ವಿವೇಕ್ ವಿಶ್ವನಾಥ್

ಆಫೀಸ್ ನಲ್ಲಿ ಈಗ ತುಂಬ ಹೆಕ್ಟಿಕ್ ಕೆಲಸ. ತಿಂಗಳ ಕೊನೆ. ನನಗೆ ಇದ್ದ ಮೂರು ಜೂನಿಯರ್ಸ್ ನಲ್ಲಿ ಇಬ್ರನ್ನು ಲೇಆಫ್ ಮಾಡಿದ್ದಾರೆ. ಎಲ್ಲಾ ಕಂಪನಿಗಳೂ ಕಾಸ್ಟ್ ಕಟಿಂಗ್ ಮಾಡುತ್ತಿವೆ. ರಿಸೆಷನ್ ಯಿಂದ ಯು ಎಸ್ ಹೊರಗೆ ಬಂದಿಲ್ಲ. ನಮ್ಮ ತಾತನ ಆಣೆ (ಅವರು ಈಗ ಸ್ವರ್ಗದಲ್ಲಿದ್ದಾರೆ) ಈ ರಿಸೆಷನ್ ಇನ್ನು ಎರಡು ವರ್ಷ ಸ್ಟೆಬಿಲೈಜ್ ಆಗಲ್ಲ. ಕೆಲಸ ಕಳೆದುಕೊಳ್ಳ್ವ ಭಯ ನಂಗಿಲ್ಲ ಆದ್ರೂ ಯಾರೂ ಏನೂ ಹೇಳಕಾಗಲ್ಲ ನೋಡಿ.
ಬೆಳಿಗ್ಗೆಯಿಂದ ಆರು ಮೀಟಿಂಗ್ ಅಟೆಂಡ್ ಮಾಡಿದ್ದೆ. ಅದರಲ್ಲಿ ನಾಲ್ಕು ಮೀಟಿಂಗ್ ನ ಯಾಕೆ ಕರೆದಿದ್ರೋ ಇನ್ನೂ ಅರ್ಥ ಆಗ್ಲಿಲ್ಲ. ನಾವು ಸೀರಿಯಸ್ ಆಗಿ ಕೆಲಸ ಮಾಡ್ತಾ ಇದ್ದೀವಿ ಅಂತ ಶೋ ಆಫ್ ಮಾಡಿಕೊಳ್ಳಲು ಇದೆಲ್ಲಾ ನಾಟಕ ಅಷ್ಟೇ! ಒಂದು ಡೆಮೋ ಗೆ ಪ್ರೆಪ್ ಇತ್ತು, ಮುಗಿಸಿದೆ. ಇಮೈಲ್ ಗಳಿಗೆ ರಿಪ್ಲೈ ಮಾಡಿದೆ. ನನ್ನ ಪರ್ಸನಲ್ ಮೇಲ್ ಒಂದು ಸಾರ್ತಿ ನೋಡಿದೆ. ಎಷ್ಟು ದಿನ ಆಯ್ತು ನೀನು ಏನಾದ್ರೂ ಬರೆದು ಅಂತ ಬೈದು ಒಂದು ಮೇಲ್ ಬಂದಿತ್ತು. ಅಯ್ಯೋ ಈ ತಿಂಗಳು ನಾನು ಕಳಿಸ್ತೀನಿ ಅಂತ ಪ್ರಾಮಿಸ್ ಮಾಡಿದ್ದು ನೆನಪಾಯ್ತು. ಏನು ಬರೆದರೆ ಸರಿ ಅಂತ ಯೋಚಿಸಿದೆ. ಜಿಮ್ ಬಂದು "ವಿಕ್ಕಿ ಐ ನೀಡ್ ಯುವರ್ ಹೆಲ್ಪ್" ಅಂದ. ಇನ್ನು ಬರೆಯೋ ಪ್ರೋಗ್ರಾಮ್ ಢಮಾರ್ ಎಂದುಕೊಂಡೆ. ಆಫೀಸಿನ ಕೆಲಸ ಎಲ್ಲ ಮುಗಿಸಿ ಮನೆಗೆ ಹೊರಟಾಗ ಏನು ಬರೆದ್ರೆ ಚನ್ನಾಗಿರತ್ತೆ ಅಂತ ಪ್ಲಾನ್ ಮಾಡಿದೆ. ಮನೆಗೆ ಬಂದು ಫ್ರೆಶ್ ಆಗಿ, ಒಂದು ಮಗ್ ಕಾಫಿ ಕುಡಿದು ಕ್ರಿಯೇಟಿವ್ ಆಗುತ್ತೇನೆ ಎಂದುಕೊಂಡೆ.
