ಕರ್ನಾಟಕದ ಹರ್ನಿಯಾ ಸರಕಾರಕ್ಕೆ ಮದ್ದು-ಪಕ್ಷಾಂತರ ಕಾಯ್ದೆಗೆ ಸರ್ಜರಿಯ ಅನಿವಾರ್ಯತೆ

 

’ಸಹನಾ’            
               
ಕರ್ನಾಟಕದ ರಾಜಕಾರಣ ಇತ್ತೀಚಿನ ದಿನಗಳಲ್ಲಿ ಅತ್ಯಂತ ವರ್ಣರಂಜಿತವಾಗಿದೆ. ರಾಜಕೀಯ ಎಂದರೆ ಅಸಹ್ಯ ಹುಟ್ಟಿಸುವಂತ ವಾತಾವರಣವನ್ನ ಕರ್ನಾಟಕದ ಜನ ನೋಡುವಂತಾಗಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ. ಯಡಿಯೂರಪ್ಪ ಸರ್ಕಾರದ ನಾಟಕೀಯ ರಾಜಕೀಯ ಬೆಳವಣಿಗೆಗಳು ಈಗ ದೇಶದ ಮೂಲೆ ಮೂಲೆಗಳಲ್ಲಿ, ಮಾದ್ಯಮಗಳಲ್ಲಿ ದಿನನಿತ್ಯ ಚರ್ಚೆಗೆ ಗ್ರಾಸವಾಗಿರುವುದೇ ಇದಕ್ಕೆ ಸಾಕ್ಷಿ. ೧೯೮೫ ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ತಂದ ಮಹತ್ವದ ಪಕ್ಷಾಂತರ ನಿಷೇಧ ಕಾಯ್ದೆ ಇಪ್ಪತೈದು ವರ್ಷಗಳಲ್ಲೇ ತನ್ನ ಸತ್ವ ಕಳೆದುಕೊಳ್ಳುವಂತೆ ಮಾಡಿದ ಕೀರ್ತಿ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ, ಅವರ ’ಆಪರೇಷನ್ ಕಮಲ’ಕ್ಕೆ ಸಲ್ಲುತ್ತದೆ! ಪಕ್ಷಾಂತರ ನಿಷೇಧ ಕಾಯ್ದೆ ಈಗ ಹಾಸ್ಯಾಸ್ಪದವಾಗಿದ್ದು ಅದಕೊಂದು ತಿದ್ದುಪಡಿಯ ತೀವ್ರ ಅಗತ್ಯ ಕಾಣುತ್ತಿದೆ. ಸರ್ಕಾರದ ರಚನೆ ಹಾಗು ಅಧಿಕಾರ ಹಿಡಿಯುವ ನೆಪದಲ್ಲಿ ಆರಂಭವಾದ ಬಿಜೆಪಿಯ ’ಆಪರೇಷನ್ ಕಮಲ’ ಈಗ ಬೃಹದಾಕಾರವಾಗಿ ಬೆಳೆದು ಅದೇ ಪಕ್ಷದ ಬುಡ ಅಲ್ಲಾಡಿಸುತ್ತಿದೆ. ಕರ್ನಾಟಕ ರಜಕೀಯದ ಈ ದೊಂಬರಾಟ ಗೌರವಯುತ ರಾಜಕಾರಣಿಗಳ (ಅಂಥವರು ಇದ್ದರೆ!) ನೆಮ್ಮದಿ ಕೆಡಿಸಿದೆ ಅಂತಾನೆ ಹೇಳ್ಬೇಕು.
