ಈ ಫ್ರಾನ್ಸಿನ ಸುರಂಗದಲ್ಲೇ ಸಾವನ್ನಪ್ಪಿದ್ದಳಾ ಅನುಪಮ ಸುಂದರಿ!

ಟೋನಿ
ಇಂಗ್ಲೆಂಡಿನಲ್ಲಿ ಸರಿಯಾಗಿ ಏನನ್ನೂ ನೋಡಲು ನಮಗೆ ಸಾಧ್ಯವಾಗಿರಲಿಲ್ಲ. ಗೊತ್ತುಗುರಿಯಿಲ್ಲದೆ, ದಿಕ್ಕುದೆಸೆಯಿಲ್ಲದೆ ಅಶಿಸ್ತಿನಿಂದ ಅಲೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದ ನನ್ನಂತ ಅಲೆಮಾರಿಗೆ ಈ ತರಹದ ಪ್ಯಾಕೇಜು ಟೂರು ಇದೇ ಮೊದಲ ಸಲವಾಗಿತ್ತು. ಹಿಂದೆಂದೂ ಈ ರೀತಿಯ ಪ್ಯಾಕೇಜು ಪ್ರವಾಸದ ಅಭ್ಯಾಸವಿರದಿದ್ದರಿಂದ ಅದಕ್ಕೆ ಹೊಂದಿಕೊಳ್ಳುವುದಕ್ಕೆ ಕೊಂಚ ಹೆಣಗಾಡಬೇಕಾಗಿತ್ತು. ಅದೂ ವಿದೇಶ ಪ್ರವಾಸವಾದ್ದರಿಂದ ತಪ್ಪಿಸಿಕೊಂಡು ಅಲೆಯುವಂತಿರಲಿಲ್ಲ! ಅರ್ಧ ಲಂಡನ್ನನ್ನು ಬಸ್ಸಿನಲ್ಲಿಯೇ ಕೂತು ನಗರ ಪ್ರದಕ್ಷಿಣೆ ಮುಗಿಸಿಕೊಂಡು ಪ್ಯಾರಿಸಿನತ್ತ ಪಯಣಿಸತೊಡಗಿದ್ದೆವು. ನಮ್ಮ ಬಸ್ಸಿನ ಚಾಲಕ ಅರವತ್ತು ವರ್ಷದ ಆಲಿಸ್ಟೆರ್ ಎಂಬಾತ. ಬಹಳ ಅನುಭವಸ್ತ ಡ್ರೈವರ್. ಬಸ್ಸು ೧೨೦ ಕಿ.ಮೀಟರಿಗಿಂತಲೂ ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದರೂ ನಮಗೆ ಗೊತ್ತಾಗುತ್ತಿರಲಿಲ್ಲ. ಅದೇ ನಮ್ಮ ಊರಲ್ಲಿನ ಬಸ್ಸುಗಳಾಗಿದ್ದರೆ ಅದೆಷ್ಟು ಬಾರಿ ಜರ್ಕು ಹೊಡೆಯುತ್ತಿದ್ದೆವೋ ಲೆಕ್ಕವಿರುತ್ತಿರಲಿಲ್ಲ. ಇಲ್ಲಿನ ರಸ್ತೆಗಳಂತೂ ಅದ್ಭುತವಾಗಿದ್ದವು. ನಾವುಗಳು ಏಳೆಂಟು ದೇಶಗಳನ್ನು ಬಸ್ಸಿನಲ್ಲಿಯೇ ಸುತ್ತಾಡಿದ್ದರೂ ಕೊಂಚವೂ ಆಯಾಸವೆನಿಸಲಿಲ್ಲ. ಬಸ್ಸುಗಳೂ ಅಷ್ಟೇ ಚಂದವಿದ್ದವು. ಏರ್ ಕಂಡೀಷನ್, ಬಸ್ಸಿನಲ್ಲಿಯೇ ಪುಟ್ಟದೊಂದು ಟಾಯ್ಲೆಟ್, ಕಾಲು ನೀಡಿಕೊಂಡು ಆರಾಮಾಗಿ ಕೂತುಕೊಳ್ಳುವ ಆಸನದ ವ್ಯವಸ್ತೆಯಿದ್ದ ಸುಸಜ್ಜಿತವಾದ ಬಸ್ ಅದು. ಯದ್ವಾ ತದ್ವಾ ಚಲಾಯಿಸುವ ನಮ್ಮ ಬಸ್ಸುಗಳ ಚಾಲಕರಂತೆ ಎಲ್ಲೆಂದರಲ್ಲಿ ಸಡನ್ನಾಗಿ ಬ್ರೇಕ್ ಹೊಡೆಯದೆ, ಬಸ್ಸನ್ನು ಕೊಂಚವೂ ಜರ್ಕು ಹೊಡೆಸದೇ ಸರಾಗವಾಗಿ ಚಲಾಯಿಸುತ್ತಿದ್ದ ಅಲ್ಲಿನ ಚಾಲಕರು ಬಸ್ ಚಾಲನೆಯಲ್ಲಿ ನಿಷ್ಣಾತರಾಗಿದ್ದರು. ಅದಕ್ಕೆ ಪೂರಕವಾಗಿದ್ದುದು ಅಲ್ಲಿನ ರಸ್ತೆಗಳು. ನಾವು ಪ್ರಯಾಣಿಸಿದ ಐದಾರು ಸಾವಿರ ಕಿ.