ಮನೆಗೆ ಎಂಟರ್ ಆದಾಗ ಮಕ್ಕಳ ಗಲಾಟೆನೇ ಕೇಳಿಸಲಿಲ್ಲ. ಮೋಸ್ಟ್ಲಿ ಪ್ರಿಯಾ ಮಕ್ಕಳ ಜೊತೆ ಎಲ್ಲೋ ಹೊರಗೆ ಹೋಗಿರಬೇಕು ಎಂದುಕೊಂಡು ವಾವ್ ಎಂದು ಖುಷಿಪಟ್ಟೆ. ಮೇಲ್ಗಡೆ ನಮ್ಮ ರೂಮ್ ಗೆ ಹೋದಾಗ ಟಿವಿ ಆನ್ ಇದ್ದ ಸದ್ದು. ಓಹ್ ಪ್ರಿಯಾ ಟಿವಿ ಆಫ್ ಮಾಡಲು ಮರೆತಿರಬೇಕು ಎಂದು ಒಳಗೆ ಬಂದೆ. ಪ್ರಿಯಾ ಟಿವಿ ಒಳಗೇ ಹೋಗಿ ಬಿಡುವಂತೆ ಬೆಡ್ ಮೇಲೆ ಕೂತು ಟಿವಿ ನೋಡುತ್ತಿದ್ದಳು. ಮಕ್ಕಳೂ ಹತ್ತಿರದಲ್ಲಿರಲಿಲ್ಲ. "ವಿಕ್ಕಿ, ಡಂಗರ್ಸ್ ಗೆ ಹತ್ತೊಂಬತ್ತನೇ ಮಗು ಆಗಿದೆ ಕಣೋ" ಎಂದಳು. ಯಾರೊ ನಮ್ಮ ಅಕ್ಕ ಪಕ್ಕದವರು ಇರಬೇಕು ಎಂದುಕೊಂಡು "ಓಹ್ ಗಾಡ್! ಅವರಿಗೇನು ತಲೆ ಇಲ್ವಾ!! ಪ್ರೀ...ನಂಗೊಂದು ಕಾಫಿ ಮಾಡಿಕೊಡ್ತೀಯಾ?" ಕೇಳಿದೆ.
"ಹತ್ತೊಂಬತ್ನೇದು ಹುಡುಗಿ ಕಣೋ..ಆ ಹೆಂಗಸಿಗೆ ಅದೇನು ಧೈರ್ಯನೋ" ಪ್ರಿಯಾ ಟಿವಿಯಲ್ಲೇ ಇದ್ದಳು.
"ಕಾಫಿ ಜೊತೆಗೆ ಏನಾದ್ರೂ ತಿನ್ನಕ್ಕೆ ಸಿಗುತ್ತಾ ಪ್ರೀ" ಕಾಫಿಯ ನೆನಪು ಮಾಡಿಸಿ ಆಸೆಯಿಂದ ಕೇಳಿದೆ.
"ಮೈ ಗಾಡ್ ಹೇಗೋ ಮ್ಯಾನೇಜ್ ಮಾಡ್ತಾಳೆ ಅವಳು? ಅವಳ ಗಂಡಂಗೆ ಬೇರೆ ಏನೂ ಕೆಲಸಾನೇ ಇರಲ್ವಾ?!" ನನ್ನ ಹೆಂಡತಿ ಅವಳಷ್ಟಕ್ಕೆ ಮಾತಾಡಿಕೊಳ್ಳುತ್ತಿದ್ದಳು.
"ಅದೆಲ್ಲಾ ಅವರ ಹಣೆ ಬರಹ. ನೀನ್ಯಾಕೆ ಯೋಚನೆ ಮಾಡ್ತಿಯ ಬಿಡು. ಮಕ್ಕಳು ಎಲ್ಲಿ ಪ್ರಿ?"
