(ಪುಟ-೮) ಪಾಟ್ ಲಕ್ ಮತ್ತು ಕಿಟ್ಟಿ ಪಾರ್ಟಿ!

ಬೇಲಾ ಮರವ೦ತೆ
 
ನಾನು ಬಂದ ಹೊಸತರಲ್ಲಿ ಒಂದು ಮಂಗಳವಾರ ಸಂಜೆ ಸ್ಮಿತಾ ಫೋನ್ ಮಾಡಿ "ನಾಳೆ ಮಧ್ಯಾನ್ಹ ಏನು ಮಾಡ್ತಿದ್ದೀಯಾ ಬೇಲಾ? ಏನೂ ಕೆಲಸ ಇಟ್ಟುಕೋ ಬೇಡ. ಫ್ರೀ ಆಗಿರು. ನಿನಗೆ ಒಂದಷ್ಟು ಇಂಡಿಯನ್ ಲೇಡೀಸ್ ನ ಪರಿಚಯ ಮಾಡಿಸೋದಿಕ್ಕೆ ಕರೆದುಕೊಂಡು ಹೋಗ್ತೀನಿ" ಎಂದರು. ನನಗೆ ಹೇಳಿಕೊಳ್ಳುವ ಏನೂ ಕೆಲಸಗಳಿರುತ್ತಿರಲಿಲ್ಲವಾದ್ದರಿಂದ ಅವರ ಮಾತಿಗೆ ಖುಶಿಯಿಂದ ಒಪ್ಪಿದ್ದೆ. ಪ್ರಶಾಂತನಿಗೆ ಹೇಳಿಕೊಂಡಿದ್ದೆ. ಅವನು "ಬಿಲ್ಲೀ..ಹುಷಾರಾಗಿರು. ಇಲ್ಲಿನ ಹೆಂಗಸರು ಒಂಥರಾ ಘಾಟಿ ಇರ್ತರೆ. ಅನಗತ್ಯವಾಗಿ ಬೇಗ ಫ್ರೆಂಡ್ ಆಗಿಬಿಡಬೇಡ. ಆಮ್ವೇ ಗೀಮ್ವೇ ಗೆ ಸಿಕ್ಕಿಸಿಕೊಂಡುಬಿಡುತ್ತಾರೆ" ಅಂತ ಎಚ್ಚರಿಸಿದ್ದ. ಈ ಆಮ್ವೇ ಖೆಡ್ಡಾಗೆ ನಾನು-ಪ್ರಶಾಂತ ಬಂದ ಒಂದೆರಡು ವಾರದಲ್ಲೇ ಕೈ ಕಾಲು ಮುರಿದುಕೊಂಡು ಬಿದ್ದಿದ್ದೆವು. ಅದರ ಬಗ್ಗೆ ನಾನು ನಿಮಗೆ ಮುಂದೆ ಒಮ್ಮೆ ವಿವರವಾಗಿ ಬರೆಯುತ್ತೇನೆ.

ಮರುದಿನ ನಾನು ಸಡಗರದಿಂದ ತಯಾರಾಗಿದ್ದೆ. ಇಂಡಿಯನ್ ಡ್ರೆಸ್ ನೇ ಹಾಕೋ ಅಂತ ಸ್ಮಿತಾ ಹೇಳಿಬಿಟ್ಟಿದ್ದರು. ಇಲ್ಲಿ ಬಂದಾಗಿನಿಂದ ನಮ್ಮ ಸಲ್ವಾರ್ ಕಮೀಜ್, ಸೀರೆಗಳನ್ನು ಉಟ್ಟು ತಯಾರಾಗುತ್ತಿದ್ದುದು ತುಂಬಾ ಕಡಿಮೆಯಾಗಿಹೋಗಿತ್ತು. ಅದಕ್ಕೋ ಅಥವಾ ಇನ್ನಷ್ಟು ಹೊಸ ಫ್ರೆಂಡ್ಸ್ ಗಳನ್ನು ನೋಡುವ ಆಸೆಗೋ ಏನೋ ಖುಶಿಯಿಂದ ಅಲಂಕರಿಸಿಕೊಂಡಿದ್ದೆ. ಸ್ಮಿತಾ ಹನ್ನೊಂದುವರೆಗೆ ಮನೆಯ ಬೆಲ್ ಮಾಡಿದರು. ನನ್ನನ್ನು ನೋಡಿದವರೇ "ಹಾಯ್ ಹುಡುಗೀ! ಚನ್ನಾಗಿ ಕಾಣ್ತಾಇದ್ದೀಯ ಕಣೆ" ಅಂತ ಅವರ ಟಿಪಿಕಲ್ ಹಗ್ ಕೊಟ್ಟಿದ್ದರು. ಅವರು ಹಗ್ ಕೊಡುವುದು ಅಂದರೆ ನಮ್ಮ ಭುಜದ ಸುತ್ತ ಕೈ ಬಳಸುವಕ್ಕಷ್ಟೇ ನಿಲ್ಲುತ್ತಿರಲಿಲ್ಲ. ಒಂದು ಹಗ್ ಮಾಡಿ ಹಾಗೇ ಒಂದೆರಡು ಬಾರಿ ಅಲ್ಲಾಡಿಸಿಬಿಡುತ್ತಿದ್ದರು! ಅವರ ಆ ಮಾರ್ದವತೆ-ಪ್ರೀತಿ ಅವರ ಹಗ್ ಗಳಲ್ಲಿ ಹರಿದು ಬಂದುಬಿಡುತ್ತಿತ್ತು. ಸ್ಮಿತಾ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಕೈಯ್ಯಲ್ಲಿ ಒಂದು ದೊಡ್ಡ ಬ್ಯಾಗ್ ಹಿಡಿದುಕೊಂಡು ಬಂದಿದ್ದರು. ಅದರೊಳಗಿಂದ ಎರಡು ದೊಡ್ಡ ಗಾಜಿನ ಡಬ್ಬಗಳನ್ನು ತೆಗೆದಿಟ್ಟರು. ಒಂದರ ತುಂಬ ಹೆಸರುಬೇಳೆ ಪಾಯಸ, ಮತ್ತೊಂದರಲ್ಲಿ ಪುದೀನಾ ಚಟ್ನಿ. "ಇದ್ಯಾಕೆ ಇವನ್ನೆಲ್ಲಾ ತಂದಿರಿ?" ಅಂತ ನಾನು ನಾನು ಆಶ್ಚರ್ಯದಿಂದ ಕೇಳಿದೆ. "ನಿನಗಲ್ಲಾ ಬೇಲಾ. ಇದು ಇವತ್ತಿನ ಪಾರ್ಟಿಗೆ. ಒಂದು ನನ್ನ ಕಡೆಯಿಂದ, ಇನ್ನೊಂದು ನಿನ್ನ ಕಡೆಯಿಂದ. ನಿನಗೆ ಯಾವುದು ಇಷ್ಟಾನೋ ಅದನ್ನು ನೀನು ಹಿಡಿದುಕೋ" ಎಂದರು. ನನಗೆ ಇನ್ನೂ ಸರಿಯಾಗಿ ಅರ್ಥವಾಗಲಿಲ್ಲ. "ನಾವು ಯಾವ ಪಾರ್ಟಿಗೆ ಹೋಗ್ತಿದ್ದೀವಿ? ನಾನು ಯಾಕೆ ಒಂದು ತಿಂಡಿ ಹಿಡಿದುಕೊಂಡು ಹೋಗಬೇಕು?" ಕೇಳಿದೆ. ನಿಧಾನಕ್ಕೆ ಹೇಳೋಕೆ ಜಾಸ್ತಿ ಟೈಮ್ ಇಲ್ಲಮ್ಮಾ..ಬಾ ಹೊರಡೋಣ. ದಾರೀಲೇ ಎಲ್ಲಾ ಹೇಳ್ತಿನಿ" ಎಂದರು.

