ಅಂಗಳ      ಮುಗುಳು ಮುಕ್ಕಳಿಸಿ
Print this pageAdd to Favorite
 
ನನ್ನೊಳಗಿನ ತೇಜಸ್ವಿ - ೨
 
ಪ್ರೊ. ಜಿ.ಎಚ್. ನಾಯಕ
 
 
(ಕನ್ನಡ ಸಾಹಿತ್ಯಾಸಕ್ತರಲ್ಲಿ ಜಿ ಎಚ್ ನಾಯಕ್ ಗೊತ್ತಿಲ್ಲ ಎನ್ನುವವರಿಲ್ಲ. ಜಿ ಎಚ್ ಕೇವಲ
ವಿಮರ್ಶಕರಲ್ಲ, ವಿಮರ್ಶೆಯ ಗುರು. ಕೇವಲ ಸಾಹಿತಿಯಲ್ಲ, ಅವರು ಕನ್ನಡ ಸಂಸ್ಕೃತಿಯ ಧೀಮಂತ ವಕ್ತಾರ. ಬದುಕಿ ಬರೆದ, ಅಂದಂತೆ ನಡೆದುಕೊಂಡ ಒಂದು ಸಾತ್ವಿಕ ತೇಜಸ್ಸು. ಜಿ ಎಚ್ ನಾಯಕರೇ ಬೇರೆ. ಅವರಂತೆ ಬದುಕಿದವರು ಬೇರೆ ಇಲ್ಲ. ಕುವೆಂಪು, ತೇಜಸ್ವಿಯಂತೆ ಕರ್ನಾಟಕದ ಒಂದು ಸಾಂಸ್ಕೃತಿಕ ಮಹಾಮಾದರಿ. ಅವರ ಬರಹ ಕರ್ನಾಟಕದ ’ನಿಜದನಿ’. ಅವರು ಕನ್ನಡ ಸಂಸ್ಕೃತಿಯ ಸತ್ವದ ಸಂಕೇತ. ಜಿ ಎಚ್ ಆಯಾಮ ಪರಿವಾರದ ಅತ್ಯಂತ ಆಪ್ತ ಮನಸ್ಸು. ನಮ್ಮ ಪ್ರಯತ್ನ-ಭರವಸೆಯ ಆಧಾರ ಸ್ಥಂಭ. ಅವರ ಪ್ರೀತಿ ನಮ್ಮನ್ನು ಸದಾ ಬೆಳಗಲಿ.
 

ಜಿ ಎಚ್ ನಾಯಕರು ತಮ್ಮ ಆತ್ಮೀಯ ಮಿತ್ರ ಪೂರ್ಣಚಂದ್ರ ತೇಜಸ್ವಿಯವರ ನಿಧನಾನಂತರ ಈ ಲೇಖನದ ಮೂಲಕ ತಮ್ಮೊಳಗಿನ ತೇಜಸ್ವಿಯವರ ನೆನಪುಗಳನ್ನು ಹಂಚಿಕೊಂಡಿದ್ದರು. ಮೊನ್ನೆ, ೨೦೧೦ ರ ಆಗಸ್ಟ್ ಕೊನೆಯ ವಾರದಲ್ಲಿ ಮೈಸೂರಿನಲ್ಲಿ ಅವರಿಗೆ ಪ್ರತಿಷ್ಟಿತ ಶಿವರಾಮ ಕಾರಂತ ಪ್ರಶಸ್ತಿ ಸಂದಿದೆ. ಆ ಸಂತೋಷದ ಸಲುವಾಗಿ ಆಯಾಮದ ಓದುಗರಿಗಾಗಿ ಅವರ ಈ ಬರಹ)

ತೇಜಸ್ವಿ ಜನ್ನಾಪುರದ ಸಮೀಪದ ಒಳಕಾಡಿನಲ್ಲಿ ಕಾಫಿ ತೋಟ ಮಾಡುತ್ತಿದ್ದ ಮೊದಲ ದಿನಗಳು. ನನ್ನ ಪರಿಚಿತರೊಬ್ಬರು ಮೂಡಿಗೆರೆ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಶಾಲೆಯ ಸಮಾರಂಭವೊಂದಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಕರೆದಿದ್ದರು. ಹೋಗಿ ಭಾಷಣ ಮುಗಿಸಿ ತಿರುಗಿ ಹೊರಡಲು ಸಜ್ಜಾದರೂ ನನಗೆ ಅಲ್ಲಿಗೆ ಬಂದು ಹೋದದ್ದಕ್ಕೆಂದು ಒಂದು ಪೈಸೆಯನ್ನೂ ಕೊಡುವ ಸೂಚನೆ ಕಾಣಿಸಲಿಲ್ಲ. ಕೇಳುವುದು ಹೇಗೆ? ನಾನು ಅಲ್ಲಿಂದ ನೇರ ನಮ್ಮ ಊರು ಅಂಕೋಲೆಗೆ ಹೋಗುವವನಿದ್ದೆ. ಪ್ಯಾಂಟ್ ಜೇಬಿಗೆ ತಿರುಗಿ ತಿರುಗಿ ಕೈಹಾಕಿ ಒಳಕೈಯಲ್ಲೇ ಇದ್ದಷ್ಟು ಹಣವನ್ನು ಮುಟ್ಟಿ ಮುಟ್ಟಿ ಎಷ್ಟಿದೆ ಎಂದು ತಿರುಗಿ ಲೆಕ್ಕ ಮಾಡಿಕೊಂಡೆ. ಎಷ್ಟು ಸಲ ಲೆಕ್ಕ ಮಾಡಿದರೂ ಹಾಗೂ ಹೀಗೂ ಕೇವಲ ಬಸ್ ಟಿಕೆಟ್ ಮಟ್ಟಿಗೆ ಸಾಕಾಗವಷ್ಟು ಹಣ ಮಾತ್ರ ಇದೆ ಎಂಬುದು ಮನವರಿಕೆ ಆಯಿತು. ದಾರಿಯಲ್ಲಿ ಚಹಕ್ಕೊ ಊಟಕ್ಕೊ ಎಂದು ಒಂದು ಪೈಸೆ ಖರ್ಚು ಮಾಡಿದರೂ ಊರು ತಲುಪುವುದು ಕಷ್ಟ ಅನಿಸಿತು. ಆ ಕಾಲದಲ್ಲಿ ಊರ ಕಡೆಯ ಎಷ್ಟೋ ಹುಡುಗರನ್ನು ಮೈಸೂರಿಗೆ ಕರೆದು ತಂದು ಓದಿಸುತ್ತಿದ್ದೆ; ಓದಿಗೆ ಸಹಾಯ ಮಾಡುತ್ತಿದ್ದೆ. ಹಾಗಾಗಿ ನನ್ನ ಕೈಯಲ್ಲಿ ಕಾಸು ನಿಲ್ಲುತ್ತಲೇ ಇರಲಿಲ್ಲ. ನಾನು ತಲೆತುಂಬ ಆದರ್ಶದ ಕನಸು ತುಂಬಿಕೊಂಡಿದ್ದ ಕಾಲವದು.
 
ಬಸ್ ನಿಲ್ದಾಣದವರೆಗೆ ಜೊತೆಗೇ ಬಂದರೂ ಆ ಶಿಕ್ಷಕರು ಹಣದ ಬಗ್ಗೆ ಚಕಾರ ಎತ್ತಲಿಲ್ಲ ತಬ್ಬಿಬ್ಬಾದೆ. ತೇಜಸ್ವಿಯವರ ನೆನಪಾಯಿತು. ಅಲ್ಲೆಲ್ಲೊ ಸಮೀಪದಲ್ಲೇ ಅವರ ತೋಟ ಇದೆ ಎಂದು ಗೊತ್ತಿತ್ತು. ಎಲ್ಲಿ ಸಮೀಪ ಎಂದರೆ ಎಷ್ಟು ದೂರ ಎಂಬ ಬಗ್ಗೆ ನನಗೆ ಅಂದಾಜಿರಲಿಲ್ಲ. ಅದಾದರೂ ಗೊತ್ತಿದ್ದರೆ ಚೆನ್ನಾಗಿತ್ತಲ್ಲಾ ಎಂದು ಒಳಗೊಳಗೇ ಅಂದುಕೊಂಡು ಅಸಹಾಯಕನಂತಾದೆ. ತೇಜಸ್ವಿ ತೋಟಕ್ಕೆ ಹೋಗಬೇಕು, ಅವರ ಜೊತೆಯಲ್ಲಿ ಒಂದು ದಿನವನ್ನಾದರೂ ಕಳೆಯಬೇಕು ಎಂಬ ಯೋಚನೆ, ಯೋಜನೆ ಹಾಕಿಕೊಂಡು ಬಂದಿರಲಿಲ್ಲ. ನಾನು ಊರಿಗೆ ಬೇಗ ಹೋಗಿ ತಲುಪಬೇಕಾದ ಅರ್ಜೆಂಟೂ ಇತ್ತು. ಏನು ಮಾಡುವುದು, ಯಾರನ್ನು ಕೇಳುವುದು ಎಂದು ಗೊತ್ತಾಗದೆ ಆ ಶಿಕ್ಷಕರನ್ನೇ ಕೇಳಿದೆ. ಅವರಿಗೂ ತೋಟ ಇಲ್ಲೆಲ್ಲೊ ಸಮೀಪದಲ್ಲೇ ಇದೆ ಎಂಬಷ್ಟು ಮಾತ್ರ ಗೊತ್ತಿತ್ತು; ಎಲ್ಲಿ ಎಂಬುದು ಗೊತ್ತಿರಲಿಲ್ಲ.
ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆ ಮಳೆ ಹನಿ ಬೀಳತೊಡಗಿತು. ಅವಸರವಸರವಾಗಿ ಬಸ್ ನಿಲ್ದಾಣ ಸೇರಿಕೊಳ್ಳಲು ತುರುಸಿನ ಹೆಜ್ಜೆ ಹಾಕುತ್ತ ನಾವು ಧಾವಿಸುತ್ತಿದ್ದರೆ ನೆನೆದವರ ಮನದಲ್ಲಿ ಎಂಬಂತೆ ತೇಜಸ್ವಿಯವರು ನಮ್ಮ ಎದುರೇ ಸ್ಕೂಟರಿನಲ್ಲಿ ಬರುತ್ತಿದ್ದದ್ದು ಕಂಡಿತು. ಮಳೆ ಬೀಳುತ್ತಿದ್ದದ್ದರಿಂದ ವೇಗ ಕಡಮೆ ಮಾಡಿದ್ದ ಅವರಿಗೂ ನಾನು ಹೇಗೊ ಕಣ್ಣಿಗೆ ಬಿದ್ದಿದ್ದೆ. ಇಬ್ಬರಿಗೂ ಆಶ್ಚರ್ಯ. ಸ್ಕೂಟರ್ ನಿಲ್ಲಿಸಿ, ಆ ಮಳೆಯಲ್ಲೇ, `ಏನ್ ಮಾರಾಯ್ರಾ ಇಲ್ಲಿ? ಎಲ್ಲಿಗೆ ಬಂದಿದ್ರೀ? ಎಲ್ಲಿಗೆ ಹೋಗ್ತೀರಿ?' ಎಂದು ಪ್ರಶ್ನೆ ಕೇಳುತ್ತಿದ್ದವರು ನನ್ನ ಉತ್ತರಕ್ಕಾಗಿ ಕಾಯದೆ, `ಬನ್ರೀ ನನ್ನ ಜೊತೆಲಿ, ತೋಟ ತೋರಿಸ್ತೀನಿ, ಒಂದೆರಡು ದಿನ ಇದ್ದು ಹೋದ್ರಾಯ್ತು' ಎಂದು ಹೇಳುತ್ತ ಹೇಳುತ್ತ ಸ್ಕೂಟರ್ ಮೇಲೆ ಹತ್ತಿಸಿಕೊಂಡೇ ಬಿಟ್ಟರು. ಆಗೊಂದು ಈಗೊಂದು ಹನಿ ಬೀಳುತ್ತಿದ್ದ ಮಳೆಗೆ `ಕೇರ್' ಮಾಡದೆ ನನ್ನನ್ನೂ ಕರಕೊಂಡು ಹೊರಟೇಬಿಟ್ಟರು. ನನಗೆ ಹಾಯೆನಿಸಿತು.
 
