ಆಹಾ! ಲಂಡನ್ ನೋಡಿದೆವು

ಟೋನಿ

ಯೂರೋಪ್ ಪ್ರವಾಸದಿಂದ ಹಿಂದಿರುಗಿ ತಿಂಗಳುಗಳೇ ಕಳೆದಿದ್ದವು . ಸ್ನೇಹಿತ ರವೀಂದ್ರ ಸಿಕ್ಕವ ಅದೂ ಇದು ಮಾತನಾಡುತ್ತಾ ನನ್ನ ಪ್ರವಾಸದ ಅನುಭವವನ್ನು ಕೇಳಿದವ ಲಂಡನ್ನಲ್ಲಿ ಅವನಿಗೆ ಖುಷಿ ಕೊಟ್ಟ ಹಲವಾರು ವಿಷಯಗಳನ್ನು ವಿವರಿಸತೊಡಗಿದ್ದ. ಆತ ಚಿನ್ನದ ವ್ಯಾಪಾರಿ. ಅದೆಂಥವೋ ಹರಳು ಪರಳೆಂದು ವಿದೇಶಗಳನ್ನು ಸುತ್ತುತ್ತಲೇ ಇರುತ್ತಿದ್ದ. ಲಂಡನ್ನೂ ಸೇರಿದಂತೆ ಯುರೋಪಿನ ಎಲ್ಲಾ ದೇಶಗಳಿಗೂ ಆತ ವ್ಯಾಪಾರ ಸಂಬಂಧವಾಗಿ ಹೋಗಿ ಬರುತ್ತಿದ್ದುದರಿಂದ ಅವನಿಗೆ ಅಲ್ಲಿನ ಎಲ್ಲಾ ಸ್ಥಳಗಳ ಪರಿಚಯವೂ ಸಾಕಷ್ಟಿತ್ತು. "ನೀನು ಯಾವ ಹೋಟಲಲ್ಲಿ ಉಳಿದಿದ್ದೆ?" ಹತ್ತಾರು ಪ್ರದೇಶಗಳ ಹೆಸರನ್ನು ಹೇಳಿ "ಅಲ್ಲೆಲ್ಲಾ ಹೋಗಿದ್ಯಾ, ಮ್ಯೂಸಿಯಮ್ ಅದ್ಭುತವಾಗಿದೆ ಅಲ್ಲವಾ" ಎಂದೆಲ್ಲಾ ಕೇಳತೊಡಗಿದ್ದ. ಆತ ಹೇಳಿದ್ದ ಸ್ಥಳಗಳನ್ನೆಲ್ಲಾ ಸರಿಯಾಗಿ ನೋಡಬೇಕೆಂದರೆ ಕನಿಷ್ಟ ವಾರವಾದರೂ ಬೇಕಿತ್ತು. ಆದರೂ ಅವನಿಗೆ ನಾನು ನೋಡಿದ ಕೆಲವು ಸ್ಥಳಗಳನ್ನು ಹೇಳಿದೆ. ಎಷ್ಟು ದಿನ ಉಳಿದಿದ್ದೆ ಅಂದ. ಒಂದು ಸಂಪೂರ್ಣ ರಾತ್ರಿ, ಅರ್ಧ ಹಗಲು ಎಂದೆ.

ನಾವು ಲಂಡನ್ ತಲುಪಿ ಅರ್ಧ ದಿನ ಅಲ್ಲಿಯ ಏರ್ ಪೋರ್ಟಿನಲ್ಲಿಯೇ ಕಳೆದಿದ್ದೆವು. ಸಂಜೆ ನಾವೆಲ್ಲಾ ಊಟ ಮುಗಿಸಿದ ನಂತರ ನಾಳೆ ಬೆಳಿಗ್ಗೆ ೬ ಗಂಟೆಗೆಲ್ಲಾ ಎದ್ದು ರೆಡಿಯಾಗಬೇಕೆಂದು ನಮ್ಮ ಗೈಡ್ ಅಪ್ಪಣೆ ಮಾಡಿದ್ದರಿಂದ ಹೋಟೆಲ್ ರೂಮಿಗೆ ಹೋಗಿ ಪವಡಿಸಿದ್ದೆವು. ಬೆಳಿಗ್ಗೆ ಆರೂವರೆ ಗಂಟೆಗೆ ಸರಿಯಾಗಿ ಗೈಡ್ ಜ್ಯೂಜರ್ ರೂಮಿನ ಕದ ತಟ್ಟಿದ್ದ. ಒಳಗೆ ಬಂದವನೇ ಗುಡ್ ಮಾರ್ನಿಂಗ್ ಎಂದವ ರಾತ್ರಿ ಸರಿಯಾಗಿ ನಿದ್ರೆ ಮಾಡಿದಿರಾ ಎಂದೆಲ್ಲಾ ವಿಚಾರಿಸಿಕೊಂಡು ಇಂದು ಲಂಡನ್ ನಗರ ಪ್ರದಕ್ಷಿಣೆ ಮಾಡಿಸುವುದಾಗಿ ಹೇಳಿದ. ನನ್ನ ರೂಮ್ ಮೇಟ್ ಆಗಿದ್ದ ಗುರುಬಸಪ್ಪನವರು ಅವನಿಗೆ ತಮ್ಮ ಪರಿಚಯ ಮಾಡಿಕೊಂಡು ನಾನು ಮೈಸೂರು ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಎಂದೂ, ಲಂಡನ್ನಿನ ಯಾವುದಾದರೂ ಯೂನಿವರ್ಸಿಟಿಯನ್ನು ನಾನು ನೋಡಬೇಕೆಂದೂ, ಅಲ್ಲಿ ನನ್ನ ವಿಷಯಕ್ಕೆ ಸಂಬಂಧಿಸಿದ ಪ್ರೊಫೆಸರ್ ಅನ್ನು ಭೇಟಿ ಮಾಡಿಸಲು ಸಾಧ್ಯವಾ ಎಂದು ಕೇಳಿದ್ದಕ್ಕೆ ಆತ ಬೆಚ್ಚಿ ಬಿದ್ದಿದ್ದ. ಆಗಲಿ ಅನ್ನಲೂ ಇಲ್ಲ, ಆಗುವುದಿಲ್ಲ ಅಂತಲೂ ಹೇಳದವ ಒಂದೆರಡು ನಿಮಿಷ ಸುಧಾರಿಸಿಕೊಂಡು ನಿಮ್ಮ ನಿಮ್ಮ ಲಗೇಜುಗಳನ್ನು ತೆಗೆದುಕೊಂಡು ಕೆಳಗೆ ಬನ್ನಿ...ಬ್ರೇಕ್ ಫಾಸ್ಟಿಗೆ ತಡವಾಗುತ್ತದೆಂದು ಹೇಳಿ ದರದರನೆ ಎದ್ದು ಹೋದ. ಅವನು ಗಾಬರಿಯಿಂದ ಎದ್ದು ಹೋಗಿದ್ದು ಕಂಡು ನಮಗಿಬ್ಬರಿಗೂ ಆಶ್ಚರ್ಯವಾಗಿತ್ತು. ಆತುರಾತುರವಾಗಿ ಬಟ್ಟೆಗಳನ್ನು ತುಂಬಿಕೊಂಡು ಕೆಳಗಿಳಿದೆವು.