ಇಬ್ಬರೂ ಎರಡು ಬ್ಯಾಗ್ ಗಳಲ್ಲಿ ಆ ಡಬ್ಬಗಳನ್ನು ಇಟ್ಟುಕೊಂಡು ಹೊರಟೆವು. ಅವರು ಕರೆದೊಯ್ಯುತ್ತಿದ್ದ ಜಾಗ ನಮ್ಮ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನಲ್ಲಿಯೇ ಇತ್ತು ಅಂತ ನನಗೆ ಆಗ ಗೊತ್ತಾಯಿತು. ನಾವು ಹೋಗ್ತಾ ಇದ್ದದ್ದು ನಮ್ಮ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನಿವಾಸಿ ಇಂಡಿಯನ್ ಹೆಂಗಸರ ಕಿಟ್ಟಿ ಪಾರ್ಟಿಗೆ ಅಂತಲೂ ತಿಳಿಯಿತು. ಅದೊಂದು "ಪಾಟ್ ಲಕ್"(potluck) ಪಾರ್ಟಿಯಾದ್ದರಿಂದ ಪಾರ್ಟಿಗೆ ಬರುವ ಎಲ್ಲರೂ ತಮ್ಮ ಕಡೆಯಿಂದ ಒಂದೋ ಎರಡೋ ಐಟಮ್ ಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದಂತೆ. ಜನ ಕಡಿಮೆ ಇದ್ದರೆ ಒಬ್ಬರಿಗೆ ಮಾಡಲು ಐಟಮ್ ಜಾಸ್ತಿ, ಜನ ಹೆಚ್ಚಿದ್ದರೆ ಒಬ್ಬೊಬ್ಬರಿಗೆ ಒಂದು ಖಾದ್ಯದ ಜವಾಬ್ದಾರಿಯಂತೆ. ಚಟ್ನಿಯಿಂದ, ಪಲಾವ್, ಒಬ್ಬಟ್ಟಿನ ತನಕ ಅವರವರ ಇಚ್ಚೆಗೆ, ಅವರ ಶಕ್ತಿ-ಸಮಯ-ಸಾಮರ್ಥ್ಯಕ್ಕೆ ಅನುಗುಣವಾಗಿ ಏನನ್ನಾದರೂ ಮಾಡಿಕೊಂಡು ಹೋಗಬಹುದಂತೆ. ಆದರೆ ಮುಂಚಿತವಾಗಿಯೇ ಒಮ್ಮೆ ಪಾಟ್ ಲಕ್ನಲ್ಲಿ ಭಾಗವಹಿಸುವ ಎಲ್ಲರೂ ತಾವು ಇಂತದ್ದನ್ನು ತರುತ್ತೇವೆ, ಇದು ಅದಕ್ಕೆ ಹೊಂದುತ್ತದೆ, ನೀನು ಗೊಜ್ಜು ತಂದರೆ ನಾನು ಚಪಾತಿ ತರುತ್ತೇನೆ ಎಂಬಂತೆ ಫೋನ್ ಮುಖಾಂತರವೋ ಅಥವಾ ಇಮೇಲ್ ಮುಖಾಂತರವೋ ನಿರ್ಧರಿಸಿಕೊಂಡಿರುತ್ತಾರಂತೆ. ಇದು ನನ್ನ ಮೊದಲ ಕಿಟ್ಟಿ ಪಾರ್ಟಿ ಆದ್ದರಿಂದ ನನಗೆ ಕಷ್ಟ ಕೊಡುವುದು ಬೇಡ ಎಂದುಕೊಂಡು ಸ್ಮಿತಾ ಅವರೆ ಎರಡನ್ನೂ ಮಾಡಿಕೊಂಡು ಬಂದುಬಿಟ್ಟಿದ್ದರು. "ಉದ್ದೇಶ ಅದೋ ಅಥವಾ ನಾನು ಮಾಡುವ ಅಡಿಗೆಯಿಂದ ಯಾರ ಹೊಟ್ಟೇನೂ ಅಪ್ ಸೆಟ್ ಆಗದೇ ಇರಲಿ ಅಂತ ಹೀಗೆ ಮಾಡಿದಿರೋ" ಎಂದು ಅವರನ್ನು ರೇಗಿಸಿ ಅವರಿಗೆ ಧನ್ಯವಾದ ಹೇಳಿದೆ.