"ಟಿ ಎಲ್ ಸಿ ಚಾನಲ್ ನಲ್ಲಿ ಇದು ಥರ್ಡ್ ಸೀಸನ್ ಕಣೋ. ಮೊದಲು ಈ ಫ್ಯಾಮಿಲಿ ಶೋ ಶುರು ಆದಾಗ ಅವರು ಎಷ್ಟು ಬಡವರ್ ಥರ ಇದ್ರು ಗೊತ್ತಾ...ಇನ್ನೇನಾಗತ್ತೆ? ಆಗ್ಲೇ ಹದಿನೈದೋ ಹದಿನಾರೋ ಮಕ್ಳು ಇದ್ರು...ಆದ್ರೆ ಈಗ ಮಿಲಿಯನೇರ್ ಆಗಿಬಿಟ್ಟಿದ್ದಾರೆ!!"
"ಯಾರ ಬಗ್ಗೆ ಮಾತಾಡ್ತಾ ಇದ್ದಿಯಾ ಪ್ರೀ?!"
" ಆ ಹೆಂಗಸಿಗೆ ದೇವರು ಅದೇನು ಗರ್ಭ ಕೊಟ್ಟಿದಾನೋ? ಟೂ ಮಚ್ ಅಲ್ವಾ...ಇವರು ಟ್ರೂ ಕ್ರಿಸ್ಚಿಯನ್ ಗಳಂತೆ, ನಮ್ಮ ಹಳ್ಳಿಮುಕ್ಕರ ಥರ ದೇವರು ಕೊಟ್ಟಷ್ಟೂ ಮಕ್ಕಳನ್ನು ಹೆರ್ತಾರಂತೆ...ಐ ಆಮ್ ಶಾಕ್ಡ್ ಕಣೋ"
"ಪ್ರಿಯಾ ಇದು ಟೂ ಮಚ್! ಯಾರ ಬಗ್ಗೆ ಮಾತಾಡ್ತಾ ಇದ್ದಿಯಾ?! ಇದೇನಿದು ಇಷ್ಟು ಹೊತ್ತಲ್ಲಿ ಟಿವಿ ನೋಡ್ತಾ ಇದ್ದೀಯ? ಮಕ್ಳು ಎಲ್ಲಿ?" ವಾಯ್ಸ್ ಏರಿಸಿದೆ. ನನಗೆ ಬೆಳಿಗ್ಗೆಯಿಂದ ಆಗಿದ್ದ ಸುಸ್ತು ಹೊರಗೆ ಬಂತು.
"ಕಮಾನ್ ವಿಕ್ಕಿ! ಏನೋ ನೀನು ರೂಮ್ ಒಳಗೆ ಬಂದೆ ಅಂತ ಶೇರ್ ಮಾಡಿಕೊಂಡೆ ಅಷ್ಟೇ! ಅದಕ್ಯಾಕೆ ಕಿರ್ಚಾಡ್ತೀಯಾ? ನಾನು ’ನೈನ್ಟೀನ್ ಅಂಡ್ ಕೌಂಟಿಂಗ್’ ನೋಡ್ತಾ ಇದ್ದೀನಿ...ಯಾಕೆ ಮಕ್ಳು ಜೊತೆ ಆಡೋದು ಅವರ್ಗೆ ಊಟ ಮಾಡಿಸೋದು, ಸುಸ್ಸು ಮಾಡಿಸೋದು, ನಿಂಗೆ ಅಡಿಗೆ ಕಾಫಿ ಮಾಡೋದು ಬಿಟ್ರೆ ನಂಗೆ ಬೇರೆ ಕೆಲಸಾನೇ ಇಲ್ವಾ?! ನಾನೇನು ನಿನ್ನ ಡೆಸಿಗ್ನೇಟೆಡ್ ಗವರ್ನೆಸ್ಸಾ?!" ಪ್ರಿಯಾಗೆ ಪಟಾಕಿಯಿಂದ ಬಾಂಬ್ ಆಗಿ ಕನ್ವರ್ಟ್ ಆಗಲು ಒಂದು ಸೆಕೆಂಡ್ ಗಿಂತ ಹೆಚ್ಚು ಟೈಮ್ ಬೇಕಿರಲಿಲ್ಲ. "ಇಲ್ಲಮ್ಮಾ...