ಅಂಗಳ      ನೀನಾರಿಗಾದೆಯೊ ಎಲೆ ಮಾನವ
 
 

ಗೋಹತ್ಯೆ : (೨) ಆಹಾರ

 
ಡಾ. ಹಿ. ಶಿ. ರಾ.
 
 
ಗೋಹತ್ಯೆ 'ಹಾಗಂದರೆ ಏನು? ಎಲ್ಲಿ ಗೋಹತ್ಯೆ ನಡೆಯುತ್ತಿದೆ. ಗೋವುಗಳನ್ನು ತಿನ್ನುವವರು ಅವರ ಸಂಪ್ರದಾಯಕ್ಕೆ ಅನುಗುಣವಾಗಿ ಕುಯ್ದು ತಿನ್ನುತ್ತಿದ್ದಾರೆ. ಕುರಿ, ಕೋಳಿ, ಮೀನು ಮುಂತಾದುವನ್ನು ತಿನ್ನುವವರು ಸಹ ತಮ್ಮ ನಡವಳಿಕೆಗೆ ಅನುಗುಣವಾಗಿ ಕೊಯ್ದು ತಿನ್ನುತ್ತಿದ್ದಾರೆ. ಈ ಎರಡೂ ಕ್ರಿಯೆಗಳು ಬೇರೆ ಬೇರೆ ಅಲ್ಲ. ತಿನ್ನುವುದಕ್ಕಾಗಿ, ತಿನ್ನಬಹುದಾದ ಪ್ರಾಣಿಗಳನ್ನು ಅವರವರ ಸಂಸ್ಕೃತಿಗೆ ಅನುಗುಣವಾಗಿ ಒಪ್ಪ - ಒರಣ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಹೀಗೆ ಊಟಕ್ಕಾಗಿ ಪ್ರಾಣಿಗಳನ್ನು ಬಳಸುವುದನ್ನೂ ಹತ್ಯೆ ಎನ್ನಬಹುದೆ? ಹತ್ಯೆ ಎನ್ನುವುದು ಅಪರಾಧ, ಸಂಸ್ಕಾರ ಎನ್ನುವುದು ಸಹಜ. ಹುಲಿ ಕಡವೆಯನ್ನು ಬೇಟೆಯಾಡುತ್ತದೆ, ಚಿರತೆ ಜಿಂಕೆಯನ್ನು ಬೇಟೆಯಾಡುತ್ತದೆ. ಇದು ಆಹಾರ ಕ್ರಮ, ನೈಸರ್ಗಿಕ ನಿಯಮ. ಜಗತ್ತಿನ ಬಹುತೇಕ ಮನುಷ್ಯರು ಮಾಂಸವನ್ನು ಆಹಾರವಾಗಿ ಬಳಸುತ್ತಾರೆ. ಅದು ಆರೋಗ್ಯಕ್ಕೂ ಇರಬಹುದು, ರುಚಿಗೂ ಇರಬಹುದು. ಇವೆಲ್ಲ ಜೀವನ ಸಂಸ್ಕೃತಿ. ಹಾಗಿದ್ದು ಗೋವುಗಳನ್ನು ಕೊಯ್ದು ಸಂಸ್ಕರಿಸಿ ತಿನ್ನುವುದನ್ನು ಹತ್ಯೆ ಎಂದು ಕರೆಯಲು ಹೇಗಾಗುತ್ತದೆ? ಹಾಗೆ ಕರೆದರೆ ಗೋವುಗಳನ್ನು ತಿನ್ನುವವರನ್ನು ಉದ್ದೇಶಪೂರ್ವಕವಾಗಿಯೆ ಅಪರಾಧಿಸ್ಥಾನದಲ್ಲಿ ನಿಲ್ಲಿಸಿದಂತಾಗುತ್ತದೆ. ಇಂಥ ಮನಸ್ಸು ಮನುಷ್ಯನ ಮನಸ್ಸು ಆಗುವುದಿಲ್ಲ.
 