 
ಮುಂದಿನ ಬಾರಿ ಮನೆಗೆ ಫೋನ್ ಮಾಡಿದಾಗ ಅಮ್ಮಂಗೆ ಪಾಟ್ ಲಕ್ ಬಗ್ಗೆ ಹೇಳಬೇಕೆಂದುಕೊಂಡೆ. ನಮ್ಮ ಮನೆಗೆ ಯಾರಾದರೂ ನೆಂಟರು ಅಥವಾ ಪರಿಚಯದವರು ಬರುತ್ತಾರೆಂದರೆ ಅಮ್ಮ ಎಣೆ ಇಲ್ಲದ ಉತ್ಸಾಹದಿಂದ ಎಷ್ಟೊಂದು ಬಗೆಯ ಅಡಿಗೆ ಮಾಡಿಡುತ್ತಿದ್ದರು. "ಪೂರಿಗೆ ಗೊಜ್ಜು-ಪಲ್ಯ-ಚಟ್ನಿ ಎಲ್ಲಾನೂ ಯಾಕಮ್ಮಾ ಮಾಡ್ತೀರಿ? ಒಂದು ಮಾಡಿದರೆ ಸಾಕಾಗಲ್ಲವಾ?" ಅಕ್ಕ ಅವರು ಪಡುವ ಶ್ರಮ ನೋಡಲಾಗದೆ ಸಲಹೆ ಕೊಡುತ್ತಿದ್ದರೆ "ನಿನಗೆ ತರಕಾರಿ ಹೆಚ್ಚಿ ಕೊಡೋಕೆ ಕಷ್ಟ ಆದ್ರೆ ಸುಮ್ಮನಿರು. ಆದ್ರೆ ಅಷ್ಟು ಮಾಡು ಇಷ್ಟೇ ಸಾಕು ಅಂತ ಕಣಿ ಮಾಡಬೇಡ" ಎಂದು ಬೈದುಬಿಡುತ್ತಿದ್ದರು. ನಮಗೆ ಎಷ್ಟೇ ಕಷ್ಟವಾದರೂ, ಸುಸ್ತಾದರೂ ನಮ್ಮ ಮನೆಗೆ ಬಂದವರಿಗೆ ನಾವೇ ಮಾಡಿ ಬಡಿಸಿ ಬಂದವರನ್ನು ಸಂತೃಪ್ತರನ್ನಾಗಿ ಮಾಡಬೇಕೆನ್ನುವ ಅಮೇಜಿಂಗ್ ಜನರೇಷನ್ ಅವರದ್ದು. ಅತಿಥಿಯ ವಿಷಯದಲ್ಲಿ ಸುಸ್ತು-ಕಷ್ಟ ಅನ್ನುವ ಪದಗಳು ಮನಸ್ಸಿನಲ್ಲಿ ಮೂಡಿದರೂ ಪಾಪ ಬಂದು ಬಿಡುತ್ತದೆ ಎನ್ನುವ ಭಾವನೆ ಅವರದ್ದು. ಬರುವ ಅತಿಥಿ ಎಂಥವರೇ ಆಗಿರಲಿ, ಎಷ್ಟೇ ಒಳ್ಳೆಯವರೇ ಆಗಿರಲಿ, ತಲೆಹರಟೆಗಳೇ ಆಗಿರಲಿ ಎಲ್ಲರಿಗೂ ಅದೇ.."ಅತಿಥಿ ದೇವೋ ಭವ!" ಟ್ರೀಟ್ಮೆಂಟ್ ಕಡ್ಡಾಯ. ಹೀಗೆ ಯಾಕೆ? ಇದು ಬೇಡ ಎಂದು ನಾವು ವಾದ ಮಾಡುತ್ತಿದ್ದ ಎಲ್ಲಾ ವಿಷಯಗಳ ಕೊನೆಯಲ್ಲಿ "ಎಷ್ಟೇ ಆದ್ರೂ ಹೆಣ್ಣು ಮಕ್ಕಳಿರೋ ಮನೆ ಕಣ್ರೇ..ಇದೆಲ್ಲಾ ನೀತಿ ನಿಯಮ ಇಲ್ಲದಿದ್ರೆ ಏನು ಕಥೆ..." ಅಂತ ಅಮ್ಮ ಅವರದ್ದೊಂದು ಡೈಲಾಗು ಹೊಡೆದು ನಮ್ಮನ್ನು ಕನ್ಫ್ಯೂಸ್ ಮಾಡಿಸಿ ಬಾಯಿ ಕಟ್ಟಿ ಕೂರಿಸುತ್ತಿದ್ದರು. ಹೆಣ್ಣು ಮಕ್ಕಳಿರೋ ಮನೆ ಅಂದ್ರೆ ಏನು? ಅಲ್ಲಿ ಯಾವಾಗಲೂ ದುಡಿತವೇ ಇರಬೇಕಾ? ಅಲ್ಲಿ ಮಾತ್ರವೇ ಯಾವಾಗಲೂ ಅಡಿಗೆ, ನೀತಿ, ನಿಯಮಗಳ ಪಾಠ ನಡೆಯುತ್ತಿರಬೇಕಾ? ಆ ಮನೆಯನ್ನು ಎಲ್ಲರೂ ಅವರವರ ಮನೆ ಕೆಲಸಬಿಟ್ಟು ಜಡ್ಜ್ ಮಾಡುತ್ತಾ ಕುಳಿತಿರುತ್ತಾರಾ? ಎನ್ನಿಸುತ್ತಿತ್ತು. ಹೆಣ್ಣುಮಕ್ಕಳೇ ಮುಂದೆ ದೊಡ್ಡವರಾಗಿ ಮನೆ-ಮನಸ್ಸು-ಬದುಕು ಕಟ್ಟುವ ರುವಾರಿಗಳಾದ್ದರಿಂದ ಅವರಿಗೆ ಟ್ರೇನಿಂಗ್ ಹೆಚ್ಚು ಕಠಿಣವಾಗಿರುತ್ತದೆ ಎಂದು ನಮಗೆ ವಿವರಣೆ ಕೊಡಲು ಅಮ್ಮನಿಗೆ ಆಗ ಆಗಿರಲಿಲ್ಲ.

ನಡೆಯುತ್ತಿದ್ದಾಗ ಮನಸ್ಸು ಮತ್ತೆ ಒಂದು ಸುತ್ತು ಊರಿನ ಕಡೆಗೆ ಹೋಗಿಬಂದಿತ್ತು. ಸ್ಮಿತಾರಿಂದ ಹಾಗೇ ಕಿಟ್ಟೀ ಪಾರ್ಟಿಯ ಬಗ್ಗೆ ಸ್ವಲ್ಪ ತಿಳಿಯಬೇಕಿತ್ತು. ನಾನು ಯಾವತ್ತೂ ಯಾವ ಪಾರ್ಟಿಗೂ ಹೋಗಿರಲಿಲ್ಲವಾದ್ದರಿಂದ ಅಲ್ಲಿ ಹೇಗಿರುತ್ತದೆ, ಏನಿರುತ್ತದೆ, ಹೇಗಿರಬೇಕು ಎನ್ನುವ ನನ್ನ ಕುತೂಹಲಕ್ಕೆ ಸ್ಮಿತಾ ನಗಾಡಿದರು. "ಅಯ್ಯೋ ಅದ್ಯಾವ ರಾಕೆಟ್ ಸೈನ್ಸ್ ಕಣೇ...ಕಿಟ್ಟಿ ಪಾರ್ಟಿ ಅಂದ್ರೆ ನನಗೂ ಇಲ್ಲಿ ಬಂದ ಮೇಲೇ ಅಭ್ಯಾಸ ಆಗಿದ್ದು. ಅಲ್ಲಿ ನಮ್ಮ ಥರಾನೇ ಯು ಎಸ್ ನಲ್ಲಿ ಕೆಲಸ ಮಾಡಲು ವರ್ಕ್ ಪರ್ಮಿಟ್ ಇಲ್ಲದೇ ಇರೋ, ಅಥವಾ ಕೆಲಸ ಮಾಡೋಕೆ ಇಷ್ಟ ಇಲ್ಲದಿರೋ, ಅಥವಾ ಪ್ರೆಗ್ನೆನ್ಸಿ-ಬಾಣಂತನದ ಕಾರಣಕ್ಕೆ ಟೆಂಪೊರರಿ ಹೌಸ್ ವೈಫ್ ಗಳಾಗಿರೋ ಒಂದಷ್ಟು ಜನ ಲೇಡೀಸ್ ಇರ್ತರೆ. ಪ್ರತೀ ಮೀಟಿಂಗ್ ನಲ್ಲೂ ಒಂದೆರಡು ಗೇಮ್ಸ್ ಆಡಿಕೊಂಡು, ಒಂದಷ್ಟು ಹರಟೆ ಹೊಡೆದುಕೊಂಡು, ಚನ್ನಾಗಿ ಊಟ ಮಾಡಿಕೊಂಡು, ಒಂದಷ್ಟು ರೆಸಿಪಿ ಶೇರ್ ಮಾಡಿಕೊಂಡು ಮನೆಗೆ ಬರ್ತಿವಿ. ಕೆಲವೊಮ್ಮೆ ಯಾವುದಾದ್ರೂ ಒಳ್ಳೆ ಮೂವಿನೂ ನೋಡ್ತಿವಿ..." ಸ್ಮಿತಾ ಹೇಳುತ್ತಿದ್ದುದನ್ನು ಕೇಳುತ್ತಿದ್ದರೆ ಇದು ಟೈಮ್ ಪಾಸ್ ಮಾಡಲು ಮಾಡಿಕೊಂಡಿರುವ ಸಮಾವೇಶ ಅಂತ ಅನ್ನಿಸುತ್ತಿತ್ತು.

