ತರ್ಲೆ ಸೊಸೆ ಜಾಣೆ ಅತ್ತೆ

ಒಂದೂರ್ನಾಗೆ ಒಬ್ಬಮ್ಮ ಇದ್ಲು. ಅವಳ್ಗೆ ಒಬ್ಬ ಮಗ. ದನ ಕಾಯದು ಅವ್ನ ಕೆಲಸ. ಒಂದಿನಾ ಅವ್ನು ದನ ಕಾಯ್ತಿದ್ದಾಗ ಒಂದು ದನ ಕಳೆದು ಹೋಯ್ತು. ದನ ಕಳೆದು ಹೋಯ್ತಲ್ಲಪ್ಪಾ ಅಂತ ಆ ಹುಡುಗ ಅದನ್ನು ಹುಡುಕ್ತಾ ತಿರುಗಾಡಿದ. ತಿರುಗಾಡ್ತಾ ಪಕ್ಕದ ಹಳ್ಳಿಗೂ ಬಂದ. ಅಲ್ಲಿ ಒಬ್ಬಳು ಹುಡುಗಿ ರಾಗಿ ಬೀಸ್ತಾ ಇದ್ಲು. ಬೀಸ್ತಾ ಬೀಸ್ತಾ ರಾಗಿ ಹಿಟ್ಟನ್ನು ತಲೆ ಮೇಲೆಲ್ಲಾ ಸವರಿಕೊಂಡಿದ್ಲು. ಈ ಹುಡುಗ ಅವಳನ್ನು ನೋಡಿ, "ಲೇ ಇವಳೇ...ನೆರೆಯೋದಕ್ಕಿಂತ ಮೊದ್ಲೇ ತಲೇ ನೆರೆಸಿಕೊಂಡಿರೋ ಚೆಲುವೇ...ಇಲ್ಲೇನಾದ್ರೂ ಒಂದು ದನ ಹೋಯಿತೇನೆ...?" ಅಂತ ಕೇಳಿದ. ಅದಕ್ಕೆ ಅವಳು "ಲೋ ಮೀಸೆ ಮೂಡೋಕೆ ಮೊದ್ಲೇ ದೇಶ ಸುತ್ತಾ ಇರೋ ಹುಡುಗಾ...ಒಂದು  ದನ ಹೋಗಿದ್ದು ನೋಡ್ದೆ ಕಣೋ..."ಅಂದ್ಲು. ಈ ಹುಡುಗನಿಗೆ ಆ ಹುಡುಗಿ ತುಂಬಾ ಹಿಡಿಸಿಬಿಟ್ಟಳು. "ನಾನು ನಿನ್ನನ್ನೇ ಮದುವೆ ಆಗದು ಕಣೇ" ಅಂತ ಅಂದು ತನ್ನ ದನ ಹಿಡಿದುಕೊಂಡು ತನ್ನೂರಿಗೆ ಬಂದ. ಬಂದವನೇ ಅವರವ್ವನ್ನ ಕರೆದು, "ಅವ್ವಾ ಪಕ್ದೂರಲ್ಲಿ ಒಂದು ಹುಡುಗಿ ಇದೆ, ಒಸಿ ನೋಡ್ಕೊಂಡು ಬರ್ತಿಯಾ" ಅಂತ ಕೇಳಿದ.
 
