ಅಂಗಳ      ++
Print this pageAdd to Favorite
 
 

ಕಾವೇರಿ ಕಥನ: ೫ ಕಾವೇರಿ ನದಿ ನೀರಿನ ವಿಚಾರಣೆ-ವಕಾಲತ್ತು

 


ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್
 
ಕಾವೇರಿ ನದಿಯಲ್ಲಿ ಕರ್ನಾಟಕದ ಕೊಡಗಿನಿಂದ ತಮಿಳುನಾಡಿನ ಕೊಲೆರೂನ್ ಅಣೆಕಟ್ಟೆಯವರೆಗೂ ಹರಿಯುವ ನೀರಿನ ಪ್ರಮಾಣ ೭೯೦ ಟಿ.ಎಮ್.ಸಿಗಳೆಂದು ಹೇಳಲಾಗಿದೆ. ಅಂದರೆ ೪೨೫ ಟಿ.ಎಮ್.ಸಿ.ಗಳಷ್ಟು ನೀರು ಕರ್ನಾಟಕದ ಭಾಗದಿಂದ ಕಾವೇರಿ ನದಿಗೆ ಹರಿಯುತ್ತದೆ. ತಮಿಳುನಾಡಿನ ಭಾಗದಿಂದ ಹರಿದು ಬರುವ ನೀರಿನ ಪ್ರಮಾಣ ೨೫೨ ಟಿ.ಎಮ್.ಸಿ.ಗಳು. ಅಂತೆಯೇ ಕೇರಳ ರಾಜ್ಯದಿಂದಲೂ ೧೧೩ ಟಿ.ಎಮ್.ಸಿ.ಯಷ್ಟು ನೀರು ಕಾವೇರಿ ನದಿಯನ್ನು ಸೇರುತ್ತದೆ. ಇದು ಕೇಂದ್ರ ಸರ್ಕಾರದ ನೇತ್ರತ್ವದ ನೀರಾವರಿ ಇಲಾಖೆಯ ಅಧಿಕಾರಿಗಳು ಅಧ್ಯಯನ ಮಾಡಿ ನೀಡಿರುವಂತಹ ಅಧಿಕೃತವಾದ ಅಂಕಿ ಅಂಶ. ಅಂದರೆ ಕಾವೇರಿ ನದಿಯಲ್ಲಿ ಶೇಖರವಾಗುವ ಒಟ್ಟು ನೀರಿನ ಪ್ರಮಾಣದಲ್ಲಿ ಶೇ. ೫೩.೮ ರಷ್ಟು ನೀರು ಕರ್ನಾಟಕದ್ದಾಗಿದೆ; ತಮಿಳುನಾಡಿನಿಂದ ಹರಿದು ಬರುವ ನೀರಿನ ಪ್ರಮಾಣ ಶೇ. ೩೧.೯ ರಷ್ಟು ಮಾತ್ರವೇ. ಆದರೂ ಎರಡೂ ರಾಜ್ಯಗಳ ಒಟ್ಟಾರೆ ನೀರಾವರಿ ಯೋಜನೆಗಳಲ್ಲಿ ತಮಿಳುನಾಡು ಬಳಸಿಕೊಳ್ಳುತ್ತಿರುವ ನೀರಿನ ಪ್ರಮಾಣ ಶೇಕಡಾ ೮೦ ರಷ್ಟಾದರೆ ಕರ್ನಾಟಕ ಬಳಸಿಕೊಂಡದ್ದು ಶೇ. ೨೦ ರಷ್ಟು ಮಾತ್ರ.

ಕಾವೇರಿ ನದಿ ಕಣಿವೆಯ ಬರಗಾಲ ಪೀಡಿತ ಪ್ರದೇಶಗಳ ವಿವರ ಇಂತಿದೆ.

೧೯೭೧ ರ ಇಸವಿಯಲ್ಲಿ ಕಾವೇರಿ ನದಿ ಕಣಿವೆಯಲ್ಲಿ ೨೧,೮೭೦ ಚ.ಕಿ. ಮೀಟರ್ ಗಳಷ್ಟು ಬರಗಾಲ ಪೀಡಿತ ಪ್ರದೇಶ ಕರ್ನಾಟಕದಲ್ಲಿತ್ತು. ಅಂದರೆ ಈ ಪ್ರದೇಶದಲ್ಲಿ ಕರ್ನಾಟಕದ ಸುಮಾರು ೨೮ ತಾಲ್ಲೂಕುಗಳು ಕ್ಷಾಮಪೀಡಿತವಾದವು. ಆದರೆ ಇದೇ ಸಮಯದಲ್ಲಿ ತಮಿಳುನಾಡಿನಲ್ಲಿದ್ದ ಬರಗಾಲ ಪೀಡಿತ ಪ್ರದೇಶ ೧೨,೭೯೦ ಚ.ಕಿ.ಮೀಟರುಗಳು. ೧೪ ತಾಲ್ಲೂಕುಗಳಷ್ಟೇ ಬರದಿಂದ ಕೂಡಿದ್ದವು.
