 |
|
 |
|
ಜೆನೆಟಿಕಲಿ ಮಾಡಿಫೈಡ್ ಫುಡ್ ಗಳು (ಕುಲಾಂತರಿ ತಳಿ)-ಪರಿಸರಕ್ಕೆ ಎಷ್ಟು ಸರಿ?
ಭಾಗ-೧
ವಿಜ್ನಾನ ಮನುಷ್ಯನಲ್ಲಿ ಬೆಳೆಯುತ್ತಾ ಹೋದಂತೆ, ತನ್ನ ಆಳ ವ್ಯಾಪ್ತಿಗಳಿಗೆ ತಾನೇ ಸವಾಲು ಹಾಕಿಕೊಳ್ಳುತ್ತಾ, ವಿಸ್ತರಿಸುತ್ತಾ ಹೋದಂತೆ ಅದಕ್ಕೊಂದು ಬಗೆಯ ಹುರುಪು ಬಂದುಬಿಟ್ಟಿದೆ. ಎಣೆಯಿಲ್ಲದ ಹುರುಪು. ಕೆಲವೊಮ್ಮೆ ತುಂಡು ದನಗಳಷ್ಟು ಆಟ. ಲಂಗು ಲಗಾಮಿಲ್ಲದ ಓಟ. ಈ ಬೆಳವಣಿಗೆಯಲ್ಲಿ ಅದು ಮನುಷ್ಯರಿಗೆ ಕೊಟ್ಟಿರುವ ಅರಿವು ಅಪಾರ. ಆದರೆ ಈ ತಿಳುವಳಿಕೆ ಅಡ್ನಾಡಿಗಳ ಕೈಗೆ ತಲುಪಿ ಅದರಿಂದ ಆಗಿರುವ ಅನಾಹುತಗಳು ಭಾರಿ; ಅದು ಸಿಡಿದ ಕ್ಷಣಗಳಲ್ಲಿಯೇ ನಿರ್ನಾಮದ ತುದಿ ತಲುಪಿಸಿಬಿಡುವ ಅಣುಬಾಂಬ್ ಆಗಿರಬಹುದು ಅಥವಾ ಜೀವಮಾನವಿಡೀ ನಾವು ತಟ್ಟೆಯಲ್ಲಿ ಹಾಕಿ ತಿಂದು ನಂತರ ನಮ್ಮ ಹೊಟ್ಟೆ ತಲುಪಿ- ಅಲ್ಲಿ ನಿಸರ್ಗದತ್ತವಾಗಿ ಚಟುವಟಿಕೆಯಿಂದಿರುವ ನಮ್ಮ ಜೀವಕೋಶಗಳ ಯೋಚನಾ ಕ್ರಿಯೆಯನ್ನು, ಡಿ ಎನ್ ಎಗಳನ್ನು ಬದಲಿಸಿ ಅವು ನಮ್ಮ ದೇಹದ ವಿರುದ್ಧ ಸಮರ ಸಾರುವಂತೆ ಮಾಡುವ ಕುಲಾಂತರಿ ತಳಿ ಆಹಾರ ಆಗಿರಬಹುದು.
ಭಾರತದಲ್ಲಿ ಕುಲಾಂತರಿ ತಳಿ ಆಹಾರದ ಬಗ್ಗೆ ಇತ್ತೀಚೆಗೆ ಬಹಳ ಆರೋಗ್ಯಕರ ಚರ್ಚೆ-ಚಳುವಳಿ ನಡೆಯುತ್ತಿವೆ. ರೈತ ಚಳುವಳಿಗಳ, ಪರಿಸರವಾದಿಗಳ, ಕಾರ್ಯೋನ್ಮುಖ ಯುವ ಜನರ ಒತ್ತಾಯ-ಚಳುವಳಿಗಳಿಗೆ ಮಣಿದು ಸರ್ಕಾರ ಸಧ್ಯಕ್ಕಾದರೂ ಬಿಟಿ ಬದನೆಯನ್ನು ಬೆಳೆಯಲು ತಡೆ ತಂದಿದೆ. ಆದರೆ ಇದು ಶಾಶ್ವತವಾಗಿರದು. ಏಕೆಂದರೆ ಸಿರಿವಂತ ಬಹುರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರವನ್ನ, ಅದನ್ನು ನಡೆಸುವ ಜೊಳ್ಳು ಸೈನಿಕರನ್ನು ಕೊಂಡುಕೊಳ್ಳಲು ಅಥವಾ ತರಿದು ಹಾಕಲು ಹೆಚ್ಚು ಸಮಯ-ಶ್ರಮ ಬೇಕಾಗದು. ಈ ಬಹುರಾಷ್ಟ್ರೀಯ ಕಂಪನಿಗಳಿಗೆ ಯಾಕೆ ರೈತರಿಗೆ ಕುಲಾಂತರಿ ತಳಿಗಳನ್ನು ಮಾರುವ ಅಥವಾ ಜನರಿಗೆ ಅವುಗಳ ಉತ್ಪನ್ನವನ್ನು ತಿನ್ನಿಸುವ ತೆವೆಲು? ಆಶ್ಚರ್ಯ ಪಡಬೇಡಿ. ಇದೊಂದು ಬಗೆಯ ವಿಶೇಷ ವಸಾಹತುವಾದ. ಇದು ಬಹುರಾಷ್ಟ್ರೀಯ ಕಂಪನಿಗಳ ಮತ್ತು ಬದಲಾವಣೆಗೆ-ಹೆಚ್ಚಿನ ಅಭಿವೃದ್ಧಿಗೆ (ಇಲ್ಲಿ ಹೆಚ್ಚಿನ ಆಹಾರ ವೃಧ್ಧಿಗೆ ಎಂದಿಟ್ಟುಕೊಳ್ಳೋಣ) ಮುಂದಾಲೋಚನೆಯಿಲ್ಲದೆ ಹಪಹಪಿಸುತ್ತಿರುವ ದೇಶಗಳ ಜನತೆಯ ಮಧ್ಯದ, ಕಣ್ಣಿಗೆ ಕಾಣದ ಇನ್ವಿಸಿಬಲ್ ಯುಧ್ಧ. ಬಹುರಾಷ್ಟ್ರೀಯ ಕಂಪನಿಗಳ ಹಿರಿಯ ಹೂಡಿಕೆದಾರರನ್ನು ಬಿಟ್ಟರೆ ಮತ್ತಾರಿಗೂ ಇದು ಒಂದು ಬಗೆಯ ಯುದ್ಧ ಎಂದು ಗೊತ್ತೇ ಇರುವುದಿಲ್ಲ! ಅದೇ ಈ ಸಮರದ ದುರಂತ. ಈ ವಸಾಹತುವಾದಕ್ಕೆ ಮೋನ್ಸ್ಯಾಂಟೋ ನಂತಹ ಭಾರೀ ಕಂಪನಿಗಳಿಗೆ ಸೈನ್ಯದ-ಸೈನಿಕರ ಅಗತ್ಯವಿಲ್ಲ. ಯುದ್ಧದಲ್ಲಿ ಮೋನ್ಸ್ಯಾಂಟೋನ ಪಡೆ ನೆಲಕ್ಕುರುಳುವುದೂ ಇಲ್ಲ, ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಆಗುವುದೇನಿದ್ದರೂ ಅವರ ಮಾತು ಕೇಳಿ, ಅವರು ತೋರಿಸುವ ಬಣ್ಣಬಣ್ಣದ, ಬಹು ಗಾತ್ರದ, ಹೊಳೆಯುವ-ಥಳುಕಿನ ತರಕಾರಿಗಳ ಬೀಜ ಸಸಿಗಳನ್ನು ಕೊಂಡು ಅದನ್ನು ಕೃಷಿ ಮಾಡುವ ರೈತರಿಗೆ, ಅವರ ಫಲವತ್ತಾದ ಭೂಮಿಗೆ, ಅವರ ಸ್ವಾವಲಂಬಿ ಮಾರುಕಟ್ಟೆಗೆ, ಹಾಗೆ ಉತ್ಪಾದನೆಯಾದ ಆಹಾರವನ್ನು ತಿನ್ನುವ ಜನರಿಗೆ ಮತ್ತು ಪರಿಸರಕ್ಕೆ.
ಹೇಗೆಂದು ಸರಳವಾಗಿ ಹಂತ ಹಂತವಾಗಿ ವಿವರಿಸುತ್ತಾ ಅರ್ಥ ಮಾಡಿಕೊಳ್ಳುವ ಪ್ರಯತ್ನ ನಮ್ಮ ಆಯಾಮದ್ದು.
