ಬಿಜೆಪಿ ಸರ್ಕಾರಕ್ಕೆ ಲಿಟ್ಮಸ್ ಟೆಸ್ಟ್ ಆಗಲಿರುವ ಉಪಚುನಾವಣೆಗಳು

 

’ಸಹನಾ’

ಅಭಿವೃದ್ದಿ! ಅಭಿವೃದ್ದಿ! ಅಭಿವೃದ್ದಿ!! ’ಕಳ್ಳೆಕಾಯ್ ಬೇಕಾ ಕಳ್ಳೆಕಾಯ್...’ ಕೂಗಿದಂತೆ ಆಗುತ್ತಿರುವ ’ಅಭಿವೃದ್ಧಿ ಮಂತ್ರ’ ರಾಜ್ಯದ ಅಧಿಕಾರೂಢ ಬಿಜೆಪಿಯ ಮೂಲಮಂತ್ರ. ಅದನ್ನು ಅವರ ಪ್ರಣಾಳಿಕೆಯಲ್ಲೂ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನಂತೂ ಆಗಾಗ ಶಿವನಾಮದಂತೆ ಅಭಿವೃಧ್ಧಿ ಮಂತ್ರವನ್ನು ಜಪಿಸುವುದು ಸಾಮಾನ್ಯವಾಗಿಬಿಟ್ಟಿದೆ. ಭಿಕ್ಷುಕರ ಕಾಲೋನಿ ದುರಂತ, ನೆರೆ ಸಂತಸ್ತ್ರರಿಗೆ ತಲುಪದ ಅನುಕೂಲಗಳು, ಸವಣೂರಿನ ಮಲ ಹುಯ್ದುಕೊಂಡ ಘಟನೆ ಇವೆಲ್ಲದರ ಮಧ್ಯವೂ ಈ ಅಭಿವೃದ್ದಿ ಮಂತ್ರ ಎಂಬುದು ದಿನೇ ದಿನೇ ಹಾಸ್ಯಾಸ್ಪದವಾಗುತ್ತಿರುವುದು ಅರಳಿಕಟ್ಟೆಯಲ್ಲಿ ಕುಳಿತ ಸೋಮಾರಿಗೂ ಗೊತ್ತಾಗಿರುವುದು ಸುಳ್ಳಲ್ಲ! ಒಂದು ಸರ್ಕಾರ ಅಭಿವೃದ್ದಿ ಪಥದತ್ತ ಸಾಗುತ್ತಿದೆಯೇ ಅನ್ನೋದಕ್ಕೆ ಆ ಸರ್ಕಾರ ನಡೆಸುವ ಅಧಿಕಾರದ ರೀತಿ ಹಾಗು ಯೋಜನೆಗಳೇ ಸಾಕ್ಷಿ ಆಗುತ್ತವೆ. ಎರಡು ವರ್ಷ ಪೂರೈಸಿದ ಯಡಿಯೂರಪ್ಪ ಸರ್ಕಾರ ಇನ್ನು ಕೂಡಾ ಒಂದು ಸ್ಪಷ್ಟ ಗುರಿ ಕಂಡುಕೊಂಡಿಲ್ಲ. ಸ್ಪಷ್ಟ ಮುನ್ನೋಟ ಇಲ್ಲದೆ, ಲಂಗು ಲಗಾಮಿಲ್ಲದೆ ಸಾಗುತ್ತಿರುವ ಬಿಜೆಪಿ ಸರ್ಕಾರದಲ್ಲಿ ಹಲವಾರು ಸಮಸ್ಯೆಗಳು ಸುತ್ತಿಕೊಂಡಿವೆ. ಯಡಿಯೂರಪ್ಪ ತಂತಿ ಮೇಲೆ ನಡೆದಂತೆ ಅತ್ತಿತ್ತ ವಾಲುತ್ತ, ಅನಿವಾರ್ಯತೆಗೆ ಸಮಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಾರೆ. ತಮ್ಮ ಜಾತಿಯವರ ಎಡೆಬಿಡದ ಬೆಂಬಲದಿಂದ ಸೇಫ್ ಆಗಿ ಸಾಗಿದ್ದಾರೆ. ಪಕ್ಷದಲ್ಲಿ ಯಡಿಯೂರಪ್ಪ ಅವರ ವಿರೋಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮೇಲ್ನೋಟಕ್ಕೆ ಸಾರಿಗೆ ಸಚಿವ ಆರ್. ಅಶೋಕ್ ಬಣ, ಅಬಕಾರಿ ಸಚಿವ ರೇಣುಕಾಚಾರ್ಯ ಬಣ, ರೆಡ್ಡಿ ಸಹೋದರರ ಬಣ, ಯಡಿಯೂರಪ್ಪ ಬಣ ಹಾಗು ನಾವಾಯಿತು ನಮ್ಮ ಪಾಡಾಯಿತು ಎಂದುಕೊಂಡಿರುವ ಒಂದಷ್ಟು ತಟಸ್ಥ ಶಾಸಕರು. ಹೀಗೆ ಒಳಗೇ ಹಂಚಿ ಹೋಗಿರುವ ಪ್ರಸಕ್ತ ಬಿಜೆಪಿಯಲ್ಲಿ ಅಭಿವೃದ್ದಿ ಅನ್ನೋದು ಅಧಿಕಾರಿಗಳ ಮಟ್ಟದಲ್ಲಿ ಸ್ವೇಚ್ಚಾಚಾರಕ್ಕೆ ಎಡೆ ಮಾಡಿಕೊಟ್ಟಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದ ಹಾಸನ ಹಾಗು ಮೈಸೂರು ಮೆಡಿಕಲ್ ಕಾಲೇಜುಗಳ ಸಿಬ್ಬಂದಿಯನ್ನು ಮೂರು ತಿಂಗಳ ಹಿಂದೆ ಖಾಯಂಗೊಳಿಸಿ ಈಗ ಆ ಸಿಬ್ಬಂದಿಯನ್ನು ಪೂರಾ ವಜಾ ಮಾಡೋ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದನ್ನು ನೋಡಿದರೆ ಸಚಿವ ಸಂಪುಟದಲ್ಲಿ ಯಾವ ರೀತಿತ ಸ್ವೇಚ್ಚಾಚಾರದ, ಬೇಜವಾಬ್ದಾರಿಯ ತಿರ್ಮಾನಗಳಾಗುತ್ತಿವೆ ಎಂದು ಗೊತ್ತಾಗುತ್ತದೆ. ಸುಮಾರು ಮುನ್ನೂರಕ್ಕೂ ಹೆಚ್ಚು ಸಿಬ್ಬಂದಿ ಅತಂತ್ರರಾಗಿ ಆಕಾಶ ನೋಡುವ ಸ್ಥಿತಿಗೆ ಬಂದಿದ್ದಾರೆ. ಉತ್ತರ ಕರ್ನಾಟಕದ ಖಾನಾಪುರ ಶಾಸಕ ರೆಮಾನಿ ಕ್ರಿಶ್ಚಿಯನ್ ಸಮುದಾಯ ಹಾಗು ಮಿಷಿನರಿಗಳನ್ನು ನಾಶ ಮಾಡಿಬಿಡಬೇಕು ಅಂತ ಬೇಜವಾಬ್ದಾರಿಯಿಂದ ಗುಡುಗಿದ್ದಾರೆ. ’ಸಾಯೋ ವಯಸ್ಸಾಗಿದೆ, ಇನ್ನಾದ್ರು ನಿಜ ಹೇಳಲಿ’ ಅಂತ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಹಿರಿಯ ರಾಜಕಾರಣಿ ಎಮ್ ಪಿ ಪ್ರಕಾಶ್ ಅವರ ಬಗ್ಗೆ ಬಿಜೆಪಿಯ ಜನಾರ್ದನ ರೆಡ್ಡಿ ಅತ್ಯಂತ ಹಗುರವಾಗಿ ಬಹಿರಂಗವಾಗಿ ಮಾತಾಡಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ಈಶ್ವರಪ್ಪ "ನಮ್ಮ ನಾಯಕರನ್ನ ಏಕವಚನದಲ್ಲಿ ಕರೆದರೆ ನಾಲಿಗೆ ಕಿತ್ತು ಹಾಕ್ತೀವಿ" ಅಂತ ರೆಡ್ಡಿಗಳಿಗೆ ಧಮಕಿ ಹಾಕಿದ್ದಾರೆ. ಇದೆಲ್ಲವೂ ಬಿಜೆಪಿಯೊಳಗೇ ನಡೆಯುತ್ತಿದೆ.