ಇದೇ ಅವಧಿಯಲ್ಲಿ ಕಾವೇರಿ ಕಣಿವೆಯ ಒಟ್ಟು ಅಭಿವೃದ್ದಿ ಪ್ರದೇಶದಲ್ಲಿ ತಮಿಳುನಾಡಿನಲ್ಲಿದ್ದುದು ೯೫೬ ಸಾವಿರ ಹೆಕ್ಟೇರುಗಳಾದರೆ ಕರ್ನಾಟಕದಲ್ಲಿದ್ದುದು ೨೭೩ ಸಾವಿರ ಹೆಕ್ಟೇರುಗಳಷ್ಟೆ. ಕೇರಳದಲ್ಲಿ ೨೨ ಸಾವಿರ ಹೆಕ್ಟೇರುಗಳು.
ಕರ್ನಾಟಕವು ತನ್ನ ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹೊರಟಾಗೆಲ್ಲಾ ತಮಿಳುನಾಡು ಅದಕ್ಕೆ ಸತತವಾಗಿ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಒಟ್ಟಾರೆ ತಮಿಳುನಾಡಿನ ಇರಾದೆಯೆಂದರೆ ಕರ್ನಾಟಕವು ತನ್ನ ಬರಗಾಲ ಪೀಡಿತ ಪ್ರದೇಶಗಳನ್ನು ಅಭಿವೃದ್ದಿ ಪಡಿಸದೇ ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರು ಶೇಖರಿಸಿ ತನಗೆ ಬೇಕಾದಾಗಲೆಲ್ಲಾ ನೀರು ಬಿಡುವಂತಹ ’ನೀರಗಂಟಿ’ ಪಾತ್ರವನ್ನಷ್ಟೇ ವಹಿಸಬೇಕೆಂಬುದಾಗಿದೆ. ಅದಕ್ಕಾಗಿ ತಮಿಳುನಾಡು ತರಹೇವಾರಿ ತಗಾದೆಗಳನ್ನು ೧೯೭೧ ರಿಂದಲೇ ಆರಂಭಿಸಿ ಕರ್ನಾಟಕಕ್ಕೆ ಸತತವಾಗಿ ಯಶಸ್ವಿಯಾಗಿ ವಂಚನೆ ಮಾಡುತ್ತಲೇ ಬಂದಿದೆ. ೧೯೭೪ ರಲ್ಲಿ ಬ್ರಿಟೀಷರಿಂದ ಹೇರಲ್ಪಟ್ಟಿದ್ದ ಒಪ್ಪಂದಗಳು ಮುಗಿದುದರಿಂದ ಕರ್ನಾಟಕವು ಇನ್ನೆಲ್ಲಿ ಸಮರೋಪಾದಿಯಲ್ಲಿ ನೀರಾವರಿ ಯೋಜನೆಗಳನ್ನು ಕೈಗೊಳ್ಳುತ್ತದೆಯೋ ಎಂಬ ಅಸೂಯೆಯಿಂದ ಒಂದಿಲ್ಲೊಂದು ರಾಜಕೀಯ ಕುತಂತ್ರದಿಮ್ದ ಕೇಂದ್ರವನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದೆ. ಭಾರತದಲ್ಲೇ ಅಲ್ಲದೆ ಪ್ರಪಂಚದ ಯಾವ ಮೂಲೆಯಲ್ಲಿಯೂ ಸಹ ನದಿ ಮೇಲ್ಭಾಗದ ಪ್ರದೇಶದ ಜನತೆಯ ಹಕ್ಕುಗಳಿಗೆ ಚ್ಯುತಿಯಾಗುವಂತಹ ಕಾನೂನುಗಳನ್ನು ಜಾರಿಗೆ ತಂದಿಲ್ಲ. ಆದರೆ ತಮಿಳುನಾಡು ತನ್ನ ಸ್ವಾರ್ಥಕ್ಕಾಗಿ ನೆರೆರಾಜ್ಯದ ನೀರಿನ ಹಕ್ಕನ್ನು ಕಸಿದುಕೊಳ್ಳುವ ಸಣ್ಣತನ ತೋರುತ್ತಲೇ ಬಂದಿದೆ.
