ಎಸ್. ರಂಗಧರ
ದೊಡ್ಡಮ್ನ ಗುಡಿಯೊಳಗೆ ದಡ್ಡನ್ನದೇನಿರೆ
ದೊಡ್ಮಂಚದೊಡತಿ ದ್ಯಾವವ್ವ ! ತೂಗಿದರೆ
ದಡ್ಡಂತ ಕೈಯ ಮುಗುದೇವು !!
ಅಮ್ಮನಿಲ್ಲದ ಜಗತ್ತು ಉಂಟೆ. ಈ ಜಗತ್ತೇ ಅಮ್ಮ. ಅವಳನ್ನಾಳುವ ಗಂಡಸರೆಂಬುವವರು ಪುಂಡರು. ಅವರು ಪುಂಡರಾಗಿರುವುದರಿಂದಲೇ ಈ ಭೂಮಿಯನ್ನು ಪಳಗಿಸಿ ಅಡ್ಡಾದಿಡ್ಡಿ ಬಳಸಿಕೊಳ್ಳುತ್ತಿದ್ದಾರೆ. ಕಂಕುಳಲ್ಲಿ ದೊಣ್ಣೆ ಕೈಯಲ್ಲಿ ಶರಣಾರ್ಥಿ ಥರದವರು. ನಮ್ಮ ಗ್ರಾಮ ಜಗತ್ತು ಕೂಡ ಇದರಿಂದ ಹೊರಗಲ್ಲ. ಅಮ್ಮ ಮುನಿದರೆ ಸೃಷ್ಟಿಯಿಲ್ಲ ಅಂತ ಅವರಿಗೆ ಗೊತ್ತು. ಮಳೆ ಬಂದರೆ ತಾನೆ ಬೆಳೆ, ಅನ್ನ- ಆಹಾರ, ವಸತಿ ಮತ್ತೆ ಸಂಸ್ಕ್ರತಿ. ಅಮ್ಮನನ್ನು ಓಲೈಸಿ, ಪಳಗಿಸಿ, ಪ್ರೀತಿಸಿ ಆಶ್ರಯ ಪಡೆಯುವ ಕ್ರಮವನ್ನೇ ಸಂಸ್ಕೃತಿ ಎಂದು ಕರೆಯಬಹುದು. ಅಮ್ಮ ದೇವರು-ಪ್ರೀತಿಯ ದೇವರು. ಪೋಷಕ ದೇವರು. ರಕ್ಷಕ ದೇವರು. ದೇವರ ಪರಿಕಲ್ಪನೆ ಹುಟ್ಟಿದ್ದೇ ಅಮ್ಮನಿಂದ. ಈ ದೇವರನ್ನು ’ಸೃಷ್ಟಿಕರ್ತ’ ಎನ್ನುತ್ತಾರೆ. ಇನ್ನೊಂದು ದೇವರೂ ಇದೆ. ಅದು ಹೆದರಿಸುವ ದೇವರು. ಅದು ಪ್ರಾಕೃತಿಕ ಅಬ್ಬರಗಳ ಭಯದಿಂದ ಹುಟ್ಟಿದ್ದು. ಹೆದರಿಕೆಗಾಗಿ ಆ ದೇವರನ್ನು ಪೂಜಿಸುತ್ತಾರೆ. ಆ ಪೂಜೆಯಲ್ಲಿ ಅಂತರಂಗ ಇಲ್ಲ. ಅದು ತೋರಿಕೆಯ ಪ್ರೀತಿ ಮತ್ತು ಭಯದ ಪ್ರೀತಿ. ಆದರೆ ಸಾಮಾನ್ಯ ಜನಗಳ ಪ್ರೀತಿ ಭಾವನಾತ್ಮಕವಾದುದು, ಅಂತರಂಗದ ತುಡಿತ, ದೇಹ ಮತ್ತು ಮನಸ್ಸನ್ನು ತುಂಬಿಕೊಳ್ಳುವುದೇ ಅದರ ಉದ್ದೇಶ. ನಮ್ಮ ಗ್ರಾಮ ದೇವತೆಗಳಿಗೆ ಸಲ್ಲಿಸುವ ಪೂಜೆ ಆ ಥರದ್ದು.
