ಸಣ್ಣ-ಸಣ್ಣಿ
ಒಂದೂರಲ್ಲಿ ಸಣ್ಣ ಸಣ್ಣಿ ಅಂತ ಗಂಡ ಹೆಂಡಿರಿದ್ರು. ಇಬ್ಬರೂ ಕಷ್ಟಪಟ್ಟು ಕೂಲಿ ನಾಲಿ ಮಾಡ್ತಿದ್ರು. ಬರೂ ಕೂಲಿನ ಜೋಪಾನಕ್ ಕರ್ಚು ಮಾಡ್ತ ಸುಮಾರ್ ದುಡ್ಡು ಉಳಿಸಿಟ್ಟಿದ್ರು. ಒಂದಿನ ಸಣ್ಣ ಗಂಟು ತಗಂಡು ಎಷ್ಟು ದುಡ್ಡೈತೆ ಅಂತ ಎಣಿಸ್ದ. ಅವರ ಹತ್ರ ಸರಿಯಾಗಿ ನೂರು ರುಪಾಯಿತ್ತು. ಗಂಡ ಹೆಂಡ್ರು ಭಾಳಾ ಖುಶಿ ಪಟ್ಕಂಡಿದ್ರು.
ಹೀಗೆ ಇರಬೇಕಾದ್ರೆ ಒಂದಿನ ಮಂಕಾಳಮ್ಮನ ಜಾತ್ರೆ ಬಂತು. ಊರಿಗೂರೆ ಜಾತ್ರೆ ಬಂತು ಅಂತ ಖುಶಿ ಪಡ್ತಿತ್ತು. ಸಣ್ಣಿಗೆ ಜಾತ್ರೆಲಿ ಬಳೆ, ಚವಲಿ, ಕುಚ್ಚು ತಗಳನ ಅಂದ್ಕಂಡು ಆಸೆ ಪಟ್ಟಿದ್ಲು. ಸಣ್ಣನ್ನ ಅವತ್ತು ’ರೀ ಐದು ರುಪಾಯ್ ಕೊಡ್ರಿ’ ಅಂತ ಕೇಳಿದ್ಲು. ಸಣ್ಣನಿಗೆ ಒಂದು ಪೈಸೆ ಕೊಡಕೂ ಸಂಕಟ. ’ಸುಮ್ನಿರೆ. ಸರಿಯಾಗಿ ನೂರು ರುಪಾಯ್ ಅದೆ. ಮುರಿಯದು ಬ್ಯಾಡ’ ಅಂತ ಹೆಂಡ್ತಿಗೆ ಗದರ್ಸಿಬಿಟ್ಟ. ಸಣ್ಣಿಗೆ ಕೋಪ ಬಂತು. ’ನಾನೂ ದುಡ್ಡು ಸೇರ್ಸಿದಿನಿ ನನಗೂ ಕೊಡಲ್ಲ ಅಂತನಲ್ಲಾ’ ಅಂತ. ’ಏನಾದ್ರು ಮಾಡಿ ನೂರು ರುಪಾಯ್ ನ ಮುರಿಲೇ ಬೇಕು ತಡಿ’ ಅಂತ ಸಣ್ಣಿ ಮನಸ್ ಮಾಡಿ ಬಿಟ್ಲು.
