(ಪುಟ-೯) ಯೋಸೆಮಿಟಿ ಮತ್ತು ಮನದೊಳಗಿನ ದ್ವಂದ್ವ

ಬೇಲಾ ಮರವ೦ತೆ
 

ಶನಿವಾರ ಬಂತೆಂದರೆ ಸುತ್ತಾಡುವ ಪ್ಲಾನ್ ತಯಾರಾಗುತ್ತಿತ್ತು. ಸ್ಮಿತಾ-ಚಿನ್ಮಯ್ ಯಾವಾಗಲೂ ನಮ್ಮೊಡನೆ ಹೊರಡಲು ತಯಾರಿರುತ್ತಿದ್ದರು. ಹಾಗೇ ರಮ್ಯ-ಅಜಯ್ ಎಂಬ ಹೊಸ ಜೋಡಿ ನಮಗೆ ಪರಿಚಯವಾಗಿದ್ದರು. ಎಲ್ಲಾ ಕಿಟ್ಟಿ ಪಾರ್ಟಿಯ ಪ್ರಭಾವ! ನಮ್ಮ ಸುತ್ತಾಡುವ ಪ್ರೋಗ್ರಾಮ್ ಗೆ ನಾವೂ ರೆಡಿ ಅಂತ ಅಜಯ್-ರಮ್ಯ ಹೇಳಿದ್ದರು. ಅವರಿಗೆ ಆಷ್ಲೇಶಾ ಎಂಬ ಎರಡು ವರ್ಷದ ಮಗಳಿದ್ದಳು. ಮಗು ನೋಡಿಕೊಳ್ಳಲು ರಮ್ಯಳಿಗೆ ಸಹಾಯ ಮಾಡಲು ಅಜಯ್ ರ ತಾಯಿ ಕೃಷ್ಣವೇಣಿ ಬೆಂಗಳೂರಿನಿಂದ ಬಂದಿದ್ದರು. ನಾವೆಲ್ಲರೂ ಸೇರಿ ಅಜಯ್ ರ ಎಸ್ ಯು ವಿ ಯಲ್ಲಿ ಯೋಸೆಮಿಟಿ ಎಂಬ ಜಾಗಕ್ಕೆ ಹೊರಟೆವು. ನಾವಿದ್ದಲ್ಲಿಂದ ಯೋಸೆಮಿಟಿಗೆ ನಾಲ್ಕು ಗಂಟೆಗಳ ಡ್ರೈವ್. ನಮಗೆ ಬೇಕಾದ ಸಮಸ್ತವನ್ನೂ ಹಿಂದಿನ ದಿನವೇ ಪ್ಯಾಕ್ ಮಾಡಿಕೊಂಡು ಶನಿವಾರ ಬೆಳಿಗ್ಗೆ ಏಳು ಗಂಟೆಗೇ ಇನ್ನೂ ನಿದ್ದೆ ಮಾಡುತ್ತಿದ್ದ ಆಷ್ಲೇಶಾಳನ್ನೂ ಎತ್ತಿ ಹಾಕಿಕೊಂಡು ಹೊರಟುಬಿಟ್ಟೆವು. ನಿರಂತರ ಮೂರುವರೆ ಡ್ರೈವ್ ಮಾಡಿ ಯೋಸೆಮಿಟಿ ತಲುಪಿದೆವು. ನಾವು ಡ್ರೈವ್ ಮಾಡಿದ್ದ ದಾರಿ ಬಹಳ ಸುಂದರವಾಗಿತ್ತು. ಬೋಳು ಬೋಳು ಗುಡ್ಡಗಳು, ಕಂಡರಿಯದ ಹೂಗಳು, ಒಂಥರಾ ಹೂವಿನ ಬುಟ್ಟಿಯ ಥರ ಮೈ ತುಂಬಾ ಹೂ ತುಂಬಿಕೊಂಡ ಮೈದಾನಗಳು, ಆ ಮೈದಾನಗಳಲ್ಲಿ ಆಗಾಗ ನೋಡಲು ಸಿಗುತ್ತಿದ್ದ ನಮ್ಮ ಆಟೋ ಗಾತ್ರದ ಫಾರಮ್ ಹಸುಗಳು, ಅಲ್ಲಲ್ಲಿ ಸಿಗುತ್ತಿದ್ದ ಸ್ಟ್ರಾಬೆರ್ರಿ ಫಾರಮ್ ಗಳು, ಘಾಟ್ ಸೆಕ್ಷನ್..ಎಲ್ಲವೂ ಎಷ್ಟು ವೈವಿಧ್ಯಮಯವಾಗಿತ್ತೆಂದರೆ ಹೊತ್ತು ಕಳೆದಿದ್ದೇ ಗೊತ್ತಾಗಿರಲಿಲ್ಲ.

