ಅದೇಕೋ ಕರ್ನಾಟಕದ ಬಿ ಜೆ ಪಿ ಸರ್ಕಾರದ ಅಧಿಕಾರದಲ್ಲಿ ಒಂದಿಲ್ಲೊಂದು ಅಮಾನವೀಯ ಘಟನೆಗಳು ಪುನರಾವರ್ತನೆಯಾಗತೊಡಗಿವೆ. ಒಂದೆಡೆ ಭಂಗಿ ಸಮಾಜದ ಮಂದಿ ಮೈಮೇಲೆ ಮಲ ಸುರುವಿಕೊಂಡು ಮನುಕುಲವೇ ತಲೆತಗಿಸುವಂತಹ ಪ್ರತಿಭಟನೆ ನಡೆಸಿದ್ದು ಇನ್ನೂ ಹಸಿಹಸಿಯಾಗಿರುವಾಗಲೇ ಮತ್ತೊಂದು ದುರ್ಘಟನೆ ನಡೆದು ಹೋಗಿದೆ. ಬೆಂಗಳೂರಿನಲ್ಲಿ, ಈ ಆಗಸ್ಟ್ ತಿಂಗಳಿನ ಒಂದೇ ದಿನದಲ್ಲಿ ೧೨ ಮಂದಿ ಭಿಕ್ಷುಕರು ದಾರುಣವಾಗಿ ಮೃತಪಟ್ಟಿದ್ದಾರೆ. ಹಿಂದೆ ಮುಂದೆ ಯಾರೂ ಇರದ, ಉಣಲು ಸಿಗದ, ರೋಗಕ್ಕೆ ಬೇಗ ತುತ್ತಾಗುವ, ನಿರ್ಗತಿಕ ಭಿಕ್ಷುಕರರು ಸಾಯುವುದು ಸಹಜ...ಅದರಲ್ಲಿ ಆಶ್ಚರ್ಯವೇನೆಂದು ನಿಮಗೆ ಅನಿಸಬಹುದು. ಆದರೆ ಈ ಬಡಪಾಯಿ ಭಿಕ್ಷುಕರು ಸತ್ತಿರುವುದು ಸರ್ಕಾರದ ಅಶ್ರಯದಲ್ಲಿದ್ದಾಗ! ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಬೇಕಾಗಿರುವ ಸರ್ಕಾರದ ಕೇಂದ್ರವೊಂದು ಸಾರಾಸಗಟಾಗಿ ಭಿಕ್ಷುಕರನ್ನೇ ನಿರ್ಮೂಲನ ಮಾಡುವಲ್ಲಿ ನಿರತವಾಗಿರುವುದೇ ಈ ಪರಿಸ್ಥಿಯ ದುರಂತ.
ಬೆಂಗಳೂರಿನಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರ ಎಂಬ ಸಂಸ್ಥೆ ಮಾಗಡಿ ರಸ್ತೆಯಲ್ಲಿದೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ಕೇಂದ್ರದ ಕೆಲಸವೆಂದರೆ ಭಿಕ್ಷಾಟನೆ ನಿರ್ಮೂಲ ಮಾಡುವುದು. ಇದು ಬೆಗ್ಗರ್ಸ್ ಕಾಲೊನಿ ಎಂದೇ ಬೆಂಗಳೂರಿನಲ್ಲಿ ಜನಜನಿತವಾಗಿದೆ. ಸುಭಿಕ್ಷ ಕರ್ನಾಟಕ ರಾಜ್ಯದಲ್ಲಿ ಭಿಕ್ಷಾಟನೆಯನ್ನು ತಪ್ಪಿಸಿ, ಭಿಕ್ಷೆ ಬೇಡುವವರಿಗೆ ತರಬೇತಿ ಕೊಟ್ಟು, ಪುನರ್ವಸತಿ ಕಲ್ಪಿಸಿ, ಅವರಿಗೆ ಸ್ವಾವಲಂಬಿಯಾಗಿ ಬದುಕನ್ನು ರೂಪಿಸಿಕೊಳ್ಳಲು ಬೇಕಾದಂತಹ ನೆರವನ್ನು ನೀಡುವುದು ಈ ಭಿಕ್ಷುಕರ ಪುನರ್ವಸತಿ ಕೇಂದ್ರದ ಪ್ರಮುಖ ಉದ್ದೇಶ. ನೆನಪಿಡಿ! ಅದು ದಾಖಲೆಗಳಲ್ಲಿ ಲಿಖಿತವಾಗಿರುವ ಉದ್ದೇಶ ಮಾತ್ರ!! ಈ ಕೇಂದ್ರ ಸ್ಥಾಪನೆಯಾದುದು ಅಂದಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಕನಸಿನಿಂದಾಗಿ. ಈ ರೀತಿಯ ಸೇವಾ ಮನೋಭಾವದ ಕೇಂದ್ರವೊಂದಕ್ಕಾಗಿ ಅವರು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಸುಮಾರು ೩೧೧ ಎಕರೆಯಷ್ಟು ವಿಶಾಲವಾದ ಜಾಗವನ್ನು ೧೯೪೪ ರಲ್ಲಿ ನೀಡಿದ್ದರು. ಇಂದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಈ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಈ ಪುನರ್ವಸತಿ ಕೇಂದ್ರ ಎಂದೂ ಆರ್ಥಿಕ ಬಿಕ್ಕಟ್ಟಿನಲ್ಲಿಲ್ಲ. ನಗರಪಾಲಿಕೆಯಿಂದ ಆಸ್ತಿ ತೆರಿಗೆಯಲ್ಲಿ ಸೆಸ್ ವಿಧಿಸುವ ಮೂಲಕ ಕೋಟ್ಯಾಂತರ ರೂಗಳನ್ನು ಇಲ್ಲಿನ ಕೆಲಸಗಳಿಗಾಗಿ ಸಂಗ್ರಹಿಸಲಾಗುತ್ತದೆ. ಅಲ್ಲದೆ ವಿದೇಶೀ ಸಂಸ್ಥೆಗಳ ಮೂಲಕವು ಅಪಾರವಾದ ನೆರವು ಇಲ್ಲಿಗಾಗಿಯೇ ಹರಿದು ಬರುತ್ತದೆ. ಆದರೆ ಈ ರೀತಿ ಸಂಗ್ರಹವಾಗುವ ಹಣವೆಲ್ಲಾ ಭಿಕ್ಷುಕರಿಗೆ ನೆರವಾಗುವ ಬದಲಿಗೆ ರಾಜಕಾರಣಿಗಳ, ಅಧಿಕಾರಿಗಳ, ಕೇಂದ್ರದ ನೌಕರ ವರ್ಗದ ಪಾಲಾಗುತ್ತಿದೆ ಎಂದು ಈಗ ಬಯಲಾಗುತ್ತಿದೆ. ಇತ್ತೀಚಿನವರೆಗೂ ಈ ಕೇಂದ್ರದಲ್ಲಿ ನಡೆಯುತ್ತಿದ್ದಂತಹ ವ್ಯವಹಾರಗಳೆಲ್ಲಾ ತೀರಾ ಗುಪ್ತ್ ಗುಪ್ತ್ ಆಗೇ ಉಳಿದಿದ್ದವು. ಭಿಕ್ಷುಕರ ಕೇಂದ್ರದ ಹಣ ಕಬಳಿಸಿ ಪಾಪದ ಬದುಕು ಬದುಕುತ್ತಿರುವ ಅಧಿಕಾರಿ, ರಾಜಕಾರಣಿ, ನೌಕರವರ್ಗ ಮತ್ತು ಯಮ ಯಾತನೆ ಅನುಭವಿಸುತ್ತಿದ್ದ ಭಿಕ್ಷುಕರನ್ನು ಹೊರತುಪಡಿಸಿ ಇನ್ನ್ಯಾರ ಗಮನಕ್ಕೂ ಬಂದಿರಲಿಲ್ಲ; ಒಂದೇ ದಿನದಲ್ಲಿ ೧೨ ಸಾವುಗಳು ಸಂಭವಿಸುವವರೆಗೂ ಇಲ್ಲಿನ ವ್ಯವಹಾರಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಯಾವಾಗ ಇಂಥದೊಂದು ಭೀಕರ ಮಾರಣ ಹೋಮದ ಸತ್ಯ ಬಯಲಾಯಿತೊ ಮಾಧ್ಯಮಗಳೆಲ್ಲಾ ಇಲ್ಲಿಗೆ ಲಗ್ಗೆ ಇಟ್ಟು ಇಲ್ಲಿ ವಾಸವಿರುವ ಭಿಕ್ಷುಕರ ಭಯಾನಕ ಪರಿಸ್ಥಿತಿಯನ್ನು ಅನಾಮತ್ ಬಯಲಿಗೆ ತಂದು, ಅಲ್ಲಿ ನಡೆಯುತ್ತಿರುವ ಅಮಾನವೀಯತೆಯಿಂದ ಎದೆ ನಡುಗುವಂತಾಗಿದೆ.
ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಸಾವು ಸಂಭವಿಸುವುದು ಹಿಂದಿನಿಂದಲೂ ಸಾಮಾನ್ಯವಾದ ಸಂಗತಿಯಾಗಿದ್ದರೂ ಅದು ಮಾಧ್ಯಮಗಳಿಗಾಗಲೀ, ಸಾರ್ವಜನಿಕರಿಗಾಗಲೀ ಅರಿವಾಗುತ್ತಿರಲಿಲ್ಲ. ಎಲ್ಲವನ್ನೂ ಗೌಪ್ಯವಾಗಿಯೇ ಮುಚ್ಚಿಹಾಕುತ್ತಿದ್ದಂತಹ ಒಂದು ವ್ಯವಸ್ತಿತವಾದ ಜಾಲ ಇಲ್ಲಿ ಕಾರ್ಯನಿರತವಾಗಿರುವುದು ಒಂದೇ ದಿನ ಸಂಭವಿಸಿದ ೧೨ ಜನ ಭಿಕ್ಷುಕರ ಸಾಮೂಹಿಕ ಸಾವಿನಿಂದ ಬಯಲಿಗೆ ಬಂದಿದೆ. ಎಲ್ಲೆಲ್ಲೋ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಂಡು ಬದುಕುತ್ತಿದ್ದವರನ್ನು ಎಳೆತಂದು ಜವರಾಯನ ಮನೆಗೆ ಕಳಿಸುವಂತಹ ಮಹತ್ಕಾರ್ಯವನ್ನು ಮಾಡಿರುವ, ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳ, ರಾಜಕಾರಣಿಗಳ ಕೂಟವೇ ಇಲ್ಲಿ ಸಕ್ರಿಯವಾಗಿ ಕಾರ್ಯನಿರತವಾಗಿದೆ. ಈ ಭಿಕ್ಷುಕರ ಕೇಂದ್ರವನ್ನು ಇಲ್ಲಿಂದ ಎತ್ತಂಗಡಿ ಮಾಡಿಸಲು ಭೂ ಮಾಫಿಯಾ ಬಹಳ ದಿನದಿಂದಲೂ ವ್ಯವಸ್ಥಿತ ಸಂಚು ನಡೆಸುತ್ತಿದೆ. ಅದಕ್ಕೆ ಕಾರಣ ಇಲ್ಲಿರುವ ೧೬೦ ಎಕರೆ ನೂರಾರು ಕೋಟಿ ಬೆಲೆ ಬಾಳುವ ಜಮೀನು. ಹಿಂದೆ ಭಿಕ್ಷುಕರ ಪುನರ್ವಸತಿಗೆಂದೇ ಮೈಸೂರು ಮಹಾರಾಜರು ನೀಡಿದ್ದ ೩೧೧ ಎಕರೆ ಜಾಗದಲ್ಲಿ ಸಾಕಷ್ಟು ಅಕ್ರಮ ಒತ್ತುವರಿಯಾಗಿ ಈಗ ಉಳಿದಿರುವುದು ಸುಮಾರು ೧೬೦ ಎಕರೆಯಷ್ಟೇ. ಇಲ್ಲಿ ರೇಸ್ ಕೋರ್ಸ್ ಮಾಡಬೇಕೆಂದು ಸರ್ಕಾರ ನಿರ್ಧಾರವನ್ನು ಮಾಡಿತ್ತಾದರೂ ಅದಕ್ಕೆ ತೀರ್ವ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಧಾರವನ್ನು ಬದಲಿಸಿತ್ತು.
ಕುರಿ-ದನದ ದೊಡ್ಡಿಗಳೇ ಮೇಲು!
ಈ ನಿರಾಶ್ರಿತರ ವಸತಿ ಕೇಂದ್ರದಲ್ಲಿರುವುದು ೪ ಡಾರ್ಮಿಟರಿಗಳು. ಇದರಲ್ಲಿ ೯೦೦ ಮಂದಿಗೆ ವಾಸ ಮಾಡಲು ಮಾತ್ರ ಸಾಧ್ಯವಿದೆ. ಆದರೆ ಈ ನಾಲ್ಕು ಕೇಂದ್ರಗಳಲ್ಲೇ ೨೫೦೦ಕ್ಕೂ ಹೆಚ್ಚು ಜನರನ್ನು ತುಂಬಲಾಗಿದೆ! ಇನ್ನು ಶುಚಿತ್ವದ ಬಗ್ಗೆ ಹೇಳುವುದೇ ಬೇಡ! ಸರಿಯಾದ ಸಂಖ್ಯೆಯ ಸ್ನಾನಗೃಹ-ಸಂಡಾಸುಗಳೇನೂ ಇಲ್ಲದ ಜೈಲುಗಳಂತಹ ಡಾರ್ಮೆಟರಿಗಳಲ್ಲಿ ಬುದ್ಧಿಮಾಂದ್ಯರು, ಅಂಗವಿಕಲರು, ವಯಸ್ಸಾದವರು ತಾವು ಕೂಡಿಹಾಕಲ್ಪಟ್ಟ ಕೋಣೆಗಳಲ್ಲೇ ಮಲ ಮೂತ್ರ ವಿಸರ್ಜನೆ ಮಾಡಿಕೊಂಡಿರುವುದನ್ನೂ ಶುದ್ದಿಗೊಳಿಸದಿರುವುದರಿಂದ ಅವರೆಲ್ಲಾ ಅದರಲ್ಲೇ ಒದ್ದಾಡಿ, ಮೈ ಕೈಗಳಿಗೆಲ್ಲಾ ಮಲ ಮೂತ್ರಗಳನ್ನು ಮೆತ್ತಿಕೊಂಡು ಅದರ ಮೇಲೇ ಮಲಗಬೇಕಾದ ಪರಿಸ್ಥಿತಿಯುಂಟಾಗಿದೆ. ಬುದ್ದಿಮಾಂದ್ಯರು, ಬುದ್ದಿ ಇರುವವರು, ರೋಗಿಗಳು, ನಿರೋಗಿಗಳು ಎಲ್ಲರನ್ನೂ ಒಟ್ಟಿಗೇ ದಬ್ಬಿ ಕೂಡಿಹಾಕಲ್ಪಡುವುದರಿಂದ ಸಾಂಕ್ರಾಮಿಕ ರೋಗಗಳು ತ್ವರಿತವಾಗಿ, ವ್ಯಾಪಕವಾಗಿ ಹರಡಲು ಅನುಕೂಲ ಮಾಡಿಕೊಟ್ಟಂತಾಗಿದೆ. ಅಲ್ಲಿನ ಸಿಬ್ಬಂದಿಗಳೂ ಅದರ ಬಗ್ಗೆ ಕಿಂಚಿತ್ ತಲೆಕೆಡಿಸಿಕೊಳ್ಳದೇ ಈ ಭಿಕ್ಷುಕರು ಬದುಕಿರುವುದೇ ಒಂದು ದೊಡ್ಡ ಅದೃಷ್ಟ, ಅವರು ಬದುಕಬೇಕಾದ್ದೇ ಹಾಗೆಂಬ ತೀರ್ಮಾನಕ್ಕೆ ಬಂದಂತಿದ್ದಾರೆ. ಇಲ್ಲಿ ಕೂಡಿ ಹಾಕಲ್ಪಟ್ಟ ಭಿಕ್ಷುಕರಿಗೆ ಕೊಡುತ್ತಿದ್ದ ಆಹಾರದ ಬಗ್ಗೆ ಈ ನಿರಾಶ್ರಿತರಿಂದ ಬರುವ ಉತ್ತರ ಕೇಳಿದರೆ ದಿಗ್ಭ್ರಾಂತಿಯಾಗುತ್ತದೆ. ಹುಳು ಬಿದ್ದ ಅಕ್ಕಿಯಿಂದ ಮಾಡಿದ ಅನ್ನ, ಹಾಳಾದ-ಉಪಯೋಗಿಸಲು ಅಯೋಗ್ಯವಾದ ಪದಾರ್ಥಗಳಿಂದ ಎಂದೋ ಮಾಡಿದ, ಕೊಂಚ ಬಣ್ಣವಿರುವ ನೀರಿನಂತಾ ಸಾರು!
ಇಲ್ಲಿರುವ ೨೫೦೦ಕ್ಕೂ ಹೆಚ್ಚು ನಿರಾಶ್ರಿತರಿಗೆ ಇರುವುದು ಒಬ್ಬನೇ ಡಾಕ್ಟರು. ಆತನೂ ಬಂದರೆ ಬಂದ ಇಲ್ಲದಿದ್ದರೆ ಇಲ್ಲ. ಬಂದರೂ ಇರುವವರಲ್ಲಿ ಶೇಕಡಾ ೯೦ ರಷ್ಟು ಮಂದಿ ರೋಗಪೀಡಿತರಾಗಿರುವುದರಿಂದ ಯಾರನ್ನೆಂದು ಅಂತಾ ನೋಡುತ್ತಾನೆ?! ಆತನೂ ಎಲ್ಲೋ ಪ್ರೈವೇಟ್ ಪ್ರಾಕ್ಟೀಸ್ ನಲ್ಲಿ ಮಗ್ನನಾಗಿರುತ್ತಾನೆ. ಇಲ್ಲಿನ ಭಿಕ್ಷುಕರ ಗೋಳನ್ನು ಕೇಳುವವರಿಲ್ಲದೆ ಈ ವರ್ಷದಲ್ಲಿ ಸತ್ತಿರುವವರ ಸಂಖ್ಯೆ ಈ ಕೇಂದ್ರದ ಲೆಕ್ಕದ ಪ್ರಕಾರವೇ ೩೧೮. ಲೆಕ್ಕಕ್ಕಿಲ್ಲದವರು ಅದಿನ್ನೆಷ್ಟು ಮಂದಿಯೋ?! ಇನ್ನು ಗಂಭೀರವಾದ ಖಾಯಿಲೆಯಿಂದ ಈಗ ಸಾವನ್ನು ನಿರೀಕ್ಷಿಸುತ್ತಿರುವವರು ೬೦ ಕ್ಕೂ ಹೆಚ್ಚು ಮಂದಿ. ಒಮ್ಮೆ ಈ ಪುನರ್ವಸತಿ ಕೇಂದ್ರದ ವಾತಾವರಣ, ಇಲ್ಲಿರುವ ಅತೀ ಕೊಳಕು ಡಾರ್ಮಿಟರಿಗಳಲ್ಲಿ ಭಿಕ್ಷುಕರನ್ನು ಕೂಡಿ ಹಾಕಿರುವ ರೀತಿ ನೋಡಿದರೆ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ತಾನು ತೀರ್ವವಾಗಿ ದ್ವೇಷಿಸುತ್ತಿದ್ದ ಯಹೂದಿಗಳನ್ನು ಗ್ಯಾಸ್ ಚೇಂಬರಿನಲ್ಲಿ ಕೂಡಿಹಾಕಿ ಕೊಲ್ಲುತ್ತಿದ್ದ ಚಿತ್ರದ ನೆನಪಾಗುತ್ತದೆ. ಅವನು ವಿಷದ ಗಾಳಿಯನ್ನು ಬಿಟ್ಟು ಅಮಾಯಕರನ್ನು ಕೊಂದಿದ್ದ. ಇಲ್ಲಿ ಈ ಅಮಾಯಕ ನಿರಾಶ್ರಿತರಿಗೆ ನೀಡಿದ ಕೆಟ್ಟ ಆಹಾರ, ಮಲ ಮೂತ್ರಗಳೊಟ್ಟಿಗೇ ಮಲಗುತ್ತಿದ್ದ ಕೆಟ್ಟಾ ಕೊಳಕು ವಾತಾವರಣವೇ ವಿಷಯುಕ್ತವಾಗಿ ಅವರನ್ನು ಸಾವಿನ ದವಡೆಗೆ ದೂಡಿತ್ತು. ನರಕವೆಂಬುದೇನಾದರೂ ಇದ್ದಲ್ಲಿ ಅದು ಈ ನಿರಾಶ್ರಿತರ ಕೇಂದ್ರಕ್ಕಿಂತಲೂ ಅಧ್ವಾನವಾಗಿರಲು ಸಾಧ್ಯವಿಲ್ಲ.