ನಮ್ಮ ಅಪಾರ್ಟ್ಮೆಮ್ಟ್ ಕಟ್ಟಡದಿಂದ ಮೂರು ಕಟ್ಟಡ ದಾಟಿ ಒಂದು ಮನೆಗೆ ಬಂದಿದ್ದೆವು. ಮನೆಯ ಬಾಗಿಲ ಮುಂದೆ ಆಗಲೇ ಏಳೆಂಟು ಜೋಡಿ ಚಪ್ಪಲಿಗಳು. ಎಲ್ಲವೂ ಸಿಂಡ್ರೆಲಾಳ ಚಪ್ಪಲಿಯಂತೆ ಮಿಣ ಮಿಣ ಜಣ ಜಣದಂತಿದ್ದವು. ಬಾಗಿಲು ತಟ್ಟಿದಾಗ ಒಬ್ಬ ನಡುವಯಸ್ಸಿನ ಹೆಂಗಸು ಬಂದು ಬಾಗಿಲು ತೆರೆದರು. ’ಪ್ಲೀಸ್ ಕಮ್ ಇನ್ ಗೈಸ್’ ಅಂತ ಬಾಯ್ ತುಂಬಾ ಕರೆದರು. ಅವರಂತೂ ಖಂಡಿತಾ ದಕ್ಷಿಣ ಭಾರತದವರಲ್ಲ ಅಂತ ಗೊತ್ತಾಯಿತು. ನಿಂಬೆ ಹಳದಿ ಬಣ್ಣದ ಶಿಫಾನ್ ಸೀರೆ, ಅದಕ್ಕೆ ಚಿನ್ನದ ಬಣ್ಣದ ಅಂಚು ಮತ್ತು ಚಿನ್ನದ ಚಿತ್ತಾರದ ಸೆರಗು, ಹಣೆಯ ಮೇಲೆ ಪುಟ್ಟ ಮಿಣಕಿ, ಬೈತಲೆ ತುಂಬಾ ಸಿಂಧೂರದ ಹುಡಿ, ಅದೇ ಬಣ್ಣಕ್ಕೆ ಮ್ಯಾಚಿಂಗ್ ಆಗುವಂತೆ ತುಟಿಗಳ ತುಂಬಾ ಕೆಂಪು ಲಿಪ್ಸ್ಟಿಕ್..ಅವರನ್ನು ನೋಡಿದರೆ ಯಾವುದೋ ಸಿನೆಮಾ ಶೂಟಿಂಗ್ ಗೆ ಬಂದಂತಿದ್ದರು. ನಾನು ಸ್ಮಿತಾರ ಹಿಂದೆ ನಿಂತುಕೊಂಡು ಸಂಕೋಚದಿಂದಲೇ ಒಳ ನಡೆದೆ. ಅಲ್ಲಿದ್ದ ಎಲ್ಲರಿಗೂ ಸ್ಮಿತಾ ನನ್ನನ್ನು ಪರಿಚಯಿಸಿದರು. ಎಲ್ಲರಿಗೂ ಹಾಯ್ ಹೇಳಿದೆ, ಎಲ್ಲರೂ ಅಡಿಯಿಂದ ಮುಡಿವರೆಗೆ ನನ್ನನ್ನು ಪರೀಕ್ಷಾ ದೃಷ್ಟಿಯಿಂದ ನೋಡಿ ಅವರವರ ಆಕ್ಸೆಂಟ್ ನಲ್ಲಿ ಹಾಯ್ ಹೇಳಿದರು. ಎಲ್ಲರೂ ಈ ಹೊಸ ಪಾರ್ಟಿ ಗಿರಾಕಿಯ ಜೊತೆ ಮಾತಾಡಲು, ಅವಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಿದ್ದಂತೆ ಎನಿಸಿತು. ಸ್ಮಿತಾ ಮಾತ್ತು ನಾನು ನಮ್ಮ ಕೈಲಿದ್ದ ಖಾದ್ಯಗಳನ್ನು ಅಲ್ಲಿ ಆಗಲೇ ತುಂಬಿದ್ದ ಊಟದ ಟೇಬಲ್ ಮೇಲಿಟ್ಟು ಅವರ ನಡುವೆ ಬಂದು ಕುಳಿತೆವು. ಸ್ಮಿತಾ ನನಗಿಂತ ಸ್ವಲ್ಪ ದೂರ ಕುಳಿತಿದ್ದರು. ನನ್ನ ಪಕ್ಕ ಆಗಷ್ಟೇ ಒಳಬಂದ ಮತ್ತೊಬ್ಬ ಸುಂದರಿ ಕುಳಿತುಕೊಂಡರು. "ಹಾಯ್! ಹೌ ಆರ್ ಯೂ? ಯು ಆರ್ ಬೇಲಾ ರೈಟ್? ಓ! ವಾಟ್ ಅ ಸ್ವೀಟ್ ನೇಮ್...ಅಮೆರಿಕಾ ಆಪ್ ಕೊ ಠೀಕ್ ಲಗ್ರಹೀಹೆ ಕ್ಯಾ" ಅಂತ ಶುರು ಮಾಡಿಕೊಂಡರು. ಹೌದು ಅದೂ ಇದೂ ಅಂತ ಐದಾರು ನಿಮಿಷ ಕುಶಲದ ಮಾತಾಡಿದೆವು. "ಜಸ್ಟ್ ಅ ಮಿನಟ್ ಯಾ" ಅಂತ ಅವರು ಆಗಷ್ಟೇ ಬಂದಿದ್ದ ಮತ್ತೊಬ್ಬ ಲೇಡಿಯ ಬಳಿಗೆ ಮಾತಾಡಲು ಹೋದರು.