ಮೀಟರ್ ಪಯಣದಲ್ಲಿ ಎಲ್ಲಿಯೂ ಒಂದೇ ಒಂದು ರೋಡ್ ಹಂಪ್ಸ್ ಹೆದ್ದಾರಿಗಳಲ್ಲಿರಲಿಲ್ಲ. ಮುಖ್ಯವಾದ ಸರ್ಕಲ್ಲುಗಳಲ್ಲಿ ಫ್ಲೈ ಓವರ್ ಗಳು, ಸುರಂಗ ಮಾರ್ಗಗಳಿದ್ದವು. ಎಲ್ಲಿಯೂ ಮಾರ್ಗ ಮಧ್ಯೆ ಬಸ್ಸಿನ ಚಲನೆಗೆ ಅಡಚಣೆಯಾಗಿರಲಿಲ್ಲ ಅಷ್ಟು ನೀಟಾದ ಸಂಚಾರಿ ವ್ಯವಸ್ತೆ ಇಡೀ ಯೂರೋಪಿನಲ್ಲಿತ್ತು.

ನಾವು ಬ್ರಿಟನ್ನಿನಿಂದ ಪ್ಯಾರಿಸ್ಸಿನೆಡೆಗೆ ಪ್ರಯಾಣಿಸುತ್ತಿದ್ದಾಗ ನಮ್ಮ ಗೈಡ್ ಜ್ಯೂಜರ್ ಲುನ್ವಾಲ ಬಸ್ಸಿನಲ್ಲಿಯೇ ಇದ್ದ ಮೈಕಿನಲ್ಲಿ ನಮಗೆಲ್ಲಾ ಪ್ರೈಮರಿ ಸ್ಕೂಲಿನ ಮೇಷ್ಟ್ರಂತೆ ಕ್ಲಾಸು ತೆಗೆದುಕೊಳ್ಳತೊಡಗಿದ್ದ. ನೀವೆಲ್ಲಾ ಪ್ರಯಾಣ ಮುಗಿವವರೆಗೂ ಮೂರು ’ಪಿ’ ಗಳನ್ನು ಕಡ್ಡಾಯವಾಗಿ ನೆನಪಿಟ್ಟುಕೊಳ್ಳಬೇಕೆಂದೂ, ವಾಪಸ್ಸು ಇಂಡಿಯಾಕ್ಕೆ ವಿಮಾನ ಹತ್ತುವವರೆಗೂ ಈ ಮೂರು "ಪಿ’ ಗಳನ್ನು ಮರೆಯಬಾರದೆಂದು ಎಚ್ಚರಿಸಿದ. ನನಗೋ ಆ ಅಮೂಲ್ಯವಾದ ಮೂರು ’ಪಿ’ ಗಳಾದರೂ ಯಾವುದೆಂಬ ಕುತೂಹಲ. ಅವು ಈ ಬಸ್ಸಿನಲ್ಲಿದ್ದವಾ ಅಥವಾ ಆ ಮೂರು ’ಪಿ’ ಗಳನ್ನು ನಾವು ಎಲ್ಲಿಂದಲಾದರೂ ಕೊಂಡುಕೊಳ್ಳಬೇಕಾಗಿದೆಯೋ ಎಂಬುದನ್ನು ಯೋಚಿಸುತ್ತಲೇ ಇದ್ದೆನಾದರೂ, ಅದರ ಬಗ್ಗೆ ಹೇಳದೇ ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತೆ ಈ ಜ್ಯೂಜರ್ ಸಸ್ಪೆನ್ಸ್ ಸಿನಿಮಾದಂತೆ ಸುಮ್ಮನೇ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳತೊಡಗಿದ್ದುದನ್ನು ಕೇಳಿ ಅವನಿಗೆ ರೇಗಬೇಕೆನಿಸಿತ್ತು. ಆದರೇನು ಮಾಡುವಂತಿರಲಿಲ್ಲ ನಮ್ಮ ದೇಶದಲ್ಲಾಗಿದ್ದರೆ ’ಅದುಮ್ಕಂಡು