ಅಂಗಳ      +
  

ಉತ್ತರಗಳಿಲ್ಲ...... ಆದರೆ ಪ್ರಶ್ನೆಗಳು?


 ಡಾ. ಬಂಜಗೆರೆ ಜಯಪ್ರಕಾಶ
 
ಕಲೆ ಮತ್ತು ಪ್ರಭುತ್ವಕ್ಕೆ ಒಂದು ಹುಟ್ಟಾ ವಿರೋಧವಿದೆ. ಗೂಗಿ ವಾ ಥಿಯಾಂಗೋ ತನ್ನ 'ಪೆನ್ ಪಾಯಿಂಟ್ಸ್, ಗನ್ ಪಾಯಿಂಟ್ಸ್ ಅಂಡ್ ಡ್ರೀಮ್ಸ್' ಕೃತಿಯಲ್ಲಿ ಇದನ್ನು ಎರಡು ಅಂಶಗಳ ಮೂಲಕ ವಿವರಿಸುತ್ತಾನೆ.
ಪ್ರಭುತ್ವವೆಂಬುದು ಯಾವುದೇ ಇರಲಿ ತನ್ನ ಸ್ವಭಾವದಿಂದಲೇ ಅದು ಯಥಾಸ್ಥಿತಿವಾದಿ. ಸಮಾಜದೊಳಗೆ ಪರಸ್ಪರ ಸಂಘರ್ಷದಲ್ಲಿರುವ ಹಿತಾಸಕ್ತಿಗಳ ನಡುವೆ ಅದು ಒಂದು ಸ್ಥಿರತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತದೆ. ಕಡೆಗೆ ಕ್ರಾಂತಿಕಾರಿ ಪರಿಸ್ಥಿತಿಯಲ್ಲಿ ಏರ್ಪಡುವ ಪ್ರಭುತ್ವವೂ ಕೂಡ ಹಳೆಯ ಆಳ್ವಿಕೆ ಹಾಗೂ ಸಾಂಸ್ಥಿಕ ರಚನೆಗಳೊಂದಿಗೆ ಇರುವ ವೈರುಧ್ಯಗಳನ್ನು ಬಗೆಹರಿಸಿಕೊಂಡ ತಕ್ಷಣ ತನ್ನ ಹೊಸ ಸಾಂಸ್ಥೀಕರಣಗಳನ್ನು ಸದೃಢಗೊಳಿಸಲು ತೊಡಗುತ್ತದೆ. ಗೂಗಿಯ ಪ್ರಕಾರ ಯಾವುದೇ ಪ್ರಭುತ್ವ ನಿರಂತರವಾಗಿ ಕ್ರಾಂತಿಯಲ್ಲಿರಲು ಸಾಧ್ಯವಿಲ್ಲ. ಕಲೆ ಎಂಬುದು ಅದರ ಸ್ವಭಾವದಿಂದಲೇ ಕ್ರಾಂತಿಕಾರಿ. ತನ್ನನ್ನು ಅದು ಸದಾ ನವೀಕರಿಸಿಕೊಳ್ಳಬಯಸುತ್ತದೆ. ಕಲಾವಿದನೊಬ್ಬ ತನ್ನ ಕೃತಿಗಳಲ್ಲಿಯೂ ಭಿನ್ನ ಬಗೆಯ ಅಭಿವ್ಯಕ್ತಿಯನ್ನು ಕಂಡುಕೊಳ್ಳುವ ಪ್ರಯತ್ನ ನಿರಂತರವಾಗಿರಿಸಿರುತ್ತಾನೆ.