ಧಾರ್ಮಿಕನೊಬ್ಬನಿಗೆ ತನ್ನ ಧಾರ್ಮಿಕ ಪ್ರಾಣಿಯನ್ನು ಕೊಲ್ಲುವುದು ಅಪರಾಧವೇ ಸರಿ. ಬೇರೆಯವನಿಗೆ ಆ ಪ್ರಾಣಿ ಸಾಮಾನ್ಯ ಪ್ರಾಣಿಗಳಲ್ಲಿ ಒಂದಾಗಿರುತ್ತದೆ. ಅವನು ಆ ಪ್ರಾಣಿಯನ್ನು ಕೊಂದು ತಿಂದರೆ ಹತ್ಯೆ ಅನಿಸುವುದಿಲ್ಲ. ಆಹಾರವಾಗುತ್ತದೆ. ಅವನದೂ ಒಂದು ಪವಿತ್ರ ಪ್ರಾಣಿ ಇರಬಹುದು. ಅದನ್ನು ಬೇರೆ ಸಮುದಾಯದವರು ಆಹಾರವಾಗಿ ಬಳಸುತ್ತಿರಬಹುದು. ಹಾಗಾದರೆ ಪ್ರತಿಯೊಂದು ಸಮುದಾಯದ ಧಾರ್ಮಿಕ ನಂಬಿಕೆಗಳು ಬೇರೆ ಬೇರೆಯಾಗಿರುತ್ತವೆ. ಅವುಗಳನ್ನು ಗೌರವಿಸಬೇಕು. ಒಂದು ಸಮುದಾಯದ ಕಡೆಯಿಂದ ಅಗೌರವ ಶುರುವಾದರೆ ಅದು ಪರಸ್ಪರರಲ್ಲಿ ಅಗೌರವ ಭಾವನೆಯನ್ನೆ ಹುಟ್ಟಿಸುತ್ತದೆ. ಇದು ಒಟ್ಟು ಸಮಾಜವನ್ನು ಅಸ್ವಸ್ಥಗೊಳಿಸುತ್ತದೆ. ಅಂಥ ಕಡೆ ಯಾವ ಧರ್ಮವೂ ಅಸ್ತಿತ್ವದಲ್ಲಿ ಇರುವುದಿಲ್ಲ. ಕೇವಲ ಅಸಹನೆ, ಅಸೂಯೆ, ದ್ವೇಷಗಳು ನೆಲೆಯೂರುತ್ತವೆ. ಒಂದೊಮ್ಮೆ ಯಾವುದೇ ಸಮುದಾಯದಲ್ಲಿ ಇಡೀ ಮಾನವಕುಲಕ್ಕೆ ಕಂಟಕಪ್ರಾಯವಾದ ನಂಬಿಕೆಯೊ, ಆಹಾರವೋ, ನಡವಳಿಕೆಯೊ ಇದ್ದಲ್ಲಿ ಅದನ್ನು ಸಾರ್ವತ್ರಿಕವಾಗಿಯೆ ವಿರೋಧಿಸಿ ನಿವಾರಿಸಿಕೊಳ್ಳಬಹುದು. ಅಂಥ ಕೆಲಸಗಳು ಆಗಿವೆ ಮತ್ತು ಆಗುತ್ತಿವೆ. ಸತಿಸಹಗಮನ ಪದ್ಧತಿಯ ನಿವಾರಣೆಯೆ ಇದಕ್ಕೆ ಸಾಕ್ಷಿ. ಆದರೆ ಗೋಹತ್ಯೆ ನಿಷೇಧ ಕಾನೂನು ತರುವ ಪರಾಕ್ರಮಿಗಳಲ್ಲಿ ಕೆಲವರಿಗೆ ಇದು ಸಹ್ಯವಾಗಿಲ್ಲ.
 