ನನ್ನ ತೋಟಕ್ಕಲ್ಲ ಕಣ್ರೀ. ನನ್ನ ಫ್ರೆಂಡ್ ವಾಸು ಅವರ ಭೂತನ ಕಾಡು ತೋಟಕ್ಕೆ ಕಣ್ರೀ. ನಿಮಗೊಂದು ಸರ್ಪ್ರೈಸ್ ಕೊಡ್ತೀನಿ' ಇತ್ಯಾದಿ ಖುಷಿ ಉಕ್ಕುವಂಥ ಮಾತುಗಳನ್ನಾಡುತ್ತಾ ಹೋದರು. ಭೂತನ ಕಾಡು ಎಸ್ಟೇಟ್ನಲ್ಲಿದ್ದ ರಾಜೇಶ್ವರಿಯವರನ್ನು ಕರೆದು, ನನಗೆ ಪರಿಚಯಿಸಿ `ನಾನು ಮದುವೆಯಾಗುವ ಹುಡುಗಿ' ಅಂದರು. ಬರುವಾಗ ದಾರಿಯಲ್ಲಿ ಹೇಳಿದಂತೆ ಒಳ್ಳೇ ಸರ್ಪ್ರೈಸ್ ನ್ನೇ ಕೊಟ್ಟರು. ರಾಜೇಶ್ವರಿಯವರನ್ನು ನೋಡಿದ ನೆನಪೇನೊ ನನಗೆ ಮಿಂಚಿದಂತಾಯಿತು. ಸರಿಯಾಗಿ ನೆನಪಾಗಲಿಲ್ಲ. ನಾನು ಮಹಾರಾಜ ಕಾಲೇಜಿನಲ್ಲಿ ಕನ್ನಡ ಆನರ್ಸ್, ಎಂ.ಎ. ಓದುತ್ತಿರುವಾಗಲೇ ಕಂಡ ನೆನಪಾಯಿತು. ಸ್ವಲ್ಪ ಜೂನಿಯರ್ ಆಗಿದ್ದರೊ ಏನೊ! ರಾಜೇಶ್ವರಿ ಫಿಲಾಸಫಿ ಎಂ.ಎ ಮಾಡಿದವರು.
 
ತೇಜಸ್ವಿ ಬಂದೂಕು ಎತ್ತಿಕೊಂಡರು. 'ಪ್ಯಾಂಟ್ ಕಳಚಿ ಪಂಚೆ ಉಟ್ಟುಕೊಳ್ರೀ. ಈ ತೋಟ ತೋರಿಸ್ತೇನೆ ಬನ್ರೀ' ಎಂದರು. ಅವರು ಮಂಡಿವರೆಗೆ ಮಡಚಿಕೊಂಡ ಒರಟು ಒರಟಾದ ಪ್ಯಾಂಟ್ ತೊಟ್ಟಿದ್ದರು. ಮದುವೆ ಆಗುವ ಹುಡುಗಿ ಬರುವಾಗಲೂ, ಬಂದಾಗಲೂ ಸ್ವಲ್ಪ ಶೋಕಿ ಲುಕ್ ಕೊಡಬೇಕು ಎಂಬ ಉಮೇದು ಕಾಣಿಸಲಿಲ್ಲ. ತೋಟದಲ್ಲಿ ಸುತ್ತಾಡಿಸಿದರು. ಎಲ್ಲೊ ತೀರ ಹತ್ತಿರವಲ್ಲದ ಒಂದು ಮರದ ಮೇಲೆ ಕಾಡುಕೋಳಿಯೊಂದು ಕೂತಿದ್ದು ಕಂಡರು. ಗುಂಡು ಹಾರಿಸಿದರು, 'ಬಿತ್ತು ಕಣ್ರೀ' ಎಂದರು. ಬಿತ್ತು ಎಂದ ಕೋಳಿ ಹುಡುಕೋಣ ಎಂದರೆ ಸಾಧ್ಯವೇ ಆಗದ ರೀತಿಯಲ್ಲಿ ಅದೇನು ಮಳೆಯೊ, ಎಲ್ಲಿತ್ತೊ ಧೋ ಧೋ ಎಂದು ಬಿರುಸು ಭರಾಟೆಯಲ್ಲಿ ಇದ್ದಕ್ಕಿದ್ದಂತೆ ಸುರಿಯತೊಡಗಿತು. 'ಮಳೆ ಏನ್ಮಾಡ್ತದೆ ಬನ್ರೀ. ಇಲ್ಲೆಲ್ಲೊ ಬಿದ್ದಿದೆ ಹುಡುಕೋಣ, ಎಂದವರು ಅಲ್ಲಿ ಇಲ್ಲಿ ತೇಜಸ್ವಿ ಎಲ್ಲಾ ಕಡೆಗೂ ಆ ಕಾಫಿ ತೋಟದ ಒಳಗೆ ಹುಡುಕಿಯೇ ಹುಡುಕಿದರು. ಈಡು ತಾಗಿತ್ತೊ ಇಲ್ಲವೊ ಎಂದು ನಾನು ಹೇಳಿದ್ದಕ್ಕೆ 'ಯೇ... ನಾನು ಈಡು ಹೊಡೆದರೆ ಅದೂ ಬೀಳಬೇಕು, ಅದರಪ್ಪನೂ ಬೀಳಬೇಕು, ನೀವಿಲ್ಲೇ ಮರದ ಕೆಳಗೆ ನಿಂತಿರಿ, ನಾನು ಹುಡುಕ್ತೇನೆ' ಎಂದವರು ಮತ್ತೆ ಹುಡುಕಿದರು. ಕೊನೆಗೂ ಕೋಳಿ ಪತ್ತೆಯಾಗಲಿಲ್ಲ. ಥತ್ ಇದರ...' ಎಂದು ಅದನ್ನೂ ಅದರಪ್ಪನನ್ನೂ ಬೈದರು.
 
ಮೈಯೆಲ್ಲಾ ಒದ್ದೆ ಮಾಡಿಕೊಂಡು ಮನೆಗೆ ತಿರುಗಿ ಬಂದರೆ, ನೋಡ್ತೇನೆ, ನನ್ನ ಕಾಲುಗಳ ಮೇಲೆ ಅಲ್ಲಿ ಇಲ್ಲಿ ಇಂಬಳಗಳು ರಕ್ತ ಹೀರುತ್ತಾ ಊದಿಕೊಂಡು ಉನ್ಮತ್ತವಾಗಿವೆ. ತೆಗೆದಷ್ಟೂ ರಕ್ತದೋಕುಳಿ. ಹೊಸ ಅನುಭವ. ಗಾಬರಿಯಾದೆ, ಗಲಿಬಿಲಿಗೊಂಡೆ. ತೇಜಸ್ವಿಯವರೇ ಇಂಬಳಗಳನ್ನೆಲ್ಲ ಒಂದೊಂದಾಗಿ ತೆಗೆದು ಬಿಸಾಕಿ ಸುಣ್ಣವನ್ನೊ ಏನೊ ಒಳಗಿಂದ ತರಿಸಿ ಮೆತ್ತಿದರು. ರಕ್ತ ಹರಿಯುವುದು ಕಡಮೆ ಆಯ್ತು. ನನ್ನ ಪಂಚೆ ರಕ್ತಮಯವಾಗಿತ್ತು. ಗೊತ್ತಿಲ್ಲದವರ ಮನೆಯಲ್ಲಿ ಹೊಸದಾಗಿ ಮುಟ್ಟಾದ ಹುಡುಗಿ ಹಾಗೆ ನಾನು ನಾಚಿ ನೀರಾಗಿ ಹೋಗಿದ್ದೆ. ತಂದದ್ದೇ ಒಂದು ಪಂಚೆ, ಒಂದು ಪ್ಯಾಂಟು, ಎರಡು ಷರಟು. ಸ್ನಾನ ಮಾಡಿ ಪ್ಯಾಂಟು ಹಾಕಿಕೊಂಡೆ ಷರಟು ಬದಲಿಸಿದೆ. ಪಂಚೆ ಒಗೆಸಿದರೂ ರಕ್ತದ ಕಲೆಗಳು ಪೂರ್ತಿ ಹೋಗಿರಲಿಲ್ಲ. ಕಾಡುಕೋಳಿ ಊಟ ಅಲ್ಲದಿದ್ದರೂ ರಾಜೇಶ್ವರಿಯವರ ಮನೆಯಲ್ಲಿ ಊರ ಕೋಳಿ ಊಟದ ಆತಿಥ್ಯ ದೊರೆತಿತ್ತು.
 
ಸಂಜೆ ಆಗುವುದರೊಳಗೇ ತೇಜಸ್ವಿಯವರ 'ಚಿತ್ರಕೂಟ' ತೋಟಕ್ಕೆ ಕರೆದುಕೊಂಡು ಹೋದರು. 'ಚಿತ್ರಕೂಟ' ಎಂದು ಹೆಸರು ಕೊಟ್ಟವರು ಕುವೆಂಪು. ಯಾಕೊ ತೋಟಕ್ಕೆ ಯಾವ ಹೆಸರಿಡುವುದೆಂದು ನನ್ನನ್ನು ತೇಜಸ್ವಿ ಕೇಳಿದ್ದರು. ನಾನು 'ಶ್ರೀ ರಾಮಾಯಣದರ್ಶನಂ'ದ ಹಿನ್ನೆಲೆಯ ಕಲ್ಪನೆಯಲ್ಲಿ 'ಕಿಷ್ಕಿಂಧೆ' ಎಂದು ಸೂಚಿಸಿದ್ದೆ. ಕುವೆಂಪು 'ಚಿತ್ರಕೂಟ' ಎಂದು ಹೇಳಿದರು ಕಣ್ರೀ. ಅದನ್ನೇ ಇಡುತ್ತೇನೆ ಅಂದಾಗ ಅದ್ಭುತವಾಗಿದೆ ಎಂದು ನಾನು ಹೇಳಿದ್ದೂ ನೆನಪಿದೆ. ಈಗಿನ ತೋಟಕ್ಕೆ 'ಶೇಷಶಾಯಿ' ಎಂದು ಹೆಸರಿಟ್ಟಿದ್ದರೊ, ಇಡಬೇಕೆಂದಿದ್ದರೊ ಆ ಹಂತದಲ್ಲೂ ಹೆಸರ ಬಗ್ಗೆ ನನ್ನ ಅಭಿಪ್ರಾಯ ಕೇಳಿದ್ದರು. 'ಸರಿಯಿಲ್ಲ ಕಣ್ರೀ' ಎಂದು ನಾನು ಹೇಳಿದ್ದೆ. ಆ ಹೆಸರು ಕೆಲಕಾಲ ಚಾಲ್ತಿಯಲ್ಲಿದ್ದು ಕಾಲ ಕ್ರಮದಲ್ಲಿ ಬದಲಾಯಿತು. 'ನಿರುತ್ತರ' ಆಮೇಲಿಟ್ಟ ಹೆಸರು.
 