ಬೆಳಿಗ್ಗೆ ಹೋಟೆಲಿನಲ್ಲಿ ಕಾಂಟಿನೆಂಟಲ್ ಬ್ರೇಕ್ ಫಾಸ್ಟ್ ಮುಗಿಸಿದೆವು. ಬೆಳಗಿನ ತಿಂಡಿಯನ್ನು ಟ್ರಾವೆಲ್ಸ್ ಕಂಪನಿಯೇ ನೋಡಿಕೊಳ್ಳುತ್ತಿತ್ತು. ನಾವು ಹಣ ನೀಡುವಂತಿಲ್ಲದ್ದರಿಂದ ಅವರವರ ಶಕ್ತ್ಯಾನುಸಾರ ಪಾರ್ಸಲ್ ಮಾಡಿಕೊಂಡು ಬಸ್ಸಿನಲ್ಲಿ ಲಂಡನ್ ನಗರ ಪ್ರದಕ್ಷಿಣೆಗೆ ಹೊರಟೆವು. ನಾವು ಉಳಿದುಕೊಂಡಿದ್ದ ಹೋಟೆಲ್ ಲಂಡನ್ ನಗರದಿಂದ ಸುಮಾರು ೩೦ ಮೈಲು ದೂರವಿತ್ತು. ಲಂಡನ್ ಸುಂದರ ನಗರ. ಥೇಮ್ಸ್ ನದಿಯ ದಂಡೆಯ ಉದ್ದಗಲಕ್ಕೂ ಹರಡಿಕೊಂಡ ನಗರವನ್ನು ಬೆಳಗಿನ ಮಂಜು ಮುಸುಕಿದ ವಾತಾವರಣದಲ್ಲಿ ನೋಡುವುದೇ ಸೊಗಸು. ನಾವೆಲ್ಲಾ ನಗರದಲ್ಲಿ ನಡೆದುಕೊಂಡು ಹೋಗಬಹುದೆಂಬ ಖುಶಿಯಿಂದಲೇ ಬಸ್ ಹತ್ತಿ ಕೂತಿದ್ದೆವು. ಒಂದು ಸ್ಥಳದಲ್ಲಿ ಬಸ್ಸು ನಿಲ್ಲಿಸಿ ಮತ್ತೊಬ್ಬರನ್ನು ಜ್ಯೂಜರ್ ಹತ್ತಿಸಿಕೊಂಡ. ಅವರ ಹೆಸರು ಮಾರ್ಕ್ ಎಂದೂ ಅವರು ನಮಗೆ ಲಂಡನ್ ನಗರದ ಗೈಡ್ ಎಂದೂ ಪರಿಚಯಿಸಿದ. ಬಸ್ಸಿನಲ್ಲಿಯೇ ಮೈಕ್ ಇತ್ತು ಅದರಲ್ಲಿಯೇ ಗೈಡ್ ನಮಗೆ ಲಂಡನ್ ನಗರದ ಕಟ್ಟಡಗಳ ಪರಿಚಯ ಮಾಡಿಕೊಡತೊಡಗಿದ್ದರು. ಅವರ ಸರಳ ಇಂಗ್ಲಿಷ್ ಸುಲಭವಾಗಿ ಅರ್ಥವಾಗುವಂತಿತ್ತು. ಅಲ್ಲಿ ನೋಡಿ ಎಡಗಡೆ ಕಾಣುತ್ತಿದೆಯಲ್ಲಾ ಅದು ವೆಸ್ಟ್ ಮಿನಿಸ್ಟೆರ್, ಈ ಕಡೆ ನೋಡಿ ಬಲಗಡೆ, ಮುಂದೆ ನೋಡಿ, ಹೀಗೆ ಬಸ್ಸು ಚಲಿಸುತ್ತಿರುವಾಗಲೇ ಅವರು ತೋರಿಸುತ್ತಿದ್ದ ಕಟ್ಟಡಗಳನ್ನು ಬಸ್ಸಿನಲ್ಲಿ ಕೂತಿದ್ದ ನಾವೆಲ್ಲಾ ಒಟ್ಟಿಗೇ ಒಮ್ಮೆ ಎಡಕ್ಕೆ, ಒಮ್ಮೆ ಬಲಕ್ಕೆ, ಮತ್ತೆ ಬಸ್ಸಿನ ಮುಂದಕ್ಕೆ ನೋಡತೊಡಗಿದ್ದು ನನಗೆ ಸ್ಕೂಲಿನಲ್ಲಿ ಎನ್ ಸಿ ಸಿ ಯಲ್ಲಿ ಹೇಳಿ ಕೊಡುತ್ತಿದ್ದ ಆಗೇ ದೇಖ್, ದೈನೇ ದೇಖ್ ಎಂದು ಹೇಳಿದಾಗ ನಾವೆಲ್ಲಾ ಕೆಡೆಟ್ಗಳು ಒಂದೇ ಬಾರಿಗೆ ಎಡ ಬಲಕ್ಕೆ ಕತ್ತನ್ನು ತಿರುಗಿಸುತ್ತಿದು ನೆನಪಾಯಿತು. ಈಗ ದಶಕಗಳ ನಂತರ ಬಸ್ಸಿನಲ್ಲಿ ಕೂತಿದ್ದ ನಾವು ೨೮ ಮಂದಿ ಪ್ರವಾಸಿಗರೆಲ್ಲಾ ಒಟ್ಟಿಗೇ ಎನ್ ಸಿ ಸಿ ಕೆಡೆಟ್ಟುಗಳಂತೆಯೇ ಕತ್ತು ತಿರುಗಿಸತೊಡಗಿದ್ದೆವು. ಬಸ್ಸು ಚಲಿಸತೊಡಗಿದ್ದರಿಂದ ಬಲಗಡೆಯದನ್ನೋ, ಎಡಗಡೆಯದನ್ನೋ ಸ್ವಲ್ಪ ಹೊತ್ತು ಜಾಸ್ತಿ ನೋಡಿದರೆ ಮತ್ತೊಂದು ಕಡೆಯದ್ದು ಮಿಸ್ ಆಗಿಬಿಡುತ್ತಿತ್ತು. ಆಗ ನಾವು ಹಿಂದಕ್ಕೆ ತಿರುಗಿ ಮಿಸ್ ಆದುದನ್ನು ನೋಡುತ್ತಿದ್ದೆವು. ಬಸ್ಸಿನ ಸುತ್ತಲೂ ವಿಶಾಲವಾದ ಗ್ಲಾಸು ಇದ್ದುದರಿಂದ ನಾವು ಯಾವ ದಿಕ್ಕಿನಲ್ಲಿ ಬೇಕಾದರೂ ನೋಡಬಹುದಿತ್ತು. ಒಟ್ಟಾರೆ ಎಲ್ಲರೂ ಬಸ್ಸಿನಲ್ಲಿ ಕುಳಿತೇ ೩೬೦ ಡಿಗ್ರಿಯಲ್ಲಿ ಕತ್ತನ್ನು ತಿರುಗಿಸುತ್ತಾ ಲಂಡನ್ ನಗರವನ್ನು ನೋಡತೊಡಗಿದ್ದೆವು.

