(ಸಂಗ್ರಹ)
ಒಂದೂರಲ್ಲಿ ಒಬ್ಬಿದ್ದ. ದೊಡ್ ಮನಷ್ಯ. ಒಂದಿನ ಅವನು ಸಂತೆ ಕಡಿಲಿಂದ ಮನೆಕಡೆ ಬರ್ತಿದ್ದಾಗ ಅವನಿಗೊಬ್ಬ ಮುದುಕಪ್ಪ ಸಿಕ್ಕಿದ. ಅದೂ ಇದೂ ಮಾತಾಡ್ತಾ ಆ ಮುದುಕಪ್ಪ ’ನಿಂಗೊಂದು ಕಿವಿಮಾತು ಹೇಳ್ತೀನಿ ಕಣಪ್ಪಾ...ಇಟ್ಟುಕೋ...ಸೂಳೆಸಂಗ ಮಾಡಿದ್ರೂ ಗೀಳೆ ಸಂಗ ಮಾಡ್ಬೇಡ, ಶೆಟ್ಟಿ ಸಂಗ ಮಾಡಿದ್ರೂ ಗಿಟ್ಟಿ ಸಂಗ ಮಾಡ್ಬೇಡ, ಏನೇ ಆದ್ರೂ ನಿನ ಗುಟ್ಟು ನಿನ ಹೆಂಡ್ತಿಗೇಳ್ಬೇಡ’ ಅಂತ ಹೇಳಿಕೊಟ್ಟ.
ಆ ದೊಡ್ ಮನುಷ್ಯಂಗೆ ಮುದುಕಪ್ಪ ಹೇಳಿದ ಮಾತು ನಿಜಾನೋ ಬದ್ದೋ ತಿಳೀಬೇಕು ಅಂತ ಯೋಚನೆ ಬಂತು. ಎರಡು ದಿನ ಯೋಚನೆ ಮಾಡಿದ. ಮೂರನೇ ದಿನ ತನ್ನ ಹೆಂಡ್ತೀನ ಕರೆದು, "ಹೊಲತಾಕೆ ಹೋಗಿ ಬತ್ತೀನಿ ಕಣೆ’ ಅಂತ ತಿಳಿಸಿ ಹೊರಟ. ಅವತ್ತು ಹೊತ್ತು ಮುಳುಗಿದ್ರೂ ಮನೆ ಕಡೆ ಬರಲೇ ಇಲ್ಲ. ಆ ದೊಡ್ ಮನುಷ್ಯನಿಗೊಬ್ಬ ನೆಂಟ ಇದ್ದ. ಬಾಮೈದ ಆಗಬೇಕು. ಬಾಮೈದನ್ನ ಹೊಲದ ಹತ್ರ ಕರೆಸಿಕೊಂಡು ಅವನಿಗೊಂದಷ್ಟು ದುಡ್ಡು ಕೊಟ್ಟು ’ನೀನೀಗ್ಲೇ ಈ ಊರು ಬಿಟ್ಟು ದೂರದ ಊರಲ್ಲಿರೋ ಯಾರಾದ್ರೂ ನೆಂಟರ ಮನೆಗೆ ಹೋಗು, ಮೂರು ತಿಂಗಳು ಯಾರಿಗೂ ಕಾಣದಂಗೆ ಇದ್ದು ಆಮೇಲೆ ಇಲ್ಲಿಗೆ ಬಾ’ ಅಂತ ಕಳಿಸಿಕೊಟ್ಟ. ಬಾಮೈದನನ್ನು ಆಕಡೆ ಕಳಿಸಿ ಹೊಲದಲ್ಲಿದ್ದ ಒಂದು ಕಲ್ಲಂಗಡಿ ಹಣ್ಣು ಕಿತ್ತುಕೊಂಡು ಅದಕ್ಕೆ ಕಣ್ಣು ಮೂಗು ಕೆತ್ತಿದ. ಆ ಹಣ್ಗೆ ಅವನ ಬಿಳೀ ಚೌಕ ಸುತ್ತಿಕೊಂಡ. ಕಲ್ಲಂಗಡಿ ಹಣ್ಣಿನ ರಸ ಚೌಕಕ್ಕೆ ತಾಕಿ ನೆತ್ತರಿನಂಗೆ ಕಾಣಿಸ್ತಿತ್ತು. ಇವನು ಅದನ್ನ ಹೆಗಲ ಮೇಲಿಟ್ಟುಕೊಂಡು ಹಿಂದಿನ ಬಾಗಿಲಿಂದ ಮನೆಗೆ ಬಂದ. ಮನೆಗೆ ಬಂದು ಉಪ್ಪರಿಗೆಗೆ ಹತ್ತಿದ.