ಕಳೆದ ಎರಡೂವರೆ ವರ್ಷಗಳಿಂದಲೂ ಅಧಿಕಾರಕ್ಕಾಗಿ ಬಿಜೆಪಿಯಲ್ಲಿ ನಡೆಯುತ್ತಿರುವ ಕಾದಾಟ ಈಗೇನು ಗುಟ್ಟಾಗಿ ಉಳಿದಿಲ್ಲ. ಒಂದು ಕಡೆ ರೆಡ್ಡಿ ಬ್ರದರ್ಸ್ ನಿರಂತರವಾಗಿ ಸರ್ಕಾರದ ಮೇಲೆ ಹಿಡಿತ ಸಾಧಿಸಲು ತಮ್ಮ ಕೈಲಾದ ಎಲ್ಲಾ ಪ್ರಯತ್ನ ಗಳನ್ನು ಮಾಡುತ್ತಲೇ ಇದ್ದಾರೆ. ಇತ್ತೀಚಿನ ಸಂಪುಟ ವಿಸ್ತರಣೆ ವೇಳೆ ಯಡಿಯೂರಪ್ಪ ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಅವರಿಗೆ ಬೇಕಾದ ಶೋಭಾ ಕರಂದ್ಲಾಜೆ, ಸೋಮಣ್ಣ, ರಾಮದಾಸ್, ನಾರಾಯಣ ಸ್ವಾಮಿ, ಸಿ.ಸಿ ಪಾಟೀಲ್ ಹಾಗು ವಿಜಯ ಶಂಕರ್ ಅವರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ತಾನು ಮಹತ್ವದ ಸಾಧನೆ ಮಾಡಿದೆ, ಸೆಡ್ಡು ಹೊಡೆದೆ ಅಂತಾ ಬಿಗುತ್ತಿರುವಾಗಲೇ ಅವರ ಸರ್ಕಾರದ ಬುಡಕ್ಕೆ ಬಿಸಿ ತಟ್ಟಿತ್ತು. ಹನ್ನೊಂದು ಮಂದಿ ಬಿಜೆಪಿ ಶಾಸಕರು ಹಾಗು ಐವರು ಪಕ್ಷೇತರ ಶಾಸಕರು ತಿರುಗಿ ಬಿದ್ದು ಸರಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ್ದರು. ಆದರೆ ಯಡಿಯೂರಪ್ಪ ವಿಧಾನ ಸಭೆಯಲ್ಲಿ ಎರಡು ಬಾರಿ ವಿಶ್ವಾಸ ಮತಯಾಚಿಸಿ ಸರಕಾರವನ್ನು ಬಚಾವ್ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಿದ್ದು, ಅದಕ್ಕಾಗಿ ವಿಧಾನಸಭೆಯಲ್ಲಿ ನಡೆದ ಮಾರಾಮಾರಿಯಾಗಿದ್ದು, ವಿಧಾನ ಸಭೆಯ ಅಧ್ಯಕ್ಷರನ್ನು ಯಡಿಯೂರಪ್ಪ ಚಾಣಾಕ್ಷತನದಿಂದ ಬಳಸಿಕೊಂಡ ರೀತಿ ಮಹಾನ್ ರಾಜಕೀಯ ಕುತಂತ್ರಗಾರಿಕೆ ಅಲ್ಲದೆ ಮತ್ತೇನೂ ಅಲ್ಲ! 
