ಅಂಗಳ      ಪಂಚವಟಿ
Print this pageAdd to Favorite
 
 
 
 
 

 (ಪುಟ-೧೦) ದಿಗ್ಭ್ರಾಂತಿ ಹುಟ್ಟಿಸಿದ ಜೆರ್ರಿ ಸ್ಪ್ರಿಂಗರ್!!!

ಬೇಲಾ ಮರವ೦ತೆ
 
 
ಅಮೆರಿಕಾಗೆ ಬಂದು ಕೆಲವೇ ತಿಂಗಳಾಗಿದ್ದರಿಂದ ನನ್ನ ಹತ್ತಿರ ಸ್ವತಂತ್ರವಾಗಿ ಡ್ರೈವ್ ಮಾಡಲು ಲೈಸೆನ್ಸ್ ಇರಲಿಲ್ಲ. ವೀಕೆಂಡುಗಳೇನೋ ಜೊಂಯ್ ಎಂದು ಕಳೆದು ಹೋಗುತ್ತಿದ್ದವು. ವಾರದ ಉಳಿದ ದಿನಗಳಲ್ಲಿ ಮನಸ್ಸಿಗೆ ಬೋರಾಗದಿರಲೆಂದು ನಾನೇ ಏನಾದ್ರೂ ಕಾರ್ಯಕ್ರಮ ರೂಪಿಸಿಕೊಳ್ಳಬೇಕಾಗುತ್ತಿತ್ತು. ನನ್ನ ನೆರವಿಗೆ ನನ್ನದೇ ದೋಣಿಯಲ್ಲಿ ಪಯಣಿಸುತ್ತಿದ್ದ ನನ್ನ ಕೆಲವು ಅಪಾರ್ಟ್ಮೆಂಟ್ ಸಖಿಯರಿದ್ದರು. ಶಾಲೆ ಕಾಲೇಜುಗಳಲ್ಲಿ ನನಗಿದ್ದ ಸ್ನೇಹಿತರಿಗಿಂತಲೂ ನಾವು ಏನೋ ಒಂದು ರೀತಿಯಲ್ಲಿ ಆಪ್ತರಾಗಿದ್ದೆವು. ನಾವೆಲ್ಲರೂ ಬೇರೆ ಬೇರೆಯದೇ ಸಾಮಾಜಿಕ, ಆರ್ಥಿಕ ಹಿನ್ನೆಲೆಯಿಂದ ಬಂದವರು. ನಮ್ಮ ಇಷ್ಟ ಅನಿಷ್ಟಗಳಲ್ಲಿ ಯಾವ ರೀತಿಯ ಸಾಮ್ಯವೂ ಇರಲಿಲ್ಲ. ನಾನಂತೂ ತೀರಾ ಇತ್ತೀಚೆಗೆ ಬಂದವಳಾಗಿದ್ದೆ. ಆದರೂ ನಾವು ಯಾವ ತೊಂದರೆಯೂ ಇಲ್ಲದೆ ಒಬ್ಬರನ್ನೊಬ್ಬರು ಕಿಚಾಯಿಸಿಕೊಂಡು ಖುಷಿಯಿಂದ ಒಡನಾಡುತ್ತಿದ್ದೆವು. ವಾರದ ದಿನಗಳಲ್ಲಿ ಏನಾದರೂ ಔಟಿಂಗ್ ಗೆ ಪ್ಲಾನ್ ಹಾಕುತ್ತಿದ್ದೆವು.
 
ಒಂದು ದಿನ ಶಾಪಿಂಗ್ ಆದರೆ ಮತ್ತೊಂದು ದಿನ ಲೋಕಲ್ ಪಬ್ಲಿಕ್ ಲೈಬ್ರರಿಗೆ, ಮತ್ತೊಂದು ದಿನ ಪಾರ್ಕಿಗೆ, ಇನ್ನೊಂದು ದಿನ ಜಿಮ್ ಗೆ, ಹಾಗೇ ಮತ್ತೊಂದು ದಿನ ತಮ್ಮ ಕೆಲಸ ಮಾಡಿಕೊಂಡು ಮನೆಯಲ್ಲಿರಲು...ಹೀಗೆ ನಮ್ಮ ಪ್ಲಾನ್ ಸಖಿಯರ ಅಗತ್ಯಕ್ಕೆ ಅನುಗುಣವಾಗಿ ತಯಾರಾಗುತ್ತಿತ್ತು. ಲೈಸನ್ಸ್ ಇದ್ದ ಪುಣ್ಯಾತ್ಗಿತ್ತಿಯರ ಕಾರ್ ಗಳಲ್ಲಿ ಇಲ್ಲದವರೆಲ್ಲ ತುಂಬಿಕೊಂಡು ಊರುಸುತ್ತಲು ಹೊರಡುತ್ತಿದ್ದೆವು. ಅವರ ಬರ್ತ್ಡೇ ಪಾರ್ಟಿ, ಇವರ ಬೇಬಿ ಶವರ್, ಅವರ ಆನಿವರ್ಸರಿ, ಮನೇಲಿ ಅದು ಖಾಲಿಯಾಗಿ ಹೋಗಿದೆ... ಹೀಗೇ ಏನೋ ಒಂದು ನೆಪದಿಂದ ಎಲ್ಲೇ ಸುತ್ತಲು ಹೋದರೂ ಪ್ರತಿ ಬಾರಿಯೂ ಒಂದಿಲ್ಲೊಂದು ಶಾಪಿಂಗ್ ಸುತ್ತು ನಡೆದೇ ನಡೆಯುತ್ತಿತ್ತು.
 
ಹೀಗೆ ಯಾವ ಕಾರ್ಯಕ್ರಮವೂ ಇಲ್ಲದ ಒಂದು ಬಡಪಾಯಿ ದಿನ ಮನೆಯಲ್ಲಿದ್ದೆ. ಬೆಳಿಗ್ಗೆಯಿಂದಲೇ ಮನೆಯ ವ್ಯಾಕ್ಯೂಮ್, ಅಡುಗೆ, ಲಾಂಡ್ರಿ, ಸ್ನಾನ ಎಲ್ಲ ಚಕಚಕನೆ ಮುಗಿಸಿ ಯಾವುದೂ ಕೆಲಸವಿಲ್ಲದೆ ಏನು ಮಾಡಲಿ ಅಂತ ಯೋಚಿಸಿಕೊಳ್ಳುತ್ತಿದ್ದೆ. ಪುಸ್ತಕ ಹಿಡಿಯಲು ಮನಸ್ಸು ಬರಲಿಲ್ಲ. ಜಿ ಆರ್ ಇ ಓದಲಂತೂ ಮೂಡೇ ಇರಲಿಲ್ಲ. ಸುಮ್ಮನೆ ಒಂದು ಗಂಟೆ ನೋಡೋಣ ಅಂತ ಟಿ ವಿ ಆನ್ ಮಾಡಿಕೊಂಡೆ. ನಾನು ಬಂದಾಗಿನಿಂದ ಬೋರಾದರೆ ಹಿಂದಿ ಅಥವಾ ಕನ್ನಡ ಮೂವಿಗಳ ಡಿವಿಡಿ, ಸಿ ಎನ್ ಎನ್ ನಲ್ಲಿ ಬರುವ ಆಂಡರ್ಸನ್ ಕೂಪರ್ ಎನ್ನುವವನ ನ್ಯೂಸ್ ಶೋ, ಪ್ರೈಮ್ ಟೈಮ್ ನ್ಯೂಸ್, ಟ್ರಾವೆಲ್ ಚಾನೆಲ್- ಇವನ್ನು ಪ್ರಶಾಂತನ ಜೊತೆ ಕೂತು ನೋಡುವುದನ್ನು ಬಿಟ್ಟರೆ ಬೇರೆ ಏನೂ ನೊಡಿರಲಿಲ್ಲ. ಆಗಾಗ ಒಮ್ಮೆ ಕಾರ್ಟೂನ್ ಚಾನೆಲ್,  ಪ್ರಶಾಂತ ನೋಡುತ್ತಿದ್ದ ಸ್ಪೋರ್ಟ್ಸ್ ಗಳನ್ನು ನೋಡಿದ್ದೂ ಇತ್ತು.  ಅವತ್ತು ಹಾಗೇ ಸೋಫಾದ ಮೇಲೆ ಕಾಲು ಚಾಚಿಕೊಂಡು ರಿಮೋಟ್ ಒತ್ತತೊಡಗಿದೆ. ಅಸಂಖ್ಯಾತ ಚಾನೆಲ್ಗಳಿದ್ದವು. ಒಂದರಲ್ಲಿ ಕ್ರಿಸ್ತನ ಲೀಲೆಗಳ ಬಗ್ಗೆ ಹಣ್ಣು ಹಣ್ಣು ಮುದುಕಿಯೊಬ್ಬಳು ಭಾವುಕಳಾಗಿ ಮಾತಾಡುತ್ತಿದ್ದಳು. ಮತ್ತೊಂದರಲ್ಲಿ ಚರ್ಚ್ ನ ಹಾಡುಗಾರಿಕೆ, ಒಂದಷ್ಟರಲ್ಲಿ ಕ್ರೀಡೆಗಳು, ಅಮೆರಿಕನ್ ಸೆನೆಟ್ ನ ನೇರ ಪ್ರಸಾರ, ಮೀನು ಹಿಡಿಯುವುದು, ಆಭರಣ ಮಾರುವುದು, ಮಕ್ಕಳನ್ನು ಹೆರುವ ಆಸ್ಪತ್ರೆಯ ದೃಶ್ಯಗಳು, ಕ್ಲಿಂಟ್ ಈಸ್ಟ್ವುಡ್ ನ ಯಾವುದೋ ಒಂದು ಚಲನಚಿತ್ರ, ಕಾರ್ಟೂನ್ ಗಳು, ಇಂಗ್ಲಿಷ್ ಹಿಪ್ ಹಾಪ್ ಹಾಡುಗಳು ಒಂದೊಂದನ್ನೇ ಐದೈದು ನಿಮಿಷ ನೋಡುತ್ತಾ ಚಾನೆಲ್ ಬದಲಿಸುತ್ತಾ ಹೋದೆ. ಇಷ್ಟು ಡಿಟೇಲ್ ಆಗಿ ಇಲ್ಲಿನ ಚಾನೆಲ್ ಗಳನ್ನು ತಡಕಾಡಿರಲಿಲ್ಲ.
 
