ನವೆಂಬರ್ ತಿಂಗಳು ಡಯಾಬಿಟಿಸ್ ಅರಿವನ್ನು ಹೆಚ್ಚಿಸಲು ಮೀಸಲು. ಇತ್ತೀಚಿನ ವರ್ಷಗಳಲ್ಲಿ ಡಯಾಬಿಟಿಸ್ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ವಯಸ್ಕರಲ್ಲಿ ಡಯಾಬಿಟಿಸ್ ಕಾಣಿಸಿಕೊಳ್ಳುವ ಕಾಲ ಮರೆತು ಬಿಡಿ! ಈಗ ನವಜಾತ ಶಿಶುಗಳು, ಮಕ್ಕಳು, ಯುವಜನರನ್ನೂ ಕಾಡದೆ ಪೀಡಿಸುತ್ತಿದೆ ಈ ಮಹಾಮಾರಿ. ಹಿಂದೆ ಡಯಾಬಿಟಿಸ್ ಅನ್ನು ’ಶ್ರೀಮಂತರ ಕಾಯಿಲೆ’ ಎಂದು ಕರೆಯಲಾಗುತ್ತಿತ್ತು. ಯಾವಾಗ ಈ ಹೆಸರು ಬಂತೋ ಗೊತ್ತಿಲ್ಲ, ಆದರೆ ಸಮಂಜಸ ಹೆಸರು. ಈಗ ಅದನ್ನು ಇನ್ನೂ ಸ್ವಲ್ಪ ಭಿನ್ನವಾಗಿ ’ಸೋಮಾರಿಗಳ ಕಾಯಿಲೆ’ ಎಂದೂ ಕರೆಯಬಹುದು. ನಮ್ಮ ಈ ಹೇಳಿಕೆಯಿಂದ ಡಯಾಬಿಟಿಸ್ ಇರುವವರಿಗೆ ಕೋಪ ಬರಬಹುದು-ಶ್ರೀಮಂತಿಕೆಯ ಆಪಾದನೆಯಾದರೆ ಸಹಿಸಿಕೊಳ್ಳಬಹುದು, ಆದರೆ ಸೋಮಾರಿತನದ್ದು-ಉಹುಂ. ಖಂಡಿತ ಇಲ್ಲ.
ನಮಗೆ ನಮ್ಮನ್ನೇ ಸೋಮಾರಿಗಳೆಂದು ಬೈದುಕೊಳ್ಳಬೇಕೆಂದೇನಿಲ್ಲ. ಆದರೆ ನಾವು ಬದುಕುತ್ತಿರುವ ದೈಹಿಕ ಚಟುವಟಿಕೆಗಳಿಲ್ಲದ ’ಜಡ’ ಜೀವನ ಶೈಲಿಯ ದೆಸೆಯಿಂದ ನಾವು ಹಲವಾರು ರೀತಿಯಲ್ಲಿ ಸೋಮಾರಿಗಳೇ.
ನಾವು ಇಲ್ಲಿ ಹೇಳುತ್ತಿರುವ ಡಯಾಬಿಟಿಸ್ ಪೂರಕ ಸೋಮಾರಿತನ ಸಂಪೂರ್ಣ ನಮ್ಮ ಆಯ್ಕೆಯದ್ದಲ್ಲ. ನಾವು ಬದುಕುತ್ತಿರುವ ರೀತಿಯಿಂದ ನಮ್ಮ ಮೇಲೆ ಆಪಾದಿಸಲ್ಪಟ್ಟದ್ದು ಎಂದುಕೊಳ್ಳಿ. ಹಿಂದೆ, ಬೆಳಿಗ್ಗೆ ಒಂದು ಗುಂಡು ಮುದ್ದೆ ಉಂಡು ಇಡೀ ಮಧ್ಯಾನ್ಹದವರೆಗೂ ಹೊಲದಲ್ಲೋ, ತನ್ನ ಕಸುಬಿನಲ್ಲೋ, ಕಾರ್ಖಾನೆಯಲ್ಲೋ ಬೆವರು ಕೀಳುವಂತೆ ದುಡಿಯುತ್ತಿದ್ದ ಕಾಲದಲ್ಲಿ ಡಯಾಬಿಟೀಸ್ ಇರಲಿಲ್ಲ. ಇದ್ದರೂ ಈ ಪಾಟಿ ವ್ಯಾಪಕವಾಗಿರಲಿಲ್ಲ. ಆಗ ದೇಹಕ್ಕೆ ದುಡಿತ, ಮನಸ್ಸಿಗೆ ಉಲ್ಲಾಸ, ಹೊಟ್ಟೆಗೆ ಭೂಮಿಯಿಂದ ನೇರವಾಗಿ ಬಂದ ಒಂದು ಸರಳ-ಸತ್ವಯುತ ಊಟ. ಈಗ?