 
೧೧೦ ಶಾಸಕರನ್ನ ಹೊಂದಿದ್ದ ಬಿಜೆಪಿ ’ಆಪರೇಷನ್ ಕಮಲ’ದ ಮೂಲಕ, ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರನ್ನ ಸೆಳೆದು ಅವರಿಂದ ರಾಜೀನಾಮೆ ಕೊಡಿಸಿ, ಮತ್ತೆ ಚುನಾವಣೆ ಮೂಲಕ ತನ್ನ ಸಂಖ್ಯೆ ಯನ್ನ ೧೧೭ ಕ್ಕೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದು ಈಗ ಹಳೇ ಸುದ್ದಿ! ಬಿಜೆಪಿ ಪಾಳೆಯದಲ್ಲಿ ಕಂಪನ ಏರ್ಪಟ್ಟಿದ್ದು ಸೆಪ್ಟೆಂಬರ್ ೬ ರಂದು. ಹನ್ನೊಂದು ಮಂದಿ ಬಿಜೆಪಿ ಶಾಸಕರು ರಾಜಭವನಕ್ಕೆ ತೆರಳಿ ಯಡಿಯೂರಪ್ಪ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ ದಿನದಿಂದ ರಾಜ್ಯದ ರಾಜಕೀಯ ರಂಗೇರಿತು ಅಂತ ಹೇಳಬೇಕು. ದಿನ ಬೆಳಗಾಗುವುದರೊಳಗೆ ಬಿಜೆಪಿ ಸರ್ಕಾರ ಬಿದ್ದೇಹೋಯಿತು ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು. ರಾಜ್ಯಪಾಲರ ಅಂಗಳದಲ್ಲಿ ಜೆಡಿಎಸ್-ಕಾಂಗ್ರೆಸ್ಸ್ ಓಡಾಟ, ಪರ್ಯಾಯ ಸರ್ಕಾರದ ರಚನೆಯ ಮಾತುಗಳಿಗೆ ಎಡೆಮಾಡಿಕೊಟ್ಟಿತ್ತು. ಕಾಂಗ್ರೆಸ್ಸ್-ಜೆಡಿಎಸ್ ಪಾಳೆಯದಲ್ಲಿ ಅಧಿಕಾರದ ಹನಿಮೂನ್ ನಡೆಸುವ ಕನಸು ಹಾರಾಡತೊಡಗಿದ್ದವು. ಆದರೆ ಸಭಾದ್ಯಕ್ಷರ ಪರಮಾಧಿಕಾರವನ್ನ ಬಳಸಿಕೊಳ್ಳುವ ಮೂಲಕ ಬಿಜೆಪಿ ಹಿಂದೆಮುಂದೆ ನೋಡದೆ ಐವರು ಪಕ್ಷೇತರರು ಹಾಗು ಹನ್ನೊಂದು ಮಂದಿ ಶಾಸಕರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವ ಮೂಲಕ ತಿರುಗೇಟು ನೀಡಿ, ಎಲ್ಲರ ಲೆಕ್ಕಾಚಾರವನ್ನು ಅಲ್ಲೋಲ ಕಲ್ಲೋಲ ಮಾಡಿತು. ಸರಕಾರವನ್ನು ಉಳಿಸಿಕೊಳ್ಳಲು ತನ್ನ ’ಆಪರೇಷನ್ ಕಮಲ’ದ ಮೂಲಕ ಜೆಡಿಎಸ್ ನ ಚನ್ನಪಟ್ಟಣದ ಶಾಸಕ ಅಶ್ವಥ್ ಹಾಗು ಕಾಂಗ್ರೆಸ್ ನ ಬೇತಮಂಗಲ ನಾರಾಯಣಸ್ವಾಮಿ ಮತ್ತು ಚಿತ್ರದುರ್ಗ ಜಿಲ್ಲೆಯ ಶಾಸಕ ರಾಮಚಂದ್ರ ಅವರನ್ನು ಬೇಕಾಬಿಟ್ಟೀ ಬೆಲೆ ಕಟ್ಟಿ ತನ್ನ ಬಲೆಗೆ ಕೆಡವಿಕೊಂಡಿತು.
ಶಾಸಕರ ಅನರ್ಹತೆ ಉಚ್ಹ ನ್ಯಾಯಾಲಯದಲ್ಲಿ ಬಿಜೆಪಿ ಪರವಾಗಿರುವುದರಿಂದ ಈಗ ಅತೃಪ್ತ ಶಾಸಕರು ಸರ್ವೋಚ್ಹ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಅಲ್ಲಿ ತಿರ್ಮಾನ ಆಗುವವರೆಗೂ ಯಡಿಯೂರಪ್ಪ ಸರ್ಕಾರ ಸುರಕ್ಷಿತ. ಬಿಜೆಪಿ ಸರ್ಕಾರವನ್ನ ಕೆಡುವಲು ಕಾಂಗ್ರೆಸ್ಸ್-ಜೆಡಿಎಸ್ ಪಕ್ಷಗಳು ಹೆಣೆದಿದ್ದ ಬಲೆ ಮೇಲ್ನೋಟಕ್ಕೆ ಯಶಸ್ವಿ ಆಗದಿರುವುದು ಸ್ಪಷ್ಟ. ಆದರೆ ಈ ಸರಕಾರವನ್ನ ಮನೆಗೆ ಕಳಿಸಲೇಬೇಕು ಎಂಬ ನಿರ್ಧಾರ ಮಾಡಿರುವ ಕಾಂಗ್ರೆಸ್ಸ್ ಮುಖಂಡರಾಗಲಿ, ಜೆಡಿಎಸ್ ದಂಡನಾಯಕರಾದ ದೇವೇಗೌಡರಾಗಲಿ ಹೇಗೆ ಸುಮ್ಮನಿರುತ್ತಾರೆ ಎನ್ನುವುದು ಕಾದು ನೋಡಬೇಕಿದೆ. ಈಗ ಗಾಯಗೊಂಡಿರುವ ಹುಲಿಯಂತಾಗಿರುವ ದೇವೇಗೌಡರು ಮುಂದೆ ಹೇಗೆ ತಮ್ಮ ಕುಮಾರನ ಮೂಲಕ ದಾಳ ಹಾಕುತ್ತಾರೆ ಅನ್ನೋದನ್ನ ಈಗಲೇ ಹೇಳಲು ಸಾದ್ಯವಿಲ್ಲ. ಕಾಂಗ್ರೆಸ್ಸ್ ಜೊತೆ ಸೇರಿ ಸಿದ್ಧರಾಮಯ್ಯನವರನ್ನು ಸಿಎಂ ಮಾಡುವ ತವಕದಲ್ಲಿದ್ದ ಜೆಡಿಎಸ್ ನಾಯಕರಿಗೆ ಈಗ ಹೆಚ್ಚು ಬೇಸರ ಆಗಿರುವುದಂತೂ ನಿಜ. ಮುಖ್ಯಮಂತ್ರಿ ಪಟ್ಟದ ಕನಸಿನಲ್ಲಿದ್ದ ಸಿದ್ಧರಾಮಯ್ಯನವರಿಗೆ ರಾಜ್ಯ ಉಚ್ಚನ್ಯಾಯಾಲಯದ ತೀರ್ಪು ನಿರಾಸೆ ತಂದಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯಕ್ಕೂ ಇದು ಒಂದು ಹಿನ್ನೆಡೆ ಎನ್ನಬಹುದು. ಇವರನ್ನು ನಂಬಿ ಬಂದ ಹದಿನಾರು ಮಂದಿ ಶಾಸಕರ ರಾಜಕೀಯ ಭವಿಷ್ಯ ಈಗ ಡೋಲಾಯಮಾನವಾಗಿದೆ. ಬಿಜೆಪಿ ಸರ್ಕಾರವನ್ನ ಉರುಳಿಸುವುದೊಂದೇ ದಾರಿ ಎಂಬ ಸ್ಪಷ್ಟ ನಿರ್ಧಾರಕ್ಕೆ ವಿರೋಧ ಪಕ್ಷಗಳು ಬಂದಾಗಿದೆ.