ಸ್ವಾತಂತ್ರ ಬಂದು ದಶಕಗಳಾದರೂ ಪುರಾತನ ಬ್ರಿಟಿಷ್ ಕಾನೂನಿನ ಅಂಶಗಳನ್ನು ಅವಲಂಬಿಸಿಯೇ ತನಗೆ ಬೇಕಾದಂತೆ ನೀರನ್ನು ಪಡೆದುಕೊಳ್ಳುವ ತಮಿಳುನಾಡಿನ ದುರಾಸೆಯು ೧೯೯೧ ರಲ್ಲಿ ಕಾವೇರಿ ನದಿ ಪ್ರಾಧಿಕಾರದ ಮಧ್ಯಂತರ ಅದೇಶದಿಂದ ನೆರವೇರಿದೆ. ತಮಿಳು ರಾಜಕಾರಣಿಗಳು ಸತತ ಚಿತಾವಣೆ ನಡೆಸಿ ೧೯೭೧ ರಿಂದಲೂ ಕೇಂದ್ರದ ಮೇಲೆ ಒತ್ತಡ ತಂದ ಪರಿಣಾಮವಾಗಿಯೇ ಕೇಂದ್ರ ಸರ್ಕಾರ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ದಿನಾಂಕ ೨-೫-೧೯೯೦ ರಂದು ಕಾವೇರಿ ಜಲವಿವಾದ ನ್ಯಾಯಮಂಡಳಿಯನ್ನು ರಚಿಸುವಂತಾಯಿತು. ಇದು ಒಂದೆರಡು ದಿನಗಳಲ್ಲಿ ತೆಗೆದುಕೊಂಡ ತೀರ್ಮಾನವಲ್ಲ ಸತತವಾಗಿ ೧೯ ವರ್ಷಗಳ ಕಾಲ ಮಾತುಕತೆ, ನ್ಯಾಯಾಂಗ ಘರ್ಷಣೆ ನಡೆದು ಅಂತಿಮವಾಗಿ ನ್ಯಾಯ ಮಂಡಳಿ ರಚನೆಯಾಗಿತ್ತು.
೧೯೭೧ ರಿಂದ ೧೯೯೦ ರಲ್ಲಿ ನ್ಯಾಯ ಮಂಡಳಿ ರಚನೆವರೆಗೆ ನಡೆದಂತಹ ಘಟನಾವಳಿಗಳ ವಿವರ ಹೀಗಿದೆ:
 • ೧೯೭೧ ರ ಆಗಸ್ಟ್ ನಲ್ಲಿ ತಮಿಳುನಾಡು ಸರ್ಕಾರ ಕರ್ನಾಟಕವು ತನ್ನ ರಾಜ್ಯದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸದಂತೆ ನಿಷೇಧಿಸಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಿತು.
 • ೧೯೭೧ ರ ಸೆಪ್ಟೆಂಬರ್ ತಿಂಗಳಿನಲ್ಲಿ ಇದೇ ರೀತಿಯ ಮೊಕದ್ದಮೆಯನ್ನು ದಾಖಲಿಸುವಂತೆ ತಮಿಳುನಾಡು ಕೇರಳ ರಾಜ್ಯಕ್ಕೂ ಕುಮ್ಮಕ್ಕು ನೀಡಿದ ಪರಿಣಾಮವಾಗಿ ಕೇರಳವೂ ಕರ್ನಾಟಕದ ನೀರಾವರಿ ಯೋಜನೆಗಳಿಗೆ ತಡೆಯಾಜ್ನೆ ನೀಡಬೇಕೆಂದು ಮೊಕದ್ದಮೆಯನ್ನು ದಾಖಲಿಸಿತು.
 • ೨೫-೧೦-೧೯೭೨ ರಂದು ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಕರ್ನಾಟಕದ ನೀರಾವರಿ ಯೋಜನೆಗಳಿಗೆ ತಡೆಯಾಜ್ನೆ ನೀಡಬೇಕೆಂದು ಕೋರಿ ಸಲ್ಲಿಸಿದಂತಹ ಅರ್ಜಿಯನ್ನು ಅಸಿಂದುವೆಂದು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತು. ೨೯-೫-೧೯೭೨ ರಲ್ಲಿ ನಡೆದಂತಹ ಅಂತರ-ರಾಜ್ಯ ಸಚಿವರ ಚರ್ಚೆಯ ಪರಿಣಾಮದಿಂದ ಮೊಕದ್ದಮೆಗಳನ್ನು ಹಿಂತೆಗದುಕೊಳ್ಳಲು ನ್ಯಾಯಾಲಯ ಅದೇಶ ನೀಡಿತು.
 • ೨೬-೧೧-೧೯೮೩ ರಂದು ಅಂದರೆ ತಮಿಳುನಾಡಿನ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದ ೧೧ ವರ್ಷಗಳ ನಂತರ ತಮಿಳುನಾಡು ಮತ್ತೆ ಅಲ್ಲಿನ ರೈತ ಸಂಘದ ಮೂಲಕ ಸುಪ್ರೀಂ ಕೋರ್ಟಿನಲ್ಲಿ ಮೊಕದ್ದಮೆಯನ್ನು ದಾಖಲಿಸಿತು.
