ಜಗ್ಗಲಿಗೆ ಮೇಳ

 
ಎಸ್. ರಂಗಧರ
 
ಜಗ್ಗಲಿಗೆ ಒಂದು ದೊಡ್ಡ ತಮಟೆ ಅಥವ ಹಲಗೆ. ಕರ್ನಾಟಕ ಜನಪದ ಕಲೆಗಳಿಗೆ ಉತ್ತರ ಕರ್ನಾಟಕದ ಕೊಡುಗೆ. ೧೯೭೭ರ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಜಿ. ನಾರಾಯಣ್ ಅಧ್ಯಕ್ಷರಾಗಿದ್ದರು. ಅವರು ಆಗಿನ ಐ ಎ ಎಸ್ ಅಧಿಕಾರಿ ಎಚ್. ಎಲ್. ನಾಗೇಗೌಡರ ನೇತ್ರತ್ವದಲ್ಲಿ, ಆಗಿನ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ಗೊ.ರು. ಚನ್ನಬಸಪ್ಪ ಅವರ ಸಂಪಾದಕತ್ವದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನೂ ಜಾಲಾಡಿ ಜನಪದ ಕಲೆಗಳಿಗಾಗಿ ಹುಡುಕಿದರು. ಬಹುದೊಡ್ಡ ನಿಧಿಯಂತೆ ಆಗ ಸುಮಾರು ೧೪೫ ಜನಪದ ಕಲೆಗಳನ್ನು ಗುರುತಿಸಲಾಯಿತು. ಆಗ ಜಗ್ಗಲಿಗೆ ನಮ್ಮ ಕಣ್ಣಿಗೆ ಬೀಳಲಿಲ್ಲ. ಮುಂದೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಇದೇ ಕೆಲಸವನ್ನು ಕೈಗೆತ್ತಿಕೊಂಡು ಮತ್ತಷ್ಟು ಕಲೆಗಳಿಗಾಗಿ ಹುಡುಕಿದಾಗ ಈ ಜಗ್ಗಲಿಗೆ ಉತ್ತರಕರ್ನಾಟಕದಲ್ಲಿ ನಮ್ಮ ಎದುರಾಯಿತು. ಈ ಎಲ್ಲಾ ಕಲೆಗಳೂ ಜನಪದರ ಮಧ್ಯೆ ನಿರಂತರ ಪ್ರದರ್ಶನವಾಗುತ್ತಲೇ ಇದ್ದವು ಆದರೆ ದಾಖಲಾಗಿರಲಿಲ್ಲ. ನಗರದವರ ಹೊಸ ರುಚಿಗಾಗಿ ವಿದ್ಯಾವಂತರು ಹುಡುಕಿ ದಾಖಲಿಸಿದರು ಅಷ್ಟೇ!
 
