’ಸಹನಾ’ ವಿಶೇಷ ವರದಿ

ಅಭಿವೃದ್ದಿ ಶೀಲ ಭಾರತಕ್ಕೆ ಸೆಪ್ಟೆಂಬರ್ ೩೦ ೨೦೧೦ ಐತಿಹಾಸಿಕ ದಿನ! ಶತಮಾನದ ಸಮಸ್ಯೆಯಾದ ಮಸೀದಿಯೋ..ಮಂದಿರವೋ?? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಆರು ದಶಕಗಳಿಂದ ಕಟಕಟೆಯಲ್ಲಿ ನಡೆಯುತ್ತಿದ್ದ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಾದ-ವಿವಾದಕ್ಕೆ ದೇಶದ ನ್ಯಾಯಾಂಗ ವ್ಯವಸ್ಥೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಮೂಲಕ ತನ್ನ ಸಂವಿಧಾನದ ಘನತೆಯನ್ನು ಎತ್ತಿಹಿಡಿದ ಸಂದರ್ಭವಿದು!
ಸ್ವಾತಂತ್ರ್ಯ ಭಾರತದ ಹುಟ್ಟಿನ ಕೆಲ ಕಾಲದಲ್ಲಿಯೇ, ಇಲ್ಲಿ ಮಂದಿರವೋ ಅಥವಾ ಮಸೀದಿಯೋ ಎಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆರಂಭವಾದ ವ್ಯಾಜ್ಯ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಕಂಟಕಪ್ರಾಯವಾಗಿತ್ತು. ರಾಜಕೀಯ, ಧಾರ್ಮಿಕ ಸಮಸ್ಯೆಯಾಗಿ ತೀವ್ರತೆ ಪಡೆದಿತ್ತು. ಸಮಗ್ರತೆಯಲ್ಲಿ ಐಕ್ಯತೆ ಸಾರುವ ಭಾರತದ ಸಂವಿಧಾನಕ್ಕೆ ಸವಾಲಾಗಿ ಪರಿಗಣಿಸಿದ್ದ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ೧೯೯೨ರ ಡಿಸೆಂಬರ್ ೬ ರಂದು ಬಾಬ್ರಿ ಮಸೀದಿ ದ್ವಂಸ ಪ್ರಕರಣದ ನಂತರ ರಾಷ್ಟ್ರದ ತೀವ್ರತರ ರಾಜಕೀಯ ಸಮಸ್ಯೆಯಾಗಿ ಜಟಿಲಗೊಂಡಿತ್ತು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿಯೂ ಇದೊಂದು ಕಪ್ಪುಚುಕ್ಕೆಯಾಗಿ ಭಾರತದ ಸಂವಿಧಾನಕ್ಕೆ ಅಪಚಾರದ ಪರದೆಯನ್ನು ಹೊದೆಸಿತ್ತು.