ಮಗ ಹುಡುಗಿನ ಮೆಚ್ಚವನೆ, ಆಯ್ತು ನೋಡಿಕೊಂಡು ಬರನ ಅಂತ ಆ ಹೆಂಗಸು ಪಕ್ಕದೂರಿಗೆ ಹೊರಟ್ಳು. ಅಲ್ಲಿ ಆ ಹುಡುಗಿನ ಕಂಡು, "ನಿಮ್ಮವ್ವ ಎಲ್ಲೇ ತಾಯಿ?" ಅಂತ ಕೇಳಿದಳು. ಆ ಹುಡುಗಿ ಈ ಹೆಂಗಸನ್ನು ನೋಡಿ, "ನಮ್ಮವ್ವ ಬಂದ್ರೆ ಬತ್ತಳೆ, ಇಲ್ಲದಿದ್ರೆ ಬರಕಿಲ್ಲ" ಅಂದ್ಲು. "ನಿಮ್ಮಪ್ಪ ಎಲ್ಲವ್ವಾ" ಅಂತ ಈ ಹೆಂಗಸು ಕೇಳಿದಳು. " ನಮ್ಮಪ್ಪ ಒಂದೆರಡು ಮಾಡಿ ಹೆಂಡ್ರೆದೆ ಕೆಡ್ಸಕೆ ಅಂತ ಹೋಗವ್ನೆ" ಅಂದ್ಲು ಆ ಹುಡುಗಿ. ಈ ಹೆಂಗಸಿಗೆ ಅರ್ಥ ಆಗಲಿಲ್ಲ. "ಒಲೆ ಮ್ಯಾಲೆ ಏನು ಹಾಕಿದಿಯವ್ವಾ?" ಅಂತ ಕೇಳಿದ್ಲು. "ಅಯ್ಯೋ...ತಲೆ ಚಚ್ಚಿ ಒಲೆ ಮ್ಯಾಲೆ ಹಾಕಿದ್ದಿನಿ, ಕಾಲು ಮುರಿದು ಒಲೆಗೆ ಬೆಂಕಿ ಹಚ್ಚಿದ್ದಿನಿ..." ಅಂದ್ಲು. ಹೆಂಗಸಿಗೆ ಗಾಬರಿ ಆಯಿತು. ಇದೇನಿದು?! ಏನು ಕೇಳಿದ್ರು ಇಪರೀತ್ವಾಗಿ ಆಡುತ್ತಲ್ಲಾ ಇದು ಅಂತ. ಯಾಕೋ ಇವತ್ತು ಸರಿ ಇಲ್ಲ. ಮತ್ತೆ ಬರನ ಅಂದುಕೊಂಡು ಹೆಂಗಸು ಹೊರಟು ಬಿಟ್ಳು.
 
ನಾಕು ದಿನ ಬಿಟ್ಟು ಮತ್ತೆ ಆ ಹುಡುಗನ ತಾಯಿ ಈ ಹುಡುಗಿ ಮನೆಗೆ ಬಂದ್ಲು. ಅವತ್ತು ಆ ಹುಡುಗಿಯ ತಾಯಿ ಹತ್ತು ಮುದ್ದೆ ಮಾಡಿಟ್ಟು ಸಂತೆಗೆ ಹೋಗಿದ್ದಳು. ಸಂತೆಯಿಂದ ಮನೆಗೆ ಬಂದು ಸಾರು ಮಾಡಿ ಮುದ್ದೆ ಹುಡುಕಿದರೆ ಒಂದು ಮುದ್ದೆನೂ ಕಾಣಲಿಲ್ಲ! "ಮುದ್ದೆ ಏನಾತವ್ವಾ" ಅಂತ ಹುಡುಗಿಯನ್ನು ಕೇಳಿದ್ಲು. ಆ ಹುಡುಗಿ ನಡುಮನೆಲಿ ಕೂತಿದ್ದ ಹುಡುಗನ ತಾಯಿನ ತೋರಿಸಿದ್ಲು. ಹುಡುಗಿಯ ಅವ್ವ ಆ ಹುಡುಗನ ಅವ್ವನ ಜೊತೆ ಮಾತಾಡ್ತಾ "ನಮ್ಮ ಹುಡುಗಿ ಹತ್ತು ಮುದ್ದೆ ಮಾಡಿತ್ತು" ಅಂತ ಹೇಳಿಕೊಂಡಳು. ಹುಡುಗನ ಅವ್ವನಿಗೆ ಈ ಹುಡುಗಿ ಒಳ್ಳೆ ಕೆಲಸಗಾತಿ ಅಂತ ಭಾಳಾ ಖುಷಿಯಾಗಿ ಲಗ್ನ ದ ದಿನ ಮಾತಾಡಿ ತನ್ನ ಮಗನಿಗೆ ಲಗ್ನ ಮಾಡಿಕೊಂಡಳು.
 
