
ಪಾಕಿಸ್ತಾನದ ಪ್ರವಾಹ ಇಳಿಯುವ ಸೂಚನೆಯೇ ಕಾಣುತ್ತಿಲ್ಲ. ಜಲಾವೃತವಾಗಿರುವ ಸಿಂಧ್, ಬಲೂಚಿಸ್ತಾನ ಇತರೆ ದಕ್ಷಿಣ ಪಾಕಿಸ್ತಾನದ ಪ್ರಾಂತ್ಯಗಳಲ್ಲಿ ಬದುಕುಳಿದು ಸರ್ವಸ್ವನ್ನೂ ಕಳೆದುಕೊಂಡಿರುವ ಲಕ್ಷ ಲಕ್ಷ ಜನರಿಗೆ ನೀರು-ಊಟದ ಪೊಟ್ಟಣಗಳನ್ನೂ ತಲುಪಿಸಲು ಸುಲಭವಾಗಿಲ್ಲ. ಒಂದುವರೆ ತಿಂಗಳಿನಿಂದ ಅಳಿದುಳಿದ ನೆಲದ ಪಾಲಾಗಿರುವ ಬಡಪಾಯಿಗಳಿಗೆ ಈಗ ಕಾಲರಾ, ಮಲೇರಿಯಾದಂತಹ ಕಾಯಿಲೆಗಳ ಜೊತೆ ಸೆಣೆಸು. ಇದೆಲ್ಲದರ ಮಧ್ಯದಲ್ಲಿ ನಾನೂ ಇಲ್ಲೇ ಇದ್ದೇನೆ ಎಂದು ಪಾಕಿಸ್ತಾನವನ್ನು ಇಂತಹ ಸವಾಲಿನ ಸಂದರ್ಭದ ಮಧ್ಯೆಯೂ ಕ್ರೂರವಾಗಿ ಕಾಡುತ್ತಿರುವ ಪಿಶಾಚಿ, ತಾಲಿಬಾನ್ ನ ಅಂಡು ಕತ್ತರಿಸಲಾಗುತ್ತಿಲ್ಲ. ಕಷ್ಟದಲ್ಲಿರುವ ಜನರಿಗೆ ಈಗ ಧರ್ಮದ ಗೊಡ್ಡು ಆಶ್ವಾಸನೆ ಬೇಕಿಲ್ಲ. ಆದರೂ ತಾಲಿಬಾನ್ ನಂತಹ ಮತಾಂಧರು ಜನರನ್ನು ಹೆದರಿಸಿ, ಊಟ-ನೆರವಿನ ಆಸೆ ತೋರಿಸಿ ಈಗಲೂ ತಮ್ಮ ಸೈನ್ಯ ಕಟ್ಟುವ ಕುತಂತ್ರದಲ್ಲಿ ತೊಡಗಿದ್ದಾರೆ.
ಪಾಕಿಸ್ತಾನ ಈಗ ಪೂರಾ ನೆರವು ನೀಡುತ್ತಿರುವ ಬೃಹತ್ ರಾಷ್ಟ್ರಗಳಿಗೆ ಅವಲಂಬಿತವಾಗಿದೆ. ಅಲ್ಲಿನ ಕಾಟಾಚಾರದ ಸರ್ಕಾರ ಪ್ರವಾಹದ ಭಯಾನಕ ಪರಿಣಾಮವನ್ನು ಎದುರಿಸಲು ಸಂಪೂರ್ಣ ನಿಶ್ಯಕ್ತವಾಗಿದೆ. ಕಬ್ಬು, ಭತ್ತ, ಗೋಧಿ, ಹತ್ತಿ ಬೆಳೆಯುತ್ತಿದ್ದ ದಕ್ಷಿಣ ಪಾಕಿಸ್ತಾನದ ಹಚ್ಚ ಹಸಿರು ಭೂಮಿಗಳೆಲ್ಲಾ ನೀರಿನಲ್ಲಿ ಮುಳುಗಿವೆ. ದೇಶದ ಹೊಟ್ಟೆ ತುಂಬಿಸುತ್ತಿದ್ದ ಫಸಲು ಕರಗಿಹೋಗಿದೆ. ವಿದ್ಯುತ್ ಸರಬರಾಜು ಎಲ್ಲೊ ಒಮ್ಮೆ ಆಗುತ್ತಿದೆ. ಕಾರ್ಖಾನೆಗಳಿಗೆ ಕೆಲಸ ಮಾಡಲು ಬೇಕಿರುವ ಕಚ್ಚಾ ಸಾಮಗ್ರಿಗಳ ಅಭಾವ ಬೇರೆ. ಬರಲಿರುವ ಚಳಿಗಾಲಕ್ಕೆ ಸಾಕಾಗುವಷ್ಟು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರಕ್ಕೆ ಶಕ್ತಿ ಇಲ್ಲ. ಇರುವ ಸ್ವಲ್ಪವೇ ಆಹಾರದ ಬೆಲೆ ಆಕಾಶಕ್ಕೇರಿದೆ. ಸರ್ಕಾರದ ಕಟ್ಟುನಿಟ್ಟಿನ ಹಿಡಿತದಲ್ಲಿರುವ ಸೈನ್ಯ ಸಂತಸ್ತ್ರರಿಗೆ ಆಹಾರ-ಔಷಧಿ ಒದಗಿಸಲು, ಅವರನ್ನು ಸಾಗಾಣಿಸಲು, ತಾಲಿಬಾನ್ ನ ವಿರುದ್ಧ ರಕ್ಷಿಸಿಕೊಳ್ಳಲು, ಸ್ಥಳೀಯ ದಂಗೆ ಕೋರರನ್ನು ಹತ್ತಿಕ್ಕಲು ಹೀಗೆ ಹತ್ತು ಹಲವು ಕೆಲಸಗಳಲ್ಲಿ ಹಂಚಿ ಹೋಗಿದೆ; ಹತಾಶವಾಗಿದೆ. ಇದರ ಮಧ್ಯೆ ಸರ್ಕಾರ ಬದಲಾಗಬೇಕೆನ್ನುವ ಗಲಾಟೆ ಬೇರೆ. ಪಾಕಿಸ್ತಾನದ ಪರಿಸ್ತಿತಿ ಏನೇನೂ ಸರಿಯಿಲ್ಲ.