ನನಗೆ ಮನೇಲಿ ಏನು ನಡಿತಿದೆ ಅಂತ ಗೊತ್ತಾಗಲಿಲ್ಲ, ನೀನು ಟೀವಿಯಲ್ಲಿ ಅಷ್ಟೋಂದು ಇನ್ವಾಲ್ವ್ ಅಗಿದ್ದೆಯಲ್ಲಾ ಅದಕ್ಕೆ ಜೋರಾಗಿ ಕೇಳಿದೆ..." ನನಗೆ ಟೆನ್ಷನ್. ಪ್ರಿಯಾ ಕೋಪ ಮಾಡಿಕೊಂಡು ಮಕ್ಕಳನ್ನು ಈಗ ನೀನು ನೋಡಿಕೋ ಅಂತ ನನ್ನ ಹತ್ತಿರ ಬಿಟ್ಟು ಹೋದರೆ ನನಗೆ ಬರೆಯೋದಕ್ಕೆ ಆಗುವುದಿಲ್ಲ. ಏನಾದ್ರೂ ಮಾಡಿ ಅವಳನ್ನು ಸಮಾಧಾನ ಮಾಡಲೇಬೇಕು...."ಇಲ್ಲಮ್ಮಾ ನಾನು ಆಫೀಸ್ ನಿಂದ ಬರುವಾಗ ಇವತ್ತು ಏನಾದ್ರೂ ಹೊರಗಡೆಯಿಂದ ಊಟ ಆರ್ಡರ್ ಮಾಡಿಸಿ ಮನೇಲಿ ನಾವು ಮಕ್ಕಳ ಜೊತೆ ರಿಲ್ಯಾಕ್ಸ್ ಮಾಡೋಣ ಅಂತ ಪ್ಲಾನ್ ಮಾಡಿದೆ..ನಿನಗೆ ಏನು ಇಷ್ಟ ಅಂತ ಕೇಳಬೇಕಿತ್ತು...ಇವತ್ತು ಥಾಯಿ ಫುಡ್ ತರಿಸೋಣ್ವಾ..." ಕೇಳಿದೆ. ಪ್ರಿಯಾ ನನ್ನ ಮುಖ ನೋಡಿದಳು. ನನಗೆ ಅವಳಿಂದ ಏನೋ ಫೇವರ್ ಬೇಕಾಗಿದೆ ಎಂದು ಅವಳಿಗೆ ಗೊತ್ತಾಯಿತು. ನನ್ನ ಎಲ್ಲಾ ಕೇಡಿ ಪ್ಲಾನ್ ಗಳೂ ಅವಳಿಗೆ ಹಾಗೇ ಗೊತ್ತಾಗಿ ಬಿಡುತ್ವೆ.
"ಯಾಕಪ್ಪಾ..ವಾಟ್ ಈಸ್ ದ ಮ್ಯಾಟರ್? ಇವತ್ತು ಏನಾದ್ರೂ ಕೆಲಸ ಆಗಬೇಕಿತ್ತಾ? ನೀನೇನಾದ್ರೂ ನಿನ್ನ ಫ್ರೆಂಡ್ಸ್ ಮೀಟ್ ಆಗಕೆ ಹೊರಗೆ ಹೋಗಬೇಕಿತ್ತಾ...ಏನು ಕತೆ? ಕೇಳಿದಳು.

ಹೀಗೆ ಸ್ವಲ್ಪ ಬರೆಯುವುದು ಇದೆ ಎಂದು ತಿಳಿಸಿದೆ. "ನಿನಗೆ ಸರಿಯಾಗಿ ಕೂತು ಯಾವುದಾದ್ರೂ ಒಳ್ಳೆ ಸಬ್ಜೆಕ್ಟ್ ಬಗ್ಗೆ ಬರೆದುಕೊಡೋಕೆ ಆಗಲ್ಲ ಅಂದ್ರೆ ಯಾಕೆ ಒಪ್ಕೋತೀಯಾ? ಸುಮ್ನೆ ಸಿಲ್ಲಿ ಯಾಗಿ ಬರೆದುಕೊಂಡು ನನ್ನನ್ನೂ ಕೆಟ್ಟವಳನ್ನಾಗಿ ಮಾಡಿಕೊಂಡು ನೀನು ಮಹಾ ರೈಟರ್ ಅಂತ ತಲೆಗೆ ಏರಿಸಿಕೋಬೇಡ... ಓದುವವರಿಗೂ ನೀನು ಬರೀ ಸಿಲ್ಲಿ ಫೆಲೋ ಅನ್ನಿಸಿಬಿಡತ್ತೆ" ಅವಳು ಪ್ರವಚನ ಶುರು ಮಾಡಿದರೆ ಬಡ ಪೆಟ್ಟಿಗೆ ನಿಲ್ಲಿಸುತ್ತಿರಲಿಲ್ಲ. ಇವತ್ತು ನನ್ನ ಪ್ರಾಮಿಸ್ ತೀರಿಸಬೇಕಿತ್ತು. ಅವಳು ಏನಂದರೂ ಜೈ. ಸೈ.