ಲಗ್ನ ಆದ ಮೇಲೆ ಈ ಹುಡುಗಿ ಒಂದಿನಾನೂ ಸರಿಯಾಗಿ ಮನೆ ಕೆಲಸ ಮಾಡಿಕೊಂಡಿರಲಿಲ್ಲ. ನನ್ನ ಸೊಸೆ ಬರೀ ತರಲೆ ಬಡ್ಡಿ ಅಂತ ಅತ್ತೆಗೆ ಗೊತ್ತಾಗಿಬಿಡ್ತು. ಇನ್ನೇನು ಮಾಡದು ಅನುಭವಿಸಿಕೊಂಡು ಹೋಗ್ಲೇ ಬೇಕು ಅಂತ ಸುಮ್ಮನಿದ್ಲು. ಒಂದಿನ ಹುಡುಗಿಯ ಗಂಡ "ಮನೆಗೆ ನಮ್ ನೆಂಟ್ರು ಬರ್ತರೆ...ಚನ್ನಾಗಿ ಹತ್ತು ಮುದ್ದೆ ಮಾಡಿಟ್ಟಿರು" ಅಂತ ಹೆಂಡತಿಗೆ ಹೇಳಿ ಹೋದ. ಮದ್ಯಾನ ನೆಂಟರ ಜೊತೆ ಊಟಕ್ಕೆ ಬಂದು "ಮುದ್ದೆ ಬಡಿಸೇ" ಅಂದ. ಈ ಹುಡುಗಿ "ಮುದ್ದೆನೆಲ್ಲಾ ನಿಮ್ಮವ್ವ ತಿಂದು ಬಿಟ್ಲು...ಈಗ ಏನೂ ಉಳಿದಿಲ್ಲ" ಅಂದ್ಲು. ಮಗನಿಗೆ ನಮ್ಮವ್ವ ಅಷ್ಟು ಮುದ್ದೆ ಹೆಂಗೆ ತಿಂದ್ಲು ಅಂತ ಆಷ್ಚರ್ಯ ಆಯ್ತು. "ಯಾಕೇ ಸುಳ್ಳು ಹೇಳ್ತಿಯಾ ನಮ್ಮವ್ವ ಅಷ್ಟು ಮುದ್ದೆ ಯಾಕೇ ತಿಂತಳೇ?" ಅಂತ ಹೆಂದತಿಗೆ ಗದರಿದ. "ಇಲ್ಲ ನಿಮ್ಮವ್ವನೇ ಎಲ್ಲನೂ ತಿಂದಿದ್ದು...ಬೇಕಾದ್ರೆ ತೋರಿಸ್ತೀನಿ ಅವಳನ್ನು ಕರೆದುಕೊಂಡು ಕಾಡಿಗೆ ನಡೀರಿ" ಅಂದ್ಲು. ಹುಡುಗನಿಗೆ ಅವ್ವನ ಮೇಲೆ ಭಾಳ ಕೋಪ ಬಂತು. ಹೆಂಡತಿ ಮಾತು ನಿಜವಿರಬೋದು ಅಂತ ಪರೀಕ್ಷೆ ಮಾಡಕೆ ಅವ್ವನನ್ನು ಹಿಡಿದುಕೊಂಡು ಹೆಂಡತಿ ಜೊತೆ ಕಾಡಿಗೆ ಹೋದ. ಹೆಂಡತಿ ಅಲ್ಲಿ ಒಂದು ರಾಶಿ ಬಿದಿರು ಸೌದೆ ಒಟ್ಟು ಮಾಡಿ ಆ ಹೆಂಗಸನ್ನು ಅದರೊಳಗೆ ಕೂರಿಸಿದ್ಲು. "ಬೆಂಕಿ ಹಚ್ಚನ ತಡಿರಿ, ಹೊಟ್ಟೆಲಿರೋ ಮುದ್ದೆಯೆಲ್ಲಾ ಕಾಣ್ತವೆ" ಅಂದ್ಲು. ಅವರವ್ವನನ್ನು ಎಳೆದುಕೊಂಡು ಬರೋ ಕೋಪದಲ್ಲಿ ಇಬ್ಬರೂ ಬೆಂಕಿ ಪಟ್ಣ ತಂದಿರಲಿಲ್ಲ. "ಹೋಗೇ ಬೆಂಕಿ ಪಟ್ಣ ತಗoಡು ಬಾ" ಅಂತ ಹುಡುಗ ತನ್ನ ಹೆಂಡ್ತಿಗೆ ಹೇಳಿದ. "ನೀವೂ ಬನ್ರಿ ನಂಗೆ ಕಾಡಲ್ಲಿ ಒಬ್ಳೇ ಹೆದ್ರಿಕೆ" ಅಂತ ಆ ಹುಡುಗಿ ಗಂಡನ್ನೂ ಕರೆದುಕೊಂಡು ಹೋದ್ಲು. ಅವರಿಬ್ಬರೂ ಆ ಕಡೆ ಹೋದ ಗಳಿಗೆ ಈ ಹೆಂಗಸು ಆ ಬಿದಿರಿನ ರಾಶಿಯಿಮ್ದ ತಪ್ಪಿಸಿಕೊಂಡು ಅಲ್ಲೇ ಇದ್ದ ಒಂದು ಗುಡಿ ಒಳಿಕೆ ಸೇರಿಕೊಂಡ್ಳು.
 