 
ಇಷ್ಟೆಲ್ಲಾ ರಗಳೆಗಳ ಮಧ್ಯ ನೆಮ್ಮದಿಯಾಗಿ ಸರಕಾರವನ್ನ ನಡೆಸೋ ಸ್ತಿತಿಯಲ್ಲಿ ಮುಖ್ಯಮಂತ್ರಿಗಳಿಲ್ಲ. ಬಿಜೆಪಿ ಶಾಸಕರಲ್ಲೇ ಕೆಲವರಿಗೆ ತಮ್ಮ ಸರ್ಕಾರದ ಆಡಳಿತ ಶೈಲಿ ಬಗ್ಗೆ ಅಪಸ್ವರ ಇದೆ, ರೆಡ್ಡಿ ಬ್ರದರ್ಸ್ ಹೊಂಚುಹಾಕುತ್ತಿದ್ದಾರೆ. ಈಗ ಹಾಲಿ ಖಾಲಿ ಇರುವ ಆರು ಸಚಿವ ಸ್ಥಾನವನ್ನು ತುಂಬಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಶಿಸ್ತು ಬದ್ದ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಗೆ ಈಗ ಸಂಪುಟ ವಿಸ್ತರಣೆ ಕೆಲಸ ಜೇನುಗೂಡಿಗೆ ಕೈಹಾಕಿದಂತೆ ಆಗುತ್ತಿದೆ. ಈಗಾಗ್ಲೇ ೨೨೪ ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಅನರ್ಹಗೊಂಡ ಶಾಸಕರ ಸಂಖ್ಯೆ ೧೬, ಹಾಗೇ ಎರಡನೇ ಬಾರಿಗೆ ’ಆಪರೇಶನ್ ಕಮಲ’ಕ್ಕೆ ತುತ್ತಾದ ೩ ಮಂದಿ ಸೇರಿ ೧೯ ಶಾಸಕರು ಹೊರಗಿದ್ದಾರೆ. ಈಗ ೨೦೫ ಶಾಸಕರ ಸಂಖ್ಯೆ ಹೊಂದಿರುವ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ೧೦೬ ಶಾಸಕರ ಜೊತೆಗೆ ಪಕ್ಷೇತರ ಶಾಸಕರೊಬ್ಬರ ಬೆಂಬಲ ಪಡೆದು ೧೦೭ ಸದಸ್ಯ ಬಲ ಹೊಂದಿದೆ. ವಿರೋಧ ಪಕ್ಷವಾದ ಜೆಡಿಎಸ್ ೨೭ ಹಾಗು ಕಾಂಗ್ರೆಸ್ ೭೧ ಶಾಸಕರನ್ನು ಹೊಂದಿದೆ. ಅಲ್ಪ ಬಹುಮತದ ಸರ್ಕಾರ ಹೊಂದಿರುವ ಯಡಿಯೂರಪ್ಪ ಮುಂದಿನ ದಿನಗಳನ್ನ ನಿಭಾಯಿಸುತ್ತಾರೆ ನೋಡಬೇಕಿದೆ.
 
ಇದೆಲ್ಲವನ್ನು ಇಲ್ಲಿ ಹೇಳುವುದಕ್ಕೆ ಕಾರಣ ಇದೆ. ಕರ್ನಾಟಕ, ಭಾರತದದಲ್ಲಿ ತನ್ನದೇ ಆದ ರಾಜಕೀಯ ಇಮೇಜನ್ನು ಉಳಿಸಿಕೊಂಡು ಬಂದಿದ್ದ ರಾಜ್ಯ. ಇಲ್ಲಿನ ಮತದಾರರು ಪ್ರಜ್ಞಾವಂತರು, ಜವಾಬ್ದಾರಿಯಾಗಿ ನಡೆದುಕೊಳ್ಳುವಲ್ಲಿ ಹೆಸರಾದವರು. ಇಡೀ ರಾಷ್ಟ್ರ‍ ರಾಜಕಾರಣದಲ್ಲಿ ಕರ್ನಾಟಕದ ರಾಜಕಾರಣ ಭಿನ್ನವಾಗಿರುತ್ತಿತ್ತು. ಆದರೀಗ ರಾಜ್ಯದ ರಾಜಕೀಯ ಅಧೋಗತಿಗೆ ಬಂದು ನಿಂತಿದೆ, ರಾಜಕೀಯ ಮೌಲ್ಯಗಳು ನೆಲಕಚ್ಚಿವೆ. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಜೆ.ಹೆಚ್ ಪಟೇಲ್, ಬಂಗಾರಪ್ಪ, ವೀರೇಂದ್ರ ಪಾಟೀಲ್ ರಂತಹ ನಾಯಕರನ್ನ ಕಂಡ ರಾಜ್ಯದಲ್ಲೀಗ ’ಆಪರೇಷನ್ ಕಮಲ’ದ ಅಟ್ಟಹಾಸ ನಡೀತಿದೆ. ಈ ಆಪರೇಷನ್ಗೆ ನಾಂದಿ ಹಾಡಿ ನಿಷ್ಠೆ, ತತ್ವ, ಸಿದ್ದಾಂತ, ಹಿಂದುತ್ವ  ಎಂದೆಲ್ಲ ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಗೆ ಈಗ ತಾನು ಹಿಡಿದ ದಾರಿ, ಸಾರಿದ ತತ್ವಗಳನ್ನೆ ನುಂಗಿ ನೀರು ಕುಡಿಯುತ್ತಿದೆ!
