ಆಧುನಿಕ ಸಮಾಜದವರು ನಾವೆಂದು ನಮಗೆ ನಾವೇ ನಾಮಕರಣ ಮಾಡಿಕೊಂಡು ಬದುಕುತ್ತಿರುವ ಇಂದಿನ ದಿನಗಳಲ್ಲಿ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅತ್ಯಂತ ಅಮಾನವೀಯ ಘಟನೆಯೊಂದು ’ಸುಸಂಸ್ಕೃತರ’ ನಾಡೆಂದು ಕರೆಯಲ್ಪಡುವ ನಮ್ಮ ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜರುಗಿದೆ. ಏಳೆಂಟು ದಶಕಗಳಿಂದ ತಾವು ಬದುಕಿದ್ದ ಸಣ್ಣ ಸೂರನ್ನು ಕಿತ್ತುಕೊಳ್ಳಲು ಬಂದ ಕರ್ನಾಟಕದ ಸರ್ಕಾರಿ ಅಧಿಕಾರಿಗಳನ್ನು ಪರಿ ಪರಿಯಾಗಿ ಬೇಡಿಕೊಂಡರೂ ಆ ಅಧಿಕಾರಿಗಳು ಪರಿಗಣಿಸದಿದ್ದ ಕಾರಣ, ಆ ಜನರು ನೆಲೆಸಿದ್ದ ಗುಡಿಸಲುಗಳನ್ನು ಮುಲಾಜಿಲ್ಲದೆ ನೆಲಸಮ ಮಾಡಲು ಮುಂದಾದ ಕಾರಣ, ಹೀಗಿಷ್ಟು ಜನ ಬಡಪಾಯಿಗಳು ಬೇರೆ ದಾರಿ ತೋರದೆ ಬಕೇಟುಗಟ್ಟಲೆ ಮಲವನ್ನು ತಮ್ಮ ಮೈ ಮೇಲೆ ಸುರಿದುಕೊಂಡು ಪ್ರತಿಭಟಿಸಿದ್ದಾರೆ!
ಇದರ ಹಿನ್ನೆಲೆ ಹೀಗಿದೆ; ಹಾವೇರಿ ಜಿಲ್ಲೆಯ ಸವಣೂರು ಗ್ರಾಮದಲ್ಲಿ ಏಳೆಂಟು ದಶಕಗಳ ಹಿಂದೆ ಆಂಧ್ರ ಪ್ರದೇಶದಿಂದ ವಲಸೆ ಬಂದಿರುವ ಭಂಗಿ ಸಮಾಜದ ಏಳೆಂಟು ಕುಟುಂಬಗಳು ವಾಸಿಸುತ್ತಿವೆ. ಈ ಭಂಗಿ ಸಮಾಜದವರ ಕಸುಬೆಂದರೆ ಊರವರ ಸಂಡಾಸಿನ ಮಲವನ್ನು ತೆಗೆಯುವುದು. ಹಿಂದೆ ’ಅಸ್ಪೃಶ್ಯತೆ’ ಯೆಂಬ ಕ್ರೂರ ಆಚರಣೆ ಸಾಮಾಜಿಕ ಒಪ್ಪಿಗೆಯಾಗಿ ನಡೆಯುತ್ತಿದ್ದಾಗ ಈ ಭಂಗಿ ಜನಾಂಗದವರು ಕುಲೀನರ-ಮೇಲ್ಜಾತಿಯವರ ಮಲವನ್ನು ಸ್ವಚ್ಚ ಮಾಡಿ ತೆಗೆದು ಅದನ್ನು ಬುಟ್ಟಿಗಳಲ್ಲಿ, ಬಿಂದಿಗೆಗಳಲ್ಲಿ ತಮ್ಮ ತಲೆ ಮೇಲೆ ಹೊತ್ತು ತಂದು ಇಡೀ ಊರಿನ ಬಾಹ್ಯ ಪರಿಸರವನ್ನು ಸ್ವಚ್ಚವಾಗಿಡುತ್ತಿದ್ದರು. ಸ್ವಾತಂತ್ರ್ಯಾನಂತರ ಮಲವನ್ನು ಹೀಗೆ ತಲೆಮೇಲೆ ಹೊರುವುದನ್ನು ನಿಷೇಧಿಸಲಾಗಿದ್ದರೂ ಇಂದಿಗೂ ಈ ಸಮಾಜದವರು ಈ ವೃತ್ತಿಯನ್ನು ಮಾಡುತ್ತಲೇ ಬಂದಿರುವುದು ಮೊದಲ ಆಶ್ಚರ್ಯ! ಸಾಕ್ಷರತೆ, ವಿದ್ಯಾಭ್ಯಾಸ ಪಡೆಯುವ ಕಡೆ ಯೋಚನೆಯೂ ಮಾಡದೆ, ಪ್ರಶ್ನಿಸದೆ, ಬದಲಾಗುತ್ತಿರುವ ಆಧುನಿಕ ಸಮಾಜವನ್ನು ಇಣುಕಿಯೂ ನೋಡದೆ ೨೦೧೦ ರಲ್ಲಿಯೂ ಈ ಕಸುಬಿನ ಜನ ಕರ್ನಾಟಕದಂತಹ ಐಟಿ ಪಂಡಿತ, ಸಿರಿವಂತ ರಾಜ್ಯದ ಸಂದಿಗಳಲ್ಲೇ ಇದ್ದಾರೆ, ಅವರನ್ನು ಅವರ ದೈನ್ಯ ಪಾಡಿಗೆ ನಮ್ಮ ಸರ್ಕಾರ ಇಷ್ಟು ವರ್ಷಗಳೂ ಇರಲು ಬಿಟ್ಟಿದೆ ಎನ್ನುವುದು-ಅದೂ ಪರಮಾಶ್ಚರ್ಯ.
ವಂಶ ಪಾರಂಪರ್ಯವಾಗಿ ಈ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ಭಂಗಿಗಳಿಗೆ ನವಾಬನ ಕಾಲದಲ್ಲಿಯೇ ವಾಸಿಸಲು ಇಲ್ಲಿ ಜಾಗ ನೀಡಲಾಗಿತ್ತು. ಊರು ಬೆಳೆದಂತೆಲ್ಲಾ ಇವರು ವಾಸಿಸುತ್ತಿದ್ದ ಗುಡಿಸಲುಗಳು ಊರಿನ ಮದ್ಯಭಾಗಕ್ಕೆ ಅದೂ ಪುರಸಭೆ ವ್ಯಾಪ್ತಿಯೊಳಗೇ ಸೇರಿಕೊಂಡಿತ್ತು. ಕಾಲ ಉರುಳಿದಂತೆಲ್ಲಾ ಈ ಜಾಗದ ಕಿಮ್ಮತ್ತೂ ಜಾಸ್ತಿಯಾಗತೊಡಗಿತ್ತು. ಆಸೆಬುರುಕ ಬಂಡವಾಳಗಾರರು ಸರ್ಕಾರಿ ಅಧಿಕಾರಿಗಳು ಮತ್ತು ಪುಡಾರಿಗಳೊಂದಿಗೆ ಸೇರಿ ಈ ಜಾಗವನ್ನು ಭಂಗಿ ಸಮಾಜದವರಿಂದ ಕಬಳಿಸುವ ಸಂಚು ರೂಪಿಸಿದ್ದರು. ಅವರ ಜಾಗ ಈಗ ಆಯಕಟ್ಟಿನ ಜಾಗವಾಗಿ ಮಾರ್ಪಾಟಾಗಿದ್ದರಿಂದ ಭಂಗಿ ಜನಾಂಗದವರವನ್ನು ಸಾರಾಸಗಟಾಗಿ ಜಾಗ ಖಾಲಿ ಮಾಡಿಸಿ ಅಲ್ಲಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸಬೇಕೆಂಬುದು ಸವಣೂರಿನ ಹೂಡಿಕೆದಾರರ ಹುನ್ನಾರ. "ನೀವಿರುವ ಜಾಗವನ್ನು ಖಾಲಿ ಮಾಡಿ ಹೋಗಬೇಕೆಂದು ಸರ್ಕಾರಿ ಆದೇಶವಾಗಿದೆ" ಎಂದು ಕಳೆದ ಏಳೆಂಟು