ಬಡವರಿಗೆ ಆಹಾರದ ಕೊರತೆ ಇದೆ. ಪೌಷ್ಠಿಕ ಆಹಾರದ ಮಾತು ಬಹಳ ದೂರದ್ದು. ಮಾಂಸಾಹಾರ ಕೂಡ ಕಷ್ಟ ಲಭ್ಯವಾಗಿದೆ. ಭಾರತದಲ್ಲಿ ಕಡಿಮೆ ಬೆಲೆಗೆ ಸಿಗುತ್ತಿರುವುದು ಗೋಮಾಂಸವೊಂದೆ. ಈಗ ಸರ್ಕಾರವು ಪಡಿತರ ವ್ಯವಸ್ಥೆಯಲ್ಲಿ ಕಡಿಮೆ ಬೆಲೆಗೆ ಅಕ್ಕಿ, ಗೋಧಿ, ಸೀಮೆಎಣ್ಣೆ, ಸಕ್ಕರೆ... ಹಂಚುತ್ತಿರುವಂತೆ ಗೋಮಾಂಸವನ್ನು ಹೊರತು ಪಡಿಸಿ ಇತರೆ ಮಾಂಸವನ್ನು ಕಡಿಮೆ ಬೆಲೆಗೆ ಕೊಡುವುದಾದಲ್ಲಿ ಬಹಳಷ್ಟು ಜನ ಗೋಮಾಂಸದ ಕಡೆಗೆ ತಿರುಗಿಯೂ ನೋಡುವುದಿಲ್ಲ. ಅದು ಸಾಧ್ಯವಾಗುವುದೆ? ಒಂದನ್ನು ನಿಷೇಧಿಸುವವರಿಗೆ ಅದಕ್ಕೆ ಪರ್ಯಾಯವನ್ನು ಹುಡುಕುವ ಜವಾಬ್ದಾರಿಯೂ ಬೇಕು. ಅಂಥ ತಲೆ ಇರುವ ರಾಜಕಾರಣಿಗಳು ನಮ್ಮಲ್ಲಿ ಎಲ್ಲಿದ್ದಾರೆ? ಬೀದಿಯಲ್ಲಿ ಲಫಂಗ ಕೆಲಸ ಮಾಡಿಕೊಂಡಿದ್ದ ಪ್ರಾಣಿಗಳು, ಮತ, ಧರ್ಮ ಎಂಬ ದೆವ್ವದ ಮನೆಗಳಿಂದ ಬಂದ ಮೃತ ಜೀವಿಗಳೇ ತುಂಬಿರುವ ರಾಜಕಾರಣ ಸಮಾಜದ ದೊಡ್ಡ ಪಿಡುಗಾಗಿದೆ.
 
ಈ ಭೂಮಿ ಮನುಷ್ಯನದು ಮಾತ್ರವಲ್ಲ. ಸಕಲೆಂಟು ಜೀವಿಗಳಿಗೂ ಇಲ್ಲಿ ಬದುಕಲು ಅವಕಾಶವಿದೆ. ನಿಸರ್ಗವೇ ಅದನ್ನು ಒದಗಿಸಿಕೊಟ್ಟಿದೆ. ನಿಮಗೆ ಉಪದ್ರವಕೊಡುವ ಜೀವಿಗಳನ್ನು ನಿವಾರಿಸಿಕೊಳ್ಳಿ, ಇತರೇ ಪ್ರಾಣಿಗಳಿಗೆ ಬದುಕಲು ಅವಕಾಶ ಮಾಡಿ ಕೊಡಿ. ದಯೆ ಎಂದು ತಿಳಿದುಕೊಂಡು ಸಹಕರಿಸಿ ಎಂದು ಮನುಷ್ಯನನ್ನು ಕೇಳಿಕೊಳ್ಳಬಹುದು. ಅಂಥ ಒಂದು ಜೀವಪರ ಹೋರಾಟವನ್ನೇ ಶುರು ಮಾಡಬಹುದು. ಆದರೆ! ಆದರೆ!! ಆದರೆ!!! ಬಳಸಿ, ಬಳಸಿ, ಹೆಚ್ಚು ಬಳಸಿ. ಮಸ್ತ್ ಮಜಾ ಮಾಡಿ ಎಂದು ಜಾಹೀರಾತು ಮಾಡುತ್ತಿರುವ ಅಭಿವೃದ್ಧಿ ಸಿದ್ಧಾಂತದ ಈ ಸಂದರ್ಭದಲ್ಲಿ ಪ್ರಾಣಿದಯೆ, ಜೀವ ದಯೆ, ಬಡವರ ಬಗ್ಗೆ ದಯೆ, ಲೈಂಗಿಕ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರ ಬಗ್ಗೆ ದಯೆ, ಮಕ್ಕಳನ್ನು ಮಾರಾಟ ಮಾಡಬೇಡಿ ಎಂಬ ಕೋರಿಕೆಯನ್ನು ಮನ್ನಿಸುವವರು ಯಾರಿದ್ದಾರೆ?! ಮೃಗಗಳ ಹಿಂಡಿನಲ್ಲಿ ಮನುಷ್ಯನನ್ನು ಹುಡುಕಬಹುದೆ! ಹೀಗಿರುವಾಗ ಬಡವರ ಪೌಷ್ಠಿಕ ಆಹಾರವಾಗಿರುವ ಮಾಂಸವನ್ನು ವರ್ಜಿಸಿ ಎಂದು ಹೇಳುವುದು, ಕಾನೂನು ಮಾಡುವುದು, ಜೈಲಿಗೆ ಕಳಿಸುತ್ತೇವೆ ಎನ್ನುವುದು ಎಷ್ಟು ಸರಿ? ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ: ಈ ದೇಶದ ಅನ್ನ, ಆಹಾರ ಮತ್ತು ಆಸ್ತಿ ನಮ್ಮಪ್ಪನ ಚಪ್ಪೋಡೆ? ಅಥವ ಬೇರೆ ಯಾವುದಾದರೂ ಜನರ ಖಾಸಗಿ ಆಸ್ತಿಯೆ? ತಪ್ಪು ಯಜಮಾನನದಲ್ಲ, ಹಾಕಿದ್ದು ತಿಂದುಕೊಂಡು ಬದುಕುವ ನಾಯಿಗಳದು. ಅವು ಯಾವುವು?
 