 • ೧೨-೨-೧೯೮೪ ರಲ್ಲಿ ತಮಿಳುನಾಡು ಸರ್ಕಾರ ಮತ್ತೊಬ್ಬ ರೈತರ ಮೂಲಕ ಸುಪ್ರೀಂ ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿತು.
 • ೧೮-೭-೧೯೮೮ ರಂದು ತಮಿಳುನಾಡಿನ ರೈತ ಸಂಘ ಮತ್ತು ಅಲ್ಲಿನ ರೈತರೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಗಳ ಬಗ್ಗೆ ತಮಿಳುನಾಡಿನ ರಾಜ್ಯಪಾಲರು (ಆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು) ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಸಭೆ ಸೇರಿ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿತು.
 • ೩೦-೯-೧೯೮೮ ರಲ್ಲಿ ಮತ್ತೆ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ ತಮಿಳುನಾಡು ಸರ್ಕಾರ ದ್ವಿಪಕ್ಷೀಯ ಮಾತುಕತೆಗಳು ವಿಫಲವಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯವೇ ಅದೇಶ ನೀಡಬೇಕೆಂದು ಕೇಳಿಕೊಂಡಿತು.
 • ೨೬-೨-೧೯೯೦ ರಂದು ತಮಿಳುನಾಡು ಹೂಡಿದಂತಹ ಮೊಕದ್ದಮೆಗಳ ಅಂತಿಮ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನಡೆಸಲು ತೀರ್ಮಾನಿಸಿತು. ಅದಕ್ಕೆ ೨೪-೪-೧೯೯೦ ರಂದು ದಿನಾಂಕ ನಿಗದಿಪಡಿಸಿದ ನ್ಯಾಯಾಲಯ ಅದರ ನಡುವೆ ಎರಡೂ ರಾಜ್ಯಗಳೂ ಕೂತು ಮಾತುಕತೆ ಮೂಲಕ ಚರ್ಚಿಸಿ ಯಾವುದಾದರೊಂದು ಇತ್ಯರ್ಥಕ್ಕೆ ಬರುವಂತೆ ಎರಡೂ ರಾಜ್ಯಗಳಿಗೆ ಅವಕಾಶವನ್ನು ನೀಡಿತು.
 • ೨೪-೪-೧೯೯೦ ರ ಹೊತ್ತಿಗೆ ತಮಿಳುನಾಡು ಸರ್ಕಾರ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಕಾರ ವ್ಯಕ್ತಪಡಿಸಿದ್ದರಿಂದ ಅದು ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ಸರ್ವೋಚ್ಚ ನ್ಯಯಾಲಯದಲ್ಲಿ ವಾದ ವಿವಾದಗಳು ಆರಂಭಗೊಂಡವು.
 • ೨೮-೪-೧೯೯೦ ರಂದು ತಮಿಳುನಾಡಿನ ರಾಜಕಾರಣಿಗಳ ತೀರ್ವವಾದ ಒತ್ತಡ ಹಾಗೂ ಬ್ಲಾಕ್ ಮೇಲ್ ತಂತ್ರಕ್ಕೆ ಮತ್ತೆ ಮಣಿದ ಕೇಂದ್ರ ಸರ್ಕಾರ ಕಾವೇರಿ ನದಿ ವಿವಾದವನ್ನು ಸರ್ವೋಚ್ಚ ನ್ಯಾಯಾಲಯವೇ ಬಗೆಹರಿಸಬೇಕೆಂದು ತನ್ನ ಪ್ರಮಾಣ ಪತ್ರವನ್ನು ಸಲ್ಲಿಸಿತು.
 • ೪-೫-೧೯೯೦ ರಲ್ಲಿ ಎಲ್ಲಾ ವಾದ ವಿವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರ ಸಹ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿ ನ್ಯಾಯಾಲಯದ ಮೊರೆ ಹೊಕ್ಕಿದ್ದರಿಂದ ಕಾವೇರಿ ನದಿ ವಿವಾದವನ್ನು ಬಗೆಹರಿಸಲು ನ್ಯಾಯ ಮಂಡಳಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಅದೇಶ ನೀಡಿತು.