ಹೇಳಯ್ಯಾ ಅದ್ಯಾವ ಘನಂದಾರಿ ಪಿ ಗಳು ಅಂತಾ ಇಷ್ಟೊಂದು ಪೀಠಿಕೆ ಹಾಕುತ್ತಿದ್ದೀಯ" ಅಂತಾ ರೇಗಬಹುದಿತ್ತು. ಆದರೆ ಈ ವಿದೇಶದಲ್ಲಿ ಅವನು ಹೇಳುವುದನ್ನು ನಮಗೆ ಆಸಕ್ತಿಯಿರಲಿ ಇಲ್ಲದಿರಲಿ ಕೇಳುವುದು ಅನಿವಾರ್ಯವಾಗಿತ್ತು. ಯಾಕೆಂದರೆ ಯಾವ ಯಾವ ದೇಶಗಳ ಕಾನೂನುಗಳು ಯಾವ ರೀತಿಯಾಗಿರುತ್ತವೋ, ಅಲ್ಲಿನ ರೀತಿ ರಿವಾಜುಗಳು ಹೇಗಿರುತ್ತವೆಂಬುದರ ಅರಿವು ನಮಗಿರದಿದ್ದರಿಂದ ಅವನು ಹೇಳಿದ್ದಕ್ಕೆಲ್ಲಾ ತಲೆಯಾಡಿಸುವುದೊಂದೇ ನಮಗಿದ್ದ ಆಯ್ಕೆಯಾಗಿತ್ತು. ಆತ ಮೂರು ’ಪಿ’ ಗಳ ಬಗ್ಗೆ ಹೇಳದೇ ಸತಾಯಿಸಿದ್ದರಿಂದ ರಕ್ತದೊತ್ತಡದ ಸಮಸ್ಯೆಯಿದ್ದ ಉತ್ತರ ಭಾರತದ ಕೆಲವು ವಯಸ್ಸಾದ ಪ್ರವಾಸಿಗರು’ ’ವೋ ತೀನ್ ಪಿ ಕ್ಯಾ ಬೋಲೋ ಯಾರ್’ ಎಂದು ಗಾಬರಿಯಿಂದ ಕೇಳತೊಡಗಿದ್ದರು. ಅವರಿಗೆ ಅವನು ಹೇಳಿದ್ದ ಮೂರು ’ಪಿ’ ಗಳಂತೂ ಯಕ್ಷ ಪ್ರಶ್ನೆಯಂತೆ ಕಾಡತೊಡಗಿದ್ದವು.

ಅಂತೂ ಅದು ಇದು ಮಾತಾಡುತ್ತಲೇ ಸುಮಾರು ಹೊತ್ತು ಕಾಲ ತಳ್ಳಿದ ಜ್ಯೂಜರ್ ಅಂತಿಮವಾಗಿ ಅವನು ಪ್ರಸ್ತಾಪ ಮಾಡಿದ್ದ ಮೂರು ’ಪಿ’ ಗಳ ವಿವರಣೆಯನ್ನು ಒಂದು ಗಂಟೆಯ ನಂತರವೇ, ಅದರಲ್ಲೂ ವಯಸ್ಸಾದ, ರಕ್ತದೊತ್ತಡದ ಮಂದಿ ತಾಳ್ಮೆ ಕಳೆದುಕೊಳ್ಳುವ ಹಂತ ತಲಪಿದಾಗ ಹೇಳತೊಡಗಿದ್ದ... ಆತನ ಪ್ರಕಾರ ಪಾಸ್ ಪೋರ್ಟ್, ಪೇಶನ್ಸ್, ಪಂಕ್ಚುಯಾಲಿಟಿ ಇವು ಮೂರು ಪರಮ ಇಂಪಾರ್ಟೆಂಟ್ ’ಪಿ’ ಗಳು! ನಾವು ನಮ್ಮ ಪ್ರವಾಸ ಮುಗಿಯುವವರೆಗೂ ಪಾಸ್ ಪೋರ್ಟ್, ಪೇಶನ್ಸ್, ಪಂಕ್ಚುಯಾಲಿಟಿ, ಈ ಮೂರನ್ನೂ ಹುಶಾರಾಗಿ ನೆನಪಿಟ್ಟುಕೊಳ್ಳಬೇಕೆಂದು ಹೇಳಿ ಎಲ್ಲರ ಕುತೂಹಲವನ್ನು ತಣ್ಣಗಾಗಿಸಿದ್ದ. ಪಾಸ್ ಪೋರ್ಟನ್ನು ಕಳೆದುಕೊಂಡರೆ ನಿಮ್ಮ ಪ್ರಯಾಣ ಅಂದಿಗೇ ಕೊನೆಯಾಗುತ್ತದೆಂದೂ ಅದನ್ನು ತೀರಾ ಜತನದಿಂದ ನೋಡಿಕೊಳ್ಳಬೇಕೆಂದೂ, ಸದಾ ನಿಮ್ಮ ಜತೆಯಲ್ಲೇ ಅದನ್ನಿಟ್ಟುಕೊಂಡಿರಬೇಕೆಂದ. ಇನ್ನು ಪೇಶನ್ಸ್. ಯಾವುದನ್ನೂ ತಾಳ್ಮೆಯಿಂದ ಕೇಳಬೇಕೆಂದೂ, ಪ್ರಯಾಣದ ಸಂಧರ್ಭದಲ್ಲಿ ಕೊಂಚ ಏರು ಪೇರಾದರೂ ಸಹನೆಯಿಂದ ವರ್ತಿಸಬೇಕೆಂದ. ಇನ್ನು ಮೂರನೇ ಪಿ ಎಂದರೆ ಪಂಕ್ಚ್ಯುಯಾಲಿಟಿ, ಅಂದರೆ ಸಮಯಕ್ಕೆ ಸರಿಯಾಗಿ ರೆಡಿಯಾಗುವುದು, ನೀಡಿದ್ದ ಸಮಯದೊಳಗೆ ಸುತ್ತಾಡಿ ಹಿಂದಿರುಗಬೇಕೆಂದೂ ಯಾರೇ ಒಬ್ಬರು ತಡ ಮಾಡಿದರೂ ಅದರ ಪರಿಣಾಮ ಇತರ ಎಲ್ಲ ಪ್ರಯಾಣಿಕರ ಮೇಲುಂಟಾಗುತ್ತದೆಂದೂ, ಒಬ್ಬರಿಂದ ಇಡೀ ತಂಡದವರು ತೊಂದರೆ ಅನುಭವಿಸುವಂತಾಗಬಾರದೆಂದೂ ಹೇಳಿ ಗಂಟೆಯಿಂದ ಸತಾಯಿಸಿದ್ದ ಮೂರು ಪಿ ಗಳ ಅರ್ಥವನ್ನು ವಿವರಿಸಿದ್ದ. ಅದರಲ್ಲಿ ಮೊದಲ ಪಿ ಅಂದರೆ ಪಾಸ್ ಪೋರ್ಟ್ ಅನ್ನು ಎಲ್ಲರೂ ಜತನದಿಂದ ಕಾಪಾಡಿಕೊಂಡರಾದರೂ ಇನ್ನೆರಡು ಪಿ ಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ನಾನು ಪಾಸ್ ಪೋರ್ಟ್ ಅನ್ನು ಪೌಚಿನೊಳಕ್ಕೆ ಹಾಕಿ ಶರ್ಟಿನೊಳಕ್ಕೆ ಲಿಂಗಾಯಿತರು ಸೊಂಟಕ್ಕೆ ಶಿವಲಿಂಗವನ್ನು ತಗಲಾಕಿಕೊಳ್ಳುವಂತೆ ತಗಲಾಕಿಕೊಂಡಿದ್ದರಿಂದ ಪ್ರವಾಸ ಮುಗಿವವರೆಗೂ ಅಗಾಗ್ಗೆ ಅದನ್ನು ಮುಟ್ಟಿನೋಡಿಕೊಳ್ಳುವುದನ್ನು ಅಭ್ಯಾಸ ಮಾಡಿಬಿಟ್ಟಿದ್ದೆ. ಆ ಅಭ್ಯಾಸದಿಂದಾಗಿ ಬೆಂಗಳೂರಿಗೆ ಹಿಂದಿರುಗಿದ ನಂತರವೂ ಒಂದೆರಡು ದಿನ ಸೊಂಟವನ್ನು ಮುಟ್ಟಿ ನೋಡಿಕೊಳ್ಳುವುದು ನಡೆದಿತ್ತು. ಹಾಗೇ, ಯೂರೋಪಿನ ಬಾತ್ ರೂಮಿನಲ್ಲಿರುವುದು ಬಾತ್ ಟಬ್ ಆದ್ದರಿಂದ ಅದರಿಂದ ನೀರು ಹೊರಚೆಲ್ಲಿದಲ್ಲಿ ಆ ನೀರು ಹೊರ ಹೋಗುವ ವ್ಯವಸ್ಥೆಯಿರಲಿಲ್ಲ. ಸ್ನಾನ ಮಾಡುವಾಗ ನೀರು ಚೆಲ್ಲದಂತೆ ಹುಶಾರಾಗಿ ಸ್ಕ್ರೀನ್ ಬಿಟ್ಟುಕೊಂಡು ಮಾಡಬೇಕೆಂದೂ, ನೀರು ಬಿದ್ದು ರೂಮಿನ ಒಳಗಡೆಯ ಕಾರ್ಪೆಟ್ ನೆನೆದರೆ ಅದಕ್ಕೆ ಸಾವಿರ ಯೂರೋ ದಂಡ ವಿಧಿಸುತ್ತಾರೆಂದೂ ಜ್ಯೂಜರ್ ಎಚ್ಚರಿಕೆ ನೀಡಿದ್ದ.


