ಪಾದಯಾತ್ರೆ ಪ್ರಹಸನ


ಜಾನಕಿ ಮಂಜುನಾಥಪುರ
 

ಈ ಸೆಪ್ಟೆಂಬರ್ ೨೦೧೦ ಮೈಸೂರಿಗರಿಗೆ ವಿಶೇಷವೆ ಎನ್ನಬೇಕು.
ಇಬ್ಬರು ಸ್ವಾಮೀಜಿಗಳು: ಮಾಧ್ವ ಮತ್ತು ಮಾದಾರ, ದೊಡ್ಡ ಸುದ್ದಿಯನ್ನೇ ಎಬ್ಬಿಸಿದರು. ಮಾಧ್ವಾಯತಿ ವಿಶ್ವೇಶ್ವರ ತೀರ್ಥರು ಚತುರ್ಮಾಸದ ಆಚರಣೆಗಾಗಿ ಮೈಸೂರಿಗೆ ಬಂದಿದ್ದರು. ಈಗ ಅವರು ಬಂದ ಕಡೆ ಎಲ್ಲ ದೊಡ್ಡ ಸುದ್ದಿ ಮಾಡುತ್ತಾರೆ. ಮಾಧ್ಯಮದವರು ಕೂಡ ಅವರ ಸುದ್ದಿಗಾಗಿ ಕಾತರರಾಗಿರುತ್ತಾರೆ. ಶ್ರೀಗಳದು ಈಗ ಒಂದೇ ಮಾತು: ಹಿಂದೂಗಳೆಲ್ಲ ಒಂದಾಗಬೇಕು ಅಂತ.
ಯಾಕೆ ಶ್ರೀಗಳು ಇಷ್ಟು ಗಾಬರಿ ಬಿದ್ದಿದ್ದಾರೆ ಕಾರಣ ಏನಿರಬಹುದು? ಸಹಜವಾಗಿಯೆ ಒಬ್ಬ ಸಾಮಾನ್ಯ ಪ್ರಜೆಗೆ ಕೂಡ ಇದು ತುಂಬಾ ಕುತೂಹಲದ ಪ್ರಶ್ನೆಯಾಗಿ ಕಾಡುತ್ತದೆ. ಏನಿದು? ಹಿಂದೂಗಳು ಯಾರು? ಎಲ್ಲಿದ್ದಾರೆ, ಹೇಗಿದ್ದಾರೆ? ಅವರಿಗೆ ಏನಾಗಿದೆ? ಅವರೇನು ಬಾವಿಗೆ ಹಾರುತ್ತಿದ್ದಾರೆಯೆ, ಬೆಂಕಿಗೆ ಬೀಳುತ್ತಿದ್ದಾರೆಯೇ?
Credit: www.mangalorean.com
ಛೆ!! ಇವೆಲ್ಲ ಪ್ರಜ್ಞಾವಂತರ ಆತಂಕಗಳು. ಜನಸಾಮಾನ್ಯರು ಮಾತ್ರ ಅದೇ ಬದುಕು, ಅದೇ ನರಕ, ಅದೇ ಬಚ್ಚಲು ಹುಳುಗಳಂತೆ ಕಾಲ ಹಾಕುತ್ತಿದ್ದಾರೆ. ಪ್ರಭುತ್ವ ಹೋಗಿ ಪ್ರಜಾರಾಜ್ಯ ಬಂದಿದೆ. ಎಂದರೆ ರಾಜಕಾರಣಿಗಳೆಂಬ ಹೊಸ ಪುಂಡರು, ಗಂಡರು ಅಮರಿಕೊಂಡಿದ್ದಾರೆ. ಅವರಿಗೆ ಹಿಂದೂ-ಮುಂದೂ ಏನೂ ಕಾಣುತ್ತಿಲ್ಲ; ಒಂದೊತ್ತಿನ ಕೂಳು, ಒಂದು ಮಗ್ಗುಲ ನಿದ್ರೆ ಮಾತ್ರ.
ಹಿಂದೂತ್ವ ಎನ್ನುವುದು ಇವನ್ನೆಲ್ಲ ನಿವಾರಿಸಬಹುದೇ? ಧರ್ಮದ ವಿಷಯದಲ್ಲಿ ಹೀಗೆ ಉಪಯೋಗದ ದೃಷ್ಟಿಯಿಂದ ನೋಡಬಾರದು ಎನ್ನುವವರಿದ್ದಾರೆ. ಧರ್ಮಕೂಡ ಒಂದು ರಾಜಕೀಯವೆ. ಆದರಿಂದಲೇ ಅದನ್ನು ಧರ್ಮಕಾರಣ ಎನ್ನುತ್ತಾರೆ. ರಾಜಕೀಯದಲ್ಲಿ ನೈತಿಕತೆಯ ಪ್ರಮಾಣ ಕಡಿಮೆ, ಧರ್ಮ ಯಾಹೊತ್ತೂ ನೈತಿಕತೆಯನ್ನು ಮುಂದೆ ಮಾಡುತ್ತದೆ. ಆ ಕಾರಣಕ್ಕಾಗಿಯೆ ಜನ ರಾಜಕಾರಣವನ್ನು ಮರೆತೂ ಸುಖವಾಗಿರಬಹುದು, ಧರ್ಮಕಾರಣ ಹಾಗಲ್ಲ; ಜೀವನಕ್ಕೆ ನೆಲ-ಬೆಲೆ ತಂದು ಕೊಟ್ಟು ಅದನ್ನು ಜೀವನ ಮಾಡುತ್ತದೆ.
ಅಂಥ ನೆಲೆ ಬೆಲೆ ಹಿಂದೂಧರ್ಮಕ್ಕೆ ಇದೆಯೆ. ಹಾಗಿದ್ದಲ್ಲಿ ಪೇಜಾವರಶ್ರೀಗಳು ದಲಿತರ ಕೇರಿಗೆ ಪಾದಯಾತ್ರೆ ಹೋಗುವುದು ಮತ್ತು ಅವರನ್ನು ಹತ್ತಿರಕ್ಕೆ ತಂದು ಕೊಳ್ಳುವುದು ಎನ್ನುವುದರ ಅರ್ಥವೇನು? ಸುಲಭವಾಗಿ ಗ್ರಹಿಸಬಹುದಾದ ಸಂಗತಿ ಎಂದರೆ ದಲಿತರನ್ನು ಹಿಂದೂ ಧರ್ಮ ದೂರ ಇಟ್ಟಿದೆ ಎಂದೆ ಅರ್ಥ. ಹಾಗಾದರೆ ಅವರಿಗೆ ಈ ಸಮಾಜದಲ್ಲಿ ನೆಲೆ-ಬೆಲೆ ಇಲ್ಲ ಎಂದಾಗುತ್ತದೆ. ಅದರ ಕಾರಣವಾಗಿಯೆ ಸ್ವಾತಂತ್ರ್ಯ ಬರುವವರಿಗೆ ಅವರಿಗೆ ಅವರದೆ ಆದ ನೆಲ, ನೆಲೆ(ವಸತಿ) ಇರಲಿಲ್ಲ. ಎಲ್ಲರಿಗಿಂತ ಅವರು ದೂರ ಇರುತ್ತಿದ್ದರು. ಬೆಲೆಯ ಪ್ರಶ್ನೆಯನ್ನು ಬಿಡಿ! ಅವರನ್ನು ಯಾರೂ ಹತ್ತಿರ ಸೇರಿಸಿಕೊಳ್ಳುತ್ತಿದ್ದರು? ಬೆಲೆ ಕೊಡುವ ಮಾತು ದೂರವೇ ಇತ್ತು. ಈ ಸ್ಥಿತಿಯನ್ನು ತಂದವರು ಯಾರು, ಅದು ಹಿಂದೂಧರ್ಮ ತಾನೆ? ಅದು ಈಗ ಪ್ರಾಯಶ್ಚಿತ ಮಾಡಿಕೊಳ್ಳಬೇಕಲ್ಲವೆ? ಮಾಧ್ವಯತಿಗಳು ಈ ಕೆಲಸವನ್ನೇ ಮಾಡಲು ಹೊರಟಿದ್ದಾರೆ ಎಂದು ನಂಬಬಹುದೆ?
ವಿಶ್ವೇಶ್ವರತೀರ್ಥರು ಮತ್ತು ಪ್ರಜ್ಞಾವಂತ ಚಿಂತಕರ ಮದ್ಯೆ ಇದೇ ವಿಷಯಕ್ಕೆ ಬಹಳ ಬಹಳ ಚರ್ಚೆ ನಡೆಯುತ್ತಿದೆ. ವಿಶ್ವೇಶ್ವರತೀರ್ಥರು ದಲಿತಕೇರಿಗೆ ಹೋದದ್ದು, ಮಾದಾರ ಶ್ರೀಗಳು ಬ್ರಾಹ್ಮಣರ ಅಗ್ರಹಾರಕ್ಕೆ ಪಾದಯಾತ್ರೆ ಹೊರಟದ್ದು ಇದೆ ಕಾರಣಕ್ಕೆ ಬಹಳ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಪಾದಯಾತ್ರೆಯ ಬಗ್ಗೆ ಕರ್ನಾಟಕದ ಮಾಧ್ಯಮಗಳು ತುಂಬ ಸುದ್ದಿ ಮಾಡಿದವು. ಪ್ರಜಾವಾಣಿ ದಿನಪತ್ರಿಕೆ ಕೇವಲ ಸುದ್ದಿ ಪ್ರಕಟಿಸುವುದಕ್ಕೆ ಸೀಮಿತವಾಗದೆ ಈ ಬಗ್ಗೆ ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ದಲಿತರು ತುಂಬ ವ್ಯಗ್ರವಾಗಿಯೆ ಪ್ರತಿಕ್ರಿಯಿಸಿದರು. ಬ್ರಾಹ್ಮಣ ಪ್ರಜ್ನಾವಂತರು ತುಂಬ ಮರ್ಯಾದೆಯಿಂದ ಪ್ರತಿಕ್ರಿಯಿಸಿದರು. ಇತರ ಎಲ್ಲಾ ವರ್ಗದ ಚಿಂತಕರೂ ತಮ್ಮ ಮೌಲಿಕ ಮಾತುಗಳನ್ನು ಬರೆದರು. ಇಲ್ಲಿ ಬ್ರಾಹ್ಮಣರು, ಶೂದ್ರರು, ದಲಿತರು ಅಂತ ಮಾತ್ರ ಇಲ್ಲ ; ಮಾನವರೆಂಬ ಸಹ ಜೀವಿಗಳಿದ್ದಾರೆ ಎಂಬುದು ಸಂತಸ ತಂದಿತು.
 