ನನಗೆ ಆಗದಿರುವ ಆಹಾರವೊ ಮತ್ತೊಂದೊ ಇದೆ. ನನಗೆ ಆಗದಿರುವುದು ಬೇರೆಯವರಿಗೂ ಕೂಡದು ಎಂದರೆ ಹೇಗೆ? ಏನರ್ಥ? ನನಗೆ ಬುರ್ಖಾ ಪದ್ಧತಿ ಕಂಡರೆ ಸುತರಾಂ ಇಷ್ಟವಿಲ್ಲ. ಅದಕ್ಕೆ ಯಾವ ವೈಜ್ಞಾನಿಕ ಸಮರ್ಥನೆಯೂ ಇಲ್ಲ. ನಿಸರ್ಗ ಕೊಟ್ಟ ಸೌಂದರ್ಯವನ್ನು ಅವಳೂ ಅನುಭವಿಸುವಂತಿಲ್ಲ. ಅನ್ಯರೂ ಆನಂದಿಸುವಂತಿಲ್ಲ. ಅದು ಹೆಣ್ಣ ಮಕ್ಕಳ ಮೇಲೆ ಹಾಕಿದ ಶಾಪ. ಅಂದ ಮಾತ್ರಕ್ಕೆ ನಾನು ಆ ಹೆಣ್ಣು ಮಕ್ಕಳನ್ನು ಆಗದವರು ಎನ್ನಲೆ? ಆ ಪದ್ಧತಿಯ ವಿರುದ್ಧ ದ್ವನಿ ಎತ್ತುವುದು ಇದ್ದೇ ಇದೆ. ಮೂರು ನಾಮ ಹಾಕಿಕೊಂಡವರು ನನ್ನ ಎದುರಿಗೆ ಬಂದರೆ ನನಗೆ ಭಯವಾಗುತ್ತದೆ. ನಮ್ಮ ತಾಯಿ ಹಾಗೆ ಅಂಥವರು ಎದುರು ಕಂಡುದರಿಂದ ತಮಗೆ ಅಪಾಯವಾಗಿದೆ ಎನ್ನುತ್ತಿದ್ದರು. ಈ ನಂಬಿಕೆಗೂ ಏನೂ ವೈಜ್ಞಾನಿಕ ಕಾರಣ ಇಲ್ಲ. ಅದು ಅವರ ಅವತಾರ ಅಷ್ಟೇ. ಅಷ್ಟಕ್ಕೆ ಆ ಜನರನ್ನು ದೂರ ಇಡಲು ಆದೀತೆ?

