ಬೇಕಾಗುವ ಪದಾರ್ಥಗಳು:
 
ಹಾಗಲಕಾಯಿ
ಟೊಮ್ಯಾಟೋ ಹಣ್ಣು
ಈರುಳ್ಳಿ ೧ ದೊಡ್ಡದು
ಅರಿಶಿನ ೨ ಟೀ ಚಮಚ
ಎಣ್ಣೆ  ೩ ಟೇಬಲ್ ಚಮಚ
ನಿಂಬೆ ರಸ ೧ ಚಮಚ
ಸಕ್ಕರೆ ೨ ಟೀ ಚಮಚ
ಕೊತ್ತಂಬರಿ ಸೊಪ್ಪು-ಸಣ್ಣಗೆ ಉತ್ತರಿಸಿದ್ದು
ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆಗೆ:
ಜೀರಿಗೆ ಕಾಲು ಚಮಚ
ಕರಿಬೇವಿನ ಸೊಪ್ಪು-೧ ಕಡ್ಡಿ
ಸಾಸಿವೆ ಕಾಲು ಚಮಚ
ಒಣಮೆಣಸಿನಕಾಯಿ
ಕಾಳುಮೆಣಸು ೧೦
ಕೊಬರಿ ಪುಡಿ ೨ ಟೇಬಲ್ ಚಮಚ
ಧನಿಯಾ ಪುಡಿ ೨ ಟೇಬಲ್ ಚಮಚ
(ನಿಮಗೆ ಇಷ್ಟವಾದಲ್ಲಿ ಯಾವುದಾದರೂ ಉತ್ತರ ಭಾರತದ ರೆಡಿಮೇಡ್ ಸಬ್ಜಿ ಮಸಾಲೆ ಪುಡಿಗಳು) 


 ಹಾಗಲಕಾಯಿ ಕೂಟು

ಶ್ರೀ ಸಿಡ್ ಸಿದ್ದರಾಜ್, ಅಟ್ಲಾಂಟಾ

 
ವಿಧಾನ:
  • ಮೊದಲು, ಹಾಗಲಕಾಯಿಗಳ ಒರಟು ಮೇಲ್ಮೈ ಅನ್ನು ಹೆರೆದುಕೊಳ್ಳಿ. ಪ್ರತೀ ಹಾಗಲಕಾಯಿಯ ಎರಡೂ ತುದಿಗಳನ್ನು ಕಾಲು ಇಂಚಿನಷ್ಟು ಕತ್ತರಿಸಿ ತೆಗೆದುಬಿಡಿ.
  • ಹಾಗಲಕಾಯಿಗಳನ್ನು ಕಾಲು ಇಂಚಿನ ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿಕೊಳ್ಳಿ.
  • ಒಲೆಯ ಮೇಲೆ ದಪ್ಪ ತಳದ ಪಾತ್ರೆ ಅಥವಾ ಪ್ಯಾನ್ ಇಡಿ. ಹಾಗಲಕಾಯಿಯ ಚೂರುಗಳನ್ನು ಅದರಲ್ಲಿ ಹಾಕಿ ಅದರ ಮೇಲೆ ೨ ಟೇಬಲ್ ಚಮಚ ಎಣ್ಣೆಹಾಕಿ, ಅರಿಶಿನದ ಪುಡಿ ಹಾಗೂ ೨ ಚಮಚ ಉಪ್ಪನ್ನು ಉದುರಿಸಿ ಅದನ್ನು ಕಮ್ಮಿ ಉರಿಯಲ್ಲಿ ನಿಧಾನವಾಗಿ ಹುರಿಯಿರಿ. 
  • ಹಾಗಲದ ಚೂರುಗಳು ಒಲೆಯ ಮೇಲೆ ನಿಧಾನವಾಗಿ ಹುರಿಯುತ್ತಿರುವಂತೆಯೇ ಮೇಲೆ ತಿಳಿಸಿರುವ ಎಲ್ಲ ಮಸಾಲೆ ಪದಾರ್ಥಗಳನ್ನೂ ಒಂದು ಪುಟ್ಟ ಬಾಣಲಿಯಲ್ಲಿ ೧ ಟೇಬಲ್ ಚಮಚ ಎಣ್ಣೆಯೊಂದಿಗೆ ಹುರಿದುಕೊಳ್ಳಿ.
  • ಹುರಿದ ಮಸಾಲೆ ಪದಾರ್ಥಗಳನ್ನು ಸ್ವಲ್ಪ ನೀರಿನೊಂದಿಗೆ ಒಂದೆರಡು ಸುತ್ತು ಮಿಕ್ಸಿಯಲ್ಲಿ ರುಬ್ಬಿಕೊಂಡು ನಂತರ ಅದಕ್ಕೆ ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
  • ರುಬ್ಬಿದ ಮಸಾಲೆಯನ್ನು ಬೇಯುತ್ತಿರುವ ಹಾಗಲಕಾಯಿಗೆ ಸೇರಿಸಿ. ಸ್ವಲ್ಪ ಸಮಯ ಕೈಯಾಡಿಸಿ ಬೇಯಿಸಿ.
  • ರುಚಿಗೆ ಪ್ರಕಾರವಾಗಿ ಮತ್ತಷ್ಟು ಉಪ್ಪು ಸೇರಿಸಿಕೊಳ್ಳಿ. ನಂತರ ಸಕ್ಕರೆ ಸೇರಿಸಿ. ಹಾಗಲಕಾಯಿ ಹಾಗೂ ಮಸಾಲೆ ಸಂಪೂರ್ಣ ಬೆಂದ ಮೇಲೆ ಒಲೆ ಆರಿಸಿ, ಉತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಸೇರಿಸಿ.
  • ಈ ಕೂಟನ್ನು ಅನ್ನ, ಚಪಾತಿಯ ಜೊತೆ ಎಂಜಾಯ್ ಮಾಡಿ.