ಸಾಮಾನ್ಯ ಜನ ಸ್ವಾಮಿಗಳನ್ನು ಗೌರವ-ಭಕ್ತಿಯಿಂದಲೇ ನೋಡುತ್ತಾರೆ. ಹಾಗೆ ಉಡುಪಿ ಸ್ವಾಮಿಗಳನ್ನು ಮಾದಾರ ಸಮುದಾಯ ಭಕ್ತಿ-ಸಂಭ್ರಮದಿಂದಲೇ ಸ್ವಾಗತಿಸಿತು. ಅವರು ಶ್ರೀಗಳ ಮಾಧ್ವ ದೀಕ್ಷೆಯನ್ನು ಸ್ವೀಕರಿಸಲಿಲ್ಲ, ಮಾನವತಾವಾದಿಯಾಗಿ ಬಂದ ಸ್ವಾಮಿಗಳನ್ನು ಬರಮಾಡಿಕೊಂಡರು. ತಮ್ಮನ್ನು ಶತಮಾನಗಳ ಕಾಲ ಥೂ, ಛೀ ಎಂದು ದೂರ ಇಟ್ಟವರೇ ನಮ್ಮ ಬಳಿಗೆ ಬರುತ್ತಿದ್ದಾರೆ ಅಂದರೆ ಅವರ ಮನಸ್ಸುಗಳು ಹೇಗೆ ಉಕ್ಕಿ ಹರಿಯಬೇಡ! ಅಗ್ರಹಾರದ ಜನ ಕೂಡ ಮಾದಾರ ಶ್ರೀಗಳು ಬಂದಾಗ ಪಾದತೊಳೆದು, ಹೂವಿಟ್ಟು ಪೂಜಿಸಿದರು ಗೌರವ ಪೂರ್ವಕವಾಗಿಯೆ ನೋಡಿಕೊಂಡರು. ಮೇಲು ಜಾತಿಯ, ಶ್ರೇಷ್ಠ ಎನ್ನುವ ಸ್ವಾಮೀಜಿ ವಿಸ್ತರಣೆಗೊಳ್ಳುವುದರಿಂದ ಏನೆಲ್ಲ ಬದಲಾವಣೆಗಳಾಗುತ್ತವೆ ನೋಡಿ! ಇಂಥ ಪಾದಯಾತ್ರೆಯ ಉದ್ದೇಶ ಪ್ರಾಮಾಣಿಕ ಹಾಗೂ ಮನುಕುಲವನ್ನು ಒಂದಾಗಿ ನೋಡುವಂಥದೇ ಆಗಿದ್ದಲ್ಲಿ ಅದರ ಮಹತ್ವ ಎಷ್ಟು? ಹೀಗೆ ಭಾರತದ ಮೇಲುಜಾತಿ ಕೆಳಜಾತಿಯ ಕಡೆಗೆ ಸಮಾನತೆಗಾಗಿ ತುಡಿದರೆ, ತಬ್ಬಿಕೊಂಡರೆ, ಒಡನಾಡಿದರೆ ಹಿಂದೂ ಎಂಬುದು ಹೇಗಿರುತ್ತದೆ? ಮುಂದು ಮುಂದು ಎಂಬಂತಲ್ಲವೇ?? ’ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲು ಮಟ್ಟವೇ ನೀರು’ ಎಂಬ ಗಾದೆಯಂತೆ ನಮ್ಮ ಹಿಂದೂಗಳು ಎನಿಸಿಕೊಳ್ಳುವವರು ಅಮೆರಿಕಕ್ಕೆ (ಅತ್ಯಂತ ಆಧುನಿಕ ಎನ್ನುವ ಸ್ಥರಕ್ಕೆ, ಅಂದರೆ ಲೌಕಿಕ ಸ್ವರ್ಗ ಎಂದುಕೊಳ್ಳಿ) ಹೋದರೂ ಜಾತಿ ಮಾಡುತ್ತಾ, ಜಾತಿಯನ್ನು ಎಚ್ಚರಗೊಳಿಸುವ (ತಾರತಮ್ಯ) ಕ್ರಿಯಾಯೋಜನೆಗಳನ್ನು ಹಾಕುತ್ತಾ ಕುಳಿತರೆ ಏನಾಗುತ್ತದೆ? ಲಕ್ಷಲಕ್ಷ ’ಶ್ರೀ’ಗಳು ಹುಟ್ಟಿ ಬಂದರೂ ಏನೂ ಆಗುವುದಿಲ್ಲ; ಪಾಪಿ ಪಾಪದಲ್ಲೆ ಇರುತ್ತಾನೆ. ತಾರತಮ್ಯಕ್ಕೆ ಒಳಗಾದವನು ಮಾತ್ರ ಪಾಪಿಯಲ್ಲ, ತಾರತಮ್ಯ ಮಾಡುವವನು ಮಹಾಪಾಪಿ. ಅಂತ ಮನಸ್ಸು, ಪಟ್ಟ ಬೇಕೆ? ಅದು ಶ್ರೇಷ್ಠವೆ!!
 