ಹಾಗಂತ ಈ ಭಿಕ್ಷುಕರ ಕೇಂದ್ರದಲ್ಲಿರುವ ಕೂಡಿ ಹಾಕಲ್ಪಟ್ಟಿರುವ ಎಲ್ಲರೂ ವೃತ್ತಿಪರ ಭಿಕ್ಷುಕರಲ್ಲ. ವಸತಿ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಿಕ್ಷುಕರನ್ನು ತೋರಿಸಿದಷ್ಟೂ ಹೆಚ್ಚು ವಿದೇಶಿ ಗ್ರಾಂಟ್ಸ್ ಗಳು ಬರುತ್ತವೆಂಬ ಗಲೀಜು ಉದ್ದೇಶದಿಂದ ಇಲ್ಲಿನ ಸಿಬ್ಬಂದಿ ತಮ್ಮ ಕಣ್ಣಿಗೆ ಭಿಕ್ಷುಕರಂತೆ ಕಂಡುಬರುವವರನ್ನೆಲ್ಲಾ ಎತ್ತು ಹಾಕಿಕೊಂಡು ಬಂದು ಇಲ್ಲಿ ದಬ್ಬುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಿಕ್ಷುಕರನ್ನು ತೋರಿದಷ್ಟೂ ಅವರಿಗೆ ಹೆಚ್ಚಿನ ಕಮಾಯಿ ಸಿಗುತ್ತಿತ್ತು. ಆದ್ದರಿಂದಲೇ ಅವರು ಮಾಸಿದ-ಹಳೆದಾದ ಬಟ್ಟೆ ಹಾಕಿ ಬಸ್ ಸ್ಟಾಂಡಿನಲ್ಲಿ, ರೈಲ್ವೇ ಸ್ಟೇಷನ್ನಿನಲ್ಲಿ, ಪಾರ್ಕುಗಳಲ್ಲಿ ಹೀಗೆ ಎಲ್ಲಿ ಕುಳಿತಿದ್ದವರನ್ನೂ ಇಲ್ಲಿಗೆ ಎಳೆದುಕೊಂಡು ಬರುವುದು ಸಾಮಾನ್ಯ ಸಂಗತಿಯಾಗಿತ್ತು. ಇವರು ಎಳಕೊಂಡು ಬಂದು ಕೂಡಿಹಾಕಿರುವವರಲ್ಲಿ ಪಧವೀದರರೂ, ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತಿಯಾದವರೂ, ಮನೆಯಿಂದ ಬಂದು ವಾಯುವಿಹಾರ ಮುಗಿಸಿ ಪಾರ್ಕುಗಳಲ್ಲಿ ವಿರಮಿಸುತ್ತಿದ್ದ ವೃದ್ದರೂ, ಸುಸ್ತಾಗಿ ಪಾರ್ಕಿನ ಬೆಂಚುಗಳಲ್ಲಿ ಮಲಗುತ್ತಿದ್ದ ಕೂಲಿ ಮಾಡುವವರೂ ಎಲ್ಲರೂ ಸೇರಿದ್ದಾರೆ! ಒಟ್ಟಿನಲ್ಲಿ ಇಂತಿಷ್ಟು ಜನರನ್ನು ಕರೆತರಲೇಬೇಕೆಂದು ಅಧಿಕಾರಿಗಳ ಅಪ್ಪಣೆಯಾಗುತ್ತಿತ್ತಾದ್ದರಿಂದ ಇಲ್ಲಿನ ನೌಕರರು (ಇವರನ್ನು ಭಿಕ್ಷುಕರನ್ನು ಹುಡುಕಿ, ಎಳೆದುಕೊಂಡು ಬರುವುದಕ್ಕಾಗಿಯೇ ನೇಮಿಸಿಕೊಳ್ಳಲಾಗಿದೆ!) ಬೆಂಗಳೂರಿನ ರಸ್ತೆ-ಗಲ್ಲಿಗಳಲ್ಲಿ ಸುತ್ತುತ್ತಾ ಅವರು ಭಿಕ್ಷುಕರಿರಲಿ ಇಲ್ಲದಿರಲಿ ಹಳೆಯ, ಹರಕಲು ಬಟ್ಟೆ ತೊಟ್ಟಿದ್ದವರನ್ನೆಲ್ಲಾ ಹಿಡಿದಿಡಿದು ತಮ್ಮ ವ್ಯಾನಿನೊಳಕ್ಕೆ ತುಂಬಿಕೊಂಡು ಬಂದು ಇಲ್ಲಿ ವಗಾಯಿಸುತ್ತಿದ್ದರು. ಒಟ್ಟಾರೆ ಹಳೆಯ ಹರಕಲು ಬಟ್ಟೆ ಹಾಕಿದವರೇ ಭಿಕ್ಷುಕರೆನ್ನುವುದು ಇವರ ಮಾನದಂಡವಾಗಿತ್ತು. ಹಾಗೆ ಎಳೆದುಕೊಂಡು ಬಂದವರು ತಾವು ಭಿಕ್ಷುಕರಲ್ಲವೆಂದು ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಇವರು ಕೇಳುತ್ತಿರಲಿಲ್ಲ. ತಾವು ಹಿಡಿದು ತಂದವರೆಲ್ಲರೂ ಭಿಕ್ಷುಕರೇ ಎಂಬ ತೀರ್ಮಾನ ಇವರದ್ದು.