(ಟಿಪ್: ಇತ್ತೀಚೆಗೆ ನಾನು ಇದೇ ರೆಸಿಪಿಯನ್ನು ಕೊರಿಯನ್ ಬಿಟ್ಟರ್ ಮೆಲನ್ ಮೇಲೂ ಪ್ರಯೋಗಿಸಿದ್ದೇನೆ. ಕೊರಿಯನ್ ಬಿಟ್ಟರ್ ಮೆಲನ್ ಗಳು ಅತಿಯಾಗಿ ಕಹಿ ಇರುವುದಿಲ್ಲ, ಬೆಂದ ಮೇಲೆ ಹಾಗಲಕಾಯಿಗಿಂತಲೂ ಗರಿಗರಿಯಾಗಿರುತ್ತವೆ ಮತ್ತು ರುಚಿಯೂ ಚನ್ನಾಗಿರುತ್ತದೆ. ನೀವು ಎರಡನ್ನೂ ಪ್ರಯತ್ನಿಸಿ ನಿಮ್ಮ ಇಷ್ಟದ ಆಯ್ಕೆ ಮಾಡಿಕೊಳ್ಳಬಹುದು)




 ಬೇಕಾಗುವ ಪದಾರ್ಥಗಳು:
 
ಬದನೆಕಾಯಿ (ಗುಂಡುಬದನೆಕಾಯಿ ಚನ್ನಗಿರುತ್ತದೆ)-ಒಂದು ದೊಡ್ಡದು
ಹಸಿಮೆಣಸಿನಕಾಯಿ-೩ (ಹೆಚ್ಚು ಖಾರ ತಿನ್ನುವವರು ಹೆಚ್ಚು ಬಳಸಬಹುದು)
ಈರುಳ್ಳಿ-೧ ದೊಡ್ಡದು (ಸಣ್ಣದಾಗಿ ಹೆಚ್ಚಿದ್ದು)
ಬೆಳ್ಳುಳ್ಳಿ-೨ ದಳ (ಜಜ್ಜಿಕೊಂಡದ್ದು)
ಕೊತ್ತಂಬರಿ ಸೊಪ್ಪು-೫-೬ ಕಡ್ಡಿ (ಸಣ್ಣಗೆ ಕತ್ತರಿಸಿಕೊಂಡದ್ದು)
ಮೊಸರು-೨ ದೊಡ್ಡ ಬಟ್ಟಲು (೨೫೦ ಗ್ರಾಮ್ ನಷ್ಟು)
ಎಣ್ಣೆ-ಕಾಲು ಟೀ ಚಮಚ
ಉಪ್ಪು-ರುಚಿಗೆ ಅನುಗುಣವಾಗಿ
 