 
ಯಡಿಯೂರಪ್ಪನವರ ಸರಕಾರದ ಭ್ರಷ್ಟಾಚಾರಕ್ಕೆ ಆರ್ ಎಸ್ ಎಸ್ ನ ಸಂಪೂರ್ಣ ಬೆಂಬಲವಿದೆ ಅನ್ನೋದು ಈಗ ಚರ್ಚೆ ಆಗುತ್ತಿದೆ. ಇಲ್ಲದಿದ್ದರೆ ತನ್ನನ್ನು ತಾನು ’ತಾತ್ವಿಕ’ ಎಂದು ಕರೆದುಕೊಳ್ಳೋ ಆರ್ ಎಸ್ ಎಸ್ ಸರ್ಕಾರವನ್ನು ಸರಿದಾರಿಯಲ್ಲಿ ನಡೆಸುವ ಮಾರ್ಗದರ್ಶನ ನೀಡಬೇಕಿತ್ತು! ಪ್ರತಿಯೊಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಯಡಿಯೂರಪ್ಪ ಆರ್ ಎಸ್ ಎಸ್ ಕಚೇರಿಗೆ ಓಡಿ ಹೋಗ್ತಿರುವುದನ್ನು ರಾಜ್ಯದ ಜನ ಗಮನಿಸಿದ್ದಾರೆ. ಸುಮ್ನೆ ಹೋಗಿ ಪರಿವಾರದವರ ಮುಂದೆ ಕೈ ಕಟ್ಟಿ ನಿಲ್ಲಲಿಕ್ಕೆ ಯಡಿಯೂರಪ್ಪ ಅವರಿಗೇನು ಬೇರೆ ಕೆಲಸ ಇಲ್ಲವೆ??? ಗಣಿಧಣಿಗಳನ್ನ ಕಂಟ್ರೋಲ್ ಮಾಡುವಲ್ಲೂ ಅರೆಸೆಸ್ ಮುಗುಂ ಆಗಿರೋದು ಯಾವ ಕಾರಣಕ್ಕೆ? ಇವರೆಲ್ಲರೂ ಬಿಜೆಪಿಯ ಥಿಂಕ್ ಟ್ಯಾಂಕ್. ಹೀಗೆ ಬಿಜೆಪಿ ಸರ್ಕಾರ ಬೇಕಾದ್ದು, ಬೇಡವಾದದ್ದು ಎಲ್ಲಾನು ಮಾಡ್ತಾ ಮುಖಕ್ಕೆ ಮಂಗಳಾರತಿ ಎತ್ತಿಸಿಕೊಳ್ತಾಯಿದ್ರೆ "ನಾವಿರೋದೆ ಹೀಗೆ" ಅಂತಾ ಈ ಪರಿವಾರದವರೆಲ್ಲರೂ ಯಡ್ಡಿ ಅವ್ರಿಗೆ ಮುನ್ನುಗಲು ಹೇಳಿಬಿಟ್ಟಿದ್ದಾರೆ ಅನ್ನಿಸುತ್ತೆ. ಅಧಿಕಾರಕ್ಕಾಗಿಯೇ ತಮ್ಮ ಸೋ ಕಾಲ್ಡ್  ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಆರ್ ಎಸ್ ಎಸ್, ಸಂಘ ಪರಿವಾರದಂತ ಸಂಘಟನೆಗಳು ಬಿಜೆಪಿ ಸರ್ಕಾರದ ಎಲ್ಲಾ ಆಟಗಳನ್ನು ನೋಡಿ ಸಹಿಸಿಕೊಂಡು ಸುಖಪಡುತ್ತಿದ್ದಾರೆ. ರಾಜ್ಯದಲ್ಲಿ ನಡಿತಿರೋ ಅನೈತಿಕ ರಾಜಕೀಯ ವಿದ್ಯಾಮಾನಗಳನ್ನ ನೋಡ್ತಿದ್ರೂ ಅರೆಸೆಸ್ ಮೌನವಾಗಿರೋದು ಯಾಕೆ? ಅನ್ನೋದನ್ನ ಅರ್ಥ ಮಾಡಿಕೊಳ್ಳದಷ್ಟು ದಡ್ಡನಲ್ಲ ಮತದಾರ. ನಿಷ್ಠೆ, ತತ್ವ ಅಂತ ಕೂಗಾಡಿಕೊಳ್ಳುತ್ತಿದ್ದ ಬಿಜೆಪಿ, ಸಂಘ ಪರಿವಾರ, ಆರ್ ಎಸ್ ಎಸ್ ಗಳು ತಮ್ಮ ಸಿದ್ದಾಂತ, ತತ್ವವನ್ನ ಗಾಳಿಗೆ ತೂರಿ ಕೂರುತ್ತವೆ ಎನ್ನಲು ಇದೆಲ್ಲ ಸಣ್ಣ ಉದಾಹರಣೆಗಳಷ್ಟೇ.

ನೀವು ಈಗ ಎಲ್ಲೇ ಬಿಜೆಪಿ ನಾಯಕರು ಮಾತನಾಡೋದನ್ನು ಕೇಳಿ. ನೀವು ಮಾಡಿಲ್ವ? ನೀವು ಇನ್ನೇನು ಮಾಡಿದ್ದು? ಎಂದು ವಿರೋಧ ಪಕ್ಷಗಳನ್ನ ಜರಿಯೋದು ಮಾಮೂಲಿ ಆಗಿದೆ.  ನೀವೂ ಮಾಡಿದ್ರಿ. ನಾವೂ ಮಾಡ್ತಿದ್ದೀವಿ ಅನ್ನುವುದೇ ಈಗ ಬಿಜೆಪಿಯವರ ಸತ್ಯ ಆಗಿದೆ. ಹೀಗಿರುವಾಗ ಬದಲಾವಣೆ ನಿರೀಕ್ಷೆ ಹೇಗೆ ಸಾದ್ಯ ಹೇಳಿ? ವಿಧಾನಸಭೆ ಅಧಿವೇಶನದಲ್ಲೂ ಅವ್ಯವಹಾರ, ಭ್ರಷ್ಟಚಾರದ ಕುರಿತ ಚರ್ಚೆಗಳು ಸಾಧ್ಯವೇ ಆಗ್ತಿಲ್ಲ! ವಿರೋಧ ಪಕ್ಷಗಳ ಕಾರ್ಯ ವೈಖರಿ ಕೂಡ ಇಲ್ಲಿ ಪ್ರಶ್ನಾರ್ಹ!