ಪ್ರಿಯಾ ಥಾಯಿ ಫುಡ್ ಆರ್ಡರ್ ಮಾಡಿ ಸಂಧ್ಯಾ ಮನೆಯಲ್ಲಿ ಪ್ಲೇ ಡೇಟ್ ಆಟ ಆಡ್ತಿದ್ದ ಮಕ್ಕಳನ್ನು ಕರೆದುಕೊಂಡು ಬರೋಕೆ ಹೋದ್ಲು. ನನಗೆ ಕಾಫಿನೂ ಮಾಡಿಕೊಟ್ಟಿದ್ಲು. ಹೋಗ್ತಾ "ಸ್ವಲ್ಪ ಲೇಟ್ ಆಗಿ ಬರ್ತಿನಿ. ಊಟ ತಂದು ಕೊಡ್ತಾನೆ ಕಲೆಕ್ಟ್ ಮಾಡಿಕೋ...ಹಾಗೆ ಗುಡ್ ಲಕ್ ವಿತ್ ಯುವರ್ ರೈಟಿಂಗ್...ಬೇಗ ಮುಗಿಸಿಕೊಂಡು ಬಿಡು...ನನ್ನ ಬಗ್ಗೆ ಏನಾದ್ರೂ ನೆಗಟಿವ್ ಆಗಿ ಬರೆದ್ರೇ" ಬಾಗಿಲು ಲಾಕ್ ಮಾಡಿಕೊಂಡು ಹೋದಳು.
ನನಗೆ ಗೊತ್ತು. ನಾನು ನನ್ನ ಮಕ್ಕಳಿಗೆ ಪ್ರಿಯಾಗೆ ಜಾಸ್ತಿ ಟೈಮ್ ಕೊಡೋದಿಲ್ಲ. ಅವಳೇ ಎಲ್ಲಾ ಕೆಲಸ ಮಾಡ್ತಾಳೆ. ಅವಳು ಸ್ವಲ್ಪ ಹೊತ್ತು ಕೂತಾಗ್ಲೇ ನಂಗೆ ಇಲ್ಲದ ಕೆಲಸ ಬರತ್ತೆ. ಅವಳು ಥಾಯಿ ಫುಡ್ ಹಾಳು ಮೂಳಿಗೆ ಆಸೆ ಪಟ್ಟು ಸಿಟ್ಟು ಬಿಡುವವಳೇ ಅಲ್ಲ. ನನಗೋಸ್ಕರ ಲಂಚ ತೆಗೆದುಕೊಳ್ಳುವವಳ ಥರ ಆಡ್ತಾಳೆ. ಇಬ್ಬರು ಮಕ್ಕಳಾದ ಮೇಲೆ ನಮಗೆ ಮೊದಲಿನ ಥರ ಮಾತಾಡ್ತಾ, ಪಿಚ್ಚರ್ ನೊಡ್ತಾ ಟೈಮ್ ಸ್ಪೆಂಡ್ ಮಾಡಲು ಆಗಿಲ್ಲ. ಇನ್ ಕೇಸ್ ಸ್ವಲ್ಪ ಟೈಮ್ ಸಿಕ್ಕರೆ ಏನು ಮಾತಾಡಿದ್ರೆ ಇನ್ನೊಬ್ಬರಿಗೆ ಖುಶಿ ಆಗತ್ತೆ ಅನ್ನೋದನ್ನೂ ಮರೆತು ಬಿಟ್ಟಿದ್ದೀವಿ.

ಪ್ರಿಯಾ ಅಮೆರಿಕನ್ ಹೆಂಡತಿ ಅಲ್ಲ ಅಂತ ನಾನು ಕೋಟಿ ಸರ್ತಿ ದೇವರಿಗೆ ಥ್ಯಾಂಕ್ ಮಾಡಿದ್ದೀನಿ. ಅವಳಿಗೆ ಒಂದು ದಿನ ಆದ್ರೂ ಆನೆಸ್ಟ್ ಆಗಿ ಥ್ಯಾಂಕ್ ಮಾಡಬೇಕು. ನನಗೆ ಮುದ್ದಿನ ಪಾರ್ಟ್ನರ್ ಆಗಿರುವುದಕ್ಕೆ ಮತ್ತು ನನ್ನ ರೈಟಿಂಗ್ ಗೆ ಸ್ಪೂರ್ತಿ ಆಗಿರುವುದಕ್ಕೆ.