ಈ ಕಡೆ ಗಂಡ ಹೆಂಡ್ತಿ ಬೆಂಕಿ ಪಟ್ಣ ತಂದು ಬಿದಿರಿನ್ ರಾಶಿಗೆ ಬೆಂಕಿ ಹಾಕಿ ಮನೆ ಕಡೆ ಹೊರಟ್ರು. ಈ ಹೆಂಗಸು ರಾತ್ರಿ ಗುಡಿ ಒಳಗೇ ದೇವ್ರ ಕಲ್ಲಿನ ಹಿಂದೆ ಕೂತ್ಳು. ಅವತ್ತು ಅರ್ಧ ರಾತ್ರಿಲಿ ಆ ಗುಡಿಗೆ ಹನ್ನೆರಡು ಜನ ಕಳ್ಲರು ಬಂದು ದೇವ್ರಿಗೆ ಪೂಜೆ ಮಾಡಿದ್ರು. "ತಾಯೀ ಇವತ್ತು ನಮ್ ಕೆಲಸ ಚನ್ನಾಗಿ ಆಗಲಿ ಅಂತ ಬಲಗಡೆ ಹೂವು ಹಾಕಿ ಹರಸವ್ವ...ನಮಗೆ ಸಿಕ್ಕಿದ್ರಲ್ಲಿ ಅರ್ಧ ಪಾಲು ನಿಂಗೆ ಕೊಡ್ತಿವಿ" ಅಂತ ಕೇಳಿಕೊಂಡ್ರು. ದೇವರ ಹಿಂದೆ ಕೂತಿದ್ದ ಈ ಹೆಂಗಸು ಒಂದು ಹೂವನ್ನ ಬಲಗಡೆ ಹಾಕಿದಳು. ಅವತ್ತು ಆ ಕಳ್ರಿಗೆ ಭಾಳಾ ಒಳ್ಳೆ ಲೂಟಿ ಸಿಗ್ತು! ಅವರು ತಾವು ಮಾತು ಕೊಟ್ಟಂಗೇ ಗುಡಿಗೆ ಬಂದು ಎಲ್ಲ ನಗ ನಾಣ್ಯ ಒಡವೆ ವಸ್ತ್ರನೂ ದೇವರಿಗೆ ಅಂತ ಹಂಚಿಟ್ಟು ಹೋದ್ರು. ದೇವರ ಹಿಂದೆ ಅಡಗಿದ್ದ ಈ ಹೆಂಗಸು ಒಂದು ವಸ್ತ್ರದೊಳಿಕೆ ಎಲ್ಲಾ ನಗ ನಾಣ್ಯ ಸಾಮಾನ್ನೂ ತುಂಬಿಕೊಂಡು ಬಿದಿರಿಗೆ ಬೆಂಕಿ ಹಚ್ಚಿದ್ದ ಜಾಗದಲ್ಲಿ ಕೂತಳು.
 
