ಡಾ. ಹಿ. ಶಿ. ರಾ.
ಈಗ ಗೋವುಗಳ ಹತ್ಯೆಯಾಗುತ್ತಿದೆ, ಮಾನವನ ಪಾಪ ಹೆಚ್ಚಾಗುತ್ತಿದೆ, ಅವನ ಅಳಿಗಾಲ ಸಮೀಪಿಸುತ್ತಿದೆ ಎನ್ನುವುದಾದಲ್ಲಿ ಭಾರತದ ಕೆಲವರಿಗೆ ಮಹಾ, ಮಹಾ ಮತ್ತು ಬಹುದೊಡ್ಡ ಭವಿಷ್ಯವಿದೆ ಎಂದು ನಂಬಬಹುದಾಗಿದೆ. ಯಾಕೆಂದರೆ ಭಾರತದ ಬಹುಸಂಖ್ಯಾತರು ಮತ್ತು ಜಗತ್ತಿನ ಬಹುಸಂಖ್ಯಾತರು ಗೋವುಗಳನ್ನು ಹತ್ಯೆ ಮಾಡಿ (ಹಾಗೆ ಹೇಳುವುದಾದರೆ) ಅಳಿಗಾಲದ ಕಡೆಗೆ ದಾಪುಗಾಲು ಹಾಕುತ್ತಿದ್ದಾರೆಂದರೆ ಇವರೆಲ್ಲ ನಾಶವಾದ ಮೇಲೆ ನಾವೇ ತಾನೆ ಉಳಿದಿರುವುದು: ಗೋಮಾಂಸ ತಿನ್ನದಿರುವವರು! ಆದ್ದರಿಂದ ಈಗ ಜಗತ್ತು ಅಭಿವೃದ್ಧಿ ಪಡಿಸಿರುವ ಸಂಪತ್ತೆಲ್ಲ ಏನೂ ಕಷ್ಟವಿಲ್ಲದೆ ನಮ್ಮ ಪಾಲಾಗುವುದರಲ್ಲಿ ಅನುಮಾನವಿಲ್ಲ. ಆಗ ನಾವು ಕಷ್ಟ ಪಟ್ಟು ದುಡಿಯದೆ ಸುಮ್ಮನೆ ತಿಂದುಕೊಂಡಿರಬಹುದು. ಇಲ್ಲವೆ ಪಾಪದವರಿಗೆ ಮಂತ್ರೋಪದೇಶ ಮಾಡುತ್ತಾ...
ಗೋವುಗಳನ್ನು ಆಹಾರಕ್ಕಾಗಿ ಬಳಸುವುದು ಹತ್ಯೆ ಎನ್ನುವುದಾದರೆ ನಾವೆಲ್ಲ ಕೊಯ್ದು ತಿನ್ನುತ್ತಿರುವ ಎಲ್ಲ ಪ್ರಾಣಿಗಳದೂ ಹತ್ಯೆಯೆ. ಹಾಗಿದ್ದಲ್ಲಿ ಮನುಷ್ಯ ತಾನು ಆಹಾರಕ್ಕಾಗಿ ಬಳಸುತ್ತಿರುವ ಎಲ್ಲ ಪ್ರಾಣಿಗಳ ಹತ್ಯೆಯನ್ನು ಕೂಡಲೇ ನಿಲ್ಲಿಸಲೇ ಬೇಕಾಗುತ್ತದೆ. ರಾಜಕೀಯ ಕಾರಣಕ್ಕೆ ಗೋಹತ್ಯೆ ನಿಲ್ಲಲಿ ಎಂದಾಗುವ ಬದಲು ಪ್ರಕೃತಿಯ ಕಾರಣಕ್ಕಾಗಿ ಪ್ರಾಣಿಹತ್ಯೆಯನ್ನು ವಿರೋಧಿಸಿ ಅಂತರಾಷ್ಟ್ರೀಯ ಕಾನೂನೊಂದನ್ನು ತಂದು ಬಂದೋಬಸ್ತ್ ಮಾಡಬೇಕಾಗುತ್ತದೆ. ಅಂತರಾಷ್ಟ್ರೀಯ ಸರ್ಕಾರ ಇಲ್ಲ ನಿಜ. ಈಗ ಅಮೆರಿಕವೆ ಅಂತರಾಷ್ಟ್ರೀಯ. ಅದು ಈ ಜವಾಬ್ದಾರಿಯನ್ನು ಹೊರುತ್ತದೆಯೆ? ಕೇಳಬೇಕು. ಇದು ಕೊಲ್ಲುವವನನ್ನು ರಕ್ಷಿಸು ಎಂದು ಕೇಳಿಕೊಂಡಂತಾಗಬಹುದು. ಅಮೆರಿಕಕ್ಕೆ ಶಕ್ತಿ ಇರುವುದರಿಂದ ಅದು ತನ್ನನ್ನು ಹೊರತು ಪಡಿಸಿ ಜಗತ್ತಿನ ಇತರೆಲ್ಲ ದೇಶಗಳಲ್ಲಿ ಈ ಕಾನೂನನ್ನು ಜಾರಿಗೆ ತರಲೂಬಹುದು!