 ಹಾಗೆ ಮಾಡುವ ಮುನ್ನ ಒಂದು ವಿಷಯವನ್ನು ಹಂಚಿಕೊಳ್ಳುತ್ತೇವೆ. ಅಮೆರಿಕಾದ ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಕೃತಕ ಗರ್ಭಧಾರಣೆ (ಐ ವಿ ಎಫ್, ಐ ವಿ,ಯು) ಮೂಲಕ ಹುಟ್ಟುವ ಮಕ್ಕಳಿಗೆ ಸ್ವಾಭಾವಿಕವಾಗಿ (ಯಾವುದೇ ಫರ್ಟಿಲಿಟಿ ಚಿಕಿತ್ಸೆಯ ಅಗತ್ಯ ಬೀಳದೇ) ಹುಟ್ಟುವ ಮಕ್ಕಳಿಗಿಂತ ಕ್ಯಾನ್ಸರ್ ಅಥವಾ ಇತರ ಮಾರಕ ರೋಗಗಳು ಬರುವ ಸಾಧ್ಯತೆ ಹೆಚ್ಚು ಎಂದು ತಿಳಿಸಲಾಯಿತು. ಶಾಕಿಂಗ್ ಅಲ್ಲವೇ?! ಮಕ್ಕಳಿಲ್ಲವೆಂದು ದುಃಖಿತರಾಗಿ, ಎಷ್ಟಾದರೂ ಹಣ-ಸಮಯ-ಶ್ರಮ ಕೊಟ್ಟು ಮಕ್ಕಳನ್ನು ಪಡೆಯುವ ತಂದೆ ತಾಯಂದಿರಿಗೆ ಎದೆ ಬಿರಿಯುವ ವಿಷಯ. ಅವರದ್ದೇ ಬೀಜ, ಅವರದ್ದೇ ಗರ್ಭ, ಆದರೆ ಹಾಕುವ ಕ್ರಿಯೆ ಮಾತ್ರ ಬೇರೆಯಾಗಿದ್ದಕ್ಕೇ ಪ್ರಕೃತಿ ಆ ಕೂಸುಗಳನ್ನು ಬೇರೆಯವಕ್ಕಿಂತ ದುರ್ಬಲವನ್ನಾಗಿ ಮಾಡಿಟ್ಟಿರುತ್ತದಂತೆ. ಇದು ನಿಜವೆಂದು ಸಾಬೀತಾಗಿರುವ ಪಕ್ಷದಲ್ಲಿ ಕುಲಾಂತರಿ ತಳಿಗಳ ಬಗ್ಗೆ ಯೋಚಿಸಿ. ಈ ತಳಿಗಳ ಡಿ ಎನ್ ಎ ಯನ್ನೇ ಪ್ರಯೋಗಶಾಲೆಯಲ್ಲಿ ಬದಲಿಸಲಾಗಿರುತ್ತದೆ. ಈ ಕೀಟದ ಕಡಿತಕ್ಕೆ ಪ್ರತಿಕ್ರಿಯಿಸಬೇಡವೆಂದು ಅವುಗಳ ಡಿ ಎನ್ ಎ ಗೇ ಹಲವಾರು ಕೀಟ-ರೋಗಗಳ ನಿರೋಧಕ ಮದ್ದುಗಳನ್ನು ಉಣಿಸಿ ಆ ತಳಿಯನ್ನು ತಯಾರಿಸಿರಲಾಗುತ್ತದೆ. ಈ ರೋಗ ನಿರೋಧಕ ಮದ್ದುಗಳು ಮನುಷ್ಯನ ದೇಹಕ್ಕೆ ಎಷ್ಟು ಅವಶ್ಯಕ-ಆರೋಗ್ಯಕರ ಎನ್ನುವುದು ಚರ್ಚಾಸ್ಪದ ವಿಷಯ. ಅದನ್ನು ನಮ್ಮ ಮುಂದಿನ ಸಂಚಿಕೆಗಳಲ್ಲಿ ನಿಮ್ಮ ಮುಂದಿಡುತ್ತೇವೆ. ಆ ತಳಿಯ ಗಿಡಗಳು ಭೂಮಿಯ-ಗಾಳಿಯ ಸಂಪರ್ಕಕ್ಕೆ ಬಂದ ಮೇಲೆ ಅವು ಹೀಗೇ ನಡೆದುಕೊಳ್ಳಬೇಕೆಂದು ಅವುಗಳ ಕಣ-ಅಣುಗಳಲ್ಲಿಯೇ ಅವಕ್ಕೆ ಆರ್ಡರ್ ಆಗಿರುತ್ತದೆ! ಹುಟ್ಟಿನಿಂದಲೂ ಅವು ಪ್ರೋಗ್ರಾಮ್ಡ್ ಗಿಡಗಳು. ಅಂದರೆ ಅವು-ಪ್ರತಿ ಗಿಡವೂ ಒಂಥರದ ಮಂಚೂರಿಯನ್ ಕ್ಯಾಂಡಿಡೇಟ್ ಗಳು! ಅವುಗಳ ದೇಹದಲ್ಲಿ ಸ್ವಾಭಾವಿಕ ಪೋಷಕಾಂಶಗಳಿಗಿಂತ ಸಿಂಥೆಟಿಕ್ ಅಂಶಗಳೇ ಹೆಚ್ಚಿರುತ್ತವೆ ಎಂದಾಯಿತಲ್ಲವೇ?
 ಅದಷ್ಟೇ ಅಲ್ಲ, ಅತಿರೇಕದ ಕುಲಾಂತರಿ ತಳಿಗಳು ಒಂದು ಥರದಲ್ಲಿ ರೇಪ್ ಚೈಲ್ಡ್ ಗಳು! ಅವುಗಳ ಅಮ್ಮ-ಅಪ್ಪ ಸಸ್ಯಗಳನ್ನು ಬಲವಂತವಾಗಿ ಅದೇ ರೀತಿಯ ಕಾಯಿ ಅಥವಾ ಹಣ್ಣನ್ನು ಉತ್ಪಾದಿಸುವಂತೆ ವೈಜ್ನಾನಿಕವಾಗಿ (ಈ ಬಗೆಯ ವಿಜ್ನಾನ ಪ್ರಶ್ನಾರ್ಹವಲ್ಲವೇ?) ಟ್ಯೂನ್ ಮಾಡಲಾಗಿರುತ್ತದೆ. ಇಲ್ಲಿ ಪರಿಸರದ ಪಾತ್ರ ತಟಸ್ಥ. ಹಣ್ಣು ಕಾಯನ್ನೀಯುವ ಸಸ್ಯಗಳು ಸ್ವಾಭಾವಿಕವಾದ ಪರಾಗಸ್ಪರ್ಷ ಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ. ತಮಗಿಷ್ಟವಾದ ಅಂಡದ ಜೊತೆ ಸೇರಿ ಫಲಿಸುವುದಿಲ್ಲ. ಬೇಸಿಕಲಿ, ಗಿಡಗಳು ಸಂತೋಷದಿಂದ ಮಕ್ಕಳನ್ನು ಅಂದರೆ ತಮ್ಮ ಕಾಯಿ-ಹಣ್ಣುಗಳನ್ನು ಹೆರುವುದಿಲ್ಲ.
ಮೇಲಾಗಿ ಈ ತಳಿಗಳು ಅವು ಹೇಳಿಕೊಂಡಂಥ ಫಲ ಕೊಡಬೇಕಾದರೆ ಅವುಗಳಿಗೆ ಮನೆಯ ಕೊಟ್ಟಿಗೆಯಲ್ಲಿ ಮಾಡಿದ ಕುರಿ-ಕೋಳಿ-ದನದ ಗೊಬ್ಬರ ಹಾಕಿದರೆ ಸಾಲದು. ಅವಕ್ಕೆ ಪ್ರಿಪೇರ್ಡ್ ಫುಡ್ಡೇ ಬೇಕು. ಬೆಳವಣಿಗೆಯ ಆಯಾ ಹಂತದಲ್ಲಿ ಆಯಾ ಬಗೆಯ ರಸಗೊಬ್ಬರಗಳು, ಔಷಧಗಳು ಆಗಲೇ ಬೇಕು. ಇವು ರೈತರಿಗೆ ಹೇಗೆ ದೊರಕುತ್ತದೆ?ಮೋನ್ಸ್ಯಾಂಟೋ ನಂತಹ ಕಂಪನಿಗಳು ಈ ರಸಗೊಬ್ಬರ-ಕೀಟನಾಶಕಗಳನ್ನೂ ಆಯಾ ತಳಿಗಳಿಗೆ ಅನುಗುಣವಾಗಿ ತಯಾರು ಮಾಡಿ ರೈತರಿಗೆ ಮಾರಲು ಕಾತುರರಿರುತ್ತಾರೆ. ಸ್ವಾವಲಂಬನೆ, ದೇಸಿ ಮಾರುಕಟ್ಟೆಯ ಗತಿ ಢಮಾರ್ ತಾನೇ.