ಸರ್ವೋಚ್ಚ ನ್ಯಾಯಾಲಯದ ಅದೇಶದಂತೆ ಕರ್ನಾಟಕವು ಅನೇಕ ಬಾರಿ ತಮಿಳುನಾಡಿನೊಂದಿಗೆ ಮಾತುಕತೆಗೆ ಮುಂದಾದರೂ ಅದು ಸದಾ ಅಸಹಕಾರ ನೀಡುತ್ತಾ ಬಂದಿತ್ತು. ಭಾರತ ಸ್ವಾತಂತ್ರ್ಯ ಪಡೆದಂದಿನಿಂದಲೂ ೧೯೨೪ರ ಬ್ರಿಟಿಷ್ ಕಾಲದ ಕಾವೇರಿ ಒಪ್ಪಂದವನ್ನು ರದ್ದುಪಡಿಸಬೇಕೆಂದು ಕರ್ನಾಟಕ ಕೇಂದ್ರ ಸರ್ಕಾರದ ಮೇಲೆ ಸತತ ಒತ್ತಾಯ ತಂದರೂ ಕೇಂದ್ರ ಕರ್ನಾಟಕದ ಮನವಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿರಲಿಲ್ಲ. ೧೯೫೬ ರಲ್ಲಿ ಭಾಷಾವಾರು ರಾಜ್ಯಗಳಾಗಿ ವಿಂಗಡನೆಯಾದ ನಂತರ ಪ್ರತಿಯೊಂದು ರಾಜ್ಯವೂ ನೆಲ,ಜಲ,ಗಡಿಯ ವಿಷಯದಲ್ಲಿ ತನ್ನದೇ ಆದ ಪರಮಾಧಿಕಾರವನ್ನು ಹೊಂದಿತು. ಆದರೆ ಆಗಲೂ ಸಹ ಕರ್ನಾಟಕ ತನ್ನ ಪಾಲಿನ ನದಿ ನೀರಿನ ಹಕ್ಕನ್ನು ಉಳಿಸಿಕೊಳ್ಳುವ ಸಲುವಾಗಿ ಅನಿವಾರ್ಯವಾಗಿ ಹೋರಾಟದ ದಾರಿಯನ್ನು ಹಿಡಿಯಬೇಕಾಯಿತು.
ಕರ್ನಾಟಕ ತನ್ನ ಪಾಲಿನ ನೀರಿನ ಹಕ್ಕಿಗಾಗಿ ನಡೆಸಿದ ಪ್ರಯತ್ನಗಳ ವಿವರ ಹೀಗಿದೆ.
  • ೧೯೨೪ರ ಕರಾಳ ಒಪ್ಪಂದ ಬ್ರಿಟೀಷರು ಕರ್ನಾಟಕದ ಮೇಲೆ ಪೂರ್ವಾಗ್ರಹ ಪೀಡಿತರಾಗಿ ಹೇರಿದ್ದ ಒಪ್ಪಂದವಾಗಿದ್ದರಿಂದ ಅದನ್ನು ರದ್ದುಪಡಿಸಲು ಹಾಗೂ ಕಾವೇರಿ ಜಲವಿವಾದದ ಸಮರ್ಪಕ ಇತ್ಯರ್ಥಕ್ಕಾಗಿ ಸಭೆಯನ್ನು ಕರೆಯುವಂತೆ ೧೯೫೯ ರಿಂದಲೇ ಕರ್ನಾಟಕ ಕೇಂದ್ರವನ್ನು ಆಗ್ರಹಿಸುತ್ತಾ ಬಂದಿದೆ. ಆದರೆ ೮-೧೨-೧೯೬೦ ರಂದು ಪತ್ರ ಬರೆದ ತಮಿಳುನಾಡಿನ ಲೋಕೋಪಯೋಗಿ ಸಚಿವರು ೧೯೭೪ ರ ನಂತರವೇ ನದಿವಿವಾದದ ಬಗ್ಗೆ ಚರ್ಚಿಸಬಹುದೆಂದು ಹೇಳಿದ್ದರು.
  • ೬-೫-೧೯೭೦ ರಲ್ಲಿ ಅಂತರರಾಜ್ಯ ಸಭೆ ನಡೆಯಿತಾದರೂ ತಮಿಳುನಾಡಿನ ಹಠಮಾರಿ ಧೋರಣೆಯಿಂದ ಯಾವುದೇ ಒಪ್ಪಂದಕ್ಕೂ ಬರಲಾಗಲಿಲ್ಲ. ಇದೇ ವೇಳೆಗೆ ಕೇಂದ್ರದ ಪೂರ್ವಾನುಮತಿಯಿಲ್ಲದೇ ಕರ್ನಾಟಕ ನಿರ್ಮಿಸುತ್ತಿರುವ ಯೋಜನೆಗಳನ್ನು ನಿಲ್ಲಿಸುವಂತೆ ಅಂದಿನ ಮೈಸೂರು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಿತ್ತು.