ಕರ್ನಾಟಕದ ಚಿಂತಕರು ಸಿಡಿದದ್ದು ಇಂಥ ಮೌಲಿಕ ಪ್ರಶ್ನೆಗಳನ್ನು ಇಟ್ಟುಕೊಂಡು. ಈಗ ಜಾತಿ ಮಾತ್ರ ಸಾಮರ್ಥ್ಯ, ಶ್ರೇಷ್ಠ ಅಲ್ಲ. ಆಧುನಿಕ ವಿಜ್ಞಾನ-ತಂತ್ರಜ್ಞಾನ, ಜಾತಿ-ವರ್ಗಾತೀತವಾಗಿದೆ. ಅದು ಪಡೆಯುವವನ ಶ್ರಮ, ತರಬೇತಿ ಮತ್ತು ನೈಪುಣ್ಯವನ್ನು ಅವಲಂಬಿಸಿದೆ. ಅಂಥ ಸಾಮರ್ಥ್ಯ ಮತ್ತು ನೈಪುಣ್ಯ ಇರುವವರು ಎಲ್ಲ ಸಮುದಾಯದಲ್ಲೂ ಇದ್ದಾರೆ. ಕಳಪೆ ಬೀಜಗಳು, ಸಸಿಗಳು ಎಲ್ಲ ಸಮುದಾಯಗಳಲ್ಲೂ ಇದ್ದಾವೆ. ಈ ಹೊತ್ತು ಜಾತಿ ರಕ್ಷಣೆ, ವರ್ಗ ರಕ್ಷಣೆ ತಂತ್ರ ಒಂದು ಮೋಸ, ದಬ್ಬಾಳಿಕೆ ಮತ್ತು ಹೇಡಿತನ ಎಂದು ಜನ ಭಾವಿಸಿದ್ದಾರೆ.
 
ಈಗ ಜಾಗತೀಕರಣ ಎಲ್ಲರಿಗೂ ಬಾಗಿಲು ತೆಗೆದಿದೆ. ’ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ’ ಎಂಬಂತೆ ಶ್ರದ್ದೆಯನ್ನು ಇಟ್ಟುಕೊಂಡು ಸಾಧನೆಗೆ ಹೊರಡು ಎಂದು ಆಧುನಿಕ ತತ್ವ ಹೇಳುತ್ತಿದೆ. ಉಳಿದ ತಾರತಮ್ಯಗಳು ನಗಣ್ಯ ಮತ್ತು ಮಾನವ ಕುಲಕ್ಕೆ ಅವಮಾನ ಎಂದು ಹೇಳುತ್ತಿವೆ. ಇದನ್ನೇ ಉಡುಪಿ ಶ್ರೀಗಳು ಹೇಳುತ್ತಿದ್ದಾರೆಯೆ ಎಂದು ಕರ್ನಾಟಕದ ಪ್ರಜ್ಞಾವಂತ ಜನ ಪ್ರಶ್ನಿಸುತ್ತಿದ್ದಾರೆ. ಅವರ ಪ್ರಶ್ನೆಗಳು ಹೀಗಿವೆ:
 