 ಬದನೆಕಾಯಿ ಮೊಸರು ಚಟ್ನಿ

ಶ್ರೀಮತಿ ಜಯಾ ಶಿವಕುಮಾರ್

 
ವಿಧಾನ:
  • ಗುಂಡು ಬದನೆಯನ್ನು ತೊಳೆದು ಸ್ವಚ್ಚ ಮಾಡಿಕೊಳ್ಳಬೇಕು. ಅದರ ತೊಟ್ಟು ತೆಗೆಯದೆ,
    ಅದಕ್ಕೆ ಕಾಲು ಚಮಚ ಎಣ್ಣೆ ಸವರಿ ಗ್ರಿಲ್ ನಲ್ಲಿ ಅಥವಾ ಒಲೆಯ ಮೇಲೆ
    ಸುಟ್ಟುಕೊಳ್ಳಬೇಕು.
  • ಸುಟ್ಟಾಗ ಬದನೆಯ ಸಿಪ್ಪೆ ಕಪ್ಪಾಗುತ್ತದೆ. ಬದನೆ ತಣ್ಣಗಾದ ಮೇಲೆ ಅದರ ಕಪ್ಪು
    ಸಿಪ್ಪೆಯನ್ನು ತೆಗೆದುಕೊಳ್ಳಬೇಕು.
  • ಹಸಿಮೆಣಸಿನಕಾಯಿಗಳನ್ನು ಹೆಂಚಿನ ಮೇಲೆ ಹುರಿದುಕೊಳ್ಳಿ ಅಥವಾ ಬದನೆಯಂತೆಯೇ ಗ್ರಿಲ್ ಮಾಡಿಕೊಳ್ಳಿ.
  • ಸಿಪ್ಪೆ ಸುಲಿದ ಬದನೆ, ಹುರಿದ ಹಸಿಮೆಣಸು, ಸಣ್ಣಗೆ ಹೆಚ್ಚಿದ ಈರುಳ್ಳಿ, ಜಜ್ಜಿದ
    ಬೆಳ್ಳುಳ್ಳಿ ಮತ್ತು ರುಚಿಗೆ ಬೇಕಾಗುವಷ್ಟು ಉಪ್ಪು- ಎಲ್ಲವನ್ನೂ ಒಂದು ಬಟ್ಟಲಿಗೆ
    ಹಾಕಿಕೊಂಡು ಕೈಯ್ಯಲ್ಲಿ ಕಿವುಚಿ ಅಥವಾ ಮಿಕ್ಸಿಯಲ್ಲಿ ಒರಟಾಗಿ ಒಂದೆರಡು ಸುತ್ತು
    ರುಬ್ಬಿಕೊಳ್ಳಿ.
  • ಇದಕ್ಕೆ ಮೊಸರು ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಕಲೆಸಿ.
    ಇದನ್ನು ಗಟ್ಟಿಯಾಗಿ ಮಾಡಿದಾಗ ಚಟ್ನಿಯಂತೆಯೂ, ಸ್ವಲ್ಪ ತೆಳುವಾಗಿ ಮಾಡಿದಾಗ ಗೊಜ್ಜು,ಸಲಾಡ್ ನಂತೆಯೂ ಬಳಸಬಹುದು.
  • ಇದನ್ನು ತಯಾರಿಸಲು ಸಮಯವೂ ಬಹಳ ಕಡಿಮೆ.