 
ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದಾಗ ಈ ಕೆಲಸವನ್ನ ಬೇರೆ ಪಕ್ಷ ಗಳು ಮಾಡುತ್ತಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪಕ್ಷಗಳು ಬೇರೆ ಬೇರೆ ಎಂಬುದನ್ನು ಬಿಟ್ಟರೆ ಅದರಲ್ಲಿರುವವರೆಲ್ಲ ಅವರೇ! ಅಲ್ಲಿದ್ದವರು ಇಲ್ಲಿ, ಇಲ್ಲಿದವರು ಅಲ್ಲಿ ಎಂಬಂತಾಗಿದೆ. ಯಾರಾದರೂ ರಾಜಕಾರಣಿಗಳು ಎದುರಿಗೆ ಸಿಕ್ಕರೆ ಸಾಮಾನ್ಯ ಜನ "ನೀವೀಗ ಯಾವ ಪಕ್ಷದಲ್ಲಿದ್ದೀರಿ??" 'ಅಂತಾ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
 
ಇದನ್ನೆಲ್ಲಾ ಗಮನಿಸಿದಾಗ, ರಾಜಕೀಯ ಪಕ್ಷಾಂತರದ ಬಗ್ಗೆ ದೇಶ ಈಗ ಮತ್ತಷ್ಟು ಸುದೀರ್ಘವಾಗಿ ಚರ್ಚೆಮಾಡಲು ಸಕಾಲವಾಗಿದೆ. ಒಬ್ಬ ರಾಜಕಾರಣಿ ಕೇವಲ ಅಧಿಕಾರದ ಆಸೆಗಾಗಿ ಒಂದುವಾರದಲ್ಲಿ ೩-೪ ಪಕ್ಷಗಳಿಗೆ ಹಾರಿ ಕುಂಟಬಿಲ್ಲೆ ಆಡುತ್ತಾನೆಂದರೆ ಅಂಥವನನ್ನು ರಾಜಕೀಯದಿಂದಲೇ ಬಾರ್ ಮಾಡಿಬಿಡುವ ಶಿಸ್ತಿನ ಕಾಯ್ದೆಯೊಂದರ ಅಗತ್ಯವಿದೆ. ಆಪರೇಷನ್ ಕಮಲವಾಗಲಿ, ಕೈಯಾಗಲೀ, ಕತ್ತರಿಯಾಗಲೀ ಯಾವುವೂ ನಿಲುಕಲಾರದಂತ ಕಟ್ಟುನಿಟ್ಟಿನ ಪಕ್ಷಾಂತರ ನಿಷೇಧ ಕಾಯ್ದೆ ಈಗ ನಮ್ಮ ರಾಜಕಾರಣಕ್ಕೆ ಬೇಕಾಗಿದೆ. ’ಆಪರೇಷನ್ ಕಮಲ’ದ ಹೆಸರಿನಲ್ಲಿ ಸರ್ವರೀತಿಯ ರಾಜಕೀಯ ಕುತಂತ್ರಿತನ, ಗೂಂಡಾಗಿರಿ ಮಾಡುತ್ತಿರುವ ಬಿಜೆಪಿ, ಆಪರೇಷನ್ ಕಮಲವನ್ನು ಹೆಮ್ಮರವಾಗಲು ಬಿಟ್ಟಲ್ಲಿ ಮುಂದೆ ಆ ಪಕ್ಷಕ್ಕೆ ಕಪ್ಪು ಚುಕ್ಕೆ ಶಾಶ್ವತ! ಈಗಿನ ರಾಜಕಾರಣಿಗಳಿಗೆ ರಾಜಕೀಯ ಒಂದು ರೀತಿ ಧಂದೆ ಆಗಿರುವುದರಿಂದ ನಮ್ಮ ಪ್ರತಿನಿಧಿಗಳು ಕೋಟಿ ಕೋಟಿ ಹಣ ಪಡೆದು ಆ ಪಕ್ಷದಿಂದ ಈ ಪಕ್ಷಕ್ಕೆ, ಇಲ್ಲಿಂದ ಮತ್ತೊಂದಕ್ಕೆ ಹಾರಿ ಕೋತಿಯಾಟ ಆಡುತ್ತಿದ್ದಾರೆ. ರೀತಿಯ ದೊಂಬರಾಟಕ್ಕೆ ಇತಿಶ್ರೀ ಹಾಡಲು  ಪಕ್ಷಾಂತರ ಕಾಯ್ದೆ ಗೆ ಕಟ್ಟುನಿಟ್ಟಿನ ತಿದ್ದುಪಡಿ ಅತಿಅವಶ್ಯಕ ಅನ್ನುವುದು ಸ್ಪಷ್ಟ.
 

ಮರಳಿ ಇನಿತೆನೆಗೆ