೪ ಗೋಹತ್ಯೆ ನಿಷೇಧ : ಪರಿಣಾಮ

 
ಡಾ. ಹಿ. ಶಿ. ರಾ.
 
 
 
(೧) ಕಾನೂನು ಮಕ್ಕಳಾಟವಲ್ಲ. ಅರಾಜಕತೆಯನ್ನು ಹೋಗಲಾಡಿಸಿ ರಾಜಕತೆ (ರಾಜ್ಯವ್ಯವಸ್ಥೆ)ಯನ್ನು ತರುವುದೇ ಅದರ ಉದ್ದೇಶ. ಗೋಹತ್ಯೆ ನಿಷೇಧ ಕಾನೂನಿನಲ್ಲಿ ರಾಜ್ಯ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡುವ ಆಶಯ ಇಲ್ಲ. ಒಂದು ಧರ್ಮ ಕೇಂದ್ರದ ಹಿತಾಸಕ್ತಿ ಇರುವುದರಿಂದ ಪ್ರಜಾಪ್ರಭುತ್ವದ ಎಲ್ಲ ಧರ್ಮಗಳ ಆಸಕ್ತಿ ಮತ್ತು ಆಶೋತ್ತರಗಳು ನಿರಾಕರಣೆಯಾಗಿವೆ. ಈ ಕಾನೂನು ಜಾರಿಗೆ ಬಂದರೂ ಅದನ್ನು ಅನುಸರಿಸುವವರಿಲ್ಲದೆ ಅದೊಂದು ಕಾಡು ತತ್ವವಾಗುತ್ತದೆ. ಪಾನನಿರೋಧ ಮಸೂದೆಯ ಸ್ಥಿತಿಯೆ ಇದಕ್ಕೂ ಬರುತ್ತದೆ. ಕಾನೂನು ದೆವ್ವದಂತೆ ಆ ಕಡೆ ಬಿದ್ದಿದ್ದು ಜನ ತಮ್ಮ ಪಾಡಿಗೆ ಮತ್ತು ಆಸಕ್ತಿಗೆ ಅನುಗುಣವಾಗಿ ಓಡಾಡಿಕೊಂಡಿರುತ್ತಾರೆ. ಒಬ್ಬ ಮಹಾಮೋಹಿ ಯಂತ್ರವಾದಿ ಉತ್ಪಾದನೆ ಮತ್ತು ಸುಖದ ದೃಷ್ಟಿಯಿಂದ ಐವತ್ತು ವರ್ಷಕ್ಕೆ ಮೇಲ್ಪಟ್ಟವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಾನೂನು ತಂದರೆ, ಮತ್ತೊಬ್ಬ ಧರ್ಮಾಂಧ ಬೇರೊಂದು ಜನವರ್ಗ ತನ್ನವರ ಹಿತಾಸಕ್ತಿಗಾಗಿ ದೇಶವನ್ನು ಖಾಲಿ ಮಾಡಿ ಹೋಗಬೇಕು ಎಂದು ಕಾನೂನು ತಂದರೆ ಏನಾಗಬಹುದು?! ಸಂಸ್ಕೃತಿ ಸತ್ತು ರಾಕ್ಷಸರು ಮಾತ್ರ ಉಳಿಯುತ್ತಾರೆ ಮತ್ತು ಒಂದು ದೇಶ ಎರಡು ಹೋಳಾಗುತ್ತದೆ. ಇವರೆಲ್ಲರಿಗಿಂತ ಮತ್ತೊಬ್ಬ ತಲೆ ತಿರುಕ ಮೂಲಭೂತವಾದಿಗಳಾದ ಸನಾತನಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿ ಎಂದು ಕರೆಕೊಟ್ಟರೆ ಏನಾಗುತ್ತದೆ?! ಆ ಕರೆಗೆ ಮೊದಲು ಅವನೇ ಹತ್ಯೆಯಾಗುತ್ತಾನೆ. ಸನಾತನಿಗಳು ಸ್ವಾಸ್ಥ್ಯದಿಂದ ಇರುತ್ತಾರೆ.
 