ಜಗ್ಗಲಿಗೆಗೆ ರಣಹಲಗೆ ಎಂಬ ಇನ್ನೊಂದು ಹೆಸರುಂಟು. ಜಗ್ಗಲಿಗೆ ಆಕಾರ, ಅದರ ಸ್ವರೂಪವನ್ನು ಕಂಡು ಈ ಹೆಸರು ಬಂದಂತೆ ಕಾಣುತ್ತದೆ. ಒಂದು ಜಗ್ಗಲಿಗೆ ಸುಮಾರು ೪ ರಿಂದ ೫ ಅಡಿ ಎತ್ತರದ ವೃತ್ತಾಕಾರದ ಚರ್ಮ ವಾದ್ಯ. ಎತ್ತಿನ ಗಾಡಿನ ಚಕ್ರದ ಆಕಾರಕ್ಕೆ ಹೊರ ಕಟ್ಟನ್ನು ಹದಗೊಳಿಸಿ ಅದಕ್ಕೆ ನಯ ಮಾಡಿದ ಎತ್ತು ಅಥವ ಕೋಣನ ಚರ್ಮವನ್ನು, ಚರ್ಮದ ದಾರದಿಂದಲೇ ಬಿಗಿದು ಕಟ್ಟಿ ಜಗ್ಗಲಿಗೆಯನ್ನು ಮಾಡತ್ತಾರೆ. ಹಲಗೆಯ ಹಾಗೆ ಕಾಣುವ ಚರ್ಮ ಭಾಗದಲ್ಲಿ ಚಿತ್ತಾರಗಳನ್ನು ಬರೆದಿರುತ್ತಾರೆ. ವಾದ್ಯದ ಕಂಠದ ಸೂತ್ರ ಹಾಗು ಮಧ್ಯ ಭಾಗದಲ್ಲಿ ಮನಸೆಳೆಯುವ ಬಣ್ಣದ ರಚನೆಗಳು ಇರುತ್ತವೆ. ಈ ಬೃಹತ್ ಹಲಗೆಯನ್ನು ಕಂಕುಳಲ್ಲಿ ಎತ್ತಿಕೊಂಡು ಇತರ ತಮಟೆಗಳ ರೀತಿಯಲ್ಲಿ ಬಡಿಯಲು ಸಾಧ್ಯವಿಲ್ಲ. ಎಡಗೈಯಲ್ಲಿ ಹಲಗೆಯನ್ನು ಉರುಳಿಸುತ್ತಾ, ಬಲಗೈಯಲ್ಲಿ ಒಂದು ಕೋಲು ಹಿಡಿದು, ಆ ಕೋಲಿನಿಂದ ಚರ್ಮದ ಮೇಲೆ ಲಯಬದ್ಧವಾಗಿ ಏಟುಕೊಡುತ್ತಾ ಅದನ್ನು ಉರುಳಿಸಿ ಬಾರಿಸುತ್ತಾರೆ. ಈ ಮೇಳ ಕಳೆಗಟ್ಟಬೇಕಾದರೆ ಹದಿನೈದರಿಂದ ಇಪ್ಪತ್ತು ಜನ ಕಲಾವಿದರು ಮತು ಪ್ರತಿಯೊಬ್ಬರಿಗೂ ಒಂದೊಂದು ಹಲಗೆಗಳು ಬೇಕಾಗುತ್ತವೆ. ಕಲಾವಿದರು ಬಣ್ಣ ಬಣ್ಣಗಳ ನಿಲುವಂಗಿ, ಕಚ್ಚೆಪಂಚೆ, ತಲೆಗೆ ರುಮಾಲು ಸುತ್ತಿರುತ್ತಾರೆ ಮತ್ತು ಕೆಲವೊಮ್ಮೆ ಸೊಂಟಕ್ಕೆ ನಡುವಸ್ತ್ರ ಬಿಗಿದುಕೊಂಡಿರುತ್ತಾರೆ.
 
ಜಗ್ಗಲಿಗೆ ಕಲೆ ಆಚಾರದಲ್ಲಿರುವುದು ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ. ಜಗ್ಗಲಿಗೆ ಮೇಳದವರಿಂದ ಹೆಚ್ಚಿನ ಕುಣಿತ ನಿರೀಕ್ಷಿಸುವಂತಿಲ್ಲ. ಬದಲಾಗಿ ಜಗ್ಗಲಿಗೆಯ ಸ್ವರೂಪವೇ ಒಂದು ಹೊಸನೋಟ! ಕಲಾವಿದರು ಅವುಗಳ ಬೆನ್ನುಹತ್ತಿದಂತೆ ಏಟು ಕೊಡುತ್ತಾ, ಅವುಗಳನ್ನು ಬಂಡಿಯಂತೆ ಓಡಿಸುತ್ತಾ ಸಾಗುವುದು ಮತ್ತು ಲಯಬದ್ದವಾದ ಲಘು ಹೆಜ್ಜೆಗಳನ್ನು ಹಾಕುತ್ತಾ ಜಗ್ಗಲಿಗೆಯ ಜೊತೆ ಚಲಿಸುವ ಕ್ರಮ ಅಕರ್ಷಕವಾಗಿರುತ್ತದೆ . ಹಲಗೆಗಳನ್ನು ನೂಕಿ ನಡೆಸುತ್ತಾ, ಬಲಗೈಯಲ್ಲಿ ಏಟುಕೊಡುತ್ತಾ ವಿಷೇಶವಾಗಿ ವೃತ್ತಾಕಾರವಾಗಿ ಹಿಂದೆ ಮುಂದೆ ನಡೆಯುವ ಕ್ರಮ ಮನಸೆಳೆಯುತ್ತದೆ. ಈ ಎಲ್ಲ ಚಲನೆಗೆ ಮೂಲ ಪ್ರೇರಣೆ ಈ ಮೇಳದ ಮಧ್ಯೆ ನಿಂತು ’ಕಣಿ’ ಎಂಬ ಹಲಗೆಯನ್ನು ಬಾರಿಸುತ್ತಾ ತಾಳಗತಿಯನ್ನು ಒದಗಿಸುವ ತಂಡದ ಮುಖ್ಯಸ್ಥ. ಮುಖ್ಯಸ್ಥನ ತಾಳಗತಿಗಳನ್ನು ಉಳಿದ ಕಲಾವಿದರು ಅನುಸರಿಸುತ್ತಾರೆ. ಕುಣಿತದಲ್ಲಿ ರಭಸ ಇರುವುದಿಲ್ಲ. ಈ ಕುಣಿತ ಉತ್ತರ ಕರ್ನಾಟಕದ ಅಲಾವಿ ಮತ್ತು ಹೆಜ್ಜೆ ಕುಣಿತಗಳನ್ನು ಹೋಲುತ್ತದೆ. ಇದರ ವಿಶೇಷ ಹೆಜ್ಜೆಯೆಂದರೆ ನಾಲ್ಕು ಜನ ಜಗ್ಗುಲಿದೆಯನ್ನು ಎತ್ತಿ ಹಿಡಿದರೆ ಅದರ ಮೇಲೆ ತಂಡದ ಮುಖ್ಯಸ್ಥನು ನಿಂತು ’ಕಣಿ’ ಬಾರಿಸುತ್ತಾನೆ. ಜಗ್ಗಲಿಗೆಯನ್ನು ಕೆಲವೊಮ್ಮೆ ಹೆಗಲ ಮೇಲೆ ಎತ್ತಿ ಹಿಡಿದೂ ಬಾರಿಸಲಾಗುತ್ತದೆ. ಮೊದಲು ನಿಧಾನವಾಗಿ ಶುರುವಾಗುವ ಜಗ್ಗಲಿಗೆಯ ತಾಳ, ಮೇಳ ಮುಂದುವರಿದಂತೆ ವೇಗವಾಗುತ್ತಾ ಹೋಗುತ್ತದೆ. ಅತ್ಯಂತ ವೇಗವಾಗಿ ಬಡಿಯುವ ಹಂತ ತಲುಪಿದಾಗ ಕಲಾವಿದರು ಬಡಿತ-ಕುಣಿತದ ಗುಂಗಿನಲ್ಲಿ ಬೇರೊಂದು ಲೋಕ ಪ್ರವೇಶಿಸಿಬಿಟ್ಟಿರುತ್ತಾರೆ! ಮೇಳದ ಸುತ್ತ ನೆರೆದು ಅದರ ಆನಂದವನ್ನು ಅನುಭವಿಸುವವರ ಮನಸ್ಥಿತಿಯೇ ಬೇರೆ!
 