ಬೆಳಿಗ್ಗೆ ಆದಮೇಲೆ ಅವಳ ಮಗ ಸೊಸೆ ಅಲ್ಲಿಗೆ ಬಂದ್ರು. ಅವಳನ್ನು ನೋಡಿ ಸೊಸೆಗೆ ಆಶ್ಚರ್ಯ ಆಯ್ತು! ಮಗ ಅವಳ ಕೈಲಿದ್ದ ಗಂಟು ನೋಡಿ ಅದನ್ನು ಬಿಚ್ಚಿ ನೋಡಿದ. ಎಲ್ಲಿಂದ ಬಂತಮ್ಮಾ ಇಷ್ಟೋಂದು ಚಿನ್ನ ಒಡವೆ?!" ಅಂತ ಆಶ್ಚರ್ಯದಿಂದ ಕೇಳ್ದ. ಆ ಹೆಂಗಸು ಸೊಸೆನ ತೊರಿಸಿ "ಇವರ ಅಪ್ಪ ಬಂದು ಕೊಟ್ಟು ಹೋದರು ಕಣಪ್ಪಾ" ಅಂದ್ಳು. ಅದ್ಕೆ ಆ ಸೊಸೆ "ಹೌದಾ! ನಮ್ಮಪ್ಪ ಬಂದು ಕೊಟ್ ಹೋದ್ನಾ?! ಮತ್ತೆ ನಾನೂ ಹೋಗಿ ಒಡವೆ ತರ್ತಿನಿ...ನನಗೂ ಬೆಂಕಿ ಹಚ್ಚಿ" ಅಂತ ಹಟ ಮಾಡಿದ್ಲು. "ಸರಿ ಕಣವ್ವ ನಿನ್ನಿಷ್ಟ" ಅಂತ ಅವ್ವ ಮಗ ಸೇರಿ ಅವಳನ್ನು ಬಿದಿರಿನ ರಾಶಿಲಿ ಕೂರಿಸಿ ಬೆಂಕಿ ಹಚ್ಚಿ ಮನೆಗೆ ಬಂದ್ರು. ಆ ಸೊಸೆ ಉರಿದು ಬೂದಿಯಾಗಿ ಹೋದ್ಲು. ಆ ಹುಡುಗ ದಿನಾ ಬಂದು ಅವಳು ಇನ್ನೂ ಯಾಕೆ ಬಂದಿಲ್ಲ ಅಂತ ಜಾಗ ನೋಡಿಕೊಂಡು ಹೋಗಿ ಕಡೆಗೆ ಸಾಕಾಗಿ ಸುಮ್ಮನಾದ. ಅವರವ್ವ ಅವನಿಗೆ ಇನ್ನೊಂದು ಒಳ್ಳೆ ಕಡೆ ಸಂಬಂದ ನೋಡಿ ಮದುವೆ ಮಾಡಿಸಿದ್ಲು. ಹೊಸ ಸೊಸೆ ಜೊತೆ ಸುಕವಾಗಿದ್ಲು.
(ಸಂಗ್ರಹ)
 
 
ಕಲೆಯಾಗಿ-ಕಥೆಯಾಗಿ ನಮ್ಮ ಜಾನಪದದಲ್ಲಿ, ಜನಪದರ ಜೀವನದಲ್ಲಿ ಹಾಸುಹೊಕ್ಕಾಗಿರುವ ಕೆಲವು ಅಭ್ಯಾಸಗಳನ್ನು, ವಸ್ತುಗಳನ್ನು ಆಯಾಮದ ಓದುಗರಿಗಾಗಿ ಪರಿಚಯಿಸಿಕೊಡಲಿದ್ದೇವೆ. ಒಂದೂರಂತೆ ಅಂಕಣದಲ್ಲಿ ಕಥೆಗಳೊಂದಿಗೆ ನೆಂಚಿಕೊಳ್ಳಿ. 
 

ಜನಪದ ಚಿತ್ತಾರಗಳು

ಚಿತ್ರ-ಲೇಖನ ಜಿ.ಶ್ರೀನಿವಾಸಯ್ಯ


ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲೂ ಕಲಾತ್ಮಕತೆಯಿರುತ್ತದೆ. ಆ ಕಲಾತ್ಮಕತೆಯನ್ನು ಆಸ್ವಾದಿಸುವ ಮನಸ್ಥಿತಿಬೇಕು. ಅಂತಹ ಕಲಾಕೃತಿಗಳನ್ನು ಸೃಜಿಸುವ ಸೃಜನಶೀಲ ಶಕ್ತಿಯನ್ನು ಆದಿಮಾನವನಿಂದ ಆಧುನಿಕ ಮಾನವನ ತನಕ ಕಾಣುತ್ತೇವೆ.
 
ಪ್ರಾಚೀನ ಮಾನವನ ಇಂತಹ ಸೃಜನಶೀಲ ಮನಸ್ಸಿನ ಅಭಿವ್ಯಕ್ತಿಯನ್ನು ಅವನು ಗುಡ್ಡ ಮತ್ತು ಬಂಡೆಯ ಮೇಲೆ ಬರೆಯುತ್ತಿದ್ದ ಚಿತ್ತಾರಗಳಲ್ಲಿ ಕಾಣಬಹುದು. ಅಲ್ಲಿಂದ ಆದಿಗೊಂಡು ಅವನು ಅನೇಕ ಘಟ್ಟಗಳಲ್ಲಿ ಸಾಗಿ ಬರುತ್ತಲೇ ಅವನ್ನು ಮುಂದುವರಿಸಿಕೊಂಡು ಬಂದಿದ್ದಾನೆ. ಅಂತಹ ಚಿತ್ರಗಳನ್ನು ನಾವು ಇಂದಿಗೂ ಗುಹೆ ಮತ್ತು ಬಂಡೆಗಲ್ಲುಗಳ ಮೇಲೆ ಕಾಣಬಹುದಾಗಿದೆ. ಅಲ್ಲದೆ ಆಧುನಿಕ ಕಾಲದಲ್ಲಿಯೂ ಅನೇಕ ಬಗೆಯ ಚಿತ್ತಾರಗಳನ್ನು ಕಾಣಬಹುದಾಗಿದೆ. ಆದ್ದರಿಂದ ಆದಿ ಮಾನವನಿಂದ ಆಧುನಿಕ ಮಾನವನ ತನಕ ಅವನ ಕಲಾತ್ಮಕತೆಯನ್ನೂ ಅವುಗಳಿಗೆ ಬಳಸಿಕೊಂಡಿರುವ ಮಾಧ್ಯಗಳನ್ನು ಜನಪದ ಚಿತ್ತಾರಗಳ ಹಿನ್ನಲೆಯಲ್ಲಿ ಈ ಕೆಳಗಿನಂತೆ ಪಟ್ಟಿ ಮಾಡಬಹುದು.
 