ನಗರಗಳಲ್ಲಿ ಎಲ್ಲ ಅನುಕೂಲಗಳನ್ನು ಅನುಭವಿಸುತ್ತ ಬದುಕುತ್ತಿರುವ ಬಹುತೇಕ ಮಂದಿಗೆ ಕಾಲಿಗೆ ನಡಿಗೆ ಇಲ್ಲ, ಹೊಲ ಉಳುವಂತಿಲ್ಲ, ಶ್ರಮದ ಯಾವ ಕೆಲಸಗಳೂ ಇಲ್ಲ. ದೇಹ ತಲೆಯನ್ನು ಹೊತ್ತು ಆಚೀಚೆ ಕೈಕಾಲು ಆಡಿಸುವ ಕೆಲಸಕ್ಕೆ ಮಾತ್ರ. ಆದರೆ ಅವರ ತಲೆಗೆ ಮಾತ್ರ ಅತಿಯಾದ ಕೆಲಸ. ಎಲ್ಲವೂ ಸ್ಟ್ರೆಸ್ಸ್! ಟೆನ್ಶನ್! ಧಾವಂತ, ಗಡಿಬಿಡಿ. ಕೆಲಸ ಸ್ಟ್ರೆಸ್ಸ್, ಟ್ರಾಫಿಕ್ಕೂ ಸ್ಟ್ರೆಸ್ಸ್, ಕೆಲಸದಲ್ಲಿ ಬಾಸ್ ಸ್ಟ್ರೆಸ್ಸ್, ಟೆಲಿಫೋನ್ ಬಿಲ್ ಕಟ್ಟಲು ಕಾಯುವ ಟೈಮ್ ಸ್ಟ್ರೆಸ್ಸ್, ಡೆಡ್ ಲೈನ್ ಗಳ ಡೆಡ್ಲಿ ಸ್ಟ್ರೆಸ್ಸ್! ಆದರೆ ದೇಹ ಮಾತ್ರ ಚಟುವಟಿಕೆಯಿಲ್ಲದೆ ಸ್ವಚ್ಚಂದವಾಗಿ ಉಂಡು ಥಂಡಾ ಥಂಡಾ ಕೂಲ್ ಕೂಲ್. ನಮ್ಮ ದೇಹದ ಕೋಶಕಣಗಳು ನಾವು ಕಳಿಸುವ’ ’ಪೌಷ್ಟಿಕ’ ಹೈ ಕಾಲೊರಿ ಆಹಾರವನ್ನು ಅರಗಿಸಿಕೊಳ್ಳಲಾಗದೆ, ಕರಗಿಸಿಕೊಳ್ಳಲಾಗದೆ ಆ ಕಷ್ಟವನ್ನು ನಮ್ಮದೇ ದೇಹದ ಇತರ ಅಂಗಗಳೊಂದಿಗೆ ಹಂಚಿಕೊಂಡಾಗ ಬರುವ ಕಾಯಿಲೆಗಳಲ್ಲಿ ಡಯಾಬಿಟಿಸ್ ಮುಖ್ಯವಾದುದು.
ಡಯಾಬಿಟಿಸ್ ನಲ್ಲಿ ಎರಡು ಬಗೆ. ಟೈಪ್ ೧ ಮತ್ತು ಟೈಪ್ ೨.