ಚಿತ್ರಕೂಟ ತಲುಪಿದಾಗ ಸಂಜೆ ಐದು ಐದೂವರೆ ಗಂಟೆ. ಬಂದವರೆ ಸ್ವಲ್ಪವೂ ತಡಮಾಡದೆ ಬಂದೂಕು ಕೈಗೆತ್ತಿಕೊಂಡರು. 'ಬನ್ರೀ ತೋಟ ತೋರಿಸ್ತೇನೆ' ಅಂದರು. ಎಪ್ಪತ್ತೈದು ಎಕರೆ ವಿಸ್ತೀರ್ಣದ ತೋಟ. ಆಗ ತೋಟ ಎಂಬಂತೇನೂ ಇರಲಿಲ್ಲ. ಅದೊಂದು ದಟ್ಟ ಕಡೇ ಆಗಿತ್ತು. ಕಾಡುಕುರಿ, ಕಾಡಹಂದಿಗಳೆಲ್ಲ ಓಡಾಡಿಕೊಂಡಿದ್ದ ಕಾಡುಗಿತ್ತು. ಆ ಕಾಡನ್ನು ಕಡಿದು, ಸವರಿ ಕಾಫಿ ತೋಟ ಮಾಡುವ ಸಾಹಸದಲ್ಲಿ ತೇಜಸ್ವಿ ತೊಡಗಿದ್ದ ಕಾಲ. ಅಷ್ಟೊ ಇಷ್ಟೊ ಕೆಲಸ ನಡೆದಿತ್ತು; ನಡೆಯುತ್ತಾ ಇತ್ತು.
 
ಹತ್ತು ಎಕರೆಯಷ್ಟೊ ಎಷ್ಟೊ ಭತ್ತದ ಗದ್ದೆ ಮಾಡಿದ್ದರು. ಅಲ್ಲಿಗೆ ಕರೆದುಕೊಂಡು ಹೋದರು. ಪೈರು ಸೊಂಪಾಗಿ ಬೆಳೆದಿತ್ತು. ಭತ್ತದ ತುಂಬು ತೆನೆಗಳ ಚೆಂದ ನೋಡುವಂತಿತ್ತು. ಸಂಜೆ ನಿಧಾನವಾಗಿ ಇಳಿಯುತ್ತಿತ್ತು. 'ನಾಯಕರೇ, ಮೇಲೆ ನೋಡ್ರೀ' ಅಂದರು. ನಾನು ಮೇಲೆ ನೋಡಿದೆ. ಹಾರುವ ಹಕ್ಕಿಗಳ ಸಾಲು. ಹಕ್ಕಿಗಳು ಸಂಜೆ ಹೊತ್ತು ಹಾಗೆ ಸಾಲುಗಟ್ಟಿ ಹಾರಿ ಹೋಗುವುದನ್ನು ನೋಡುವುದರಲ್ಲಿ ನನಗೆ ವಿಶೇಷವೇನೂ ಕಾಣಿಸಲಿಲ್ಲ. ನೂರೆಂಟು ಸಲ ನೋಡಿದ್ದಂಥದೇ ದೃಶ್ಯ. ತೇಜಸ್ವಿಯವರು, 'ನಾಯಕರೆ, ಮೇಲೆ ದೃಷ್ಟಿ ನೆಟ್ಟು ನೋಡ್ತಾ ಇರಿ. ನಾನು ರೆಡಿ ಅಂದ ಕೂಡಲೆ ಆ ಸಾಲಿನಲ್ಲಿ ಎಷ್ಟನೇ ನಂಬರಿನ ಹಕ್ಕಿ ಎಂದು ನಂಬರ್ ಮಾತ್ರ ಗಟ್ಟಿ ದನಿಯಲ್ಲಿ ಹೇಳಿ. ಆ ಹಕ್ಕಿ ಮೇಲಿನ ಕಣ್ಣು ತೆಗೆಯದೆ ನೋಡ್ತಾ ಇರಿ. ಮಜಾ ತೋರಿಸ್ತೇನೆ' ಎಂದರು. ನಾನು ಹಾಗೇ ಅವರು 'ರೆಡಿ' ಅಂದಾಗ ನಾಲ್ಕೊ ಐದೊ ಯಾವುದೋ ಒಂದು ನಂಬರ್ ಘೋಷಿಸಿ ಆ ಹಕ್ಕಿಯ ಮೇಲೆಯೇ ಕಣ್ಣುನಟ್ಟು ನಿಂತಿದ್ದೆ. 'ರೆಡಿ' ಎಂದು ಹೇಳುವ ಮೊದಲೇ ಬಂದೂಕಿನ ಗುರಿ ಹಿಡಿದು ನಿಂತಿದ್ದ ತೇಜಸ್ವಿ ಗುಂಡು ಹಾರಿಸಿದರು. ಅದೇ ನಂಬರಿನ ಹಕ್ಕಿ ಧೊಪ್ ಎಂದು ಬಿತ್ತು. ನಾನು ತೇಜಸ್ವಿಯವರ ಪಾರ್ಥ ಸಾಹಸಕ್ಕೆ ಬೆರಗಾದೆ.
 
ತಿನ್ನುವುದಲ್ಲ, ಏನಲ್ಲ ಈ ಹಕ್ಕಿಯನ್ನೇಕೆ ಹೊಡೆದರು, ಎಂದು ವಿಸ್ಮಿತನಾಗಿ ಯೋಚಿಸಿದೆ. ತುಂಟತನ ತೇಜಸ್ವಿಯ ವ್ಯಕ್ತಿತ್ವದಲ್ಲಿಯೆ ಒಳನೆಯ್ಗೆಗೊಂಡ ಗುಣವಾಗಿತ್ತು. ಅದೇನೊ ನನಗೆ ಗೊತ್ತಿತ್ತು. ಆದರೂ ಅದೇ, ಅಷ್ಟೇ ಕಾರಣ ಅನಿಸಲಿಲ್ಲ. ತಿರುಗಿ ಮನೆ ಕಡೆ ಹೊರಟಾಗ, 'ಆ ಕಾಡುಕೋಳಿ ಬಡ್ಡೀ ಮಗಂದು ಬಿದ್ದು ಸತ್ತು ಹೋಗಿದೆ ಕಣ್ರೀ. ಗುರಿ ಬಿದ್ದೆ ಇರ್ತದೆ. ಹಾಗೆಲ್ಲ ಗುರಿ ತಪ್ಪುವುದಿಲ್ಲ. ನರಿಗೊ ಪರಿಗೊ ಯಾವುದಕ್ಕೊ ಪಲಾವಾಗಿ ಬಿಟ್ಟಿರುತ್ತದೆ' ಎಂದರು. ತೇಜಸ್ವಿ ಈ ಗುರಿ ಸಾಹಸ ಪ್ರದರ್ಶನವನ್ನು ಸುಮ್ಮನೆ ಮಾಡಿದ್ದಲ್ಲ. ಕಾಡುಕೋಳಿಗೆ ಗುರಿ ಬಿದ್ದಿರಲಿಲ್ಲವೇನೊ ಎಂದು ನಾನು ಅನುಮಾನಿಸಿದ್ದೆನಲ್ಲಾ ಅದಕ್ಕೇ ಅವರ ಗುರಿ ಕೌಶಲದ ಸಮರ್ಥನೆಯನ್ನು ಪರೋಕ್ಷವಾಗಿ ನನಗೆ ಮಾಡಿ ತೋರಿಸಿದರೇನೊ ಅನಿಸಿತು. ಹಾಗೇ ಕೇಳಿದೆ. ನಸುನಕ್ಕರು. ಕೆಟ್ಟ ಬೈಗುಳ ಪದ ಬಳಸಿ ಮತ್ತೆ ಆ ಕಾಡುಕೋಳಿಯನ್ನು ಬೈದರು. ನನಗೆ ನನ್ನ ಊಹೆ ದೃಢವಾಯಿತು.
 
ಎರಡು ದಿನವಾದರೂ ಇದ್ದು ಹೋಗಿ ಎಂದು ತೇಜಸ್ವಿ ನನಗೆ ಒತ್ತಾಯ ಮಾಡಿದರು. ನಾನು ಮಾರನೆ ಬೆಳಿಗ್ಗೇ ಹೊರಟು ನಿಂತೆ. ನನ್ನ ಹಣದ ಸಮಸ್ಯೆ ಹೇಳಿದಾಗ ಎಷ್ಟು ಬೇಕು ಕೇಳಿದರು. ನಾನು ಹೇಳಿದಷ್ಟು ಕೊಟ್ಟರು. ಸ್ಕೂಟರ್ ಮೇಲೆ ಕರೆದುಕೊಂಡು ಹೋಗಿ ಬಸ್ ಹತ್ತಿಸಿ ಹೋದರು.ನಮ್ಮ ವರ್ತನೆಗಳು ಕೆಲವೊಮ್ಮೆ ನಮಗೇ ಸರಿಯೋ ತಪ್ಪೊ ಎಂದು ಮನವರಿಕೆಯಾಗದಂತೆ ನಡೆದು ಹೋಗಿರುತ್ತವೆ. ತೇಜಸ್ವಿಯವರೊಡನೆ ಒಮ್ಮೆ ಅವರು ನಮ್ಮ ಮನೆಗೆ ಬಂದಿದ್ದಾಗ ಮಾತಿನ ಮಧ್ಯೆ ಅಂಥ ಒಂದು ವಿಷಯ ಪ್ರಸ್ತಾಪಿಸಿದೆ.ನಾಯಕರೆ, ಆ ವಿಷಯ ಮರೆತುಬಿಡಿ. ನಿಮ್ಮ ನಿಲುವು ಸರಿಯಾಗಿಯೇ ಇದೆ. ಈ ಸರಿಯೋ ತಪ್ಪೊ ಅಂತ ಹೀಗೆ ಅಳೆದು ಸುರಿಯೋ ಈ ರೋಗ ನಿಮ್ಮ ನವ್ಯದ್ದು. ನವ್ಯ ಸಾಹಿತ್ಯ ನೋಡಿ. ಹಿಂದೆ ಆಗಿ ಹೋದದ್ದನ್ನೇ ಮನಸಿನಿಂದ ಅಗೆದು ತೆಗೆದು ಮಹಜರ್ ಮಾಡುವ ಡಿಟೆಕ್ಟಿವ್ ಬುದ್ಧಿಯ ಕೆಲಸ. ನವ್ಯದವರ ಕಥೆ, ಕಾದಂಬರಿ ತುಂಬಾ ಮನಸ್ಸಿನೊಳಗೆ ಹೂತು ಹೋದ ನೆನಪಿನ ಹೆಣದ ಗಬ್ಬು ವಾಸನೆ. ದ್ವಂದ್ವ ಅದೂ ಇದೂ ಎಂದುಕೊಂಡು ಪೇಚಾಡುವ, ಯಾವೊಂದು ನಿಲುವನ್ನೊ ನಿರ್ಧಾರವನ್ನೊ ತಳೆಯಲಾಗದ ಅತಂತ್ರ ವ್ಯವಹಾರ. (ಆಗ ತಾನೆ ಎರಡು ಮೂರು ವರ್ಷಗಳಿಂದ ತೇಜಸ್ವಿ ನವ್ಯದ ರೀತಿಗೆ ಭಿನ್ನವಾದ ಬಗೆಯ ಬರವಣಿಗೆಗೆ ತೊಡಗಿದ್ದ ಕಾಲವಾಗಿತ್ತು. 'ಅಬಚೂರಿನ ಪೋಸ್ಟಾಫೀಸ್' ಕಥಾಸಂಕಲನವೂ ಪ್ರಕಟವಾಗಿತ್ತು.) 'ನೋಡಿ, ಆಗಿ ಹೋಗಿದ್ದಕ್ಕಿಂತ ಮುಂದೆ ಆಗಬೇಕಾದದ್ದರ ಬಗ್ಗೆ ಸರಿಯಾಗಿ ಯೋಚಿಸಬೇಕು; ಮಾಡಬೇಕು. ಆಗಿ ಹೋದದ್ದರ ಬಗ್ಗೆ ಸರಿ, ತಪ್ಪು ಅಂತ ಹೆಚ್ಚಿಗೆ ಯೋಚಿಸುವವರಿಗೆ ಕ್ರಮೇಣ spontaneity ನೇ ಹೊರಟು ಹೋಗಿ ಬಿಡುತ್ತದೆ. creativity ಕ್ರಿಯಾಶೀಲತೆಯೂ ಕಡಿಮೆಯಾಗುತ್ತದೆ. ವಿಕ್ರಮಾದಿತ್ಯನ ಹಾಗೆ ಯಾವಾಗಲೂ ಬೆನ್ನ ಮೇಲೆ ಭೂತ ಹೊತ್ತುಕೊಂಡು ಓಡಾಡಬಾರದ್ರೀ, ಇದ್ಯಾವ ಮಹಾ ವಿಷಯ ಎಂದು ತಲೆ ಕೆಡಿಸಿಕೊಂಡಿದ್ದೀರಿ? ಎಂಥೆಂಥದೋ ಎದುರಿಸಿದ್ದೀರಿ? ಆಯ್ತಪ್ಪ, ಒಂದೊಮ್ಮೆ ತಪ್ಪೇ ಆಯ್ತು ಅಂತ ಇಟ್ಕೊಳ್ಳಿ ತಪ್ಪೇ ಮಾಡದಿದ್ದವ ಮನುಷ್ಯನೇನ್ರೀ? ಅಂದರು. ಮೀರಾ ಮಧ್ಯೆ ಬಂದು ಆ ವಿಷಯದಲ್ಲಿ ಏನೊ ಹೇಳಿದಳು. ಅದಕ್ಕೆ ತೇಜಸ್ವಿ, 'ಈ ವಿಷಯದಲ್ಲಿ ಮೀರಾ ಅವರ attitude ಸರಿಯಾಗಿದೆ ಅನಿಸ್ತದೆ. ಮೀರಾ spontaneous ಆಗಿ ನಡೆದುಕೊಳ್ಳುತ್ತಾರೆ. ಹ್ಯಾಪ್ಮೋರೆ ಹಾಕಿಕೊಂಡಿದ್ದೊ, philosophical mood ನಲ್ಲಿದ್ದದ್ದೊ ನೋಡಿಯೇ ಇಲ್ಲ ಕಣ್ರೀ. It is very healthy, you see. Accept life and face it as it is and as it comes. ಮೀರಾ. ನೀವೇ ಸರಿ ಕಣ್ರೀ' ಅಂದರು.
 
