ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರ್ ನೆಲಸಮವಾಗಿ ಸೆಪ್ಟೆಂಬರ್ ೧೧ ರ್ಕ್ಕೆ ೯ ವರ್ಷಗಳಾಗುತ್ತವೆ. ಆ ಜಾಗದಲ್ಲಿ ಅಂದು ಸತ್ತ ಅಮಾಯಕ ಜನರ ನೆನಪಿಗಾಗಿ ಈಗ ಗ್ರೌಂಡ್ ಜೀರೊ ಎಂಬ ಸ್ಮಾರಕವೊಂದು ನಿರ್ಮಾಣವಾಗಿದೆ. ಮುಂದೊಂದು ದಿನ ಅದೇ ಜಾಗದಲ್ಲಿ ವಿಶಿಷ್ಟವಾದ ಹಾಗೂ ಎತ್ತರವಾದ ಸ್ಮಾರಕವೊಂದನ್ನು ಕಟ್ಟುವ ಗಂಭೀರ ಯೋಚನೆಗಳಿವೆ. ಆದರೆ ಅದೆಲ್ಲದರ ಮಧ್ಯದಲ್ಲಿ ಈಗ ಹೊಸದೊಂದು ಗುಲ್ಲು! ಈ ಗುಲ್ಲು ಈ ಬಾರಿ ಅಮೆರಿಕಾದ ಜನರನ್ನು, ಅವರ ಅಭಿಪ್ರಾಯಗಳನ್ನು ಭಾಗ ಭಾಗಗಳಲ್ಲಿ ಕತ್ತರಿಸುತ್ತಿದೆ.
ವರ್ಲ್ಡ್ ಟ್ರೇಡ್ ಸೆಂಟರ್ ನೆಲಸಮವಾದ ಜಾಗಕ್ಕೆ ಪಕ್ಕದಲ್ಲೇ ಮಸೀದಿಯೊಂದನ್ನು ಕಟ್ಟುವ ಯೋಜನೆ ನಡೆಯುತ್ತಿದೆಯೆಂದು ಧಾರ್ಮಿಕ ನಾಯಕರು ಒಬಾಮ ಸರ್ಕಾರವನ್ನು ತಾರಾಮಾರಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ರೇಡಿಯೋ ಟಾಕ್ ಶೋಗಳಲ್ಲಿ, ಟಿವಿ ಚಾನೆಲ್ಗಳಲ್ಲಿ, ಕಟ್ಟಾ ಕ್ರೈಸ್ತ ಅಮೆರಿಕರು ಒಬಾಮ ಸ್ವತಃ ಮುಸಲ್ಮಾನನಾದ್ದರಿಂದ ಈ ಯೋಜನೆಯನ್ನು ತಡೆಯದೆ ಅಮೆರಿಕಾದ ಜನತೆಗೆ ದ್ರೋಹ ಮಾಡುತ್ತಿದ್ದಾರೆಂಬ ಮಟ್ಟದಲ್ಲೂ ಮಾತನಾಡುತ್ತಿದ್ದಾರೆ. ಗ್ರೌಂಡ್ ಜೀರೊನ ಹತ್ತಿರ ಮುಸಲ್ಮಾನರ ಯಾವುದೇ ಚಟುವಟಿಕೆ ನಡೆದರೂ ಜನ ಸಾಮಾನ್ಯ ಅಮೆರಿಕನ್ನರಿಗೆ ಕಪಾಳದ ಮೇಲೆ ಹೊಡೆದಂತೆ...ಪ್ರತಿ ಕ್ಷಣವೂ ಸೆಪ್ಟೆಂಬರ್ ೧೧ ರ ಭಯೋತ್ಪಾದನೆಯನ್ನು ನೆನೆಸಿದಂತೆ ಎಂದು ಬೊಬ್ಬೆ ಇಡುತ್ತಿದ್ದಾರೆ. ಕೆಲವು ಕ್ರೈಸ್ತ ಧಾರ್ಮಿಕ ಗುರುಗಳು ಇದನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ತಮ್ಮ ಬೆಂಬಲಿಗರಿಗೆ ವಿಷಯವನ್ನು ಸರಿಯಾಗಿ ಸ್ಪಷ್ಟವಾಗಿ ತಿಳಿಸುವುದರ ಬದಲು, ಭಾವನೆಗಳನ್ನು ಅನವಶ್ಯಕ ಕದಡುತ್ತಿದ್ದಾರೆ.