ಯೋಸೆಮಿಟಿ ಒಂದು ಬೃಹತ್ ಕಲ್ಕಣಿವೆ. ಅಲ್ಲಿಗೆ ಹೋಗುವ ದಾರಿಯುದ್ದಕ್ಕೂ ಪೈನ್, ಸಿಕೋಯ ಮುಂತಾದ ಎತ್ತರದ ಮರಗಳ ಕಾಡು, ಅಲ್ಲಿಂದ ಮುಂದೆ ಊಹಿಸಲೂ ಸಾಧ್ಯವಾಗದ ಗ್ರಾನೈಟ್ ಕಲ್ಕಾಡು! ಬೃಹತ್ತಾದ ಕಲ್ಲಿನ ರಾಕ್ಷನನೊಬ್ಬನನ್ನು ಜಾಣ ವೀರನೊಬ್ಬ ಕಡಿದು ತುಂಡು ತುಂಡು ಮಾಡಿ ಉರುಳಿಸಿದರೆ ರಾಕ್ಷಸನ ಕೈ-ಕಾಲುಗಳು ಎಲ್ಲೆಂದರಲ್ಲಿ ಚೆಲ್ಲಾಡಿದ್ದಾಗ ಹೇಗೆ ಕಾಣಬಹುದೋ...ಆ ಇಡೀ ಯೋಸೆಮಿಟಿ ಕಣಿವೆ ಹಾಗೆ ಕಾಣುತ್ತದೆ. ಹಾಗೇ ಆ ಜಾಗದಲ್ಲಿ ಹರಿಯುವ ಮರ್ಸಿಡ್ ಎಂಬ ನದಿಯ ಮಹಾ ಜಂಭದ ಹರಿವು ಆ ಇಡೀ ಕಣಿವೆಗೆ ಏನೋ ಒಂದು ಗಾಂಭೀರ್ಯ ಕೊಟ್ಟುಬಿಟ್ಟಿದೆ. ನಾವು ಅಲ್ಲಿಗೆ ಹೋಗಿದ್ದು ಬೇಸಿಗೆಗೂ ಮುಂಚಿತವಾಗಾದ್ದರಿಂದ ಆ ಕಲ್ಲಬಂಡೆಗಳ ಎಡೆಯಿಂದ ಧುಮುಕುತ್ತಿದ್ದ ಜಲಪಾತಗಳಿಗಿನ್ನೂ ಮುಪ್ಪು ಬಂದಿರಲಿಲ್ಲ. ಎಲ್ಲವೂ ರಭಸದಿಂದಲೇ ಸುರಿಯುತ್ತಿದ್ದವು. ಅಲ್ಲಿ ಒಂದು ಕಡೆ ನಾವು ನೋಡಿದ ’ಬ್ರೈಡಲ್ ವೇಲ್’ ಅಥವಾ ’ಮದುಮಗಳ ಶಿರದಿಂದ ಜಾರುವ ವೇಲ್’ ಎಂಬ ಹೆಸರಿನ ಜಲಪಾತವಂತೂ ತಾನೇ ವಧುವೇನೋ ಎಂಬಷ್ಟು ನಾಚಿಕೆ-ಸಲ್ಲಾಪದಿಂದ ಇಳಿಯುತ್ತಿತ್ತು. ಇಡೀ ಯೋಸೆಮಿಟಿ ಕಣಿವೆ ಸೌಂದರ್ಯಕ್ಕಿರುವ ಸವಿಯ ಜೊತೆಗೇ ಸೌಂದರ್ಯಕ್ಕಿರುವ ಗಾಂಭೀರ್ಯ ಅಥವಾ ಮ್ಯಾಗ್ನಾನಿಮಿಟಿ ಯನ್ನು ಸಾರಿ ಹೇಳುವಂತಿತ್ತು. ಮನುಷ್ಯ ಅದರ ಒಂದು ಕಣಕ್ಕೂ ಸರಿಸಮಾನವಾಗಲಾರ ಬಿಡಿ. ಈ ಇಡೀ ಕಣಿವೆ ಉಂಟಾಗಿದ್ದು ಮರ್ಸಿಡ್ ನದಿಯಿಂದಂತೆ. ಅದ್ಯಾವ ಸೀಮೆ ಪ್ರಳಯಾಂತಕ ಕೋಪ ಬಂದಿತ್ತೋ ಆ ನದಿಗೆ...ಆ ಪಾಟಿ ದೊಡ್ಡ ಕಣಿವೆ ಕೊರೆಯಲು!!

ನಮ್ಮ ಯೋಸೆಮಿಟಿ ಪಿಕ್ನಿಕ್ ತುಂಬಾ ಸುಂದರವಾಗಿತ್ತು. ಬೆಳಿಗ್ಗೆ ಅಲ್ಲಿ ತಲುಪಿದವರೇ ಹೊಟ್ಟೆಗೆ ಒಂದಷ್ಟು ತಿಂಡಿ ಕಳಿಸಿಬಿಟ್ಟು ಅಲ್ಲಿ ತಿಳಿಸಿದ್ದ ಒಂದಷ್ಟು ಸ್ಪಾಟ್ ಗಳನ್ನು ನೋಡಲು ಶುರುಹಚ್ಚಿಕೊಂಡಿದ್ದೆವು. ಜಲಪಾತ ಅದು ಇದು ನೋಡಲು ಅಲ್ಲಲ್ಲಿ ಸ್ವಲ್ಪ ’ಹೈಕ್’ ಮಾಡುತ್ತಿದ್ದೆವು (ಒಂದಷ್ಟು ಬೆಟ್ಟ ಹತ್ತುವುದನ್ನು ಇಲ್ಲಿ ಹೈಕಿಂಗ್ ಎನ್ನುತ್ತಾರಂತೆ). ಕಂಡ ಕಂಡಲ್ಲಿ ಕಣಿವೆಯ ಚಂದವನ್ನು ಸೆರೆ ಹಿಡಿಯಲು ಫೋಟೋ ಕ್ಲಿಕ್ಕಿಸುತ್ತಿದ್ದೆವು. ಯಾವ ಕೋನದಿಂದಲೂ ಇಡೀ ಯೊಸೆಮಿಟಿ ಒಟ್ಟಾರೆಯಾಗಿ ಯಾವುದೇ ಬಡಪಾಯಿ ಕ್ಯಾಮೆರಾಗಳಿಗೆ ದಕ್ಕುವಷ್ಟಿರಲಿಲ್ಲ. ಎಷ್ಟಾಗುತ್ತೋ ಅಷ್ಟನ್ನೂ ಕಣ್ಣಲ್ಲಿ ನೋಡಿ ಮನದಲ್ಲಿ ಹೀರಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೆವು. ಪ್ರಶಾಂತ ಎಂದಿನಂತೆ ಉತ್ಸಾಹದಲ್ಲಿ ಎಲ್ಲವನ್ನೂ ವಿವರಿಸುತ್ತಿರುತ್ತಿದ್ದ.