  • "ವಿಶ್ವೇಶತೀರ್ಥ ಸ್ವಾಮೀಜಿ ಎಂಬ ಹೆಸರಿನಲ್ಲಿ ’ಮಠದಬಂಧಿ’ಯಾಗಿ ನೀವು ಕಳೆದ ಇಪ್ಪತ್ತೈದು ವರ್ಷಗಳಿಂದ ಜಾತಿಭೇದ ತೊಲಗಬೇಕೆಂಬ ಉಪದೇಶ, ಉಪವಾಸ, ಪಾದಯಾತ್ರೆ ಮಾಡುತ್ತಲೇ ಬಂದಿದ್ದಿರಿ... ಇವತ್ತು ನೀವು ಮಠವನ್ನು ಮೀರಿ ಬೆಳೆದಿರುವ ಕಾರಣ ಮಠದ ಬಂಧಿಯಲ್ಲ. ಈ ವಿಶ್ವೇಶನ ಮಾತು ಯಾರು ಕೇಳುತ್ತಾರೆ ಮರಿ? ಎಂದು ಹೇಳುವ ಹಾಗಿಲ್ಲ. ನೀವು ಹೇಳಿದ್ದನ್ನು ಕೇಳುವ ಲಕ್ಷಾಂತರ ಭಕ್ತರಿದ್ದಾರೆ. ನೀವು ಈಗ ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ, ಶಕ್ತಿಯಾಗಿ ಬೆಳೆದಿದ್ದಾರೆ. ನಿಮ್ಮ ಈಗಿನ ಪ್ರಯತ್ನಗಳಿಂದ ಜಾತಿ ವ್ಯವಸ್ಥೆಯ ಹೆಮ್ಮರದ ರೆಂಬೆಕೊಂಬೆಗಳನ್ನಷ್ಟೆ ಮುರಿದು ಹಾಕಬಹುದು, ಅದನ್ನು ಬೇರು ಸಹಿತ ಕಿತ್ತೊಗೆಯುವುದು ಸಾಧ್ಯವಾಗಲಾರದೇನೋ? ನಿಮ್ಮ ಆಶಯದ ಹಿಂದೂ ಏಕತೆ ಮೂಡಲು ಇದಕ್ಕಿಂತ ಭಿನ್ನವಾದ ’ಶಾಕ್ ಟ್ರೀಟ್ಮೆಂಟ್’ ಅಗತ್ಯವಿದೆ ಎಂದು ನಿಮಗನ್ನಿಸುವುದಿಲ್ಲವೇ ?
    ಕರ್ನಾಟಕದ ಮಟ್ಟಿಗೆ ಅಂತಹ ಶಾಕ್ ಟ್ರೀಟ್ಮೆಂಟ್ ನೀಡುವ ಶಕ್ತಿ ಇದ್ದರೆ ನಿಮಗೆ ಮಾತ್ರ. ಆದ್ದರಿಂದಲೇ ಸಮತಾ ಸಮಾಜ ನಿರ್ಮಾಣದ ಆಶಯವುಳ್ಳವರೆಲ್ಲರೂ ನಿಮ್ಮ ದಿಟ್ಟ ಹೆಜ್ಜೆಯ ನಿರೀಕ್ಷೆಯಲ್ಲಿದ್ದಾರೆ"-ದಿನೇಶ್ ಅಮೀನ್ ಮಟ್ಟು. (೧೩ ಸೋ ೨೦೧೦ ಪ್ರಜಾವಾಣಿ)
 
  • "ಪೇಜಾವರಶ್ರೀಗಳಂತಹ ಧೀಮಂತ ವ್ಯಕ್ತಿತ್ವ ಸ್ವಾಮೀಜಿಯೊಬ್ಬರು ಜಾತಿ ನಿರ್ಮೂಲನೆಯ ನಿಟ್ಟಿನಲ್ಲಿ ಇಟ್ಟಿರುವ ಐತಿಹಾಸಿಕ ಹೆಜ್ಜೆಯ ಮುಂದುವರೆದ ಭಾಗದಂತಿರುವ ಈ ಸಾಮರಸ್ಯದ ನಡಿಗೆಯಲ್ಲಿ, ತಮ್ಮ ಕೇರಿಗೆ ಮನೆಗೆ ಬರುವ ಮಾದಾರ ಚನ್ನಯ್ಯ ಸ್ವಾಮೀಜಿಗಳಗೆ ಒಳ್ಳೆಯ ಸ್ವಾಗತವೇ ಸಿಗಲಿ ಎಂದು ಆಶಿಸೋಣ...ಮಾಧ್ವ ಸಮುದಾಯ ಪೇಜಾವರ ಶ್ರೀಗಳ ಬೆಂಬಲಕ್ಕೆ ನಿಲ್ಲಲೇಬೇಕು" -ಬಿ.ಆರ್.ಸತ್ಯನಾರಾಯಣ (೧೪ ಮಂ ೨೦೧೦ ಪ್ರಜಾವಾಣಿ)

 

  • "ಪೇಜಾವರಶ್ರೀಗಳು ಮೈಸೂರಿನ ದಲಿತರ ಬಡಾವಣೆಯಲ್ಲಿ ಪಾದಯಾತ್ರೆ ಮಾಡಿ, ದಲಿತರಿಗೆ ವೈಷ್ಣವ ದೀಕ್ಷೆ ನೀಡುವ ಮೂಲಕ ಅವರನ್ನು ಹಿಂದೂ ಧರ್ಮದದಲ್ಲಿನ ಜಾತಿ ಭೇದ ಮತ್ತು ಕೀಳೆಂಬ ತಾರತಮ್ಯದ ಸಾಮಾಜಿಕ ವ್ಯವಸ್ಥೆಯಲ್ಲಿಯೆ ಬಂಧಿಸಿದ್ದಾರೆ...ಪೇಜಾವರ ಶ್ರೀಗಳು ಮೊದಲು ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಸವರ್ಣೀಯರಲ್ಲಿ ಮನಃ ಪರಿವರ್ತನೆ ತರಬೇಕಿದೆ."-ಕಸವನಹಲ್ಲಿ ಶಿವಣ್ಣ , ಸ್ನೇಹಿತರು (೧೫ ಬುಧ ೨೦೧೦ ಪ್ರಜಾವಾಣಿ)
 
  • "ಈಗ ದಲಿತರಿಗೆ ಬೇಕಿರುವುದು ವೈದಿಕ ದೀಕ್ಷೆಯಲ್ಲ, ಸಾಮಾಜಿಕ ಸಮಾನತೆ....ಅವರಿಗೆ ಅಗತ್ಯವಾಗಿರುವುದು ಸಂವಿಧಾನದತ್ತ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ಬೇಕಾಗಿರುವುದು ಸ್ವಾಭಿಮಾನದ ಅರಿವು" -ಲಿಲೇಶ ಪುತ್ತೂರು (ಪ್ರಜಾವಾಣಿ)

 

  • "ಪ್ರೇಜಾವರಶ್ರೀಗಳು ಹಾಗೂ ಮಾದಾರ ಚನ್ನಯ್ಯ ಸ್ವಾಮಿಗಳು ಜತೆಗೂಡಿ ಅಸ್ಪ್ರಶ್ಯತೆ ಹೋಗಲಾಡಿಸಲಿ. ಈ ವಿಚಾರದಲ್ಲಿ ದೇಶದ್ಯಂತ ಅಂದೋಲನ ನಡೆಸಲಿ"-ಯು.ಪಿ ಪುರಾಣಿಕ್ (೧೫ ಬುಧ ೨೦೧೦ ಪ್ರಜಾವಾಣಿ)

 