ನ್ಯೂಯಾರ್ಕಿನಲ್ಲಿ ಆಗುತ್ತಿರುವುದು ಇಷ್ಟೇ. ವರ್ಲ್ಡ್ ಟ್ರೇಡ್ ಸೆಂಟರ್ ಇದ್ದ ಜಾಗಕ್ಕಿಂತ ಎರಡು ರಸ್ತೆಗಳ ದೂರದಲ್ಲಿ ಹಲವಾರು ಮಿಲಿಯನ್ ಡಾಲರ್ಗಳ ವೆಚ್ಚದಲ್ಲಿ, ಇಸ್ಲಾಮ್ ಸಾಂಸ್ಕೃತಿಕ ಕೇಂದ್ರವೊಂದನ್ನು ಕಟ್ಟಬೇಕು ಎಂದು ಅಮೆರಿಕನ್ ಸೊಸೈಟಿ ಫಾರ್ ಮುಸ್ಲಿಮ್ ಅಡ್ವಾನ್ಸ್ಮೆಂಟ್ ಮುಂದೆ ಬಂದಿದೆ. ಈ ಯೋಜನೆಯ ರೂವಾರಿ ಇಮಾಮ್ ಫೈಸಲ್ ಅಬ್ದುಲ್ ರೌ. ಈ ಕೇಂದ್ರ ಭಯೋತ್ಪಾದನೆಗೆ ಸವಾಲಾಗುವ ಕೇಂದ್ರವಾಗಬೇಕು, ಅಮೆರಿಕಾ ಮುಸಲ್ಮಾನರನ್ನು ಭಯೋತ್ಪಾದಕರು ಎನ್ನುವಂತೆ ನೋಡುವಂತಾಗಬಾರದು, ಮುಂದಿನ ತಲೆಮಾರುಗಳೂ ಸೆಪ್ಟೆಂಬರ್ ೧೧ ರ ಘಟನೆಯನ್ನು ಮರೆತು ಸೌಹಾರ್ದದಿಂದ ಇರಬೇಕೆನ್ನುವುದು ಇದರ ಉದ್ದೇಶ. ೩ ವರ್ಷಗಳ ಹಿಂದೆ ೨೦,೦೦೦ ಡಾಲರ್ ಗಳ ಆಸ್ತಿಯನ್ನು ತೋರಿಸಿದ್ದ ಅಮೆರಿಕನ್ ಸೊಸೈಟಿ ಫಾರ್ ಮುಸ್ಲಿಮ್ ಅಡ್ವಾನ್ಸ್ಮೆಂಟ್ ಈಗ ಇಂತಹ ಭಾರೀ ಯೋಜನೆಯನ್ನು ಯಾರ ಹಣಕಾಸಿನ ಸಹಾಯದಿಂದ ನಿರ್ವಹಿಸುತ್ತದೆ? ಈ ಕೇಂದ್ರದ ಉಸ್ತುವಾರಿ ಯಾರಿಂದ? ಎಂಬ ಪ್ರಶ್ನೆ ಜನರದ್ದು. ಈಗಾಗಲೇ ತಾವೂ ಹಣ ಸಹಾಯ ಮಾಡುವುದಾಗಿ ಹೊರ ರಾಷ್ಟ್ರದ ಮುಸಲ್ಮಾನರೂ ಮುಂದೆ ಬಂದಿರುವುದರಿಂದ ಪರಿಸ್ಥಿತಿ ಇನ್ನೂ ಬಿಸಿಯಾಗುತ್ತಿದೆ. ಇದು ಸಧ್ಯಕ್ಕೆ ನಿಲ್ಲುವ ವಿವಾದವಲ್ಲ. ಈ ಸುದ್ದಿ ಎತ್ತ ಸಾಗುತ್ತದೆಂದು ನೊಡೋಣ.