ಲಂಡನ್ ನಗರವನ್ನು ಕಾಲ್ನಡಿಗೆಯಲ್ಲಿ ಸುತ್ತ ಬೇಕೆಂಬ ಆಸೆಯಿದ್ದ ನನಗೆ ಈ ಗೈಡ್ ಬಸ್ಸಿನಿಂದ ಕೆಳಗಿಳಿಯಲು ಅವಕಾಶವನ್ನೇ ನೀಡದೆ ಥೇಮ್ಸ್ ನದಿಯ ಉದ್ದಕ್ಕೂ ಅಡ್ಡಡ್ಡಕ್ಕೆ ಅಡ್ಡಾಡಿಸುತ್ತಾ ಇದು ವಿಕ್ಟೋರಿಯಾ ಏರಿಯಾ, ಇದು ವೆಸ್ಟ್ ಮಿನಿಸ್ಟರ್, ಇದು ಬಿಬಿಸಿ, ಅದು ಚಾನಲ್ ೪ ಅಂಥಾ ಅಲ್ಲಿನ ಕಟ್ಟಡಗಳ ಹೆಸರು ಹೇಳಿ ಅದರ ಪ್ರಾಮುಖ್ಯತೆ ಬಗ್ಗೆ ವಿವರಿಸುವಷ್ಟರಲ್ಲೇ ಮತ್ತೊಂದು ಕಟ್ಟಡ ಎದುರಾಗುತ್ತಿತ್ತು. ಹಿಂದಿನ ಕಟ್ಟಡದ ವಿವರಣೆ ನೀಡುತ್ತಿದ್ದ ಗೈಡ್ ಸಡನ್ನಾಗಿ ಹೊಸ ಕಟ್ಟಡದ ಬಗ್ಗೆ ಹೇಳತೊಡಗಿದ್ದರಿಂದ ಸೆಕೆಂಡುಗಳ ಹಿಂದೆ ತೋರಿಸಿದ ಕಟ್ಟಡದ ಹೆಸರು ಮರೆತು ಹೋಗುತ್ತಿತ್ತು. ಅಲ್ಲಿ ಒಂದರ ಹಿಂದೊಂದು ಕಟ್ಟಡಗಳು ಅಂಟಿಕೊಂಡಂತೆಯೇ ಇದ್ದವು . ಕೆಲವೊಂದು ಕಟ್ಟಡವನ್ನು ತೋರಿಸಿ ನೋಡಿ ಇದು ಇಂಪಾರ್ಟೆಂಟು ಎಂದು ಹೇಳಿ ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಕಟ್ಟಡವನ್ನು ತೋರಿಸಿ ಇದೂ ಇಂಪಾರ್ಟೆಂಟು ಎನ್ನುತ್ತಿದ್ದರೆ ನನಗೆ ಇಂಪಾರ್ಟೆಂಟ್ ಮತ್ತು ಇಂಪಾರ್ಟೆಂಟ್ ಅಲ್ಲದರ ಬಗ್ಗೆ ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ. ಎಲ್ಲಾ ಕಟ್ಟಡಗಳೂ ಒಂದೇ ತರ ಕಾಣಿಸತೊಡಗಿದ್ದವು. ಇಷ್ಟಕ್ಕೂ ಯಾವ್ದು ಮುಖ್ಯವಾದರೇನು, ಅಲ್ಲದಿದ್ದರೇನು ನಾನೇನೂ ಪರೀಕ್ಷೆ ಬರೆಯಬೇಕಿರಲಿಲ್ಲವಲ್ಲ ಎಂಬ ಸಮಾಧಾನದಿಂದ ತಲೆಕೆಡಿಸಿಕೊಳ್ಳಲಿಲ್ಲ. ಥೇಮ್ಸ್ ನದಿಯನ್ನು ಕಂಡಾಗ ಅದರಲ್ಲಿ ದೋಣಿಯಲ್ಲಿ ಒಂದು ಸುತ್ತು ಸುತ್ತಾಡಬೇಕೆನಿಸಿತ್ತು. ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ಸ್ನೇಹಿತರೆಲ್ಲಾ ಬರೀ ಇಂಗ್ಲಿಷ್ ನಲ್ಲಿಯೆ ಮಾತಾಡುತ್ತಿದ್ದ ಕೆಲವು ಗೆಳೆಯರನ್ನು ಥೇಮ್ಸ್ ನದಿಯಲ್ಲಿ ಅಂಡು ತೊಳೆದು ಬಂದವರಂತೆ ಆಡುತ್ತೀರಾ ಎಂದು ಮೂದಲಿಸುತ್ತಿದ್ದೆವು. ನಾವು ರೇಗಿಸುತ್ತೇವೆಂದೇ ಅವರು ನಮ್ಮ ಮುಂದೆ ಕನ್ನಡದಲ್ಲೇ ಮಾತಾಡುತ್ತಿದ್ದರು. ಅಂಥಾ ಥೇಮ್ಸ್ ನದಿ ದಡದಲ್ಲೇ ನಾವೀಗ ಇದ್ದರೂ ಈ ಆಸಾಮಿ ಗೈಡ್ ನಮ್ಮನ್ನು ಕೆಳಗಿಳಿಸುವ ಲಕ್ಷಣಗಳೇ ಕಾಣಿಸಲಿಲ್ಲ.