  • ೨೯-೫-೧೯೭೨ ರಂದು ದೆಹಲಿಯಲ್ಲಿ ಮತ್ತೆ ನದಿವಿವಾದದ ಹಿನ್ನೆಲೆಯಲ್ಲಿ ಅಂತರರಾಜ್ಯ ಮುಖ್ಯಮಂತ್ರಿಗಳ ಸಮಾಲೋಚನಾ ಸಭೆಯನ್ನು ನಡೆಸಲಾಯಿತು. ವಿವಾದಕ್ಕೆ ಸಮಗ್ರ ಪರಿಹಾರವನ್ನು ಕಂಡುಹಿಡಿಯುವ ಸಲುವಾಗಿ ಕಾವೇರಿ ಸತ್ಯಶೋಧನಾ ಸಮಿತಿಯನ್ನು ರಚಿಸಲಾಯಿತು.
  • ೧೯-೧೦-೧೯೭೩ ರಂದು ದೆಹಲಿಯಲ್ಲಿ ಅಂತರರಾಜ್ಯ ನೀರಾವರಿ ಸಚಿವರುಗಳ ಸಭೆ ನಡೆದು ಕಾವೇರಿ ನದಿ ನೀರಿನ ಮಿತ ಬಳಕೆಯ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನವನ್ನು ಕೈಗೊಳ್ಳಬೇಕೆಂದು ನಿರ್ಧರಿಸಲಾಯಿತು.
  • ೨೭-೬-೧೯೭೪ ರಂದು ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಸಿ.ಸಿ.ಪಟೇಲ್ ರವರು ಕಾವೇರಿ ನದಿ ನೀರಿನ ಮಿತವಾದ ಬಳಕೆಯ ಬಗ್ಗೆ ಮದ್ರಾಸಿನಲ್ಲಿ ಕೇಂದ್ರ ಸಚಿವರು ನಡೆಸಿದ ಅಂತರ ರಾಜ್ಯ ಸಚಿವರ ಸಭೆಯಲ್ಲಿ ತಿಳಿಸಿದರು. ನೀರಿನ ಮಿತವಾದ ಬಳಕೆಯನ್ನು ಯಾವ ರೀತಿ ಮಾಡಬೇಕೆಂಬ ಶಿಫಾರಸ್ಸುಗಳನ್ನು ಸಹ ಸಿ.ಸಿ.ಪಟೇಲ್ ರವರು ಅಂದಿನ ಸಭೆಯಲ್ಲಿ ತಿಳಿಸಿದ್ದರು.
  • ೩೦-೧೧-೧೯೭೪ ರಂದು ದೆಹಲಿಯಲ್ಲಿ ನಡೆದ ಅಂತರರಾಜ್ಯ ಸಚಿವರ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರವು ಪ್ರಸ್ತುತ ಪಡಿಸಿದ್ದಂತಹ ಕರಡು ಒಪ್ಪಂದದ ಬಗ್ಗೆ ಚರ್ಚೆ ನಡೆಸಲಾಯಿತು.
  • ೧೬-೧೨-೧೯೭೫ ರಂದು ದೆಹಲಿಯಲ್ಲಿ ಮತ್ತೆ ಅಂತರರಾಜ್ಯ ಸಚಿವರ ಸಮ್ಮೇಳನ ನಡೆಯಿತು. ಕೇಂದ್ರದ ಕರಡು ಒಪ್ಪಂದದ ಬಗ್ಗೆ ನಡೆದ ಅಂದಿನ ಚರ್ಚೆಯೂ ಅಪೂರ್ಣವಾಯಿತು.
  • ೨೫-೮-೧೯೭೬ ರಂದು ಕರ್ನಾಟಕ ತನ್ನ ಸಮಗ್ರ ನೀರಾವರಿ ಯೋಜನೆಗಳ ’ಮಾಸ್ಟರ್ ಪ್ಲಾನ್’ ಬಗೆಗಿನ ಪ್ರಮುಖ ಅಂಶಗಳನ್ನು ದೆಹಲಿಯಲ್ಲಿ ನಡೆದ ಅಂತರರಾಜ್ಯ ಸಚಿವರ ಸಮೇಳನದಲ್ಲಿ ಪ್ರಸ್ತುತ ಪಡಿಸಿತು. ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ಅಂದೇ ಒಂದು ಒಪ್ಪಂದಕ್ಕೆ ಬರಲಾಯಿತಾದರೂ ಒಪ್ಪಂದಕ್ಕೆ ಸಹಿಯಾಗಲಿಲ್ಲ.