ಮೀರಾ ಗಂಗೋತ್ರಿ ಶಾಲೆಯಲ್ಲಿ ಶಿಕ್ಷಕಿಯಾದ ಮೇಲೆ ತೇಜಸ್ವಿ, ರಾಜೇಶ್ವರಿ ಅವರು, ತೀರಿಹೋದ ನಮ್ಮ ಮಗಳು ಪ್ರೀತಿಯದೇ ವಯಸ್ಸಿನ ಅವರ ಹಿರಿಯ ಮಗಳು ಸುಸ್ಮಿತಾಳನ್ನು ನಮ್ಮ ಮನೆಯಲ್ಲಿ ಓದಲು ಬಿಟ್ಟರು. ನನ್ನ ಮತ್ತು ಮೀರಾಳ ಮೇಲಿನ ವಿಶ್ವಾಸ ರಾಜೇಶ್ವರಿ ತೇಜಸ್ವಿ ಇಬ್ಬರಿಗೂ ಎಷ್ಟಿತ್ತು ಎಂಬುದು ಸಹ ಅದರಿಂದ ಸುಸ್ಪಷ್ಟವಾಗಿತ್ತು. ಜೀವನವನ್ನು ಎದುರಿಸುವ ಮೀರಾಳ ಮನೋಭಾವದ ಬಗ್ಗೆ ತೇಜಸ್ವಿ ಆ ದಿನ ಆಡಿದ್ದ ಮಾತುಗಳನ್ನು ಆಗ ನಾನು, ಮೀರಾ ಕೃತಜ್ಞತೆಯಿಂದ ನೆನೆಸಿಕೊಂಡಿದ್ದೆವು. ಯಾವುದೋ ಅಷ್ಟೇನೂ ಮಹತ್ತದ್ದಲ್ಲದ ಮಾತು ಪ್ರಸ್ತಾಪಕ್ಕೆ ಬಂದಾಗ ತೇಜಸ್ವಿ ಆಡಿದ್ದ ಆ ಮಾತುಗಳು ಮತ್ತೆ ಮತ್ತೆ ಈಗ ನೆನಪಾಗುತ್ತಿವೆ.
 
ಸುಸ್ಮಿತಾ ನಮ್ಮ ಮನೆಯಲ್ಲಿದ್ದು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಒಮ್ಮೆ ತೇಜಸ್ವಿ, ರಾಜೇಶ್ವರಿ, ಅವರ ಮಕ್ಕಳು, ನಾನು ನನ್ನ ಹೆಂಡತಿ ಮೀರಾ, ಮಗಳು ಕೀರ್ತಿ ಗೋವಾಕ್ಕೆ ಹೋಗಿದ್ದೆವು. ನಾವು ಹೋಗಿದ್ದೆವು ಎಂಬುದು ಸರಿಯಲ್ಲ. ತೇಜಸ್ವಿ, ರಾಜೇಶ್ವರಿ ನಮ್ಮನ್ನು ಅವರ ಜೊತೆಗೆ ಕರೆದುಕೊಂಡು ಹೋಗಿದ್ದರು. ಸುಸ್ಮಿತಾ ನಮ್ಮ ಮನೆಯಲ್ಲಿ ಇದ್ದಷ್ಟೂ ಕಾಲ ತೇಜಸ್ವಿ, ರಾಜೇಶ್ವರಿ ಇಬ್ಬರೂ ಯಾರಿಗೂ ಮಾದರಿ ಎಂಬಂಥ ದೊಡ್ಡತನದಲ್ಲಿ ನಮ್ಮ ಮೇಲೆ ಪೂರ್ಣ ನಂಬಿಕೆ ಇಟ್ಟು ನಡೆದುಕೊಂಡಿದ್ದರು. ಅದು ನಮ್ಮ ಜೀವನದಲ್ಲಿ ನಾವು ಪಡೆದ ಅಮೂಲ್ಯ `ಶೀಲ ಶಿಫಾರಸು ಪತ್ರ' character certificate - ಎಂಬಂತ್ತಿತ್ತು.
 
ಮೈಸೂರಿನಿಂದ ರಾತ್ರಿ ಬಸ್ಸು ಗುರುಮೂರ್ತಿ ಟ್ರಾವಲ್ಸ್ನಲ್ಲಿ ಹೊರಟು ನಾವು ಶಿವಮೊಗ್ಗದಲ್ಲಿ ಇಳಿಯುತ್ತಿದ್ದಂತೆ ಬೆಳಗಿನ ನಾಲ್ಕು ಘಂಟೆಯ ರಾತ್ರಿಯಲ್ಲಿ ತೇಜಸ್ವಿ ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದರು. ಅವರ ಸೋದರಮಾವ ಶಿವಮೊಗ್ಗೆಯ ಬಲು ಪ್ರತಿಷ್ಠಿತರಾಗಿದ್ದ ದೇವಂಗಿ ರತ್ನಾಕರ ಅವರ ಮನೆಗೆ ಕರೆದುಕೊಂಡು ಹೋದರು. ಆ ಇಳಿ-ರಾತ್ರಿಯಲ್ಲಿ ನಾವು ಇದ್ದಷ್ಟೇ ಹೊತ್ತಿನಲ್ಲಿ ನಮ್ಮ ಸ್ನಾನಾದಿಗಳಿಗೆಲ್ಲ ರತ್ನಾಕರ ಅವರು ವಿಶೇಷ ಲಕ್ಷ್ಯ ವಹಿಸಿದ ರೀತಿ, ಆತಿಥ್ಯ ನೀಡಿದ ರೀತಿ ಎಂದೂ ಮರೆಯುವಂಥದಲ್ಲ. ಹಂಡೆ ಒಲೆಗೆ ಅವರೇ ಸ್ವತಃ ಸೌದೆ ದೂಡಿ ಬೆಂಕಿ ಮಾಡಿ ನೀರು ಕಾಯಿಸಿದ್ದರು, ಸ್ನಾನಕ್ಕೆ ನೀರನ್ನು ಬೆರೆಸಿಕೊಟ್ಟದ್ದು ಎಲ್ಲಾ ನೆನಪಾದರೆ ಕೃತಜ್ಞತೆ, ಗೌರವ ಭಾವ ಮನಸ್ಸನ್ನು ತುಂಬುತ್ತದೆ.
ಬೆಳಿಗ್ಗೆ ಸೂರ್ಯೋದಯದ ಮೊದಲೇ ತೇಜಸ್ವಿಯವರು ಅವರ ಕಾರಿನಲ್ಲಿ ನಮ್ಮನ್ನು ಕರೆದುಕೊಂಡು ಹೊರಟರು. ಸಾಗರದ ಕಡೆ ಕಾರು ಚಲಿಸುತ್ತಿದ್ದಾಗ ಬೆಳಗಾಗಿ ಬೆಳಕು ಹರಿಯುತ್ತಿದ್ದಂತೆ ಚೋರೆಹಕ್ಕಿಗಳು (ಹೊರಸನ ಹಕ್ಕಿಗಳು) ಗುಂಪು ಗುಂಪಾಗಿ ಟಾರು ರಸ್ತೆಯ ಮೇಲೆ ಕುಳಿತಿರುತ್ತಿದ್ದವು. ಕಾರು ಹತ್ತಿರ ಬರುವವರೆಗೆ ಕುಳಿತಿದ್ದು ಒಮ್ಮೆಲೇ ಹಾರಿಹೋಗುತ್ತಿದ್ದವು. ಈ ಆಟ ನೋಡುವುದಕ್ಕೆ ಚೆನ್ನಾಗಿತ್ತು. `ನೋಡ್ರೀ, ಪ್ರಕೃತಿ ಚಮತ್ಕಾರ. ಕಾರು ಇಷ್ಟು ವೇಗದಲ್ಲಿ ಬರುತ್ತಿದ್ದರೂ ಕೂತಿದ್ದು ಹತ್ತಿರಕ್ಕೆ ಬಂದ ಮೇಲೆ ಒಮ್ಮೆಲೇ ಹಾರಿ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳುತ್ತಾವಲ್ರೀ' ಎಂದು ಪಕ್ಕದಲ್ಲಿ ಕೂತಿದ್ದ ನಾನು ಉದ್ಗಾರ ತೆಗೆಯುತ್ತ ಹೋಗುತ್ತಿದ್ದೆ.
 