ನೋಡ ನೋಡುತ್ತಿದ್ದಂತೇ ಸದಾ ಸದ್ದು ಮಾಡುವ ಹೊಸದೊಂದು ಪ್ರಪಂಚ ನಮ್ಮನೆಯ ಪೆಟ್ಟಿಗೆಯಲ್ಲೇ ಇದೆ ಎನಿಸತೊಡಗಿತು. ಒಂದು ಚಾನೆಲ್ ನಲ್ಲಿ ಧಡೂತಿ ಕಾಯದ ಹೆಂಗಸರಿಬ್ಬರು ಒಬ್ಬರ ಜುಟ್ಟು ಇನ್ನೊಬ್ಬರು ಹಿಡಿದು ಗುಂಜಾಡಿಕೊಂಡು, ಬಟ್ಟೆ ಬರೆಗಳು ಮೈ ಮೇಲಿಂದ ಜಾರಿದ್ದನ್ನೂ ಗಣಿಸದೇ ಶರಂಪರ ಜಗಳವಾಡುತ್ತಿದ್ದರು. ಈ ಅರೆನಗ್ನೆ ಮಹಾ ಕಾಯೆಯರು ಮಾತಾಡುವುದೂ ಕೇಳಿಸುತ್ತಿರಲಿಲ್ಲ. ಬರೀ ಬೀಪ್ ಬೀಪ್ ಎನ್ನುವ ಸೆನ್ಸರ್ ಸೌಂಡ್ ಗಳು ಕೇಳಿಸುತ್ತಿದ್ದವು. ಅತ್ತ ಅವರು ಜಗ್ಗಾಡುತ್ತಿದ್ದರೆ ಈ ಕಡೆ ಜನ ಅವರಿಗೆ ಹಂಗೆ ಮಾಡು ಹಿಂಗೆ ಮಾಡು ಅಂತ ಸಪೋರ್ಟ್ ಮಾಡುತ್ತಿದ್ದರು. ನನಗೆ ಆಶ್ಚರ್ಯ, ಗಾಬರಿ. ಇದೆಲ್ಲಿ ಹೀಗೆ ಕಾದಾಡುತ್ತಿದ್ದಾರಪ್ಪಾ? ಇದೇನಾದ್ರೂ ಹೊಸಥರದ ಡಬಲ್ಯೂ ಡಬಲ್ಯೂ ಎಫ್ ಇರಬಹುದಾ ಅಂತ ನೋಡಿದೆ. ಅಪ್ಪ ಅಮ್ಮನ ಕಣ್ತಪ್ಪಿಸಿ ತಮ್ಮ ಡಬಲ್ಯೂ ಡಬಲ್ಯೂ ಎಫ್ ನೋಡುತ್ತಿದ್ದುದನ್ನು ನಾನೂ ನೋಡಿದ್ದೆ. ಅದ್ಯಾವ ಸೀಮೆಯ ಕ್ರೌರ್ಯ ಅಂತ ಅಕ್ಕ-ನಾನು ಅವನಿಗೆ ಬೈದು, ಅಪ್ಪ ಅಮ್ಮನಿಂದಲೂ ಬೈಸಿ ಅವನ ನೋಡುವ ಚಟ ತಪ್ಪಿಸಿದ್ದೆವು.
 
ಎರಡು ನಿಮಿಷದಲ್ಲಿ ಯೂನಿಫಾರ್ಮ್ ಹಾಕಿದ್ದ ಇಬ್ಬರು ಗಂಡಸರು ಬಂದು ಆ ಹೆಂಗಸರನ್ನು ಹಿಡಿದು ಅಲ್ಲಿದ್ದ ಕುರ್ಚಿಗಳ ಮೇಲೆ ಕೂರಿಸಿದರು. ಅವರು ಮತ್ತೆ ಎದ್ದು ಕಿತ್ತಾಡದಿರಲಿ ಎಂದು ಅವರ ಭುಜ ಹಿಡಿದಿಟ್ಟುಕೊಂಡಿದ್ದರು. ಆ ಹೆಂಗಸರ ಬೈದಾಟ ನಿಂತಿರಲಿಲ್ಲ. ಸೂಟ್ ತೊಟ್ಟಿದ್ದ ಕೆಂಚು ಕೂದಲಿನ ಬಿಳಿಯನೊಬ್ಬ ಆ ಹೆಂಗಸರಿದ್ದ ವೇದಿಕೆ ಗೆ ಬಂದ. ಅವನ ಕೈಲಿ ಮೈಕ್ ಇತ್ತು. "ಈ ಹೆಂಗಸರಿಬ್ಬರ ಮನಸ್ಸು, ಮಿತ್ರತ್ವ ಮುರಿದಿರುವ ಸ್ಯಾಲಿ ನಮ್ಮ ಸ್ಟುಡಿಯೋದಲ್ಲೇ ಇದ್ದಾಳೆ. ಬ್ರೇಕ್ ನ ನಂತರ ಅವಳ ಕಥೆ ಕೇಳೋಣ" ಎಂದು ಬ್ರೇಕ್ ಗೆ ನಾಂದಿ ಹಾಡಿದ. ಆ ಪಾಟಿ ಮನಸ್ಸು ಮಿತ್ರತ್ವ ಮುರಿದುಕೊಂಡಿರುವ ಹೆಂಗಸರ ಕತೆಯನ್ನು ಪೂರ್ತಿ ನೋಡಲೇ ಬೇಕೆನ್ನುವ ಕುತೂಹಲ ಉಕ್ಕಿ ಬಂತು. ಚಾನೆಲ್ ಬದಲಿಸದೆ ಕೂತೆ. ಏನೆಲ್ಲಾ ಜಾಹೀರಾತುಗಳ ಜೊತೆಗೇ "ನಿಮ್ಮದೇನಾದರೂ ರಹಸ್ಯವಿದೆಯೇ? ನೀವು ನಿಮ್ಮ ಪಾರ್ಟ್ನರ್ ಗೆ ಮೋಸ ಮಾಡಿದ್ದೀರಾ? ನಿಮ್ಮ ಮಗು ಯಾರಿಂದ ಹುಟ್ಟಿದೆ ಎಂದು ತಿಳಿಯುವ ಅಗತ್ಯವಿದೆಯೇ? ನಮ್ಮ ಶೋ ನಲ್ಲಿ ಭಾಗವಹಿಸಿ, ನಿಮ್ಮ ಕಥೆ ಹಂಚಿಕೊಳ್ಳಿ..." ಅಂತೊಂದು ಜಾಹೀರಾತು ಬಂತು. ನನಗೆ ಅತ್ಯಾಶ್ಚರ್ಯ! ಇದೇನು ಈ ಹುಚ್ಚುತನ?! ನಿಮ್ಮ ಮಗು ಯಾರದ್ದೆಂದು ತಿಳಿಯುವ ಅಗತ್ಯ ನಿಮಗಿದೆಯೇ ಎಂದೆಲ್ಲಾ ಕೇಳುವಷ್ಟು?!!
 