ಟೈಪ್ ೧ ಡಯಾಬಿಟೀಸ್ ದೇಹದ ರೋಗ ನಿರೋಧಕ ಶಕ್ತಿಯ ಅಸಾಮರ್ಥ್ಯದಿಂದ ಬರುತ್ತದೆ. ಇದು ಹುಟ್ಟಿನಿಂದಲೇ ಅಥವಾ ಹುಟ್ಟಿದ ಕೆಲವು ವರ್ಷಗಳಿಂದಲೇ ಕಾಣಿಸಿಕೊಳ್ಳುವ ಗಂಭೀರ ಸ್ಥಿತಿ. ಟೈಪ್ ೧ ಡಯಾಬಿಟೀಸ್ ಇರುವ ಮಕ್ಕಳು, ಮಂದಿಯ ದೇಹದಲ್ಲಿನ ಮೇದೋಜೀರಕಾಂಗ ಅಥವಾ ಪ್ಯಾನ್ ಕ್ರಿಯಾಸ್ ನಲ್ಲಿ ಇನ್ಸುಲಿನ್ ನ ಉತ್ಪತ್ತಿಯೇ ಆಗುವುದಿಲ್ಲ. ದೇಹದಲ್ಲಿ ಇನ್ಸುಲಿನ್ ಇಲ್ಲದಿರುವ ಕಾರಣ ಪ್ರತಿನಿತ್ಯವೂ ದಿನಕ್ಕೆ ಇಷ್ಟು ಬಾರಿಯಂತೆ ಇನ್ಸುಲಿನ್ ಅನ್ನು ದೇಹಕ್ಕೆ ಕಳಿಸಬೇಕಾದ ಪರಿಸ್ಥಿತಿ ಇರುತ್ತದೆ.
ಟೈಪ್ ೨ ಡಯಾಬಿಟೀಸ್ ಅನುವಂಶಿಕವಾಗಿ ಬರುವಂಥದ್ದು ಮತ್ತು ಇತ್ತೀಚೆಗೆ-ಸ್ವಯಂಕೃತ ಅಜ್ನಾನ, ಉದಾಸೀನದಿಂದ ಬರುವಂಥದ್ದು. ಟೈಪ್ ೨ ಡಯಾಬಿಟೀಸ್ ಮಯಸ್ಕರಲ್ಲದೆ ಇತ್ತೀಚೆಗೆ ಮಕ್ಕಳಲ್ಲೂ ಅತಿಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಮುಖ್ಯವಾದ ಎರಡು ಕಾರಣಗಳು, ಇಂದಿನ ನಮ್ಮ ಆಹಾರ ಪಧ್ಧತಿ ಮತ್ತು ಆರೋಗ್ಯ ಪಧ್ಧತಿ. ಟೈಪ್ ೨ ಡಯಾಬಿಟಿಸ್ ಇರುವ ವ್ಯಕ್ತಿಯ ದೇಹವು ದೇಹದ ಕಣಗಳಲ್ಲಿ (ಮೇದೋಜೀರಕಾಂಗದಲ್ಲಿ ಉತ್ಪತ್ತಿಯಾಗುವ) ಇರುವ ಇನ್ಸುಲಿನ್ ಅನ್ನು ಪ್ರತಿರೋಧಿಸಿತ್ತದೆ. ಆಗ ಇನ್ಸುಲಿನ್ ರಕ್ತದಲ್ಲಿರುವ ಸಕ್ಕರೆ ಅಥವಾ ಗ್ಲುಕೋಸ್ ನ ಅಂಶವನ್ನು ರಕ್ತನಾಳಗಳಿಂದ ದೇಹದ ಕಣಕಣಗಳಿಗೆ ಸಾಗಿಸಲು ಅಶಕ್ತವಾಗುತ್ತದೆ. ಆಗ ರಕ್ತದಲ್ಲಿ ಸಕ್ಕರೆಯ ಅಂಶ ಅತಿಯಾಗುತ್ತದೆ. ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ.
ಮತ್ತೊಂದು ಬಗೆ ಜೆಸ್ಟೇಷನಲ್ ಡಯಾಬಿಟಿಸ್ ಅಥವಾ ಭ್ರೂಣ ಸಂಬಂಧಿ ಡಯಾಬಿಟಿಸ್. ಇದು ಗರ್ಭ ಧರಿಸಿರುವ ಕೆಲವು ತಾಯಂದಿರಲ್ಲಿ ಕಂಡು ಬರುತ್ತದೆ. ತಾಯಿಯ ದೇಹದಲ್ಲಿ ಸರಿಯಾಗಿ ವಿತರಣೆಯಾಗದ-ಶಕ್ತಿಯಾಗಿ ಬಳಕೆಯಾಗದ ಗ್ಲುಕೋಸ್ ಮಗುವಿನ ದೇಹದಲ್ಲಿ ಹೋಗಿ ಸಂಗ್ರಹವಾಗುತ್ತದೆ. ಇಂತಹ ಸಂದರ್ಭದಲ್ಲಿ ತಾಯಿ ಸರಿಯಾದ ಆಹಾರ, ವ್ಯಾಯಾಮ ಅಥವಾ ಇನ್ಸುಲಿನ್ ಸಹಾಯದಿಂದ ತನ್ನೊಳಗೆ ಖರ್ಚಾಗದ ಗ್ಲುಕೋಸ್ ಅನ್ನು ತಾನೆ ಕಡಿಮೆ ಮಾಡಿಕೊಂಡು ಮಗುವಿನ ದೇಹಕ್ಕೆ ಹೋಗದಂತೆ ತಡೆಯಬೇಕು.