೨.೭ ಎಕರೆ ವಿಸ್ತೀರ್ಣದಲ್ಲಿರುವ ವಿವಾದಿತ ಪ್ರದೇಶದಲ್ಲಿ ೧೯೫೮ ರಲ್ಲಿ ಬಾಬರನ ಮಸೀದಿ ಕಟ್ಟುವ ಮುನ್ನವೇ ಅಲ್ಲೊಂದು ದೇವಾಲಯವಿತ್ತು, ಅದರಲ್ಲೂ ಅದು ರಾಮನ ಜನ್ಮ ಸ್ಥಳವಾಗಿತ್ತೆಂಬ ವಿವಾದ ಹೆಮ್ಮರವಾಗಿ ಬೆಳೆದು ೧೯೯೨ರಲ್ಲಿ ಬಿಜೆಪಿ ಹಾಗೆ ಸಾಧಿಸುವುದನ್ನೇ ತನ್ನ ಪಕ್ಷದ ರಾಜಕೀಯ ಅಜೆಂಡಾ ಮಾಡಿಕೊಂಡಮೇಲೆ, ಈ ವಿವಾದ ಕೇವಲ ಅಯೋಧ್ಯೆಯದ್ದಾಗಿರದೆ ಧಾರ್ಮಿಕ ಸ್ವರೂಪ ಪಡೆದುಕೊಂಡು ದೇಶದುದ್ದಗಲದಲ್ಲೂ ಕಾವೇರಿಸಿತ್ತು. ಅದರಲ್ಲೂ ಬಾಬ್ರಿ ಮಸೀದಿ ಧ್ವಂಸವಾದ ದಿನದಿಂದ ಪರಿಸ್ಥಿತಿ ಅತಿಯಾಗಿ ಬಿಗಡಾಯಿಸಿ, ವಿವಾದ ಹಿಂಸೆ, ಕೋಮು ಗಲಭೆ ದ್ವೇಷಕ್ಕೆ ತಿರುಗಿತ್ತು. ಬಿಜೆಪಿಗಂತೂ ಇದು ಪ್ರತಿ ಚುನಾವಣೆಯ ವೋಟ್ ಬ್ಯಾಂಕ್ ವಿಚಾರವಾಗಿ, ರಾಮ ಜನ್ಮ ಭೂಮಿ ಕಟ್ಟಿ, ಆ ಮೂಲಕ ಹಿಂದೂ ಧರ್ಮದ ಉದ್ಧಾರವೇ ನಮ್ಮ ಪರಮ ಉದ್ದೇಶ ಎನ್ನುವಂತೆ ಪ್ರೊಜೆಕ್ಟ್ ಮಾಡಿಕೊಂಡು ಬಿಟ್ಟಿತ್ತು. ಈ ವಿವಾದವನ್ನು ಹುಟ್ಟಿ ಹಾಕಿ, ಗಲಭೆ ಮಾಡಿಸಿಯೇ ರಾಜಕೀಯ ನೆಲೆ ಕಂಡುಕೊಳ್ಳುವಲ್ಲಿ ಬಿಜೆಪಿ ನಾಯಕರು ಯಶಸ್ವಿ ಆಗಿದ್ದರು. ಇಷ್ಟು ದಿನ ಆತಂಕ ಹುಟ್ಟಿಸಿದ್ದ ಈ ಸೂಕ್ಷ್ಮ ವಿವಾದ ಸುಲಲಿತವಾಗಿ ಬಗೆಹರಿಯುವ ಸಾದ್ಯತೆಗಳಿಲ್ಲ ಅನ್ನುವುದು ಪ್ರತಿಯೊಬ್ಬ ಭಾರತೀಯನ ಅನಿಸಿಕೆಯಾಗಿತ್ತು.
ಕಳೆದ ಹದಿನೈದು ದಿನಗಳಿಂದ ಅಯೋಧ್ಯೆಯ ತೀರ್ಪಿನ ಬಗ್ಗೆ ರಾಷ್ಟ್ರದಲ್ಲಿ ಚರ್ಚೆ, ಆತಂಕವಿತ್ತು. ಇನ್ನೇನು ತೀರ್ಪು ಹೊರಬಿತ್ತು ಎನ್ನುವಾಗ ಮತ್ತೆ ಸರ್ವೋಚ್ಛ ನ್ಯಾಯಾಲಯದ ತಡೆ. ಮತ್ತಷ್ಟು ದುಗುಡ, ಏನೋ ಕಸಿವಿಸಿ. ರಾಷ್ಟ್ರದೆಲ್ಲೆಡೆ ಕಟ್ಟೆಚ್ಚರದ ಬಿಗಿಬಂದೋಬಸ್ತ್. ಹಲವೆಡೆ ನಿಷೇದಾಜ್ಞೆ, ಎಲ್ಲೆಲ್ಲು ಖಾಕಿಗಳ ಕಾರೋಬಾರು. ಶಾಲಾ ಕಾಲೇಜುಗಳಿಗೆ ರಜೆ... ಇಷ್ಟೆಲ್ಲಾ ಆದಮೇಲೆ ಜನ ಹೇಗೆ ತಾನೆ ನೆಮ್ಮದಿಯಿಂದ ಇರಲು ಸಾಧ್ಯ ಹೇಳಿ? ಪರಿಹಾರವೇ ಕಾಣದ ಸಮಸ್ಯೆ ಇದು ಅಂದುಕೊಂಡವರಿಗೆ ಲಖನೌ ಹೈಕೋರ್ಟ್ ನ ತ್ರಿಸದಸ್ಯ ನ್ಯಾಯ ಪೀಠದ ತೀರ್ಪು ಎಲ್ಲಾ ನಿರೀಕ್ಷೆಗಳನ್ನು ಹುಸಿಮಾಡಿದೆ; ನಮ್ಮ ಸಂವಿಧಾನದ ಹುರುಳನ್ನು ಎತ್ತಿಹಿಡಿದಿದೆ.
