ಅಂಗಳ      ನೀನಾರಿಗಾದೆಯೊ ಎಲೆ ಮಾನವ
Print this pageAdd to Favorite
 
 

೩ ಗೋಹತ್ಯೆ; ಸಾಂಸ್ಕೃತಿಕ ರಾಜಕಾರಣ

 
ಡಾ. ಹಿ. ಶಿ. ರಾ.
 
 
 
 ಹಿಶಿರಾ
ರಾಜಕಾರಣಕ್ಕೆ ಯಾವುದು ವಸ್ತುವಾಗುತ್ತದೆ ಮತ್ತು ಯಾವುದು ಬಲಿಯಾಗುತ್ತದೆ ಎಂದು ಹೇಳುವಂತಿಲ್ಲ. ರಾಜಕಾರಣಕ್ಕೆ ಕತ್ತೆ ಮತ್ತು ಮನುಷ್ಯನಲ್ಲಿ ವ್ಯತ್ಯಾಸವಿಲ್ಲ. ಯಾವುದು ಅದರ ಆತುರಕ್ಕೆ ಅಪೇಕ್ಷೆಯೋ ಅದನ್ನು ಎತ್ತಿಕೊಂಡು ಕೊಂಡಾಗುತ್ತದೆ; ಯಾವುದು ಸದ್ಯಕ್ಕೆ ರಾಜಕಾರಣದ ಮಾರುಕಟ್ಟೆಯಲ್ಲಿ ಅನುಪಯುಕ್ತವೊ ಅದನ್ನು ದೂರದಲ್ಲಿಡುತ್ತದೆ. ಹೀಗೆ ಮನುಷ್ಯನನ್ನೇ ಮಾರುಕಟ್ಟೆ ಮಾಡಿಕೊಳ್ಳುವ ರಾಜಕಾರಣಕ್ಕೆ ಆಹಾರ ಪದ್ಧತಿ ಎನ್ನುವುನ್ನು ಹೊರಗುಳಿಸಲು ಆಗುವುದೆ?
ಅಂಥ ಆಹಾರ ನಿರಾಕರಣೆಯ ರಾಜಕೀಯವೆ ಈ ಗೋಮಾಂಸ ನಿಷೇಧದಲ್ಲಿಯೂ ಕೆಲಸ ಮಾಡಿದೆ. ಇದನ್ನು ಆಹಾರ ರಾಜಕೀಯ ಎನ್ನುತ್ತೇವೆ. ಆಹಾರ ನಮ್ಮ ಸಾಂಸ್ಕೃತಿಕ ಸಂಸ್ಕಾರದ ಒಂದು ಅಂಗ ಆಗಿರುವುದರಿಂದ ಇಂಥ ವ್ಯವಹಾರವನ್ನು ಸಾಂಸ್ಕೃತಿಕ ರಾಜಕೀಯ ಎಂದು ಕರೆಯುತ್ತೇವೆ. ತಮಗೆ ಬೇಡವಾದವರನ್ನು ನೇರ ಯುದ್ಧದಿಂದ ನಿಗ್ರಹಿಸಲು ಸಾಧ್ಯವಾಗದಿದ್ದಾಗ ಅನ್ಯ ಮಾರ್ಗವನ್ನು ಹುಡುಕುವುದು ಕುತಂತ್ರ ರಾಜಕೀಯದ ಹುನ್ನಾರ. ಅಂಥ ಕುತಂತ್ರದಲ್ಲಿ ಆಹಾರದಲ್ಲಿ ವಿಷ ಬೇರೆಸುವುದು ಒಂದು ಕ್ರಮವಾದರೆ ಆಹಾರವನ್ನೇ ನಿರಾಕರಿಸುವುದು ಸಾಮೂಹಿಕ ಹತ್ಯೆಯ ಒಂದು ಯೋಜನೆ. ಒಂದು ಸಮುದಾಯದ ಮೂಲ ಆಹಾರ ಅಥವ ಪೌಷ್ಠಿಕ ಆಹಾರವನ್ನು ಅವರಿಗೆ ನಿರಾಕರಿಸಿದರೆ ಅವರು ನಿಧಾನವಾಗಿ ಈ ಲೋಕಬಿಡುತ್ತಾರೆ. ಇದು ತಮಗೆ ಬೇಡವಾದವರನ್ನು ಎತ್ತಂಗಡಿ ಮಾಡುವ ಜನಾಂಗವಾದಿ ಸಿದ್ಧಾಂತ. ಈ ಹೊತ್ತು ಇದನ್ನು ಹಸಿ ರಾಜಕೀಯ ಎಂದು (raw politics) ಕರೆಯಲಾಗುತ್ತದೆ. ಹಿಂದೆ ತಮ್ಮ ಜಾತಿ, ಜನಾಂಗ ಮತ್ತು ಧರ್ಮದ ರಕ್ಷಣೆಗೆ ಎಂದು ತಮಗೆ ಆಗದವರನ್ನು ನಿಶ್ಯಕ್ತಗೊಳಿಸಲು ಈ ತತ್ವವನ್ನು ಬಳಸಲಾಗುತ್ತಿತ್ತು. ಉದಾಹರಣೆಗೆ,
 