  • "ಸಸ್ಯಹಾರಿಗಳನ್ನು ಶ್ರೇಷ್ಠವಾಗಿ, ಮಾಂಸಾಹಾರಿಗಳನ್ನು ಕನಿಷ್ಟವಾಗಿ ನೋಡುವುದು ಆತ್ಮಾಭಿಮಾನ ಇರುವ ವ್ಯಕ್ತಿಗಳಿಗೆ ಮಾಡುವ ಅವಮಾನ...ಶ್ರೀಗಳು ತಮ್ಮ ಮಠದಲ್ಲಿ ಸಹಪಂಕ್ತಿ ಭೋಜನ ವ್ಯವಸ್ಥೆಯನ್ನು ಕಲ್ಪಿಸಿ ದಲಿತರ ಬಗೆಗಿನ ಕಾಳಜಿ ನಿಜ ಎಂಬುದನ್ನು ಸಾಬೀತುಪಡಿಸಲಿ"-ಗಾಯತ್ರಿ ಬೋರಯ್ಯ (೧೫ ಬುಧ ೨೦೧೦ ಪ್ರಜಾವಾಣಿ)

 

  • "ಸಮಾನತೆ, ಅನ್ಯಜಾತಿಯ ಕುರಿತಾದ ಸಹನೆ ಇವು ದಲಿತರ ಕೇರಿಯಲ್ಲಿ ಸಾಧಿಸ ಹೊರಡುವೇ ಕ್ರಮವೇ ದೋಷ ಪೂರ್ಣವಾದದ್ದು. ಅವರ ಮೇಲೆ ’ದೌರ್ಜನ್ಯಗಳು’, ’ಕ್ರೌರ್ಯಗಳು’ ನಿಲ್ಲಬೇಕಾದರೆ ಉಚ್ಚವರ್ಗದವರ, ಅದರಲ್ಲಿಯೂ ಬ್ರಾಹ್ಮಣರ ಮನಸ್ಸುಗಳಲ್ಲಿ, ಬದುಕಿನ ರೀತಿಯಲ್ಲಿ, ಮನುಷ್ಯ ಸಂಬಂಧಗಳಲ್ಲಿ ಆಗಬೇಕಿರುವ ಕ್ರಾಂತಿಕಾರಕ ಬದಲಾವಣೆಗಳು. ಹಾಗಾಗಿಯೆ ಶ್ರೀಗಳವರ ಕಾರ್ಯಕ್ರಮ ಈ ಉಚ್ಚವರ್ಗದ ಕೇರಿಗಳಲ್ಲಿಯೇ ಹೊರತು ದಲಿತ ಕೇರಿಗಳಲ್ಲಿ ಅಲ್ಲ..."-ಜಿ.ಕೆ.ಗೋವಿಂದರಾವ್ (೧೭ ಗುರು ೨೦೧೦ ಪ್ರಜಾವಾಣಿ)
 
  • "ಅವರು (ಎಲ್ಲ ಜಾತಿಯ ಸ್ವಾಮಿಗಳು) ಜಾತಿ ರಾಜಕೀಯದ ಹಿತಾಸಕ್ತಿಗಳನ್ನು ಬದಿಗೊತ್ತಿ, ಮನುಷ್ಯರು ಮನುಷ್ಯರಾಗಿ ಬಾಳುವ ರೀತಿ-ನೀತಿಗಳನ್ನು ಸಂಘಟಿತರಾಗಿ ಕಲಿಸಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕಾದ ಕರೆ ಇದಾಗಿದೆ..."-ಆರ್.ಕೆ.ದಿವಾಕರ (೧೨ ಶುಕ್ರ ೨೦೧೦ ಪ್ರಜಾವಾಣಿ)

 

  • "ಒಂದು ಸಾಮಾಜಿಕ ಪಿಡುಗಿನ ವಿರುದ್ದ ಹೋರಾಡುವ ಸಂದರ್ಭದಲ್ಲಿ ಆ ಸಮಸ್ಯೆಯ ಹಿಂದಿನ ಮೂಲ ನೆಲೆಗಳನ್ನು ಗ್ರಹಿಸಿ, ಮೂಲ ಕಾರಣಗಳನ್ನು ಕಂಡು ಹಿಡಿದು ಮೂಲಭೂತ ವಾದ ಬದಲಾವಣೆಗಾಗಿ ಶ್ರಮಿಸುವುದು ಅಗತ್ಯ. ಆದರೆ ಮಾದಾರ ಚನ್ನಯ್ಯ ಸ್ವಾಮಿಗಳು ತಾವು ತೋಡಿಕೊಂಡ ಬಾವಿಗೆ ತಾವೇ ಬಿದ್ದಿರುವುದು ಅವರ ಪಾದಯಾತ್ರೆಯಲ್ಲಿ ಸ್ಪಷ್ಟವಾಗಿದೆ..."-ನಾ. ದಿವಾಕರ (೨೦ ಸೋಮ ೨೦೧೦ ಪ್ರಜಾವಾಣಿ)
 
  • "...ಅಹಂ ಅಲ್ಪವಿರುವ ಮೇಲರಿಮೆ ಇಲ್ಲದ ತಳ ಸಮುದಾಯವನ್ನು ಶ್ರೇಷ್ಠವೆಂದು ಭಾವಿಸಿದ ವಚನಕಾರರ ನಡೆ ಕಂಡಾಗ, ಪೇಜಾವರರ ಪಾದಯಾತ್ರೆ ಧಾರ್ಮಿಕವಲ್ಲವೇನೊ, ಧರ್ಮ ರಾಜಕಾರಣವಿರಬೇಕು ಎಂಬ ಅನುಮಾನ ಹುಟ್ಟಿಸುತ್ತದೆ. ಪೇಜಾವರಶ್ರೀಗಳ ಪಾದಯಾತ್ರೆಯಿಂದ ದಲಿತರಲ್ಲಿ ಇನ್ನಷ್ಟು ದಾಸರು ಹೆಚ್ಚಾಗಬಹುದು. ಶಂಖ ಜಾಗಟೆ ಬಾರಿಸಬಹುದು! ಎಷ್ಟೇ ಶಂಖ ಜಾಗಟೆ ಬಾರಿಸಿದರೂ ಅವರ ಅಸ್ಪ್ರಶ್ಯ ಸ್ಥಿತಿಯಿಂದ ಚಲನೆಕಾಣದು. ಯಾಕೆಂದರೆ ವೈಷ್ಣವ ದೀಕ್ಷೆ ಎಂದರೆ ಸೇವಕತನದ ದಾಸ ದೀಕ್ಷೆ.

ಹೀಗಿರುವಾಗ ಪೇಜಾವರರು ವೈಷ್ಣವ ಧೀಕ್ಷೆ ಯನ್ನು ಪುನರ್ ಪರಿಶೀಲಿಸುವುದು ಒಳಿತೇನೋ. ಬದಲಾಗಿ ದ್ವಿಜರಿಗೆ ತ್ರಿಜ ದೀಕ್ಷೆ ಕೊಡುವುದು ನಮ್ಮ ಸಮಾಜದ ಆರೋಗ್ಯ , ಏಕತೆ, ಸಮತೋಲನಕ್ಕೆ ಅಗತ್ಯವೇನೋ ಅನ್ನಿಸುತ್ತದೆ. ಹಾಲಿ ದ್ವಿಜ ದೀಕ್ಷೆಯು ಬುದ್ದಿ ದೀಕ್ಷೆಯು ಬುದ್ದಿ ಕೇಂದ್ರಿತವಾಗಿದೆ. ದ್ವಿಜ ದೀಕ್ಷೆಯ ಗಾಯತ್ರಿ ಮಂತ್ರದಲ್ಲಿ ; ಬುದ್ದಿ ಪ್ರಚೋದನೆಯಾಗಲಿ ಎಂಬ ಆಶಯವಿದೆ. ಬುದ್ದಿಯಿಂದ ಒಡಕು, ವಂಚನೆ, ಮೇಲರಿಮೆ, ಕೀಳರಿಮೆ ಇತ್ಯಾದಿಗಳು ಹೆಚ್ಚಲೂಬಹುದು. ಭಾರತದ ಸಮಾಜಕ್ಕೆ ಇಂದು ಬೇಕಾಗಿರುವುದು- ಕರುಳು ಅಂದರೆ ಅಂತಃಕರಣ, ಅಂದರೆ ಬಂಧುತ್ವ- ಇದರ ಪ್ರಚೋದನೆಗಾಗಿ, ಅಂದರೆ ಕಾರುಣ್ಯದ ಪ್ರಚೋದನೆಯಾಗಲಿ ಎಂಬ ಆಶಯದ ನವ ದೀಕ್ಷೆಯನ್ನು ನೀಡಿ ಎಂದು ಅವರಲ್ಲಿ ಪ್ರಾರ್ಥಿಸುವೆ.

ಈಗ ಒಂದು ಹೊಸ ಹುಟ್ಟಿಗಾಗಿ ಪೇಜಾವರ ಶ್ರೀಗಳ ಮುಂದೆ ಸಲಹೆಯೊಂದನ್ನಿಡುವೆ. ನಮ್ಮದು ಜನ್ಮಾಂತರಗಳನ್ನು ನಂಬುವ ದೇಶ. ಈ ಜನ್ಮದ ತರ್ಕಕ್ಕೆ-ಕಳ್ದೆದ ಜನ್ಮದಲ್ಲಿ ಅಸ್ಪ್ರಶ್ಯತೆ ಆಚರಿಸಿದವರೇ ಈ ಜನ್ಮದಲ್ಲಿ ಅದನ್ನು ಅನುಭವಿಸಲು ಅಸ್ಪ್ರಶ್ಯರಾಗಿ ಹುಟ್ಟಿದ್ದಾರೆ. ಈ ಜನ್ಮದಲ್ಲಿ ಅಸ್ಪ್ರಶ್ಯತೆ ಆಚರಿಸುವವರು ಮುಂದಿನ ಜನ್ಮದಲ್ಲಿ ಅಸ್ಪ್ರಶ್ಯರಾಗಿ ಹುಟ್ಟುವರು. ಜನ್ಮ ನಿಜವಿದ್ದರೆ ಆ ಜನ್ಮಾಂತರದ ಕರ್ಮ ಫಲವನ್ನು ಉಣ್ಣಬೇಕಾದದ್ದೂ ನಿಜವಿರಬಹುದಲ್ಲವೇ? ಏನೇನೊ ಹುಟ್ಟುಹಾಕುವವರು ಇದನ್ನೂ ಯಾಕೆ ಹುಟ್ಟು ಹಾಕಬಾರದು?! ಯಾಕೆ ಮಠಾಧೀಶರುಗಳು ಇದನ್ನು ಪ್ರಚಾರ ಮಾಡಬಾರದು! ತಾರತಮ್ಯಕ್ಕಾಗಿ ತರ್ಕಿಸಿ ಸಾಯುವ ಭಾರತದ ಮನಸ್ಸು ಏಕತೆಗಾಗಿ ಯಾಕೆ ತರ್ಕಿಸಬಾರದು?
 
...ಸುಸ್ತಾಗುತ್ತಿದೆ. ಯಾಕೋ ಮುಗಿಯುತ್ತಿಲ್ಲ, ಪ್ರೀತಿ ಸಮಾನತೆಯ ಆಸೆ ಇಟ್ಟುಕೊಂಡು ಇತಿಹಾಸ ಕಾಲದಿಂದಲೂ ಜೀವಿಸುತ್ತಿದ್ದೇವೆ. ಪ್ರೇಜಾವರಶ್ರೀಗಳ ಪಾದಯಾತ್ರೆಯಿಂದಾಗಿ ಕೆಲವರಾದರೂ ಎಳೆಯ ದ್ವಿಜರು ತ್ರಿಜರಾಗಿ ತ್ರಿಜತ್ವ ಪಡೆದು ತಮ್ಮದಲ್ಲದ ಜಾತಿಯಲ್ಲಿ ಮದುವೆಯಾಗಿ ಹೊಸ ಮನುಷ್ಯ ಸಂತಾನ ಹುಟ್ಟಲು ಶ್ರೀ ಪೇಜಾವರರ ಈ ಪಾದಯಾತ್ರೆ ಪ್ರಚೋದನೆಯನ್ನು ಉಂಟುಮಾಡಲಿ ಎಂದು ಕನಸು ಕಾಣುವೆ. ನನ್ನ ಕನಸು ನನಸಾಗಲಿ." ದೇವನೂರು ಮಹಾದೇವ (೨೧ ಮಂಗಳ ೨೦೧೦)
 