ತಕ್ಷಣವೇ "ಜೆರ್ರಿ, ಜೆರ್ರಿ, ಜೆರ್ರಿ" ಎಂಬ ಉದ್ಗಾರ ಶುರುವಾಯಿತು. ಆಗ ಬ್ರೇಕು ಕೊಟ್ಟು ಹೋಗಿದ್ದ ಬಿಳಿಯ ಮತ್ತೆ ಬಂದ. "ಈ ಇಬ್ಬರು ಗೆಳತಿಯರ ಜೊತೆಗೂ ಸ್ನೇಹ ಮಾಡಿ, ಅವರಿಗೆ ತಿಳಿಯದಂತೆ ಅವರ ಇಬ್ಬರ ಜೊತೆಯಲ್ಲೂ ಸಂಬಂಧ ಬೆಳೆಸಿ ಸ್ನೇಹಕ್ಕೆ ದ್ರೋಹ ಮಾಡಿದ್ದಾಳೆ ಎಂಬ ಆಪಾದವಿರುವ ಸ್ಯಾಲಿ ಈಗ ನಿಮ್ಮ ಮುಂದೆ ಬರಲಿದ್ದಾಳೆ..." ಎಂದ! ಕ್ಯಾಮೆರಾಗಳು ಸ್ಟುಡಿಯೋ ಸೆಟ್ ನ ಆಚೆ ಹೊರಟವು. ಈ ಧಡೂತಿ ಡುಮ್ಮಿಯರಿಗೆ ಕಾಂಟ್ರಾಸ್ಟ್ ಆಗಿದ್ದ, ಪಕ್ಕಾ ಬಿಳಿ ಕೂದಲಿನ ಬಿಳಿ ಹೆಂಗಸು ಸ್ಯಾಲಿ ಜೀನ್ಸ್ ಮತ್ತು ಇನ್ನೇನು ಬಿದ್ದೇ ಹೋಗಲಿದೆಯೆನಿಸುವ ಬನೀನು ತೊಟ್ಟು ವೀರಾದಿ ವೀರೆ ಥರ ಬಂದಳು. ಅವಳ ಮುಖವನ್ನು ಹತ್ತಿರದಿಂದ ತೋರಿಸಿದರು. ಈ ಸುಂದರಿಗೆ ಮುಂದಿನ ಒಂದು ಹಲ್ಲೇ ಇರಲಿಲ್ಲ! ಇವರಿಬ್ಬರಲ್ಲಿ ಒಬ್ಬರ ಕೈಲಿ ಸರಿಯಾಗಿ ತಿಂದಿರಬೇಕು ಎಂದುಕೊಂಡೆ. ಅವಳು ಬರುತ್ತಿದ್ದಂತೆ ಆ ಹೆಂಗಸರು ಅವಳನ್ನು ಹೊಡೆಯಲು ಬರುವ ಪ್ರಯತ್ನ ಮಾಡಿದ್ದರು. ಇವಳು ಬಂದವಳೇ ಅವರಿಬ್ಬರನ್ನೂ ನೋಡಿ "ಹೌದು ನಾನು ನಿಮ್ಮ ಇಬ್ಬರನ್ನೂ ಪ್ರೀತಿಸುತ್ತೇನೆ...ನಮಗೆ ನಿಮ್ಮಿಬ್ಬರನ್ನೂ ಬಿಟ್ಟಿರೋಕೆ ಆಗಲ್ಲ...ನಾನು ನಿಮಗೆ ಬೇಕು ಅಂದ್ರೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು..." ಎಂದು ಮಾತು ಶುರು ಮಾಡಿದಳು. "ಇದೇನಪ್ಪಾ ಇಷ್ಟು ಅಸಂಬದ್ಧವಾಗಿ ಮಾತನಾಡುತ್ತಿದ್ದಾಳೆ ಇವಳು" ನಾನು ರೆಪ್ಪೆ ಮಿಟುಕಿಸದೆ ಕುಳಿತು ನೋಡುತ್ತಿದ್ದೆ.
 