ಗ್ರಾಮದೇವತೆಗೆ ಊರ ಒಳಗೆ, ಮಧ್ಯಸ್ಥಾನದಲ್ಲಿ ಇರುತ್ತಾಳೆ. ಊರ ಮನೆಗಳು ಅವಳ ಸುತ್ತಲಿರುತ್ತವೆ, ತಾಯಿಯ ಸುತ್ತ ಮಕ್ಕಳಿರುವಂತೆ. ಉಳಿದ ದೇವತೆಗಳು ಸಾಮಾನ್ಯವಾಗಿ ಊರ ಮಗ್ಗುಲಲ್ಲೋ, ಹೊರಗೋ ಇರುತ್ತವೆ. ಲಾಡ್ಜ್ ನಲ್ಲಿ ರೂಮು ಹಿಡಿದಂತೆ. ಅದು ಉಳ್ಳ ಅಥವ ಯಜಮಾನ ದೇವರುಗಳ ಲಕ್ಷಣ. ಇದೊಂದು ಥರ ಸಾಮಾನ್ಯರಿಗಿಂತ ಭಿನ್ನವಾದ, ಸ್ಟಾಂಡರ್ಡ್ ಮೇನ್ಟೇನ್ ಮಾಡಿದಂತೆ! ಗ್ರಾಮದ ಅಮ್ಮ ದೇವತೆಯನ್ನು ’ಊರಮ್ಮ’ ಎಂದು ಕರೆದುಕೊಳ್ಳುತ್ತಾರೆ. ಅವಳಿಗೆ ದ್ಯಾವವ್ವ , ಲಕ್ಕವ್ವ , ಕಾಳವ್ವ ಎಂದೆಲ್ಲಾ ಒಂದು ಹುಟ್ಟು ಹೆಸರು ಇರುತ್ತದೆ. ಇವೆಲ್ಲಾ ಸ್ಥಳೀಯ ದೇವತೆಗಳು. ಇವುಗಳಿಗೆ ಗುಡಿಗಳು ಎಂಬ ವಾಸಸ್ಥಾನಗಳುಂಟು. ನೀವು ಗಮನಿಸಿ ನೋಡಿ! ಸರಸ್ವತವ್ವ, ಪಾರ್ವತವ್ವ, ಲಕ್ಷ್ಮವ್ವ, ಕುಂತ್ಯವ್ವ, ದ್ರೌಪತವ್ವ, ಸುಭದ್ರವ್ವ ಎಂಬ ಗುಡಿಗಳು ಇಲ್ಲ. ಗಂಡಸರಲ್ಲಿ ಈಶ್ವರನ ಗುಡಿ ಸಾಮಾನ್ಯ. ಅಲ್ಲಿ ಹನುಮಂತ ಬಂದು ನೆಲಸಿದ್ದಾನೆ. ಅವನು ಸೇವಕ. ಅವನಿಂದ ಯಾರಿಗೂ ಅಪಾಯವಿಲ್ಲ, ಅವ ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ಬ್ರಹ್ಮ, ವಿಷ್ಣುವಿಗೆ ಗುಡಿಗಳು ಇಲ್ಲ. ವಿಷ್ಣುವಿನ ಅವತಾರಗಳ ಸ್ವರೂಪದ ದೇವತೆಗಳಿಗೆ ದೇವಸ್ಥಾನಗಳುಂಟು. ಸ್ಥಾನ, ಮಾನ ಈ ದೊಡ್ಡವರಿಗೆ. ಗುಡಿಗುಂಡಾರಗಳು ಸಾಮಾನ್ಯ ದೇವತೆಗಳಿಗೆ! ಹೀಗೆ ದೇವತೆಗಳಿಗೂ ಆಸ್ತಿ, ವಸತಿ ಮತ್ತು ಪೂಜೆಗಳಲ್ಲಿ ವ್ಯತ್ಯಾಸ ಉಂಟು.
