ಒಂದು ಊರ್ನಲ್ಲಿ ಒಬ್ ಗೌಡ ಇದ್ದ. ಬುದ್ವಂತ. ಅವ್ರಿಗೆ ಇವ್ರಿಗೆ ಜನ್ಕೆಲ್ಲ ಉಪ್ಕಾರ ಮಾಡ್ತಿದ್ದ. ಗೌಡ ಅವ್ನ ಮನೇಲಿ ಒಂದಿನ ಒಬ್ಬ ಗುರುಗಳ್ಗೆ ಪಾದಪೂಜೆ ಇಟ್ಕಳನ ಅಂದುಕೊಂಡ. ಅದ್ಕೆ ಒಬ್ಬ ಒಳ್ಳೆ ಗುರುಗೋಳ್ನ ಬೇರೆ ಊರಿಂದ ಹುಡ್ಕಿ ಅವ್ರಿಗೆ ತನ್ನೂರಿಗೆ ಪಾದ್ಪೂಜೆಗೆ ಬರೇಳಿ ಬಂದ. ಅದರಂತೆ ಪಾದ್ಪೂಜೆ ದಿನ ಆ ಗುರುಗಳು ಎತ್ತಿನ್ ಗಾಡಿ ಕಟ್ಟಿಸಿಕೊಂಡು ಗೌಡನ ಮನೆಗ್ ಬಂದ್ರು. ಗುರುಗಳ್ ಬರುವಷ್ಟರಲ್ಲಿ ಗೌಡ್ರ ಮನೇಲಿ ಪೂಜೆಗೆ ಎಲ್ಲ ಸಿದ್ದಮಾಡಿ ಇಟ್ಟಿದ್ರು. ಅವ್ರು ಬರುವಷ್ತರಲ್ಲಿ ಸಂಜೆನೇ ಆಗಿತ್ತು. ಬಂದ್ರಲ್ಲ ಗುರುಗಳು ಅಂತ ಗೌಡ್ರು ಹೆಂಡ್ತಿ ಮಕ್ಳೆಲ್ಲಾ ಅವ್ರ್ನ ಬರಮಾಡ್ಕಂಡ್ರು.
ಗುರುಗಳು ಗೌಡ್ನ ಮನೆಗೆ ಬಂದವರು ಸ್ನಾನಮಾಡಿ ಸಂದ್ಯಾವಂದ್ನೆ ಮಾಡ್ತಾ ಕೋಣೆಲಿ ಕೂತಿದ್ರು. ಅಲ್ಲಿ ಕೂತಿದ್ದಾಗ ತಮಗೆ ಕೂತ್ಗಳಕೆ ತಳಕ್ಕೆ ಹಾಸಿದ್ದ ರತ್ನಗಂಬಳಿನ ನೋಡಿದ್ರು. ಗುರುಗಳ್ಗೆ ಅದರ ಮೇಲೆ ಭಾಳಾ ಮನಸ್ಸಾಯ್ತು. ಅಷ್ಟೇ ಅಲ್ಲ ; ಅದೇ ಕೋಣೆಲಿ ಗೌಡರ ಬಣ್ಣದ ಶಾಲು ಕಣ್ಣಿಗೆ ಬಿತ್ತು. ಅದೂ ಗುರುಗಳ್ಗೆ ಭಾಳ ಇಷ್ಟ ಆಯ್ತು. ಇದನ್ನು ಹೆಂಗಪ್ಪಾ ಈಗ ನಂದಾಗ ಥರ ಮಾಡ್ಕಳದು ಅಂತ ಗುರುಗಳು ಒಂದು ಚಣ ಯೋಚಿಸಿದ್ರು. ಆಗ ಗುರುಗಳು ಸಂದ್ಯಾವಂದ್ನೆ ಮಾಡ್ತಾ ಒಂದು ಬಟ್ಟಲಿಂದ ನೀರು ತಗೊಂಡು ತಮ್ಮ ತಲೆ ಮೇಲೆ ಚುಮುಕಿಸಿಕೊಳ್ತಾ..."ರತ್ನಗಂಬಳಿ ಹಾಸ್ಕೊಳ್ಳಕ್ಕೆ ಆಯ್ತು, ಬಣ್ಣದ ಶಾಲು ಹೊದ್ಕೊಳಕ್ಕೆ ಆಯ್ತು" ಅಂತ ಒಂದೆರಡು ಸಲ ಎಲ್ರಿಗೂ ಕೇಳುವಂತೆ ಹೇಳಿದ್ರು.