ರಂಗೋಲಿ
 
ಜನಪದರು ತಮ್ಮ ಪರಿಸರದಲ್ಲಿ ನೋಡುವ ವಸ್ತು, ಪ್ರಾಣಿಗಳನ್ನು ತಮ್ಮ ಮನೆಯ ಗೋಡೆಗಳ ಮೇಲೆ, ಪಡಸಾಲೆಯಲ್ಲಿ. ನಡುಮನೆಯ ಗೋಡೆಗಳ ಮೇಲೆ ಬರೆಯುತ್ತಿದ್ದರು. ಅದಕ್ಕೆ ಅವರು ಮನೆಗಳನ್ನು ಕೆಮ್ಮಣ್ಣಿನಿಂದ ಅಲಂಕರಿಸಿ, ಅದರ ಮೇಲೆ ಅಕ್ಕಿ ಹಿಟ್ಟಿನಿಂದ ಮಾಡಿದ ವಿವಿಧ ಬಗೆಯ ಚಿತ್ರಗಳನ್ನು ಬರೆಯುತ್ತಿದ್ದರು. ಕೆಲವರು ಬಿಳಿ ಗೋಡೆಗಳಿಗೆ ನೀಲಿಯಿಂದ ಚಿತ್ತಾರಗಳನ್ನು ಬರೆಯಿತ್ತಿದ್ದುದನ್ನು ಕಾಣಬಹುದು. ನಡುಮನೆಯಲ್ಲಿ ಮಣ್ಣಿನಿಂದಲೇ ನವಿಲು, ಸೂರ್ಯ, ಚಂದ್ರ ಮತ್ತು ಇತರೆ ಪ್ರಾಣಿಗಳನ್ನು ಮಾಡುತ್ತಿದ್ದುದು ಮತ್ತು ಬರೆಯುತ್ತಿದ್ದುದು ಅವರ ಕಲಾವಂತಿಕೆಯನ್ನು ಸೂಚಿಸುತ್ತದೆ. ಇಂದಿಗೂ ಇವರ ಮನೆಗಳಲ್ಲಿ ವಿವಾಹ ಮತ್ತು ಇತರೆ ಕೆಲವು ವಿಶೇಷ ದಿನಗಳಲ್ಲಿ ಇಂತಹ ಚಿತ್ತಾರಗಳನ್ನು ಬರೆಯುತ್ತಾರೆ. ಭಾರತದಲ್ಲಿ ರಂಗವಲ್ಲಿಯೂ ಪುರಾತನ ಕಾಲದಿಂದಲೂ ಬಂದ ಗೃಹಾಲಂಕಾರದ ಒಂದು ಕಲೆಯಾಗಿದೆ. ಪುರಾಣ, ಕಾವ್ಯ, ಇತಿಹಾಸ ಮೊದಲಾದ ಸಾಹಿತ್ಯಗಳಲ್ಲಿ ರಂಗವಲ್ಲಿಯ ಉಲ್ಲೇಖಗಳಿವೆ. ಅರವತ್ನಾಲ್ಕು ಕಲೆಗಳಲ್ಲಿ ರಂಗವಲ್ಲಿಯೂ ಒಂದಾಗಿದೆ.
 

ಮನೆಯನ್ನು ಸಾರಿಸುವ ಸಂದರ್ಭದಲ್ಲೂ ಸಗಣಿಯನ್ನು ಕಲಾತ್ಮಕವಾಗಿ ಸಾರಿಸುತ್ತಾರೆ. ಅದರ ಮೇಲೆ ಸುದ್ದೆ ಮಣ್ಣಿನಿಂದ ರಂಗೋಲಿ ಬಿಡಿಸುವುದು, ಆ ಮುಗ್ಗಿಗೆ ಎರೆಮಣ್ಣಿನಿಂದ ಅಡ್ಡಪಟ್ಟಿ ತೆಗೆಯುವುದು, ಹೂವು ಕಾಯಿಗಳನ್ನು ರಂಗೋಲಿಯಲ್ಲಿ ಬಿಡಿಸುವುದು ರೂಢಿಯಲ್ಲಿದೆ. ಹುಣ್ಣಿಮೆಯ ದಿನಗಳಲ್ಲಿ ಹಾಕುವ ಕಲಾತ್ಮಕ ರಂಗೋಲಿಗಳನ್ನು ಕಾಣುತ್ತೇವೆ. ಇವು ಹೆಂಗಳೆಯರ ಕಲಾಸಿರಿಯನ್ನು ಪ್ರತಿನಿಧಿಸುವಂತಹವುಗಳು ಆಗಿವೆ.
ಮದುವೆಯ ಸಂದರ್ಭದಲ್ಲಿ ಹೆಂಗಸರ ಮತ್ತು ಗಂಡಸರ ಕಲಾಸಿರಿಯ ಅಭಿವ್ಯಕ್ತಿಯನ್ನು ವಿಶೇಷವಾಗಿ ಕಾಣುತ್ತೇವೆ. ಮನೆಯ ಹೆಬ್ಬಾಗಿಲಿನ ಬಲಗಡೆ ಮದುಮಕ್ಕಳು ಕುಳಿತುಕೊಳ್ಳುವ ಭಾಗವನ್ನು ಕೆಮ್ಮಣ್ಣು ಮತ್ತು ಸುಣ್ಣಗಳಿಂದ ವಿವಿಧ ಆಕೃತಿಯ ಚಿತ್ತಾರಗಳನ್ನು ಬಿಡಿಸಿ ಅಲಂಕರಿಸಲಾಗುತ್ತದೆ. ಅಲ್ಲಿ ವಿಶೇಷವಾಗಿ ಪ್ರಕೃತಿ ದೇವರುಗಳಾದ ಸೂರ್ಯ, ಚಂದ್ರ ಮುಂತಾದವುಗಳನ್ನು ಬಿಡಿಸುತ್ತಿದರು. ಆದರೆ ಈಗ ಆಧುನಿಕ ಮದುವೆಯ ಏರ್ಪಾಟುಗಳು, ಇವುಗಳನ್ನು ಮರೆಯುವಂತೆ ಮಾಡಿವೆ.
 
