ಬೇಕಾಗುವ ಪದಾರ್ಥಗಳು:
ಪುಡಿ ಮಾಡಿಕೊಳ್ಳಲು-
ಕಡಲೆಬೇಳೆ-೧ ಟೇಬಲ್ ಸ್ಪೂನ್
ಉದ್ದಿನಬೇಳೆ-೧ ಟೇಬಲ್ ಸ್ಪೂನ್
ಧನಿಯಾ-೧ ಟೇಬಲ್ ಸ್ಪೂನ್
ಒಣಮೆಣಸಿನಕಾಯಿ-೬-೮
ಒಣಕೊಬರಿ-೧ ಟೇಬಲ್ ಸ್ಪೂನ್
ಬಿಳಿಎಳ್ಳು- ೧ ಟೀ ಸ್ಪೂನ್
ಲವಂಗ-೨
ಚಕ್ಕೆ- ಅರ್ಧ ಇಂಚು
ಜೀರಿಗೆ-೧ ಟೀ ಸ್ಪೂನ್
ಕಾಳು ಮೆಣಸು-೬-೮
ಕರಿಬೇವಿನ ಎಲೆ-೧ ಕಡ್ಡಿ
ಪೈನಾಪಲ್ ಹೂ-೧-೨ (ಬೇಕಿದ್ದರೆ)
ಗಸಗಸೆ-೧ ಟೀ ಸ್ಪೂನ್ 
 
(ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ದಪ್ಪತಳದ ಬಾಣಲಿಯಲ್ಲಿ ಬೆಚ್ಚಗೆ ಹುರಿದುಕೊಂಡು ತಣಿಸಿ, ಮಿಕ್ಸಿಯಲ್ಲಿ ಅಥವಾ ಡ್ರೈ ಗ್ರೈಂಡರ್ ನಲ್ಲಿ ಪುಡಿಮಾಡಿಟ್ಟುಕೊಳ್ಳಿ.)
 
ಉಳಿದ ಪದಾರ್ಥಗಳು:
 
ತೊಗರಿಬೇಳೆ ೧ ಕಪ್
ಅಕ್ಕಿ ೧೧/೨ ಕಪ್
ತುಪ್ಪ - ೧ ಬಟ್ಟಲು
ಕ್ಯಾರೆಟ್ (ಹೆಚ್ಚಿದ್ದು)-ಕಾಲು ಕಪ್
ದೊಡ್ಡಮೆಣಸಿನಕಾಯಿ (ಹೆಚ್ಚಿದ್ದು)-ಕಾಲು ಕಪ್
ಹುರುಳಿಕಾಯಿ (ಕತ್ತರಿಸಿದ್ದು)-ಕಾಲು ಕಪ್
ಸೀಮೆಬದನೆಕಾಯಿ-ಕಾಲು ಕಪ್
ಹಸಿಬಟಾಣಿ-ಕಾಲು ಕಪ್
ಲೀಮಾ ಬೀನ್ಸ್-ಕಾಲು ಕಪ್ (ಇಷ್ಟವಿದ್ದರೆ)
ಉಪ್ಪು-ರುಚಿಗೆ
ಬೆಲ್ಲದ ತುರಿ-೧ ಟೀ ಚಮಚ
ಹುಣಸೆಹುಳಿ (ತೆಳುವಾದ್ದು)-೧ ಟೇಬಲ್ ಚಮಚ
ಎಣ್ಣೆ-ಅರ್ಧ ಕಪ್
ಹಿಂಗು-ಅರ್ಧ ಟೀ ಸ್ಪೂನ್
ಅರಿಶಿನ-೧ ಚಿಟಿಕೆ 
 

 