ಹಿಟ್ಲರ್ - ಯಹೂದಿಗಳನ್ನು
ಬ್ರಿಟಿಷರು - ವಸಾಹತು, ಬುಡಕಟ್ಟಿನವರನ್ನು
ಜಾತಿಗರು - ಕೆಳಜಾತಿಗಳನ್ನು
ನಾಗರಿಕರು - ಬಡವರನ್ನು
ಉದ್ಯಮಿಗಳು - ಬಳಕೆದಾರರನ್ನು
ಹೀಗೆ ನಿಧಾನವಾಗಿ ಸಾಗಿಸಿ, ತಮಗೆ ಬೇಕಾದವರನ್ನು ಮಾತ್ರ ಉಳಿಸಿಕೊಳ್ಳುವ ತತ್ವವಿದೆ.
 
ಗೋಹತ್ಯೆ ನಿಷೇಧ ಕಾನೂನಿನ ಜಾರಿಯ ಹಿಂದೆ ಇರುವ ಮತೀಯ ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ನಮ್ಮ ಮಹತ್ವದ ಚಿಂತಕರಲ್ಲಿ ಒಬ್ಬರಾದ ಅಂಬೇಡ್ಕರ್ ಅವರ ಬಳಿಯೆ ಹೋಗಬೇಕು. ಭಾರತದಲ್ಲಿ. ಅನೇಕ ಶತಮಾನಗಳಲ್ಲಿ ನಡೆದ - ನಡೆಯುತ್ತಿರುವ ಮಹಾಧರ್ಮಯುದ್ಧದ ಕುರೂಪದ ಪರಿಣಾಮವೆ ಗೋಹತ್ಯೆ ನಿಷೇಧಕ್ಕೆ ಕಾರಣ ಎಂಬುದನ್ನು ಅವರು ತುಂಬ ಸಮರ್ಥವಾಗಿ ಅವರ ಶೂದ್ರರು ಯಾರು? ಎಂಬ ಕೃತಿಯಲ್ಲಿ ವಿವರಿಸಿದ್ದಾರೆ. ಬೌದ್ಧ ಧರ್ಮ ಅಸ್ತಿತ್ವಕ್ಕೆ ಬಂದು ವೈದಿಕ ಧರ್ಮ ಮೂಢನಂಬಿಕೆಗಳ ಒಂದು ಕಂತೆ ಎಂದು ಅರಿವಿಗೆ ಬಂದ ತಕ್ಷಣದಿಂದ ಜನಸಾಮಾನ್ಯರು ವೈದಿಕ ಧರ್ಮಕ್ಕೆ ಕೈಕೊಟ್ಟು ಬೌದ್ಧ ಧರ್ಮದ ಕಡೆಗೆ ಹೊರಟರು. ವೈಚಾರಿಕ ತಳಹದಿಯಿಂದ ಮಾನವನ ಉನ್ನತಿಯನ್ನು; ಸಮಾನತೆ ಮತ್ತು ಸೋದರತೆಗಳ ಮೇಲೆ ಪ್ರತಿಪಾದಿಸಿದ ಬೌದ್ಧ ಧರ್ಮ ಬಹುಜನರ ಮಾನಸಿಕ ಮುಕ್ತಿ ಮಾರ್ಗವಾಯಿತು. ಅಂಬೇಡ್ಕರ್ ಅವರು ಹೇಳುವಂತೆ ``ಪ್ರಥಮ ಸ್ಥಾನಕ್ಕಾಗಿ ಬ್ರಾಹ್ಮಣ ಹಾಗೂ ಬೌದ್ಧ ಮತಗಳ ನಡುವೆ ನಾನೂರು ವರ್ಷಗಳ ಕಾಲ ಹೋರಾಟ ನಡೆದಿದೆ. ಇದು ಭಾರತದ ಮತಧರ್ಮ ಮತ್ತು ರಾಜಕಾರಣದ ಮೇಲೆ ಅಳಿಸಲಾಗದ ಪ್ರಭಾವ ಬೀರಿದೆ... ಬ್ರಾಹ್ಮಣ ಮತ್ತು ಬೌದ್ಧ ಮತ ನಡುವಣ ಹೋರಾಟದಲ್ಲಿ ಗೋಪೂಜೆಯು ಬಳಕೆಗೆ ಬಂತು. ಅದು ಬ್ರಾಹ್ಮಣರು ತಾವು ಕಳೆದುಕೊಂಡ ಸ್ಥಾನವನ್ನು ಮರಳಿ ಪಡೆಯಲು ಒಂದು ಸಾಧನವಾಗಿತ್ತು.'' (ಪು ೪೯೨, ಶೂದ್ರರು ಯಾರು? ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ೨)