  • "ಪೇಜಾವರ ಶ್ರೀಪಾದರು ದಲಿತರ ಕೇರಿಗೆ ಭೇಟಿ ನೀಡಿ ದಲಿತೋದ್ಧಾರದ ಹೊಸ ಕನಸೇನೋ ಕಂಡರು. ಆದರೆ ಇದು ಬ್ರಾಹ್ಮಣ್ಯ ಆಧುನಿಕ ಸಂವೇದನೆಗೆ ಕಳಂಕ ತಂದಿದೆ ಎನಿಸುತ್ತದೆ. ಸಾಂವಿಧಾನಿಕ ಹಕ್ಕು ಮತ್ತು ನ್ಯಾಯದ ನೆಲೆಯಲ್ಲಿ ಮಾತ್ರ ಬದಲಾಗಬೇಕಾದ ಬದಲಾಗಿರುವ ಬ್ರಾಹ್ಮಣ (ಜಾತಿಯಲ್ಲ) ವರ್ಗ ಪೇಜಾವರರ ಪಾದಯಾತ್ರೆಯಿಂದ ಭಾರಿ ಅವಮಾನ ಅನುಭವಿಸುತ್ತಿದೆ.
    ಪೇಜಾವರರ ಸಾಮರಸ್ಯ ಸ್ಥಾಪನೆ ಎಂಬುದು ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಕರೆತಂದಂತೆ ಎಂಬುದೇ ನಮ್ಮಂತಹ ಯುವ ಬ್ರಾಹ್ಮಣರ ಅನಿಸಿಕೆ. ಸಂವಿಧಾನ ನಿಷ್ಟೆ ಕಾನೂನು ಬದ್ದ ಜೀವನ ತತ್ವ ಪಾಲಿಸುವ ಬ್ರಾಹ್ಮಣವರ್ಗ ಈ ಬಗ್ಗೆ ಖಂಡಿತಾ ಪಾಪಪ್ರಜ್ಞೆ ಬೆಳೆಸಿಕೊಳ್ಳಬಾರದು."-ಸಂಹಿತಾ ಜಿ.ಪಿ (೨೧ ಮಂಗಳ ಪ್ರಜಾವಾಣಿ)

 

  • "ಪೇಜಾವರ ಮಥಾದೀಶರು ಈ ನಾಡಿನ ಎಲ್ಲಾ ಮಠಾಧೀಶರಿಗಿಂತ ಹೆಚ್ಚು ಭಿನ್ನ. ಹೀಗಾಗಿ ಅವರಿಗೆ ಪ್ರಚಾರ ಸಿಕ್ಕಷ್ಟೆ ಪ್ರತಿರೋಧಗಳೂ ಎದುರಾಗುತ್ತವೆ. ತಮ್ಮದೇ ವಿದ್ಯಮಾನಗಳಿಂದ ೪೦ ವರ್ಷಗಳಿಂದಲೂ ಪ್ರಗತಿ ಪರರಂತೆಯೇ ’ಪೋಸು’ ಕೊಡುತ್ತಾ ಬಂದಿದ್ದಾರೆಂದು ಟೀಕಿಸುವುದರ ಜೊತೆಗೆಯೇ ದಲಿತರ ಪರವಾಗಿ ಪಾದಯಾತ್ರೆ ಉಪವಾಸ ಕೈಗೊಳ್ಳುತ್ತಿರುವುದನ್ನು ಸ್ವಾಗತಿಸಬಹುದು.

ವೈಷ್ಣವ ದೀಕ್ಷೆಯ ಮಾತನಾಡುತ್ತಿರುವುದೂ ಸುದ್ದಿಯಾಗುತ್ತಿದೆ. ಇದೆಲ್ಲದರಿಂದ ಯಾರಿಗೇನು ಪ್ರಯೋಜನವೆಂದು ಆಲೋಚಿಸುವ ಅಗತ್ಯವಿದೆಯೆಂಬ ಭಾವನೆ ನನ್ನದು. ದಲಿತಕೇರಿಗೆ ಹೋಗಿ ಬಂದರೂ ಕೃಷ್ಣ ಮಠದಲ್ಲಿ ಸರ್ವರಿಗೂ ಸಹ ಭೋಜನ ವ್ಯವಸ್ಥೆ ಕಲ್ಪಿಸುವ ಗೊಡವೆಗೆ ಮಾತ್ರ ಮುಂದಾಗಲಿಲ್ಲ. ಮಸೀದಿಯನ್ನು ಉರುಳಿಸಿದಾಗ ಚಪ್ಪಾಳೆತಟ್ಟಿ ಹರ್ಷಿಸಿದವರು. ಬಿಜೆಪಿ ಅಧಿಕಾರ ಹಿಡಿದಾಗ ಹೆಚ್ಚೇ ಹಿಗ್ಗಿದವರು ಪೇಜಾವರರು. ಆದರೇನು? ರಾಮಮಂದಿರ, ಮಸೀದಿ ಎರಡನ್ನೂ ಬಿಜೆಪಿಯವರು ಮರೆತರು. ’ಗೋವುಗಳನ್ನು ರಕ್ಷಿಸಿ ಸರ್ಕಾರ ಉಳಿಸಿ’ ಅನ್ನುತ್ತಾರೆಯೆ ಹೊರತು ಭ್ರಷ್ಟರನ್ನು, ಕಳ್ಳಗಣಿ ರಾಜಕಾರಣಿಗಳನ್ನು ಆಚೆಗಟ್ಟಿ ಅನ್ನುವುದಿಲ್ಲ.