ಅಮ್ಮ ದೇವತೆಗಳಿಗೆ ಎರಡು ರೀತಿಯ ಪೂಜೆ ಉಂಟು. ಒಂದು ಕೂತ ಪೂಜೆ ಅಥವ ಗುಡಿಪೂಜೆ. ಎರಡನೆಯದು ಮೆರವಣಿಗೆ ಪೂಜೆ. ಕೂತ ಪೂಜೆ/ಗುಡಿಪೂಜೆಯನ್ನು ಗುಡಿಯ ಒಳಗೆ ಮಾಡಲಾಗುತ್ತದೆ. ಇಲ್ಲಿ ಹಣ್ಣುಕಾಯಿ ಮಾಡುವುದು, ಊದುಬತ್ತಿ, ಅರಿವೆ ಉಡಿಸುವುದು ಇತ್ಯಾದಿಗಳು ಸಾಮಾನ್ಯ. ಹಾಗೇ ವಿಶೇಷ ಸಂದರ್ಭಗಳದಲ್ಲಾದರೆ ತಳಿಗೆ ಪೂಜೆ ನಡೆಯುತ್ತದೆ. ಸಸ್ಯಾಹಾರಿ ದೇವತೆಯಾಗಿದ್ದರೆ ಮೊಸರನ್ನ ಪೂಜೆ ನಡೆಯುತ್ತದೆ. ಹಾಗೇ ಮಾಂಸಾಹಾರಿ ದೇವತೆಯಾಗಿದ್ದರೆ ಹೆಂಡ, ಖಂಡದ ಪೂಜೆಯೂ ಉಂಟು. ಒಟ್ಟಿನಲ್ಲಿ ಎಲ್ಲರಿಗೂ ಹಣ್ಣು ಕಾಯಿ, ಊದುಬತ್ತಿಯ ಪೂಜೆ ಸಾಮಾನ್ಯ. ಈ ಗ್ರಾಮದೇವತೆಗಳಿಗೆ ಸಹಾಯಕ ದೇವತೆಗಳು ಅಂತ ಇರುತ್ತವೆ. ಇವು ತಮ್ಮ ಒಡೆಯ ದೇವರನ್ನು ಊರ ತುಂಬ ಪ್ರತಿನಿಧಿಸಿ ಬರುತ್ತವೆ. ಗಾರುಡಿಗ, ಕರಿ, ಕೆಂಪು ಮತ್ತು ಹಳದಿ ಬಣ್ಣದ ಸೋಮಗಳು ಈ ವರ್ಗದವು. ಎಲ್ಲ ದೇವತೆಗಳಿಗೂ ಸಹಾಯಕ ದೇವತೆಗಳ ಸೌಲಭ್ಯ ಇಲ್ಲ. ಕ್ಲಾಸ್ ತ್ರೀ ಮತ್ತು ಕಾರಕೂನ ವರ್ಗದ ನೌಕರರಿಗೆ ಹೇಗೆ ಸೆಕ್ರೆಟರಿ ಅಥವಾ ಪಿ ಎ ಯ ಸೌಲಭ್ಯವಿರುವುದಿಲ್ಲವೋ ಹಾಗೆ! ಕೆಲವು ದೇವತೆಗಳಿಗೆ ಸಹಾಯಕ ದೇವತೆಗಳಿಲ್ಲದಿರುವುದರಿಂದ, ಆ ದೇವತೆಯನ್ನು ಪ್ರತಿನಿಧಿಸಿ ಗುಡಿಯ ಹೊರಗೆ ಓಡಾಡುವ-ಕುಣಿಯುವ ಪಾತ್ರಗಳು ಇಲ್ಲದಿರುವುದರಿಂತ ಗುಡಿಯ ಒಳಗೂ ಹೊರಗೂ ಮೆರವಣಿಗೆ ಮಾಡಿಸುವ ಕಾರಣಕ್ಕಾಗಿಯೆ ಹುಟ್ಟಿಕೊಂಡ ಕುಣಿತವೇ ಪೂಜಾಕುಣಿತ.