ವೈದಿಕರು ಹಿಂದೆ ದನದ ಮಾಂಸವನ್ನು ತಿನ್ನುತ್ತಿದ್ದರು. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವರು ಚಾರಿತ್ರಿಕ ತೀರ್ಮಾನವೊಂದನ್ನು ತೆಗೆದುಕೊಂಡರು. ಅದು, ಗೋವು ಪೂಜ್ಯವೆಂದೂ, ಅದನ್ನು ಕೊಲ್ಲಬಾರದೆಂದೂ ಸಂದೇಶ ಹೊರಡಿಸಿದರು. ಈ ಸಂದೇಶ ಎಷ್ಟು ವೈಯುಕ್ತಿಕವಾಗಿತ್ತೆಂದರೆ, ಗೋಹತ್ಯೆ ಬ್ರಾಹ್ಮಣ ಹತ್ಯೆಗೆ ಸಮ ಎಂದು ಅವರು ಸಾರಿದರು. ಮಹಾಪಾಪಗಳಲ್ಲಿ ಎರಡುಂಟು: (೧) ಗೋಹತ್ಯೆ (೨) ಬ್ರಾಹ್ಮಣಹತ್ಯೆ ಎಂದು ಹೇಳಿದ ವೈದಿಕರು ಬ್ರಾಹ್ಮಣ ಹತ್ಯೆ ಗೋಹತ್ಯೆಗಿಂತಲೂ ಘೋರವಾದುದು ಎಂದು ಸಾರಿದರು. ಮನುಧರ್ಮ ಎಂಬ ಕ್ರೂರ ಶಾಸನ ಸಂಪುಟ ಹುಟ್ಟಿಕೊಂಡದ್ದು ಈ ಬಗೆಯ ಸ್ವಾರ್ಥ ನೀತಿ ನಿಯಮಗಳಿಂದ. ಬ್ರಿಟಿಷರು ಭಾರತವನ್ನು ವಶಪಡಿಸಿಕೊಳ್ಳವವರೆಗೆ ಇದೇ ಭಾರತದ ಧರ್ಮಶಾಸನವಾಗಿತ್ತು. ಈ ಕಾರಣಕ್ಕೆ ಭಾರತಕ್ಕೆ ಬ್ರಿಟಿಷರ ಆಗಮನ ತುಳಿತಕ್ಕೊಳಗಾದ ಜನರ ಮಹಾಬಿಡುಗಡೆ ಕೂಡಾ ಎನ್ನುತ್ತಾರೆ. ಇನ್ನೂ ಮುಂದೆ ಹೋಗಿ ಕೆಲವರು ಬ್ರಿಟಿಷರು ತುಳಿತಕ್ಕೆ ಒಳಗಾದವರಿಗೆ ಸಮಾನ ಸೌಲತ್ತುಗಳನ್ನು ಕೊಡಲು ಹೊರಟಿದ್ದೇ ವೈದಿಕ ಶಕ್ತಿ ಒಂದುಗೂಡಿ ಅವರನ್ನು ಭಾರತದಿಂದ ಓಡಿಸಲು ಕಾರಣವಾಯಿತು ಎನ್ನುತ್ತಾರೆ. ತಮಗೆ ಅನುಕೂಲಗಳು ಕಡಿಮೆಯಾದ ಕೂಡಲೇ ಹೇಗಾದರೂ ಮಾಡಿ ತಾವು ಮತ್ತು ತಮ್ಮ ಧರ್ಮವನ್ನು ಜನಗಳ ಮೇಲೆ ಸ್ಥಾಪಿಸಲು ಎಲ್ಲಾ ಹುನ್ನಾರುಗಳನ್ನು ಹೂಡುತ್ತಾರೆ. ಈ ಹೊತ್ತು ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಗೋಹತ್ಯೆ ನಿಷೇಧ ಕಾನೂನು ಜಾರಿ ಕ್ರಮಗಳು ಅವರ ಮರು ಪ್ರವೇಶದ ಮುನ್ಸೂಚನೆಗಳಷ್ಟೆ ಎಂದು ಪ್ರಾಜ್ಞರು ಲೆಕ್ಕಹಾಕುತ್ತಿದ್ದಾರೆ.