ಇತ್ತೀಚೆಗೆ ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತ್ವದ ಕಾರಣವಾಗಿ ಡಯಾಬಿಟೀಸ್ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ಕಂಡುಬರುತ್ತಿರುವ ಡಯಾಬಿಟೀಸ್ ಮುನ್ಸೂಚನೆಗಳಿಗೆ ಮುಖ್ಯಕಾರಣ ಪೋಷಕರು ಮತ್ತು ಅವರು ಅನುಸರಿಸುತ್ತಿರುವ, ಪ್ರೋತ್ಸಾಹಿಸುತ್ತಿರುವ ಜೀವನ ಶೈಲಿ ಎಂದು ಅಧ್ಯಯನಗಳು ತಿಳಿಸುತ್ತಿವೆ. ಅಕಾಲ ಡಯಾಬಿಟಿಸ್ ಮತ್ತು ಅದಕ್ಕೆ ಕಾರಣವಾಗಿರುವ ಸ್ಥೂಲಕಾಯತ್ವವನ್ನು ತಡೆಗಟ್ಟಲು ಪೋಷಕರು ಅನುಸರಿಸಲೇಬೇಕಾದ ಅಂಶಗಳಿವು.
೧) ಮೈತುಂಬಿಕೊಂಡಿದ್ದರೆ ಮಾತ್ರ ಮಕ್ಕಳು ಆರೋಗ್ಯವಂತರಾಗಿದ್ದಾರೆಂಬ ಭ್ರಮೆ ಬಿಟ್ಟುಬಿಡಿ-ಅನಗತ್ಯವಾಗಿ ಅವರಿಗೆ ಹೆಚ್ಚು ತಿನಿಸುವ ಅಭ್ಯಾಸ ಮಾಡಬೇಡಿ. ಹಸಿವಿಲ್ಲದಿದ್ದರೂ ಕಡ್ಡಾಯವಾಗಿ ಇಷ್ಟನ್ನು ತಿನ್ನಲೇಬೇಕೆಂಬ ಕಟ್ಟುನಿಟ್ಟು ಮಾಡಬೇಡಿ. ಅವರಿಗೇ ಹಸಿವೆ-ಬಾಯಾರಿಕೆಯಂತಹ ಅವರ ದೇಹದ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಸಿಕೊಡಿ.
೨) ಸತ್ವಯುತ ಆಹಾರದ ಆಯ್ಕೆ ಮಾಡುವುದನ್ನು ಹೇಳಿಕೊಡಿ, ನೀವು ಅದನ್ನೇ ಪಾಲಿಸಿ-ಅಂಗಡಿ, ಬಜಾರುಗಳಲ್ಲಿ ಸಿಗುವ ಚಿಪ್ಸ್ ನಂತಹ ಕರಿದ ಪದಾರ್ಥಗಳು, ಚಾಕೋಲೇಟ್, ಸ್ವೀಟ್, ಕೇಕ್ ಗಳ ಖರೀದಿ-ಬಳಕೆಯನ್ನು ನಿಯಮಿತ ಮಾಡಿ. ಮಕ್ಕಳ ಹಟಕ್ಕೆ ನಿಮ್ಮ ಪಟ್ಟು ಬಿಡಬೇಡಿ. ನಿಮ್ಮ ಕಲ್ಪನೆಯನ್ನು ಬಳಸಿ ಅವರ ಗಮನವನ್ನು ಸರಿಯಾದ ದಿಕ್ಕಿಗೆ ತಿರುಗಿಸಿ.