ತೇಜಸ್ವಿ ಎಪ್ಪತ್ತೊ ಎಂಬತ್ತೊ ಎಷ್ಟೊ ಕಿ.ಮೀ. ವೇಗದಿಂದ ಹೋಗುತ್ತಿದ್ದವರು ಒಂದಷ್ಟು ದೂರದಲ್ಲಿ ಚೋರೆಹಕ್ಕಿಗಳ ಗುಂಪು ಕಂಡೊಡನೆ ಇದ್ದಕ್ಕಿದ್ದಂತೆ ಕಾರಿನ ವೇಗವನ್ನು ಹೆಚ್ಚಿಸಿದರು. ತೊಂಬತ್ತೊ ನೂರೊ ಕಿ.ಮೀಟರ್ಗಿಂತ ಹೆಚ್ಚು ವೇಗದಲ್ಲಿ ಇತ್ತೇನೊ! ಹಕ್ಕಿಗಳ ಗುಂಪು ತಪ್ಪಿಸಿಕೊಳ್ಳಲು ಭರ್ ಅಂತ ಹಾರಿದವು. ಆ ವೇಗದಲ್ಲಿ ತಕ್ಷಣ ನಿಲ್ಲಿಸದೆ ಒಂದಷ್ಟು ದೂರ ಹೋದವರು, ವೇಗ ಕಡಿಮೆ ಮಾಡಿ, ಹಿಂದಕ್ಕೆ ಕಾರನ್ನು ಭರ್ರನೆ ತಂದು ಹಕ್ಕಿಗಳ ಗುಂಪು ಹಾರಿದ್ದಲ್ಲಿ ತಂದು ನಿಲ್ಲಿಸಿದರು ಇಳಿದರು. ನಮಗೆ ತೇಜಸ್ವಿಯ ಈ ಚಾಲನಾವೈಖರಿ ವಿಚಿತ್ರವಾಗಿ ಕಾಣಿಸಿತು. "ನಾಯಕರೆ, ಇಳೀರಿ ಕೆಳಗೆ ಏನೊ ತೋರಿಸ್ತೇನೆ'' ಅಂದರು. ಇಳಿದೆ. ನೋಡುತ್ತೇನೆ: ಒಂದು ಹಕ್ಕಿ ಕಾರಿನ ಚಕ್ರಕ್ಕೆ ಸಿಕ್ಕಿ ಅಪ್ಪಚ್ಚಿಯಾಗಿ ಹೋಗಿ ಟಾರು ರಸ್ತೆಗೆ ಮೆತ್ತಿಕೊಂಡಂತೆ ಆಗಿ ಬಿಟ್ಟಿತ್ತು. ಒಂದು ಮಿತಿಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಕಾರು ಬಂದರೆ ಚೋರೆ ಹಕ್ಕಿಯಿಂದ ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ. ಅದನ್ನು ನೋಡೇ ಬಿಡೋಣ ಎಂದು ಇದ್ದಕ್ಕಿದ್ದಂತೆ ಕಾರಿನ ವೇಗ ಹೆಚ್ಚಿಸಿದೆ ಕಣ್ರೀ. ಪಾಪ, ನೋಡಿ ಸತ್ತೇ ಹೋಯ್ತು ಅಂದರು.
 
ಕೆಲವು ವರ್ಷ ತೇಜಸ್ವಿ ಅವರಿಗೆ ಮೀನು ಹಿಡಿಯುವುದರಲ್ಲಿ ಎಲ್ಲಿಲ್ಲದ ಉತ್ಸಾಹ ಇತ್ತು. ಗೋವಾಕ್ಕೆ ನಾವು ಹೋದ ಸಂದರ್ಭದಲ್ಲಿ sophisticated ಗಾಳದ ಕೋಲುಗಳನ್ನು, ಬಲೆಗಳನ್ನು ತೇಜಸ್ವಿ ಕಾರವಾರದಲ್ಲಿ, ಗೋವಾದಲ್ಲಿ ಹುಡುಕಿಕೊಂಡು ಎಲ್ಲೆಲ್ಲೊ ಅಲೆದದ್ದು ನೆನಪಿಗೆ ಬರುತ್ತಿದೆ. ಬೇರೆ ಸಂದರ್ಭದಲ್ಲಿ ರಘು ಜೊತೆಯಲ್ಲಿ ನಮ್ಮೂರು ಅಂಕೋಲೆಗೆ ಬಂದಿದ್ದರು. ಗಂಗಾವಳಿ ನದಿ ಸಮುದ್ರ ಸೇರುವ ಜಾಗದಲ್ಲಿ, ಬೇಲೇಕೇರಿಯ ಸಮುದ್ರದ ಬೇಲೆಗೆ ಹತ್ತಿರದಲ್ಲೇ ಇರುವ ಬಂಡೆಯೊಂದರ ಮೇಲೆ ಋಷಿ, ಮುನಿಗಳ ಏಕಾಗ್ರತೆಯಲ್ಲಿ ತೇಜಸ್ವಿ ಮೀನು ಹಿಡಿಯಲು ಗಾಳ ಹಾಕಿ ಕುಳಿತು ಘಂಟೆಗಟ್ಟಲೆ ಲೋಕದ ಪರಿವೆ ಇಲ್ಲದವರಂತೆ ಕುಳಿತಿದ್ದ ದೃಶ್ಯಗಳು ಕಣ್ಣುಮುಂದೆ ಬರುತ್ತಿವೆ.
ಒಂದು ಸಲ ಮೈಸೂರಿನ ಲಿಂಗಾಂಬುಧಿ ಕೆರೆಯಲ್ಲಿ ಮೀನು ಹಿಡಿಯಲು ತೇಜಸ್ವಿ ಹೊರಟರು. ಅವರ ಜೊತೆ ರಾಮದಾಸ್, ನಾನು ಮತ್ತು ತೇಜಸ್ವಿಯವರ ಸ್ನೇಹಿತರು ಡಾ.ಶಾಮಸುಂದರ್ ಇದ್ದೆವು. ಆ ಕೆರೆಯ ದಡದ ಮೇಲೆ ಚಿಕ್ಕಗೂಡಿನಂಥ ಗುಡಿಸಲಲ್ಲಿ ಡೆನ್ಮಾರ್ಕ್ ನವನೊಬ್ಬನಿದ್ದ. ಅವನೊ ಮೀನು ಹಿಡಿಯುವಾಟದ ಮರುಳ. ಅವನು ಈ ದೇಶದವಳೊಬ್ಬಳನ್ನು ಮದುವೆಯಾಗಿದ್ದ. ಅವಳೊಂದಿಗೆ ಸಂಸಾರ ಮಾಡಿಕೊಂಡು ಇಲ್ಲೇ ಇದ್ದ. ಅವನ ಹೆಂಡತಿ ಆಗ ತುಂಬು ಬಸುರಿ. ತೇಜಸ್ವಿಗೆ ಆ ಮಾರಾಯನ ಪರಿಚಯವೊ ಸ್ನೇಹವೊ ಹೇಗೆ ಆಗಿತ್ತೊ, ಯಾವಾಗ ಆಗಿತ್ತೊ? ಕೆರೆ ಹತ್ತಿರ ಹೋದಾಗ ಆ ಮನುಷ್ಯ ಅಲ್ಲೇ ಇದ್ದ. ತುಂಬು ಅಂದರೆ ಇಂದೊ ನಾಳೆಯೊ ಹೆರಿಗೆ ಆಗಬಹುದು ಎಂಬಂಥ ಬಸುರಿ ಹೆಂಡತಿಯನ್ನು ಬಿಟ್ಟು ಅವನು ಎಲ್ಲೊ ಹೋಗುವ ಹಾಗೆ ಇರಲಿಲ್ಲ. ತೇಜಸ್ವಿಗೆ ಬಲೆ ಕೊಟ್ಟ. ಆ ಕೆರೆಯ ಮೀನುಗಳ ಕಾಂಟ್ರಾಕ್ಟ್ ಅವನೇ ಹಿಡಿದಿದ್ದನೊ ಏನೊ! ತೇಜಸ್ವಿ, ರಾಮದಾಸ್ ಅಂಡರ್ವೆರ್ ಚಡ್ಡಿಯಲ್ಲಿ ಕೆರೆಗೆ ಇಳಿದು ಬಲೆ ಹಾಕಿ ಮೀನು ಹಿಡಿಯುತ್ತಿದ್ದರೆ, ನಾನು ಡಾ.ಶಾಮಸುಂದರ್ ದಡದ ಮೇಲೆಯೇ ನಿಂತು ನೋಡುತ್ತಿದ್ದೆವು.
ತೇಜಸ್ವಿ, ರಾಮದಾಸ್ ಬಲೆ ಹಾಕಿ ಹಿಡಿದ ಮೀನುಗಳಿಗೆ ಬಿಳಿಬಿಳೀ ಹೊಳೆಯುತ್ತಿದ ಹಿಣಿಜುಗಳಿದ್ದುವು. ನೋಡುವುದೇ ಕಣ್ಣಿಗೊಂದು ಹಬ್ಬ ಎಂಬಂತಿದ್ದವು. ಅಂಗೈ ಅಗಲದ ಮಾಂಸಲ ಮೀನುಗಳು. ನಮ್ಮ ಮನೆಗೆ ತಂದೆವು. ಮೀರಾ ಮೀನು ಅಡುಗೆಯಲ್ಲಿ ಪರಿಣಿತಳು. ರಾಮದಾಸ್ ಅವರ ಅಮ್ಮ ಮಂಜಮ್ಮನವರನ್ನು ಮೀರಾ ಸಹಾಯಕ್ಕೆ ಕರೆಸಿಕೊಂಡಳು. ಇಂಥದೇನೊ ಅಂದರೆ ಅಮ್ಮನಿಗೂ ಎಲ್ಲಿಲ್ಲದ ಹುರುಪು, ಉತ್ಸಾಹ. ಅಮ್ಮ ಮೀನುಗಳನ್ನು ಸ್ವಚ್ಛ ಮಾಡಿಕೊಟ್ಟರು. ಮೀರಾ ಮಸಾಲೆ ಹಾಕುವ, ಅರೆಯುವ ಕೆಲಸದಲ್ಲಿ ತೊಡಗಿದಳು. ಬೇಗ ಬೇಗ ಅಡಿಗೆ ತಯಾರಿಸಿದರು. ಡಾ.ಶಾಮಸುಂದರ ಮೀನುಗಳನ್ನು ಹಿಡಿದಾದ ಮೇಲೆ ನಿಲ್ಲದೆ ಹೊರಟು ಹೋಗಿದ್ದರು.
ಇನ್ನೇನು ಅಡುಗೆ ಮುಗಿಯುತ್ತಿದೆ ಎಂಬ ಹೊತ್ತಿಗೆ, ನಮ್ಮೊಡನೆ ಹರಟೆ, ನಗುವಿನ ಅಬ್ಬರದಲ್ಲಿ ಮುಳುಗಿದ್ದ ತೇಜಸ್ವಿಯವರ ತಲೆಗೆ ಏನೋ ಹೊಳೆಯಿತು. ಅವರ ಮೈಸೂರು ಮನೆ `ಉದಯರವಿ'ಗೆ ಹೊರಡುತ್ತೇನೆ ಎಂದರು. ಇನ್ನೇನು ಊಟ ಮಾಡುವ ಹೊತ್ತಾಯಿತು. ಊಟ ಮಾಡಿಕೊಂಡು ಹೋಗಿರಿ ಎಂದರೂ ಕೇಳದೆ, `ಮಾರಾಯರೆ ಈ ಹೊತ್ತೇ ಮಾಡಿ ಮುಗಿಸಬೇಕಾದ ಅರ್ಜೆಂಟ್ ಕೆಲಸ ಒಂದು ಮುಗಿಸಲೇ ಬೇಕು. ಮರೆತೇ ಬಿಟ್ಟಿದ್ದೆ. ಊಟಗೀಟ ಅಂತ ನಿಂತರೆ ನನ್ನ ಕಥೆ ಮುಗಿದೇ ಹೋಯ್ತು' ಎಂದು ಹೇಳಿ ಹೊರಟೇ ಬಿಟ್ಟರು. ಅಂಥ, ಬಾಯಲ್ಲಿ ನೀರೂರಿಸುವಂಥ ಮೀನಿನ ಅಡುಗೆ. ಅವರೇ ಇಷ್ಟಪಟ್ಟು ಹಿಡಿದು ತಂದ ಮೀನಿನ ಅಡುಗೆ ಸಂಭ್ರಮಿಸಿ ಊಟ ಮಾಡಬಹುದಾದಂಥ ಅದರ ಅಡುಗೆಯ ಸಿದ್ಧತೆ ನಡೆದಿದ್ದಾಗ ಊಟ ಮಾಡುವುದು ಮುಖ್ಯವಲ್ಲ, ಅದೇ ದಿನ ಮಾಡಲೇಬೇಕೆಂದುಕೊಂಡಿದ್ದ ಕೆಲಸ ಮಾಡಿ ಮುಗಿಸುವುದು ಮುಖ್ಯ ಎಂದು ಹೇಳಿ ತೇಜಸ್ವಿ ಹೊರಟು ಹೋದರು. ಮನೆಯಲ್ಲಾದರೂ ಊಟ ಮಾಡಲೇಬೇಕಲ್ಲಾ ಅಂದರೂ ಕೇಳಿಸಿಕೊಳ್ಳಲಿಲ್ಲ. ಈ ಅದ್ಭುತ ಪ್ರತಿಭಾವಂತನ ಅಂಥ ವರ್ತನೆ ಒಂದು ಬಗೆಯ ವಿಕ್ಷಿಪ್ತತೆ ಎನ್ನಬೇಕೊ? ಪ್ರತಿಭಾ ವಿಲಾಸ ಎನ್ನಬೇಕೊ? ಅದರ ಸ್ವರೂಪ ಸೂಕ್ಷ್ಮ ಅವರಿಗೆ ಹತ್ತಿರದವರೆಂದುಕೊಂಡಿದ್ದವರಿಗೂ ಪೂರ್ತಿ ಅರ್ಥವಾಗದಂಥ ನಿಗೂಢವಾಗಿಯೇ ಕೊನೆಯವರೆಗೂ ಉಳಿದಿತ್ತು.
ಶ್ರೀ ರಾಮಾಯಣ ದರ್ಶನಂ'ದ ಹಸ್ತಪ್ರತಿ ಮುದ್ರಣಕ್ಕೆ ಸಿದ್ಧಪಡಿಸುವುದಕ್ಕೆಂದು ಹೋದ ಸಂದರ್ಭದಲ್ಲಿಯೇ ಒಮ್ಮೆ ತೇಜಸ್ವಿಯವರೊಂದಿಗೆ ಅವರ ತೋಟದ ಗೇಟಿನ ಕಡೆ ಹೋಗುತ್ತಿರುವಾಗ ನೋಡಿ, ಕಾಡುಹಂದಿ ನೆಲಕೆದರಿ ಹೋದ ಜಾಗ ಎಂದು ನನಗೆ ತೋರಿಸಿ, 'ಬಡ್ಡೀ ಮಗಂದು ಟೊಣೆಯ ಹಂದೀ ಕಣ್ರೀ. ಇಲ್ಲೇ ಎಲ್ಲೋ ಇದೆಯೊ, ಬಂದು ಉರುಳಾಡಿ ಹೊರಟು ಹೋಗಿದೆಯೊ! ಒಂದು ಕಾಲದಲ್ಲಿ ಕಾಡಹಂದಿ ಅಂದರೆ ಎಷ್ಟು ಕೆ.ಜಿ. ಮಾಂಸ ಎಂದಷ್ಟೇ ಕಣ್ಣಿಗೆ ಕಾಣಿಸ್ತಿತ್ತಲ್ರೀ; ಕೈಯಲ್ಲಿ ಕೋವಿ ಇದ್ದರೆ ಅದನ್ನು ಬಲಿ ಹಾಕಬೇಕು ಅಂತ ಕೈ ಕುಣೀತಿತ್ತು. ಮಾರಾಯ್ರಾ, ಕಾಡಿನ ಪ್ರಾಣಿಗಳನ್ನು ಅವುಗಳ natural ಪರಿಸರದಲ್ಲಿ ನೋಡುವುದೇ ಒಂದು beauty. Nature is the supreme judge. One should not violate its judgement, you see. (ನಿಸರ್ಗವೇ ಪರಮ ನ್ಯಾಯಾಧೀಶ. ನಾವು ಅದರ ತೀರ್ಮಾನವನ್ನು ಉಲ್ಲಂಘಿಸಬಾರದು ಕಣ್ರೀ). ಪರಿಸರದ ನಾಶ ಆಯ್ತು ಅಂದರೆ ಇನ್ನು ಯಾವುದೂ ಉಳಿಯುವುದಿಲ್ಲ. ಸರ್ವನಾಶವೇ ಗತಿ'. 'ಪರಿಸರದ ಕಥೆ' ಎಂಬ ಅನನ್ಯ ರೀತಿಯ ಕೃತಿ ಬರೆದ ತೇಜಸ್ವಿ ಒಂದಷ್ಟು ಹೊತ್ತು ಪರಿಸರ ಪಾವಿತ್ರ್ಯ ಉಳಿಸಬೇಕಾದ ಬಗ್ಗೆ ಮಾತನಾಡಿದರು.
 