ಮಧ್ಯಾನ್ಹ ಪೈನ್ ಮರಗಳ ಸಂದಿಗಳಿಂದ ಕೆಳಗಿಳಿದು ಅಲ್ಲಿನ ನದೀ ತಿರಕ್ಕೆ ಬಂದು ಕ್ವಿಲ್ಟ್ ಹಾಸಿಕೊಂಡು ದಣಿವಾರಿಸಿಕೊಂಡು ಮಾಡಿ ಊಟ ಮಾಡಲು ಕುಳಿತೆವು. ಹುಡುಗರು ನೀರಿಗೆ ಕೈ ಕಾಲು ತಾಕಿಸಿ ಬರಲು ಹೊರಟರು. ನಾವೆಲ್ಲಾ ಮರದ ಕಾಂಡಗಳನ್ನು ಅಪ್ಪಿಕೊಂಡು, ಬಿದ್ದ ಮರವೊಂದರ ಬೊಡ್ಡೆಯ ಮೇಲೆ ಮಲಗಿ ಮಜ ಮಾಡುತ್ತಿದ್ದೆವು. ನಮ್ಮೊಂದಿಗಿದ್ದ ಕೃಷ್ಣಾ ಆಂಟಿ ಬಹಳ ಚುರುಕು. ಎಲ್ಲೂ ನೋವು-ಸುಸ್ತು ಎನ್ನದೇ ಹುರುಪಿನಿಂದ ಓಡಾದುತ್ತಿದ್ದರು. ಸಧ್ಯ ಅವರಿಗೆ ಮನೆಯಿಂದ ಹೊರಗೆ ಬಂದಿದ್ದೇ ಸಾಕಾಗಿತ್ತು. ಅದೇ ಅವರ ಸೊಸೆ ರಮ್ಯ ನನಗೆ ಶೂ ಕಚ್ಚಿದೆ, , ತಲೆ ಸಿಡಿಯುತ್ತಿದ್ದೆ, ಹೊಟ್ಟೆ ಹಸಿಯುತ್ತಿದೆ, ಕಾಲು ನೋವಾಗುತ್ತಿದೆ, ನೀರಡಿಕೆ ಆಗ್ತಿದೆ, ಕಣ್ಣುರಿಯುತ್ತಿದೆ ಅಂತ ಹತ್ತು ನಿಮಿಷಕ್ಕೊಮ್ಮೆ ಅಲಾರ್ಮ್ ಥರ ಏನಾದ್ರೂ ಒಂದನ್ನು ಹೇಳುತ್ತಲೇ ಬರುತ್ತಿದ್ದರು. ಕೃಷ್ಣಾ ಆಂಟಿಯಂತೂ ನನಗೂ ಅವಳಿಗೂ ಸಾಮೀಪ್ಯವೇ ಬೇಡ ಎನ್ನುವಂತೆ ರಮ್ಯರಿಂದ ಗಾವುದ ದೂರದಲ್ಲಿ ಅಥವಾ ನಮ್ಮ ಜೊತೆ ನಡೆಯುತ್ತಿದ್ದರು. ಪುಟ್ಟ ಆಷ್ಲೇಷಾಳನ್ನು ಒಬ್ಬೊಬ್ಬರಾಗಿ ಅಜಯ್, ಪ್ರಶಾಂತ್, ಚಿನ್ಮಯ್ ತಮ್ಮ ಬೆನ್ನ ಮೇಲೆ ಒಂದು ಬಗೆಯ ಬ್ಯಾಕ್ಪ್ಯಾಕ್ ಥರದ ಚೀಲದಲ್ಲಿ ಕೂಸುಮರಿ ಥರ ಕೂರಿಸಿಕೊಂಡು ಸುತ್ತುತ್ತಿದ್ದರು. ಅತ್ತೆ ಸೊಸೆಯರ ನಡುವಿನ ಡೈನಮಿಕ್ಸ್ ಸ್ವಲ್ಪ ಗರಮ್ ಎಂದು ನಮಗೆಲ್ಲರಿಗೂ ಗೊತ್ತಿತ್ತಾದ್ದರಿಂದ ಅವರಿಬ್ಬರಿಗೂ ಕಿಡಿ ಹತ್ತಿಕೊಂಡುಬಿಟ್ಟರೇ ಎಂದು ಹೆದರಿ ನಾವೇ ಅವರ ಮಧ್ಯೆ ಕಾವಲಾಗಿರುತ್ತಿದ್ದೆವು.