೩) ಸಮತೋಲನ ಆಹಾರ-ತರಕಾರಿ, ಹಣ್ಣು, ಮೊಟ್ಟೆ, ಮೀನು, ದವಸ-ಧಾನ್ಯಗಳ ನೇರ ಬಳಕೆಯಿಂದ ಮನೆಯಲ್ಲಿ ತಯಾರಾಗುವ ಅಡಿಗೆಗೇ ಪ್ರಾಶಸ್ತ್ಯ ಕೊಡಿ. ಆಹಾರದಲ್ಲಿ ಅತಿಯಾದ ಕೊಬ್ಬು/ಜಿಡ್ಡು, ಎಣ್ಣೆ ಮತ್ತು ಮೈದಾ ದಂತಹ ರಿಫೈನ್ಡ್ ಪದಾರ್ಥಗಳ ಬಳಕೆ ಕಡಿಮೆ ಮಾಡಿ.
೪) ಟಿವಿ, ಕಂಪ್ಯೂಟರ್ ಮುಂದೆ ಕೂರಿಸಿ ಊಟ ಕೊಡಬೇಡಿ-ಟಿವಿ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಎದುರಿಗಿದ್ದದ್ದನ್ನು ಬಾಯಿಗೆ ಸೇರಿಸುವ ಕ್ರಿಯೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ. ತಿಂದಿರುವ ಆಹಾರ ಎಂಥದು, ಎಷ್ಟು ಪ್ರಮಾಣದ್ದು, ನನಗೆ ಹೊಟ್ಟೆ ತುಂಬಿತೇ ಎಂಬುದು ಮೆದುಳಿಗೆ ಗ್ರಹಿಕೆಯಾಗಬೇಕು. ಟಿವಿ ಅದಕ್ಕೆ ಮಾರಕ. ಆದ್ದರಿಂದ ಮನೆಯಲ್ಲಿ ಇಡೀ ಕುಟುಂಬ ಒಟ್ಟಿಗೆ ಕುಳಿತು ಮಕ್ಕಳ ಜೊತೆ ಊಟ ಮಾಡಿ. ಮಾಡಿರುವ ಅಡುಗೆಯನ್ನು ಆಸ್ವಾದಿಸುವುದನ್ನು ಹೇಳಿಕೊಡಿ.
೫) ವ್ಯಾಯಾಮ ಮತ್ತು ಆಟ-ಪ್ರತೀ ದಿನ ಕಟ್ಟುನಿಟ್ಟಾಗಿ ವ್ಯಾಯಾಮ ಮತ್ತು ಆಟವಾಡುವ ಅಭ್ಯಾಸ ಮಾಡಿಸಿ.
೬) ನೀರುಕುಡಿಯುವ ಅಭ್ಯಾಸ-ಮಕ್ಕಳು ಸ್ಥೂಲಕಾಯರಾಗಿದ್ದರೆ ಪ್ರತಿನಿತ್ಯ ೪-೫ ಲೋಟ ಬಿಸಿ (ಕುಡಿಯಲಾಗುವಷ್ಟು ಬಿಸಿ ಸಾಕು) ನೀರು ಕುಡಿಸಿ.
೭) ಸೋಡಾ, ಕೋಲಾಗಳ ಬಳಕೆಯನ್ನು ನಿಲ್ಲಿಸಿ.
೮) ಪದೇ ಪದೇ ಕುರುಕಲು ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕಿ-ಬೆಳಗ್ಗಿನ ತಿಂಡಿ, ಮಧ್ಯಾನ್ಹ-ರಾತ್ರಿಯ ಊಟದ ಜೊತೆಗೆ ಸಂಜೆಯ ಉಪಹಾರ ಮಾತ್ರ ಕೊಡಿ. ಅಕಸ್ಮಾತ್ ಹಸಿವೆಯಾಗಿದ್ದರೆ ಹಣ್ಣು, ಬೇಯಿಸಿದ ತರಕಾರಿ, ಹುರಿದ ಕಾಳುಗಳನ್ನಷ್ಟೇ ತಿನ್ನಲು ಕೊಡಿ.