ಪೂಜಾ ಕುಣಿತ ಮಂಡ್ಯ , ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಪ್ರಚಲಿತ. ಬಿದಿರಿನಿಂದ ೫ ಅಡಿ ಉದ್ದ ಮತ್ತು ೪ ಅಡಿ ಅಗಲದಲ್ಲಿ ತಯಾರಾಗುವ ಚೌಕಾಕಾರದ ಒಂದು ಅಲಂಕೃತ ವಸ್ತುವೇ ದೇವತೆಯ ಪ್ರತಿನಿಧಿಯಾಗುತ್ತದೆ. ಈ ಈ ಬಿದಿರಿನ ತಟ್ಟೆ/ತಟ್ಟಿಯನ್ನು ಪೂಜೆ ತಟ್ಟೆ ಎನ್ನುತ್ತಾರೆ. ಈ ಪೂಜೆತಟ್ಟೆಗೆ ಗುಡಿಯ ಒಳಗೆ ನಡೆಯುವಂತೆ ಪೂಜೆ, ಗಂಟೆ, ಗಂಧದ ಕಡ್ಡಿ, ಮಂಗಳಾರತಿ ಥರದ ಕ್ರಿಯಾ ಚಟುವಟಿಕೆ ಇದಲ್ಲ. ಹೊರಗೆ ದೇವತೆಯ ಪ್ರತಿನಿಧಿಯಾಗಿ ಈ ತಟ್ಟೆ ಅಲಂಕೃತಗೊಂಡು ಮೆರವಣಿಗೆ ಮಾಡುತ್ತದೆ. ಇದನ್ನು ಹೊತ್ತು ಕುಣಿಯುವುದೆ ಪೂಜಾಕುಣಿತ. ಪೂಜೆತಟ್ಟೆಯ ಚೌಕದ ಮದ್ಯೆ ಒಂದು ಹಲಗೆ ಕಟ್ಟಿ ಅದರಲ್ಲಿ ಗ್ರಾಮ ದೇವತೆಯ ಬೆಳ್ಳಿ ಮುಖವಾಡವನ್ನು ಜೋಡಿಸಿರುತ್ತಾರೆ. ಆ ಚೌಕದ ಮೇಲು ಭಾಗದಲ್ಲಿ ಹಿತ್ತಾಳೆ ಅಥವ ಕಂಚಿನ ಐದು ಕಳಸಗಳಿರುತ್ತವೆ. ಕೆಳಭಾಗದಲ್ಲಿ ಅದನ್ನು ತಲೆ ಮೇಲೆ ಹೊತ್ತು ಕುಣಿಯಲು ಅನುಕೂಲವಾಗುವಂತೆ ಕುಂಚ ಅಥವ ಹಿತ್ತಾಳೆಯ ಗಿಂಡಿಯನ್ನು ಜೋಡಿಸಿರುತ್ತಾರೆ. ತಟ್ಟೆಯನ್ನು ಇಳಿಬಿಟ್ಟು ಸೀರೆಗಳು ಹಾಗು ಬಣ್ಣ ಬಣ್ಣದ ಹೂವುಗಳಿಂದ ಶೃಂಗರಿಸಿರುತ್ತಾರೆ. ತಟ್ಟೆಯ ಮಧ್ಯಭಾಗದಲ್ಲಿರುವ ದೇವತೆಯನ್ನು ಭಕ್ತರು ಕೊಟ್ಟ, ಕಡಗ, ಕಾಲಂದಿಗೆ, ಓಲೆ, ಸರ, ಮುಂತಾದವುಗಳಿಂದ ಶೋಭೆಗೊಳಿಸುತ್ತಾರೆ. ಈ ಪೂಜೆತಟ್ಟೆ ತುಂಬ ಭಾರ ಇರುವುದಿಲ್ಲ.