ಗಂಡ ಹಿಂದಿನ ಬಾಗಿಲಿಂದ ಬಂದು ಉಪ್ಪರಿಗೆ ಹತ್ತಿದ್ದನ್ನು ಹೆಂಡತಿ ನೋಡಿದಳು. ’ಇದೇನ್ರೀ ಇಷ್ಟ್ ತಡಾ? ಕೈಕಾಲಿಗೆ ನೀರ್ ಹಾಕ್ಕೊಳದೆ ಉಪ್ಪರಿಗೆ ಯಾಕೆ ಹತ್ತ ಇದ್ದೀರ?’ ಅಂತ ಕೇಳಿದಳು. ಗಂಡ ಅವಳನ್ನು ಹತ್ತಿರಕ್ಕೆ ಕರೆದು ಸಣ್ಣ ದನೀಲಿ ’ಲೇ ನನ್ನ ಬಾಮೈದ ರಂಗ ಇದ್ನಲ್ಲ...ಇವತ್ತು ತೋಟದತ್ರ ಬಂದಿದ್ದ. ಅವಂಗೂ ನಂಗೂ ಜೋರು ಮಾತಾಯ್ತು. ನನಗೆ ಸಿಟ್ಟು ಬಂದು ಮಚ್ಚು ತಗಂಡು ಅವನನ್ನು ಅಲ್ಲೇ ಸವರಿಹಾಕಿಬಿಟ್ಟೆ...ಇದು ಅವನ ತಲೆ. ಯಾರಿಗೂ ಗೊತ್ತಾಗ್ದೇ ಇರಲಿ ಅಂತ ಉಪ್ಪರಿಗೆಲಿರೋ ಪೆಟ್ಟಿಲಿ ಇಡ್ತಾ ಇದ್ದೀನಿ...ನೀನು ಮಾತ್ರ ಇದ್ನ ಯಾರಹತ್ರನೂ ಹೇಳ್ಬೇಡ! ಜೋಪಾನ!’ ಅಂತ ಹೆಂಡತಿಗೆ ಹೇಳಿದ. ಹೆಂಡತಿ ಹೆದರಿ ತಲೆಯಾಡಿಸಿದಳು.
ಬೆಳಕಾಯಿತು. ದೊಡ್ ಮನುಷ್ಯ ಏನೋ ಕೆಲಸಕ್ಕೆ ಹೊರಗೆ ಹೊರಟ. ಅವನು ಆ ಕಡೆ ಹೋಗ್ತಿದ್ದಂತೇ ಅವನ ಹೆಂಡತಿ ಪಕ್ಕದಮನೆ ಸಂಪಕ್ಕನ ಮನೆಗೆ ಹೆಪ್ಪು ಕೇಳಲಿಕ್ಕೆ ಬಂದಳು. ಹೆಪ್ಪಿಸಕೊಂಡು, ’ಸಂಪಕ್ಕಾ ಒಂದು ಮಾತು...ನೀನು ಯಾರತ್ರೂ ಹೇಳಲ್ಲ ಅಂದ್ರೆ ಮಾತ್ರ ಹೇಳ್ತಿನಿ ಕಣೆ..’ ಅಂದಳು. ’ಅಯ್ಯೋ! ಇದೇನ್ ಹಿಂಗ್ ಕೇಳ್ತಿಯ?! ನೀನು ಹೇಳಿರೋದು ನಾನು ಯಾರಹತ್ರನಾದ್ರೂ ಹೇಳಿದಿನಾ? ಅದೇನು ಹೇಳೆ’ ಅಂದಳು. ದೊಡ್ ಮನುಷ್ಯನ ಹೆಂಡತಿ ಸಂಪಕ್ಕಳ ಹತ್ತಿರ ಬಂದು ಪಿಸುದನಿಲಿ, ’ಅಕ್ಕಾ...ನಮ್ಮೆಜಮಾನ್ರು ಮಾತಿಗೆ ಮಾತು ಬೆಳೆದು ನನ್ನ ಬಾಮೈದ ರಂಗಣ್ಣನ್ನ ಕೊಚ್ಚಿ ಹಾಕಿಬಿಟ್ಟವರೆ ಕಣೆ. ಅವನ ತಲೆ ತಂದು ನಮ್ಮನೆ ಉಪ್ಪರಿಗೆಲಿರೋ ಪೆಟ್ಟಿಗೇಲಿ ಇಟ್ಟವರೆ...ಯಾರಹತ್ರೂ ಹೇಳಬೇಡ ಅಂದವರೆ..ನಿನ ದಮ್ಮಯ್ಯಾ ಯಾರಿಗೂ ಹೇಳಬೇಡ...ಏನೋ ನೀನು ಕೇಳಿದ್ಕೆ ಹೇಳಿದೆ ಕಣೆ...’ ಅಂದಳು. ’ಅಯ್ಯೋ ಹಂಗಾ’ ಅಂದ ಸಂಪಕ್ಕ ಅವಳನ್ನು ಸಮಾಧಾನ ಮಾಡಿ ಕಳಿಸಿಕೊಟ್ಟು, ಮನೆ ಬಾಗಿಲು ಮುಂದಾಕಿಕೊಂಡು ತನ್ನ ಗೆಳತಿ ತಿಮ್ಮಕ್ಕನ ಮನೆಗೆ ಹೊರಟಳು. ತಿಮ್ಮಕ್ಕ ಸುದ್ದಿನ ಪಾತಮ್ಮನಿಗೆ ಹೇಳಿದಳು, ಪಾತಮ್ಮ ಸಿದ್ದಕ್ಕನಿಗೆ. ಹೀಗೇ ಸುದ್ದಿ ತಿಂಗಳೊಳಗೆ ಆ ಕಿವಿ, ಈ ಕಿವಿ ದಾಟಿ ಊರಿನ ರಾಜನಿಗೆ ತಲುಪಿತು.