ತ್ರಿಸದಸ್ಯ ನ್ಯಾಯಪೀಠ ವಿವಾದಿತ ೨.೭ (೮೭ ಗುಂಟೆ ) ಎಕರೆ ಪ್ರದೇಶವನ್ನು ರಾಮ ಜನ್ಮಭೂಮಿ ನಿರ್ಮಾಣ ಸಮಿತಿ, ಬಾಬ್ರಿ ಮಸೀದಿ ಕ್ರಿಯಾಸಮಿತಿ ಹಾಗು ನಿರ್ಮೋಹಿ ಅಖಾಡಕ್ಕೆ ಮೂರು ಪಾಲು ಮಾಡುವ ಮೂಲಕ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ರೂಪಿಸಿದೆ. ತಲಾ ೨೭ ಗುಂಟೆ ಭೂಮಿ ಈಗ ಈ ಮೂವರು ಅರ್ಜಿದಾರರಿಗೆ ಸಿಗಲಿದೆ. ನ್ಯಾಯಪೀಠ, ಬಾಬ್ರಿ ಮಸೀದಿ ಕಟ್ಟುವ ಮುನ್ನ ಅಲ್ಲಿ ದೇವಾಲಯವಿದ್ದ ಐತಿಹಾಸಿಕ ಕುರುಹುಗಳನ್ನು ಎತ್ತಿ ಹಿಡಿದಿದೆ. ಹಾಗೆಯೇ ಮಸೀದಿ ನಡೆದುಕೊಂಡು ಬಂದ ದಾಖಲೆಗಳನ್ನು ಪರಿಶೀಲಿಸಿದೆ. ಇದಲ್ಲದೆ ಸುನ್ನಿ ವಕ್ಫ್ ಬೋರ್ಡ್ ನ ಹಾಗೂ ಮಸೀದಿಯ ಸುತ್ತ ಸ್ಮಶಾನ ಇತ್ತೆಂಬ ಅರ್ಜಿಯನ್ನು ವಜಾಮಾಡಲಾಗಿದೆ. ಮೂರು ತಿಂಗಳ ಕಾಲ ವಿವಾದವಿದ್ದ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದು, ಅತೃಪ್ತರು ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಬಹುದಾಗಿದೆ.
ಲಖ್ನೋ ನ್ಯಾಯಾಲಯದ ಈ ತೀರ್ಪು ಸದ್ಯದ ಪರಿಸ್ಥಿತಿಯಲ್ಲಿ ಸ್ವಾಗತಾರ್ಹವೆನ್ನಬಹುದು. ನ್ಯಾಯಮೂರ್ತಿಗಳಾದ ಡಿ.ವಿ. ಶರ್ಮಾ, ಸುಧೀರ್ ಅಗರವಾಲ್ ಹಾಗು ಎಸ್. ಯು. ಖಾನ್ ಅವರ ಸುದೀರ್ಘ ವಿಚಾರಣೆ-ಆಲಿಕೆಯ ಒಟ್ಟಾರೆ ಶ್ರಮದ ಫಲ ಈ ತೀರ್ಪು. ನ್ಯಾಯಮೂರ್ತಿ ಡಿ.ವಿ. ಶರ್ಮಾ ಅವರಿಗಿದು ಮರೆಯಲಾಗದ ಐತಿಹಾಸಿಕ ತೀರ್ಪು. ಇದು ಅವರ ನ್ಯಾಯಾಧಿಪತ್ಯದಲ್ಲಿ ಬರಲಿರುವ ಕೊನೆಯ ತೀರ್ಪು! ಅಕ್ಟೋಬರ್ ೧ ದ ರಿಂದ ಅವರು ನಿವೃತ್ತ ನ್ಯಾಯಮೂರ್ತಿ!!