ಈ ತಟ್ಟೆಯನ್ನು ಮೂಲದೇವತೆಯ ಪರವಾಗಿ, ಮೆರೆಯುವ ದೇವತೆ ಎಂದು ಗಣಿಸಿ, ಭಕ್ತರ ಹರಕೆಯಂತೆ ಅದನ್ನು ಗುಡಿ ಅಥವಾ ಊರ ಬೀದಿಗಳಲ್ಲಿ, ಮೈದಾನಗಳಲ್ಲಿ ತಲೆ ಮೇಲೆ ಹೊತ್ತು ಕುಣಿಸಲಾಗುತ್ತದೆ. ಹಲಗೆಗಳ ಬಡಿತಕ್ಕೆ ಅನುಗುಣವಾಗಿ ಪೂಜೆಯನ್ನು ಹೊತ್ತ ಕಲಾವಿದ ನಾನಾ ಭಂಗಿಗಳಲ್ಲಿ ನೃತ್ಯಮಾಡುತ್ತಾನೆ. ತುಂಬ ಲವಲವಿಕೆಯಿಂದ ಕೂಡಿದ ಮತ್ತು ಸ್ಥಳವನ್ನು ಆವರಿಸಿ ಕುಣಿಯುವ ಪೂಜಾ ಕುಣಿತದ ಕ್ರಮ ನೋಡುಗರನ್ನು, ಭಕ್ತರನ್ನು ಆಕರ್ಷಿಸುತ್ತದೆ. ಪೂಜೆತಟ್ಟೆಯನ್ನು ಹೊರುವ ಕಲಾವಿದ ಬನೀನು ಅಥವಾ ಅಂಗಿ ತೊಟ್ಟು, ವೀರಗಾಸೆ ಹಾಕಿ ಕಾಲಿಗೆ ಗೆಜ್ಜೆ ಕಟ್ಟಿ ತಮಟೆ, ನಗಾರಿ, ಹಲಗೆಗಳ ಲಯಕ್ಕೆ ಅನುಗುಣವಾಗಿ ಬಗೆಬಗೆಯಾಗಿ ಕುಣಿಯುತ್ತಾನೆ. ಮುಖವನ್ನು ಮಾತ್ರ ಒಂದೇ ಕಡೆಗಿಟ್ಟುಕೊಂಡು ತಲೆ ಮೇಲಿನ ಪೂಜೆಯನ್ನು ಎಲ್ಲ ದಿಕ್ಕುಗಳಿಗೂ ತಿರುಗಿಸುತ್ತಾ ಕುಣಿಯುವುದು, ಪೂಜೆತಟ್ಟೆಯನ್ನು ಕೈಯಲ್ಲಿಟ್ಟು ತಿರುಗಿಸುವುದು, ಹೆಗಲ ಮೇಲಿಟ್ಟು ಕುಣಿಯುವುದು, ಹಗ್ಗದ ಮೇಲೆ-ಏಣಿಯ ಮೇಲೆ ಪೂಜೆತಟ್ಟೆಯನ್ನು ಹೊತ್ತೇ ಹತ್ತಿ, ನಡೆದು ಕುಣಿಯುವುದು ಚಮತ್ಕಾರವೆನಿಸುತ್ತದೆ. ತಲೆ ಮೇಲೆ ನಡೆದು ಅಷ್ಟು ದೊಡ್ಡ ಪೂಜೆ ಹೊತ್ತುಕೊಂಡೇ ಬಾಯಿಂದ ನೆಲದ ಮೇಲಿರುವ ನೋಟು ಎತ್ತುವುದು ಜನರನ್ನು ಆಕರ್ಷಿಸುತ್ತದೆ. ಒಮ್ಮೆ ಪೂಜೆತಟ್ಟೆಯನ್ನು ಹೊತ್ತ ಕಲಾವಿದ ಕುಣಿತ ಮುಗಿಯುವವರೆಗೂ ಅದನ್ನು ಕೆಳಗಿಳಿಸಲಾರ. ಪೂಜೆತಟ್ಟೆಯನ್ನು ತಲೆ ಮೇಲೆ ಹೊತ್ತು ಪೂಜಾ ಕುಣಿತ ಮಾಡುವ ಕಲಾವಿದ ಜನರ ಗೌರವಾದರಗಳಿಗೆ ಪಾತ್ರನಾಗುತ್ತಾನೆ. |