಿಸದೇ ಇಂದಿನದನ್ನು ಅನುಭವಿಸುವ ಮನೋಭಾವದ ಕಿರಿಯರು, ಹೀಗೆ ಚಿಂತಿಸಬೇಕಾದ ಅನಿವಾರ್ಯತೆ ಕಾಡುವ ಅನೇಕ ವಿಷಯಗಳು.
 
ಕಾಲೇಜು ವಿದ್ಯಾಭ್ಯಾಸ ಅಪಾರ ವೆಚ್ಚವಾದರೂ, ಕಾಲೇಜು ಸೇರುವ ವಿದ್ಯಾರ್ಥಿಗಳ ಕೊರತೆಯಿಂದ, ಪ್ರೊಫ಼ೆಸರುಗಳಿಗೆ ಸಂಬಳ ಕೂಡಾ ಸರಿಯಾಗಿ ಸಲ್ಲುವುದಿಲ್ಲವೆಂದು ತಿಳಿಯಿತು!!!
 
ಹೀಗಾಗಿ, ಅಮೆರಿಕೆಯ ಸಾಮಾಜಿಕ ಜೀವನದ ಇನ್ನೊಂದು ಮುಖದಲ್ಲಿ ಹಲವಾರು ಕಪ್ಪುಚುಕ್ಕೆಗಳು ಕಂಡುಬರುತ್ತವೆ. ಇದು ಕಹಿಯಾದರೂ ಸತ್ಯ. ಹೀಗಾದರೂ ಅಮೆರಿಕದಲ್ಲಿ ಬುದ್ಧಿವಂತರಿಗೆ, ಸುಸಂಸ್ಕೃತ ವಿದ್ಯಾವಂತರಿಗೆ, ನಿಜವಾದ ದುಡಿಯುವ ಮನೋಭಾವವಿದ್ದವರಿಗೆ ಖಂಡಿತ ಅವಕಾಶವಿದೆ. ಇಲ್ಲಿ ದಲಿತ ಹಿಂದುಳಿದ ಮುಂದುವರೆದ ಜನಾಂಗ ಎಂಬ ಹಣೆ ಪಟ್ಟಿ ಇಲ್ಲ. ಯಾರಿಗೆ ಚೈತನ್ಯ, ಅರ್ಹತೆ, ವಿದ್ಯೆ, ಬುದ್ದಿ ಇರುವುದೋ ಅವರಿಗೆ ಆದ್ಯತೆ. ಅವರುಗಳು ಪಡೆದಿರುವ ಸಾಮರ್ಥ್ಯ, ನಿಷ್ಠೆ, ದಕ್ಷತೆ, ಮಾತ್ರ ಯಶಸ್ಸಿನ ಮೆಟ್ಟಿಲು ಏರಲು ರಾಜಮಾರ್ಗ.
 
(ಮುಂದುವರಿಯುವುದು)   
 

 

 

 

ಚಿತ್ರಗಳಲ್ಲಿ...ಉತ್ಕಲ: ಸೂರ್ಯ ದೇವಸ್ಥಾನದ ಶಿಲಾಬಾಲಿಕೆಯರು

ಇಲ್ಲಿರುವವರು ಉತ್ಕಲದ ಸೂರ್ಯ ದೇವಸ್ಥಾನದ ಶಿಲಾಬಾಲಿಕೆಯರಲ್ಲಿ ಕೆಲವರು.