 
ಹುಡುಗರು ಇನ್ನೂ ಬಂದಿರಲಿಲ್ಲ. ರಮ್ಯ ನಿದ್ದೆ ಮಾಡುತ್ತಿದ್ದ ಆಷ್ಲೇಶಾಳನ್ನು ನೆರಳಿಗಾಗಿ ತಂದಿದ್ದ ಒಂದು ಸಣ್ಣ ಆಟದ ಟೆಂಟ್ ಒಳಗೆ ಮಲಗಿಸುತ್ತಿದ್ದರು. ನಾವು ಕಟ್ಟಿಕೊಂಡು ಬಂದಿದ್ದ ಊಟ ಇತ್ಯಾದಿಗಳನ್ನು ಬ್ಯಾಗ್ ಗಳಿಂದ ತೆಗೆದು ಹೊರಗಿಡುತ್ತಿದ್ದೆವು. ಅಮ್ಮಯ್ಯಾ! ಈ ಹುಳ ನನ್ನನ್ನು ಕಚ್ಚಲು ಬರ್ತಿದ್ದಾರೆ!! ಅಂತ ರಮ್ಯ ಜೋರಾಗಿ ಕಿರುಚಿಕೊಂಡರು. ಅವರ ಚೀರು ದನಿಯ ಕೂಗಿಗೆ ನಾವು ಬೆಚ್ಚಿ ಅದ್ಯಾವ ಭಯಂಕರ ಹುಳ ಇವರನ್ನು ಕಚ್ಚಲು ಬರ್ತಿದ್ದಾರೆ?! ಅಂತ ಅವರ ಕಡೆ ಧಾವಿಸಿದೆವು. ನಮ್ಮೂರಕಡೆ ಸೆಗಣಿ ಉಂಡೆ ಮಾಡಿಕೊಂಡು ಅದನ್ನು ಉರುಳಿಸಿಕೊಂಡು ಹೋಗುವ ಸಣ್ಣ ಹುಳಗಳನ್ನು ನೀವು ನೋಡಿರಬಹುದು; ನಮ್ಮ ಕೈ ಬೆರಳ ತುದಿಯಷ್ಟು ಗಾತ್ರದಿರುತ್ತದೆ. ಅಮೆರಿಕಾದು ಅದಕ್ಕಿಂತ ಒಂಚೂರು ದೊಡ್ಡದಿತ್ತೆನ್ನಿ. ಆ ಬಡಪಾಯಿ ಹೇಗೆ ಟೆಂಟ್ ಒಳಗೆ ಬಂದುಬಿಟ್ಟಿತ್ತೋ ತಪ್ಪಿಸಿಕೊಳ್ಳಲು ಪರದಾಡುತ್ತಾ ರಮ್ಯ ಕಡೆಗೆ ಬರುತ್ತಿತ್ತು. ಆಕೆ ಮಗುವನ್ನೂ ಹಿಡಿದುಕೊಂಡು ಟೆಂಟಿನ ಮೂಲೆಯಲ್ಲಿ ತುರುಕಿಕೊಂಡಿದ್ದರು. ಈ ಹುಳಕ್ಕೇ ರಮ್ಯ ಹೀಗೆ ಫಿಲ್ಮ್ ಹಿರೋಯಿನ್ ಥರ ಮೆಲೋಡ್ರಮ್ಯಾಟಿಕ್ ಆಗಿ ಕೂಗಿದ್ದಾ ಅಂತ ನನಗೂ ಸ್ಮಿತಾಗೂ ಆಶ್ಚರ್ಯ ಆಯಿತು. ಹುಳವನ್ನು ಬಿಸಾಕಿ ಬಂದೆವು. ಆಂಟಿ ಒಂಚೂರೂ ತಲೆ ಕೆಡಿಸಿಕೊಳ್ಳದೆ ಏನೋ ಮಾಡಿಕೊಳ್ಳುತ್ತಿದ್ದರು. ರಮ್ಯಾಗೆ ಕನ್ನಡ ಚನ್ನಾಗಿ ಬರುತ್ತಿರಲಿಲ್ಲ. ಅವರು ಮೂಲತಹ ಆಂಧ್ರದವರು, ಮದುವೆಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದ ತೆಲುಗು ಹುಡುಗನೊಂದಿಗೆ. ’ಮಳೆ ಬರ್ತಾಯಿದ್ದಾರೆ, ನಮ್ ಗಂಡ ಬರ್ತಾಯಿದೆ, ನಮ್ ಮದರ್ ಇನ್ ಲಾ ಮಾಡುತ್ತೆ’ ಅಂತೆಲ್ಲಾ ಕನ್ನಡದಲ್ಲಿ ಪುಂಖಾನುಪುಂಖವಾಗಿ ಮಾತಾಡಿ ಅವರ ಗಂಡ ಅತ್ತೆಗೆ ಮುಜುಗರ ಮಾಡಿಬಿಡುತ್ತಿದ್ದರು. ನಮಗೆ ಅವರ ಮಾತು ತಮಾಷಿಯಾಗಿರುತ್ತಿತ್ತು. ಹಾಗಂತ ಅವರಿಗೆ ತೆಲುಗೂ ಚನ್ನಾಗಿ ಬರುತ್ತಿರಲಿಲ್ಲ, ಪಕ್ಕಾ ಕಾನ್ವೆಂಟ್ ಇಂಗ್ಲಿಷ್ ಪಾರ್ಟಿ. ಸಿರಿವಂತಿಕೆಯಲ್ಲಿ ಬೆಳೆದಿದ್ದರಿಂದ ಸಿಕ್ಕಾಪಟ್ಟೆ ಸೋಮಾರಿ. ನಾಜೂಕು ನಲ್ಲೆ ಥರ ಆಡುತ್ತಿದ್ದರು. ಕೆಲವೊಮ್ಮೆ ಸ್ಮಿತಾ-ನಾನು ಅವರನ್ನು ಚನ್ನಾಗಿ ರೇಗಿಸಿಡುತ್ತಿದ್ದೆವು. ಅವರಿಗೆ ಬೇಜಾರಾಗುತ್ತಿರಲಿಲ್ಲ. ನಮ್ಮೊಟ್ಟಿಗೆ ತಾವೂ ನಕ್ಕು ಮಜ ಮಾಡುತ್ತಿದ್ದರು. ಅವರಿಗೂ ಅವರ ಅತ್ತೆ ಕೄಷ್ಣವೇಣಿಯವರಿಗೂ ಅಷ್ಟಕ್ಕಷ್ಟೇ. ಅತ್ತೆ ಅಮೆರಿಕಾಗೆ ಬಂದು ಎರಡು ತಿಂಗಳುಗಳಾಗಿತ್ತು. ಮನೆಯ ಒಂದು ರೂಮ್ ನಲ್ಲಿ ಅವರಿದ್ದರೆ ಇನ್ನೊಂದು ಭಾಗದಲ್ಲಿ ಇವರಿದ್ದು ಇಬ್ಬರೂ ಒಬ್ಬರನ್ನೊಬ್ಬರು ತಪ್ಪಿಸಿಕೊಳ್ಳುವಂತೆ ಓಡಾಡಿಕೊಂಡಿರುತ್ತಿದ್ದರು.