ವಸ್ತುವಿಗೆ ಸಂಬಂಧಪಟ್ಟಂತೆ ಕಲೆ ಕೇವಲ 'ಅದು ಹೇಗಿದೆಯೋ ಹಾಗೆ' ಮಾತ್ರ ಗ್ರಹಿಸಲು ಪ್ರಯತ್ನಿಸುವುದಿಲ್ಲ. ಬದಲಾಗಿ ಅದು ಹೇಗೆಲ್ಲ ಇರಬಲ್ಲದು ಎಂಬುದನ್ನು ಗ್ರಹಿಸಲು ಬಹಳ ಮುಖ್ಯವಾಗಿ ಪ್ರಯತ್ನಿಸುತ್ತದೆ. ಹಾಗಾಗಿಯೇ ಅರಿಸ್ಟಾಟಲ್ ತನ್ನ 'ಪೊಯಟಿಕ್ಸ್' ಕೃತಿಯಲ್ಲಿ ಕಾವ್ಯವೆಂಬುದು ಚರಿತ್ರೆಗಿಂತ ಹೆಚ್ಚು ಸಾರ್ವತ್ರಿಕವಾದುದಾಗಿದ್ದು, ಚರಿತ್ರೆಯು ವಿದ್ಯಮಾನಗಳನ್ನು ಹೇಗಿವೆಯೋ ಹಾಗೆ ಪರಿಶೀಲಿಸುತ್ತದೆಯಾದರೆ ಕಲೆಯು ವಿದ್ಯಮಾನಗಳನ್ನು ಹೇಗಿರಬಲ್ಲವು ಎಂಬ ನೆಲೆಯಲ್ಲಿ ಪರಿಶೀಲಿಸುತ್ತದೆ ಎನ್ನುತ್ತಾನೆ. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ ಕಲೆ ವಸ್ತುಸ್ಥಿತಿಯನ್ನು ಸಾಧ್ಯತೆಗಳ ನೆಲೆಯಲ್ಲಿ ಪರಿಶೀಲಿಸುತ್ತದೆ. ಕಲೆ ಎಂಬುದು ತನ್ನ ಪರಿಪೂರ್ಣತೆಗಾಗಿ, ವಸ್ತು ಮತ್ತು ವಿನ್ಯಾಸದ ಆದರ್ಶವಾದಿ ಸಮೈಕ್ಯತೆಗಾಗಿ ಪ್ರಯತ್ನಿಸುತ್ತದೆ. ಆದರೆ ವಸ್ತುವನ್ನು ಕುರಿತಂತೆ ಅದು ಯಾವಾಗಲೂ ಸ್ಥಗಿತವಲ್ಲ. ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ನಿರಂತರ ಬದಲಾಗುವ ವಸ್ತುಸ್ಥಿತಿಯ ಸಾರಾಂಶವನ್ನು ಪರಿಗ್ರಹಿಸಲು ಕಲೆಯು ಯತ್ನಿಸುತ್ತದೆ. ಚಲನೆಯನ್ನು ಸಂಭ್ರಮಿಸುತ್ತದೆ.
ಕಲೆ ಎಂಬುದು ಚಲನೆಯೊಳಗಿನ ಸ್ಥಗಿತತೆ ಹಾಗೂ ಸ್ಥಗಿತತೆಯೊಳಗಿನ ಚಲನೆ. ಆದರೆ ಪ್ರಭುತ್ವವೆಂಬುದು ವಸ್ತುಸ್ಥಿತಿಯ ಪರಿಪೂರ್ಣತೆಗಾಗಿ ಪ್ರಯತ್ನಿಸುತ್ತದೆ. ಉದಾಹರಣೆಗೆ ನ್ಯಾಯಾಂಗ ವ್ಯವಸ್ಥೆ. ಬದಲಾಗುತ್ತಿರುವ ವಸ್ತುಸ್ಥಿತಿಯೊಂದಿಗೆ ಅದು ಸಂಘರ್ಷದಲ್ಲಿದ್ದರೂ ಕೂಡ ಅದನ್ನು ನೆಲೆಗೊಳಿಸುವ ದಿಸೆಯಲ್ಲಿ ಪ್ರಭುತ್ವದ ಪ್ರಯತ್ನ ಸಾಗುತ್ತದೆ. ಅದು ಚಲನೆಯನ್ನು ಬಂಧಿಸಿಡಲು ಪ್ರಯತ್ನಿಸುತ್ತದೆ. ವಸ್ತುಸ್ಥಿತಿಯ ಪುನರಾವರ್ತನೆಯನ್ನು ಬಯಸುತ್ತದೆ. ಚಲನೆರಹಿತವಾದ ಸ್ಥಗಿತತೆ ಎಂಬುದು ಪ್ರಭುತ್ವದ ಕಲೆಯ ತಿರುಳು. ಆದರೆ ಕಲೆ, ಆಲೋಚನೆ, ಪ್ರಕೃತಿ, ಜೀವನ ಮುಂತಾದವುಗಳಿಗೆ ಚಲನೆಯ ಪರಿಕಲ್ಪನೆಯೇ ಕೇಂದ್ರಬಿಂದು. ಹಾಗಾಗಿ ಬದುಕಿನ ಎಲ್ಲಾ ರಂಗಗಳ ಅಂತಿಮ ಪರಿಪೂರ್ಣತೆಯನ್ನು ಪ್ರತಿಪಾದಿಸುವ ಪ್ರಭುತ್ವದೊಂದಿಗೆ ಅದು ಸಂಘರ್ಷದಲ್ಲಿದೆ.
'ಜನ ಇದಕ್ಕಿಂತ ಹೆಚ್ಚಿನದೇನನ್ನು ನಿರೀಕ್ಷಿಸುತ್ತಾರೆ?' ಎಂಬುದು ಬಹಳ ಸಲ ಪ್ರಭುತ್ವದ ನಾಯಕರಿಂದ ನಾವು ಕೇಳಿಸಿಕೊಳ್ಳುವ ಮಾತು. ಈ ಬಗೆಯಲ್ಲಿ ಒಂದು 'ಅಂತಿಮ' ನೆಲೆಯನ್ನು ತಲುಪಿರುವ ಮನೋಸ್ಥಿತಿಯೇ ಬಹಳ ಅಪಾಯಕಾರಿಯಾದದ್ದು. ಯಾಕೆಂದರೆ ಅದು ತನ್ನೊಳಗೆ ಒಂದು ನಿರಂಕುಶಾಧಿಕಾರದ ಹಾಗೂ ಅಸಹಿಷ್ಣುತೆಯ ಮನೋಭಾವದ ಭ್ರೂಣವನ್ನು ಒಳಗೊಂಡಿದೆ. ಈ ಮನೋಭಾವ ಪ್ಲೇಟೋನ ಆದರ್ಶ ಗಣರಾಜ್ಯದಲ್ಲಿ ಪ್ರತಿಬಿಂಬಿಸಲ್ಪಟ್ಟಿದೆ. ಆತನ ಪ್ರಕಾರ ಕಲಾವಿದರ ಅನಿಯಂತ್ರಿತ ಹುಚ್ಚು ಮನೋಕಲ್ಪನೆಗಳಿಂದ ಅಪಾಯಕ್ಕೊಳಗಾಗುವ ಸ್ಥಿರತೆಯನ್ನು ಕಾಪಾಡುವುದಕ್ಕಾಗಿ ಗಣರಾಜ್ಯದಿಂದ ಅಂತಹವರನ್ನು ಹೊರಗಿಡಬೇಕು. ಒಂದು ಪ್ರಭುತ್ವವೆಂಬುದು ಹೆಚ್ಚು ಸಾಂಪ್ರದಾಯಿಕ ಹಾಗೂ ನಿರಂಕುಶವಾದಂತೆಲ್ಲಾ ಅದು ಸಾಮಾಜಿಕ ನೈತಿಕತೆಯ ಬಗ್ಗೆ ಹುಟ್ಟುವ ಆಗ್ರಹಗಳ ಬಗ್ಗೆ ಸದಾ ಅಸಹಿಷ್ಣುವಾಗಿರುತ್ತದೆ. ಆದರೆ ಕಲೆ ಎಂಬುದು ಪ್ರಸ್ತುತ ಪರಿಸ್ಥಿತಿಯ ಎಲ್ಲಾ ಮಿತಿಗಳನ್ನೂ ನೆನಪಿಸುವುದಕ್ಕೆ ಹುಟ್ಟಿಕೊಂಡಂತಿರುತ್ತದೆ. ವಸಾಹತುಶಾಹಿ ಹಾಗೂ ನವವಸಾಹತುಶಾಹಿ ಪ್ರಭುತ್ವಗಳು ನಿರಂಕುಶಾಧಿಕಾರದ ಬೇರೆ ಬೇರೆ ಪ್ರತಿರೂಪಗಳಾಗಿದ್ದು, ಬದಲಾವಣೆಯನ್ನು ಪ್ರತಿಪಾದಿಸುವ ಯಾವುದೇ ಕಲೆ ಅದರೊಂದಿಗೆ ಅನಿವಾರ್ಯವಾಗಿ ಸಂಘರ್ಷಕ್ಕೆ ಬೀಳುತ್ತದೆ.
