"ಸಾಂಗ್ ಆಫ್ ಲಾವಿನೋ" ದಿಂದ 
ಉಗಾಂಡಾ ದ ಕವಿ ಒಕಾಟ್ ಪಿ ಬಿಟೆಕ್ ರವರ ನೀಳ್ಗವಿತೆ "ಸಾಂಗ್ ಆಫ್ ಲಾವಿನೋ" ದ ಆಯ್ದ ಭಾಗ 
 
ಕನ್ನಡಕ್ಕೆ: ಎಚ್. ಎಸ್. ರಾಘವೇಂದ್ರರಾವ್ 
 
ನನ್ನ ಬುಡಕಟ್ಟಿನ ಗೆಳೆಯರೆ,ಕೇಳಿ.
ನಾನು ಹಲುಬುತ್ತೇನೆ,
ಬುದ್ಧಿಯನ್ನು ಕಳೆದುಕೊಂಡ ನನ್ನ ಗಂಡನಿಗಾಗಿ.
ಅವನ ತಲೆ ಕಳೆದುಹೋಗಿದೆ,
ಪುಸ್ತಕಗಳ ಕಾಡಿನಲ್ಲಿ.
 

ನನ್ನ ಒಲವಿಗಾಗಿ ಅವನು ಹಂಬಲಿಸುತ್ತಿದ್ದಾಗ
ಅವನ ಕಣ್ಣುಗಳಲ್ಲಿ ಜೀವವಿತ್ತು
ಅವನ ಕಿವಿಗಳಲ್ಲಿ ಗುಗ್ಗೆ ತುಂಬಿರಲಿಲ್ಲ
ಒಕೋಲ್ ಇನ್ನೂ ಮೂರ್ಖನಾಗಿರಲಿಲ್ಲ.
ನನ್ನ ಗೆಳೆಯ ಇನ್ನೂ ಗಂಡಸಾಗಿದ್ದ.

 
ಆಗ ಅವನು ಇನ್ನೂ ಹೆಣ್ಣಾಗಿರಲಿಲ್ಲ
ಅವನು ಇನ್ನೂ ಸ್ವತಂತ್ರನಾಗಿದ್ದ
ಅವನ ಹೃದಯವೇ ಅವನ ಮಾರ್ಗದರ್ಶಿಯಾಗಿತ್ತು.

 
ನನ್ನ ಗಂಡ ಇನ್ನೂ ಕಪ್ಪು ಮನುಷ್ಯನಾಗಿದ್ದ

ಗೂಳಿಯ ಮಗ,
ಆಗಿಕ್ನ ಮಗ,
ಒಕೋಲ್ ಹಳ್ಳಿಯ ಈ ಹೆಂಗಸು
ಇನ್ನೂ ಗಂಡಸಾಗಿದ್ದ
ಅಕೋಲಿ ಆಗಿದ್ದ.
ನನ್ನ ಗಂಡನ ಮೇಜಿನಮೇಲಿನ ಕಾಗದಗಳು
ಸುರುಳಿಸುರುಳಿಯಾಗಿ ಹೆದರಿಸುತ್ತವೆ,
ದೈತ್ಯಕಾಡಿನ ಧಾಂಡಿಗ ಬಳ್ಳಿಯಂತೆ
ಉಳಿದ ಮರಗಳನ್ನು ಹೀರಿಕೊಂದು ತಾನು ಬೆಳೆಯುವ

ಕಿತುಬಾ ಮರಗಳಂತೆ.
ಕೆಲವು ನೆಟ್ಟಗೆ ನಿಲ್ಲುತ್ತವೆ,
ಕೆಲವು ಅಂಗಾತ ಮಲಗಿವೆ.
ಒರಾಕ್ ಕುಣಿತದಲ್ಲಿ ಮಗ್ನರಾದ ತರುಣರ ಕಾಲುಗಳ ಹಾಗೆ
ಅವು ಹೆಣೆದುಕೊಂಡಿವೆ.
ಗೊಗ್ಗೋ ಬೇಲಿಯ ಕಂಬಗಳ ಹಾಗೆ ಅವು ತಳುಕು ಹಾಕಿಕೊಂಡಿವೆ.
ದುರ್ಗಮ ಅರಣ್ಯದ ದೈತ್ಯ ಬಳ್ಳಿಗಳ ಬೇರುಗಳ ಹಾಗೆ
ಅವು ಗಟ್ಟಿ ಬೆಸುಗೆಯಾಗಿವೆ.
 