ಮೊದಲ ಒಂದು ಗಂಟೆಯಲ್ಲಿ ನಾವೆಲ್ಲಾ ಕುತೂಹಲದಿಂದಲೇ ಬಸ್ಸಿನಲ್ಲಿ ಲಂಡನ್ ನಗರದ ಸುಂದರ ಪರಿಸರವನ್ನೂ ಅದ್ಭುತ ವಾಸ್ತು ವಿನ್ಯಾಸದ ಕಟ್ಟಡಗಳನ್ನು ನೋಡಿ ಖುಶಿ ಅನುಭವಿಸಿದ್ದೆವು. ಆದರೆ ಬರಬರುತ್ತಾ ನೋಡಿದ ಕಟ್ಟಡಗಳನ್ನೇ ಮತ್ತೆ ಮತ್ತೆ ನೋಡುತ್ತಿದ್ದಂತೆನಿಸಿತು. ನಮ್ಮ ಬಸ್ಸು ಥೇಮ್ಸ್ ನದಿಯ ಈ ಕಡೆಯಿಂದ ಆ ಕಡೆಗೆ ಅಡ್ಡಡ್ಡಲಾಗಿ ಸಂಚರಿಸುತ್ತಿದ್ದುದರಿಂದ ಒಮ್ಮೆ ಎಡಗಡೆ ನೋಡಿದ ಕಟ್ಟಡಗಳೂ ಮತ್ತೊಮ್ಮೆ ಬಲಗಡೆ ಕಾಣಿಸುತ್ತಿದ್ದವು. ಗೈಡ್ ಅಂತೂ ಎಡ ಬಿಡದಂತೆ ಕಾಮೆಂಟ್ರಿ ಮಾಡುತ್ತಾ ಬಸ್ಸಿನ ವೇಗಕ್ಕೆ ತಕ್ಕಂತೆ ತಾನೂ ಕಾಮೆಂಟ್ರಿಯನ್ನು ಕೆಲವೊಮ್ಮೆ ನಿದಾನವಾಗಿ ಕೆಲವೊಮ್ಮೆ ವೇಗವಾಗಿ ಹೇಳತೊಡಗಿದ್ದರು. ಇದನ್ನು ಕೇಳುತ್ತಾ ನನಗೆ ನಾವು ಚಿಕ್ಕಂದಿನಲ್ಲಿ ಜಾತ್ರೆಯ ಸಂದರ್ಭದಲ್ಲಿ ಹಳ್ಳಿಗಳಿಗೆ ಹೋದಾಗ ಅಲ್ಲಿ ಸಣ್ಣದೊಂದು ಸ್ಟೂಲಿನ ಮೇಲೆ ಡಬ್ಬದಾಕಾರದ್ದಕ್ಕೆ ಬಟ್ಟೆ ಹೊದೆಸಿ ಸಿನಿಮಾದ ಸ್ಟಿಲ್ಲುಗಳನ್ನು ತೋರಿಸುತ್ತಿದ್ದ ಬಯಾಸ್ಕೋಪು ನೆನಪಾಯಿತು. ಆ ಬಯಾಸ್ಕೋಪು ತೋರಿಸುವಾತ ಕೈಯಲ್ಲಿ ಗೆಜ್ಜೆ ಶಬ್ಧ ಬರುವಂತದನ್ನು ಬಾರಿಸುತ್ತಾ "ಆಹಾ ಬಾಂಬೆ ನೋಡಿ, ಆಹಾ ಕಲ್ಕತ್ತಾ ನೋಡಿ, ಡೆಲ್ಲಿ ನೋಡಿ, ಆಹಾ ಹೇಮಾಮಾಲಿನಿ ಡಾನ್ಸು ನೋಡಿ" ಎಂದು ರಾಗವಾಗಿ ಜನರನ್ನು ಅದರಲ್ಲಿಯೂ ಹುಡುಗರನ್ನು ಕರೆಯುತ್ತಿದ್ದನು. ಆಗ ನಾಲ್ಕಾಣೆ ಇರಬಹುದು ಅದನ್ನು ನೋಡಲು ಹುಡುಗರು ಮುನ್ನುಗ್ಗುತ್ತಿದ್ದರು. ಆತ ಯಾವ ಯಾವುದೋ ಬಿಲ್ಡಿಂಗುಗಳ ಸ್ಟಿಲ್ಲುಗಳನ್ನು ಬಯಾಸ್ಕೋಪಿನೊಳಗೆ ಸಿಗಿಸಿ ಕಲ್ಕತ್ತಾ ಎನ್ನುತ್ತಿದ್ದ ಹಾಗೆಯೇ ಹತ್ತಾರು ಸ್ಟಿಲ್ಲುಗಳನ್ನು ಒಂದರ ನಂತರ ಮತ್ತೊಂದು