ಪರಿಪೂರ್ಣ ಕಲೆ ಎಂಬುದು ಪರಿಪೂರ್ಣ ಸಂಕ್ರಮಣದ ಪರವಾಗಿದ್ದರೆ, ಅಂದರೆ ಜೀವನಪರವಾಗಿದ್ದರೆ ಪರಿಪೂರ್ಣ ಪ್ರಭುತ್ವವೆಂಬುದು ಪರಿಪೂರ್ಣ ಸ್ಥಗಿತತೆಯ ಅಂದರೆ, ಮರಣದ ಪರವಾಗಿರುತ್ತದೆ. ಕಲೆಗೆ ಇರುವ ಎರಡನೇ ಸ್ವಭಾವವನ್ನು 'ಸಾಕ್ರಟಿಕ್ ಸ್ವಭಾವ' ಎಂದು ಕರೆಯುತ್ತಾನೆ ಗೂಗಿ. ನೀವು ಆ ಕತೆಯನ್ನು ತಿಳಿದಿರಬಹುದು. ಒಮ್ಮೆ ಅವನ ಬಾಲ್ಯ ಸ್ನೇಹಿತನೊಬ್ಬ ಅಶರೀರವಾಣಿಯ ಮುಖಾಂತರ ತಿಳಿದುಕೊಂಡನಂತೆ- ಸಾಕ್ರಟೀಸನಿಗಿಂತ ಬುದ್ಧಿವಂತರಾದವರು ಬೇರೊಬ್ಬರಿಲ್ಲ ಎಂದು. ಇದನ್ನು ಕೇಳಿಸಿಕೊಂಡ ಸಾಕ್ರಟೀಸ್ ಅದನ್ನು ನಂಬಿಕೊಳ್ಳದೆ ಅತ್ಯಂತ ಬುದ್ಧಿವಂತರು ಎನಿಸಿಕೊಂಡವರನ್ನು ಪ್ರಶ್ನಿಸುವುದರಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಇದರ ಮುಖಾಂತರ ಆತ ಕಂಡುಕೊಳ್ಳುವುದೇನೆಂದರೆ, ತಾನು ತನಗಿರುವ ಅಜ್ಞಾನದ ಬಗ್ಗೆ ಪ್ರಜ್ಞಾವಂತನಾಗಿದ್ದೇನೆ. ಬುದ್ಧಿವಂತರೆನಿಸಿಕೊಂಡ ಬಹಳಷ್ಟು ಜನ ತಮ್ಮ ಅಜ್ಞಾನದ ಬಗ್ಗೆ ಪ್ರಜ್ಞಾವಂತರಾಗಿಲ್ಲ. ಆದ್ದರಿಂದ ತನ್ನ ಅಜ್ಞಾನವನ್ನು ಗುರುತಿಸಿಕೊಂಡಿರುವ ಸಾಕ್ರಟೀಸ್ ಹೆಚ್ಚೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಅವನು ಬೇರೆ ಬುದ್ಧಿವಂತರಿಗಿಂತ ಜಾಣನಾಗಿದ್ದಾನೆ.