ರಮ್ಯಾಗೆ ಕೄಷ್ಣಾ ಆಂಟಿಯವರನ್ನು ಮೆಚ್ಚಿಸುವಂತೆ ಅಡಿಗೆ-ಕೆಲಸ ಮಾಡಲು ಬರುತ್ತಿರಲಿಲ್ಲ. ಅಡಿಗೆ-ಮನೆ ಕೆಲಸ ಮಾಡಲು ಇಷ್ಟವೂ ಆಗುತ್ತಿರಲಿಲ್ಲ. ಇಷ್ಟು ಒಳ್ಳೆ ಒಳ್ಳೆ ರೆಡಿ ಮೇಡ್ ಊಟ ಸಿಗುವಾಗ ಅಡಿಗೆ ಮಾಡಿ ಟೈಮ್ ಯಾಕೆ ವೇಸ್ಟ್ ಮಾಡಬೇಕು ಎಂದು ಅವರ ವಾದ. ಅವರಿಗೆ ಯಾವ ರೀತಿಯ ಕೆಲಸ ಮಾಡುವುದೂ ಇಷ್ಟವಿರಲಿಲ್ಲ. ಮಗುವನ್ನು ಡೇ ಕೇರ್ ಗೆ ಕಳಿಸಿ ಇಂಟರ್ ನೆಟ್ ಜಾಲಾಡುವುದು, ಮಾಲ್ ಗಳಿಗೆ ಹೋಗಿ ’ವಿಂಡೋ ಶಾಪಿಂಗ್’ ಮಾಡುವುದು ಅವರಿಗೆ ತುಂಬಾ ಇಷ್ಟ ಅಂತ ಅವರೇ ಹೇಳಿಕೊಳ್ಳುತ್ತಿದ್ದರು. ಈಗ ಆರು ತಿಂಗಳಿಗೆ ಅತ್ತೆ ಮನೆಗೆ ಬಂದಿರುವುದು ಅವರಿಗೆ ಭಯಂಕರ ಪೇಚಾಟವಾಗಿಬಿಟ್ಟಿತ್ತು. ಪ್ಲೀಸ್ ನಮ್ಮತ್ತೆಯನ್ನು ಇವತ್ತು ನಿಮ್ಮ ಮನೆಗೆ ಕರೆದುಕೊಂಡು ಹೋಗಿ, ನೀವು ಶಾಪಿಂಗ್ ಹೋದರೆ ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ಕಿಟ್ಟಿ ಪಾರ್ಟಿಯ ಎಲ್ಲಾ ಮಹಿಳಾಮಣಿಗಳಿಗೂ ದಂಬಾಲು ಬೀಳುತ್ತಿದ್ದರು. ಆಕೆ ಸೋಮಾರಿ. ಆದರೆ ಕೆಟ್ಟತನವಿರಲಿಲ್ಲ. ಚಿಕ್ಕಂದಿನಿಂದಲೂ ಕೆಲಸ ಮಾಡದೆ, ಬೋರ್ಡಿಂಗ್ ಸ್ಕೂಲ್ ಗಳಲ್ಲಿ ಓದಿಕೊಂಡು ಬೆಳೆದಿದ್ದರಿಂದ ಯಾರ ಬಗ್ಗೆಯೂ ಅಷ್ಟೇನೂ ಭಾವುಕತೆ, ಭಯ ಅಥವಾ ಅಟ್ಯಾಚ್ಮೆಂಟ್ ಇದ್ದಂತಿರಲಿಲ್ಲ. ಹಾಗೇ ಭಯಂಕರ ದುಡ್ಡು, ಆಸ್ತಿಯನ್ನು ವರದಕ್ಷಿಣೆಯನ್ನಾಗಿ ಕೊಟ್ಟು ಅಜಯ್ ರಂತಹ ಅಮೆರಿಕಾದಲ್ಲಿರುವ ಹುಡುಗನನ್ನು ಮದುವೆಯಾಗಿದ್ದಿದ್ದು ಕೆಲಸ ಮಾಡಲಿಕ್ಕಾ? ಅಂತಾ ಅವರೇ ಗೊಣಗಾಡಿಕೊಳ್ಳುತ್ತಿದ್ದರು. ಆಂಟಿ ತುಂಬಾ ಭಾವುಕರು. ’ಇವಳು ಯಾವ ಸೀಮೆ ಹೆಣ್ಣು ಮಗಳಮ್ಮಾ? ನನ್ನ ಮಗನಿಗೆ, ನಮಗೆ ಏನೂ ಮಾಡೋದು ಬೇಡ...ಆದ್ರೆ ತನಗೆ ಒಂದು ಮಗು ಇದೆ, ಅದಕ್ಕಾದ್ರೂ ಸ್ವಲ್ಪ ತಾಯ್ತನ ಕೊಡಬೇಕು ಅಂತನೂ ಅನ್ನಿಸಲ್ವಲ್ಲಾ ಇವಳಿಗೆ...’ ಎಂದು ದುಃಖಪಟ್ಟುಕೊಳ್ಳುತ್ತಿದ್ದರು. ನಾನು ಯಾಕಾದ್ರೂ ಇಲ್ಲಿಗೆ ಬಂದೆನೋ ಅಂತ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನ ಪಾರ್ಕಿನಲ್ಲಿ ಸಿಕ್ಕಾಗಲೋ, ನಮ್ಮ ಮನೆಗೆ ಬಂದಾಗಲೋ ತುಂಬಾ ಅತ್ತುಬಿಡುತ್ತಿದ್ದರು. ಅವರ ದುಃಖ ನೋಡಲು ತುಂಬಾ ಕಷ್ಟವಾಗುತ್ತಿತ್ತು. ಆದರೆ ನನಗೆ ಸಮಾಧಾನ ಹೇಳಲು ಬರುತ್ತಿರಲಿಲ್ಲ. ನನ್ನ ಅತ್ತೆ ಇಲ್ಲಿಗೆ ಬಂದಾಗ ಅವರು ಇರುವಷ್ಟು ದಿನ ನಾನು ಅವರನ್ನು ತುಂಬಾ ಚನ್ನಾಗಿ ನೋಡಿಕೊಳ್ಳಬೇಕು ಎಂದುಕೊಳ್ಳುತ್ತಿದ್ದೆ.