"ಹಿಂದುಗಳು ಎಂಬುವವರಿಗೆ ಅತಃಸಾಕ್ಷಿ ಇದ್ದರೆ!'' ಈ ಮಾತನ್ನು ಅಂಬೇಡ್ಕರ್ ಹೇಳುತ್ತಾರೆ. ಅವರ ಹೃದಯಕ್ಕೆ ಕಿವಿಕೊಟ್ಟು ನಾವು ಕೇಳಬೇಕು. ಅವರೂ ಕೂಡ ಭಾರತ ದೇಶದ ಚಿಂತನ ಧಾರೆಯ ಗಂಗಾನದಿಯೆ ಆಗಿದ್ದಾರೆ. ಅಂಥ ಅಂತಃಸಾಕ್ಷಿ ಇದ್ದರೆ ಭಾರತಕ್ಕೆ ಏಕೆ, ಜಗತ್ತಿಗೇ ಒಂದು ಕರೆ ಕೊಡಬಹುದು; ’ಪ್ರಾಣಿ ಹತ್ಯೆ ಅತಿಯಾಗುತ್ತಿದೆ ನಿಲ್ಲಿಸಿ, ಆಗದಂತೆ ತಡೆಯಿರಿ. ಜೀವಸಂಕುಲವನ್ನು ಉಳಿಸಿ'- ಎಂದು. ಇಂಥದೊಂದು ಶಕ್ತಿ ಮತ್ತು ಧೀಮಂತಿಕೆಯನ್ನು ಗಾಂಧೀಜಿ ಅವರು ನಮಗೆ ತಂದುಕೊಟ್ಟು ಹೋಗಿದ್ದಾರೆ. ಅವರ `ಅಹಿಂಸಾ' ತತ್ವ ಭಾರತದ ಧೀಶಕ್ತಿಯಾಗಬೇಕು. ಅದು ಯಾವುದೇ ರಾಕ್ಷಸ ಶಕ್ತಿಗಿಂತ ದೊಡ್ಡದು ಮತ್ತು ಪ್ರಳಯಕಾರಿ. ಆಗುವುದಾದರೆ ಆಗಲಿ ಅಹಿಂಸಾ ಪ್ರಳಯ!