ನಿಜವಾಗಲೂ ಬುದ್ಧಿವಂತರು ಯಾರೆಂದರೆ ನಿಜವಾದ ಜ್ಞಾನದ ಎದುರು ತಾವು ತೃಣ ಮಾತ್ರರೆಂದು ಅರಿತುಕೊಂಡವರು. ಸಮಸ್ಯೆ ಏನೆಂದರೆ, ಈ ಬಗೆಯ ಪ್ರಶ್ನೆಗಳಿಂದ ಸಾಕ್ರಟೀಸ್ ಬಹಳಷ್ಟು ವಿರೋಧವನ್ನು ಕಟ್ಟಿಕೊಂಡ. ಆತನ ಮೇಲೆ ಏರ್ಪಟ್ಟ ಆರೋಪವೇನೆಂದರೆ, ಅವನು ಈ ಭೂಮಿ ಮೇಲಿರುವ ಎಲ್ಲ ವಿಷಯಗಳ ಬಗ್ಗೆ ತನಿಖೆ ಮಾಡುತ್ತಾನೆ ಹಾಗೂ ದುರ್ಬಲ ವಾದಗಳನ್ನು ಮಂಡಿಸಿ ಬಲಿಷ್ಠರನ್ನು ಸೋಲಿಸುತ್ತಾನೆ. ಅಥೆನ್ಸ್ ನ ಪ್ರಭುತ್ವದೆದುರು ಅವನ ವಿರೋಧಿಗಳು ಮಂಡಿಸಿದ ಆಪಾದನೆಯ ಮತ್ತೊಂದು ಮುಖವೇನೆಂದರೆ 'ಸಾಕ್ರಟೀಸ್ ಯುವ ಮನಸ್ಸುಗಳನ್ನು ಭ್ರಷ್ಟಗೊಳಿಸುತ್ತಿದ್ದಾನೆ ಹಾಗೂ ಪ್ರಭುತ್ವ ಗುರುತಿಸಿರುವ ದೇವತೆಗಳ ಬದಲು ತಾನೇ ಸೃಷ್ಟಿಸಿರುವ ದೇವರುಗಳಲ್ಲಿ ನಂಬಿಕೆ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾನೆ ಮತ್ತು ಪ್ರಶ್ನೆಗಳನ್ನು ಕೇಳುವಾಗ ತನ್ನ ಪ್ರಜ್ಞೆಯ ಆದೇಶಗಳನ್ನು ಮಾತ್ರ ಅನುಸರಿಸುತ್ತಾನೆ' ಎಂಬುದು.
ಸಾಕ್ರಟೀಸ್ ತನ್ನ ಪ್ರತಿವಾದದಲ್ಲಿ ಹೀಗೆ ಹೇಳಿದ: 'ಈ ಸಮಾಜವೆಂಬುದು ಬೃಹತ್ತಾಗಿ ಬೊಜ್ಜು ಬೆಳೆಸಿಕೊಂಡಿರುವ ಕುದುರೆಯಂತಾಗಿದೆ. ತನ್ನ ಬೊಜ್ಜಿನಿಂದಾಗಿ ಅದು ಸೋಮಾರಿಯಾಗಿದ್ದು ಕಡಜವೊಂದು ಕಚ್ಚಿದಾಗ ಮಾತ್ರ ಕದಲುವುದಕ್ಕೆ ಪ್ರಯತ್ನಿಸುತ್ತದೆ. ದೇವರು ನನಗೆ ಆ ಕಡಜದ ಕೆಲಸ ವಹಿಸಿದ್ದಾನೆಂದು ಕಾಣುತ್ತದೆ. ಆದ್ದರಿಂದ ನಿಮ್ಮಲ್ಲಿ ಎಲ್ಲರನ್ನೂ ಎಚ್ಚರಿಸುವವರೆಗೆ, ಪ್ರೇರೇಪಿಸುವವರೆಗೆ ನಾನು ಸುಮ್ಮನಾಗುವುದಿಲ್ಲ.' ಸಾಕ್ರಟೀಸ್ ತನ್ನ ಪ್ರವೃತ್ತಿಯನುಸಾರ ಪ್ರಶ್ನೆಗಳನ್ನು ಕೇಳುವವನಾಗಿದ್ದ. ಅದಕ್ಕಾಗಿ ಪ್ರಭುತ್ವ ಅವನಿಗೆ ವಿಷ ಕುಡಿಯಲು ಆದೇಶಿಸಿತು. ತನ್ನ ಪ್ರಶ್ನೆ ಕೇಳುವ ಹಕ್ಕಿಗಾಗಿ ಸಾಕ್ರಟೀಸ್ ಹೆಮ್ಲಾಕ್ ವಿಷವನ್ನು ಕುಡಿದ. ಸಾಕ್ರಟೀಸ್ ಉತ್ತರಗಳ ಮೇಲೆ ತನಗಿದ್ದ ಸ್ವಾಮ್ಯಕ್ಕಾಗಿ ವಿಷ ಕುಡಿಯಲಿಲ್ಲ. ಬದಲಾಗಿ ತನ್ನ ಪ್ರಶ್ನೆ ಕೇಳುವ ಹಕ್ಕಿಗಾಗಿ ವಿಷ ಕುಡಿದ. ಸಾಕ್ರಟೀಸ್ ಒಂದು ವಿಧದಲ್ಲಿ ನಮ್ಮ ಸಮಾಜದ ಕಲಾವಿದರ ಸ್ಥಾನಕ್ಕೆ ಪ್ರತೀಕವಾಗಿದ್ದಾನೆ.