 
ಗಣಿ ಧಣಿ ಗಳ ವಿರುದ್ದ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಬಳ್ಳಾರಿವರೆಗೆ ನಡೆದು ಬೃಹತ್ ಸಮಾವೇಶವನ್ನು ಮಾಡಿ ಈಗ ಮುಂದೇನು ಎಂದು ದಿಕ್ಕು ತೋಚದೆ ಕುಳಿತಿದ್ದಾರೆ. ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಗ್ರೆಸ್ ಪಕ್ಷ ವ್ಯಕ್ತಿಗಳ ವಿರುದ್ಧದ ಹೋರಾಟಕ್ಕೆ ಕಾಲ್ನಡಿಗೆ ಜಾಥ ಮಾಡಿದ್ದು ಒಂದು ರೀತಿಯಲ್ಲಿ ವಿಪರ್ಯಾಸ! ಹದಿನೇಳು ದಿನಗಳ ಪಾದಯಾತ್ರೆ ನಂತರ ಕಾಂಗ್ರೆಸ್ ಸಾಧಿಸಿದ್ದಾದರು ಏನು ಎಂಬುದು ಈಗ ಎಲ್ಲರ ಪ್ರಶ್ನೆ. ರೆಡ್ಡಿ ಗಣಿಧಣಿಗಳೂ ಕಾಂಗ್ರೆಸ್ ಗೆ ಪರ್ಯಾಯವಾಗಿ ಸಮಾವೇಶ ನಡೆಸಿ ಸಂತೃಪ್ತರಾಗಿದ್ದಾರೆ. ಈಗಲೂ ವಾರಕ್ಕೆ ಒಂದೆರಡು ದಿನ ಕೂಡ ವಿಧಾನಸೌಧದ ಕಾರ್ಯ ಕಲಾಪಗಳಿಗೆ ಬಂದು ಕೂರದ ರೆಡ್ಡಿಗಳ ಬಗ್ಗೆ ಆ ಪಕ್ಷದ ಅಧ್ಯಕ್ಷರಾಗಲಿ, ಮುಖ್ಯಮಂತ್ರಿಯಾಗಲಿ ಚಕಾರವೆತ್ತದೆ ಮೌನ ವಹಿಸಿದ್ದಾರೆ. ಹೀಗಾದ್ರೆ ಸರ್ಕಾರ ಹೇಗ್ ಒಳ್ಳೆ ಆಡಳಿತ ನಡೆಸುತ್ತೆ? ಇದನ್ನೆಲ್ಲಾ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಲ್ಲ. ಯಾಕಂದ್ರೆ ಅವರಿಗೆ ಅದೆಲ್ಲ ಬೇಡದ ವಿಚಾರ. ನನ್ನ ಗಾದಿಗೆ ತೊಂದರೆ ಆಗದಿದ್ರೆ ಸಾಕು ಅನ್ನೋದು ಅವರ ಸಿಂಗಲ್ ಪಾಯಿಂಟ್! ಪಾಪ ಮುಖ್ಯಮಂತ್ರಿಗಳು ಎಷ್ಟು ಅಸಹಾಯಕರು ಅಂದ್ರೆ ತಮ್ಮ ಸಚಿವ ಸಂಪುಟದಲ್ಲಿ ಖಾಲಿ ಇರೋ ಎರಡು ಸಚಿವ ಸ್ಥಾನವನ್ನ ಇನ್ನೂ ಭರ್ತಿ ಮಾಡಿಕೊಳ್ಳಲಾಗದೆ ಹಪಹಪಿಸುತ್ತಿದ್ದಾರೆ. ಮಾಜಿ ಸಚಿವ ಸೋಮಣ್ಣ ಹಾಗು ಮಹಿಳಾ ಕೋಟಾದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಮುಖ್ಯಮಂತ್ರಿಗಳ ಬಹುದಿನಗಳ ಕನಸು ಇನ್ನೂ ಮುಂದುವರೆದಿದೆ. ಸಂಪುಟ ವಿಸ್ತರಣೆಗೆ ಪಟ್ಟ ಪ್ರಯತ್ನಗಳೆಲ್ಲ ವಿಫಲವಾಗ್ತಾ ಇರೋವಾಗಲೇ ಕಡೂರು ಹಾಗು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಎದುರಿಗೆ ಬಂದು ನಿಂತಿದೆ.

ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದ ಕೃಷ್ಣಮೂರ್ತಿ ಹಾಗು ಗುಲ್ಭರ್ಗ ದಕ್ಷಿಣ ಕ್ಷೇತ್ರದ ಬಿ ಜೆ ಪಿ ಶಾಸಕ ಚಂದ್ರಶೇಖರ್ ರೇವೂರ ಅವರ ನಿಧನದಿಂದ ತೆರವಾದ ಸ್ಥಾನಗಳಿಗೆ ಇದೇ ಸೆಪ್ಟೆಂಬರ್ ೧೩ ರಂದು ಚುನಾವಣೆ ನಡೆಯಲಿದೆ. ಈ ಎರಡು ಕ್ಷೇತ್ರಗಳ ಚುನಾವಣೆ ಬಿಜೆಪಿಗೆ ಅತ್ಯಂತ ಮಹತ್ವದ್ದು. ಕಳೆದ ಒಂದು ವರ್ಷದಿಂದ ಉಂಟಾಗಿದ್ದ ಗೊಂದಲ, ಕಿರಿಕಿರಿ ಎಲ್ಲವನ್ನು ಮೀರಿ ಗೆದ್ದು ಬರಲೇಬೇಕಾದ ಸವಾಲು ಮುಖ್ಯಮಂತ್ರಿಗಳ ಮೇಲಿದೆ. ಅದಕ್ಕೇ ಅವರು ಅಮೆರಿಕಾದ ನ್ಯೂಜೆರ್ಸಿಯಲ್ಲಿ ಸೆಪ್ಟೆಂಬರ್ ೩, ೪, ೫ ರಂದು ನಡೆಯಲಿರುವ ಅದ್ದೂರಿ ’ಅಕ್ಕ’ ಸಮ್ಮೇಳನದ ಪ್ರವಾಸವನ್ನೂ ಕ್ಯಾನ್ಸಲ್ ಮಾಡಿದ್ದಾರೆ. ಈ ಉಪಚುನಾವಣೆ ರಾಜ್ಯದ ಮೂರು ಪಕ್ಷಗಳಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿ ಮಾಡಿಕೊಟ್ಟಿದೆ. ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ದಿವಂಗತ ಕೃಷ್ಣಮೂರ್ತಿ ಅವರ ಸಹೋದರ ಕೆಂಪರಾಜುಗೆ ಟಿಕೇಟು ನೀಡಿ ಅವರನ್ನು ಗೆಲ್ಲಿಸುವ ಉಸ್ತುವಾರಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದೆ. ಅದಕ್ಕೆ ಕಾರಣ, ಕೃಷ್ಣಮೂರ್ತಿ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು ಆ ಕ್ಷೇತ್ರದಿಂದ ಮೂರು ಬಾರಿ ಆಯ್ಕೆ ಆಗಿದ್ದವರು. ಕಳೆದ ಚುನಾವಣೆಯಲ್ಲಿ ಎರಡೂವರೆ ಸಾವಿರ ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ತಿ ವೈ .ಎಸ್. ವಿ. ದತ್ತ ವಿರುದ್ದ ಚುನಾಯಿತರಾಗಿದ್ದರು. ಈಗ ಅವರ ಸಹೋದರ ಕೆಂಪರಾಜು ವಿರುದ್ದ ಜೆಡಿಎಸ್ ನಿಂದ ದತ್ತ ಮತ್ತು ಬಿಜೆಪಿಯಿಂದ ವಿಶ್ವನಾಥ್ ಸ್ಪರ್ಧೆಗೆ ಇಳಿದಿದ್ದಾರೆ. ಈ ಕ್ಷೇತ್ರ ಜೆಡಿಎಸ್ ಹಾಗು ಕಾಂಗ್ರೆಸ್ ಗೆ ಅತಿ ಮುಖ್ಯವಾಗಿದೆ. ಸ್ವತಃ ದೇವೇಗೌಡರೆ ಈ ಕ್ಷೇತ್ರ ದಲ್ಲಿ ಮೊಕ್ಕಾಂ ಹೂಡಿದರೂ ಅಚ್ಚರಿ ಪಡಬೇಕಾಗಿಲ್ಲ. ಮೂಲತಃ ಕೃಷ್ಣಮೂರ್ತಿ ಜೆ ಡಿ ಎಸ್ ಸೇರಿದವರಾಗಿದ್ದು, ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ಅವರ ಜೊತೆ ತಾವೂ ಕಾಂಗ್ರೆಸ್ಸ್ ಸೇರಿದ್ದರು. ಹಾಗಾಗಿ ಅದು ಜೆಡಿಎಸ್ ಕ್ಷೇತ್ರ ಅನ್ನೋದು ಗೌಡರ ವಾದ. ಬಿಜೆಪಿ ಕಡೆಯಿಂದ ಕಳೆದ ಭಾರಿ ಸ್ಪರ್ದಿಸಿದ್ದ ವಿಶ್ವನಾಥ್ ಅವರೆ ಕಣಕ್ಕಿಳಿದಿದ್ದು ಬಿಜೆಪಿ ಯಾವ ರೀತಿಯ ಚುನಾವಣಾ ತಂತ್ರ ರೂಪಿಸುತ್ತೆ ಅನ್ನೋದನ್ನು ನೋಡಬೇಕಿದೆ.