ಈಗ ನೋಡಿದರೆ ವೈಷ್ಣವ ದೀಕ್ಷೆ ನೀಡುತ್ತೇನೆಂದು ದಲಿತರ ಮೇಲೆ ಕರುಣೆ ತೋರುವ ಅವರ ವಿನೂತನ ಕಾರ್ಯಕ್ಕೆ ದಲಿತರೂ ಮುಂದೆ ಬರುತ್ತಿಲ್ಲ. ಇದು ಕೂಡಾ ಒಂದು ರೀತಿ ಮತಾಂತರದ ಒಂದು ಭಾಗವೇ ಅಲ್ಲವೇ? ಇದರಿಂದ ಸಮಾನತೆ ಬರಲು ಸಾಧ್ಯವೆ?
ಮಾದಿಗರನ್ನು ಮಾಧ್ವರನ್ನಾಗಿ ಮಾಡುವ ಬದಲು ಮನುಷ್ಯರ ಜೊತೆ ಮನುಷ್ಯರಂತೆ ನಡೆದುಕೊಳ್ಳಿರೆಂದು ಮೇಲ್ಜಾತಿಯವರಿಗೆ ತಿಳಿಹೇಳುವ ಧೈರ್ಯ ತೋರಬೇಕಿದೆ... ದಲಿತರೊಂದಿಗೆ ಉಂಡುಟ್ಟು ಬೆರೆತು ಅಕ್ಷರ ಕಲಿಸಿ ಬ್ರಾಹ್ಮಣ-ಮಾದಿಗರ ಮದುವೆ ಮಾಡಿಸಿ ಕಲ್ಯಾಣಿಕ್ರಾಂತಿ ಮಾಡಿದ ಈ ಕ್ರಾಂತಿಕಾರಿ ಕೂಡ ಮೂಲತಹಃ ಬ್ರಾಹ್ಮಣನೆ! ಪೇಜಾವರರೇಕೆ ಆಧುನಿಕ ಬಸವಣ್ಣನಾಗಬಾರದು? ಬೌದ್ದ, ಇಸ್ಲಾಂ, ಕ್ರೈಸ್ತರಾಗಿ ಎಲ್ಲಿ ಮತಾಂತರಗೊಂಡಾರೋ ಎಂಬ ದಿಗಿಲಿನಿಂದಾಗಿ ದೀಕ್ಷೆಕೊಡಲು ಹೊರಟಂತಿರುವ ಯತಿಗಳು ತಾವೂ ಅನ್ಯಧರ್ಮೀಯರಂತೆ ದಲಿತರಿಗೆ ಮಾನವೀಯ ಸೌಲಭ್ಯ, ಶಿಕ್ಷಣ, ಆತ್ಮಾಭಿಮಾನ ಮುಕ್ಕಾಗದಂತಹ ಬಾಳಿನ ಬರವಸೆ ಕೊಡುವುದು ಮಖ್ಯವಾಗುತ್ತದೆ.
...ದಲಿತರನ್ನು ಅವರಿರುವಂತೇಯೇ ಸ್ವೀಕರಿಸಲೇನು ಅಡ್ಡಿ? ಮಾಂಸಾಹಾರವಂತೂ ಈಗ ಎಲ್ಲರ ಆಹಾರವಾಗುತ್ತಿದೆ ಶೇಕಡವಾರಿನಂತೆ. ಆಹಾರಕ್ಕಿಂತ ಆಚಾರಕ್ಕಿಂತ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡುವುದು ಇಂದಿನ ಆಧುನಿಕ ಯುಗದಲ್ಲಿ ಯೋಗ್ಯವಲ್ಲವೆ ? ಆರೊಗ್ಯಕರವಲ್ಲವೆ ?" -ಬಿ.ಎಲ್.ವೇಣು (೨೨ ಬುಧ ೨೦೧೦ ಪ್ರಜಾವಾಣಿ)

 
ಇನ್ನೂ ಕೆಲವು ಪತ್ರಗಳು ಪ್ರಕಟವಾಗಿವೆ. ಪ್ರಜ್ಞಾವಂತ ಬ್ರಾಹ್ಮಣರು ಸಂಹಿತಾ ಅವರ ಪ್ರತಿಕ್ರಿಯೆಯನ್ನು ಉಗ್ರವಾಗಿ ವಿರೋಧಿಸಿದ್ದಾರೆ. ಹಿಂದೂ ಹೆಸರಿನ ಅಡಿಯಲ್ಲಿ ಎಲ್ಲರೂ ಒಂದಾಗಬೇಕೆಂಬ ಅಪೇಕ್ಷೆ ಎಲ್ಲರಿಗೂ ಇದೆ. ಪೇಜಾವರರು ಇಂಥ ಅಪೇಕ್ಷೆಯ ಸೂಪರ್ ಪ್ರತಿನಿಧಿ ಎನ್ನಬಹುದು. ಆದರೆ! ಜಾತಿಗಳು ಇರುವ ಹಾಗೆಯೆ ಇದ್ದು ಒಂದಾಗುವುದು ಹೆಚ್ಚಿನ ಮೇಲು ಜಾತಿಯವರ ಅಭಿಪ್ರಾಯ. ಯತಿಗಳದೂ ಇದಕ್ಕಿಂತ ಭಿನ್ನ ಧೋರಣೆ ಅಲ್ಲ. ಅವರು ಜಾತಿವಿನಾಶಕ್ಕೆ ಕೈ ಹಾಕಲು ಹೆದರಿದಂತಿದೆ. ಆಗ ಬ್ರಾಹ್ಮಣ್ಯದ ಅಸ್ತಿತ್ವದ ಪ್ರಶ್ನೆ ಇರಲಿ, ಪೇಜಾವರಶ್ರೀಗಳು ಎಲ್ಲಿ ಇರುತ್ತಾರೆ, ಹೇಗೆ ನಮಗೆ ಸಿಗಬಹುದು ಎಂಬುದೆ ಅನುಮಾನ! ಧರ್ಮ ಮಠದಲ್ಲಿ ಮಾತ್ರ ಇರುವುದಿಲ್ಲ. ಅದು ಆ ಮಠವನ್ನು ನಿಯಂತ್ರಿಸುವ ಶಕ್ತಿಗಳಲ್ಲಿ ಅಡಗಿರುತ್ತದೆ. ಜಾತಿ ವರ್ಗದಂತೆ ಅಲ್ಲ, ಅದು ಮಹಾಶೋಷಕ, ಅವಕಾಶವಾದಿ. ಜಾತಿಯ ಕುಸಿತ ಮೇಲು ಜಾತಿಯ ಅವಕಾಶಗಳ ಪತನ ಎಂಬುದು ಅವರಲ್ಲಿ ದಾಖಲಾಗಿದೆ.
 
ದಲಿತರು ಕೇಳುತ್ತಿರುವುದೇ ಅವಕಾಶಗಳನ್ನು. ಅಂಥ ಅವಕಾಶಗಳ ಕೊರತೆಯಾದರೆ ಅವರು ಮೇಲೆ ಬರುವುದು ಎಂತು? ದೀಕ್ಷೆ ಒಂದು ಧೋರಣೆ, ಅಭಿಪ್ರಾಯ ಅದನ್ನು ಬದಲಿಸಬಹುದು. ಆರ್ಥಿಕ ಅವಕಾಶಗಳನ್ನು ಅಲುಗಾಡಿಸಲು ಸಾಧ್ಯವೆ? ಅವಕಾಶಗಳಿರುವುದರಿಂದಲೆ ಸವರ್ಣೀಯರು ಮೆರೆಯುತ್ತಾರೆ, ಕಡಿಮೆಯಾದಾಗ ಬ್ರಾಹ್ಮಣರ ಮೇಲೆಯೆ ಎಗರುತ್ತಾರೆ. ಈಗ, ಈ ಸಂದರ್ಭದಲ್ಲಿ ದಲಿತರ ಎಲ್ಲ ಮಾತುಗಳು (ಇಲ್ಲಿ ಪ್ರತಿಕ್ರಿಯಿಸಿರುವವರನ್ನು ಸೇರಿಸಿಕೊಂಡು), ಮಾಧ್ವಯತಿಗಳಿಗೆ ಬೇಡಿದ ಬಿನ್ನಹಗಳಾಗಿವೆ!!