ಕಲೆ ಎಂಬುದು ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಿಂತ ಹೆಚ್ಚಾಗಿ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಕಲೆ ತನಗೆ ಗೊತ್ತಿಲ್ಲದಿರುವ ಬಿಂದುವಿನಿಂದ ಗೊತ್ತಾಗಬೇಕಿರುವ ನೆಲೆಯ ಕಡೆಗೆ ತನ್ನನ್ನು ನಿರ್ದೇಶಿಸಿಕೊಳ್ಳುತ್ತದೆ. ಆದ್ದರಿಂದ ಅದಕ್ಕೆ ಒಂದು ಪರಿಶೀಲನಾತ್ಮಕ ಸ್ವಭಾವವಿದೆ. ಸರಿಯಾಗಿ ಹೇಳಬೇಕೆಂದರೆ ಕಲೆ ಉತ್ತರಗಳನ್ನು ಹೊಂದಿರುವುದು ಕಡಿಮೆ. ಅದರ ಪ್ರಶ್ನೆಗಳೊಳಗೆ ಕೆಲವು ಸಲ ಉತ್ತರಗಳೆಂಬವು ಅಡಗಿಸಲ್ಪಟ್ಟಿರಬಹುದು. ಹಾಗೆಯೇ ಕೆಲವು ಸುಳಿವುಗಳಿರಬಹುದು. ಹಾಗೆಯೇ ಸಾಧ್ಯತೆಗಳ ಹೊಳಹುಗಳಿರಬಹುದು. ಆದರೆ ಖಂಡಿತವಾಗಿ ನಿಶ್ಚಿತಾರ್ಥಗಳಿಲ್ಲ. ಆದ್ದರಿಂದ ಸಾಹಿತ್ಯದ ಪ್ರಶ್ನೆಗಳೆಂಬವು ಬಹಳ ಸಲ ನಮ್ಮ ದೈನಿಕದ ಮಾತುಗಳಂತೆ. ನೀವು ಹೇಗಿದ್ದೀರಿ? ಏನು ಮಾಡುತ್ತಿದ್ದೀರಿ? ಎಲ್ಲಿಗೆ ಹೋಗುತ್ತಿದ್ದೀರಿ? ಮುಂತಾಗಿ. ಮುಖ್ಯವಾಗಿ ಈ ಪ್ರಶ್ನೆಗಳಿಗೆ ಉತ್ತರ ಪ್ರಶ್ನೆ ಕೇಳಿಸಿಕೊಳ್ಳುವವನಲ್ಲಿದೆ. ಇದಕ್ಕೆ ತದ್ವಿರುದ್ಧವಾಗಿ ಪ್ರಭುತ್ವದ ಬಳಿ ಹೇರಳವಾದ ಉತ್ತರಗಳಿವೆ. ಆದರೆ ಪ್ರಶ್ನೆಗಳು ಬಹಳ ಕಡಿಮೆ. ಪ್ರಭುತ್ವ ಹೆಚ್ಚು ನಿರಂಕುಶವಾದಂತೆಲ್ಲಾ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವುದನ್ನು, ಹಾಗೆಯೇ ಇತರರು ಪ್ರಶ್ನಿಸುವುದನ್ನು ನಿಲ್ಲಿಸಬಯಸುತ್ತದೆ.