ಈ ರಸಗೊಬ್ಬರ-ಕೀಟನಾಶಕಗಳ ಗುಣ ಮಟ್ಟದ ಕಥೆ ಕೇಳಿ. ಅವನ್ನು ಯಾವ ರೀತಿಯ ಪರಿಸರ ಕಾಳಜಿಯಿಂದಲೂ ತಯಾರು ಮಾಡಿರುವುದಿಲ್ಲ. ಅವೇನಿದ್ದರೂ ನಿಮ್ಮ-ನಮ್ಮ ಪೂರ್ವಿಕರು ಪ್ರೀತಿಯಿಂದ ಕಾಪಾಡಿಟ್ಟುಕೊಂಡು ಬಂದ ಫಲವತ್ತಾದ ಭೂಮಿಯನ್ನು ಪ್ರತಿ ವರ್ಷವೂ ಬರಡನ್ನಾಗಿ, ರೋಗಿಷ್ಟವನ್ನಾಗಿ, ಇವೇ ರಸಾಯನಿಕಗಳ ವ್ಯಸನಿಗಳನ್ನಾಗಿ ಮಾಡುತ್ತಾ ಬರುತ್ತವೆ. ಯೋಚನೆ ಮಾಡಿ. ನೂರಾರು ವರ್ಷಗಳಿಂದ ನೀರು-ಸಾವಯವ ಗೊಬ್ಬರ ಉಂಡು ಸಮೃದ್ಧ ಫಲ ಕೊಟ್ಟ ಭೂಮಿ ಇದೀಗ ಪ್ರತೀ ಬೆಳೆಗೂ ಹೆಚ್ಚು ಹೆಚ್ಚು ರಸಗೊಬ್ಬರ-ಔಷಧ ಕೇಳತೊಡಗುತ್ತದೆ. ನಮ್ಮ ಭೂಮಿಗೆ ನಾವೇ ಮದ್ಯ ಅಥವಾ ಡ್ರಗ್ಸ್ ತೆಗೆದುಕೊಳ್ಳುವುದನ್ನು ಕಲಿಸಿಕೊಟ್ಟಂತಲ್ಲವೇ. ಭೂಮಿ ಈ ಪ್ರಮಾಣದಲ್ಲಿ ಕಲುಶಿತವಾದರೆ ಬೆಳೆಯ ಗತಿ ಏನು? ಬೆಳೆಯುವವರ ಗತಿ ಏನು? ಊಟಕ್ಕೆ ಬಾಯಿ ತೆರೆದು ಕೂತಿರುವ ಕೋಟ್ಯಾಂತರ ಜೀವಿಗಳ ಗತಿ ಏನು?