ಭಿಕ್ಷುಕರ ಮ್ಯಾರಥಾನ್ ರೇಸು
ಈ ನಿರಾಶ್ರಿತರ ಕೇಂದ್ರವೆಂಬ ಮೃತ್ಯುಕೂಪದಲ್ಲಿ ಆಗಸ್ಟ್ ತಿಂಗಳ ೨೫ ದಿನದಲ್ಲೇ ೧೧೬ ಜನ ಸತ್ತಿದ್ದು ಸಾರ್ವಜನಿಕರ ತೀರ್ವ ಆಕ್ರೋಶಕ್ಕೆ ಗುರಿಯಾಗಿತ್ತು. ಸರಿ. ಇನ್ನು ಈ ಸಂಧರ್ಭವನ್ನು ಯಾವ ರೀತಿ ತಮಗನುಕೂಲವಾಗುವಂತೆ ಬಳಸಿಕೊಳ್ಳಬೇಕೆಂಬುದನ್ನು ನಮ್ಮ ರಾಜಕಾರಣಿಗಳಿಗೆ ಹೇಳಿಕೊಡಬೇಕೆ? ಆಡಳಿತ ಪಕ್ಷಕ್ಕೆ ಮುಜುಗರವನ್ನುಂಟುಮಾಡುವ ಈ ಸದವಕಾಶವನ್ನು ಬಳಸಿಕೊಂಡ ರಾಜಕಾರಣಿಗಳು ತಮ್ಮ ದಂಡುಗಳ ಸಮೇತ ಇಲ್ಲಿಗೆ ಬರಲಾರಂಭಿಸಿದ್ದರು. ತಾವೆಂದೂ ಹತ್ತಿರದಿಂದ ನೋಡದಿದ್ದ ಖ್ಯಾತ-ಕುಖ್ಯಾತನಾಮರುಗಳೆಲ್ಲಾ ತಮ್ಮ ಮುಂದೆ ಬಂದು ನಿಲ್ಲುತ್ತಿರುವುದನ್ನು ನೋಡಿ ನಂಬಬೇಕೋ ಬಿಡಬೇಕೋ ಗೊತ್ತಾಗದೇ ಇಲ್ಲಿನ ಭ್ಹಿಕ್ಷುಕರು ಗಾಬರಿಯಾಗಿಹೋಗಿದ್ದರು; ಧಿಡೀರನೇ ವಿ ಐ ಪಿ ಗಳಾಗಿಹೋಗಿದ್ದರು. ಅವರನ್ನು ಎಡಬಿಡದೇ ಸೆರೆಹಿಡಿಯುವ ಟಿ ವಿ ಕ್ಯಾಮರಾಗಳು, ಕೇಳಿದ್ದನ್ನೇ ಕೇಳುತ್ತಿದ್ದ ಪತ್ರಕರ್ತರುಗಳು, ಮುಖಗವಸು ಹಾಕಿಕೊಂಡು ಮಾರುದ್ದ ನಿಂತೇ ಸಾಂತ್ವನ ತೋರಿಸುತ್ತಿದ್ದ ಸಚಿವರುಗಳು, ರಾಜಕಾರಣಿಗಳು, ಅವರುಗಳೊಂದಿಗೆ ಬಂದಿದ್ದ ನೂರಾರು ಶಿಷ್ಯ ಸಮೂಹ ಇವರನ್ನೆಲ್ಲಾ ಒಟ್ಟೊಟ್ಟಿಗೇ ಕಂಡ ನಿರಾಶ್ರಿತರು ಸಿಕ್ಕ ಸಿಕ್ಕವರ ಬಳಿ ತಮ್ಮ ದುರ್ಗತಿಯ ಬಗ್ಗೆ ಗೋಳಾಡಿದ್ದರು.