ಮನೆಯಲ್ಲಿ ಗೋಡೆಗಳನ್ನು ಅಲಂಕರಿಸುವುದಷ್ಟೇ ಅಲ್ಲದೆ, ಮನೆಯ ಬಾಗಿಲಿಗೆ ಹಾಕುವ ಕಸೂತಿ ಕಲೆಗಳು, ಅವುಗಳ ಮೇಲೆ ಬಿಡಿಸುವ ವಿಭಿನ್ನ ಚಿತ್ತಾರಗಳು, ಗೋಡೆಯ ಅಂಚುಗಳ ಮೇಲಿನ ಕಲೆ ಮತ್ತು ಸ್ತ್ರೀಯರು ಹಾಕಿಕೊಳ್ಳುವ ಗೋರಂಟಿಯ ವಿವಿಧ ಬಗೆಯ ಚಿತ್ತಾರಗಳು ಅವರ ಕಲಾಭಿರುಚಿಯ ಸಂಕೇತವೆಂದು ಕರೆಯಬಹುದಾಗಿದೆ.
 
ಜನಪದರು ನೇಯುತ್ತಿದ್ದ ಸಿರಿಚಾಪೆಗಳು, ಬಟ್ಟೆಗಳು, ಅದರ ಮೇಲೆ ಬಿಡಿಸುವ ಪ್ರಾದೇಶಿಕ ಪ್ರಾಣಿ ಪಕ್ಷಿಗಳ ಚಿತ್ರಗಳು, ಅವರ ಕಲಾವಂತಿಕೆಯ ನಿದರ್ಶನಗಳಾಗಿವೆ. ಇವು ಅವರ ಮನಸ್ಥಿತಿಯನ್ನು, ಅವರ ಸಂಸ್ಕೃತಿಯನ್ನು ಪ್ರತಿನಿಧಿಸುವ ಪ್ರಮುಖ ಸಾಧನಗಳಾಗಿವೆ.
 
ಆಧುನಿಕತೆಯ ಅಬ್ಬರದಲ್ಲಿನ ಯಂತ್ರ ಸಂಸ್ಕೃತಿಯ ದಾಳಿಯಿಂದ ರಂಗೋಲಿ ಕಲೆಗಳು ಮಾರ್ಪಾಟಾಗುತ್ತಿವೆ. ಅದರ ಮಾಧ್ಯಮ ಸ್ವರೂಪ ಬದಲಾವಣೆಗೆ ಒಳಪಡುತ್ತಿದೆ. ಆದರೂ ಈ ಕಲೆ ಇನ್ನೂ ಜನಪದರಲ್ಲಿ ಜೀವಂತಿಕೆಯನ್ನು ಪಡೆದಿರುವುದು ಕಾಣಬಹುದಾಗಿದೆ.