ಈಗಲೂ rigid ವೈದಿಕ ಪುರೋಹಿತರು ತಮ್ಮ ಪ್ರಾಣ ಇರುವುದು ಗೋವಿನಲ್ಲಿ ಎಂದು ನಂಬಿದ್ದಾರೆ. ನಮ್ಮ ಜನಪದ ಕಥೆಗಳಲ್ಲಿ ಬಲಶಾಲಿಯಾದ ರಾಕ್ಷಸನ ಪ್ರಾಣ ಏಳು ಸಮುದ್ರದಾಚೆ ಕೀಳು ಸಮುದ್ರ, ಅದರೊಳಗೊಂದು ಬಾವಿ, ಅದರೊಳಗೊಂದು ಬಟ್ಟಲು, ಅದರೊಳಗೊಂದು ಗಿಳಿ, ಆ ಗಿಳಿಯ ಒಳಗೆ ರಾಕ್ಷಸನ ಜೀವ ಇರುತ್ತದೆ ಎಂಬ ನಂಬಿಕೆ. ಅದೇ ಸ್ಥಿತಿಯಲ್ಲಿ ಇಂತಹ ಕೆಲವರು ಇರುವಂತಿದೆ. ಆದರೆ ಈಗಿನ ಪರಿಸ್ಥಿತಿಯೆ ಬೇರೆ. ಗೋಮಾಂಸವನ್ನು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ದಲಿತರು ಮಾತ್ರ ತಿನ್ನುತಿಲ್ಲ. ಬ್ರಾಹ್ಮಣ ಜಾತಿಯಿಂದ ಬಂದವರೂ ಸೇರಿಕೊಂಡಂತೆ ಅನೇಕರು ಆ ಮಾಂಸದ ಶಕ್ತಿಗೆ ವಶವಾಗಿದ್ದಾರೆ. ಕ್ರೀಡಾಪಟುಗಳಲ್ಲಿ ಮತ್ತು ಉತ್ತಮ ಆರೋಗ್ಯ ಆಕಾಂಕ್ಷಿಗಳಲ್ಲಿ ದನದ ಮಾಂಸದ ಬೇಡಿಕೆಯಲ್ಲಿದೆ. ಮತ್ತೊಂದು ಬಹುಮುಖ್ಯ ಸಂಗತಿ ಎಂದರೆ ಬ್ರಾಹ್ಮಣರೆಲ್ಲ ಕರ್ಮಠರು, ನೋಟಕ್ಕೆ ಶುಭ್ರರು ಆಟಕ್ಕೆ ಅದಮರು ಎಂದಲ್ಲ. ಈ ಎಲ್ಲ ಅನುಮಾನಗಳ ಹೊರಗೆ ಬಹುತೇಕರು ಬ್ರಾಹ್ಮಣ್ಯದ ಕೆಲವು ನಂಬಿಕೆಗಳನ್ನು ಸಾಂಪ್ರದಾಯಿಕವಾಗಿ ಪ್ರಶ್ನಾತೀತವಾಗಿ ಆಚರಿಸುವವರಾಗಿದ್ದಾರೆಯೆ ಹೊರತು ಜನ ವಿರೋಧಿಗಳಲ್ಲ. ನಾನಿಲ್ಲಿ ಬ್ರಾಹ್ಮಣರು ಎಂದು ಉಲ್ಲೇಖ ಮಾಡುತ್ತಿರುವುದು ಕರ್ಮಠರಾದ, ಇವತ್ತಿಗೂ ಜಾತಿಯೊಳಗಡೆ ಹೂತು ಹೋದ, ಇಡೀ ಜಗತ್ತನ್ನು-ಜೀವನವನ್ನು ಬ್ರಾಹ್ಮಣ್ಯ ಮತ್ತು ಸ್ವ ಶ್ರ‍ೇಷ್ಠತೆಯ ಕಣ್ಣಲ್ಲೇ ನೋಡುವ, ಅಳೆಯುವ ಅತ್ಯಂತ ಕುಬ್ಜ, ತಂತ್ರಗಾರೀ ಮನಸ್ಸಿನ ಒಂದು collective ಶಕ್ತಿಯನ್ನು.
 