 

ಇವರಿರುವ ಯಾವುದೇ ಪುರಾತನ/ಐತಿಹಾಸಿಕ ಆಲಯಗಳು, ಮಂಟಪ, ವಾಸ್ತುಶಿಲ್ಪಗಳನ್ನು ನೋಡಿ ಬನ್ನಿ. ಮಾತಾಡದೆಯೇ ಕತೆ ಹೇಳಿ, ಕೊನೆಗೆ ಸೌಂದರ್ಯವೇ ತಾನಾಗಿ ನೆನಪಿನಲ್ಲಿ ಉಳಿಯುವವರು ಈ ಬಾಲಿಕೆಯರು. ಕೆತ್ತನೆಗಳಾಗಿ ಬಂದು ಕಲ್ಪನೆಗಳಲ್ಲಿ, ಚಿತ್ರ-ಕಥೆ-ಕಾವ್ಯಗಳಲ್ಲಿ, ಕನಸುಗಳಲ್ಲಿ, ಕಲೆಯಲ್ಲಿ, ಕಾಲಾತೀತರಾಗಿ ಕೊನೆಯಿಲ್ಲದೆ ಮೋಹಕರಾಗಿ ಉಳಿದುಬಿಡುವ ಈ ಶಿಲಾಬಾಲಿಕೆಯರಿಗೆ ಕಲ್ಲ ರೂಪಿನಿಂದ ಮುಕ್ತಿಯೇ ಸಿಗದಲ್ಲ!!!

 
ಮಹಾಪರಾಧ ಮಾಡದೆಯೇ ಗೌತಮ ಋಷಿಯ ಮಹಾನ್ ಇಗೋಗೆ ಕಲ್ಲಾದ ಸತಿ ಅಹಲ್ಯೆಗೆ ಕಡೆಗೂ ಶಾಪದಿಂದ ಮುಕ್ತಿ ಸಿಕ್ಕಿತ್ತು...ಆದರಿವರಿಗೆ?!
ಓಲೈಸಿಕೊಂಡು, ಆದರಿಸಿಕೊಂಡು, ಅನುರಕ್ತಿಸಿಕೊಂಡು, ದೃಷ್ಟಿ ಮಾಡಿಸಿಕೊಂಡು...ಕಡೆಗೆ ಒಡೆಸಿಕೊಂಡು, ಹೊಡೆಸಿಕೊಂಡು, ಜಜ್ಜಿಸಿಕೊಂಡು, ಅಂಗಾಂಗಹೀನರಾಗಿ, ವಿಕಲರಾಗಿಯೂ-ಸಿಕ್ಕ ರೂಪವನ್ನು ಹಾಗೇ ಆಲಂಗಿಸಿಕೊಂಡು ಇದ್ದು ಬಿಡುವ ಈ ಸ್ತ್ರೀಯರು ನಮ್ಮ ಮನದ ಮುಂದೆ ಹಿಡಿದ ಕನ್ನಡಿಗಳು. ಶತಮಾನಗಳಿಂದ ನಮ್ಮ ಸಂಸ್ಕೃತಿಯೊಟ್ಟಿಗೆ ಕರಗಿ ನಮ್ಮೊಳಗೆ ಜಿನುಗಿರುವ ನಮ್ಮ ಸೌಂದರ್ಯ ಪ್ರಜ್ನೆಗೆ, ನಮ್ಮಲ್ಲಿನ ಸೆಳೆವ ಮೋಹಕ್ಕೆ, ಕಲೆಗೆ, ಪ್ರೀತಿಗೆ, ಕಾಮಕ್ಕೆ, ಮತ್ತೆ ಕಡೆಗೆ ನಮ್ಮ ಮನಸ್ಸಿನ ರೋಗಕ್ಕೆ...

ಕೆಲವೊಮ್ಮೆ ಅನಿಸುತ್ತದೆ. ದೇವಾಲಯಗಳಿಗೆ ಬರುವವರಿಗೆ ಭಕ್ತಿಯ ಜೊತೆ ಅನುರಕ್ತಿಯನ್ನು ಹುಟ್ಟಿಸಲು ಇವರ ಹುಟ್ಟೊ ಅಥವಾ ಬಾಲಿಕೆಯರಿಲ್ಲದಿದ್ದರೆ ಭಕ್ತರಿರಲಾರರೆಂದೋ?!
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
Copyright © 2011 Neemgrove Media
All Rights Reserved