"ಓಹೋ! ಇದೇನ್ ಬಂತಪ್ಪ ಗ್ರಾಚಾರ! ಗುರುಗಳ್ನ ಪಾದಪೂಜೆಗೆ ಕರದ್ರೆ ನನ್ನ ರತ್ನಗಂಬಳಿ, ಬಣ್ಣದ ಶಾಲನ್ನೇ ಕಳ್ಕಳಂಗೆ ಆಗ್ತಿದೆಯಲ್ಲಾ" ಅಂತಾ ಯೋಚಿಸಿದ. ಅವನೂ ಇಂತ ಸುಮಾರು ಗುರುಗಳ್ನ ಕಂಡಿದ್ದ. ಕಿಲಾಡಿ ಗೌಡ ಅಂದ ಮೇಲೆ ಕೇಳಬೇಕಾ? ಅವನು ತನ್ನ ಅದ್ದರಿಂದ ಹೆಂಡ್ತೀನ ಕರೆದ. "ಲೇ... ಬೇಗ್ಬಾಯಿಲ್ಲಿ. ಜಲ್ದಿ ಒಂದ್ ಬಟ್ಟಲಲ್ಲಿ ನೀರು ತಗಂಡು ಬಾ" ಅಂತ ಹೆಂಡ್ತೀಗೆ ಹೇಳಿ ತಾನೂ ಸಂದ್ಯಾವಂದ್ನೆ ಮಾಡ ತರ ಕೂತುಕೊಂಡ. ಕೂತುಕೊಂಡವ್ನೇ ತಾನೂ ಗುರುಗಳ್ ತರ ಸಂದ್ಯಾವಂದ್ನೆ ಮಾಡುವಂಗೆ ಮೂಗು-ತಲೆ ಮ್ಯಾಲೆಲ್ಲಾ ನೀರನ್ನು ಚುಮುಕಿಸಿಕೋತಾ "ಗುರುಗಳ ಎತ್ತು ಹೊಲ ಉಳಕೆ ಆಯ್ತು, ಎತ್ತಿನಗಾಡಿ ಸವಾರಿಗೆ ಆಯ್ತು" ಅಂತ ಜೋರಾಗಿ ಎಲ್ರಿಗೂ ಕೇಳಿಸ್ಲಿ ಅಂತ ಒಂದೆರಡು ಸಲ ಹೇಳಿದ.
ಗುರುಗಳು ನೋಡಿದ್ರು. "ಓಹೊ! ಕೆಲ್ಸಾ ಕೆಟ್ಟೊಯ್ತು!! ನಾನ್ ಹೆಚ್ಚು ಅಂದ್ರೆ ನನಗಿಂತ ಇವನ್ ಹೆಚ್ಚಾಗ್ತಾ ಇದ್ದಾನಲ್ಲಾ! ತಡಿ ಇದನ್ನ ಸರಿ ಮಾಡಣ" ಅಂದಕ್ಕೊಂಡ್ರು.
ಗುರುಗಳು ಮತ್ತೆ ಸಂದ್ಯಾವಂದ್ನೆ ಮಾಡ್ತಾ "ನಂದೂ ನನಗೇ ಇರಲಿ, ನಿಂದೂ ನಿನಗೇ ಇರಲಿ" ಅಂತಾ ಎರಡೆರಡು ಸಲ ಜೋರಾಗಿ ಹೇಳಿದ್ರು. ಆಗ ಗೌಡ "ಹಂಗಂದ್ರೆ ನಾ ಬ್ಯಾಡಾ ಅಂದನಾ...ಹಂಗಂದ್ರೆ ನಾ ಬ್ಯಾಡ ಅಂದನಾ" ಅಂತ ಜೋರಾಗಿ ಅಂದ. ಗುರುಗಳು ಸದ್ದಿಲ್ಲದೆ ಸಂದ್ಯಾವಂದ್ನೆ ಮುಗಿಸಿ "ಗೌಡರೆ, ಬೇಗ್ ಬೇಗ ಪೂಜೆ ಮುಗಿಸಿಬಿಡಿ, ನನಗೆ ಹೊತ್ತಾಗುತ್ತೆ. ಮತ್ತೆ ಊರಿಗೆ ಹೊರಡ ಬೇಕು" ಎನ್ನುತ್ತಾರೆ. ಗೌಡ, ಅವನ ಹೆಂಡ್ತಿ ಮಕ್ಕಳೆಲ್ಲರೂ ಗುರುಗಳ್ನ ಕೂರಿಸಿ ಪೂಜೆ ಮಾಡಿ ಕಾಣ್ಕೆ-ತಿಂಡಿ ಕೊಡ್ತರೆ. ಪೂಜೆ ಎಲ್ಲಾ ಮುಗಿದ್ ಮೇಲೆ ಗುರುಗಳು ಗೌಡನ್ನ ಕರೆದು "ಗೌಡ್ರೇ...ನಿಮ್ಮ ರತ್ನಗಂಬಳಿ, ಶಾಲು ಎಲ್ಲನೂ ಜೋಪಾನವಾಗಿಟ್ಟೀದ್ದೀನಿ ನೋಡ್ಕಳಿ" ಅಂತರೆ. ಆಗ ಗೌಡ "ಗುರುಗಳೇ ನೀವು ಬಂದುದ್ದು ನಮ್ಗೆ ಸಂತೋಷ. ನಿಮ್ಮ ಎತ್ತಿನಗಾಡಿ ಸಿದ್ದವಾಗಿವೆ. ನೀವು ಜೋಪಾನಾಗಿ ಹೋಗ್ಬಿಟ್ಟು ಬನ್ನಿ" ಅಂದು ಕೈಮುಗಿತನೆ. ಗುರುಗಳು ಹೊರಟಾದ ಮೇಲೆ ಗೌಡನ ಹೆಂಡ್ತಿ ಮಕ್ಕಳೆಲ್ಲಾ ಬಿದ್ದೂ ಬಿದ್ದೂ ನಗ್ತರೆ.
(ಸಂಗ್ರಹ)