ಸಿಗಿಸಿ ತೋರಿಸುತ್ತಿದ್ದ. ಅದು ಒಬ್ಬರೇ ನೋಡುವಂತ ಬಯಾಸ್ಕೋಪು. ತಲೆಮೇಲೆ ಬಟ್ಟೆ ಹಾಕಿಕೊಂಡು ಬೆಳಕು ಒಳಗೆ ಹೋಗದಂತೆ ಮಾಡಿ ನೋಡಬೇಕಿತ್ತು. ಅದನ್ನು ನೋಡಲಿಕ್ಕೆ ಕೆಲವೊಮ್ಮೆ ನೂಕುನುಗ್ಗಲುಂಟಾಗುತ್ತಿತ್ತು. ಜನ ಜಾಸ್ತಿಯಾದಾಗ ಆತ ಸ್ಟಿಲ್ಲುಗಳನ್ನು ಸರಿಯಾಗಿ ನೋಡುವ ಮೊದಲೇ ತೆಗೆದು ಮತ್ತೊಂದು ಸ್ಟಿಲ್ಲು ಹಾಕಿ ಬಿಡುತ್ತಿದ್ದ. ಅವನು ಹೇಳುತ್ತಿದ್ದುದು ಒಂದಾದರೆ ತೋರಿಸುತ್ತಿದ್ದುದೇ ಬೇರೆಯಾಗಿರುತ್ತಿತ್ತು. ಅವನು ಮೊದಲು ಸರಿಯಾಗಿಯೇ ಜೋಡಿಸಿಕೊಂಡು ಹೇಳುತ್ತಿದ್ದನಾದರೂ ಸ್ಟಿಲ್ಲುಗಳನ್ನು ತೋರಿಸಿದ ನಂತರ ಅವುಗಳನ್ನು ಒಂದರ ಮೇಲೆ ಒಂದು ಜೋಡಿಸುವಾಗ ಅವು ಉಲ್ಟಾ ಪಟ್ಟಾ ಆಗಿರುತ್ತಿದ್ದವು. ಆದರೆ ಅವನು ಕಂಠಮಾಡಿಕೊಂಡಿದ್ದು ಬಾಂಬೆ ನೋಡಿ, ಕಲ್ಕತ್ತಾ ನೋಡಿ, ಡೆಲ್ಲಿ ನೋಡಿ ಅಂತಲೇ ಆದ್ದರಿಂದ ಅದನ್ನು ಉಲ್ಟಾ ಹೇಳುತ್ತಿರಲಿಲ್ಲ ತೋರಿಸುತ್ತಿದ್ದ ಸ್ಟಿಲ್ಲು ಡೆಲ್ಲಿಯದ್ದಾದರೂ ಅವನ ಕಾಮೆಂಟ್ರಿ ಮಾತ್ರ ಬಾಂಬೆ ಎಂದೇ ಇರುತ್ತಿತ್ತು. ಪ್ರೇಕ್ಷಕರು ಕಡಿಮೆ ಇದ್ದಾಗ ಆತ ಸ್ಟಿಲ್ಲುಗಳನ್ನು ನಿಧಾನವಾಗಿ ತೆಗೆಯುತ್ತಿದ್ದ. ಯಾರಾದರು ನೋಡುತ್ತಿದ್ದರೆ ಬೇರೆ ಪ್ರೇಕ್ಷಕರು ಕುತೂಹಲದಿಂದ ಅವರತ್ತ ಬರುತ್ತಿದ್ದುದರಿಂದ ಅವನು ಈ ತಂತ್ರ ಅನುಸರಿಸುತ್ತಿದ್ದ. ಕೆಲವೊಮ್ಮೆ ಅವನು ತೋರುತ್ತಿದ್ದ ಸ್ಟಿಲ್ಲುಗಳಲ್ಲಿ ಎ ಸರ್ಟಿಫಿಕೇಟಿನವೂ ಇರುತ್ತಿತ್ತು. ಜಾಸ್ತಿ ಎ ಸರ್ಟಿಫಿಕೇಟಿನವೇ ಇದ್ದಾಗ ಚಿಕ್ಕ ಹುಡುಗರಿಗೆ ತೋರಿಸುತ್ತಿರಲಿಲ್ಲ. ಅವನೂ ಪ್ರೇಕ್ಷಕರ ವಯಸ್ಸಿಗನುಗುಣವಾಗಿ ಸ್ಟಿಲ್ಲುಗಳನ್ನು ತೋರಿಸಿ ಸೆನ್ಸಾರ್ ನಿಯಮವನ್ನು ನಿಯತ್ತಾಗಿ ಪಾಲಿಸುತ್ತಿದ್ದ.

