ಭಾಗ-೩
ಮೊನ್ಸಾಂಟೋ ಮೂಲತಹ ಒಂದು ಕೆಮಿಕಲ್ ಅಥವಾ ರಾಸಾಯನಿಕಗಳನ್ನು ತಯಾರಿಸುವ ಕಂಪನಿ. ಅದು ಡಿಡಿಟಿ ಇತ್ಯಾದಿ ಕೀಟ ನಾಶಕಗಳನ್ನು ತಯಾರಿಸುತ್ತಿತ್ತು. ಕೆಲವು ದಶಕಗಳ ಹಿಂದೆ ಮೊನ್ಸಾಂಟೋ ’ರೌಂಡ್ ಅಪ್’ ಎನ್ನುವ ಕಳೆನಾಶಕ ಔಷಧಿಯೊಂದನ್ನು ತಯಾರಿಸಿತು. ಈ ರೌಂಡ್ ಅಪ್ ಕಳೆಗಳನ್ನಷ್ಟೇ ಅಲ್ಲದೆ ಹುಟ್ಟುತ್ತಿದ್ದ ಎಲ್ಲ ಗಿಡಗಳನ್ನೂ ಮಗ್ಗ ಮಲಗಿಸಿ ಬಿಡುತ್ತಿತ್ತು. ಇದು ಮೊನ್ಸಾಂಟೋ ನ ವ್ಯಾಪಾರಕ್ಕೆ ಕಷ್ಟ ಕೊಡಲಾರಂಭಿಸಿತು. ಜಾಣ ಮೊನ್ಸಾಂಟೋ ೧೯೯೬ ರಲ್ಲಿ ರೌಂಡ್ ಅಪ್ ಗೆ ಬಗ್ಗದಂತ ಸೋಯಾಬೀನ್ ತಳಿಯ ಬೀಜವನ್ನು ಮಾರುಕಟ್ಟೆಗೆ ಬಿಟ್ಟಿತು. ಈ ಸೋಯಾಬೀನ್ ತಳಿ ರೌಂಡ್ ಅಪ್ ರಾಸಾಯನಿಕವನ್ನು ಅರಗಿಸಿಕೊಂಡು ಬೆಳೆಯುವ ಶಕ್ತಿ ಹೊಂದಿತ್ತು. ರೈತರು ಈ ಬೀಜವನ್ನು ಕೊಳ್ಳತೊಡಗಿದರು. ೧೯೯೬ರಲ್ಲಿ, ಅಮೆರಿಕಾದಲ್ಲಿ ಬೆಳೆಯುತ್ತಿದ್ದ ಒಟ್ಟು ಸೋಯಾಬೀನ್ ನಲ್ಲಿ ಶೇಕಡಾ ೨ ರಷ್ಟು ಮಾತ್ರ ಮೊನ್ಸಾಂಟೋನ ತಳಿಯದಾಗಿತ್ತು. ಆದರೆ ೨೦೦೮ ರಷ್ಟರಲ್ಲಿ ಒಟ್ಟು ಉತ್ಪಾದಿತ ಸೋಯಾಬೀನ್ ನಲ್ಲಿ ೯೦ಕ್ಕಿಂತಲೂ ಹೆಚ್ಚು ಭಾಗ ಮೊನ್ಸಾಂಟೋ ನ ಪೇಟೆಂಟೆಡ್ ಬೀಜದ ಜೀನ್ ಅನ್ನು ಹೊಂದಿತ್ತು!! ಹಾಗಂತ ೯೦ ಶೇಕಡಾದಷ್ಟು ಅಮೆರಿಕಾದ ರೈತರೂ ಮೊನ್ಸಾಂಟೋನಿಂದ ಬೀಜ ಖರೀದಿಸಿರಲಿಲ್ಲ. ಆದರೂ ಅವರು ಬೆಳೆದ ಸೋಯಾಬೀನ್ ನಲ್ಲಿ ಮೊನ್ಸಾಂಟೋ ನ ಜೀನ್ ಇತ್ತು!! ಅದು ಹೇಗೆ??