ಅಥೆನ್ಸ್ನ ತಥಾಕಥಿತ ಬುದ್ಧಿವಂತರಂತೆ, ತನ್ನ ಬುದ್ಧಿವಂತಿಕೆಯ ಬಗ್ಗೆ ಅದು ಬಹಳ ಖಾತ್ರಿ ಹೊಂದಿದ್ದು ಸಾಕ್ರಟೀಸ್ನಿಂದ ಏನನ್ನೂ ಕಲಿಯಲು ಸಿದ್ಧವಾಗಿರುವುದಿಲ್ಲ. ತಾನು ಕಂಡುಕೊಂಡ ಸ್ಥಿತಿಯನ್ನು ಅಂತಿಮ ಸತ್ಯವೆಂಬಂತೆ ಪ್ರಭುತ್ವ ನಂಬುತ್ತದೆ. ಹಾಗೆಯೇ ಅದನ್ನು ಪರಿಪೂರ್ಣ ಜ್ಞಾನವನ್ನಾಗಿ ಪರಿಗಣಿಸುತ್ತದೆ. ಜೊತೆಗೆ ಪ್ರಶ್ನೆ ಕೇಳುವವರನ್ನು ದಂಗೆಕೋರರಂತೆ, ವಿದ್ರೋಹಿಗಳಂತೆ ಅಥವಾ ಹುಚ್ಚರಂತೆ ಪರಿಗಣಿಸುತ್ತದೆ.
ಗೂಗಿ 'ಗಿಕುಯು' ಭಾಷೆಯಲ್ಲಿ 'ಮಾಟಿಗರಿ' ಎಂಬ ಕಾದಂಬರಿಯನ್ನು ೧೯೮೬ ರಲ್ಲಿ ಬರೆದ. ಮಾಟಿಗರಿ ಎಂಬ ಪಾತ್ರ ವಿದ್ರೋಹಾತ್ಮಕ ಚಿಂತನೆಗಳನ್ನು ಜನರ ನಡುವೆ ಬಿತ್ತುತ್ತಿದೆ ಎಂದು ಯಾರೋ ಸರ್ಕಾರಕ್ಕೆ ದೂರು ನೀಡಿದರು. ಹಿಂದೆ ಮುಂದೆ ಆಲೋಚಿಸದೆ ಆ ಸರ್ವಾಧಿಕಾರಿ ಪ್ರಭುತ್ವ `ಮಾಟಿಗರಿ'ಯನ್ನು ಬಂಧಿಸಲು ಆದೇಶ ಹೊರಡಿಸಿತ್ತು. ಅದು ಬಂಧಿಸಲು ಸಿಗುವ ವ್ಯಕ್ತಿಯಲ್ಲ ಬದಲಿಗೆ ಅದೊಂದು ಕಾದಂಬರಿಯ ಪಾತ್ರ ಎಂಬುದು ಅದಕ್ಕೆ ಅಮೇಲೆ ತಿಳಿದಿರಬಹುದು. ನಿರಂಕುಶ ಪ್ರಭುತ್ವಕ್ಕೆ ಆ ಕಾದಂಬರಿಯ ಮಾಟಿಗರಿ ಪಾತ್ರ ಸಾಕ್ರಟೀಸ್ ನನ್ನು ಅವನ ಕಾಲದ ಪ್ರಭುತ್ವ ಪರಿಗಣಿಸಿದ ರೀತಿಯಲ್ಲೇ ಹಾಗೆ ಪರಿಗಣಿಸಿತು. ಹಾಗಾಗಿ ಆ 'ಮಾಟಿಗರಿ'ಯನ್ನು ಬಂಧಿಸುವ ಆಜ್ಞೆಯನ್ನು ನಿರಂಕುಶಾಧಿಕಾರ ಹೊರಡಿಸಿತ್ತು. ಯಾಕೆಂದರೆ ಅಂದಿಗೂ ಇಂದಿಗೂ ಪ್ರಶ್ನೆಗಳು, ಪ್ರಶ್ನಿಸುವವರನ್ನು ಕಂಡರೆ ಸರ್ಕಾರಗಳಿಗೆ ಸರಿ ಬೀಳುವುದಿಲ್ಲ.