ಕೃಷ್ಣಾ ಆಂಟಿ-ರಮ್ಯ ಥರದ ಹಲವಾರು ಅತ್ತೆ ಸೊಸೆಯರು ನಮ್ಮ ಅಪಾರ್ಟ್ಮೆಂಟಿನಲ್ಲೇ ಇದ್ದರು. ಮದುವೆಯಾದ ತಕ್ಷಣ ಗಂಡನ ಮನೆಯವರ ಜೊತೆ ವಾಸವೇ ಮಾಡದೆ, ಸಾಂಪ್ರದಾಯಿಕ ಸೊಸೆಯ ಪಾತ್ರವನ್ನು ನಿಭಾಯಿಸದೆ ಬೇರೊಂದು ದೇಶಕ್ಕೆ ಬರುವ ನನ್ನ ಥರದ ಹುಡುಗಿಯರು- ತಿಂಗಳುಗಳ ಮಟ್ಟಿಗಷ್ಟೇ ತಮ್ಮೊಡನೆ ಇರಲು, ಮೇಲಾಗಿ ತಮಗೆ ಮನೆಕೆಲಸ-ಮಗು ಕೆಲಸ ಹೀಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಿಕೊಡಲು ಬರುವ ತಂದೆ ತಾಯಿ-ಅತ್ತೆ ಮಾವಂದಿರನ್ನು ಸಹಿಸಿಕೊಳ್ಳಲು ಯಾಕೆ ಅಷ್ಟು ಕಷ್ಟ ಪಡುತ್ತೇವೆ? ನಾನು ಯಾವಗಲೂ ಯೋಚನೆಗೆ ಬೀಳುತ್ತಿದ್ದೆ. ಎರಡು ತಲೆಮಾರುಗಳ ವಿಚಾರ-ಆಲೋಚನೆ ಭಿನ್ನವಾಗಬಹುದು, ಹಿರಿಯರು ಕಿರಿಯರ ತೀರ್ಮಾನಗಳಲ್ಲಿ-ಬದುಕಿನ ವಿಷಯಗಳಲ್ಲಿ ಭಾಗಿಯಾಗಲು ಬಯಸಬಹುದು, ಅವರಿಗೆ ಹೀಗೆ ಅಮೆರಿಕಾಗೆ ಬಂದು ಹೊರ ಜನರ ಸಂಪರ್ಕವಿಲ್ಲದೇ, ಸುದ್ದಿ-ಸಮಾಚಾರ-ಓಡಾಟ-ಒಡನಾಟಗಳಿಲ್ಲದೇ ಬದುಕುವ ನಮ್ಮ ಬದುಕೇ ಇಷ್ಟವಾಗದಿರಬಹುದು, ಅದರಲ್ಲೂ ಬದುಕಿಡೀ ಬೆಳಿಗ್ಗೆಯಿಂದ ಸಂಜೆವರೆಗೂ ಮನೆಯ ಪ್ರತಿಯೊಬ್ಬ ಸದಸ್ಯನ ಬೇಡಿಕೆಯನ್ನೂ ಪೂರೈಸಲು ಧಾವಂತ-ಗಡಿಬಿಡಿಯಲ್ಲೇ ಕಳೆದುಬಿಡುವ ಅಮ್ಮ-ಅತ್ತೆಯಂದಿರಿಗೆ ಬೆಳಿಗ್ಗೆ ಎದ್ದು ಅತ್ತೆ ಮಾವ-ಗಂಡನಿಗೆ ಬಿಸಿ ಬಿಸಿ ತಿಂಡಿ ಮಾಡಿಕೊಟ್ಟು, ಮನೆ ಕಸ ಗುಡಿಸಿ ದೇವರ ದೀಪ ಹಚ್ಚುವ ಸೊಸೆಯ/ಮಗಳ ಬದಲಿಗೆ "ನೀನು ಸೀರಿಯಲ್ ತಿಂದುಕೊಳ್ಳಪ್ಪಾ ನಾನು ರಾತ್ರಿ ಸಿನೆಮಾ ನೋಡುತ್ತಾ ಲೇಟ್ ಆಗಿ ಮಲಗಿದ್ದೆ...ಇನ್ನೂ ಸ್ವಲ್ಪ ನಿದ್ದೆ ಮಾಡಿಕೊಳ್ತೀನಿ...’ ಎಂದು ಬೆಳಿಗ್ಗೆ ಎಂಟು ಗಂಟೆಯವರೆಗೂ ಮಲಗುವ ಸೊಸೆಯಂದಿರು/ಮಕ್ಕಳ ಪರಿ ಗಾಬರಿ ಹುಟ್ಟಿಸಿಬಿಡಬಹುದು. ಇದೆಂಥ ಸ್ವಾರ್ಥಿ ಜೀವನ ಇವರದ್ದು ಎನ್ನಿಸಿಬಿಡಬಹುದು...