ಹಗಲು ವೇಷ-ಅಷ್ಟು ಕಲೆ, ಒಂದಷ್ಟು ಪಾಡು(ಎಸ್. ರಂಗಧರ)

 
 

ಯಾರದೀ ಡೊಳ್ಳು?! 


ಎಸ್. ರಂಗಧರ

 
ಯಾಕೊ ನಮ್ಮ ಜನ ಈಗ ಗದ್ದಲವನ್ನೇ ಇಷ್ಟ ಪಡುವಂತೆ ಕಾಣುತ್ತದೆ. ಟಿ.ವಿ ಮಾದ್ಯಮಗಳಂತೂ ಗದ್ದಲವೆಬ್ಬಿಸುವ ಹುಚ್ಚನ್ನು ತುಂಬುತ್ತಿರುವಂತೆ ತೋರುತ್ತದೆ. ಈ ಹೊತ್ತಿನ ದೊಡ್ಡಗದ್ದಲ ಅಂದರೆ ನಮ್ಮ ವಿಧಾನ ಸಭೆ ಮತ್ತು ವಿಧಾನ ಪರಿಷತ್ತು .ಅಲ್ಲೆಲ್ಲ ಮಾತಿನ ಯುದ್ದ. ಹತ್ತಲಿಲ್ಲ ಹರಿಯಲಿಲ್ಲ ಮಾತು, ಮಾತು, ಇಡೀ ಕರ್ನಾಟಕವೇ ತೂತು ಬಿದ್ದು ಹೋದ ಹಾಗೆ. ಇವರ ಮಾತು ಬರಿ ಮಾತು, ಬರಡು. ಈ ನಮ್ಮ ರಾಜಕಾರಣಿಗಳೆ ಟೊಳ್ಳು ಬಿದ್ದಿರುವಾಗ ಅವರಿಂದ ಗಟ್ಟಿಯಾದುದು ಹೊರಬರುತ್ತದೆ ಎಂದು ಯಾವ ಮೂರ್ಖ ತಾನೆ ನಿರೀಕ್ಷಿಸುತ್ತಾನೆ. ಇರಲಿ ಬಿಡಿ.
ಹೊರಗಡೆ ನೋಡಿ. ಯಾವುದೊ ಎರಡು ಗುಂಪು ಹೊಡೆದಾಡುತ್ತಿದೆ ಎನ್ನಿ. ಹೊಡೆದಾಡಿ, ಬೈದಾಡಿ ಸುಸ್ತಾಗಿರಬಹುದು. ಟಿ.ವಿ ಯವರು ಬಂದು ಅವರ ಮೈ ಮುಖದ ಮೇಲೆ ಬೆಳಕುಬಿಟ್ಟರು ಎನ್ನಿ ! ಇನ್ನಿಲ್ಲದ ಪೌರುಷ ಬಂದು ಬಿಡುತ್ತದೆ. ಯಾವ ಯಾವ ಮಗ್ಗುಲಿನಿಂದ ಜಜ್ಜಾಡಬೇಕೊ, ಯಾವ ತಿರುವಿನಿಂದ ಬೈದಾಡಬೇಕೊ ಅದನ್ನೆಲ್ಲ ಮಾಡಿ ತೋರಿಸುತ್ತಾರೆ. ಸಹಜವಾದುದೂ ತೋರಿಕೆಯಾಗಿ ಬಿಡುತ್ತದೆ. ಅಂತೂ ಗದ್ದಲ ಬೇಕು.
ಯಾಕೆ ಬೇಕು ಅಂತ ಕೇಳಿದರೆ?? ಕಾಣಿಸಿಕೊಳ್ಳಬೇಕು, ಜನರ ಬಾಯಿಗೆ ಬರಬೇಕು.
 
ಪ್ರಯೋಜನ ಏನು?? ಇವನು, ಇವಳು ಅಥವ ಇವರು ಇದ್ದಾರೆ ಎಂದು ಜನರಿಗೆ ಗೊತ್ತಾಗ ಬೇಕು. ಆಮೇಲೆ ಅವರನ್ನು ಕೊಳ್ಳುವುದೋ ಮಾರುವುದೊ ಮಾಡುವುದು ಸುಲಭ. ಸಮಾಜದ ಗತಿ?? ದೇವರೇ ಗತಿ!
 
ನಮ್ಮ ಗ್ರಾಮೀಣ ಸಮಾಜದಲ್ಲಿ ಗದ್ದಲ ಇತ್ತು, ಇದೆ. ಅದು ತೋರಿಸಿಕೊಳ್ಳವುದಕ್ಕಾಗಿಯೊ, ಜನರನ್ನು ಮಾರುವುದಕ್ಕಾಗಿಯೋ ಅಲ್ಲ, ಜನರನ್ನು ಬದುಕಿಸುವುದಕ್ಕಾಗಿ. ನೀವೆಲ್ಲ ಡೊಳ್ಳು ಕುಣಿತವನ್ನು ಕೇಳಿದ್ದೀರಿ, ನೋಡಿದ್ದೀರಿ. ಇದು ಕರ್ನಾಟಕದ ಗ್ರಾಮೀಣ ಕಲೆಗಳಲ್ಲಿಯ ಒಂದು ಅಬ್ಬರದ ಕುಣಿತ, ಅಷ್ಟೇ ಸೆಳೆತವಿರುವ ನೃತ್ಯ. ನಮ್ಮ ಡೊಳ್ಳುಕುಣಿತದ ತಂಡ ಭಾರತದ ಗಣರಾಜ್ಯೋತ್ಸವ ಪರೇಡ್ನಲ್ಲಿ ಪ್ರತಿ ವರ್ಷ ಭಾಗವಹಿಸುತ್ತದೆ. ಒಂದೆರಡು ಸಾರಿ ಪ್ರಥಮ ಬಹುಮಾನವನ್ನು ಪಡೆದಿದೆ. ಅದರ ಗದ್ದಲಕ್ಕೆ ಪ್ರೇಕ್ಷಕ ಹುಚ್ಚೆದ್ದು ಪ್ರತಿಕ್ರಿಯಿಸುತ್ತಾನೆ. ತಣ್ಣನೆಯ ಮನುಷ್ಯ ಕೂಡ ಮೈ ತುಂಬ ಬಿಸಿಯೇರಿಸಿಕೊಳ್ಳುತ್ತಾನೆ. ಅನೇಕರು ಅದರ ಕಾವಿಗಾಗಿ ಕಾದು ಕೂತಿರುತ್ತಾನೆ. ಯುವಕರನ್ನು ಕೇಳಲೇ ಬೇಡಿ. ಅವರಿಗೆ ಈ ಕಲೆ ಅವರ ಚೈತ್ಯನ್ಯವನ್ನೆಲ್ಲಾ ಉಕ್ಕಿಸಿ ಹರಿಸಲು ಇಂಬು ಕೊಡುತ್ತದೆ. ಯುವತಿಯರು ಈ ಕಲೆಯ ಗಂಡುತನವನ್ನು ನೋಡಿ ನವಗಂಡು ಬಂತೆಂದು ಸಂಭ್ರಮಿಸುತ್ತಾರೆ.