ಬಯಾಸ್ಕೋಪಿನವನಂತೆಯೇ ಬಸ್ಸಿನ ವೇಗಕ್ಕೆ ತಕ್ಕಂತೆ ಕಾಮೆಂಟ್ರಿ ನೀಡುತ್ತಿದ್ದ ಗೈಡ್ ತೋರಿಸಿದ ಕಟ್ಟಡಗಳ ಸರಿಯಾದ ಚಿತ್ರಣವೂ ನನ್ನಲ್ಲುಳಿಯಲಿಲ್ಲ. ಸುಮಾರು ಎರಡು ಮೂರು ಗಂಟೆಗಳ ಕಾಲ ಬಸ್ಸಿನಲ್ಲೇ ಸುತ್ತಾಡಿಸಿ ಬಕಿಂಗ್ ಹ್ಯಾಮ್ ಅರಮನೆ ಮುಂದೆ ನಮ್ಮನ್ನಿಳಿಸಿ ಅದು ಫೋಟೊ ತೆಗೆಯುವುದಕ್ಕೆ ನೀಡಿರುವ ಸ್ಟಾಪ್ ಅಂತ ಜ್ಯೂಜರ್ ಹೇಳಿದ. ಶತಮಾನಗಳ ಕಾಲ ಇಡೀ ಪ್ರಪಂಚದ ಆಗು ಹೋಗುಗಳನ್ನು ನಿಯಂತ್ರಿಸಿದಂತಾ ಅರಮನೆಯದು. ಸಿಕ್ಕ ಹದಿನೈದು ನಿಮಿಷ ಸಮಯದಲ್ಲೇ ಹಲಹಲವು ಭಂಗಿಗಳಲ್ಲಿ ನಿಂತು ಕ್ಯಾಮರಾಗಳಿಂದ ನಾವು ಬೇರೆಯವರನ್ನು ಕ್ಲಿಕ್ಕಿಸಿ, ಅವರಿಂದ ನಮ್ಮನ್ನು ಕ್ಲಿಕ್ಕಿಸಿಕೊಂಡೆವು. ಅರಮನೆಯನ್ನು ಕಾಯಲು ನಿಂತವರಂತೂ ಗಂಭೀರವದನರಾಗಿದ್ದರು. ಸೂರ್ಯ ಮುಳುಗದ ಸಾಮ್ರಾಜ್ಯವೆನಿಸಿದ್ದ ನಾಡಿದು. ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್. ನಮ್ಮ ಕರ್ನಾಟಕ ಮತ್ತು ಪಕ್ಕದ ಕೇರಳ-ಈ ಎರಡೂ ರಾಜ್ಯಗಳ ಒಟ್ಟು ವಿಸ್ತೀರ್ಣಕ್ಕಿಂತ ಕೊಂಚ ದೊಡ್ಡದಾದ ದೇಶ. ಇಲ್ಲಿ ಬಂದು ನೋಡಿದಾಗ ಈ ಪುಟ್ಟ ದೇಶ ಪ್ರಪಂಚದಾದ್ಯಂತ ತನ್ನ ಸಾಮ್ರಾಜ್ಯವನ್ನು ಹರಡಿಕೊಂಡಿತ್ತಾ ಎಂಬ ಆಶ್ಚರ್ಯ ಉಂಟಾಗುವುದು ಸಹಜ. ೨,೪೪,೧೦೮ ಚ.ಕಿ.ಮೀ. ವಿಸ್ತೀರ್ಣದ ಈ ದೇಶದ ಒಟ್ಟು ಜನಸಂಖ್ಯೆ ೬ ಕೋಟಿ ಅಂದರೆ ಸರಿ ಸುಮಾರು ನಮ್ಮ ಕರ್ನಾಟಕದಷ್ಟು. ನಮ್ಮ ಬಸ್ಸಿನ ಚಾಲಕ ಆಲಿಸ್ಟರ್ ಬ್ರಿಟನ್ನಿಗ. ಒಳ್ಳೆಯ ಮಾತುಗಾರ. ಅವನನ್ನು ಮಾತಿಗೆಳೆದಾಗ ಆತ ಇತ್ತೀಚೆಗೆ ಬ್ರಿಟನ್ನಿನಲ್ಲಿ ಹುಟ್ಟಿ ಬೆಳೆದವರಿಗೆ ಕೆಲಸಗಳು ಸಿಕ್ಕುತ್ತಿಲ್ಲವೆಂದೂ ಹೊರ ದೇಶಗಳಿಂದ ಬಂದಿರುವ ವಲಸೆಗಾರರೇ ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆಂದೂ ಅತ್ಯಂತ ಶ್ರೀಮಂತರಲ್ಲಿ ನಿಮ್ಮ ಭಾರತೀಯರೇ ಹೆಚ್ಚೆಂದ. ಕಾಲಚಕ್ರ ಉರುಳಿದಂತೆಲ್ಲಾ ಹೇಗೆ ಬದಲಾವಣೆಗಳು ಆಗುತ್ತವಲ್ಲಾ ಎಂದು ಅಚ್ಚರಿಯಾಯಿತು ನನಗೆ. ಏಳೆಂಟು ದಶಕಗಳ ಹಿಂದಷ್ಟೇ ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ತನ್ನ ವಸಾಹತನ್ನಾಗಿ ಇಟ್ಟುಕೊಂಡಿದ್ದ ಈ ರಾಷ್ಟ್ರಕ್ಕೆ ದಶಕಗಳ ನಂತರ ತನ್ನ ದೇಶದಲ್ಲಿಯೇ ವಲಸೆಗಾರರಿಂದಲೇ ಸಮಸ್ಯೆ ಶುರುವಾಗಿತ್ತು. ಬಹುಶಃ  ಇದನ್ನೇ ಕಾಲನ ನಿರ್ಣಯವೆಂದು ಕರೆಯಬಹುದೆನಿಸಿತು.