ನನ್ನ ಗಂಡನ ಮನೆ,
ಪುಸ್ತಕಗಳ ಭಯಂಕರ ಕಾಡು.
ಕತ್ತಲು ತುಂಬಿದ ಕಾಡು, ನಡುಗು ಥಂಡಿಯ ಕಾಡು
ಅದರ ನೆಲದಿಂದ ಮೇಲೇಳುವ ಬಿಸಿವಿಷದ ದಟ್ಟ ಹಬೆ,
ಪತ್ರಗಳ ನಡುವೆ ರಾಶಿಯಾಗಿರುವ ಕೊರೆವ ಮಂಜಿನ ಜೊತೆಗೆ, ಮಳೆಹನಿಗಳ ಜೊತೆಗೆ
ಕೂಡುತ್ತದೆ.


ಓ, ನನ್ನ ಬುಡಕಟ್ಟಿನ ಜನರೇ,
ನಾವೆಲ್ಲರೂ ಒಟ್ಟಾಗಿ ಕಣ್ಣೀರು ಸುರಿಸೋಣ.
ಬನ್ನಿ.
ನನ್ನ ಗಂಡನ ಸಾವಿಗಾಗಿ ಶೋಕಾಚರಣೆ ಮಾಡೋಣ
ಅದು ರಾಜಕುಮಾರನ ಸಾವು.
ಧಗಧಗ ಉರಿಯುವ ಬೆಂಕಿ ಸೃಷ್ಟಿಸಿದ
ಬರಿಬೂದಿಯ ಸಾವು.
ಓ,
ಇಂದು ಈ ಮನೆ ಸಂಪೂರ್ಣವಾಗಿ ಸತ್ತಿದೆ
ಈ ಮನೆಯ ಬಾಗಿಲಿಗೆ ಜಾಲಿಮುಳ್ಳನ್ನು ಬಡಿಯಿರಿ.
ಈ ರಾಜ್ಯಕ್ಕೆ ಉತ್ತರಾಧಿಕಾರಿಯಾದ ರಾಜಕುಮಾರ ಸತ್ತಿದ್ದಾನೆ.
ಎಲ್ಲ ಎಲ್ಲ ತರುಣರು
ಕಾಡಿನ ಕತ್ತಲಲ್ಲಿ ನಾಶವಾಗಿದ್ದಾರೆ
ಒಮ್ಮೆ,
ಚಂದ್ರನಿಲ್ಲದ ರಾತ್ರಿಯಲ್ಲಿ ಕಾಡುಬೆಂಕಿಯ ಹಾಗೆ ಉರಿದ ಈ ಮನೆ,
ಇಂದು
ಸಾಯುವ ಮುದುಕನ ಕೊನೆ ಉಸುರಿನಂತೆ ಕ್ಷೀಣವಾಗಿದೆ.

 
ಒಬ್ಬನೇ ಒಬ್ಬ ನಿಜವಾದ ಧೀರ ಮಗ ಉಳಿದಿಲ್ಲ
ಇಡೀ ಹಳ್ಳಿಯನ್ನು ಯುದ್ಧಖೈದಿಗಳು ಮತ್ತು ಗುಲಾಮರು
ಆಕ್ರಮಿಸಿದ್ದಾರೆ.
ನಮ್ಮ ಹುಡುಗರಲ್ಲಿ ಒಬ್ಬ ಜೀವಂತವಾಗಿ ತಪ್ಪಿಕೊಂಡಿರಬಹುದು
ಪೊದೆಯೊಳಗೆ ಅವಿತು ಸೂರ್ಯಮುಳುಗುವುದನ್ನು ಕಾಯುತ್ತಿರಬಹುದು
ಆದರೆ ಇನ್ನೊಂದು ದುಃಖಾಚರಣೆಗಿಂತ ಮೊದಲು ಅವನು ಬರುವನೇನು?
ಹೊತ್ತುಮೀರುವ ಮೊದಲೆ ಇಲ್ಲಿರುವನೇನು?
 

ನನ್ನ ಒಳಗಿನ ಒಳಗೆ ಪಿತ್ತಉರಿಯುತ್ತಿದೆ.
ಕಾರಿಕೊಳ್ಳುವ ಹಾಗೆ ಕಲಕುತ್ತಿದೆ
ಏಕೆಂದರೆ,
ನಮ್ಮ ತರುಣರನ್ನೆಲ್ಲ
ಕಾಡುಗಳಲ್ಲಿ ಕೊಲ್ಲಲಾಯಿತು
ಅವರ ಗಂಡಸುತನ ತರಗತಿಯ ಕೋಣೆಗಳಲ್ಲಿ
ಕೊಲೆಯಾಯಿತು.
ಅವರ ತೊರಡುಬೀಜಗಳನ್ನು ದೊಡ್ಡಪುಸ್ತಕಗಳಿಂದ
ಒಡೆಯಲಾಯಿತು.
 