 
ನಾನು ಎಲ್ಲರನ್ನೂ ನೋಡುತ್ತಿದ್ದೆ. ಎಲ್ಲರೂ ಒಬ್ಬೊಬ್ಬರ ಹತ್ತಿರ ೪-೫ ನಿಮಿಷ ಮಾತಾಡಿ ಅಲ್ಲಿಂದ ಮತ್ತೊಬ್ಬರ ಬಳಿ ಹೊರಡುತ್ತಿದ್ದರು. ಒಂಥರಾ ಕೋಲಾಟವಾಡುವಾಗ ಎದುರಿಗೆ ಕೋಲು ಹಾಕುವವರು ಆಗಾಗ ಬಂದು ನಾಲ್ಕಾರು ಕೋಲು ಹಾಕಿ ಮುಂದೆ ಹೊರಡುತ್ತಾರಲ್ಲಾ ಹಾಗೆ. ಎಲ್ಲರೂ ಬಂದು ಸೇರಿದ್ದರು. ನಾನು ಸಾಧ್ಯವಾದಷ್ಟು ಜನರೊಂದಿಗೆ ಮಾತಾಡಿದೆ. ಒಟ್ಟು ೨೧ ಜನ ಹೆಂಗೆಳೆಯರು! ಪರವಾಗಿಲ್ಲ! ಕ್ಯಾಲಿಫೋರ್ನಿಯಾ ದ ಒಂದು ಅಪಾರ್ಟ್ಮೆಂಟ್ ಕಾಂಪ್ಲೆಕ್ಸಿನಲ್ಲಿ ಇಷ್ಟು ಜನ ಭಾರತೀಯರು ಒಟ್ಟಾಗುತ್ತಾರೆಂದರೆ ಈ ಊರಿನಲ್ಲಿ ಎಷ್ಟು ಮಂದಿ ಇರಬಹುದು?! ನಾನು ಖುಶಿಯಿಂದ ಎಲ್ಲರ ಮುಖ, ಹಾವ ಭಾವಗಳನ್ನೂ ಕಣ್ಣು ಮೂಗು ಬಿಟ್ಟುಕೊಂಡು ನೋಡುತ್ತಿದ್ದೆ. ಎಲ್ಲರೂ ೨೦ ರಿಂದ ೪೦ ವರ್ಷದೊಳಗಿನವರು. ಬಂದಿದ್ದ ಮಹಿಳಾಮಣಿಗಳಲ್ಲಿ ಕೆಲವರು ಆಲೂಗಡ್ಡೆಗಳ ಥರ ಗುಂಡಗುಂಡಗಿದ್ದರು. ಕೈಬಳೆಗಳ ಝಣ ಝಣ, ಕೆನ್ನೆ ಮೇಲಿನ ಬೆವರ ಹನಿ, ಹಾರುತ್ತಿದ್ದ ಮುಂಗುರುಳು, ಎಡೆಬಿಡದೆ ಕುಣಿದಾಡುತ್ತಿದ್ದ ತುಟಿಗಳು, ಅದೆಂಥೆಂಥದೋ ಪರ್ಫ್ಯೂಮ್ಗಳ ಕಲಸುಮೆಲಸು ಘಾಟು, ಒಂದಿಬ್ಬರು ತಾಯಂದಿರ ಜೊತೆ ಬಂದಿದ್ದ ಪುಟಾಣಿ ಕೈ ಕೂಸುಗಳ ಗಲಾಟೆ...ಆ ಪುಟ್ಟ ಎರಡು ಬೆಡ್ ರೂಮ್ ಅಪಾರ್ಟ್ಮೆಂಟ್ ಆ ನಿಮಿಷಕ್ಕೆ ಒಂದು ಮಹಿಳಾ ಸಂತೆಯಾಗಿ ಮಾರ್ಪಾಡಾಗಿತ್ತು. ಎಲ್ಲರೂ ಅದರಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಪಾತ್ರಧಾರಿಗಳಾಗಿ ಬಂದಿದ್ದರು. ಯಾರು ಎಷ್ಟು ಪವರ್ಫುಲ್, ಯಾರು ಅವರಲ್ಲಿ ಸ್ವಲ್ಪ ಮೆತ್ತನೆಯವರು, ಯಾರು ಈ ಸಂಘದ ಹೀರೋಯಿನ್ ಇತ್ಯಾದಿಗಳನ್ನೆಲ್ಲಾ ನೋಡುತ್ತಾ ಪುಟ್ಟಗೆ ಕುಳಿತೆ. ೪೦-೫೦ ನಿಮಿಷ ಕಳೆದಿರಬಹುದು. ನಮ್ಮ ಅಂದಿನ ಆತಿಥೇಯರಾಗಿದ್ದ ಶುಭದಾ ಶರ್ಮಾ "ಹೇ ಲೇಡೀಸ್! ಈಗ ಊಟ ಮಾಡಿ ಯಾರ ರುಚಿ ಮೊದಲ ಮೂರು ಸ್ಥಾನ ತಗೊಳ್ಳುತ್ತೆ ನೋಡೋಣ ಬನ್ನಿ...ಊಟ ನಮಗಾಗಿ ಕಾಯ್ತಿದೆ" ಅಂತ ರಾಗವಾಗಿ ಹಾವ ಭಾವ ಮಾಡುತ್ತಾ ಇಂಗ್ಲಿಷ್ನಲ್ಲಿ ಕರೆದರು. ನಾನು ಸ್ಮಿತಾ ಕಡೆ ನೋಡಿದೆ. ಅವರು ಆಗಲೇ ನನ್ನ ಮುಖ ನೋಡಿ ಕಿತಾಪತಿ ನಗು ನಕ್ಕು "ಬಾ ಸ್ಟಾರ್ಟ್ ಮಾಡಣ" ಎಂದರು.