ಬ್ರಿಟನ್ನಿನಿಂದ ಹೊರಟ ನಮಗೆ ಪ್ರಯಾಣದ ಆಯಾಸವೇ ಆಗಲಿಲ್ಲ. ಮಾರ್ಗ ಮಧ್ಯೆ ಊಟಕ್ಕೆ ನಿಲ್ಲಿಸಿದಾಗ ಮಧ್ಯಾನ್ಹವಾಗಿತ್ತು. ಪ್ರವಾಸಿ ಸಂಸ್ಥೆಯದು ಬೆಳಗಿನ ಉಪಹಾರ ಹಾಗೂ ರಾತ್ರಿಯ ಊಟದ ವ್ಯವಸ್ಥೆಯಿತ್ತು. ಮಧ್ಯಾಹ್ನದ ಊಟವನ್ನು ನಾವೇ ಮಾಡಿಕೊಳ್ಳಬೇಕಿತ್ತು. ಹೈವೇಯಲ್ಲಿನ ಪೆಟ್ರೋಲು ಬಂಕುಗಳಲ್ಲಿಯೇ ಸುಸಜ್ಜಿತವಾದ ಹೋಟೆಲುಗಳಿದ್ದವು. ನಾವು ಕೆಲವರು ಅಲ್ಲಿಯ ತಿನಿಸುಗಳನ್ನು ರುಚಿ ನೋಡಿದೆವು. ಅದೇಕೋ ಅಲ್ಲಿನ ತಿನಿಸುಗಳು ನಮಗೆ ಒಗ್ಗಲಿಲ್ಲ. ಬೆಳಿಗ್ಗೆ ತಿಂಡಿ ತಿನ್ನುವಾಗಲೇ ಒಂದಷ್ಟು ಹಣ್ಣುಗಳನ್ನು, ಬ್ರೆಡ್ಡನ್ನು ಎತ್ತಿಟ್ಟುಕೊಂಡಿದ್ದರಿಂದ ಅವುಗಳನ್ನೇ ತಿನ್ನುವುದನ್ನು ಪ್ರವಾಸದುದ್ದಕ್ಕೂ ಅಭ್ಯಾಸ ಮಾಡಿಕೊಂಡಿದ್ದೆವು. ಬ್ರಿಟನ್ನಿಗೂ, ಫ್ರಾನ್ಸಿಗೂ ನಡುವೆ ಇರುವುದು ಅಟ್ಲಾಂಟಿಕ್ ಸಾಗರ. ಈ ಅಟ್ಲಾಂಟಿಕ್ ಸಾಗರವನ್ನು ದಾಟಿ ನಾವು ಪ್ಯಾರಿಸ್ ತಲುಪಬೇಕಿತ್ತು. ನಮ್ಮ ಬಸ್ಸು ಫೋಕ್ ಸ್ಟೋನ್ ಎಂಬಲ್ಲಿಗೆ ಬಂದಾಗ ಅದನ್ನು ರೈಲಿನೊಳಕ್ಕೆ ಸಾಗಿಸಿ ನಿಲ್ಲಿಸಿಲಾಯಿತು. ಬ್ರಿಟನ್ನಿನ ಫೋಕ್ ಸ್ಟೋನ್ ನಿಂದ ಫ್ರಾನ್ಸಿನ ಕಲಾಯಿಸ್ ವರೆಗೆ ಸುಮಾರು ೫೦ ಕಿ.ಮೀಟರ್ ದೂರ ಅಟ್ಲಾಂಟಿಕ್ ಸಾಗರದ ಅಡಿಯಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಲಾಗಿತ್ತು. ಈ ಯೂರೋ ಟನಲ್ ನಲ್ಲಿ ಪ್ರಯಾಣ ಮಾಡುವುದೊಂದು ಅವಿಸ್ಮರಣೀಯ ಅನುಭವ. ನಾವು ಸಮುದ್ರದಾಳದಲ್ಲಿ ಪಯಣಿಸುತ್ತಿರುವಾಗ ನಮಗೆ ಮೇಲೆ ನೀರು ಬೀಳುತ್ತಿರುವ ಶಬ್ಧ ಕೇಳಿಸುತ್ತಿತ್ತು. ನಮ್ಮನ್ನು ಬಸ್ಸಿನ ಸಮೇತ ಹತ್ತಿಸಿಕೊಂಡಿದ್ದ ರೈಲು ವೇಗವಾಗಿಯೇ ಸಮುದ್ರದಾಳದ ಸುರಂಗದಲ್ಲಿ ಸಂಚರಿಸಿತ್ತು. ಇಲ್ಲಿ ಫ್ರಾನ್ಸಿನಿಂದ ಬ್ರಿಟನ್ನಿಗೆ, ಬ್ರಿಟನ್ನಿನಿಂದ ಫ್ರಾನ್ಸಿಗೆ ಕಾರು, ಬೈಕು, ಬಸ್ಸುಗಳಲ್ಲಿ ಪ್ರಯಾಣ ಮಾಡುವವರೆಲ್ಲಾ ಈ ಸುರಂಗದಲ್ಲಿಯೇ ಸಂಚರಿಸಬೇಕಾಗಿತ್ತು. ಅವರೆಲ್ಲಾ ಇಂತಿಷ್ಟು ಹಣ ತುಂಬಿ ಇಲ್ಲಿನ ರೈಲುಗಳಲ್ಲಿ ತಮ್ಮ ವಾಹನಗಳನ್ನು ಹತ್ತಿಸುತ್ತಿದ್ದುದು ಸಾಮಾನ್ಯವಾಗಿತ್ತು. ಆಶ್ಚರ್ಯವೆಂದರೆ ನಾವು ಸಮುದ್ರದಾಳದ ಸುರಂಗ ಮಾರ್ಗದಲ್ಲಿ ಪಯಣಿಸಿದರೂ ಮೇಲೆ ಬಂದಾಗ ನಮಗೆ ಸಮುದ್ರ ಗೋಚರಿಸಲಿಲ್ಲ. ಸಮುದ್ರದ ಫರ್ಲಾಂಗುಗಳ ಹಿಂದೆಯೇ ಸುರಂಗವನ್ನು ಕೊರೆದು ಮಾರ್ಗವನ್ನು ನಿರ್ಮಿಸಿದ್ದರಿಂದ ನಮಗೆ ಸಮುದ್ರ ನೋಡಲೂ ಸಿಗಲಿಲ್ಲ.

ಇನ್ನು ಪ್ಯಾರಿಸ್ಸು ತಲಪುವಾಗ ರಸ್ತೆಯಲ್ಲಿ ಹಲವಾರು ಸುರಂಗದೊಳಗೆ ಪಯಣಿಸಿದ್ದೆವು. ಅವುಗಳು ಮೈಲುಗಳಷ್ಟು ಉದ್ದವಿದ್ದವು. ಆ ಸುರಂಗದೊಳಗೆ ಪಯಣಿಸುವುದೇ ಖುಷಿಯೆನಿಸುತ್ತಿತ್ತು. ಅದೇಕೋ ಇಲ್ಲಿನ ಸುರಂಗ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ನೆನಪಾದವಳು ರಾಜಕುಮಾರಿ ಡಯಾನಾ. ಈ ಸುಂದರ ಸುರಂಗ ಮಾರ್ಗ ಆ ಅನುಪಮ ಸುಂದರಿಯನ್ನು ಬಲಿ ತೆಗೆದುಕೊಂಡಿತ್ತು. ಬ್ರಿಟನ್ನಿನ ರಾಜಕುಮಾರನನ್ನು ಮದುವೆಯಾಗಿದ್ದ ಈ ಬೆಳದಿಂಗಳ ಬಾಲೆ ಮದುವೆಯಾದ ಹದಿನೈದು ವರ್ಷಕ್ಕೆ ಬ್ರಿಟಿನ್ನಿನ ರಾಜಮನೆತನದ ಅಷ್ಟೈಶ್ವರ್ಯವನ್ನೂ ಎಡಗಾಲಲ್ಲಿ ಒದ್ದು ತನ್ನಿಬ್ಬರು ಮಕ್ಕಳನ್ನೂ ಲಂಡನ್ನಿನರಮನೆಯಲ್ಲಿ ಬಿಟ್ಟು, ರಾಜಕುಮಾರನ ಸಂಬಂಧವನ್ನು ಕಡಿದುಕೊಂಡು ಹೋಗಿ ದೋದಿ ಅಲ್ ಫಯಾದನ ತೆಕ್ಕೆಗೆ ಬಿದ್ದಿದ್ದಳು. ಹಾಗೆ ಸಂಬಂಧವನ್ನು ಕಳಚಿಕೊಂಡು ವರ್ಷವಾಗುವಷ್ಟರಲ್ಲೇ ತನ್ನ ಪ್ರಿಯಕರನೊಂದಿಗೆ ಇದೇ ಸುರಂಗದಲ್ಲಿ ಸಾವನ್ನಪ್ಪಿದ್ದಳಾಕೆ. ಡಯಾನ ಮದುವೆಯಾದಾಗಿನಿಂದ ಸಾಯುವವರೆಗೂ ಸುದ್ದಿಯಲ್ಲಿದ್ದಾಕೆ . ಹದಿನಾರು ವರ್ಷಗಳ ಕಾಲ ಈಕೆಯ ಬಗೆಗಿನ ಗಾಸಿಪ್ ಗಳು ಜಗತ್ತಿನಾದ್ಯಂತ ಮಾಧ್ಯಮಗಳಲ್ಲಿ ದಿನನಿತ್ಯ ಬಿತ್ತರವಾಗುತ್ತಿದ್ದವು. ಆಕೆಯಷ್ಟು ಪ್ರಚಾರದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಇಂದಿಗೂ ಅಪರೂಪವೇ. ಆ ಅತಿಯಾದ ಜನಪ್ರಿಯತೆ-ಪ್ರಚಾರವೇ ಇಂದು ನಾವುಗಳು ಪ್ರಯಾಣಿಸುತ್ತಿದ್ದ ಒಂದು ಸುರಂಗದಲ್ಲಿ ಅವಳನ್ನು ಸಾವಿನ ದವಡೆಗೆ ತಳ್ಳಿತ್ತು. ಈ ಫ್ರೆಂಚರಿಗೆ ಲಂಡನ್ನಿನ ಅರಸೊತ್ತಿಗೆಯನ್ನು ಅವಮಾನಿಸುವುದರಲ್ಲಿ ಅದೆಂಥದೋ ವಿಕೃತ ಸಂತೋಷವಿತ್ತೆಂದು ಕಾಣುತ್ತದೆ. ಡಯಾನ ಅರಸೊತ್ತಿಗೆಯನ್ನು ಧಿಕ್ಕರಿಸಿ ಬಂದು ಇವರದೇ ದೇಶದಲ್ಲಿದ್ದ ದೋದಿ ಫಯಾದ್ ನೊಂದಿಗೆ ಸುತ್ತಾಡುವುದನ್ನು ಅತೀ ರಂಜನೀಯವಾಗಿ ಮಾದ್ಯಮಗಳಲ್ಲಿ ಬಣ್ಣಿಸತೊಡಗಿದ್ದರು. ಆ ಮೂಲಕ ಬ್ರಿಟನ್ನಿನ ಜನತೆಗೆ ಮುಜುಗರವಾಗುವಂತೆ ಮಾಡಿ ಆನಂದ ಅನುಭವಿಸುತ್ತಿದ್ದವರು ಕೊನೆಗೆ ಆ ಸುಂದರಿಯ ಸಾವಿಗೂ ಕಾರಣರಾಗಿದ್ದರು.