ತಿಂಗಳಿನಿಂದಲೂ ಇವರನ್ನು ಒತ್ತಾಯ ಮಾಡಲಾಗುತ್ತಿತ್ತು. ಎಪ್ಪತ್ತು ಎಂಭತ್ತು ವರ್ಷಗಳಿಂದಲೂ ಅದೇ ಜಾಗದಲ್ಲಿ ವಾಸಿಸುತ್ತಾ, ಊರಿನ ಗಲೀಜೆಲ್ಲವನ್ನೂ ತಮ್ಮ ತಲೆಮೆಲೆಯೇ ಹೊತ್ತು ಊರನ್ನು ಸ್ವಚ್ಚಗೊಳಿಸುತ್ತಿದ್ದ ಆ ಅನಕ್ಷರಸ್ತ-ಅವಿದ್ಯಾವಂತ ಬಡ ಜನತೆ ದಿಕ್ಕುತೋಚದಂತಾಗಿತ್ತು. ಅವರಿಗೆ ವಿದ್ಯೆ ಇರಲಿಲ್ಲ-ಪರ್ಯಾಯ ಉದ್ಯೊಗ ವ್ಯವಸ್ಥೆ ಇರಲಿಲ್ಲ. ಬೇರೊಂದು ಕಡೆ ಅವರನ್ನು ಸರಿಯಾಗಿ ನೆಲೆನಿಲ್ಲಿಸುವ ಬಗ್ಗೆ ಯಾವ ಯೋಜನೆಗಳೂ ಇರಲಿಲ್ಲ. ದೈನ್ಯತೆಯ ಪರಾಕಷ್ಠೆಯಿಂದ ಬದುಕು ಸವೆಸುತ್ತಿದ್ದ ಬಡ ಭಂಗಿ ಜನ ಅವರಿವರ ಕೈ ಕಾಲು ಹಿಡಿದು ತಮ್ಮ ಗೋಳು ತೋಡಿಕೊಂಡಿದ್ದರು.
ಇಂದಿನ ಆಧುನಿಕ ಸಮಾಜದಲ್ಲಿ ಅತ್ಯಂತ ನಿಕೃಷ್ಟ ಕಸಬು ಮಾಡುತ್ತಿರುವವರು ಇವರಿಗೆ ನಾವ್ಯಾಕೆ ಬೆಂಬಲ ನೀಡಬೇಕೆಂದು ಸುಸಂಸ್ಕ್ರತರು ತೆಪ್ಪಗಿದ್ದರು. ಅವರಿಗೆ ತಮ್ಮ ಮನೆಯವರೆಲ್ಲರ ಮಲವನ್ನು ಹೊತ್ತೊಯ್ಯಲು ಇವರು ಬೇಕಾಗಿತ್ತಷ್ಟೆ. ಆದರೆ ತಮ್ಮ ನಡುವೆ ಈ ಮಲ ಹೊರುವವರು ಇರುವುದು ಅವರಿಗೂ ಇಷ್ಟವಿರಲಿಲ್ಲ. ಕಳೆದ ಐದಾರು ತಿಂಗಳುಗಳಿಂದ ಇವರ ಗುಡಿಸಲ ಬಳಿಯಿದ್ದ ನೀರಿನ ಕೊಳಾಯಿಯನ್ನು ಪುರಸಭೆಯವರು ಕಿತ್ತೆಸೆದಿದ್ದರಿಂದ ಇವರಿಗೆ ಕುಡಿಯುವ ನೀರಿಗೂ ತತ್ವಾರವಾಗಿ, ಐದಾರು ತಿಂಗಳಿಂದಲೂ ಈ ಜನರು ಇತರೆ ಮನೆಗಳಿಂದ ಬಂದು ಮೋರಿಗೆ ಸೇರುತ್ತಿದ್ದ ಕೊಳಕು ನೀರನ್ನೇ ಕುಡಿದು ಬದುಕತೊಡಗಿದ್ದರು, ತಮ್ಮ ಕೂಸುಗಳಿಗೂ ಕುಡಿಸಿ ಅನಾರೋಗ್ಯ ಪೀಡಿತರಾಗಿದ್ದರು. ಕೆಲದಿನಗಳ ಹಿಂದೆ ಪುರಸಭೆ ಅಧಿಕಾರಿಗಳು ಬುಲ್ಡೋಜರ್ ತಂದು ಎಲ್ಲರನ್ನೂ ಖಾಲಿ ಮಾಡಿಸುವುದಾಗಿ ಇವರಿಗೆ ಧಮಕಿ ಹಾಕಿ ಹೋಗಿದ್ದರು.