ತಮ್ಮ ನಾಯಕರುಗಳೊಂದಿಗೆ ಅಲ್ಲಿಗೆ ಬಂದಿದ್ದರಲ್ಲ ಮರಿ ಪುಡಾರಿಗಳು...ಸಡನ್ ಆಗಿ ತಮ್ಮ ಮಹಾನ್ ತಲೆಗಳನ್ನು ಓಡಿಸಿ ಒಂದು ಘನಂದಾರಿ ಐಡಿಯಾ ಮಾಡಿದರು. ಅವರಿಗೆ ಈ ಭಿಕ್ಷುಕರನ್ನು ಬಿಡುಗಡೆಗೊಳಿಸುವುದೇ ತಮ್ಮ ಜೀವನದ ಮಹತ್ಕಾರ್ಯವೆಂದು ಅನಿಸಿತ್ತೇನೋ...ಕೂಡಲೇ ನಿರಾಶ್ರಿತರ ಕೇಂದ್ರದ ಮುಖ್ಯ ಬಾಗಿಲನ್ನು ತೆಗೆದು ಓಡಿ ಹೋಗಿರೆಂದು ಅಲ್ಲಿ ಖೈದಾಗಿದ್ದ ಭಿಕ್ಷುಕರನ್ನು ಹುರಿದುಂಬಿಸಿಬಿಟ್ಟರು. ಅಷ್ಟು ಹೇಳಿದ್ದೇ ತಡ ಅಲ್ಲಿದ್ದ ೨೫೦೦ ಭಿಕ್ಷುಕರಲ್ಲಿ ಸುಮಾರು ೧೦೦೦ಕ್ಕೂ ಹೆಚ್ಚು ಮಂದಿ ಮೈಗಳ್ಳ ಬಿಕ್ಷುಕರಿದ್ದರಲ್ಲ...ಅವರು ಈ ಕೇಂದ್ರದ ನೌಕರರಿಂದ ದಿನನಿತ್ಯ ಒದೆ ತಿಂದು, ಬೈಸಿಕೊಂಡು ಹೈರಾಣಾಗಿ ಉಸಿರುಕಟ್ಟಿಸಿಕೊಂಡಿದ್ದರು. ಈ ಕೇಂದ್ರದಲ್ಲಿ ಸಿಗದ ಅನುಕಂಪ ಹೊರಗಡೆ ಸಾರ್ವಜನಿಕರಿಂದ ಅವರಿಗೆ ಸಿಗುತ್ತಿತ್ತು. ಯಾವ ರೀತಿ ಕೇಳುವವರ ಕರುಳು ಹಿಂಡುವಂತೆ ಭಿಕ್ಷೆ ಬೇಡಬೇಕೆಂಬ ಕಲೆಯನ್ನು ಕರಗತ ಮಾಡಿಕೊಂಡಿದ್ದ ಮೈಗಳ್ಳ ಭಿಕ್ಷುಕರೆಲ್ಲರೂ ಒಮ್ಮೆಲೇ ನಿರ್ಧರಿಸಿಕೊಂಡವರಂತೆ ಒಟ್ಟಿಗೇ ಬದುಕಿದೆಯಾ ಬಡಜೀವವೇ ಎಂದು ನಿರಾಶ್ರಿತರ ಕೇಂದ್ರದಿಂದ ಪೇರಿ ಕಿತ್ತರು. ಅವರು ಓಡುತ್ತಿದ್ದ ದೃಶ್ಯವಂತೂ ಮ್ಯಾರಥಾನ್ ರೇಸಿನಂತಿತ್ತು. ಕೈ ಇಲ್ಲ, ಕಾಲಿಲ್ಲ ಎಂದು ನಾಟಕವಾಡುತ್ತಾ ತಮ್ಮ ಮನಕರಗುವಂತೆ ಗೋಳಿಡುತ್ತಿದ್ದ ಭಿಕ್ಷುಕರು ಇವರೇನಾ ಎಂದು ಜನರಿಗೂ ಆಶ್ಚರ್ಯವಾಗಿತ್ತು. ಏಕೆಂದರೆ ಮೈಗಳ್ಳ ಭಿಕ್ಶುಕರು ಆ ಪರಿ ಸ್ಪೀಡಾಗಿ ಪೇರಿಕಿತ್ತಿದ್ದರು.