ಅದು ಹೀಗೆ: ರೈತ "ಎ" ಹತ್ತಿರ ನೂರು ಎಕರೆ ಜಮೀನಿದೆ. ಅದರಲ್ಲಿ ಆತ ತನ್ನದೇ ಜಮೀನಿನಲ್ಲಿ ತಲೆತಲಾಂತರದಿಂದ ಬೆಳೆಯುತ್ತಿರುವ ಸೋಯಾಬೀನ್ ನ ಶೇಖರಿತ ಬೀಜವನ್ನು ಉಪಯೋಗಿಸಿ ನಾಟಿ ಮಾಡುತ್ತಾನೆ. ಅವನ ಜಮೀನಿನ ಪಕ್ಕದ ಜಮೀನು ರೈತ "ಬಿ" ಯದ್ದು. ಅವನ ಹತ್ತಿರ ೩೦ ಎಕರೆ ಜಮೀನಿದೆ. ಅವನಿಗೆ ಮೊನ್ಸಾಂಟೋ ಅತಿ ಅಗ್ಗದ ದರದಲ್ಲಿ ತನ್ನ ಪೇಟೆಂಟೆಡ್ ಬೀಜವನ್ನು ಬಿತ್ತಲು ಕೊಟ್ಟಿದೆ. ಅದರ ಕಟಾವು, ಅದನ್ನು ಮಾರಿಸುವ ಜವಾಬ್ದಾರಿಯನ್ನೂ ತಾನೇ ಹೊತ್ತಿದೆ. ಮಾರುಕಟ್ಟೆಯಲ್ಲಿ ಒಂದು ಮೂಟೆ ಸೋಯಾಬೀನ್ ಗೆ ೫೦ ಡಾಲರ್ ಬೆಲೆ ಇದ್ದರೆ ಮೊನ್ಸಾಂಟೋ ಒಂದು ಮೂಟೆಗೆ ೫೫ ಡಾಲರ್ ಕೊಡಲು ಒಪ್ಪಿದೆ. ರೈತ "ಬಿ" ಖುಶಿಯಿಂದ ಮೊನ್ಸಾಂಟೋನ ಬೀಜವನ್ನು ನಾಟಿ ಮಾಡುತ್ತಾನೆ. ರೈತ "ಎ" ಮತ್ತು ರೈತ "ಬಿ" ಇಬ್ಬರ ಫಸಲೂ ಬೆಳೆಯುತ್ತವೆ. ಕೀಟಗಳೂ, ದುಂಬಿಗಳು, ಚಿಟ್ಟೆಗಳು ತಮ್ಮ ನೈಸರ್ಗಿಕ ಚಟುವಟಿಕೆಯಂತೆ ಯಾವುದೇ ತಾರತಮ್ಯವಿಲ್ಲದಂತೆ ರೈತ "ಎ" ಮತ್ತು ರೈತ "ಬಿ" ಇಬ್ಬರ ಫಸಲಿನಲ್ಲೂ ಪರಾಗಸ್ಪರ್ಷ ಮಾಡುತ್ತವೆ. ಬೆಳೆ ಕಟಾವಿಗೆ ಬರುತ್ತದೆ. ರೈತ "ಬಿ" ಮೊನ್ಸಾಂಟೋಗೆ ಬೆಳೆಯನ್ನು ವಹಿಸಿ ದುಡ್ಡು ಎಣಿಸಿಕೊಳ್ಳುತ್ತಾನೆ. ರೈತ "ಎ" ಬೆಳೆ ಮಾರಾಟ ಮಾಡಲು ಕೊಳ್ಳುವವರನ್ನು ಹುಡುಕುತ್ತಾನೆ. ಆ ಸಮಯದಲ್ಲಿ ಮೊನ್ಸಾಂಟೋನ ಒಂದು ಇನ್ವೆಸ್ಟಿಗೇಟರ್ಸ್ ಗಳ (ಸಂಶೋಧಕರ) ತಂಡ ರೈತ "ಎ" ನಲ್ಲಿಗೆ ಬರುತ್ತಾರೆ. "ನೋಡಪ್ಪಾ ನೀನು ಬೆಳೆದಿರುವ ಸೋಯಾಬೀನ್ ನಲ್ಲಿ ನಮ್ಮ ಸೋಯಾಬೀನ್ ತಳಿ ಮಿಶ್ರವಾಗಿದೆ ಎಂದು ನಮಗೆ ಸುದ್ದಿ ಬಂದಿದೆ...