ತಮ್ಮ ಮನೆ-ನೆಲ ಉಳಿಸಿಕೊಳ್ಳಲು ಯಾರ ಬೆಂಬಲವೂ ಸಿಗದಾದಾಗ ಭಂಗಿ ಜನರು ಅಂತಿಮವಾಗಿ ಜುಲೈ ೨೦ ರಂದು ತಾವು ಏಳೆಂಟು ಕುಟುಂಬದವರು ಸೇರಿ ಪುರಸಭೆ ಮುಂದೆ ಪ್ರತಿಭಟನೆಗಿಳಿದು ನಮ್ಮನ್ನು ಖಾಲಿ ಮಾಡಿಸಬೇಡಿರೆಂದು ನಾಗರಿಕವಾಗಿ ಧರಣಿ ನಡೆಸಿದ್ದರು. ಆದರೆ ಇವರು ಧರಣಿಯನ್ನು ಯಾವ ಅಧಿಕಾರಿಯೂ ಪರಿಗಣಿಸಿರಲಿಲ್ಲ, ವಿಚಾರಿಸಿರಲಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೂ ಪುರಸಭೆಯ ಆವರಣದಲ್ಲಿಯೇ ಧರಣಿ ಕುಳಿತರೂ ಯಾರೂ ಗಮನ ಕೊಡದ ಕಾರಣ ತೀರ್ವವಾಗಿ ಹತಾಶರಾದ ಆ ಜನ ಕೂಡಲೇ ಹೋಗಿ ಬಕೇಟು, ಬಿಂದಿಗೆಗಳ ತುಂಬ ಮಲವನ್ನು ತಂದವರೇ ತಮ್ಮಗಳ ಮೈ ಮೇಲೆ ಸುರಿದುಕೊಂಡರು! ಪುರಸಭೆ ಆವರಣದಲ್ಲಿಯೇ ನಡೆದ ಈ ಕೃತ್ಯವನ್ನು ನೋಡಿದ ಅಧಿಕಾರಿಗಳ್ಯಾರೂ ಆಗಲೂ ಅವರ ಬಳಿಗೆ ಬರಲಿಲ್ಲ!

ಇಂತಹ ಪ್ರತಿಭಟನೆಯನ್ನು ನಾಗರೀಕ ಸಮಾಜ ಎಂದೂ ಕಂಡಿರಲಾರದು! ನಿಮಗೆ ನೆನಪಿರಬಹುದು ಕಳೆದ ವರ್ಷ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪಡೆದ "ಸ್ಲಮ್ ಡಾಗ್ ಮಿಲಿಯನೇರ್" ಸಿನಿಮಾದ ದೃಶ್ಯವೊಂದರಲ್ಲಿ ಸ್ಲಮ್ನಲ್ಲಿಯೇ ಬೆಳೆದ ಹುಡುಗ ಅಮಿತಾಭ್ ಬಚ್ಚನ್ ನೋಡಬೇನ್ನುವ ಆತುರದಲ್ಲಿ ಕಕ್ಕಸ್ಸಿನ ಗುಂಡಿಯಲ್ಲೇ ಬಿದ್ದೆದ್ದು ಹೋಗಿ ಅಮಿತಾಬನ ಆಟೋಗ್ರಾಫ್ ಪಡೆಯುತ್ತಾನೆ. ಆ ದೃಶ್ಯ ಸಿನಿಮಾ ನೋಡುವವರೇ ಅಸಹ್ಯ ಪಡುವಂತಿದೆಯೆಂದು ಆ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದಾಗ ಆರ್ ಎಸ್ ಎಸ್ ನವರು, ಶಿವಸೇನೆ, ಶ್ರೀರಾಮ ಸೇನೆ ಸಂಘಟನೆಯವರು ಪ್ರತಿಭಟನೆ ನಡೆಸಿದ್ದರು. ಭಾರತದ ಮಾನವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲೆಂದೇ ಆ ಸಿನಿಮಾ ಮಾಡಿದ್ದಾರೆಂದು ಕೂಗಾಡಿದ್ದರು. ಅವರಿಗೆ ಹುಡುಗನೊಬ್ಬ (ಅದೂ ಸಿನಿಮಾದಲ್ಲಿ!) ಕಕ್ಕಸ್ಸಿನ ಗುಂಡಿಯಲ್ಲಿ ಬಿದ್ದು ಮಲವನ್ನು ಮೆತ್ತಿಕೊಂಡು ಹೋಗುವ ದೄಶ್ಯ ಹೇಗೆ ಭಾರತದ ಮಾನವನ್ನು ಹರಾಜು ಹಾಕುತ್ತದೆ ಎಂದು ಸಾಧಿಸುವುದಕ್ಕೆ ಸಕಾರಣಗಳಿರಲಿಲ್ಲ. ಹಾಗೇ ಒಬ್ಬ ಮುಸ್ಲಿಂ ಸಂಗೀತ ನಿರ್ದೇಶಕನಿಗೆ ಆಸ್ಕರ್ ಪ್ರಶಸ್ತಿ ದಕ್ಕಿದ್ದನ್ನು ಅವರಿಂದ ಜೀರ್ಣಿಸಿಕೊಳ್ಳಲಾಗಿರಲಿಲ್ಲ. ನಮ್ಮ ಕೊಳಚೆ ಪ್ರದೇಶವನ್ನು ಸಿನಿಮಾದಲ್ಲಿ ತೋರಿಸಿದ್ದಕ್ಕೇ ಕೂಗಾಡಿದ್ದವರು ಇದೀಗ ಆರ್ ಎಸ್ ಎಸ್ ನ ಭ್ರಾತೄ ವಾದ ಭಾರತೀಯ ಜನತಾ ಪಕ್ಷದ ಸರ್ಕಾರವಿರುವ ಕರ್ನಾಟಕದಲ್ಲಿ ಜೀವಂತವಾಗಿರುವ ಜನ ಮಲವನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟಿಸಿದ್ದರೂ ಯಾವುದೇ ಉಸಿರೆತ್ತದೆ ಇದ್ದಾರೆ. ಈ ಘಟನೆ ರಾಜ್ಯ ಮಟ್ಟದಲ್ಲಿ ತೀರ್ವ ಪ್ರತಿಭಟನೆಗೆ ಕಾರಣವಾಗಬೇಕಿತ್ತು. ಆದರೆ ರಾಜ್ಯದ ರಾಜಕೀಯ ಧುರೀಣರೆಲ್ಲಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಏರ್ಪಡಿಸಿದ್ದ ನಾಟಿ ಕೋಳಿ ಊಟದಲ್ಲಿ ವ್ಯಸ್ತರಾಗಿದ್ದರು!
ಆಳುವ ಪಕ್ಷದ ರಾಜಕಾರಣಿಗಳು ಈ ತಲೆತಗ್ಗಿಸುವಂತಹ ಪ್ರತಿಭಟನೆಯ ಬಗ್ಗೆ ತಿಪ್ಪೆ ಸಾರಿಸುವ ಮಾತನಾಡಿದ್ದಾರೆ. ಎಕರೆಗಟ್ಟಲೆ ಸರ್ಕಾರಿ ಜಮೀನಿನನ್ನು ಒತ್ತುವರಿ ಮಾಡಿಕೊಳ್ಳುವ ಧನಿಕನೊಬ್ಬ ಹತ್ತು ವರ್ಷ ಆ ಜಾಗದಲ್ಲಿದ್ದರೇ ಅದನ್ನು ದಕ್ಕಿಸಿಕೊಂಡು ತಾನೇ ಮಾಲೀಕನಾಗುತ್ತಾನೆ. ಆದರೆ ೭೦-೮೦ ವರ್ಷದಿಂದ ಒಂದು ಜಾಗದಲ್ಲಿ ವಾಸಮಾಡುತ್ತಾ ಜನರ ಕೊಳೆಯನ್ನೆಲ್ಲಾ ತಮ್ಮ ತಲೆ ಮೇಲೆ ಹೊರುತ್ತಾ, ಒಂದು ಹೊತ್ತು ಊಟಕ್ಕೂ ಪರದಾಡುವ ಕಡು ಬಡವರಿಗೆ ನ್ಯಾಯಯುತವಾಗಿ ಸಲ್ಲಬೇಕಿದ್ದ ಗುಡಿಸಲಿನ ಜಾಗವನ್ನು ಅಧಿಕಾರಿಗಳು, ರಾಜಕಾರಣಿಗಳು ಕಿತ್ತುಕೊಳ್ಳುತ್ತಾರೆಂದರೆ ಅವರು ಕ್ರಿಮಿಗಳೇ ಸರಿ.