ಅಷ್ಟರಲ್ಲಿ ಆ ವ್ಯಕ್ತಿಯ ಹೆಸರು ಜೆರ್ರಿ ಎಂದು ಗೊತ್ತಾಗಿತ್ತು. ಜೆರ್ರಿ ವೇದಿಕೆಗೆ ಬಂದ. ಎಲ್ಲರ ಕಥೆಯನ್ನೂ ವೀಕ್ಷಕರಿಗೆ ಸಾರಂಶಿಸುವಂತೆ "ಸ್ಯಾಲಿ ನಿನ್ನ ದ್ರೋಹದಿಂದ ಈ ಇಬ್ಬರು ಗೆಳತಿಯರಿಗೂ ನೋವಾಗಿದೆ. ಅವರಿಬ್ಬರೂ ಮೂರು ವರ್ಷದಿಂದ ಗಂಡ ಹೆಂಡತಿ ಥರ ಜೀವನ ನಡೆಸುತ್ತಿದ್ದರು. ನೀನು ಬಂದು ಪರಸ್ಪರರಿಗೆ ಗೊತ್ತಾಗದಂತೆ ಅವರಿಬ್ಬರ ಜೊತೆಯೂ ಸಂಬಂಧ ಬೆಳೆಸಿದೆ. ಆದರೆ ಇವತ್ತು ನಮ್ಮ ಶೋ ನಲ್ಲಿ ಅವರಿಬ್ಬರೂ ನಿನ್ನ ಜೊತೆ ಸಂಬಂಧ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ನೀನು ಮಾಡಿದ ಮೋಸ ಅವರಿಗೆ ನೋವುಂಟು ಮಾಡಿದೆ. ಏನು ಹೇಳುತ್ತೀಯಾ?" ಎಂದ. ಸ್ಯಾಲಿ "ಹೌದು ನಾನು ಇಬ್ಬರ ಜೊತೆಗೂ ಇದ್ದೆ. ನನಗೆ ಇಬ್ಬರೂ ಇಷ್ಟ. ಅವರಿಗೂ ನನ್ನ ಕಂಡರೆ ಇಷ್ಟ. ನಾನು ಇಬ್ಬರನ್ನೂ ಚನ್ನಾಗಿ ನೋಡಿಕೊಳ್ಳುತ್ತೇನೆ" ಎನ್ನುತ್ತಿದ್ದವಳು ಅನಾಮತ್ತಾಗಿ ತನ್ನ ಬನೀನು ತೆಗೆದುಬಿಟ್ಟಳು. ಅವಳು ಏನು ಹೇಳುತ್ತಿದ್ದಾಳೆ? ಇವರು ಮೂವರೂ ದಾಂಪತ್ಯ ಮಾಡುತ್ತಿರುವ ಹೆಂಗಸರಾ? ಅಮೆರಿಕಾದ ನ್ಯಾಷನಲ್ ಟಿ ವಿ ಯಲ್ಲಿ ನಾನು ಇದನ್ನು ನೋಡುತ್ತಿದ್ದೇನಾ? ಎಂಬ ಹನ್ನೆರಡು ಪ್ರಶ್ನೆ ಕೇಳಿಕೊಂಡೇ ಕಣ್ಣು ಮಿಟುಕಿಸದೆ ಟಿವಿ ನೋಡುತ್ತಿದ್ದ ನಾನು ಸ್ಯಾಲಿಯ ಧಿಡೀರ್ ಬನೀನು ರಹಿತ ಅವತಾರವನ್ನು ನೋಡಿ ಸೋಫಾ ಕೆಳಗೆ ಬೀಳುವುದೊಂದು ಬಾಕಿ! ಸ್ಯಾಲಿ ಬಟ್ಟೆ ತೆಗೆದಳೆಂದು ಕೂಗಾಡುತ್ತ ಶೋ ಸೆಟ್ ನಲ್ಲಿ ವೀಕ್ಷಕರಾಗಿ ಬಂದಿದ್ದ ಇನ್ನೊಂದಿಬ್ಬರು ಹುಡುಗಿಯರೂ ಅವಳಂತೇ ಮಾಡಿಬಿಟ್ಟರು!! ಅಲ್ಲಿಗೆ ಓಡಿ ಬಂದ ಜೆರ್ರಿ ಅವರೆಲ್ಲರಿಗೂ ಒಂದೊಂದು ಮಣಿಯ ಮಾಲೆ ಹಾಕಿದ. ನನಗೆ ಹಾರ್ಟ್ ಅಟ್ಯಾಕ್ ಆಗುವುದರಲ್ಲಿತ್ತು!
 
ಶೋ ಮುಗಿಯಿತು. ಟಿ ವಿ ಆರಿಸಿದೆ. ಏನೋ ಮಹಾನ್ ಪಾಪ ಮಾಡಿದ ಅನುಭವ. ಇದೇನು ಇಂಥದನ್ನು ನೋಡಿ ಬಿಟ್ಟೆ? ನನ್ನ ಬುದ್ಧಿಗೆ ಏನಾಗಿತ್ತು? ಎಂದೆಲ್ಲಾ ಭಯವಾಗಿ ಅಳುಬಂತು. ನಾನು ಯಾವತ್ತೂ ಇಷ್ಟು ’ಅಸಭ್ಯ’ವಾದದ್ದನ್ನು ನೋಡಿರಲಿಲ್ಲ. ಆಕಸ್ಮಿಕ, ಅಮೆರಿಕ ಅಮೆರಿಕ, ಮುಂಗಾರುಮಳೆಯಂತಹ  ಚಲನಚಿತ್ರಗಳನ್ನು ಮನೆಯವರ ಜೊತೆ ನೋಡಿದ್ದು ಬಿಟ್ಟರೆ ಟಿವಿ ನೋಡಲೂ ಅವಕಾಶವಿರುತ್ತಿರಲಿಲ್ಲ. ರವಿಚಂದ್ರನ್ ಚಿತ್ರದ ಯಾವುದಾದರೂ ಹಾಡು ಬಂದರೆ ಅಪ್ಪ ಟಿವಿ ಆರಿಸಿಬಿಡುತ್ತಿದ್ದರು. ಟಿವಿ ನೋಡಿದರೂ ಬರೀ ಕಾಮನಬಿಲ್ಲು, ಮಾಯಮೃಗ, ಮುಕ್ತ ಹೀಗೆ ಟಿ ಎನ್ ಸೀತಾರಾಮ್ ಅವರ ಮಹಾಕಾವ್ಯಗಳಿಗೆ ಮಾತ್ರ ಟಿಕೆಟ್ಟು ಸಿಗುತ್ತಿತ್ತು. ಅಂಥದ್ದರಲ್ಲಿ ಈ ಶೋನ ಹಸಿ ನಗ್ನತೆ, ಆ ಹೆಂಗಸರ ದಾಂಪತ್ಯದ ಕತೆ ಎಲ್ಲವೂ ಮನಸ್ಸಿಗೆ ಶಾಕ್ ಹೊಡೆದಂತಾಯಿತು. ಗಾಬರಿಯಲ್ಲಿ ಮತ್ತೊಮ್ಮೆ ತಲೆ ಸ್ನಾನ ಮಾಡಿ ಬಂದೆ. ಇದು ಅಮೆರಿಕಾದ ಟಿವಿ ದೆಸೆಯಿಂದ ನನಗೆ ಆದ ಮೊದಲ ಹೈ ವೋಲ್ಟೇಜ್ ಕಲ್ಚರಲ್ ಶಾಕ್!
 