(೨) ಸನಾತನತೆ ಎನ್ನುವುದು ಈಗ ಧಾರ್ಮಿಕ ಸತ್ವ ಅಲ್ಲ, ರಾಜಕೀಯದ ಆಟ. ಒಬ್ಬ ಕರ್ಮಠ ಜಾತಿವಾದಿ ಎನ್ನುವವನ ಮಕ್ಕಳು ಅಮೆರಿಕೆಯಲ್ಲಿ ಅತ್ಯಾಧುನಿಕ ಜೀವನ ನಡೆಸುತ್ತಿರುತ್ತಾರೆ. ಒಬ್ಬ ಧರ್ಮಾಂಧ ಎನ್ನುವವನ ಸಹಾಯದಲ್ಲಿ ಒಬ್ಬ ಕುರುಡ - ಕುಂಟ - ಅನಾಥರು ಆಶ್ರಯ ಪಡೆದಿರುತ್ತಾರೆ. ಈ ಹೊತ್ತು ಮೂಲಭೂತವಾದ ಎಂಬುದು ಅಸ್ಥಿತ್ವದಲ್ಲೆ ಇಲ್ಲ; ಮೂಲಭೂತವಾದಿ ಎಂಬುವನೊಬ್ಬನು ಇರುತ್ತಾನೆ. ಅವನು ನಮ್ಮ ಈಗಿನ ಕೆಟ್ಟ ಕನ್ನಡ ಚಳುವಳಿಗಾರ ಇದ್ದಂತೆ! ಸಮಕಾಲೀನವಾಗಿ ಸುಸ್ಥಿತಿಯಲ್ಲಿ ಬದುಕಲು ಹೂಡಿದ ಆಟ ಇದು. ಅದಕ್ಕೆ ಒಂದು ಭಾಷೆಯೊ, ಧರ್ಮವೊ, ಜನವರ್ಗವೊ ಬಲಿಯಾಗುತ್ತದೆ. ನಿಜದ ಅರ್ಥದಲ್ಲಿ ಮೂಲಭೂತವಾದಿ ಒಬ್ಬ ಸ್ಟೇಜ್ ಆಟಗಾರ.
 
(೩) ಗೋಮಾಂಸ ಮಾರಾಟ ಕಳ್ಳಬಟ್ಟಿ ದಂದೆಯಂತೆ ಆಗುತ್ತದೆ. ಇನ್ನೊಂದು ದಿಕ್ಕಿನಲ್ಲಿ ಒಳಗಿನ ಅಥವ ಹೊರಗಿನ ಉದ್ಯಮಿಗೆ ದನದ ಮಾಂಸ ಸರಬರಾಜು ಮಾಡುವ ಬೃಹತ್ ವ್ಯಾಪಾರವಾಗುತ್ತದೆ.
 
(೪) ದಲಿತರ ರಕ್ಷಣೆಗಾಗಿ ಅಟ್ರಾಸಿಟಿ ಕಾನೂನು ತಂದು, ಅದು ಚಿಲ್ಲರೆ ದಲಿತರ ಕೈಯಲ್ಲಿ ಬೇರೆಯವರನ್ನು ಹೆದರಿಸುವ ಆಯುಧವಾಗಿರುವಂತೆ ಮತ್ತು ಇತರರು ದಲಿತರನ್ನು ಹೊಸದಾಗಿ ದೂರ ಇಡಲು ತೊಡಗಿರುವಂತೆ ಗೋಹತ್ಯೆ ನಿಷೇಧ ಕಾನೂನು ಬಿಜೆಪಿ ವೈದಿಕರಿಂದ ಬೇರೆಯವರು ಮತ್ತೂ ದೂರ ನಿಲ್ಲುವಂತಾಗುತ್ತದೆ.
 
(೫) ವೈದಿಕರು, ವೈಚಾರಿಕ ಹಿನ್ನೆಲೆಯಿಂದ ಬಂದ ವೀರಶೈವರನ್ನು ಬಹಳ ಕಾಲ ಬಳಸಿಕೊಳ್ಳಲು ಆಗುವುದಿಲ್ಲ. ಅವರು ಯಡಿಯೂರಪ್ಪ ಇರುವ ಕಡೆ ಇರುತ್ತಾರೆ, ಬಿಜೆಪಿಯಲ್ಲಿ ಅಲ್ಲ.
 
(೬) ಒಕ್ಕಲಿಗರಿಗೆ ಜೀವನ ಧರ್ಮ ಇದೆಯೆ ಹೊರತು ಸಾಂಸ್ಥಿಕ ಧರ್ಮ ಬದ್ಧತೆ ಇಲ್ಲ. ಆದ್ದರಿಂದ ಬಿಜೆಪಿ ಕಡೆಗಿನ ಅವರ ಬೆಂಬಲ ತೀರಾ ತಾತ್ಕಾಲಿಕ.
 
(೭) ಈ ಗೋಹತ್ಯೆ ನಿಷೇಧ ಕಾನೂನಿನಿಂದ ಪ್ರಜಾಪ್ರಭುತ್ವ ನಾಚಿಕೊಳ್ಳುತ್ತದೆ. `ಇಚ್ಛೆಯಂತೆ ಇರೊ ಎಂದು ನಾನು ಹೇಳಿದರೆ... ಇಲ್ಲ, ಉಚ್ಚೆಕುಡಕೊಂಡೇ ಇರುತ್ತೇನೆ ಅಂದನಂತೆ' ಎಂಬ ಗಾದೆಯಂತೆ ಮೂಲಭೂತವಾದ ಪ್ರಜಾಪ್ರಭುತ್ವವನ್ನು ಸೋಲಿಸುತ್ತದೆ.
 
ಮುಂದಿನಭಾಗ: ೫ ಗೋಹತ್ಯೆ ಮತ್ತು ಪ್ರಾಣಿಹತ್ಯೆ