ಸರ್ಕಾರ ಬದುಕಿದೆಯೇ? ಸರ್ಕಾರವನ್ನು ಆಗಾಗಲಾದರೂ ಪ್ರಶ್ನೆ ಮಾಡುವ ಜನಪರ ಸಂಘ ಸಂಸ್ಥೆಗಳು ರಜ ಹಾಕಿಕೊಂಡಿವೆಯೇ? ಆಡಳಿತದ, ವಿರೋಧಪಕ್ಷಗಳ ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ಹಿಂದುಳಿದ ವರ್ಗ-ಪಂಗಡಗಳ ರಾಜಕೀಯ ನೇತಾರರು ಕಣ್ಣು-ಕಿವಿ ಕಳೆದುಕೊಂಡಿದ್ದಾರೆಯೇ? ಸಾಕ್ಷರತೆಯನ್ನು ಸಾರುವ, ಬಡತನ ನಿರ್ಮೂಲನೆಗೆಂದು, ಬಡ ಜನರ ಉದ್ಧಾರಕ್ಕೆಂದು, ವರ್ಷಕ್ಕೊಂದರಂತೆ ಹೊರಬರುವ ಸರ್ಕಾರೀ ಕಾರ್ಯಕ್ರಮಗಳು ಇಷ್ಟು ವರ್ಷದಿಂದ ಈ ಜನರು ಮಲ ಸ್ವಚ್ಚ ಮಾಡುವ ಕೆಲಸ ಮಾಡುತ್ತಿರುವುದನ್ನು ಗಮನಿಸಿ-ಗುರುತಿಸಿ ಅವರನ್ನು ಸಾಕ್ಷರರನ್ನಾಗಿ ಮಾಡುವ, ಅವರನ್ನು ಹೊಸ ಕಾಯಕಕ್ಕೆ ತಯಾರು ಮಾಡುವ, ಅವರಿಗೆ ಪುನರ್ವಸತಿ ಕಲಿಸುವ ಬಗ್ಗೆ ಸ್ವಲ್ಪವೂ ಕೆಲಸ ನಡೆಸಿಲ್ಲವೆಂದರೆ ನಮ್ಮ ಸರ್ಕಾರೀ ಯೋಜನೆಗಳು ಎಷ್ಟು ಜನರನ್ನು ತಲುಪುತ್ತಿದೆ? ಅಥವಾ ಹಣ ದೊರೆತ ಕೂಡಲೇ ಯೋಜನೆಗಳೆಲ್ಲವೂ ಯೋಜನೆಗಳಾಗಿಯೇ ಕಾಗದದ ಮೇಲೆ ಉಳಿದುಬಿಟ್ಟಿದೆಯೋ? ಭಂಗಿ ಜನರ ಅಸಹಾಯಕತೆಗೆ ದುಃಖ ಪಡಬೇಕೋ, ಅವರ ಇಷ್ಟು ವರ್ಷಗಳ ಸಾಮಾಜಿಕ ತಟಸ್ಥತೆಗೆ ಕೋಪ ಮಾಡಿಕೊಳ್ಳಬೇಕೋ? ಬರೀ ಪ್ರಶ್ನೆಗಳು. ನಮ್ಮ ನಿರ್ಲಿಪ್ತತೆಗೆ ಆಕ್ರೋಶ.
|