 
ಇನ್ನು ಗುಲ್ಬರ್ಗ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಕಣದಲ್ಲಿದ್ದು, ಮೃತ ರೇವೂರ ಅವರ ಕುಟುಂಬದ ರಾಜಕೀಯಾಸಕ್ತ ಸದಸ್ಯರಿಗೆ ಬಿಜೆಪಿ ಟಿಕೆಟ್ ನೀಡದೆ ಇರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ. ಇತ್ತೀಚಿಗಷ್ಟೇ ವಿಧಾನ ಪರಿಷತ್ ಗೆ ಆಯ್ಕೆ ಆಗಿದ್ದ ಶಶಿಲ್ ನಮೋಶಿಗೆ ಟಿಕೇಟು ಕೊಟ್ಟಿದ್ದರ ಹಿನ್ನೆಲೆ ಮಾತ್ರ ನಿಗೂಢವಾಗಿದೆ. ಕಾಂಗ್ರೆಸ್ ನಿಂದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ. ಗುಲ್ಬರ್ಗ ಜಿಲ್ಲೆ ಹುಲಿಗಳಾದ ಧರ್ಮಸಿಂಗ್ ಹಾಗು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದು ಪ್ರತಿಷ್ಠೆಯ ಕಣ. ಇಲ್ಲಿ ಜೆಡಿಎಸ್ ಗೆ ಅಂತಾ ಹೇಳಿಕೊಳ್ಳುವ ಸ್ಥಿತಿ ಇರಲಿಲ್ಲ, ಆದರೀಗ ಜೆಡಿಎಸ್ ಮೃತ ರೇವೂರ್ ರ ಪತ್ನಿಗೆ ಟಿಕೆಟ್ ಕೊಟ್ಟು ಅವರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡು ಸಿಂಪತಿ ವೋಟ್ ಬ್ಯಾಂಕ್ ಗೆ ಕೈ ಹಾಕಿದೆ. ಜೆಡಿಎಸ್ ನ ಈ ತಂತ್ರ ಕೆಲಸ ಮಾಡುತ್ತದೆಯೋ ಕಾದು ನೋಡೋಣ.
 
ಯಾವುದೇ ಉಪಚುನಾವಣೆಗಳು ಆಡಳಿತ ಸರ್ಕಾರಕ್ಕೆ ಲಿಟ್ಮಸ್ ಟೆಸ್ಟ್ ಇದ್ದ ಹಾಗೆ. ಹಾಗಾಗಿ ಇದು ಯಡಿಯೂರಪ್ಪ ಅವರ ಸರ್ಕಾರದ ಇಮೇಜಿಗೆ ಸತ್ವಪರೀಕ್ಷೆ ತರುವ ಚುನಾವಣೆಯಾಗಲಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯುಂಟಾದರೆ ಅದು ಯಡಿಯೂರಪ್ಪನವರ ನಾಯಕತ್ವದ ಮೇಲೆ ಪರಿಣಾಮ ಬೀರುವುದಂತೂ ನಿಜ. ಪಕ್ಷದೊಳಗಿನ ಅಪಸ್ವರ ಭುಗಿಲೇಳುವುದರ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಚಟುವಟಿಕೆಗೆ ನಾಂದಿಯಾಗಲಿದೆ. ಏನಾದರಾಗಲಿ, ಬರೀ ಗಣಿ ಧಣಿ ಧೂಳಿನಿಂದ ತುಂಬಿಕೊಂಡಿದ್ದ ಕರ್ನಾಟಕದ ರಾಜಕೀಯ ಚಟುವಟಿಕೆಗೆ ಈ ಉಪಚುನಾವಣೆ ಮತ್ತೊಂದು ರೂಪ ಕೊಡಲಿದೆ. ಬಿಜೆಪಿಯ ಅಭಿವೃದ್ದಿ ಮಂತ್ರದ ಎಫೆಕ್ಟ್ ಗೊತ್ತಾಗಲಿದೆ. 
                                                                                      ಮರಳಿ ಇನಿತೆನೆಗೆ