ಸಂಜೆ ೭ ಗಂಟೆಗೆ ಜ್ಯೂಜರ್ ನಮ್ಮನ್ನು ರೆಸಿಡೆನ್ಸಿ ಹೋಟೆಲಿಗೆ ಕರೆದುಕೊಂಡು ಹೋದ. ತುಂಬಾ ನೀಟಾಗಿದ್ದ ಸ್ಟಾರ್ ಹೋಟೆಲ್ ಅದು. ಹೋಟೆಲಿನ ಪಕ್ಕದಲ್ಲಿಯೇ ಇದ್ದ ಭೋಜನ್ ಎಂಬ ಹೆಸರಿನ ಹೋಟೆಲಿನಲ್ಲಿ ಊಟದ ವ್ಯವಸ್ಥೆಯಿತ್ತು. ಅದು ಭಾರತೀಯರ ಹೋಟೆಲ್ ಎಂದು ಜ್ಯೂಜರ್ ಹೇಳಿದ. ಅಲ್ಲಿ ಒಳಗೆ ಹೋಗಿ ನೋಡಿದರೆ ಬೆಂಗಳೂರಿನಲ್ಲಿರುವ ಮಾರ್ವಾಡಿಗಳೇ ಅಧಿಕ ಸಂಖ್ಯೆಯಲ್ಲಿ ಸೇರುವ ಡಿಸ್ಕೋ ತೆಕ್ ಇದ್ದಹಾಗಿತ್ತು. ಅಲ್ಲಿ ಉತ್ತರ ಭಾರತೀಯ ಗಂಡಸರು ಹೆಂಗಸರೆಲ್ಲರೂ ಕುಡಿದು, ಕುಣಿದು ಕುಪ್ಪಳಿಸುತ್ತಿದ್ದರು. ಅಂದು ಶನಿವಾರವಾದ್ದರಿಂದ ವೀಕೆಂಡ್ ಪಾರ್ಟಿಯಿರುವುದು ಸಹಜವೆಂದು ಅಲ್ಲಿಯ ಬಾರಿನಲ್ಲಿ ಸಪ್ಲೈ ಮಾಡುತ್ತಿದ್ದ ಹುಡುಗನೊಬ್ಬ ಹಿಂದಿಯಲ್ಲಿ ಹೇಳಿದ. ನಾನು ಕೈ ತೊಳೆಯಲು ಹೋದರೆ ಟಾಯ್ಲೆಟ್ ನಲ್ಲಿ ಹುಡುಗನೊಬ್ಬ ಗುಂಡು ಜಾಸ್ತಿಯಾದ ಪರಿಣಾಮವಾಗಿ ಉಚ್ಚೆ ಹೊಯ್ಯಲೆಂದು ನಿಂತಿದ್ದವ ಹಾಗೇ ಗೋಡೆಗೆ ಒರಗಿಕೊಂಡು ನಿಂತುಬಿಟ್ಟಿದ್ದ. ಅಲ್ಲಿದ್ದವರೆಲ್ಲಾ ಪಾರ್ಟಿಯ ಮೂಡಿನಲ್ಲಿ ಕುಣಿಯುತ್ತಿದ್ದರಿಂದ ಅವರ್ಯಾರೂ ಈತನನ್ನು ಗಮನಿಸಿರಲಿಲ್ಲ. ಅಲ್ಲಿಯ ಸಪ್ಲೆಯರ್ ಬಳಿ ಆ ಹುಡುಗನ ಸ್ಥಿತಿಯನ್ನು ಹೇಳಿದ್ದರಿಂದ ಅವರೊಂದಿಬ್ಬರು ಅವನನ್ನು ಕರೆತಂದು ಛೇರಿನ ಮೇಲೆ ಕೂರಿಸಿದರು. ನಮಗೂ ಅಂದು ರಾತ್ರಿ ಪ್ಯಾರಿಸ್ಸಿನಲ್ಲಿ ಊಟದ ಜತೆ ಜತೆಗೇ ಬಿಟ್ಟಿ ಮನರಂಜನೆಯೂ ಸಿಕ್ಕಿತ್ತು. ಬೆಳಿಗ್ಗೆ ಬೇಗನೇ ಎದ್ದು ೭ ಗಂಟೆಗೆಲ್ಲಾ ಪ್ಯಾರಿಸ್ಸಿನ ನಗರ ಪ್ರದಕ್ಷಿಣೆಗೆ ಹೊರಡಲು ರೆಡಿಯಾಗಿರಬೇಕೆಂದೂ ಜ್ಯೂಜರ್ ಹೇಳಿದ. ಅಚ್ಚುಕಟ್ಟಾಗಿದ್ದ ರೂಮಿನಲ್ಲಿ ಕೊಂಚಹೊತ್ತು ಟೀವಿ ನೋಡುವಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದ ಪ್ರೊಫೆಸರರ ಗೊರಕೆಯ ಸದ್ದು ಟೀವಿ ವಾಲ್ಯೂಮಿಗಿಂತ ಜಾಸ್ತಿಯಾಗಿದ್ದರಿಂದ ಟೀವಿ ಆರಿಸಿ ಮಲಗಿದ್ದೆ.