  • ೨೭-೮-೧೯೭೬ ರಂದು ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಬರಲಾದ ಒಪ್ಪಂದದ ಪ್ರಮುಖ ಅಂಶಗಳು ಹಾಗೂ ಕಾವೇರಿ ಕಣಿವೆ ಪ್ರಾಧಿಕಾರ ರಚನೆ ಈ ಅಂಶಗಳ ಬಗ್ಗೆ ಕರಡು ಸಿದ್ದಪಡಿಸುವ ಬಗ್ಗೆ ಕೇಂದ್ರ ಸಚಿವರು ಲೋಕಸಭೆಯಲ್ಲಿ ಹೇಳಿಕೆ ನೀಡಿದರು. ಅಲ್ಲದೆ ನೀರಿನ ಅಭಾವದ ಕಾಲದಲ್ಲಿ ನದಿ ನೀರಿನ ಹಂಚಿಕೆಯ ವಿಧಿವಿಧಾನಗಳನ್ನು ರೂಪಿಸಲು ಮತ್ತೊಂದು ಸಮಿತಿಯನ್ನು ರಚಿಸುವ ಬಗ್ಗೆಯೂ ಸಂಸತ್ತಿನಲ್ಲಿ ಕೇಂದ್ರ ಸಚಿವರು ಪ್ರಸ್ತಾಪಿಸಿದರು.
  • ೧೯೭೬ ರಲ್ಲಿ ಕರ್ನಾಟಕವು ಕಾವೇರಿ ನದಿ ಕಣಿವೆಯಲ್ಲಿ ದೊರಕುವ ನೀರಿನ ಪ್ರಮಾಣದ ಸಮಾನ ಹಂಚಿಕೆಯ ಬಳಕೆಯ ಬಗ್ಗೆ ತಾನು ತಯಾರಿಸಿದ ’ಮಾಸ್ಟರ್ ಪ್ಲಾನ್’ ನ ರೂಪುರೇಷೆಗಳನ್ನು ಸಲ್ಲಿಸಿತು.
  • ೫-೮-೧೯೭೮ ರಲ್ಲಿ ದೆಹಲಿಯಲ್ಲಿ ಅಂತರರಾಜ್ಯ ಮುಖ್ಯಮಂತ್ರಿಗಳ ಸಭೆ ನಡೆದಾಗ ಮತ್ತೆ ತಕರಾರು ತೆಗೆದ ತಮಿಳುನಾಡು ತಾನು ಬೇರೆ ಪ್ರಸ್ತಾಪವನ್ನು ಸಲ್ಲಿಸುವುದಾಗಿ ಹೇಳಿತು.
  • ೨೯-೮-೧೯೭೮ ರಂದು ತಮಿಳುನಾಡು ತನ್ನ ಪ್ರಸ್ತಾಪವನ್ನು ಸಲ್ಲಿಸಿತು.
  • ೩-೯-೧೯೭೮ ರಲ್ಲಿ ನಡೆದ ಅಂತರರಾಜ್ಯ ಸಚಿವರ ಸಮ್ಮೇಳನದಲ್ಲಿ ತಮಿಳುನಾಡು ಈಗ ಸಲ್ಲಿಸಿರುವ ಪ್ರಸ್ತಾಪವು ಹಿಂದೆ ೧೯೭೬ ರಲ್ಲಿ ಬಂದಿದ್ದ ಒಪ್ಪಂದಕ್ಕಿಂತ ಭಿನ್ನ ನಿಲುವಿನದಾಗಿದೆಯೆಂದು ಕೇಂದ್ರ ಸರ್ಕಾರವೇ ತನ್ನ ಅಭಿಮತ ವ್ಯಕ್ತ ಪಡಿಸಿತು. ಅದಕ್ಕೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ತಮ್ಮ ಸಹಮತವನ್ನು ವ್ಯಕ್ತ ಪಡಿಸಿದ್ದವು.
  • ೯-೧೦-೧೯೭೮ ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರರಾಜ್ಯ ಸಚಿವರ ಸಭೆಯಲ್ಲಿ ಮೆಟ್ಟೂರು ಜಲಾಶಯಕ್ಕೆ ೨೬೦ರಿಂದ ೨೮೦ ಟಿ.ಎಮ್.ಸಿ ವರೆಗೆ ನೀರು ಬಿಡಬೇಕೆಂಬ ತಮಿಳುನಾಡಿನ ಹೇಳಿಕೆಗೆ ಕರ್ನಾಟಕ ತೀರ್ವ ವಿರೋಧ ವ್ಯಕ್ತಪಡಿಸಿತು. ಅಂದಿನ ಸಭೆಯೂ ಅಪೂರ್ಣವಾಗಿತ್ತು.