ಹೆಚ್ಚು ಕಡಿಮೆ ೩೫೦ ಭಾಷೆಗಳನ್ನು ಮಾತನಾಡುವ ಜನ ಬ್ರಿಟನ್ನಿನಲ್ಲಿದ್ದಾರೆಂದು ಗೈಡ್ ಹೇಳಿದ್ದು ಕೇಳಿ ಆಶ್ಚರ್ಯವಾಯಿತು. ಇಂಗ್ಲಿಷ್ ಎಂದರೆ ಇಂಗ್ಲೆಂಡ್, ಇಂಗ್ಲೆಂಡ್ ಎಂದರೆ ಇಂಗ್ಲಿಷ್ ಎಂದು ತಿಳಿದಿದ್ದ ನನಗೆ ಈ ಗೈಡ್ ಸುಳ್ಳು ಹೇಳುತ್ತಿರಬಹುದೆನಿಸಿತು. ಆತ ನಿಮ್ಮ ಭಾರತದವರೇ ೩೦-೪೦ ಭಾಷೆ ಮಾತನಾಡುವವರು ಇದ್ದಾರೆಂದ. ಲಂಡನ್ ನಲ್ಲಿರುವ ಹೋಟೆಲ್ಲುಗಳಲ್ಲಿ ಭಾರತೀಯರದ್ದೇ ಹೆಚ್ಚೆಂದ. ಆತ ಹೇಳಿದ್ದು ನಿಜವಿರಬಹುದೆನಿಸಿತು. ಏಕೆಂದರೆ ನಮ್ಮ ದೇಶದವರೇ ೩೦-೪೦ ಭಾಷೆ ಮಾತನಾಡುವವರು ಇದ್ದಾರೆಂದರೆ ಇನ್ನು ವಿಶ್ವಾದ್ಯಂತ ಅಧಿಕೃತ-ಅನಧಿಕೃತ ಭಾಷೆಗಳ ಜನ ಬ್ರಿಟನ್ನಿನಲ್ಲಿರುವ ಸಾಧ್ಯತೆಗಳಿತ್ತು. ಹಿಂದೆ ಈ ಬ್ರಿಟೀಷರು ತಮ್ಮ ಅಧೀನದಲ್ಲಿದ್ದ ಪ್ರಪಂಚದ ಎಲ್ಲ ಕಡೆಯ ದೇಶಗಳಿಂದ ಜನರನ್ನು ತಮ್ಮ ತೆವಲಿಗೋ, ಚಾಕರಿಗೋ ಎಳೆದುಕೊಂಡು ಬಂದಿದ್ದರೇನೋ...ಅದಕ್ಕೇ ಇಷ್ಟೊಂದು ಭಾಷೆಗಳನ್ನು ಮಾತನಾಡುವವರ ಸಂತತಿ ಮುಂದುವರೆದಿರಬಹುದು. ವಿಶ್ವಾದ್ಯಂತ ಇಂಗ್ಲಿಷನ್ನು ಹರಡಿದ ದೇಶದಲ್ಲಿಯೇ ಈಗ ಆಡಳಿತದಲ್ಲಿ ಬಿಟ್ಟರೆ ಇಂಗ್ಲಿಷ್ ಅಲ್ಪ ಸಂಖ್ಯಾತ ಭಾಷೆಯಾಗತೊಡಗಿತ್ತು. ಲಂಡನ್ನಿನಲ್ಲಿ ಚಳಿಯ ವಾತಾವರಣವಿತ್ತು. ಅಲ್ಲಿ ೪ ಸಾವಿರದಷ್ಟು ಪಬ್ ಗಳಿರುವುದಾಗಿ ಜ್ಯೂಜರ್ ಹೇಳಿದ್ದು ಕೇಳಿ ಬಾಯಲ್ಲಿ ನೀರೂರಿ ಯಾವುದಾದರೂ ಪಬ್ ದಾರಿ ತೋರಿಸಯ್ಯಾ ಎಂದೆ. ಈಗೆಲ್ಲಾ ಅದಕ್ಕೆ ಸಮಯವಿಲ್ಲವೆಂದೂ ಊಟದ ಸಮಯದಲ್ಲಿ ನೋಡೋಣವೆಂದದ್ದರಿಂದ ಬಿಯರ್ ಆಸೆ ಕೈ ಬಿಟ್ಟು ಒಬ್ಬನೇ ಒಂದಷ್ಟು ದೂರ ಅಡ್ಡಾಡಿ ಬಂದೆ. ಫೋಟೋ ತೆಗೆಸಿಕೊಳ್ಳಲು ನೀಡಿದ್ದ ಸಮಯ ಮುಗಿದದ್ದರಿಂದ ಮತ್ತೆ ಬಸ್ಸಿನಲ್ಲಿ ನಮ್ಮ ಪ್ರದಕ್ಷಿಣೆ ಆರಂಭವಾಯಿತು.

ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ನಮ್ಮ ಲಂಡನ್ ಪ್ರದಕ್ಷಿಣೆ ಮುಗಿದುಹೋಯಿತು. ವೆಸ್ಟ್ ಮಿನಿಸ್ಟರ್ ಅಬೆಯ್, ಕ್ಯಾಥಡ್ರಲ್ ಚರ್ಚು ಗಳನ್ನು ನೋಡಿ ಅಲ್ಲಿಯೇ ಹತ್ತು ನಿಮಿಷ ಬಿಡುವು ನೀಡುವುದರೋದಿಗೆ ನಮ್ಮ ಯು.ಕೆ ಪ್ರವಾಸ ಮುಕ್ತಾಯ ಗೊಂಡಿತ್ತು. ಎಲ್ಲರೂ ಬಸ್ ಹತ್ತಿ ಕೂತ ನಂತರ ಈಗ ನೇರ ಫ್ರಾನ್ಸ್ ಕಡೆಗೆ ಪಯಣವೆಂದು ಜ್ಯೂಜರ್ ಹೇಳಿದ ಕೂಡಲೇ ಶಾಪಿಂಗ್ ಪ್ರಿಯ ಮಹಿಳೆಯರ ಗುಂಪಿನಲ್ಲಿ ಗುಸು ಗುಸು ಶುರುವಾಯಿತು. ಕೊನೆಗೆ ಅವರೆಲ್ಲಾ ಒಂದಾಗಿ ಜ್ಯೂಜರ್ ನಿಗೆ ಅಮರಿಕೊಂಡು ನಮಗೆ ಶಾಪಿಂಗ್ ಗಾಗಿ ಕರೆದುಕೊಂಡು ಹೋಗಬೇಕೆಂದು