ನಾವು ಅದನ್ನು ಪರಿಶೀಲಿಸಬೇಕು. ಯಾಕಂದ್ರೆ ನಮ್ಮದು ಪೇಟೆಂಟೆಡ್ ತಳಿ. ನಮ್ಮ ಅನುಮತಿಯಿಲ್ಲದೆ ಯಾರೂ ಅದನ್ನು ಬೆಳೆಯುವಂತಿಲ್ಲ. ಹಾಗೇನಾದರೂ ಯಾರಾದರೂ ನಮ್ಮ ತಳಿಯನ್ನು ಕದ್ದು ಬೆಳೆ ಬೆಳೆದರೆ ಅವರನ್ನು ಕೋರ್ಟ್ ಮೆಟ್ಟಿಲು ಹತ್ತಿಸುತ್ತೇವೆ" ಎನ್ನುತ್ತಾರೆ.
ರೈತ "ಎ" ಗೆ ಗೊತ್ತು. ಅವನು ಮೊನ್ಸಾಂಟೋನ ತಳಿಯನ್ನು ಬೆಳೆದೇ ಇಲ್ಲ. ಅದೇ ಧೃಡತೆಯಿಂದ ಅವನು ತನ್ನ ಸೋಯಬೀನ್ ಬೆಳೆಯ ಪರೀಕ್ಷೆಗೆ ಒಪ್ಪುತ್ತಾನೆ. ಮೊನ್ಸಾಂಟೋ ಮೂರನೇ ಪಾರ್ಟಿಯೊಂದರಿಂದ ಪರೀಕ್ಷೆ ನಡೆಸುತ್ತದೆ. ಪರೀಕ್ಷೆಯ ತೀರ್ಪು ಹೊರಬರುತ್ತದೆ. ರೈತ "ಎ" ಮೊನ್ಸಾಂಟೋ ತಳಿಯ ಜೀನ್ಸ್ ಇರುವ ಸೋಯಾಬೀನ್ ಅನ್ನೇ ಬೆಳೆದಿರುತ್ತಾನೆ! ರೈತ "ಎ" ದಿಕ್ಕುಗೆಡುತ್ತಾನೆ!! ಇದು ಹೇಗೆ ಸಾಧ್ಯ??! ಅದು ಹೀಗೆ-ರೈತ "ಬಿ" ನ ಜಮೀನಿನಲ್ಲಿ ಹಾಕಿದ್ದ ಸೋಯಾಬೀನ್ ಮತ್ತು "ಎ" ನ ಜಮೀನಿನಲ್ಲಿ ಹಾಕಿದ್ದ ಸೋಯಾಬೀನ್ ಪೈರಿನ ನಡುವೆ ತಾರತಮ್ಯವಿಲ್ಲದೆ ಆಟ ಆಡಿಕೊಂಡು ಪರಾಗಸ್ಪರ್ಷ ಮಾಡಿದ್ದ ದುಂಬಿಗಳು ಇನ್ನಿತರ ಕೀಟಗಳು, ರೈತ "ಎ" ನ ಬೆಳೆಗೆ ಮೊನ್ಸಾಂಟೋ ನ ತಳಿಯನ್ನು ತಳುಕು ಹಾಕಿರುತ್ತವೆ!!! ರೈತ "ಎ" ಗೆ ಈಗ ಎರಡೇ ಮಾರ್ಗ. ಒಂದು ಮೊನ್ಸಾಂಟೋ ವಿರುದ್ಧ ಕೋರ್ಟ್ ಗೆ ಹೋಗಬೇಕು ಅಥವಾ ತನ್ನ ಬೆಳೆಯನ್ನು ಮೊನ್ಸಾಂಟೋಗೆ ಮಾರಿ ಮುಂದಿನ ವರ್ಷದಿಂದ ಅವರದ್ದೇ ತಳಿಯನ್ನು ಬೆಳೆಯಬೇಕು. ಅವನು ಮೊನ್ಸಾಂಟೋ ವಿರುದ್ಧ ಕೋರ್ಟ್ ಗೆ ಹೋಗಲಾರ. ಹೋದರೂ ಅವನ ಕೇಸು ಉಳಿಯಲಾರದು. ಯಾಕೆಂದರೆ ಮೊನ್ಸಾಂಟೋ ಹಣವಂತ, ಅದು ಅಮೆರಿಕಾದ ಶಾಸಕಾಂಗ, ನ್ಯಾಯಾಂಗದ ಪ್ರಮುಖ ವ್ಯಕ್ತಿಗಳನ್ನು ತನ್ನ ಬುಟ್ಟಿಯಲ್ಲಿಟ್ಟುಕೊಂಡಿದೆ. ಅಮೆರಿಕಾದ FDA (ಫುಡ್ ಅಂಡ್ ಡ್ರಗ್ ಅಡ್ಮಿನಿಷ್ಟ್ರೇಶನ್) ನ ಚೇರ್ಮನ್ ಮೊನ್ಸಾಂಟೋ ನ ಲ್ಯಾಬ್ ನಲ್ಲಿ ಸಂಶೋಧಕರಾಗಿದ್ದವರು!! ಅಮೆರಿಕಾದ ಸುಪ್ರೀಮ್ ಕೋರ್ಟ್ ನ ಜಡ್ಜ್ ಒಬ್ಬರಾಗಿರುವ ಕ್ಲಾರೆನ್ಸ್ ಥಾಮಸ್ ಒಮ್ಮೆ ಮೊನ್ಸಾಂಟೊ ನ ವಕೀಲರಾಗಿದ್ದವರು!! ಇಂತಹ ಚಕ್ರವ್ಯೂಹದಲ್ಲಿ ರೈತ "ಎ" ಹೇಗೆ ಬಚಾವಾಗಬಲ್ಲ?!
ಅಮೆರಿಕಾದಲ್ಲಿ ಈಗ ಕಾನೂನಿದೆ. ಪ್ರಯೋಗಶಾಲೆಗಳಲ್ಲಿ ಯಾರು ಹೊಸ ಕುಲಾಂತರಿ ತಳಿಗಳನ್ನು ಸೃಷ್ಟಿ ಮಾಡಿದರೂ ಅದರ ಸಂಪೂರ್ಣ ಒಡೆತನ ಸೃಷ್ಟಿಸಿದವನದ್ದೇ ಆಗುತ್ತದೆ. ಹಾಗಾಗಿ ಈಗ ಅಮೆರಿಕದಲ್ಲಿ ಪಬ್ಲಿಕ್ ಸೀಡ್ ಅಥವಾ ಸಾರ್ವತ್ರಿಕ ಬೀಜಗಳಿಲ್ಲ!! ಪ್ರತೀ ಬೀಜವೂ ಒಂದಿಲ್ಲೊಂದು ಕಂಪನಿಯದ್ದೇ! "ಅಮೆರಿಕಾದಲ್ಲಿ ಸಾಮಾನ್ಯ ರೈತನಾಗಿರಬೇಕಾದರೆ ಸೋಯಾಬೀನ್ ಬೆಳೆಯಬೇಕಾದರೆ ಮೊನ್ಸಾಂಟೋ ಜೊತೆ ಹಾಸಿಗೆಯಲ್ಲಿರಬೇಕು" ಎನ್ನುತ್ತಾನೆ ನೊಂದ ರೈತನೊಬ್ಬ.