  • ೨೭-೯-೧೯೮೦ ರಂದು ಮದ್ರಾಸಿನಲ್ಲಿ ನಡೆದ ಅಂತರರಾಜ್ಯ ಮುಖ್ಯಮಂತ್ರಿಗಳ ಸಭೆಯಲ್ಲಿ ಕರ್ನಾಟಕ ರಾಜ್ಯವು ಸಮಸ್ಯೆಗಳ ಸೌಹಾರ್ದಯುತ ಇತ್ಯರ್ಥಕ್ಕಾಗಿ ಹಾಗೂ ಕಾವೇರಿ ನದಿ ಕಣಿವೆಯ ನೀರಿನ ಸಮಾನ ಹಂಚಿಕೆಯ ಬಗ್ಗೆ ತಾನು ತಯಾರಿಸಿದ್ದ ನ್ಯಾಯಯುತವಾದ ೧೦ ಅಂಶಗಳ ಸೂತ್ರವನ್ನು ಸಲ್ಲಿಸಿತು. ಈ ಸೂತ್ರಗಳ ಅಧಾರದ ಮೇಲೆ ನದಿ ಕಣಿವೆಯ ನಾಲ್ಕೂ ರಾಜ್ಯಗಳೂ ಕರಡು ಒಪ್ಪಂದಗಳನ್ನು ತಯಾರಿಸಿ ಸಲ್ಲಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
  • ೨೪-೧-೧೯೮೧ ರಂದು ಕೇರಳ ರಾಜ್ಯವು ಕರ್ನಾಟಕವು ರೂಪಿಸಿದ್ದ ೧೦ ಸೂತ್ರಗಳ ಬಗ್ಗೆ ತನ್ನ ವ್ಯಾಖ್ಯಾನ ಸಹಿತ ಪತ್ರವನು ಕಳಿಸಿತು. ೭-೫-೧೯೮೧ ರಂದು ತಮಿಳುನಾಡು ತನ್ನ ಕರಡು ಪ್ರಸ್ತಾಪವನ್ನು ಸಲ್ಲಿಸಿತು.
  • ೪-೯-೧೯೮೧ ರಂದು ಪಾಂಡಿಚೆರಿಯು ಕರ್ನಾಟಕದ ಪ್ರಸ್ತಾಪದ ಬಗ್ಗೆ ತನ್ನದೇ ಆದ ನಿಲುವನ್ನು ಪ್ರಸ್ತಾಪಿಸಿತು.
ಈ ಎಲ್ಲಾ ಬೆಳವಣಿಗೆಗಳಾದ ನಂತರ ೧೯-೪-೧೯೯೦ ರವರೆಗೆ ಹತ್ತಾರು ಸಭೆಗಳನ್ನು ಕರ್ನಾಟಕ ರಾಜ್ಯ ನಡೆಸಿತಾದರೂ ತಮಿಳುನಾಡು ಅದ್ಯಾವುದಕ್ಕೂ ಸಮ್ಮತಿಸದೇ ತನ್ನದೇ ಹಳೆಯ ಹಠವನ್ನು ಹಿಡಿದು ಕೂತಿತ್ತು. ಕರ್ನಾಟಕವು ಪ್ರತಿಪಾದಿಸುತ್ತಾ ಬಂದಿದ್ದ ’ರಾಷ್ಟ್ರೀಯ ಜಲ ನೀತಿ’ಗೆ ತಮಿಳುನಾಡಿನ ಒತ್ತಾಯಕ್ಕೆ ಮಣಿದಿದ್ದ ಕೇಂದ್ರ ಸರ್ಕಾರವು ಸಹಮತ ವ್ಯಕ್ತ ಪಡಿಸಲಿಲ್ಲ. ಸರ್ವೋಚ್ಚ ನ್ಯಾಯಾಲಯವೂ ಈ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕೆಂದು ಹಲವು ಬಾರಿ ಸೂಚನೆಯನ್ನು ನೀಡಿತ್ತಾದರೂ ಅದಕ್ಕೆ ಸ್ಪಂದಿಸದೇ ಕೇಂದ್ರವನ್ನು ಮಣಿಸಿದ್ದ ತಮಿಳುನಾಡಿನ ಆಸೆಯಂತೆಯೇ ರಚಿತವಾದ ’ಕಾವೇರಿ ನ್ಯಾಯಮಂಡಳಿ’ಯ ಮುಂದೆ ಕರ್ನಾಟಕ ತನ್ನ ವಾದವನ್ನು ಸಮರ್ಥವಾಗಿಯೇ ಮಂಡಿಸಿತಾದರೂ ತಮಿಳುನಾಡಿನ ದುಷ್ಟ ರಾಜಕೀಯದಿಂದಾಗಿ ನ್ಯಾಯ ಮಂಡಳಿ ನೀಡಿದ ಮಧ್ಯಂತರ ಆದೇಶ ಮತ್ತೆ ಕರ್ನಾಟಕಕ್ಕೆ ಅನ್ಯಾಯವೆಸಗಿತ್ತು.
 
(ಮುಂದಿನ ಸಂಚಿಕೆಯಲ್ಲಿ: ನ್ಯಾಯ ಮಂಡಳಿಯ ಮಧ್ಯಂತರ ಮತ್ತು ಅಂತಿಮ ಆದೇಶಗಳು)

                                                                                      ಮರಳಿ ಇನಿತೆನೆಗೆ