ಇದೆಲ್ಲಾ ಆದ ಎರಡು ದಿನದ ನಂತರ ಅಲ್ಲಿಗೆ ಭೇಟಿ ಮಾಡಿದ ಮಾನ್ಯ ಮುಖ್ಯಮಂತ್ರಿಗಳು ಇನ್ನೆರಡು ತಿಂಗಳಲ್ಲಿ ಈ ಕೇಂದ್ರವನ್ನು ಆಧುನೀಕರಿಸುವುದಾಗಿ ಎಂದಿನ ಅಶ್ವಾಸನೆ ನೀಡಿ ಹಿಂದಿರುಗಿದ್ದಾರೆ. ವಿಪರ್ಯಾಸವೆಂದರೆ ಈ ದುರ್ಘಟನೆ ನಡೆಯುವ ಕೇವಲ ೨೦ ದಿನಗಳ ಹಿಂದಷ್ಟೇ ಈ ಕೇಂದ್ರಕ್ಕೆ ಇದೇ ಮುಖ್ಯಮಂತ್ರಿಗಳು ಭೇಟಿ ನೀಡಿ ಆಗಲೂ ಇದೇ ಆಶ್ವಾಸನೆಯನ್ನು ನೀಡಿದ್ದರು. ಹಾಗೆ ಅವರು ಬಂದು ಹೋದ ಇಪ್ಪತ್ತು ದಿನದಲ್ಲಿಯೇ ಆ ಕೇಂದ್ರದಲ್ಲಿ ೧೨೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೆ ಅದೇ ಆಶ್ವಾಸನೆಯ ಪುನರಾವರ್ತನೆಯಾಗಿದೆ. ಅದು ನೆರವೇರುವಷ್ಟರಲ್ಲಿ ಈ ಕೇಂದ್ರದಲ್ಲಿ ಜೀವಂತ ನಿರಾಶ್ರಿತರು ಉಳಿದಿರುತ್ತಾರಾ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಒಂದು ವೇಳೆ ಉಳಿಯದಿದ್ದಲ್ಲಿ ಅವರ ಗೋರಿಗಳ ಮೇಲೆ ಕಾಂಪ್ಲೆಕ್ಸುಗಳು, ಅಪಾರ್ಟ್ಮೆಂಟುಗಳು, ಮಾಲ್ ಗಳು, ಸಿನಿಮಾ ಮಂದಿರಗಳನ್ನು, ಫನ್ ವರ್ಲ್ಡ್ ಗಳನ್ನು ನಿರ್ಮಿಸಲು ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಭೂ ಮಾಫಿಯಾದ ಜತೆ ಕೈಜೋಡಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ಅವರಿಗೆ ಇಲ್ಲುಳಿದಿರುವ ನಿರಾಶ್ರಿತರ ಮಾರಣ ಹೋಮ ಜರೂರಾಗಿ, ತುರ್ತಾಗಿ ಆಗಬೇಕಾಗಿದೆ. ಅವರುಗಳ ದೃಷ್ಟಿಯಲ್ಲಿ ಅದೇ ಭಿಕ್ಷುಕರ ನಿಜವಾದ ನಿರ್ಮೂಲನೆ.
ಸಹೃದಯ ಓದುಗರಲ್ಲಿ ಕಳಕಳಿಯ ಮನವಿ.
ಸೆಖೆಯೆಂದೋ, ಸರಳತೆಯೆಂದೋ ದಯವಿಟ್ಟು ಮಾಸಿದ ಸುಕ್ಕಾದ ಮನೆಯುಡುಗೆಗಳನ್ನು ಹಾಕಿಕೊಂಡು ವಾಕಿಂಗ್ ಹೋಗಬೇಡಿ!
ಪಾರ್ಕುಗಳಲ್ಲಿ, ನಿರ್ಜನ ರಸ್ತೆಗಳಲ್ಲಿ ಕಾಣುವ ಕಲ್ಬೆಂಚುಗಳ ಮೇಲೆ ಕೂತು ವಿಶ್ರಮಿಸಬೇಡಿ.
ಕೂತರೂ ಅಪ್ಪಿತಪ್ಪಿಯೂ ಮನಸೋತೋ, ಸುಸ್ತಾಗೋ ಕಣ್ತೂಗಬೇಡಿ!
ಎಮರ್ಜೆನ್ಸಿಗೆಂದು ನಿಮ್ಮ ಒಂದು ವಿಸಿಟಿಂಗ್ ಕಾರ್ಡ್ ಮಾಡಿಸಿ ಜೇಬಿನಲ್ಲಿಟ್ಟುಕೊಳ್ಳಿ.
ವಿಸಿಟಿಂಗ್ ಕಾರ್ಡ್ ಗೆ ಬೇಕಾಗುವ ಹುದ್ದೆ, ಕೆಲಸವಿಲ್ಲದಿದ್ದರೆ ಒಬ್ಬಂಟಿಯಾಗಿ ವಾಕಿಂಗ್ ಹೋಗಬೇಡಿ! ಬೆಂಗಳೂರಿನಲ್ಲಂತೂ ಅಪ್ಪಿತಪ್ಪಿಯೂ ಹೋಗಬೇಡಿ. ವಯಸ್ಸಾದವರಂತೂ ಖಂಡಿತಾ ಹೋಗಬೇಡಿ
ಯಾಕಂದ್ರೆ ಬೆಂಗಳೂರು ಥಳುಕಿನವರು, ಗೂಂಡಾಗಳು, ಥೈಲಿಯವರಿಗಷ್ಟೇ ಬಜಾರು; ಬಡವರಿಗೆ, ಸರಳಜೀವಿಗಳಿಗೆ ಹಿಟ್ಲರನ ಗ್ಯಾಸ್ ಛೇಂಬರು!
|
|