ಬಿಸಿಬೇಳೆ ಬಾತ್
ವಿಧಾನ:
  • ಪುಡಿಯನ್ನು ಮೇಲೆ ತಿಳಿಸಿದ ವಿಧಾನದಲ್ಲಿ ಮಾಡಿಟ್ಟುಕೊಳ್ಳಿ.
  • ತೊಗರಿಬೇಳೆಯನ್ನು ಅದರ ಎರಡರಷ್ಟು ನೀರು ಹಾಕಿ, ಒಂದು ಚಿಟಿಕೆ ಅರಿಶಿನ ಸೇರಿಸಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ತರಕಾರಿಯನ್ನು ಅತಿಯಾಗಿ-ಕಲಸಿದಂತೆ ಬೇಯದಂತೆ ಪ್ರತ್ಯೇಕವಾಗಿ ಮೈಕ್ರೋ ವೇವ್ ಮಾಡಿಕೊಳ್ಳಿ.
  • ಅಕ್ಕಿಯನ್ನು ಹೆಚ್ಚು ನೀರುಹಾಕದೆ ಅನ್ನ ಮಾಡಿಟ್ಟುಕೊಳ್ಳಿ. ಅದರಲ್ಲಿ ಗಂಟಿಲ್ಲದಂತೆ ಉದುರಾಗಿಸಿಟ್ಟುಕೊಳ್ಳಿ.
  • ಅಗಲ ಬಾಯಿಯ ದಪ್ಪ ತಳದ ಪಾತ್ರೆಯೊಂದರಲ್ಲಿ ೩-೪ ಚಮಚ ಎಣ್ಣೆ ಹಾಕಿ ಬೇಯಿಸಿದ ತರಕಾರಿಗಳನ್ನು ಹುರಿದುಕೊಳ್ಳಿ. ನಂತರ ಅದಕ್ಕೆ ೧ ಕಪ್ ನೀರು ಸೇರಿಸಿ.
  • ಬೇಯಿಸಿದ ಬೇಳೆ ಸೇರಿಸಿ, ಕೈಯ್ಯಾಡಿಸಿ.
  • ಒಂದು ಬಟ್ಟಲು ನೀರಿನಲ್ಲಿ ೪ ಟೀ ಚಮಚ ಬಿಸಿಬೇಳೆ ಬಾತ್ ಪುಡಿಯನ್ನು ಕಲೆಸಿಕೊಳ್ಳಿ (ಇದರಿಂದ ಪುಡಿ ಗಂಟಾಗುವುದಿಲ್ಲ). ಆ ನೀರನ್ನು ಬೇಳೆಗೆ ಸೇರಿಸಿ ಕೆಲವು ನಿಮಿಷ ಬೇಯಲು ಬಿಡಿ. (ನಿಮಗೆ ಪುಡಿಯ ಹೆಚ್ಚು ಬೇಕೆನಿಸಿದರೆ ಮತ್ತೆ ಹಿಂದಿನಂತೆಯೇ ಪುಡಿ ಸೇರಿಸಿ).
  • ಆಗಾಗ ಸೌಟಿನಲ್ಲಿ ತಿರುವುತ್ತಿರಿ.
  • ಬೇಳೆ ಮಸಾಲೆಯೊಂದಿಗೆ ಸ್ವಲ್ಪ ಬೆರೆತಿದೆ ಎನ್ನುವಾಗ ಅನ್ನವನ್ನು ಸೇರಿಸಿ. ಅನ್ನ-ಬೇಳೆ-ತರಕಾರಿ ಯ ಮಿಶ್ರಣ ಗಟ್ಟಿ
    ಎನಿಸಿದರೆ ಮತ್ತೆ ಸ್ವಲ್ಪ ನೀರು ಸೇರಿಸಿ, ಮಿಕ್ಸ್ ಮಾಡಿ.
  • ನಂತರ ಹುಣಸೆ ಹುಳಿ ಸೇರಿಸಿ ೨-೩ ನಿಮಿಷ ಬೇಯಲು ಬಿಡಿ.
    ರುಚಿಗೆ ಬೇಕಾಗುವಷ್ಟು ಉಪ್ಪು ಸೇರಿಸಿ. ಸರಿಯಾಗಿ ಮಿಕ್ಸ್ ಮಾಡಿ. ನಂತರ ಬೆಲ್ಲದ ತುರಿ ಸೇರಿಸಿ.
  • ಪುಟ್ಟ ಬಾಣಲೆಯೊಂದರಲ್ಲಿ ಅರ್ಧ ಚಮಚ ಎಣ್ಣೆ ಬಿಸಿಮಾಡಿ ಹಿಂಗನ್ನು ಅದಕ್ಕೆ ಹಾಕಿ ಅದನ್ನು ಬಿಸಿಬೇಳೆ ಬಾತ್ ಗೆ ಸೇರಿಸಿ.
  • ಚನ್ನಾಗಿ ಮಿಕ್ಸ್ ಮಾಡಿ, ೧ ಬಟ್ಟಲು ತುಪ್ಪ ಸೇರಿಸಿ, ಬಡಿಸಿ.