 
 

ಉತ್ತರಗಳಿಲ್ಲ...... ಆದರೆ ಪ್ರಶ್ನೆಗಳು?

 
 
 
 
 
ಡಾ. ಬಂಜಗೆರೆ ಜಯಪ್ರಕಾಶ
 
ಕಲೆ ಮತ್ತು ಪ್ರಭುತ್ವಕ್ಕೆ ಒಂದು ಹುಟ್ಟಾ ವಿರೋಧವಿದೆ. ಗೂಗಿ ವಾ ಥಿಯಾಂಗೋ ತನ್ನ 'ಪೆನ್ ಪಾಯಿಂಟ್ಸ್, ಗನ್ ಪಾಯಿಂಟ್ಸ್ ಅಂಡ್ ಡ್ರೀಮ್ಸ್' ಕೃತಿಯಲ್ಲಿ ಇದನ್ನು ಎರಡು ಅಂಶಗಳ ಮೂಲಕ ವಿವರಿಸುತ್ತಾನೆ.
 
ಪ್ರಭುತ್ವವೆಂಬುದು ಯಾವುದೇ ಇರಲಿ ತನ್ನ ಸ್ವಭಾವದಿಂದಲೇ ಅದು ಯಥಾಸ್ಥಿತಿವಾದಿ. ಸಮಾಜದೊಳಗೆ ಪರಸ್ಪರ ಸಂಘರ್ಷದಲ್ಲಿರುವ ಹಿತಾಸಕ್ತಿಗಳ ನಡುವೆ ಅದು ಒಂದು ಸ್ಥಿರತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತದೆ. ಕಡೆಗೆ ಕ್ರಾಂತಿಕಾರಿ ಪರಿಸ್ಥಿತಿಯಲ್ಲಿ ಏರ್ಪಡುವ ಪ್ರಭುತ್ವವೂ ಕೂಡ ಹಳೆಯ ಆಳ್ವಿಕೆ ಹಾಗೂ ಸಾಂಸ್ಥಿಕ ರಚನೆಗಳೊಂದಿಗೆ ಇರುವ ವೈರುಧ್ಯಗಳನ್ನು ಬಗೆಹರಿಸಿಕೊಂಡ ತಕ್ಷಣ ತನ್ನ ಹೊಸ ಸಾಂಸ್ಥೀಕರಣಗಳನ್ನು ಸದೃಢಗೊಳಿಸಲು ತೊಡಗುತ್ತದೆ. ಗೂಗಿಯ ಪ್ರಕಾರ ಯಾವುದೇ ಪ್ರಭುತ್ವ ನಿರಂತರವಾಗಿ ಕ್ರಾಂತಿಯಲ್ಲಿರಲು ಸಾಧ್ಯವಿಲ್ಲ. ಕಲೆ ಎಂಬುದು ಅದರ ಸ್ವಭಾವದಿಂದಲೇ ಕ್ರಾಂತಿಕಾರಿ. ತನ್ನನ್ನು ಅದು ಸದಾ ನವೀಕರಿಸಿಕೊಳ್ಳಬಯಸುತ್ತದೆ. ಕಲಾವಿದನೊಬ್ಬ ತನ್ನ ಕೃತಿಗಳಲ್ಲಿಯೂ ಭಿನ್ನ ಬಗೆಯ ಅಭಿವ್ಯಕ್ತಿಯನ್ನು ಕಂಡುಕೊಳ್ಳುವ ಪ್ರಯತ್ನ ನಿರಂತರವಾಗಿರಿಸಿರುತ್ತಾನೆ.  

ಮುಂದೆ ಓದಿ


 ಡಾ. ಎಸ್ ಎಲ್ ಭೈರಪ್ಪನವರ ಕಾದಂಬರಿ ’ಕವಲು’: ಒಂದು ಅವಲೋಕನ

 
’ಬೆ ಸ ನಾ’