ರಾಜಕೀಯವಾಗಿ ಯಾರಿಗೆ ಲಾಭ?!
ಅಯೋಧ್ಯೆಯ ತೀರ್ಪು ರಾಜಕೀಯವಾಗಿ ಬಿಜೆಪಿಗೇ ಲಾಭದಾಯಕ ಎಂದು ಹೇಳಬಹುದು. ಅಯೋಧ್ಯೆಯ ರಾಮ ಜನ್ಮಭೂಮಿ ಪರವಾಗಿ ಹೋರಾಡಿದ ಬಿಜೆಪಿಗೆ, ಮಸೀದಿಯ ಸ್ಥಳದಲ್ಲಿ ದೇವಾಲಯ ಇತ್ತೆಂಬುದನ್ನು ನ್ಯಾಯಾಲಯ ಬೆಂಬಲಿಸಿರುವುದು ಕೋಡು ಬರಿಸುವುದರಲ್ಲಿ ಅನುಮಾನವಿಲ್ಲ. ಅಲ್ಲಿ ಇನ್ನು ರಾಮ ಜನ್ಮ ಭೂಮಿ ನಿರ್ಮಾಣಕ್ಕೆ ಬಿಜೆಪಿಯೊಂದಿಗೆ ಇಡೀ ಸಂಘ ಪರಿವಾರ, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಇತರೆ ಹಿಂದೂ ಸಂಘಟನೆಗಳು ಮುಂದಾಗುವುದು ಖಚಿತ. ನಿಧಾನಗತಿಯಲ್ಲಿ ಸಾಗುತ್ತಿದ್ದ ಕಾರ್ಯ ಇನ್ನು ಮೂರು ತಿಂಗಳಿನಲ್ಲಿ ಬಿರುಸಾಗಲಿರುವುದೂ ನಿಜ. ಹಾಗೇ ಈ ಸಂಘಗಳು ಮುಂದಿನ ಚುನಾವಣಾ ತಂತ್ರವಾಗಿ ಮಥುರೆಯ ಕೃಷ್ಣ ದೇಗುಲದ ವಿಚಾರಕ್ಕೆ ಹೆಚ್ಚಿನ ಒತ್ತುಕೊಡುವ ಎಲ್ಲಾ ಸಾದ್ಯತೆಗಳು ಇವೆ. ಈ ಮದ್ಯೆ ಬಾಬ್ರಿ ಮಸೀದಿ ಕ್ರಿಯಾ ಸಮಿತಿ ಹೈಕೋರ್ಟ್ ತೀರ್ಪಿನ ವಿರುದ್ದ ಸರ್ವೋಚ್ಹ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳುವ ಮೂಲಕ ವಿರೋಧ ವ್ಯಕ್ತಪಡಿಸಿದೆ. ಹೀಗಿರುವಾಗ ಕಾಂಗ್ರೆಸ್ಸ್ ಸೇರಿದಂತೆ ಉಳಿದ ’ಸೆಕ್ಯುಲರ್’ ಪಕ್ಷಗಳು ತಮ್ಮ ಚುನಾವಣಾ ತಂತ್ರಗಳಿಗೆ ಈ ತೀರ್ಪನ್ನು ಯಾವರೀತಿ ಅಳವಡಿಸಿಕೊಳ್ಳುತಾರೆ ಎಂಬುದನ್ನು ಕಾಡು ನೋಡಬೇಕಿದೆ .