 ಆಗ ಆಗುವುದೇನು ಗೊತ್ತಾ? ಆ ಪ್ರಮಾಣದಲ್ಲಿ ಕಲುಶಿತವಾದ-ಬರಡಾದ ಭೂಮಿಯನ್ನು ಮತ್ತೆ ಫಲವತ್ತು ಮಾಡಿಕೊಳ್ಳಲು ವರ್ಷಗಳೇ ತಾಕುತ್ತವೆ. ಸಣ್ಣ ಪ್ರಮಾಣದ ವ್ಯವಸಾಯ ಮಾಡುವ ನಮ್ಮ ರೈತರಿಗೆ ಭೂಮಿಯನ್ನು ಅಷ್ಟು ವರ್ಷಗಳ ಕಾಲ ಚೇತರಿಸಿಕೊಳ್ಳಲು ಬಿಡಲಾಗುವುದಿಲ್ಲ. ಅವರಿಗೆ ಭೂಮಿ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಕೇಳುವ ರಸಗೊಬ್ಬರಗಳನ್ನು ಒದಗಿಸಲೂ ಆಗುವುದಿಲ್ಲ. ಏಕೆಂದರೆ ತಳಿಯನ್ನು ಪರಿಚಯಿಸಿದ ಮೊದಲ ವರ್ಷ ಮೋನ್ಸ್ಯಾಂಟೋ ಒಂದು ಮೂಟೆ ರಸಗೊಬ್ಬರಕ್ಕೆ ೫೦೦ ರೂಪಾಯಿ ಬೆಲೆ ಇಟ್ಟರೆ, ರೈತ ಮತ್ತು ಅವನ ಭೂಮಿ ಆ ತಳಿಗೆ ಒಗ್ಗಿಕೊಂಡ ಮೇಲೆ (ಅಥವಾ ಅಡಿಕ್ಟ್ ಆಗಿದ್ದಾರೆಂದು ಖಾತ್ರಿಯಾದ ಮೇಲೆ) ರಸಗೊಬ್ಬರದ ಬೆಲೆಯನ್ನು ಒಂದು ಮೂಟೆಗೆ ೩೦೦೦ ರೂಪಾಯಿಯಷ್ಟು ಹೆಚ್ಚಿಸಿರುತ್ತದೆ! ಹೆಚ್ಚು ಇಳುವರಿಯನ್ನೂ ಕೊಡದ, ಹೆಚ್ಚು ಖರ್ಚನ್ನೂ ಮಾಡಿಸುವ ಭೂಮಿಯನ್ನು ಉಪಚರಿಸುವ ತಾಳ್ಮೆಯನ್ನು ರೈತ ಕಳೆದುಕೊಳ್ಳುತ್ತಾನೆ. ಅವನನ್ನು-ಅವನ ಬದುಕನ್ನು ಇಷ್ಟು ದಿನ ಕಾಯುತ್ತಿದ್ದ ಭೂಮಿ ಈಗ ಕಾಡಲು ತೊಡಗುತ್ತದೆ. ಆಗ ಆತ ತೀರ ದುರ್ಬಲನಾಗಿದ್ದರೆ ಆತ್ಮಹತ್ಯೆ ಸರಿ ಎನಿಸತೊಡಗುತ್ತದೆ, ಜೀವಗಳು ನೆಲಕ್ಕುರುಳುತ್ತವೆ. ಆಗ ಮತ್ತೆ ಕಾಣಿಸಿಕೊಳ್ಳುತ್ತವೆ ಮೋನ್ಸ್ಯಾಂಟೋನಂತಹ ಕಂಪನಿಗಳು! ಆದರೆ ಆಗವು ತಳಿ ಮಾರಲು ಬರುವುದಿಲ್ಲ, ರಸಗೊಬ್ಬರ ಮಾರಲು ಬರುವುದಿಲ್ಲ. ನಮ್ಮ ಭೂಮಿಯನ್ನು-ಬದುಕನ್ನು ಸಾರಾ ಸಗಟಾಗಿ ಕೊಂಡುಕೊಳ್ಳಲು ಬರುತ್ತವೆ.