೯) ವಾರಂತ್ಯಗಳನ್ನು ಸಿನೆಮಾ-ಬಂಧು ಮಿತ್ರರ ಮನೆಗಳಿಗಷ್ಟೇ ಸೀಮಿತಗೊಳಿಸದೆ ಸ್ಥಳೀಯ ಉದ್ಯಾನವನದಲ್ಲಿ, ಬೆಟ್ಟ ಗುಡ್ಡಗಳಲ್ಲಿ ಚಾರಣ ಹೋಗುವ, ಸೈಕಲ್ ಹೊಡೆಯುವ ಅಭ್ಯಾಸವಿಟ್ಟುಕೊಳ್ಳಿ.
೧೦) ಗಟ್ಟಿ ಹಾಲು, ಪೂರ್ಣ ಪ್ರಮಾಣದ ಕೊಬ್ಬಿನಂಶವಿರುವ ಹಾಲು-ಚೀಸ್ ಗಳ ಬಳಕೆಯನ್ನು ಕಡಿಮೆ ಮಾಡಿ.
೧೧) ಕ್ಯಾನ್ ಗಳಲ್ಲಿ ಕಾರ್ಟನ್ಗಳಲ್ಲಿ ಸಿಗುವ ಪ್ರಿಸರ್ವೇಟಿವ್, ಅಡಿಟಿವ್ ಇರುವ ಆಹಾರ ಪದಾರ್ಥಗಳ ಬಳಕೆಯನ್ನು ಕಡಿಮೆಮಾಡಿ.
೧೨) ಆಲಸ್ಯಕ್ಕೆ ಆಸ್ಪದ ಕೊಡಬೇಡಿ-ಮಕ್ಕಳು ಗಂಟೆಗಟ್ಟಲೆ ಟಿವಿ, ವಿಡಿಯೋ ಗೇಮ್, ಕಂಪ್ಯೂಟರ್ ಮುಂದೆ ಕೂರುವುದನ್ನು ತಡೆಯಿರಿ. ಸ್ಥಳಕ್ಕೆ ಅಭಾವವಿದ್ದಲ್ಲಿ ಸ್ಕಿಪ್ಪಿಂಗ್, ಕುಂಟಬಿಲ್ಲೆ, ಟೇಬಲ್ ಟೆನ್ನಿಸ್ ನಂತಹ ಆಟ, ಯೋಗ-ವನ್ನು ಪ್ರೋತ್ಸಾಹಿಸಿ.
ಡಯಾಬಿಟಿಸ್ ತನ್ನದೇ ರೀತಿಯಲ್ಲಿ ಮಾರಕ ರೋಗ. ಅದು ಕಾಣಿಸಿಕೊಳ್ಳದಂತೆ ಕ್ರಿಯಾಶೀಲರಾಗುವುದು ಅತ್ಯಗತ್ಯ. ಚಿಕ್ಕ ವಯಸ್ಸಿನಲ್ಲಿ ಡಯಾಬಿಟೀಸ್ ಕಂಡು ಬಂದಲ್ಲಿ ಕ್ರಮೇಣ ಹೃದಯದ ತೊಂದರೆಗಳು, ಉಸಿರಾಟದ ತೊಂದರೆಗಳು, ದೃಷ್ಟಿ ಹೀನತೆ ಇತ್ಯಾದಿ ತೊಂದರೆಗಳು ದೇಹವನ್ನು ಬಾಧಿಸುತ್ತವೆ. ನಮ್ಮ ನಿಮ್ಮ ಮನೆಯ ಹೂಗಳು ಅಕಾಲದಲ್ಲಿ ನಲುಗುವಂತಾಗಬಾರದು. ನಮ್ಮ ಮಕ್ಕಳಿಗೆ ಚಂದದ ಬದುಕು ಕಟ್ಟಿ ಕೊಡುವ ಧಾವಂತದಲ್ಲಿ ನಾವು ಜವಾಬ್ದಾರಿಗಳಿಂದ ಮೈ ಮರೆತರೆ ಮುಂದೆ ನಮ್ಮ ಕಂದಮ್ಮಗಳೇ ಬೆಲೆ ತೆರಬೇಕಾಗುತ್ತದೆ. ಸ್ಠುಲಕಾಯತ್ವ, ಮಕ್ಕಳ ಡಯಾಬಿಟಿಸ್, ಇವೆಲ್ಲಾ ನಮ್ಮ ಮಕ್ಕಳ ಹೋರಾಟಗಳಲ್ಲ. ನಮ್ಮ, ಅಂದರೆ ಪೋಷಕರ ಹೋರಾಟಗಳು.