ದಪ್ಪಮೆಣಸಿನಕಾಯಿ ಬಜ್ಜಿ, ಈರುಳ್ಳಿ ಎಲೆಗಳ ಪಕೋಡ, ಪುದಿನಾ ಚಟ್ನಿ, ಖರ್ಜೂರದ ಸೀ ಚಟ್ನಿ, ಭೇಲ್ ಪುರಿ, ಕಲ್ಲಂಗಡಿ ಹಣ್ಣಿನ ಜ್ಯೂಸ್, ಪೂರಿ, ಸಾಗು, ಬೇಬಿ ಕಾರ್ನ್ ರೈಸ್, ಬಿಳಿ ಅನ್ನ, ಸಾಂಬಾರು, ಪಂಜಾಬೀ ವಡಿ, ರಸಮ್, ಜಾಮೂನು, ಹೆಸರು ಬೇಳೆ ಪಾಯಸ, ಧೋಕ್ಲಾ, ತರಕಾರಿಗಳ ಸಲಾಡ್, ಹಣ್ಣುಗಳ ಸಲಾಡ್, ಮಾವಿನ ಹಣ್ಣಿಸ ಐಸ್ ಕ್ರೀಂ, ರಾಯಿತ ಹಾಗೇ ಟೇಬಲ್ ನ ಮೂಲೆಯೊಂದರಲ್ಲಿ ಅಸ್ಪೃಶ್ಯನ ಥರ ಕುಳಿತ ಚೆಟ್ಟಿನಾಡ್ ಚಿಕನ್! ಅಲ್ಲಿ ಜೋಡಿಸಿದ್ದ ಥರಗಳನ್ನು ನೋಡಿ ನಾನು ಗಾಬರಿಯಾಗಿ ಹೋದೆ. ಇದಿಷ್ಟೂ ಊಟ ನಮಗಾಗಿಯೇ? ಯಾವ ಸಾಧನೆಗಾಗಿ? ಇಷ್ಟನ್ನೂಯಾರಿಗೆ ತಿನ್ನಲು ಸಾಧ್ಯ?! ಆಶ್ಚರ್ಯವಾಯಿತು. ಸ್ಮಿತಾ ಪಕ್ಕದಲ್ಲಿ ಬಂದೆ. ಅವರು ಎರಡೆರಡೇ ಐಟಮ್ ಗಳನ್ನು ಡಿಸ್ಪೋಸಬಲ್ ಪೇಪರ್ ಪ್ಲೇಟುಗಳಿಗೆ ಹಾಕಿಕೊಂಡರು. ಎಲ್ಲರೂ ಹಾಗೇ. ಅನಂತರ ತಮಗೆ ಸಿಕ್ಕ ಜಾಗದಲ್ಲಿ ಕುಳಿತು ಅವುಗಳನ್ನು ಆಸ್ವಾದಿಸುತ್ತಾ ಆ ಹೊಸರುಚಿಯ ಬಗ್ಗೆ ಪುಂಖಾನುಪುಂಖವಾಗಿ ಚರ್ಚೆ ಮಾಡಿದರು. "ದಪ್ಪ ಮೆಣಸಿನಕಾಯಿ ಸ್ವಲ್ಪ ಕ್ರಿಸ್ಪಿ ಇರಬೇಕಾಗಿತ್ತು ಅನ್ನೊದನ್ನು ಬಿಟ್ರೆ ಪಕೋಡ ಸೂಪರ್ ಆಗಿದೆ..., ಖರ್ಜೂರದ ಚಟ್ನಿಯಂತೂ ಯಮ್ಮೀ ಆಗಿದೆ" ಹೀಗೆ ಎಲ್ಲದಕ್ಕೂ ಒಂದೊಂದು ಬಾಲಂಗೋಚಿ ಕಟ್ಟುತ್ತಾ ಒಂದೊಂದನ್ನೇ ಸಾವಧಾನವಾಗಿ ಒಳಗೆ ಕಳಿಸತೊಡಗಿದರು. ನನಗೆ ಸಿಕ್ಕಾಪಟ್ಟೆ ಸಂಕೋಚ ಆಯಿತು. ಮೊದಲನೇ ಬಾರಿ ಬೇರೆ. ನನ್ನ ಕಡೆಯಿಂದ ಯಾವ ಅಡಿಗೆಯನ್ನೂ ಮಾಡಿಕೊಂಡು ಬಂದಿರಲಿಲ್ಲ. ಅವರಿಗೆಲ್ಲಾ ತಮ್ಮ ಅಡಿಗೆಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡ ಸಮಾಧಾನವಾದರೂ ಆಗುತ್ತಿತ್ತೇನೋ...ನಾನು ಉಂಡಾಡಿ ಗುಂಡಿ ಥರ ತಿನ್ನಲಷ್ಟೇ ಕುಳಿತಿದ್ದೆ.

ನಾವು ಸಮಸ್ತ ಊಟ ಮಾಡಿ, ಐಸ್ ಕ್ರೀಂ ಇತ್ಯಾದಿ ತಿಂದು ಮುಗಿಸುವಷ್ಟರಲ್ಲಿ ಗಂಟೆ ಮೂರುವರೆ! ಊಟ ಸಾಕಷ್ಟು ಮಿಕ್ಕಿತ್ತು. ಮೂಲೆಯಲ್ಲಿ ಕುಳಿತಿದ್ದ ಚೆಟ್ಟಿನಾಡ್ ಚಿಕನ್ ಮಾತ್ರ ಅದರ ಗೊಜ್ಜೂ ಉಳಿಯದಂತೆ ಖಾಲಿಯಾಗಿತ್ತು! ಅದಾದ ನಂತರ ಬಹುಮಾನಗಳ ಘೋಷಣೆ. ಮೊದಲ ಬಹುಮಾನ ಖರ್ಜೂರದ ಸೀ ಚಟ್ನಿಗೆ, ಎರಡನೆಯದು ಹೆಸರು ಬೇಳೆ ಪಾಯಸಕ್ಕೆ ಮತ್ತು ಮೂರನೆಯದು ದೀರ್ಘ ಚರ್ಚೆಯ ನಂತರ ಚೆಟ್ಟಿನಾಡ್ ಚಿಕನ್ ಗೆ. ಮಾಂಸಾಹಾರಿಗಳು-ಸಸ್ಯಾಹಾರಿಗಳೆನ್ನದೆ ಜನ ಚಿಕನ್ ಅನ್ನು ಪಟ್ಟಾಗಿ ತಿಂದಿದ್ದರು. ಆದರೆ ಬಹುಮಾನ ಕೊಡುವ ವಿಷಯ ಬಂದಾಗ ತಿಂದವರೂ ಯಾರೂ ಮುಕ್ತವಾಗಿ ಅದನ್ನು ಹೊಗಳಲಿಲ್ಲ. ಏನೋ ಹಿಂಜರಿಕೆ. ಮಿಸೆಸ್ ಶುಭದಾ ಶರ್ಮ ಮೊದಲ ಬಹುಮಾನವಾಗಿ ನಾನ್ ಸ್ಟಿಕ್ ಪ್ಯಾನ್, ಎರಡನೆಯದಾಗಿ ಪುಟ್ಟ ಸ್ಪೈಸ್ ಗ್ರೈಂಡರ್ ಮತ್ತು ಮೂರನೆಯ ಬಹುಮಾನವಾಗಿ ಒಂದು ಜೊತೆ ಟೀ ಮಗ್ ಕೊಟ್ಟರು. ಈ ಬಹುಮಾನಗಳನ್ನು ಆಯಾ ಬಾರಿಯ ಹೋಸ್ಟ್ ತಂದು ಕೊಡುತ್ತಾರಂತೆ. ಅವರವರ ಅಂತಸ್ತು-ಆಸಕ್ತಿಗಳಿಗೆ ಅನುಗುಣವಾಗಿ ಕೊಡುತ್ತಾರೆ ಎಂದು ನಂತರ ಸ್ಮಿತಾ ತಿಳಿಸಿದರು. ಬಹುಮಾನ ವಿತರಣೆ ಆದ ನಂತರ ನಾಲ್ಕೈದು ಮಹಿಳೆಯರು ಊಟದ ಟೇಬಲ್ ಬಳಿ ನಿಂತು ಉಳಿದ ಊಟಗಳನ್ನು ಇಪ್ಪತ್ತೊಂದು ಪಾಲುಗಳಾಗಿ ಜಿಪ್ಲಾಕ್ ಕವರ್ ಗಳಲ್ಲಿ ಬಟವಾರೆ ಮಾಡತೊಡಗಿದರು. ಕೆಲವರು ನಮಗೆ ಇವು ಮಾತ್ರ ಸಾಕು, ಅವು ಬೇಡ ಎಂದು ಆರಿಸಿಕೊಳ್ಳುತ್ತಿದ್ದರು. ನನಗೆ ಏನೂ ಬೇಡ..ಮುಂದಿನ ಸಾರಿ ತೆಗೆದುಕೊಳ್ಳುತ್ತೇನೆ ಎಂದು ಕುಳಿತೆ. ಅದಾದ ಮೇಲೆ ಮೂವಿ ಟೈಮ್.