ಸಂಜೆ ಪ್ರಶಾಂತ ಬರುವವರೆಗೂ ಕಷ್ಟಪಟ್ಟು ಕಾದಿದ್ದು ತಕ್ಷಣ ಇವತ್ತು ಇಂಥದ್ದನ್ನು ನೋಡಿ ಬಿಟ್ಟೆ ಎಂದು ತಿಳಿಸಿದೆ. ಪ್ರಶಾಂತ ಶೋ ಲೇಸು ಬಿಚ್ಚುತ್ತಿದ್ದವನು ನನ್ನ ಮುಖ ನೋಡಿ ನಗಾಡಿದ. "ಗುಡ್ ಬಿಲ್ಲಿ. ಅದಕ್ಕೆ ಇಷ್ಟು ಅಪ್ಸೆಟ್ ಯಾಕೆ ಆಗ್ತೀಯಾ? ಯು ಆರ್ ಗ್ರೋಯಿಂಗ್ ಅಪ್! ಅಮೆರಿಕಾ ಅಂದರೆ ಬರೀ ಸೊಫಿಸ್ಟಿಕೇಟೆಡ್ ಆಗಿ ಕಾಣುವ ಸಿರಿವಂತರಲ್ಲ. ಇಲ್ಲೂ ಎಲ್ಲ ಥರದ ಜನರಿದ್ದಾರೆ, ಅವರದ್ದೇ ಬೇರೆ ರೀತಿಯ ಲೈಫ್ ಇದೆ,  ಅಂತ ಜೆರ್ರಿ ಸ್ಪ್ರಿಂಗರ್ ನ ಶೋನಲ್ಲಿ ಗೊತ್ತಾಗುತ್ತೆ...ನೀನು ಶಾಕ್ ಮಾಡಿಕೋಬೇಡ. ಇನ್ನೊಂದೆರಡು ಸರಿ ನೋಡು. ನಿನಗೆ ಆಶ್ಚರ್ಯನೂ ಆಗುತ್ತೆ, ಇಲ್ಲಿ ಬಗ್ಗೆ ಜಾಸ್ತಿ ತಿಳುವಳಿಕೆನೂ ಬರುತ್ತೆ, ಇಟ್ ಈಸ್ ಅ ವೆರಿ ಪಾಪ್ಯುಲರ್ ಶೋ ಯು ನೋ" ಅಂತ ಬುದ್ಧನ ಥರ ಹೇಳಿದ. ಅಷ್ಟೇನಾ?! ನಾನು ಇಡೀ ಮಧ್ಯಾನ್ಹ ಅನುಭವಿಸಿದ ಪಾಪಪ್ರಜ್ನೆಗೆ ಸಿಕ್ಕ ಉಪದೇಶ ಎಂದು ಆಶ್ಚರ್ಯವಾಯಿತು.
 