ಜಗತ್ತಿನಲ್ಲಿ ಪ್ರತಿನಿತ್ಯ ಕೋಟ್ಯಾಂತರ ಪ್ರಾಣಿಗಳು ವಧೆಯಾಗುತ್ತಿವೆ. ಅವು ಮಾತನಾಡುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅವುಗಳ ಉಳಿವು ಕಷ್ಟವಾಗಿದೆ. ತಮ್ಮ ಸಂತೋಷಕ್ಕಾಗಿ-ಜೀವಿತಕ್ಕಾಗಿ-ಅಸ್ಥಿತ್ವಕ್ಕಾಗಿ ಉಳಿಯುವ ಪರಿಸ್ಥಿತಿ ಈಗ ಆ ಪ್ರಾಣಿಗಳಿಗಿಲ್ಲ. ಮನುಷ್ಯ ಅವುಗಳನ್ನು ತನ್ನ ಉಪಯೋಗಕ್ಕೆ ಮಾತ್ರ ಉಳಿಸಿದ್ದಾನೆ. ಸಾಕು ಪ್ರಾಣಿಗಳನ್ನಂತೂ ಮನುಷ್ಯ ತನ್ನ ಆಹಾರಕ್ಕಾಗಿಯೆ ಉಳಿಸಿಕೊಂಡಿದ್ದಾನೆ. ಅವು ಅವನ ಅನುಭೋಗದ ಸಂಪತ್ತಿನ ಮೊತ್ತದಲ್ಲಿ ಸೇರಿ ಹೋಗಿವೆ. ಈಗ ಅವು ನಿರಂತರ ಬಂಧಿಗಳು; ಮಾನವನ ಜೈಲಿನಲ್ಲಿವೆ. ಅವನು ನಿರ್ಧರಿಸಿದ ಸಮಯದವರೆಗೆ ಜೀವಿತದಲ್ಲಿರುತ್ತವೆ. ಅವಕ್ಕೆ ಆತ್ಮ-ಪರಮಾತ್ಮ ಯಾರೂ ಇಲ್ಲ. ಮನುಷ್ಯ ಬರೆದ ಡೆತ್ ಸೆಂಟೆನ್ಸ್ ಮಾತ್ರವೆ ಅವುಗಳ ಹಣೆ ಬರಹ. ಅವು ಯಾಹೊತ್ತೂ ಸಾವಿನ ಭಯದಲ್ಲಿವೆ. ಅವುಗಳದೇ ಆದ ಒಂದು ಸಮೂಹ ಸಂಸ್ಕೃತಿ ಇದೆ ಎಂಬುದು ಕೂಡ ಮನುಷ್ಯನ ತಲೆಯಲ್ಲಿ ಇಲ್ಲ. ಮನುಷ್ಯನೆಂಬ ಯಜಮಾನ ಹೇಳುತ್ತಲೇ ಬಂದಿದ್ದಾನೆ: ’ಕೋಳಿ ಕೇಳಿ ಸಾಂಬಾರು ಅರೆಯುತ್ತಾರೆಯೆ?’ ಎಂದು. ಇದು ಎಂದೆಂದೂ.
ಪ್ರಾಣಿಗಳ ಸಾಂಸ್ಕೃತಿಕ ಬದುಕು ಕಳೆದು ಹೋಗಿದೆ. ಮನುಷ್ಯ ಸಂಸ್ಕೃತಿಯೆ, ಅಂದರೆ ಪ್ರಾಣಿಗಳ ದೃಷ್ಟಿಯಿಂದ ಕೊಲೆ ಗಡುಕ ಸಂಸ್ಕೃತಿಯೆ ಆಗಿರುವುದು ದುರಂತ. ಸಾಕು ಪ್ರಾಣಿಗಳ ಸ್ಥಿತಿ ಉತ್ತಮವಾಗಿದೆಯೆ? ಖಂಡಿತ ಇಲ್ಲ. ಸಾಕು ಪ್ರಾಣಿಗಳನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿಯಾದರೂ ಮರು ಉತ್ಪಾದನೆ ಮಾಡುತ್ತಾನೆ, ಅತಿ ಉತ್ಪಾದನೆಯನ್ನೂ ಮಾಡುತ್ತಿದ್ದಾನೆ; ಬ್ರಾಯಿಲರ್ ಕೋಳಿಗಳ ಥರ. ಆದರೆ ಕಾಡು ಪ್ರಾಣಿಗಳು ಆ ಬಗೆಯಲ್ಲಿ ಉತ್ಪಾದನೆಯಾಗುವುದಿಲ್ಲ. ಪ್ರಕೃತಿಯ ಎಲ್ಲ ಅವಗಡಗಳನ್ನು ಎದುರಿಸಿ ಅವುಗಳ ಸಂತತಿಯನ್ನು ಉಳಿಸಿಕೊಂಡು ಬಂದಿವೆ. ಇತ್ತೀಚಿನ ಮಾನವ ನಿರ್ಮಿತ ಕಲುಷಿತ ವಾತಾವರಣದಿಂದಾಗಿ ಅವುಗಳ ಸಂತಾನೋತ್ಪತ್ತಿ ಮತ್ತು ಅಸ್ತಿತ್ವ ಆತಂಕದಲ್ಲಿದೆ. ಆದರೆ ಈ ಮನುಷ್ಯನೆಂಬ ಬಕಾಸುರ ಅವುಗಳನ್ನು ನಿರಂತರ ಬೇಟೆಯಾಡುತ್ತಿದ್ದಾನೆ. ಅವುಗಳ ಮಾಂಸವನ್ನು ಹೊಸರುಚಿಯ ಮೆನು ಪಟ್ಟಿಯಲ್ಲಿ ಸೇರಿಸುತ್ತಿದ್ದಾನೆ. ಹಲವು ನೆಲ ಜೀವಿಗಳೂ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಮನುಷ್ಯನ ಅಧಿಕಾರದ ಹೊರಗೆ ಈ ಯಾವ ಜೀವಿಯೂ ಉಳಿಯಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಈ ಮನುಷ್ಯನಿಂದ ಮತ್ತಾವ ಜೀವಿಯೂ ಸ್ವತಂತ್ರವಾಗಿ ಬದುಕಲು ಆಗುತ್ತಲೇ ಇಲ್ಲವಲ್ಲ! ಇನ್ನು ಇವನು ಸ್ವಾತಂತ್ರ್ಯ, ಸಮಾನತೆಯ ಬಗ್ಗೆ ಏನು ಹೇಳುತ್ತಿದ್ದಾನೆ?
ನನಗೆ ಮನುಷ್ಯ ಸಾಕು ಅನ್ನಿಸಿದ್ದಾನೆ. ಅವನ ದೃಷ್ಟಿಯಿಂದ ಅವನು ಮುಖ್ಯನಾಗಿದ್ದಾನೆ. ಜಗತ್ತಿನ ಇತರ ಜೀವಸಂಕುಲಗಳ ದೃಷ್ಟಿಯಿಂದ ಅವನು ಅಮುಖ್ಯ ಮತ್ತು ಅನಿಷ್ಟ. ಭೂಮಿಯ ಮೇಲೆ ಅವನು ಮಾಡುತ್ತಿರುವ ಅತ್ಯಾಚಾರವನ್ನು ನೋಡಿದರೆ ಅವನು ಸಾಯುವವರೆಗೆ ಜೈಲಿನಲ್ಲಿರಬೇಕಾಗುತ್ತದೆ. ನಿಜದ ಅರ್ಥದಲ್ಲಿ ಈತ ಭೂಹಂತಕ. ಆದರೆ ಇವನನ್ನು ಶಿಕ್ಷಿಸುವ ನ್ಯಾಯಾಧೀಶನೆ ಇಲ್ಲವಲ್ಲ!!