ಬುಡಕಟ್ಟು ಜೀವನದಿಂದಲೂ ಪ್ರತಿಯೊಂದು ಸಮುದಾಯದಲ್ಲಿ ಸ್ವೀಕಾರ ಆಹಾರ ಮತ್ತು ನಿಷೇಧ ಆಹಾರ ಎಂಬ ಪದ್ಧತಿಗಳಿವೆ. ನಮ್ಮ ತಾಯಿ ಹಂದಿ ತಿನ್ನಬೇಡ, ಅದು ನಮ್ಮ ಮಂಜನಾಥಸ್ವಾಮಿಗೆ ಆಗುವುದಿಲ್ಲ ಎಂದು ಹೇಳಿದಳು. ನಾನು ಆ ದೇವರ ಬಂಟ ಅಣ್ಣಪ್ಪಸ್ವಾಮಿಗೆ ಹಂದಿ ಇಷ್ಟವಂತೆ ಎಂದೆ. ಅದು ಬಂಟರು ತಿನ್ನುವುದು ನಾವಲ್ಲ ಎಂದಳು. ನಾನು ತಿಂದೆ, ಈಗಲೂ ಖುಷಿಯಿಂದ ತಿನ್ನುತ್ತೇನೆ. ಮಂಜುನಾಥಸ್ವಾಮಿ ನನ್ನ ತಂಟೆಗೆ ಬಂದಿಲ್ಲ. ಒಕ್ಕಲಿಗ ಜನ ದನ ತಿನ್ನಬಾರದು, ಸರ್ವನಾಶವಾಗಿ ಹೋಗುತ್ತಾರೆ ಎಂದು ಹೇಳಿದಳು ಅವ್ವ. ಒಕ್ಕಲಿಗರ ಪರಮ ವಿರೋಧಿಗಳಿಗೆ ಈ ವಿಷಯ ಗೊತ್ತಾದರೆ ಗತಿ ಏನು ಎಂದೆ. 'ಬಾಯಿ ಮುಚ್ಗಂಡು ಕೂರ್ಲ' ಅಂದಳು. ನಾನು ಕೇರಳ ರಾಜ್ಯಕ್ಕೆ ಅಧ್ಯಯನಕೆಂದು ಎರಡು ವರ್ಷ ಹೋಗಿದ್ದೆ. ಅಲ್ಲಿ ದನ, ಎಮ್ಮೆ ಮಾಂಸವೆ ಸ್ವಾದಿಷ್ಟ. ನಾನು ಸಮಾನತೆ ಬಗ್ಗೆ ಮಾತನಾಡುತ್ತಿದ್ದ ಹುಡುಗ ಬೇರೆ. ನಮ್ಮ ಕಡೆ ದಲಿತರನ್ನು ನಿಂದಿಸಲು 'ದನ ತಿನ್ನುವವನಿಗೆ ಗೊಬ್ಬರದ ಆಣೆ ಬೇರೆ' ಎಂದು ಅವರ ಪ್ರಾಮಾಣಿಕತೆಯನ್ನು ಅವಹೇಳನ ಮಾಡಲಾಗುತ್ತದೆ. ನಾನೇ ದನ ತಿಂದರೆ ಬೇರೆ ಯಾರನ್ನೊ ಹೀಯಾಳಿಸುವುದು ತಪ್ಪುತ್ತದೆ ಎಂಬ ತತ್ವ ಚಿಂತನೆಯಲ್ಲಿದ್ದ ನಾನು ಚನ್ನಾಗಿಯೆ ಆ ಮಾಂಸದ ಅಡುಗೆಯನ್ನು ಚಪ್ಪರಿಸಿದ್ದೆ. ಮೈಸೂರಿಗೆ ಹಿಂದಿರುಗಿದೆ. ನನ್ನ ಈ ರುಚಿಯ ಬಗ್ಗೆ ಹಿರಿಯರಾದ ಒಕ್ಕಲಿಗರೊಬ್ಬರಲ್ಲಿ ಹೇಳಿದೆ. 'ಅಯ್ಯೊ, ಬೇರೆಲ್ಲೂ ಹೊರಗೆ ಹೇಳಬೇಡಪ್ಪ' 'ಈ ಮಾತು ಕೇಳಿದರೆ ಒಕ್ಕಲಿಗರು ನಿನಗೆ ಹೆಣ್ಣು ಕೊಡುವುದಿಲ್ಲ' ಅಂದರು.
 