ಅಮಿತಾಬ್ ಬಚ್ಚನ್ ನ ’ಶರಾಬಿ’ ಮೂವಿ ನೋಡೋಣವೆಂದು ಶುಭದಾ ಆಯ್ಕೆ ಮಾಡಿದ್ದರು. ಹೊಸ್ಟ್ ಆಯ್ಕೆಯನ್ನು ಯಾರೂ ಪ್ರಶ್ನೆ ಮಾಡುವಂತಿರಲಿಲ್ಲವಂತೆ. ಇಷ್ಟ ಇರಲಿ ಇಲ್ಲದಿರಲಿ ಎಲ್ಲ ನೋಡಲೇ ಬೇಕಿತ್ತು. ನನಗೆ ಅಮಿತಾಬ್ ಬಚ್ಚನ್ ಕಂಡರೆ ಅಷ್ಟಕ್ಕಷ್ಟೇ. ಇದೊಳ್ಳೆ ಕಥೆಯಾಯ್ತಲ್ಲಪ್ಪಾ ಅಂತ ಕುಳಿತುಕೊಂಡೆ. ಎಲ್ಲರೂ ಎಲ್ಲೆಂದರಲ್ಲಿ ತಮ್ಮನ್ನು ಚೆಲ್ಲಿಕೊಂಡು ಕೂತಿದ್ದರು. ಪಿಕ್ಚರ್ ಶುರುವಾಗಿ ಅರ್ಧ ಗಂಟೆಯಾಗಿರಲಿಲ್ಲ ಆಗಲೇ ಬಿಸಿ ಬಿಸಿ ಚಾಯ್ ಬಂತು. ಅದನ್ನು ಆರಾಮಾಗಿ ಹೀರುತ್ತಾ ಪಿಕ್ಚರ್ ಮುಂದುವರಿಸಿದರು. ಯಾರಿಗೂ ಮನೆಗೆ ಹೊರಡುವ ಆತುರವಿದ್ದಂತೆ ಕಾಣಲಿಲ್ಲ. ತಮ್ಮೆಲ್ಲಾ ಮನೆಕೆಲಸಗಳಿಗೆ-ಜವಾಬ್ದಾರಿಗಳಿಗೆ ಇವತ್ತು ರಜ ಎಂಬಂತೆ ಖುಶಿಯಾಗಿ-ರಿಲ್ಯಾಕ್ಸ್ಡ್ ಆಗಿ ಕುಳಿತಿದ್ದರು. ಪುಟಾಣಿ ಮಕ್ಕಳ ತಾಯಂದಿರು ಅವಕ್ಕೆ ಉಣಿಸಿ, ಡಯಪರ್ ಬದಲಿಸಿ, ಅವನ್ನು ರೂಮಿನಲ್ಲಿ ಮಲಗಿಸಿ ಸದ್ದಾಗದಿರಲೆಂದು ಬಾಗಿಲು ಹಾಕಿದ್ದರು. ನಾನು ಈ ಜೀವನ ಶೈಲಿಗೆ ಹೊಸಬಳಾದ್ದರಿಂದ ಅವರ ಈ ಪರಿ ಅರ್ಥ ಆಗಿರಲಿಲ್ಲ. ಅಲ್ಲಿ ನೋಡುತ್ತಿದ್ದ ಎಲ್ಲಕ್ಕೂ ಊರಿನ ನೆನಪೇ ಬರುತ್ತಿತ್ತು.