ಆ ದಿನದ ನಂತರ ನಾಲ್ಕೈದು ಬಾರಿ ಜೆರ್ರಿ ಸ್ಪ್ರಿಂಗರ್ ಶೋ ನೋಡಿದೆ. ಪ್ರತೀ ಬಾರಿಯೂ ನನ್ನ ರಿಯಾಕ್ಷನ್ ಸಮಾಧಾನಕರವಾಗುತ್ತಿತ್ತು. ಸ್ಥಿತಪ್ರಜ್ನತೆಯಿಂದ ನೋಡುತ್ತಿದ್ದೆ. ಜೆರ್ರಿ ಅಮೆರಿಕಾದ ಗಲ್ಲಿ ಗಲ್ಲಿಗಳಲ್ಲಿ ವಾಸ ಮಾಡುವ ಅಮೆರಿಕನ್ ಜನಸಾಮಾನ್ಯರನ್ನು ತನ್ನ ಶೋ ನ ಬಂಡವಾಳ ಮಾಡಿಕೊಂಡಿದ್ದ. ಅವನ ಶೋ ಗೆ ಬಂದು ತಮಗಾದ ಮೋಸದ ಬಗ್ಗೆಯೋ, ತಾವು ತಮ್ಮ ಗಂಡ/ಹೆಂಡತಿಗೆ ಮಾಡಿದ ಮೋಸದ ಬಗ್ಗೆಯೋ ಹೇಳಿಕೊಳ್ಳುವ ಮಂದಿ ವಿದ್ಯಾವಂತರಿರಲಿಲ್ಲ. ಸ್ವಲ್ಪ ಮಟ್ಟಿಗೆ ಇದ್ದರೂ ಯಾವ ರೀತಿಯಲ್ಲೂ ಪ್ರಜ್ನಾವಂತರಲ್ಲ. ಅವರಿಗೆ ಮನುಷ್ಯನ ಸಾಂಘಿಕ ಸಂಬಂಧಗಳ ಅರಿವೂ ಇದ್ದಂತಿರಲಿಲ್ಲ ಅಥವಾ ಅವರು ಅವ್ಯಾವುದಕ್ಕೂ ಕೇರ್ ಮಾಡಿದವರೆನಿಸಲಿಲ್ಲ. ಮಗ ತಾಯಿಯನ್ನೇ ಮೋಹಿಸುತ್ತೇನೆಂದ. ತಂಗಿ ಅಣ್ಣನನ್ನೇ ಸಂಗಾತಿ ಮಾಡಿಕೊಂಡಿದ್ದಳು. ಒಂದು ಕುಟುಂಬದ ಆರು ಮಂದಿ ಪರಸ್ಪರರೊಡನೆ ಯೋಚಿಸಲು ಅಸಾಧ್ಯವಾಗುವ ಹನ್ನೆರಡು ಸಂಬಂಧಗಳನ್ನಿಟ್ಟುಕೊಂಡಿದ್ದರು. ಒಬ್ಬ ಹೆಂಗಸು ತನ್ನ ಹಸುಗೂಸು ತನ್ನ ಗಂಡನದ್ದೊ, ಅವನ ಅಣ್ಣ ತಮ್ಮಂದಿರದ್ದೋ ಅಥವಾ ತನ್ನ ಬಾಯ್ ಫ್ರೆಂಡ್ ದೋ?! ಎಂದು ಖಾತ್ರಿ ಪಡಿಸಿಕೊಳ್ಳಲು ಮಗು ಮತ್ತು ಆ ಗಂಡಸರ ಹಿಂಡಿನೊಡನೆ ಡಿ ಎನ್ ಎ ಪರೀಕ್ಷೆ ಮಾಡಿಸಿಕೊಳ್ಳಲು ಬಂದಿದ್ದಳು!
 
ಆ ಶೋ ನಲ್ಲಿ ಬಂದಿದ್ದವರು ಬಹುಪಾಲು ಅಮೆರಿಕಾದ ಬಡ ಮಂದಿ.  ಶೋ ಗೆ ಬಂದರೆ ಒಂದಿಷ್ಟು ದುಡ್ಡು ಸಿಗಬಹುದೆಂಬ ಆಸೆಗೋ, ತಾವು ದೇಶದಾದ್ಯಂತ ಧಿಡೀರ್ ಪರಿಚಿತರಾಗಿ ಬಿಡುವ ಹುಚ್ಚಿಗೋ ಅಲ್ಲಿಗೆ ಬಂದಿದ್ದರೆನಿಸುತ್ತದೆ. ೧೨ ವರ್ಷದ ಶಾಲೆಗೆ ಹೋಗುವ ಕಪ್ಪು ಹುಡುಗಿಯೊಬ್ಬಳು ತನ್ನ ಹೆಚ್ ಐ ವಿ ಸೋಂಕಿನ ದೇಹದೊಳಗೊಂದು ಕೂಸು ಹೊತ್ತು ಶೋ ಗೆ ಬಂದಿದ್ದಳು. ಅವಳಿಗೆ ತನ್ನ ಕೂಸಿನ ತಂದೆ ಯಾರು ಎಂದು ಹೇಳಲಾಗುತ್ತಿರಲಿಲ್ಲ. ಅವಳು ಕೊಟ್ಟ ಹುಡುಗರ ಪಟ್ಟಿಯಲ್ಲಿ ಜೆರ್ರಿಗೂ ನಿಜವಾದ ತಂದೆಯನ್ನು ಹುಡುಕಲಾಗಲಿಲ್ಲ!! ಆ ಬಡ ಹುಡುಗಿ ಯಾರು ಯಾವ ಹೊತ್ತು ಏನು ಊಟ ಕೊಡಿಸುತ್ತರೆಂದರೂ ಅವರ ಜೊತೆ ಸಾಂಗತ್ಯ ಬೆಳೆಸಿದ್ದಳು. ಅಮೆರಿಕದಲ್ಲಿ ಈ ಪರಿಯ ದಾರಿದ್ರ್ಯ ಇದೆ ಎಂದರೆ ನೀವು ನಂಬುತ್ತೀರಾ? ಇದು ಯಾವ ಮೂಲೆಗೂ ಅಲ್ಲ...ಇಲ್ಲಿರುವ ದಾರಿದ್ರ್ಯದ ಸ್ವರೋಪವೇ ಬೇರೆ ಬಿಡಿ.
 