ಕೃಷ್ಣಾ ಆಂಟಿಗೂ ಆದೇ ಆಗಿದ್ದು. ರಮ್ಯ ಬೆಳಿಗ್ಗೆಯಿಂದ ಸಂಜೆವರೆಗೂ ದುಡಿಯಬೇಕು, ತಮ್ಮ ಸೇವೆ ಮಾಡಬೇಕು ಎಂದು ಅವರು ಬಯಸಿರಲಿಲ್ಲ. ಅಳುವ ಮಗುವನ್ನು ಟಿವಿ ಮುಂದೆ ಕೂರಿಸಿ, ಅದರ ಮುಂದಿಷ್ಟು ಕುರುಕಲು ತಿಂಡಿ ಹಾಕಿ ತನ್ನಷ್ಟಕ್ಕೆ ತಾನು ಓದುವುದರಲ್ಲೋ, ಇಂಟರ್ ನೆಟ್ ನಲ್ಲೋ, ಫೋನ್ ಕಾಲ್ ಗಳಲ್ಲೋ, ಮ್ಯಾನಿಕ್ಯೂರ್-ಪೆಡಿಕ್ಯೂರ್ ಗಳಲ್ಲೋ ಕಳೆದುಹೋಗುವ ಸೊಸೆ ಅವರಿಗೆ ದಿಗಿಲು ಬರಿಸಿದ್ದರು. ಹೀಗಾದರೆ ಅಮ್ಮ-ಮಕ್ಕಳು ಮಾತಾಡುವುದು ಹೇಗೆ? ಮಗುವಿಗೆ ಅಮ್ಮ ಕಲಿಸುವುದು ಯಾವಾಗ? ಹೀಗೆ ಚಿಕ್ಕ ವಯಸ್ಸಿನಲ್ಲೇ ಟಿವಿ ಹುಚ್ಚು ಹತ್ತಿಸಿದರೆ ಮುಂದೆ ಮಗುವಿನ ಮನಸ್ಸು ಹೇಗೆ ರೂಪಿತವಾಗುತ್ತದೆ? ಒಂದೇ ಸಮ ಕಣ್ಣ ಮುಂದಿರುವುದನ್ನು ನೋಡುತ್ತಾ, ಕೈಗೆ ಸಿಗುತ್ತಿರುವ ಕುರುಕಲನ್ನು ಮೆಲ್ಲುತ್ತಾ ಇದ್ದರೆ ಮಗು ಆಡುವುದು ಯಾವಾಗ? ವ್ಯಾಯಾಮ-ಬೆಳವಣಿಗೆ ಯಾವಾಗ? ಬರೀ ಇಂಗ್ಲಿಶನ್ನೇ ಕೇಳಿದರೆ ಮಗು ತನ್ನ ಭಾಷೆ ಕಲಿಯುವುದು ಯಾವಾಗ? ಅಮ್ಮನ ಜೊತೆ ಬಾಂಧವ್ಯ ಬೆಳೆಸಿಕೊಳ್ಳುವುದು ಯಾವಾಗ?

ಕೃಷ್ಣಾ ಆಂಟಿಯವರು ಕೇಳುತ್ತಿದ್ದ ಪ್ರಶ್ಣೆಗಳು ತುಂಬ ಸತ್ಯದ್ದು ಮತ್ತು ಆಳದ್ದು. ಮದುವೆಯಾಗಿ, ಮಡದಿಯಾಗಿ ಮತ್ತೆ ತಾಯಿಯಾಗಿ ಎಷ್ಟೆಲ್ಲಾ ಮಾಡುವುದಿದೆ! ಅದರ ಮಧ್ಯ ಮನುಷ್ಯಳಾಗಿ-ವ್ಯಕ್ತಿಯಾಗಿ ತನ್ನದ್ದು ಎಂಬ ಒಂದು ಗುರುತನ್ನೂ ಕಟ್ಟಿಕೊಳ್ಳಬೇಕಾದ ಅತ್ಯಗತ್ಯವಿದೆ!! ಅಬ್ಬಾ...ನಮ್ಮ ಮುತ್ತಜ್ಜಿ-ಅಜ್ಜಿ-ಅಮ್ಮಂದಿರು-ಚಿಕ್ಕಮ್ಮಂದಿರು ಇದನ್ನೆಲ್ಲಾ ಚನ್ನಾಗಿ ನಿಭಾಯಿಸಿಕೊಂಡು-ತಮ್ಮದೇ ಕೆಲಸ ಮಾಡಿಕೊಂಡು ಬದುಕಿದ ರೀತಿಯಲ್ಲಿ ನಮಗೂ ಬದುಕಿರಲು ಸಾಧ್ಯವೇ ಎಂದು ಯೋಚನೆ ಬಂದು ಒಂದು ಬಗೆಯ ಜವಾಬ್ದಾರಿಯ ಕುರಿತ ಭಯ ಹುಟ್ಟುತ್ತಿತ್ತು. ಅದೆಲ್ಲದರ ಮಧ್ಯೆ ನಮ್ಮ ಬದುಕು ಹೇಗಿದೆ ಎಂಬ ಕುತೂಹಲದಿಂದ ನಮ್ಮೊಂದಿಗಿರಲು ಬರುವ, ನಮಗೆ ಭಾರವಾಗಲು ಬಯಸದ, ನಮ್ಮ ಬದುಕಿನ ಸಂತೋಷದ ಕ್ಷಣಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿ ನನ್ನ ಮಗ-ಸೊಸೆ, ಮಗಳು-ಅಳಿಯ ಹೀಗೆ ಎಂದು ಹೆಮ್ಮೆಯಿಂದ ಬೀಗ ಬಯಸುವ ಅಪ್ಪ-ಅಮ್ಮ-ಅತ್ತೆ-ಮಾವಂದಿರನ್ನು ಐದಾರು ತಿಂಗಳು ಸಹಿಸಿಕೊಂಡು, ಅವರ ತಪ್ಪುಗಳನ್ನು ಕ್ಷಮಿಸಿಕೊಂಡು, ಅವರ ಕಟಕಿಮಾತಿಗೆ ಬೀಗ ಹಾಕಿಸಿ ಅವರೊಂದಿಗೆ ಸೌಹಾರ್ದದ ದಿನಗಳನ್ನು ಕಳೆಯುವುದು ಅಷ್ಟೋಂದು ಕಷ್ಟವೇ...?