ಮೋನ್ಸ್ಯಾಂಟೋ ಬರದಿದ್ದರೆ ಅದರ ಪರವಾಗಿ ಮತ್ತ್ಯಾರೋ ಹೂಡಿಕೆದಾರ ಬರುತ್ತಾನೆ. ಜಮೀನು ಖರೀದಿಯಾಗುತ್ತದೆ. ರೈತ ನೆಲ-ನೆಲೆ ಕಳೆದುಕೊಂಡು ಮಹಾನಗರಗಳಿಗೆ ಕೂಲಿ ಮಾಡಲೋ ಅಥವಾ ಕೈಗೆ ಬಂದ ನಾಲ್ಕು ಕಾಸಲ್ಲಿ ನಾಲ್ಕು ದಿನ ಮಜ ಮಾಡಲೋ ಎಲ್ಲಿಗೋ ಗುಳೆ ಏಳುತ್ತಾನೆ. ಅವನ ಜಮೀನು ಊರ ಹೊರಗಿನ ಐಷಾರಾಮಿ ಸಬರ್ಬನ್ ಬಂಗಲೆಗಳಿಗೆ ತಾಣವಾಗುತ್ತದೆ ಅಥವಾ ಮೋನ್ಸ್ಯಾಂಟೋ ಆ ಜಮೀನನ್ನು ಒಂದಷ್ಟು ವರ್ಷಗಳ ಕಾಲ ಜತನದಿಂದ ಉಪಚರಿಸಿ ಅದನ್ನು ಇನ್ನ್ಯಾವುದೋ ಕಂಪನಿಯ ಹೆಸರಿನಲ್ಲಿ "ಸಾವಯವ ಕೃಷಿ" ಉತ್ಪನ್ನಗಳ ಭೂಮಿಯನ್ನಾಗಿ ಮಾಡುತ್ತದೆ. ಅದು ಇಷ್ಟು ವರ್ಷ ತನ್ನ ಗೋದಾಮುಗಳಲ್ಲಿ ಕದ್ದು ಕಾಪಾಡಿಟ್ಟುಕೊಂಡಿರುವ ನಮ್ಮ ನೆಲದ ನಾಟಿ ಬೀಜ-ತಳಿಗಳನ್ನು ನಮ್ಮದೇ ಭೂಮಿಯಲ್ಲಿ ಬೆಳೆಯುತ್ತದೆ. ಅತಿ ಉತ್ಕೃಷ್ಟ ಸಾವಯವ ಆಹಾರವೆಂದು ಅದನ್ನು ಹತ್ತರಷ್ಟು ಬೆಲೆಗೆ ಮಾರಲಾಗುತ್ತದೆ, ಸಿರಿವಂತ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ದುಡ್ಡಿದ್ದವರಿಗೆ ಸಾವಯವ ಆಹಾರವನ್ನು ತಿನ್ನಿಸಿ ಸಾಕಲಾಗುತ್ತದೆ, ಇರದ ಬಡವರಿಗೆ-ದಡ್ದರಿಗೆ ಬಿಟಿ ಬದನೆಯಂತಹ ತಳಿಗಳನ್ನು ತಿನ್ನಿಸಿ ನಿಧಾನವಾಗಿ, ವ್ಯವಸ್ಥಿತವಾಗಿ ಉಸಿರುಕಟ್ಟಿಸಲಾಗುತ್ತದೆ.
ಹೀಗಾಗುತ್ತದೆ...ಆಗುತ್ತಿದೆ ಎಂದು ನಮಗೆ ಗೊತ್ತು. ಗೊತ್ತಿದ್ದೂ ನಾವು ಅದರ ಖೆಡ್ಡಾಗೆ ಬೀಳದಿರಲಿ, ನಮ್ಮ ಮಣ್ಣು, ನಮ್ಮ ಮನಸ್ಸು, ನಮ್ಮ ಬದುಕನ್ನು ಆಳುವ ಬುದ್ಧಿವಂತಿಕೆ ನಮ್ಮದೇ ಆಗಿರಲಿ. ನಮ್ಮ ಭೂಮಿ ನಮಗೇ ಇರಲಿ. ಅದರ ಆರೋಗ್ಯದ ಜವಾಬ್ದಾರಿ ನಮ್ಮೆಲ್ಲದಾಗಿರಲಿ ಎನ್ನುವುದು ನಮ್ಮ ಪ್ರತಿ ದಿನದ ಪ್ರಯತ್ನವಾಗಲಿ. ಆ ಪ್ರಯತ್ನದ ಬೆಳಕಿಗೆ ಅರಿವು ಮೊದಲ ಮೊಂಬತ್ತಿಯಾಗಲಿ ಎಂಬ ಆಶಯದಿಂದ ಆಯಾಮದ ಮತ್ತೊಂದು ಪ್ರೀತಿಯ ವಿಷಯ ಸಾವಯವ ಕೃಷಿಗೆ ಒತ್ತು ಕೊಡುತ್ತಿದ್ದೇವೆ. ಇದು ನಮ್ಮ ಮೊದಲ ಹೆಜ್ಜೆ. ಈ ಕುರಿತು ನಾವು ನಿಮ್ಮೊಂದಿಗೇ ಕಲಿಕೆ ಶುರು ಮಾಡುತ್ತಿದ್ದೇವೆ.
|
|
|
|
|
|
 |
|