ಯಾಕೆ ರೈತರಿಗೆ, ಜನರಿಗೆ ಮೊನ್ಸಾಂಟೋ ಎಂಬ ಬೀಜ ರಾಕ್ಷಸನ ಬಗ್ಗೆ ಸಾಕಷ್ಟು ಅರಿವಿಲ್ಲ? ಚರ್ಚೆಗಳಾಗಿಲ್ಲ? ಪ್ರಶ್ನೆ ಬರುತ್ತದೆ. ಅಪ್ಪ ಜಾರ್ಜ್ ಬುಶ್, ಮಗ ಜಾರ್ಜ್ ಬುಶ್, ಕ್ಲಿಂಟನ್ ಎಲ್ಲರೂ ಮೊನ್ಸಾಂಟೋನ ಲಾಬಿಗೆ ತಲೆತೂಗಿದವರೇ! ರೈತರು ತಮ್ಮದೇ ಆದ ಬೀಜಗಳನ್ನು ಉಳಿಸಿಕೊಳ್ಳಲು ಪೂರಕವಾಗದಂತಹ ಅನೇಕ ಕ್ರೂರ ಕಾನೂನುಗಳನ್ನು ಮಾಡಲು ಇವರೆಲ್ಲರ ಆಡಳಿತಗಳೂ ಸಹಾಯ ಮಾಡಿವೆ. ಇವರ ಶಕ್ತಿ-ಯುಕ್ತಿ ಎದುರಿಗೆ ಅಮೆರಿಕನ್ ರೈತ ಅಸಹಾಯಕ; ಎಲ್ಲ ದೇಶದ ಸಾಮಾನ್ಯ ರೈತರಂತೆಯೇ.
ನಮ್ಮ ದೇಶಕ್ಕೆ ಮೊನ್ಸಾಂಟೋ ಎಂಬ ವಿಷದ ಕೀಟ ಇನ್ನೂ ಹರಡಿಲ್ಲ, ವ್ಯಾಪಿಸಿಲ್ಲ. ಮೊನ್ಸಾಂಟೋ ಈಗಾಗಲೇ ಭಾರತದಲ್ಲಿ ನೆಲೆನಿಂತು ಬೇರು ಬಿಡುವ ಬೃಹತ್ ಯೋಜನೆಗಳನ್ನು ಹಾಕಿಕೊಂಡಿದೆ. ಮೊನ್ನೆ ಮೊನ್ನೆ ಆದ ಬಿಟಿ ಬದನೆಯ ಗಲಾಟೆ ನಿಮಗೆ ನೆನಪಿರಬಹುದು. ಆ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಇಷ್ಟರಲ್ಲಿ ಮೊನ್ಸಾಂಟೋ ಭಾರತದ ಯಾವುದೋ ರಾಜಕಾರಣಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರಲೂಬಹುದು. ಅವನ ಮೂಲಕ, ಬಿಟಿ ಬದನೆಯ ಮೂಲಕ ನಮ್ಮ ನಿಮ್ಮ ನೆಲ, ಅಡುಗೆ ಮನೆ, ದೇಹವನ್ನು ಆವರಿಸಿಕೊಳ್ಳುವ ದಿನ ಬರುವಂತಾಗದಿರಬೇಕು. ನಮ್ಮ ನೆಲ, ನಮ್ಮ ಬೀಜ, ನಮ್ಮ ಜೀವನ ಈ ಬೀಜ ರಾಕ್ಷನ ತೆಕ್ಕೆಗೆ ಬೀಳಬಾರದು. ನಮ್ಮ ಬೀಜ ಉಳಿಸಿಕೊಳ್ಳಬೇಕಾದರೆ ಕುಲಾಂತರಿ ತಳಿಗಳನ್ನು ವಿರೋಧಿಸಿ ಒದ್ದೋಡಿಸಲೇ ಬೇಕು.
(ಮುಂದುವರಿಯುವುದು)