ರಾಜ ದೊಡ್ ಮನುಷ್ಯನ ಮನೆಗೆ ಸಿಪಾಯಿ ಕಳಿಸಿದ. ಅವರು ದೊಡ್ ಮನುಷ್ಯನನ್ನು ಹಿಡಿದುಕೊಂಡು ಅವನ ಪೆಟ್ಟಿಗೆ ಹೊತ್ತುಕೊಂಡು ರಾಜನ ಹತ್ರ ತಂದರು. ರಾಜ ಪೆಟ್ಟಿಗೆಯನ್ನು ತೆಗೆಸಿ, ಅದ್ರಲಿದ್ದ ತಲೆಯನ್ನು ಹೊರಗೆ ತೆಗೆಸಿದ. ಆದರೆ ಅದರಲ್ಲಿದ್ದುದು ಬರೀ ಕಲ್ಲಂಗಡಿ ಹಣ್ಣು. ರಾಜನಿಗೆ ಆಶ್ಚರ್ಯ ಆಯಿತು. ದೊಡ್ ಮನುಷ್ಯನ್ನ ’ಇದ್ಯಾಕೆ ಹಿಂಗೆ ಮಾಡಿದೆ? ನಿನ ಬಾಮೈದನ ತಲೇನ ಎಲ್ಲಿ ಹೊಕ್ಕಿಸಿಟ್ಟೆ’ ಅಂತ ಕೇಳಿದ. ಆಗ ಆ ದೊಡ್ ಮನುಷ್ಯ ತಾನು ಮಾಡಿದ್ದ ಗುಟ್ಟಿನ ಕೆಲಸ ಹೇಳಿದ. ’ಆ ಮುದುಕಪ್ಪ ಸೂಳೆಸಂಗ ಮಾಡಿದ್ರೂ ಗೀಳೆ ಸಂಗ ಮಾಡ್ಬೇಡ, ಶೆಟ್ಟಿ ಸಂಗ ಮಾಡಿದ್ರೂ ಗಿಟ್ಟಿ ಸಂಗ ಮಾಡ್ಬೇಡ, ಏನೇ ಗುಟ್ಟಾದ್ರೂ ಹೆಂಡ್ತಿಗೆ ಹೇಳ್ಬೇಡ ಅಂದಿದ್ದ ಮಹಾಸ್ವಾಮಿ... ಮೊದಲ್ನೆಯವು ಗೊತ್ತಿದ್ದವು. ಹೇಂಡ್ತಿಗೆ ಗುಟ್ಟು ಹೇಳಿದ್ರೆ ಏನಾಗುತ್ತೆ ಅಂತ ತಿಳಿಯಕೆ ಹಿಂಗೆ ಮಾಡಿದೆ’ ಅಂತ ರಾಜನಿಗೆ ಹೇಳಿದ. ಸುದ್ದಿ ಕೊಟ್ಟು ನೆಂಟರ ಮನೆಲಿದ್ದ ತನ್ನ ಬಾಮೈದನ್ನ ಕರೆಸಿದ. ರಾಜ ದೊಡ್ ಮನುಷ್ಯನ ಮಾತಿಗೆ ನಗಾಡಿ ಅವನನ್ನು ಊರಿಗೆ ಕಳಿಸಿದ.