ಈ ಮನುಷ್ಯನಲ್ಲದ 'ಮನುಷ್ಯ'ನನ್ನು ಸರಿದಾರಿಗೆ ತರುವುದಾದರೂ ಹೇಗೆ? ಹಿಂದೆ ಪ್ರಕೃತಿಯ ಜೊತೆಗೆ ಹೋರಾಡಿ ತನ್ನ ಜೀವನವನ್ನು ನಿರ್ಮಿಸಿಕೊಳ್ಳುವ ಕಾರಣಕ್ಕಾಗಿ ಮನುಷ್ಯನ ಅಸ್ತಿತ್ವಕ್ಕೆ ಕಂಟಕ ಪ್ರಾಯವಾಗಿದ್ದ ಪ್ರಾಣಿಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿತ್ತು, ನಿವಾರಿಸುವುದಲ್ಲ. ಪ್ರಕೃತಿಯ ಉಳಿವಿಗೆ ಅದರೊಳಗೆ ಸೃಷ್ಟಿಯಾಗಿರುವ ಎಲ್ಲ ಜೀವಿಗಳೂ ಅಗತ್ಯ. ಅದು ಭೂಮಿಯ ಅನಾಟಮಿ. ಅಂಥ ಅನಿವಾರ್ಯತೆಯ ಕಾರಣವಾಗಿಯೆ ಈ ಭೂಮಿಯ ಮೇಲೆ ಇರಬೇಕಾದ ಪ್ರಾಣಿಗಳು ಇವೆ. ಬೇಡವಾದುವು ಎಂದಿದ್ದರೆ ಪ್ರಕೃತಿಯೆ ತನ್ನ ತೀರ್ಮಾನವನ್ನು ತೆಗೆದುಕೊಳ್ಳುತ್ತಿತ್ತು. ಅಥವಾ ಈಗಿರುವ `ಆಹಾರ ಸರಪಳಿ ನಿಯಮ'ದಂತೆ ಯಾವ ಯಾವ ಪ್ರಾಣಿ ಮತ್ತೆ ಯಾವ ಯಾವ ಪ್ರಾಣಿಯನ್ನು ತಿಂದು ಬದುಕಬೇಕೆಂಬ ತನ್ನ ಪ್ರಾಕೃತಿಕ ನಿಯಮವನ್ನು ಜಾರಿಯಲ್ಲಿಟ್ಟಿರುತ್ತಿತ್ತು. ಈ ಹೊಣೆಗಾರಿಕೆಯನ್ನು ಅದು ಯಾವುದಾದರೊಂದು ಪ್ರಾಣಿಗೊ ಅಥವಾ ಮನುಷ್ಯನಿಗೊ ಬಿಡುತ್ತಿರಲಿಲ್ಲ. ಈಗ ಕೂಡ ಪ್ರಕೃತಿ ಜೀವ ಸಂಕುಲಗಳ ಅಸ್ತಿತ್ವದ ಹಕ್ಕನ್ನು ಮನುಷ್ಯನಿಗೆ ಬಿಟ್ಟುಕೊಟ್ಟಿಲ್ಲ. ಹಾಗೆ ಮನುಷ್ಯ ತಿಳಿದುಕೊಂಡಿದ್ದರೆ ಅವನಿಗೂ ಸಾವಿನ ಸರದಿ ತಪ್ಪಿದ್ದಲ್ಲ. ದುರ್ಯೋಧನ ಭೀಷ್ಮರಿಗೆ ಮೊದಲ ಸೇನಾಧಿಪಟ್ಟ ಕಟ್ಟಿದಾಗ ಕರ್ಣ ನನಗೆ ಮೊದಲು ಕೊಡಬೇಕಾಗಿತ್ತು ಎಂದು ಎಗರಾಡಿದನಂತೆ. ಆಗ ಭೀಷ್ಮರು ಗಂಭೀರವಾಗಿ ಹೇಳಿದರಂತೆ ಯಾಕಪ್ಪ ಗಲಾಟೆ? ನನಗೆ ಬಂದಂತೆ ನಿನಗೂ ಸರದಿ ಬರುತ್ತದೆ ಕಾಯುತ್ತಿರು ಅಂದರಂತೆ. ಈ ಮಾತನ್ನು ಮಹಾಕವಿ ಪಂಪ ತನ್ನ ಪಂಪಭಾರತದಲ್ಲಿ ಉಲ್ಲೇಖಿಸಿದ್ದಾನೆ.