ಒಂದು ಸಾರಿ ಏನಾಯಿತಂತೆ ಗೊತ್ತಾ? ಕರ್ನಾಟಕದ ಡೊಳ್ಳು ಕುಣಿತ ರಷ್ಯಾದೇಶಕ್ಕೆ ಹೋಗಿತ್ತಂತೆ. ಅದು ಭಾರತ-ರಷ್ಯ ಸಾಂಸ್ಕೃತಿಕ ವಿನಿಮಯದ ಕಾರ್ಯಯೊಜನೆ. ಈ ತಂಡ ರಷ್ಯಾದ ಮುಖ್ಯ ನಗರಗಳಲ್ಲಿ ಪ್ರದರ್ಶನ ಕೊಡುತ್ತಿತ್ತಂತೆ. ಚಪ್ಪಾಳೆಯೋ ಚಪ್ಪಾಳೆ. ಇಂಡಿಯಾದವರು ಸ್ವಲ್ಪ ಶೆಡ್ಡು ಜನ! ಎಂಥ ಪ್ರದರ್ಶನ ಕೊಟ್ಟರೂ ಒಂದು ದೊಡ್ಡ ಚಪ್ಪಾಳೆ ಕೊಡುವುದಿಲ್ಲ. ವಾತಾಪಿ ವಂಶಸ್ತರು. ಬಂದುದನ್ನೆಲ್ಲ ಹೊಟ್ಟೆಗೆ ಹಾಕಿ ಕರಗಿಸಿಕೊಂಡು, ಹೊರಗೆ ವಿಸರ್ಜಿಸಿ ಬಿಡುತ್ತಾರೆ. ರಷ್ಯದ ಜನ ಹಾಗಲ್ಲ. ಒಂದು ಚಪ್ಪಾಳೆ ಹಲವು ಸ್ಪಂದನಗಳನ್ನು ಏಳಿಸುತ್ತದಂತೆ ಅವರ ಮನಸ್ಸಿನಲ್ಲಿ. ನಮ್ಮಲ್ಲಿ ಯುವಕರು ಕಿವಿ ತೂತಾಗುವಂತೆ ಶಿಳ್ಳೆ ಹೊಡೆಯುತ್ತಾರೆ. ನಮ್ಮ ಕಲಾವಿದರು ಅದನ್ನು ಪೋಲಿ ಹುಡುಗರ ಪುಂಡಾಟ ಎಂದು ತಿಳಿದುಕೊಳ್ಳುತ್ತಾರೆ. ಅದನ್ನು ಹಾಗಂದುಕೊಳ್ಳಬೇಕಿಲ್ಲ.
 
ಸರಿ. ನಮ್ಮ ಡೊಳ್ಳು ಕುಣಿತದವರಿಗೆ ರಷ್ಯಾದಲ್ಲಿ ಏನಾಯಿತು ಅಂತೀರ? ಒಂದು ನಗರದಲ್ಲಿ ಡೊಳ್ಳು ಕುಣಿತ ನಡೆಯುತ್ತಿತ್ತು. ಡೊಳ್ಳಿನ ಲಯ, ಕಿವಿ ಮನಸ್ಸನ್ನು ತುಂಬುವ ಗಂಡು ಸದ್ದು ಹಂತ ಹಂತವಾಗಿ, ಏರಿ ಏರಿ ಜನಗಳ ಮನಸ್ಸಿನ ಮೇಲೆ ಏರಿ ಹೋಗುತ್ತಿತ್ತು. ದೊಡ್ಡದಾದ ಹತ್ತು-ಹದಿನೈದು ಡೊಳ್ಳುಗಳು, ಆ ಡೊಳ್ಳುಗಳನ್ನು ಹೊತ್ತ ಗಟ್ಟಿಮುಟ್ಟಾದ ಯುವಕರು, ಹಳ್ಳಿಯ ಮದ್ಯವಯಸ್ಕರು. ಡೊಳ್ಳಿನ ಎರಡೂ ಕಡೆಯ ಚರ್ಮದ ಮೇಲೆ; ಒಂದು ಕಡೆಯಿಂದ ಕೋಲಿನ ಹೊಡೆತ, ಇನ್ನೊದು ಕಡೆಯಿಂದ ಕೈನ ಹೊಡೆತ. ನಿಧಾನ-ಮಧ್ಯಮ-ತಾರಕ ಲಯ, ಕುಣಿತ ಕೂಡ. ಮೈನ ಒನಪು, ಎದೆಯ ಮೋಡಿ, ಮುಖದ ಸೆಳೆತ. ಕಲಾವಿದರ ಸೊಂಟಕ್ಕೆ ಕರಿಕಂಬಳಿ ಉಡುಗೆ, ದೇಹಕ್ಕೆ ಹುಲಿ ಚರ್ಮದ ಬಟ್ಟೆಯ ಅಲಂಕಾರ. ಕಲಾವಿದನ ಕಾಲು ಕಂಬ, ದೇಹ ಗುಂಬ, ತಲೆ ಶಿಖರ, ಹೆಜ್ಜೆ ಗಂಭೀರ, ಗೆಜ್ಜೆ ಹೆಜ್ಜೆನ ದ್ವನಿ. ಹಲವು ವರಸೆಗಳು, ಕೆಲವು ಸಾಮಾನುಗಳು; ನೋಡಿದರೆ ಅದ್ಭುತ. ನಾವು ಯಾಕೆ ಅದರೊಳಗಡೆ ಸೇರಿ ಯುವಕರಾಗಬಾರದು ಎಂಬ ಹುಮ್ಮಸ್ಸನ್ನು ಮುದುಕರಲ್ಲೂ ಕೆರಳಿಸುವ ಕ್ರಿಯೆ . ಅರ್ಧ- ಒಂದು ಗಂಟೆಯವರೆಗೆ ಯಾವ ಹೊರಗಿನ ಜಗತ್ತು ಕೂಡ ಹೊರಗೇ ಉಳಿಯುತ್ತದೆ. ಅದರದೇ ಜಗತ್ತು ಸೃಷ್ಟಿಯಾಗುತ್ತದೆ. ರಷ್ಯಾದ ಅವತ್ತಿನ ಪ್ರದರ್ಶನದಲ್ಲೂ ಇದೇ ಆಗಿತ್ತು.
 
ಕುಣಿತ ನಿಂತು ಇನ್ನೇನು ತಂಡ ವೇದಿಕೆಯಿಂದ ಕೆಳಗೆ ಇಳಿಯಬೇಕು. ರಷ್ಯದ ಸುಂದರಿಯೊಬ್ಬಳು ಓಡಿ ಬಂದು ದಿಢೀರನೆ ವೇದಿಕೆ ಹತ್ತಿದಳು. ತಾನು ದೂರದಿಂದ ನೋಡಿ ಗುರುತಿಸಿದ್ದ ಒಬ್ಬ ಯುವಕನನ್ನು ಹಿಡಿದು ಕೊಂಡು ’ನನ್ನನ್ನು ಮದುವೆಯಾಗು’ ಎಂದಳು. ಆ ಕಲಾವಿದನಿಗೆ ಶಾಕ್!! ಅವನಿಗೆ ಅವಳ ಮಾತು ಅರ್ಥವಾಗುತ್ತಿಲ್ಲ, ಅಭಿನಯ ಆರ್ಥವಾಗುತ್ತಿದೆ. ಪ್ರೇಮಕ್ಕೆ ಯಾವ ಮಾತು? ತಕ್ಷಣವೇ ವೇದಿಕೆ ಹತ್ತಿದ ರಷ್ಯಾದ ಮಾರ್ಗದರ್ಶಕ ಅವಳ ಭಾವನೆಯನ್ನು ಕಲಾವಿದನಿಗೆ ತರ್ಜುಮೆ ಮಾಡಿ ಹೇಳಿದ . ಕಲಾವಿದನಿಗೆ ತಲ್ಲಣ. ಅವನಿಗೆ ಏನು ಹೇಳಲೂ ತೋಚುತ್ತಿಲ್ಲ. ತಾನು ತಂಡದಲ್ಲಿ ಒಬ್ಬನಷ್ಟೆ. ನನಗೆ ಗುರುಗಳಿದ್ದಾರೆ, ಮಾರ್ಗದರ್ಶಕರು ಇದ್ದಾರೆ. ನಾನು ಮದುವೆಯಾಗಿದ್ದೇನೆ. ಒಂದು ಮಗುವೂ ಇದೆ. ನನ್ನ ಹೆಂಡತಿಯನ್ನು ಬಿಡುವುದೆಂದರೆ ಉಂಟೆ. ನಮ್ಮದು ಭಾರತ. ಹೆಂಡತಿಯನ್ನು ಬಟ್ಟೆ ಬದಲಾಯಿಸುವಂತೆ ಬದಲಿಸಲು ಆಗುವುದಿಲ್ಲ...ಹೀಗೆ ಏನೇನೋ ಬಡಬಡಿಸಿದ. ಆ ಯುವತಿ ಕೇಳಲು ತಯಾರಿಲ್ಲ! ’ನಾನೂ ಒಬ್ಬಳು ಇರುತ್ತೇನೆ. ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತೇನೆ’ ಹಠ ಹಿಡಿದು ಕೂತಳು. ಅವನನ್ನು ವೇದಿಕೆಯಿಂದ ಕೆಳಗಿಳಿಯಲೂ ಬಿಡುತ್ತಿಲ್ಲ. ಸಂಘಟಕರಿಗೆ ಸಾಕೋ ಸಾಕಾಯಿತು. ಆ ಅರ್ಜೆಂಟ್ ದಾಂಪತ್ಯವನ್ನು ಬಿಡುಗಡೆಗೊಳಿಸಲು!
 