ಲಕ್ಷಾಂತರ ಪುಟಾಣಿಗಳಿಗೆ ಊಟ, ಶುಚಿಯಾದ ಕುಡಿಯುವ ನೀರು, ಬಟ್ಟೆ, ಔಷಧಿ, ಶಾಲೆ ಇವುಗಳಿಂದ ಸಾವಿರ ಗಾವುದ ತಳ್ಳಲಾಗಿದೆ. ನೆರವು ಅವರಲ್ಲಿಗೆ ಬೇಗ ತಲುಪಬೇಕು. ಎಲ್ಲರಿಂದಲೂ ಅಷ್ಟಿಷ್ಟು ಆಗಲೇಬೇಕು. ನೆನ್ನೆ ಪಾಕಿಸ್ತಾನಕ್ಕಾದ ಗತಿ ನಾಳೆ ಬಂಗ್ಲಾ ದೇಶ, ನೇಪಾಳ ಮತ್ತು ಭಾರತಕ್ಕಾಗಬಹುದು. ನಮ್ಮ ಸುತ್ತಲಿನವರಿಗೆ ನಾವು ಕಷ್ಟದಲ್ಲಿ ಸ್ವಲ್ಪವಾದರೂ ಇರಬೇಕು. ಹಾಗಂತ ನೆಲೆಯಿರದ ಅಲ್ಲಿನ ಜನಗಳನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬೇಕೆಂದಲ್ಲ. ನಮ್ಮಲ್ಲಿ ಈಗ ಹಂಚಿಕೊಳ್ಳಲು ಸಾಧ್ಯವಿರುವ ಸಾಮಗ್ರಿ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗಬೇಕು. ಹಾಗೇ ನೆರೆಯಿಂದ ಬಚಾವಾಗಿ ಮಹಲುಗಳಲ್ಲಿ ಬೆಚ್ಚಗಿರುವ ಧರ್ಮಾಂಧ ಮತಾಂಧರನ್ನು ಪ್ರವಾಹದ ನೀರಿಗೆ ಹಾರ ಕೊಟ್ಟುಬಿಡಬೇಕು. ಧರ್ಮದ ಹೆಸರಿನಲ್ಲಿ ಬಡವರನ್ನು, ಅವರ ದುರ್ಬಲ ಭಾವನೆಗಳನ್ನು ಕೆಣಕಿ ಕಾವೇರಿಸುವ, ಅವರನ್ನು ಆಹುತಿ ತೆಗೆದುಕೊಂಡು ಹೇಷಾರವ ಮಾಡುವ ಅಲ್ಲಿನ ಹುಚ್ಚು ಕುದುರೆಗಳನ್ನು ಅಟ್ಟಾಡಿಸಿಕೊಂಡು ಮಾಯ ಮಾಡಿಬಿಡಬೇಕು...ಪಾಕಿಸ್ತಾನ ಒಂದು ನಾರ್ಮಲ್ ಪ್ರಾಂತ್ಯವಾಗಿ ಮತ್ತೆ ಬದುಕಬೇಕಾದರೆ, ಚಿಗುರಬೇಕಾದರೆ ಸುಮಾರು ಕೆಲಸ ಆಗಬೇಕು. ಈಗ ನೋಡಿದರೆ ಪ್ರವಾಹದಿಂದ ಹುಟ್ಟಿಕೊಂಡಿರುವ, ಬೆಳೆಯುತ್ತಿರುವ ಹಲವಾರು ಸಮಸ್ಯೆಗಳು ದಿನ ಕಳೆದಂತೆ ಉಲ್ಬಣಗೊಳ್ಳುವ-ವೃಣವಾಗುವ ಸೂಚನೆಯೇ ಕಾಣುತ್ತಿದೆ.
ಅಲ್ಲಿನ ಪುಟಾಣಿ ಪ್ರಜೆಗಳಿಗೆ, ಅಸಹಾಯಕರಿಗೆ, ಶಾಂತಿಪ್ರಿಯರಿಗೆ, ಸಭ್ಯರಿಗೆ ನಮ್ಮೆಲ್ಲರ ಪ್ರೀತಿ ಬೇಕು. ಚಂದದ ಬದುಕಿನ ಆಶ್ವಾಸನೆ ಬೇಕು. ಅದು ನಮ್ಮ ನೆರವಿನಿಂದ ಅವರಿಗೆ ಅರಿವಾಗಬೇಕು. |
|