ಈಗ ನಾನು ಮಾನವ ಅಭಿವೃದ್ಧಿಯನ್ನು ಪ್ರಧಾನವಾಗಿಟ್ಟುಕೊಂಡು ಚಿಂತಿಸುತ್ತಿಲ್ಲ. ಇದು ಏಕವಾದಿ ಮತ್ತು ಏಕಮೇವಾದಿ ಸಿದ್ಧಾಂತ. ನನಗೆ ಈ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳೂ, ಎಲ್ಲ ಸಂಸ್ಕೃತಿಗಳೂ ಅಗತ್ಯ ಎನಿಸಿವೆ. ಆದ್ದರಿಂದ ನಾನು ಕೇಂದ್ರಿತ ನೆಲೆಯಲ್ಲಿ ಭೂಮಿಯ ಅಸ್ತಿತ್ವನ್ನು ಪ್ರತಿಪಾದಿಸುತ್ತಿದ್ದೇನೆ. ಈಗ ಮಾನವ ಅಭಿವೃದ್ಧಿ ಎಂಬುದು ಭೂಮಿಯ ಶೋಷಣೆ, ಬಳಕೆ ಅಲ್ಲ; ಅದು ಇತರ ಸಹ ಜೀವಿಗಳ ಅಸ್ತಿತ್ವ ನಾಶದ ನಡವಳಿಕೆಯಾಗಿದೆ. ಭೂಮಿಯ ಮೇಲೆ ಇರುವುದೆಲ್ಲ ತನಗಾಗಿ, ತನ್ನ ಮೋಜು ಮಸ್ತಿಗಾಗಿ ಎಂದು ತಿಳಿಯಲಾಗಿದೆ. ಇದು ಪುರಾತನ ಪ್ರಾಣಿ ಪ್ರವೃತ್ತಿಗಿಂತ ಭಿನ್ನವಾದುದೇನೂ ಅಲ್ಲ. ಮನುಷ್ಯ ತನ್ನೊಳಗಿನ ಅಂತರಂಗವೆಂಬ ವ್ಯಕ್ತಿತ್ವವನ್ನು ಮರೆತು ಕೂತಿದ್ದಾನೆ.
ಈ ಹೊತ್ತಿನ ಅಭಿವೃದ್ಧಿ ಸಿದ್ಧಾಂತದ ಬಳಸು ಮತ್ತು ಬಿಸಾಡು ತತ್ವ ಏನು ಹೇಳುತ್ತಿದೆ, ಎಲ್ಲಿಗೆ ತಲುಪಬಹುದು? ಕೊಳ್ಳುವವರು ಬಳಸಬಹುದು, ಹೆಚ್ಚಾದವರು ಬಿಸಾಕಬಹುದು. ಆ ಎರಡೂ ಇಲ್ಲದವರು ಏನು ಮಾಡಬೇಕು. ಅವರ ದೇಹವನ್ನೇ ಬಿಸಾಡಬೇಕಾಗುತ್ತದೆ. ಅವರಲ್ಲಿ ಇನ್ನೇನಿರುತ್ತದೆ ಬಿಸಾಡಲು! ಅಭಿವೃದ್ಧಿಯೂ ಒಂದು ಕೊಲೆಗಡುಕ ತತ್ವ ಆಗಬಲ್ಲದು ಎಂಬುದು ಇದರಿಂದ ತಿಳಿದುಬರುತ್ತಿದೆ. ಅಭಿವೃದ್ಧಿ ತತ್ವ ಇರುವುದೇ ಬಡವರ ಉದ್ಧಾರಕ್ಕೆ ಎಂದು ತಿಳಿದುಕೊಂಡ ಒಂದು ಕಾಲವಿತ್ತು; ಅದು ಕೊನೆಯ ಮನುಷ್ಯನನ್ನು ಉದ್ದೇಶಿಸಿದ್ದಾಗ. ಈಗ ಕೊನೆಯ ಮನುಷ್ಯ ಯಾರ ಲಿಸ್ಟಿನಲ್ಲೂ ಇಲ್ಲ. ಈಗ ಅವನು ತನ್ನದೇ ಅಭಿವೃದ್ಧಿ ತತ್ವವನ್ನು ಕಂಡುಕೊಳ್ಳಬೇಕಾಗಿದೆ. ಅದು ಅವನಿರುವ ಜಾಗದಲ್ಲಿ, ಅವನಿಗಿರುವ ಸಂಪನ್ಮೂಲದಲ್ಲಿ ಮತ್ತು ಅವನನ್ನು ಉಳಿಸಿಕೊಂಡು ಬಂದಿರುವು ಸಕಲ ಜೀವರಾಸಿಗಳ ಸ್ನೇಹ ಸಂಬಂಧದ ಪ್ರಕೃತಿಯ ಜೊತೆಗೆ.
|