ಇಂಥದೇ ಪ್ರಭಾವ ಎಂದು ಕಾಣುತ್ತದೆ ಕರ್ನಾಟಕದಲ್ಲಿ ಯುವತಿಯರು, ಮದ್ಯವಯಸ್ಸಿನ ಮಹಿಳೆಯರು ಡೊಳ್ಳುಕುಣಿತವನ್ನು ಕಲಿಯಲು ಶುರುಮಾಡಿದ್ದಾರೆ. ಕೆಲವು ತಂಡಗಳೂ ಇವೆ. ಅದೇನು?! ಈ ಕಲೆ ಗಂಡಸರ ಕಲೆಯೇ ಆಗಬೇಕಾ ಎಂಬುದು ವಿದ್ಯಾವಂತ ಅಧುನಿಕ ಮಹಿಳೆಯರ ಪ್ರಶ್ನೆ. ಗಂಡಸರು ಹೆಣ್ಣು ಅಬಲೆ, ದುರ್ಬಲೆ ಅಂತ ಹೇಳಿ ನಮ್ಮನ್ನು ಬಲೆಗೆ ಹಾಕಿಕೊಂಡಿದ್ದಾರೆ. ಅವರ ಆ ಬಲೆಯಲ್ಲಿ ಸಿಕ್ಕಿ ನಾವು ಒದ್ದಾಡುತ್ತಿದ್ದೇವೆ. ಆ ಬಲೆಯನ್ನು ಹರಿಯ ಬೇಕೆಂದರೆ ಡೊಳ್ಳಿನ ಕುಣಿತ, ಡೊಳ್ಳಿನ ಶಬ್ದ, ನೃತ್ಯದ ರಭಸ, ದೇಹದ ಒಜಸ್ಸು ನಮಗೂ ಬರಲಿ. ನಾವೂ ಕುಣಿದು ತೋರೋಣ ಎಂಬ ಹುಮ್ಮಸ್ಸು ಇವರದ್ದು. ಇವರ ದಿಟ್ಟತನದ ಫಲವಾಗಿ ಈಗ ಕರ್ನಾಟಕದಲ್ಲಿ ಕೆಲವು ಹೆಣ್ಣುಮಕ್ಕಳ ತಂಡಗಳಿವೆ. ಕಾಲೇಜು ಹುಡುಗಿಯರು-ಹೈಸ್ಕೂಲ್ ಹುಡುಗಿಯರು ಡೊಳ್ಳು ಕಲಿಯುತ್ತಿದ್ದಾರೆ. ಯುವತಿಯರ ಸಂಘಗಳು ಡೊಳ್ಳುತಂಡ ರಚಿಸಿ ಕೊಂಡಿವೆ. ಕೆಲವು ಖಾಸಗಿ ಕಲಾ ಸಂಸ್ಥೆಗಳೂ ತಮ್ಮದೇ ಡೊಳ್ಳು ಕುಣಿತ ತಂಡಗಳನ್ನು ಹುಟ್ಟುಹಾಕಿವೆ. ಉದ್ಯಮಪತಿಗಳು, ಧಾರ್ಮಿಕ ಯಜಮಾನರುಗಳೂ ಸಾಂದರ್ಭಿಕವಾಗಿ ಡೊಳ್ಳುತಂಡಗಳನ್ನು ಪೋಷಿಸಿ ಪ್ರೋತ್ಸಾಹಿಸುತ್ತಿವೆ. ರಾಜಕಾರಣಿ ಬಕಾಸುರರು ಎಲ್ಲವನ್ನು ಬೆಳಸಿಕೊಳ್ಳುತ್ತಿದ್ದಾರೆ ತಮ್ಮ ಹೊಟ್ಟೆಯೆಂಬ ಡೊಳ್ಳಾಸುರನನ್ನು ಜನಗಳಿಗೆ ಪ್ರದರ್ಶಿಸಲು!

ಡೊಳ್ಳಾಸುರನನ್ನು ಕೊಂದ ಕಥೆಯೆ ಡೊಳ್ಳು ಮತ್ತು ಡೊಳ್ಳು ಕುಣಿತ ನೃತ್ಯದ ಹುಟ್ಟಿಗೆ ಕಾರಣ ಎಂದು ಡೊಳ್ಳು ಸಂಸ್ಕೃತಿ ಹೇಳುತ್ತದೆ. ಡೊಳ್ಳು ಮೂಲತಃ ಕುರುಬ ಜನಾಂಗದ ಸಾಂಸ್ಕ್ರತಿಕ ವಾದ್ಯ. ಅದರ ಕಥೆ ಹೀಗಿದೆ-ಹಿಂದೆ ಡೊಳ್ಳಾಸುರನೆಂಬ ರಾಕ್ಷಸ ಇದ್ದ. ಅವನು ಶಿವನನ್ನು ಕುರಿತು ಭಾರಿ ತಪಸ್ಸು ಮಾಡಿದ. ಶಿವ ಪ್ರತ್ಯಕ್ಷನಾಗಿ ಏನು ವರ ಬೇಕು ಕೇಳು ಎಂದ. ನೀನು ನನ್ನ ಹೊಟ್ಟೆಯಲ್ಲಿ ನೆಲಸಬೇಕು ಎಂದು ಡೊಳ್ಳಾಸುರ ಕೇಳಿಕೊಂಡ. ಶಿವ ಭಕ್ತರಿಗೆ ಯಾವತ್ತೂ ಇಲ್ಲ ಎನ್ನುವುದಿಲ್ಲವಲ್ಲಾ. ವಿಧಿಯಿಲ್ಲದೆ ಅವನು ಡೊಳ್ಳಾಸುರನ ಹೊಟ್ಟೆಸೇರಿದ. ಶಿವನಿಲ್ಲದ ಕೈಲಾಸದಲ್ಲಿ ಎಲ್ಲವೂ ಖಾಲಿ-ಲಾಸು. ಭಕ್ತಗಣಗಳ ಹೊಟ್ಟೆ ಖಾಲಿಯಾಯಿತು. ಎಲ್ಲರೂ ತಲ್ಲಣಿಸಿದರು. ಏನಾದರೂ ತರಲೆ ಮಾಡಲೇಬೇಕು, ಶಿವನನ್ನು ಹೊರಗೆ ತರಲೇಬೇಕು ಎಂದು ವಿಚಾರ ಮಾಡಿ ವಿಷ್ಣುವನ್ನು ಮೀಟ್ ಮಾಡಿದರು. ವಿಷ್ಣು ಮಹಾನ್ ಜಾಣ! ಏನೋ ಉಪಾಯ ಮಾಡಿದ. ಶಿವ ಡೊಳ್ಳಾಸುರನ ಹೊಟ್ಟೆಯನ್ನು ಸೀಳಿ ಹೊರಬರುವಂತೆ ಮಾಡಿದ. ಶಿವ ಡೊಳ್ಳಾಸುರನ ಹೊಟ್ಟೆಯಿಂದ ಕಣ್ಣು ಕೆಕ್ಕರಿಸುತ್ತಾ ಕೋಪದಲ್ಲಿ ಹೊರಗೆ ಬಂದ. ಅವನ ಭಕ್ತನನ್ನು ಸೀಳಿದ್ದು ಅವನಿಗೆ ಹೇಗೆ ತಾನೆ ಸಹಿಸಲು ಸಾಧ್ಯ? ಎಲ್ಲರಿಗೂ ಭಯವಾಯಿತು. ಮತ್ತೆ ವಿಷ್ಣುವಿನ ಸಹಾಯ ಕೇಳಿದರು. ಅದಕ್ಕೂ ವಿಷ್ಣುವೇ ಒಂದು ಪ್ಲಾನ್ ಮಾಡಿದ. ಸತ್ತ ಡೊಳ್ಳಾಸುರನ ಹೊಟ್ಟೆಯನ್ನೇ ಡೊಳ್ಳು ಮಾಡಲಾಯಿತು. ಅವನ ಮೂಳೆಗಳನ್ನು ಮುರಿದು ಡೊಳ್ಳು ಬಡಿಯುವ ಕೋಲುಗಳನ್ನು ತಯಾರಿಸಲಾಯಿತು. ಶಿವ ಭಕ್ತರು ಆ ಡೊಳ್ಳನ್ನು ತಾಳಬದ್ದವಾಗಿ ಬಡಿಯುತ್ತಾ ಹೋದರು. ನಾಟ್ಯಪ್ರಿಯನಾದ ಶಿವ ನರ್ತಿಸುತ್ತಾ ಹೋದನು. ಹೀಗೆ ಡೊಳ್ಳುಪುರಾಣ ಹುಟ್ಟಿಕೊಂಡಿತು. ಇದು ಪುರಾಣದವರ ಹಕ್ಕಿಪುಕ್ಕ.
 
ಕುರುಬರು ಕುರಿಗಾಹಿಗಳು, ಶ್ರಮಜೀವಿಗಳು. ಪಾಪ-ಪುಣ್ಯವರಿಯದ ಮುಗ್ದಜೀವಿಗಳು. ತಮ್ಮ ಹಟ್ಟಿ ಇಲ್ಲವೆ ಕಾಡು ಅವರ ಜೀವನ ಹೊಲವಾಗಿತ್ತು. ಅವರ ಸುತ್ತ ಗೌಗೌ ಜಗತ್ತು. ಕುರಿ ಸಾಗಣಿ ಅವರ ಮುಖ್ಯ ಕಸುಬು, ಕುರಿ ಹಾಲು ಅವರ ಪೌಷ್ಟಿಕ ಆಹಾರ. ಎಲ್ಲ ಅಡಿಗೆಯಲ್ಲೂ ಅದರದು ಮುಖ್ಯಪಾತ್ರ. ಹಾಲೇ ಅವರ ಮುಖ್ಯ ಜೀವಸತ್ವವಾಗಿ ಅವರಿಂದ ಹಾಲು-ಮತ ಪುರಾಣ ಹುಟ್ಟಿಕೊಂಡಿತು. ಅವರ ಮತ ಹಾಲುಮತ. ಅವರು ಯಾರಿಗೂ ಶತ್ರುಗಳಲ್ಲ. ಬೆಳಿಗ್ಗೆ ಎದ್ದು ಅವರ ಮುಖ ನೋಡಿದರೆ ಏನೂ ತಾಪತ್ರಯ ಇರುವುದಿಲ್ಲ ಎಂಬುದು ಪುರೋಹಿತರ ನೀತಿಪಾಠ. ತಮ್ಮ ಜೀವನ ಸ್ತಬ್ದತೆಯನ್ನು ಮೀರುವ ಪ್ರದರ್ಶನವೆ ಅವರ ಈ ಡೊಳ್ಳುಕುಣಿತ. ಕುರುಬರ ನೆಲೆ ಇರುವಲ್ಲಿ ಈ ಡೊಳ್ಳುಕುಣಿತ ಸಾಮಾನ್ಯ .ಉತ್ತರ ಕರ್ನಾಟಕದಲ್ಲಿ ಈ ಕಲೆ ಹೆಚ್ಚು ಪ್ರಸಿದ್ದ. ದಕ್ಷಿಣ ಕರ್ನಾಟಕದಲ್ಲಿ ವಿರಳ. ಡೊಳ್ಳುಕುಣಿತ ಎಲ್ಲರಿಗೂ ಅಚ್ಚಮೆಚ್ಚು. ಅನೇಕ ಪಾರಂಪರಿಕ ತಂಡಗಳ ಜೊತೆಗೆ ನೂರಾರು ಹೊಸ ಡೊಳ್ಳು ಕುಣಿತ ತಂಡಗಳು ಹುಟ್ಟಿಕೊಂಡಿವೆ. ಈಗ ಡೊಳ್ಳುಕುಣಿತ ಇಲ್ಲದ ಕರ್ನಾಟಕವಿಲ್ಲ. ಅದು ಪಾರಂಪರಿಕ ಡೊಳ್ಳೂ ಹೌದು, ನಾನು ಮೊದಲು ಹೇಳಿದಂತೆ ರಾಜಕಾರಣಿಗಳ ಡೊಳ್ಳು ಹೌದು.