ನನಗೆ ಜ್ಞಾಪಕದಲ್ಲಿದೆ. ನಾನು ಹುಡುಗನಾಗಿದ್ದಾಗ ಕೋಲು ಕಲಿಯಲು ಹೋಗುತ್ತಿದ್ದೆ. ಆಗ ಶಕ್ತಿ ಸಾಲದ ಹುಡುಗರಿಗೆ ಕಲಿಕೆ ಮತ್ತು ತಮಾಷೆಗಾಗಿ:
 
ಕೊಮ್ಮೆ ಸೊಪ್ಪು ಕೋಣನ ಬಾಡು
 
ಹುಯ್ಲ ಹುಡ್ಗ ಜಟ್ಟಿಯ
 
ಜಟ್ಟ್ಯರಪ್ಪ ಪಟ್ಣುಕೋದ
 
ಹೊಡಿಲ ಹುಡ್ಗ ಜಟ್ಟಿಯ
 
ಎಂದು ಹೇಳಿಕೊಡುತ್ತಿದ್ದರು. `ಜಟ್ಟಿ ಹುಯ್ಯಿ, ಜಟ್ಟಿ ಹೊಡಿ' ಎಂದರೆ ಕುಸ್ತಿ ಮಾಡು ಅಂತ. ಕುಸ್ತಿ ಮಾಡಲು ಶಕ್ತಿ ಬರಲು ಕೊಮ್ಮೆ ಸೊಪ್ಪು ಮತ್ತು ಕೋಣನ ಬಾಡು ತಿನ್ನು ಎಂದು ಅರ್ಥ. ನನಗೆ ಈ ಎರಡೂ ಆಹಾರಗಳ ಸಾಮರ್ಥ್ಯ ಗೊತ್ತಾದುದು ಮಾನಸಗಂಗೋತ್ರಿಯಲ್ಲಿ ಮೇಷ್ಟ್ರಾಗಿ ಸೇರಿದಾಗ. ಕೊಮ್ಮೆ ಸೊಪ್ಪು ಎಷ್ಟು ಪುಷ್ಟಿದಾಯಕ ಎಂಬುದನ್ನು ಆಯುರ್ವೇದದ ವೈದ್ಯರನ್ನು ಕೇಳಿದರೆ ಗೊತ್ತಾಗುತ್ತದೆ. ನಾನು ಕೋಣನ ಬಾಡಿನ ಬಗ್ಗೆ ಔಷಧಿ ವೈದ್ಯರಲ್ಲಿ ಕೇಳಿದೆ. ಅವರು ಅದರಲ್ಲಿ ಅಧಿಕ ಪ್ರೋಟೀನ್ ಮತ್ತು ಪೆನ್ಸಿಲಿನ್ ಔಷಧ ಗುಣವಿದೆ ಎಂದು ಹೇಳಿದರು. ನನಗೆ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು. ಮೈಸೂರು ಜಿಲ್ಲೆಯ ಕೆಲವೆಡೆ ಬಹಳ ಕಾಲದಿಂದ ದಲಿತರಿಗೆ ಕೋಣನ ಬಾಡೇ ಗತಿಯಾಗಿತ್ತಂತೆ! ಪಾಪ, ಇತರರು ಹತ್ತಿರಕ್ಕೇ ಸೇರಿಸದಿದ್ದ ಈ ಜನರ ಆರೋಗ್ಯವನ್ನು ಕೋಣನ ಮಾಂಸ, ರಕ್ಷಿಸಿಕೊಂಡು ಬಂದಿತಲ್ಲ; `ಅನಾಥ್ರಿಗೆ ಆಕಾಶವೆ ಕಾವಲು' ಅಂತ ಒಂದು ಗಾದೆ ಹೇಳುತ್ತದೆ.

ಮುಂದೆ: ೩ ಗೋಹತ್ಯೆ- ಸಾಂಸ್ಕೃತಿಕ ರಾಜಕಾರಣ