ಬಿಜೆಪಿ ಕರ್ಮಠ ವೈದಿಕ ತತ್ವವನ್ನಿಟ್ಟುಕೊಂಡು ಹುಟ್ಟಿದ ಪಕ್ಷ. ಈ ಪಕ್ಷದ ಉತ್ಕರ್ಷದ ಜೊತೆಗೆ ವೈದಿಕರ ಬಗೆಗೆ ಈ ಗುಮಾನಿ ಹೆಚ್ಚಾಗುತ್ತದೆ. ಭಾರತದ ಆಡಳಿತ ವರ್ಗವು ಯಾಹೊತ್ತೂ ನಡೆಸಿಕೊಂಡು ಬಂದ ಸಾಮಾಜಿಕ ದೌರ್ಜನ್ಯಗಳ ಪರಿಣಾಮವೇ ಇಲ್ಲೂ ಪ್ರತಿಫಲಿಸಿದೆ. ವಾಸ್ತವದಲ್ಲಿ ಈಗ ಮತೀಯ ವಾದಿಗಳು ವೈದಿಕರಷ್ಟೆ ಅಲ್ಲ, ಅವರನ್ನು ಅವಲಂಬಿಸಿ ಬೆಂಬಲಿಸುತ್ತಿರುವ ಮೇಲು ಮಧ್ಯಮ ಜಾತಿಯ ಮನುಷ್ಯರೂ ಅದೇ ಅಪರಾಧಿ ಸ್ಥಾನದಲ್ಲಿ ಇದ್ದಾರೆ. ತಾವು ರೈತರು ತಮಗೆ ಗೋವುಗಳು ಪೂಜನೀಯ ಎಂಬ ಕಾರಣಕ್ಕೆ ಈ ವರ್ಗದ ಜನ ಪರೋಕ್ಷವಾಗಿ ಮೇಲುಜಾತಿಯವರ ಜೊತೆಗೆ ಕೈಜೋಡಿಸಿದ್ದಾರೆ. ಜೀವನ ವಿರೋಧಿ ಕಾನೂನುಗಳ ಜಾರಿಯಲ್ಲಿ ಇವರದೂ ಸಮಪಾಲು ಇದೆ. ವೈದಿಕರ ಮೆದುಳು ಮತ್ತು ಶೂದ್ರ ಮೇಲ್ಜಾತಿಯವರ ದೇಹಗಳು ಸೇರಿಕೊಂಡೇ ಇಂಥ ಕಾನೂನುಗಳು ಅಸ್ತಿತ್ವಕ್ಕೆ ಬರುತ್ತವೆ.
 
ಮುಂದೆ: ೪ ಗೋಹತ್ಯೆ ನಿಷೇಧ : ಪರಿಣಾಮ