 
ಅಮ್ಮನಿಗೆ-ಅವಳ ವಯಸ್ಸಿನ ಫ್ರೆಂಡ್ಸ್ ಗೆ ನಮ್ಮೆಲ್ಲರ ಗಲಾಟೆ-ತಲೆಬಿಸಿಗಳಿಂದ ತಿಂಗಳಿಗೊಮ್ಮೆಯಾದರೂ ಈ ರೀತಿ ಹೊಸರುಚಿ ಉಂಡು ಪಿಕ್ಚರ್ ನೋಡಿ ರಿಲ್ಯಾಕ್ಸ್ ಮಾಡಲು ಆಗಿದ್ದಿದ್ದರೆ ಚನ್ನಾಗಿರುತ್ತಿತ್ತು ಎನ್ನಿಸಿತು. ಅಡಿಗೆಯನ್ನಾಗಲೀ ಕೆಲಸವನ್ನಾಗಲೀ ಬರೀ ಮಾಡಿ ಮಾಡಿ ಹಾಕುವ ಆ ಮನಸ್ಸುಗಳಿಗೆ ಕುಳಿತು ಎಂಜಾಯ್ ಮಾಡುವುದು ಅಥವಾ ರಿಲ್ಯಾಕ್ಸ್ ಮಾಡುವುದು, ತಮ್ಮ ಮನಸ್ಸನ್ನು ಕೆಲವು ಗಂಟೆಗಳ ಮಟ್ಟಿಗಾದರೂ ತಮ್ಮ ಶಾಶ್ವತ ಜವಾಬ್ದಾರಿಗಳಿಂದ ಸ್ವಿಚ್ ಆಫ್ ಮಾಡಿಕೊಳ್ಳುವುದು ಅಂದರೆ ಗೊತ್ತೇ ಇರುವುದಿಲ್ಲವೆನಿಸುತ್ತದೆ. ಇಲ್ಲಿನ ಹೆಂಗೆಳೆಯರು ಮನೆಗೆ ಹೋಗುವ ಮಾತೆತ್ತದೆ ಎಲ್ಲರೊಟ್ಟಿಗೇ ಹಾಗೆ ಕುಳಿತು ಕಾಲ ಕಳೆಯುತ್ತಿದ್ದುದು ಯಾಕೆ ಅಂತ ಅಲ್ಲಿ ಹೋಗಿ ಹಲವಾರು ತಿಂಗಳುಗಳ ವಾಸದ ಅನುಭವದ ಬಳಿಕ ನನಗೆ ನಿಧಾನವಾಗಿ ಅರ್ಥವಾಗಲಾರಂಭಿಸಿತು. ಅಮೆರಿಕದಲ್ಲಿ ಅದರಷ್ಟಕ್ಕೇ ಸಾಮಾಜಿಕ ಬದುಕೊಂದು ಇಲ್ಲ. ಅದರಲ್ಲೂ ಬೇರೆ ದೇಶದಿಂದ ಬಂದು ಬದುಕು ಕಟ್ಟಿಕೊಳ್ಳುವ ಮೊದಲ ತಲೆಮಾರಿನ ವಲಸಿಗರಿಗೆ. ಇಲ್ಲಿ ನಾವೇ ಸಂಬಂಧಗಳನ್ನು ಕಟ್ಟಿಕೊಳ್ಳಬೇಕು, ನಾವೇ ಕಷ್ಟ ಸುಖ ಮಾತಾಡಿಕೊಳ್ಳುವ-ಹಂಚಿಕೊಳ್ಳುವ ಮೊದಲ ಹೆಜ್ಜೆ ಇಡಬೇಕು, ನಾವೇ ನಿಭಾಯಿಸಬೇಕು. ಇಲ್ಲದಿದ್ದಲ್ಲಿ ಎಲ್ಲಿಲ್ಲದ ಒಂಟಿತನ ಮತ್ತು ಪರಕೀಯತೆ. ಆಗಲೋ ಈಗಲೋ ಎದುರಿಗೆ ಸಿಕ್ಕು ’ಹಾಯ್’ ಎನ್ನುವ ಅಕ್ಕಪಕ್ಕದವರು ನಮ್ಮ ಮನೆಯಲ್ಲಿ ಕಳ್ಲತನವಾದರೋ, ಬೆಂಕಿ ಹತ್ತಿಕೊಂಡರೋ, ನಮಗೇನಾದರೂ ಮೆಡಿಕಲ್ ಎಮೆರ್ಜೆನ್ಸಿ ಯಾದರೋ ಬರುವುದಿಲ್ಲ. ನಮ್ಮನ್ನೂ ಅವರ ಬದುಕಿನೊಳಗೆ ಅಷ್ಟು ಸುಲಭವಾಗಿ ಬಿಟ್ಟುಕೊಳ್ಳುವುದಿಲ್ಲ. ನನಗೆ ಅನ್ನಿಸಿದ್ದು-ಅಮೆರಿಕದಲ್ಲಿ ಪೆರ್ಸೊನಲ್ ಸ್ಪೇಸ್ ತುಂಬಾ ಜಾಸ್ತಿ. ಉಸಿರಾಡಲು ನನಗೊಂಡು ನನ್ನದೇ ಸ್ಪೇಸ್ ಬೇಕು ನಿಜ. ಆದರೆ ಹೊಳೆಗೆಸೆದು ಇದಿಷ್ಟೂ ನಿನ್ನ ಸ್ಪೇಸ್ ಏನಾದ್ರೂ ಮಾಡಿಕೋ ಎಂದಾದರೆ ನಮ್ಮ ಪರ್ಸನಲ್ ಸ್ಪೇಸ್ ನಮ್ಮನ್ನೂ ಆವರಿಸಿಕೊಂಡುಬಿಡುತ್ತದೆ.

ಅಮಿತಾಬನ ಅವತಾರವನ್ನು ನೋಡಿ ಎಲ್ಲರಿಗೂ ಧನ್ಯವಾದ ಹೇಳಿ ನಮ್ಮ ಮನೆಗೆ ಆಮಂತ್ರಿಸಿ ಹೊರಟಾಗ ರಾತ್ರಿ ಎಂಟುಗಂಟೆ! ಸ್ಮಿತಾಗೆ ಥ್ಯಾಂಕ್ಸ್ ಹೇಳಿ ದಡಬಡನೆ ಮನೆಗೆ ಬಂದಾಗ ಪ್ರಶಾಂತ ಪಾಪ್ ಕಾರ್ನ್ ತಿನ್ನುತ್ತ ಕುಳಿತಿದ್ದ. "ನೀನು ಆಫೀಸಿಂದ ಬಂದಾಗ ನಾನಿಲ್ಲದ್ದು ನೋಡಿ ಏನು ಮಾಡಿದೆಯೋ" ಕೇಳಿದೆ. "ಚಿನ್ಮಯ್ ಗೆ ಫೋನ್ ಮಾಡಿದ್ದಗ ಸ್ಮಿತಾನೂ ಮನೆಗೆ ಬಂದಿಲ್ಲ ಅಂತ ತಿಳೀತು. ಎವೆರಿಬಡಿ ಲವ್ಸ್ ರೇಮಂಡ್ ನೋಡುತ್ತಿದ್ದೆ" ಶಾಂತವಾಗಿ ಉತ್ತರಿಸಿದ. ಶುಭದಾ ಮನೆಯ ಸದ್ದು-ಸಡಗರ, ಗಂಟಲಲ್ಲಿ ಒತ್ತುತ್ತಿದ್ದ ಊಟಗಳ ಮಿಶ್ರ ತೇಗುಗಳಿಂದ ಸಾವರಿಸಿಕೊಳ್ಳಲು ಬಾಲ್ಕನಿಯಲ್ಲಿ ಕುಳಿತುಕೊಂಡೆ. ಅಲ್ಲಿ ಕಂಡಿದ್ದ ಹೆಂಗೆಳೆಯರ ಬಗ್ಗೆ ಸ್ವಲ್ಪ ಮೆಲುಕು ಹಾಕಿಕೊಂಡು ಬರೆಯಬೇಕು ಎಂದುಕೊಂಡೆ. 
  

(ಮುಂದುವರಿಯುವುದು)