ತನ್ನ ಸಮಾಜದಲ್ಲಿ ಇಂಥ ಜನರೂ ಇದ್ದಾರೆ. ಮೇಲಾಗಿ ಅವರೇ ಬಹುಪಾಲಿದ್ದಾರೆ. ಅವರಿಗೆ ಶಿಷ್ಟ ಭಾವನೆಗಳಿಲ್ಲ. ಅಥವಾ ಭಾವನೆಗಳನ್ನು ಶಿಷ್ಟ ರೂಪಕ್ಕೆ ಪಳಗಿಸಿಲ್ಲ. ಅವರ ಭಾವನೆ ನೇರವಾಗಿ ಅವರ ದೈಹಿಕ ಅಗತ್ಯಗಳಿಗೆ ಸಂಬಂಧಿಸಿದ್ದು. ಮನುಷ್ಯ ಅಥವಾ ಸಮಾಜ ನಿರ್ಮಿತ ಸಂಬಂಧಗಳು ಅಲ್ಲಿ ಗೌಣ. ಸಂಬಂಧಗಳು ಎಷ್ಟರ ಮಟ್ಟಿಗೆ ಅರ್ಥಹೀನ ಎಂದರೆ ಕೆಲವೊಮ್ಮೆ ತಾಯಿ ಮಕ್ಕಳೂ ಪರಸ್ಪರ ಪ್ರೇಮಿಗಳಾಗಿ ಬಿಡುತ್ತಾರೆ. ಇಲ್ಲಿ ಯಾವುದೂ ಅಸಾಧ್ಯವಲ್ಲ. ಎಲ್ಲ ಅತಿರೇಕಗಳೂ ಸರ್ವೇ ಸಾಮಾನ್ಯ-ಎನ್ನುವುದನ್ನು ಜೆರ್ರಿ ತನ್ನ ಶೋ ನಲ್ಲಿ ಬಿತ್ತರಿಸುತ್ತಾನೆ. ಅವನು ತನ್ನ ಶೋ ನಲ್ಲಿ ಬರುವ ಯಾರಿಗೂ ಸಲಹೆ ಕೊಡುವುದಿಲ್ಲ. ಅವರು ರಿಫೈನ್ ಆಗುವುದು ಅವನ ಉದ್ದೇಶವಲ್ಲ. ಅವರ ಕಚ್ಚಾತನವನ್ನು, ಅವರಲ್ಲಿನ ಪ್ರಾಣಿಯನ್ನು ಹೊರಬರಲು ಬಿಡುತ್ತಾನೆ. ಅದು ಅವನಿಗೆ ಬಂಡವಾಳ. ಅದನ್ನು ಜನರಿಗೆ ಬಿತ್ತರಿಸುತ್ತಾನೆ. ದುಡ್ಡು ಮಾಡಿಕೊಳ್ಳುತ್ತಾನೆ.
 
ಜೆರ್ರಿ ಸ್ಪ್ರಿಂಗರ್ ನ ಶೋ ಎಂದರೆ ಅಮೆರಿಕಾದ ಎಲೀಟ್ ಗಳಿಗೆ, ಸಿರಿವಂತರಿಗೆ ಮಹಾನ್ ಕೋಪ, ತಿರಸ್ಕಾರ. ಬೇಡ ಬೇಡದ್ದೆಲ್ಲ ತೋರಿಸುತ್ತಾನೆ ಅಂತ, ಕೊಳಕು ಅಂತ. ಜೆರ್ರಿ ಅದೇ ಕೊಳಕನ್ನೇ ತನ್ನ ಶೋ ನ ಕ್ಯಾನ್ವಾಸ್ ಮೇಲೆ ಸುರಿದುಕೊಡುತ್ತಾನೆ. ಶೋ ನೋಡಿದ ಮೇಲೆ ಗಾಬರಿ, ದಿಗ್ಭ್ರಾಂತಿಯಾಗುತ್ತದೆ. ಥಳಥಳಿಸುವ ಅಮೆರಿಕಾದಲ್ಲೂ ಯಥೇಚ್ಛವಾಗಿರುವ ಬಡಜನ, ಅವರೊಂದಿಗೆ ಬೆರೆತ ಅಜ್ನಾನ, ಸ್ವೇಚ್ಛಾಚಾರ, ಮನಸ್ಸಿನ ನಿಯಂತ್ರಣಕ್ಕೆ ಸಿಗದ ದೈಹಿಕ ದಾಹ, ಯಾವುದೇ ಥಳುಕಿನ ಸಮಾಜವೊಂದರಲ್ಲಿ ಎಲ್ಲ ಚಂದಗಳ ಒಳಗೂ ಅಸ್ತಿತ್ವದಲ್ಲಿರುವ ಕಚ್ಚಾತನ ಅಮೆರಿಕಕ್ಕೂ ಹೊರತಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅದಷ್ಟೇ ಅಲ್ಲ. ಅಮೆರಿಕ ಕಟ್ಟಿಕೊಂಡಿರುವ ’ವ್ಯಾಪಾರ’ ಎಂಬ ಸಂಸ್ಕೃತಿ ತಾಯಿಯಿಲ್ಲದ ತಬ್ಬಲಿ ಥರ ಎನ್ನಿಸುತ್ತದೆ. ನಾವು ಕಟ್ಟಿಕೊಂಡಿರುವ ಸಮಾಜ ಮತ್ತು ನಿಗದಿತ ಸಂಬಂಧಗಳು ಇರುವವರೆಗೂ ನಾವು ’ಮನುಷ್ಯ’ರೆಂಬ ಪಳಗಿದ ಮೃಗವಾಗಿರುತ್ತೇವೆ. ಒಮ್ಮೆ ತಲೆಯ ಕೋಣೆ ಕೆಟ್ಟು, ಕುಟ್ಟು ಹಿಡಿದು, ಸಂಬಂಧಗಳ ಬಿಗಿತ ಕಳಚಿಹೋದರೆ ಬೇರೆಲ್ಲಾ ಮೃಗಗಳಿಗಿಂತಲೂ ಕಡೆ ನಾವೆ.

(ಮುಂದುವರಿಯುವುದು)