ಒತ್ತಾಯ ಮಾಡತೊಡಗಿದ್ದರು. ಶಾಪಿಂಗ್ ಮಾಡದಿದ್ದಲ್ಲಿ ಈ ಲಂಡನ್ ಪ್ರವಾಸ ಮಾಡಿ ಸಾರ್ಥಕವೇನು ಎಂಬುದು ಆ ಶಾಪಿಂಗ್ ಪ್ರಿಯ ಮಹಿಳೆಯರ ವಾದವಾಗಿತ್ತು. ಆದರೆ ಜ್ಯೂಜರ್ ಅವ್ರ ಮಾತನ್ನು ನಯವಾಗಿಯೇ ತಳ್ಳಿಹಾಕಿದ್ದ. ಆದರೂ ಅವರು ಹಠ ಮುಂದುವರೆಸಿದಾಗ ಇಲ್ಲಿಂದ ಫ್ರಾನ್ಸಿಗೆ ಐದಾರು ಗಂಟೆಗಳ ಪ್ರಯಾಣವೆಂದೂ ಅಲ್ಲಿಗೆ ಹೋಗುವುದು ತಡವಾದಲ್ಲಿ ಹೋಟೆಲುಗಳಲ್ಲಿ ರೂಮುಗಳು ಸಿಗುವುದು ಕಷ್ಟವಾಗುತ್ತದೆಂದೂ, ಒಂದು ವೇಳೆ ರೂಮು ಸರಿಯಾಗಿ ಸಿಗದಿದ್ದಲ್ಲಿ ನಾನು ಜವಾಬ್ದಾರನಲ್ಲ ಎಂದು ಬಾಂಬ್ ಹಾಕಿದ. ನಿನ್ನೆ ತಾನೇ ಗಾಟ್ವಿಕ್ ವಿಮಾನ ನಿಲ್ಹಾಣದಲ್ಲಿ ಕಾದೂ ಕಾದೂ ರೋಸತ್ತಿದ್ದ ನೆನಪಾಗಿ ಅವರೆಲ್ಲಾ ಇನ್ಯಾವ ಹೊಸ ತಲೆನೋವನ್ನು ಅನುಭವಿಸಬೇಕಾಗುತ್ತದೆಂದು ಚಿಂತಾಕ್ರಾಂತರಾಗಿ ತಮ್ಮ ತಮ್ಮಲ್ಲೇ ಗೊಣಗಿಕೊಳ್ಳುತ್ತಾ ಶಾಪಿಂಗ್ ಕಾರ್ಯಕ್ರಮವನ್ನು ಕೈ ಬಿಟ್ಟಿದ್ದರು.

ಶಾಪಿಂಗ್ ಗಾಗಿ ನಿಲ್ಲಿಸಿದ್ದಲ್ಲಿ ಚಳಿಗೆ ಒಂದೆರಡು ಪೆಗ್ ಏರಿಸಬಹುದೆಂದು ನನ್ನಾಸೆಯಾಗಿತ್ತು. ಪಕ್ಕದಲ್ಲಿ ಕೂತಿದ್ದ ಗುರುಬಸಪ್ಪನವರು ನಿದ್ರೆಗೆ ಜಾರಿದ್ದರು. ಅವರು ಬೆಳಿಗ್ಗೆ ಜೂಜರ್ ನಿಗೆ ಯುನಿವರ್ಸಿಟಿಗೆ ಕರೆದುಕೊಂಡು ಹೋಗಲು ಸಾಧ್ಯವಾ ಎಂದು ಕೇಳಿದ್ದು ನೆನಪಾಯಿತು. ಇದ್ದ ನಾಲ್ಕು ಗಂಟೆ ಅವಧಿಯಲ್ಲೇ ಸರ ಸರನೆ ಬಸ್ಸಿನಲ್ಲೇ ಲಂಡನ್ ಸುತ್ತಿಸಿ ಮಹಿಳಾಮಣಿಗಳಿಗೆ ಶಾಪಿಂಗ್ ಮಾಡಲೂ ಅವಕಾಶ ನೀಡದ ಜ್ಯೂಜರ್ ಇನ್ನು ಗುರುಬಸಪ್ಪನವರನ್ನು ಆಕ್ಸ್ ಫರ್ಡ್ ಯೂನಿವರ್ಸಿಟಿಗೋ ಕೇಂಬ್ರೀಡ್ಜ್ ಯುನಿವರ್ಸಿಟಿಗೋ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಅವರದೇ ವಿಷಯದ ಪ್ರೊಫೆಸರುಗಳನ್ನು ಹುಡುಕಿ ಭೇಟಿ ಮಾಡಿಸಿ ಮಾತನಾಡಿಸಿಕೊಂಡು ಕರೆದುಕೊಂಡು ಬರಲು ಸಾಧ್ಯವಿತ್ತಾ, ಅದೆಲ್ಲಾ ಒಂದು ದಿನದಲ್ಲಿ ಆಗುವ ಕೆಲಸವಾ, ಅದಕ್ಕೇ ಇರಬಹುದು ಬೆಳಿಗ್ಗೆ ಗುರುಬಸಪ್ಪನವರ ಕೋರಿಕೆಗೆ ಜ್ಯೂಜರ್ ಬೆಚ್ಚಿ ಬಿದ್ದವನಂತೆ ಒಂದೆರಡು ನಿಮಿಷ ಗಾಬರಿಯಾಗಿದ್ದ. ಈ ನಮ್ಮ ಬ್ಯುಸಿ ಷೆಡ್ಯೂಲಿನ ಪ್ರಯಾಣ ಅನುಭವಿಸಿದ ನಂತರ ಗುರುಬಸಪ್ಪನವರ ಕೋರಿಕೆಗೆ ಜ್ಯೂಜರ್ ಕೇವಲ ಗಾಬರಿಯಾಗದೆ ಎಚ್ಚರ ತಪ್ಪಿ ಬಿದ್ದಿದ್ದರೂ ಅಶ್ಚರ್ಯವಿರಲಿಲ್ಲ. ಅದರ ಬಗ್ಗೆ ನೆನಪಾಗಿ ಮಾತಾಡೋಣವೆಂದುಕೊಂಡರೆ ಅವರ ಗೊರಕೆ ಶಬ್ಧ ಕೇಳಿಸತೊಡಗಿದ್ದರಿಂದ ಸುಮ್ಮನಾದೆ. ಬಸ್ಸು ೧೨೦ ಕಿ.ಮೀ.ವೇಗದಲ್ಲಿ ಫ್ರಾನ್ಸ್ ಕಡೆಗೆ ಸಾಗತೊಡಗಿತ್ತು.