ಡಾ. ಎಸ್. ಎಲ್. ಭೈರಪ್ಪನವರ ಇತ್ತೀಚಿನ ಹೊಸ ಕಾದಂಬರಿ ಕವಲು ಕನ್ನಡ ಮುದ್ರಣ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಪ್ರಕಟವಾದ ವಾರದೊಳಗೇ ನಾಲ್ಕು ಮುದ್ರಣಗಳನ್ನು ಕಂಡಿದೆ. ಅಷ್ಟೇ ಅಲ್ಲ, ವಾದ-ವಿವಾದಕ್ಕೂ ಗುರಿಯಾಗಿದೆ. ವಿವಾದಕ್ಕೆ ಕಾರಣವಾದ ಭೈರಪ್ಪನವರ ಹಿಂದಿನ ಕಾದಂಬರಿಗಳೂ ಇವೆ. ಈ ಬಾರಿ "ಕವಲು" ಕಾದಂಬರಿ ಅದರಲ್ಲಿನ ವಸ್ತುವಿನಿಂದ ಚರ್ಚೆಗೆ ಆಸ್ಪದ ಕೊಟ್ಟಿದೆ. ಹಾಗಿದ್ದರೆ ಕಾದಂಬರಿಯಲ್ಲೇನಿದೆ? "ಆಯಾಮ"ದ ಓದುಗರಿಗೆ ಸ್ಥೂಲವಾಗಿ ಪರಿಚಯ ಮಾಡಿಕೊಡುವುದೇ ಈ ಬರಹದ ಆಶಯ.

"ಭಾರತೀಯ ಸಮಾಜದಲ್ಲಿ ಕವಲು ದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿಸುವ ಕಾದಂಬರಿ ಇದು" ಕಾದಂಬರಿಯ ಮೊದಲ ಪುಟದಲ್ಲಿ ಹೀಗಿದೆ.
ಆಧುನಿಕ ಸಮಾಜದಲ್ಲಿನ ಶ್ರೀಮಂತ ಹಾಗೂ ಪ್ರತಿಷ್ಟಿತ ವ್ಯಕ್ತಿಗಳಲ್ಲಿ ಆಗುತ್ತಿರುವ ನೈತಿಕ, ಮಾನಸಿಕ ಬದಲಾವಣೆಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಮಹಿಳಾವಾದ, ಬಂಡಾಯ, ಮುಕ್ತ ಲೈಂಗಿಕತೆ ಎಲ್ಲವೂ ಇಲ್ಲಿ ಬರುತ್ತವೆ. ಪ್ರಾಶ್ಚಾತ್ಯ ಸಿದ್ಧಾಂತಗಳಿಂದ ಪ್ರಭಾವಿತಗೊಂಡು ಭಾರತೀಯ ಸಮಾಜದ ಗಂಡು ಹೆಣ್ಣುಗಳು ಹಿಡಿಯುತ್ತಿರುವ ದಾರಿಯನ್ನು ಕಥನಕ್ರಿಯೆಯ ಮೂಲಕ ಭೈರಪ್ಪನವರು ಹೇಳತೊಡಗುತ್ತಾರೆ. ಆಧುನಿಕತೆಯ ಪ್ರಭಾವದಲ್ಲಿ ಕಾದಂಬರಿಯಲ್ಲಿನ ಗಂಡು-ಹೆಣ್ಣುಗಳು ನಡೆದುಕೊಳ್ಳುತ್ತಾರೆ, ಬದುಕುತ್ತಾರೆ. ಕಥೆಯ ಕೇಂದ್ರವಿರುವುದು ಎರಡು ಸಂಸಾರಗಳ ನಡುವೆ. ಜಯಕುಮಾರ್-ಮಂಗಳೆ ಮತ್ತು ವಿನಯಚಂದ್ರ-ಇಳಾ ಇವರು. ಇವರೆಲ್ಲರೂ ಹೆಚ್ಚು ವಿದ್ಯಾವಂತರು, ಓದಿ ಒಳ್ಳೆಯ ನೌಕರಿಯಲ್ಲಿರುವವರು. ತಂತಮ್ಮ ಹಕ್ಕುಗಳಿಗಾಗಿ ಹೋರಾಡುವಂಥವರು. ಆ ಹೋರಾಟದ ಭರದಲ್ಲೇ ಇಬ್ಬರೂ ದಾರಿ ತಪ್ಪುತ್ತಾರೆ.
 
ಇಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿ, ದೇಶದ ಬೇರೆಬೇರೆ ಕಡೆ ವಿಚಾರಗೋಷ್ಟಿಗಳಲ್ಲಿ ಭಾಗವಹಿಸುತ್ತಾಳೆ. ಮಂಗಳೆ ಜಯಕುಮಾರನ ಎರಡನೇ ಹೆಂಡತಿಯಾಗಿ ಅವನನ್ನು ಕಾಡಿಸಿ ಗೆದ್ದು, ಸೋಲುತ್ತಾಳೆ. ಸುಂದರವಾಗಿದ್ದ, ಮತ್ತೂ ಸುಂದರವಾಗಬಹುದಾಗಿದ್ದ ಬದುಕನ್ನು ಇಬ್ಬರೂ ಝಾಡಿಸಿಕೊಳ್ಳುತ್ತಾರೆ. ’ಕವಲು’ವಿನಲ್ಲಿ ಬರುವ ಸರಾಫ್ ಮೇಡಂ, ಪ್ರಭಾಕರ, ದೊರೆರಾಜ, ನಚಿಕೇತ, ಸುಜಯಾ- ಈ ಪಾತ್ರಗಳು ಕೇಂದ್ರ ಕಥೆಗೆ ಹಾಸುಹೊಕ್ಕಾಗಿವೆ. ಕುಟುಂಬಗಳು ಒಡೆಯುವ ಪ್ರಕ್ರಿಯೆ ಈ ಕಥನದ ಸುತ್ತ ಹೆಣೆದುಕೊಂಡಿದೆ. ಅಷ್ಟೇ ಅಲ್ಲ, ಇವತ್ತಿನ ಮಹಿಳಾ ದೌರ್ಜನ್ಯ ಕಾಯಿದೆಯ ದುರುಪಯೋಗವಾಗುತ್ತಿರುವ ಅಂಶವೂ ಇಲ್ಲಿದೆ. ಈ ಕಾದಂಬರಿಯಲ್ಲಿ ಸ್ತ್ರೀ ಬಂಡಾಯ ಎಲ್ಲಿಗೆ ಮುಟ್ಟುತ್ತದೆಯೆಂದರೆ ಸಲಿಂಗ ಕಾಮವನ್ನು ಉತ್ತೇಜಿಸುವಷ್ಟು. ಮಗಳನ್ನು ಕುರಿತು ತಾಯಿ "ನಿನಗೂ ಹದಿನೆಂಟಾಗಿದೆ, ಬಾಯ್ ಫ್ರೆಂಡ್ ಮಾಡಿಕೋ, ಯಾವುದೇ ರೋಗ ಅಂಟದಂತೆ, ಬಸಿರು ಕಟ್ಟದಂತೆ ಎಚ್ಚರ ವಹಿಸು" ಎನಿಸುವಷ್ಟು.
 

ಒಂದೆರಡು ಸಂಭಾಷಣೆಗಳು ಹೀಗಿವೆ;
 
’ಓದಿದ ಗಂಡಸರೆಲ್ಲ ಎಂಗಸರಾಯ್ತಾರೆ, ಎಂಗಸರೆಲ್ಲಾ ಗಂಡಸರಾಯ್ತಾರೆ’
’ಹಾದರ ಅಂದರೆ ಏನಮ್ಮಾ? ’ನಾನು ಹಾದರಕ್ಕೆ ಹುಟ್ಟಿದೆನೆ?’
’ಮುಠ್ಠಾಳನಾದರೂ ಅವನು ನನ್ನ ಮಗ, ಹುಟ್ಟಿದಾಗಿನಿಂದ ಕಾಣದಿದ್ದರೂ ಅವಳು ಮೊಮ್ಮಗಳು, ಈಗಿನ ಕಾಲದ ನಿಮಗೆ ಸಂಬಂಧ ಅರ್ಥವಾಗುಲ್ಲ’.
 
ಸಮಕಾಲೀನ ಸಂಗತಿಗಳ ಮೇಲೆ ಬೆಳಕುಚೆಲ್ಲುವ, ವಿಘಟಿತಗೊಳ್ಳುತ್ತಿರುವ ಭಾರತೀಯ ಕೌಟುಂಬಿಕ ವ್ಯವಸ್ಥೆ, ದಾಂಪತ್ಯ ಪದ್ದತಿ, ಇವು ಕವಲು ಕಾದಂಬರಿಯ ಹೂರಣ. ಬದಲಾವಣೆ ಅನಿವಾರ್ಯ ನಿಜ. ಆದರೆ ಆ ಬದಲಾವಣೆಯ ಗುರಿಯೆತ್ತ? ಗಮನವೆತ್ತ? ನೆಲೆಯೆತ್ತ? ಒಟ್ಟಿನಲ್ಲಿ ’ಕವಲು’ ಸ್ತ್ರೀವಾದಿಗಳ ನಿದ್ದೆಗೆಡಿಸುತ್ತಿರುವ ಕಾದಂಬರಿಯೂ ಹೌದು ಎನ್ನುವುದಕ್ಕೆ ಪ್ರತಿನಿತ್ಯ ಪತ್ರಿಕೆಗಳಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳೇ ನಿದರ್ಶನ!

 

ಹಗಲು ವೇಷ-ಅಷ್ಟು ಕಲೆ, ಒಂದಷ್ಟು ಪಾಡು