ಕರ್ನಾಟಕದಲ್ಲಿ ಹಲವಾರು ಬಗೆಯ ಹಲಗೆ (ಚರ್ಮವಾದ್ಯ) ಕುಣಿತಗಳಿವೆ. ಈ ರೀತಿಯ ಹಲಗೆಗೆ ದಕ್ಷಿಣ ಕರ್ನಾಟಕದಲ್ಲಿ ’ತಮಟೆ’ ಎಂದು ಕರೆಯುತ್ತಾರೆ. ಚಕ್ರಾಕಾರದ ಈ ವಾದ್ಯ ಬೇರೆಬೇರೆ ಕಡೆಗಳಲ್ಲಿ ಸ್ವರೂಪ ಬದಲಾವಣಿ ಹೊಂದುತ್ತದೆ. ಅನೇಕ ಜಾನಪದ ಕಲೆಗಳಲ್ಲಿ ಈ ವಾದ್ಯ ಮುಖ್ಯವಾಗಿಯೂ-ಪೂರಕವಾಗಿಯೂ ಕೆಲಸ ಮಾಡುತ್ತದೆ. ಜಗ್ಗಲಿಗೆಯನ್ನು ಮಾತ್ರ ಉಳಿದೆಲ್ಲ ವೃತ್ತಾಕಾರದ ಹಲಗೆಗಳ ತಾತ ಎನ್ನಬಹುದು. ಹಲಗೆ ಅಥವ ತಮಟೆ ಬಡಿಯುವವರು ಸಾಮಾನ್ಯವಾಗಿ ಕೆಳಜಾತಿಗಳಿಗೆ ಸೇರಿದವರು. ಆದರೆ ಜಗ್ಗಲಿಗೆಗೆ ಈ ಮಿತಿ ಇಲ್ಲ. ಬಹುಶಃ ನಗಾರಿ ಸಂಪ್ರದಾಯದಂತೆ ದೊಡ್ಡದನಿ ಮತ್ತು ಬಹುಜನರನ್ನು ಸೆಳೆಯಲು ಈ ಬಡಿತ ಬಳಕೆಗೆ ಬಂದಿರಬಹುದು. ಈಗ ಕರ್ನಾಟಕದಲ್ಲಿ ಕೆಲವೇ ಜಗ್ಗಲಿಗೆ ತಂಡಗಳು ಕಾಣಬರುತ್ತಿವೆ. ಇರುವ ಕೆಲವೇ ಕೆಲವು ತಂಡಗಳಿವೆ ಬಹಳ ಬೇಡಿಕೆ ಇದೆ.
 

 
 
 
                                                                                      ಮರಳಿ ಇನಿತೆನೆಗೆ