ಬೇಲಾ....ಮತ್ತೆ ಡೇ ಡ್ರೀಮಿಂಗಾ?!!!! ಸರಿ ಬಿಡು. ನದೀ ತೀರ. ನಿಂಗೆ ಕನಸು ಕಾಣಲು ಸರಿಯಾಗಿದೆ!! ಎಂದು ಸ್ಮಿತಾ ಭುಜ ಅಲುಗಾಡಿಸಿದರು. ಹುಡುಗರು ಚನ್ನಾಗೇ ನೀರಾಟ ಆಡಿ ಬರುತ್ತಿದ್ದರು. ರಮ್ಯ ಮಗಳ ಪಕ್ಕ ಟೆಂಟ್ ನಲ್ಲಿ ತೂಕಡಿಸುತ್ತಾ ವಿರಮಿಸುತ್ತಿದ್ದರು. ಕೃಷ್ಣಾ ಆಂಟಿ ಚಂದದ ಪೈನ್ ಕೋನ್ ಗಳನ್ನೆಲ್ಲಾ ಆರಿಸುತ್ತಾ ಮರದಿಂದ ಮರಕ್ಕೆ ನಿಧಾನಕ್ಕೆ ವಾಕ್ ಮಾಡುತ್ತಿದ್ದರು. ಎಲ್ಲರೂ ಒಟ್ಟು ಕೂತು ಊಟ ಮಾಡಿದೆವು. ಆಂಟಿಯ ಕೃಪೆಯಿಂದ ಇಡ್ಲಿ-ಖಾರ-ಸೀ ಚಟ್ನಿ, ತರಕಾರಿಗಳ ಕಡಕ್ ಖಾರದ ಪಲಾವ್, ಮೊಸರನ್ನ, ಆಂಧ್ರದ ಮಾವಿನ ಉಪ್ಪಿನಕಾಯಿ ಎಲ್ಲವನ್ನೂ ತಿಂದು ಮಗುವಿನ ಜವಾಬ್ದಾರಿಯನ್ನು ಹುಡುಗರಿಗೊಪ್ಪಿಸಿ ನೀರಾಟಕ್ಕೆ ಹೊರಟೆವು.

ನೀರಿಗೆ ಕಾಲಿಟ್ಟ ಕೂಡಲೇ ಕರೆಂಟು ಹೊಡೆದ ಅನುಭವ! ಬಿಸಿಯ ಕರೆಂಟಲ್ಲ. ತಣ್ಣಗಿನ ನೀರು ಪಾದಗಳಿಗೆ ಸೋಕಿದಾಗ ಇಡೀ ಮೈನ ದಣಿವನ್ನು ಜೊಂಯ್ ಎಂದು ಎಳೆದುಕೊಂಡುಬಿಟ್ಟ ಹಾಗೆ! ರಮ್ಯ ಎಳೆ ಕೂಸಿನ ಹಾಗೆ ಕುಣಿದಾಡುತ್ತಿದ್ದರು; ಆವೇಶದಲ್ಲಿ ನೀರಿಗೆ ಬಿದ್ದು ಈಜುವುದೊಂದು ಬಾಕಿ. ಪಾದಗಳಿಗೆ ಸಿಗುತ್ತಿದ್ದ ಪುಟ್ಟ ಪುಟ್ಟ ಗೋಲಿ ಕಲ್ಲುಗಳು, ನೀರಿನ ಹಿತವಾದ ಹರಿವು, ಪೈನ್ ಮರಗಳ ಜಾಲರಿ ನೆರಳು ಇವೆಲ್ಲದರ ಸಾಂಗತ್ಯದಲ್ಲಿ ಎಷ್ಟು ಹೊತ್ತು ಆಟ ಆಡಿದೆವೋ, ನಡೆದಾಡಿದೆವೋ..’ಹೊರಡ್ತೀರೋ ಅಥವಾ ಇಲ್ಲೇ ಕ್ಯಾಂಪ್ ಮಾಡುವ ಐಡಿಯಾ ಇದೆಯೋ?’ ಚಿನ್ಮಯ್ ನಮ್ಮನ್ನು ಕರೆಯಲು ಬಂದಾಗ ಹೊರಡಲೇ ಬೇಕೆಂದು ಹೊರಟೆವು.
ಅಲ್ಲಲ್ಲಿ ಏಳೆಂಟು ಜಾಗಗಳಲ್ಲಿ ನಿಲ್ಲಿಸಿ, ಫೋಟೋ ತೆಗೆದುಕೊಂಡು ಮತ್ತೆ ಗಾಡಿ ಹತ್ತಿ ಮನೆಕಡೆ ಹೊರಟೆವು. ಯೋಸೆಮಿಟಿ ನಿನ್ನನ್ನು ನೋಡಲು-ಹೆಚ್ಚು ಹೊತ್ತು ಕಳೆಯಲು-ಕ್ಯಾಂಪ್ ಮಾಡಲು ಮತ್ತೆ ಬಂದೇ ಬರುತ್ತೇನೆ ಎಂದುಕೊಂಡು ಕಿಟಕಿಗೆ ವಾಲಿಕೊಂಡೆ.
 
(ಮುಂದುವರಿಯುವುದು)