ಒಂದಿನ ಸಣ್ಣ ಬಾರೆ ಕಡಿಕೆ ಹೋಗಿದ್ದ. ಅವನು ಮನೆಗ್ ಬರುವಷ್ಟರಲ್ಲಿ ಸಣ್ಣಿ ತಲೆ ಮ್ಯಾಲಿನ ಕೂದ್ಲನ್ನೆಲ್ಲಾ ಕೆದರಿಕಂಡು ಹಣೆ ತುಂಬಾ ಕುಂಕುಮ ಸವರಿಕಂಡು ಮನೆ ಮುಂದೆ ನಿಂತಿದ್ಲು. ಸಣ್ಣ ಅವಳ್ನ ನೋಡಿ ’ಇದೇನೇ ಹಿಂಗ್ ನಿಂತಿದ್ದೀಯಾ? ಗಾಳಿ ಗಿಳಿ ಮೆಟ್ಕಂಡದಾ ನಿಂಗೆ’ ಅಂತ ಗದರಿದ. ಅದಕ್ಕವಳು ’ರೀ ನನ ಮ್ಯಾಲೆ ಮಂಕಾಳಮ್ಮ ಬಂದಿದ್ಲು. ಅವ್ಳಿಗೆ ನಾನು ಹಣ್ಣು ಕಾಯಿ ಮಾಡುಸ್ತೀನಿ ಬುಟ್ಬುಡವ್ವಾ ತಾಯಿ ಅಂದೆ. ಆಗ ಬುಟ್ಟ್ ಹೋದ್ಲು. ಈಗ ಬ್ಯಾಗ್ನೆ ಹೋಗಿ ಹಣ್ಣು ಕಾಯಿ ತಗಂಬನ್ನಿ’ ಅಂದ್ಲು. ಸಣ್ಣoಗೆ ಹೆಂಡ್ತಿ ಮೇಲೆ ನಂಬಿಕೆ ಬರ್ಲಿಲ್ಲ. ಆಗ ಸಣ್ಣಿ ’ಅಹಹಹಹಹಾಅ’ ಅಂತ ತೂರಾಡಿದ್ಲು. ಸಣ್ಣ ಹೆದ್ರಿಕಂದ. ’ಸರಿ ಕಣವ್ವಾ ತಾಯಿ ನೀನು ಈಗ ಮನೆಗೋಗು ನಾವು ಹಣ್ಣು ಕಾಯಿ ಮಾಡ್ತಿವಿ’ ಅಂತ ಅವ್ಳಿಗೆ ಕೈ ಮುಗ್ದ. ಹಣ್ಣು ಕಾಯ್ಗೆ ಎಷ್ಟ್ ಕರ್ಚಾತಿತೇ’ ಅಂತ ಸಣ್ಣಿನ ಕೇಳ್ದ. ’ಒಂದೈದು ರುಪಾಯ್ ಆಗ್ಬೌದು ನೋಡಿ’ ಅಂದ್ಲು ಸಣ್ಣಿ.
ನೂರ್ ರುಪಾಯ್ ನ ಮುರಿಸಬೇಕಲ್ಲಾ ಅಂತ ಸಣ್ಣ ಭಾಳಾ ಬೇಜಾರ್ದಲ್ಲಿ ಪಕ್ಕದೂರ ಸಂತೆಗೆ ಹೋದ. ಎರಡ್ಮೂರು ಹಣ್ಣು ಕಾಯ್ ಅಂಗಡಿ ಇದ್ವು. ಮೊದ್ಲಿದ್ದ ಅಂಗಡಿಯವ್ನ 'ಒಂದು ತಟ್ಟೆ ಹಣ್ಣು ಕಾಯಿಗೆ ಎಷ್ಟಣ್ಣ’ ಅಂತ ಕೇಳ್ದ. ’ಐದು ರುಪಾಯ್ ಗೆ ಇಡೀ ತಟ್ಟೆ ಕನಪ್ಪಾ’ ಅಂದ ಅಂಗ್ಡಿಯೋನು. ’ಮೂರ್ ರುಪಾಯ್ ಗೆ ಕೊಡದಿಲ್ವೇನಣ್ಣ” ಅಂತ ಕೇಳ್ದ. ’ಅಲ್ ಕೇಳ್ ಹೋಗಪ್ಪಾ’ ಅಂತ ಕಳಿಸ್ದ ಅಂಗಡಿಯೋನು. ಸಣ್ಣ ಪಕ್ಕದಂಗ್ಡಿಗೆ ಹೋಗಿ ಕೇಳ್ದ. ’ಮೂರ್ ರುಪಾಯ್ ಗೆ ಒಂದು ತಟ್ಟೆ ಕಣಯ್ಯಾ’ ಅಂದ ಮಾರ್ತಿದ್ದೋನು. ’ಅಣ್ಣಾ ಒಂದ್ ರುಪಾಯ್ ಗೆ ಕೊಡಲ್ವೇನಣ್ಣ” ಅಂದ ಸಣ್ಣ. ’ಆ ಮೂಲೆ ಅಂಗ್ಡಿಗ್ ಹೋಗಯ್ಯಾ’ ಅಂದ ಅಂಗ್ಡಿಯೋನು. ಸಣ್ಣ ಅಲ್ಲಿಂದ್ ಮೂಲೆಲಿದ್ದ ಇನ್ನೊಂದ್ ಅಂಗ್ಡಿಗೆ ಹೋಗಿ ಕೇಳ್ದ. ಅಲ್ಲಿ ಕೂತಿದ್ದವ್ಳು ಒಂದು ರುಪಾಯ್ ಗೆ ಒಂದು ತಟ್ಟೆ ಹಣ್ಣು ಕಾಯ್ ಸಾಮಾನು ಅಂದ್ಲು. ’ಅಕ್ಕ ಎಂಟಾಣೆಗ್ ಕೊಡಲ್ವೇನಕ್ಕಾ’ ಅಂದ ಸಣ್ಣ. ಅದ್ಕವಳು, ’ಅಪ್ಪಾ ಅಲ್ಲಿ ದ್ಯಾವ್ಸ್ತಾನದ್ ತಾವು ಒಂದು ಕಣುಗ್ಲೆ ಮರ ಐತೆ. ಅಲ್ಲಿ ಒಂದಷ್ಟು ಹೂ ಕಿತ್ಗೋ...ಅಲ್ಲೇ ಪಕ್ಕ ಒಂದ್ ಮುದ್ಕಿ ಬಾಳೆ ಹಣ್ ಮಾರ್ತಾ ಐತೆ. ಅದರತ್ರ ಒಂದು ಬಾಳೆ ಹಣ್ ಈಸ್ಕೋ...ಅದರ್ ಪಕ್ಕದ್ ಬೀದಿಲಿ ಹೆಣ್ ಮಕ್ಳು ಓದ್ ಬತ್ತಿ ಮಸಿತಾ ಅವ್ರೆ. ಅವರತ್ರ ಒಸಿ ಊದ್ ಬತ್ತಿ ಈಸ್ಕೋ. ನಮ್ಮೂರು ಗೌಡ್ರು ತೋಟದ್ ತಾವ ಕಾಯಿ ಕೀಳ್ಸ್ತಾ ಅವ್ರಂತೆ. ಅವ್ರ್ನ ಒಂದು ಕಾಯಿ ಕೇಳು. ಆಗ ಎಲ್ಲ ಸಿಕ್ಕಂಗಾಯ್ತದೆ..’ ಅಂದ್ಲು. ಸಣ್ಣoಗೆ ಎಲ್ಲಾ ಅಂಗೇ ಸಿಕ್ರೆ ನೂರು ರುಪಾಯಿ ಮುರಿಸದು ತಪ್ತು ಅಂತ ಕುಶಿ ಆಯ್ತು.
ಅವ್ನು ದೇವ್ಸ್ತಾನದ ಹತ್ರ ಬಂದು ಕಣುಗ್ಲು ಮರದಿಂದ ಒಂದಷ್ಟ್ ಹೂ ಕಿತ್ಕಂಡ. ಅಲ್ಲೆ ಪಕ್ಕ ಬಾಲೇ ಹಣ್ ಮಾರ್ತಿದ್ದ ಮುದ್ಕಿ ಹತ್ರ ’ಒಂದು ಬಾಳೇಣ್ ಕೊಡವ್ವಾ’ ಅಂತ ಕೇಳ್ದ. ಆ ಮುದ್ಕಿ ಅವ್ಳ ಬುಟ್ಟಿನ ಸಣ್ಣನ್ ಕೈಲಿ ಎತ್ತಿಸ್ ಕಂಡು ತನ್ ತಲೆ ಮ್ಯಾಲೆ ಹೊರಿಸ್ಕಂಡು ಸಣ್ಣಂಗೆ ಒಂದು ಬಾಳೆ ಹಣ್ ಕೊಟ್ಟು ಮನೆ ಕಡೀಕ್ ಹೊರಡ್ತು. ಸಣ್ಣ ಪಕ್ಕದ್ ಬೀದಿಲಿ ಊದುಬತ್ತಿ ಮಸಿತಾ ಇದ್ದ ಹೆಣ್ ಮಕ್ಳ ಹತ್ರ ಹೋಗಿ 'ಒಂದೀಸು ಊದ್ ಬತ್ತಿ ಕೊಡ್ರವ್ವಾ' ಅಂತ ಕೇಳ್ದ. ’ಒಣ್ಗಾಕಿರೋ ಊದ್ ಬತ್ತಿನೆಲ್ಲಾ ಕಂತೆ ಕಟ್ ಕೊಡು’ ಅಂತ ಅವನ್ ಕೈಲಿ ಕಂತೆ ಕಟ್ಟಿಸ್ ಕೊಂಡು ಅವನಿಗೆ ನಾಕು ಊದ್ ಬತ್ತಿ ಕೊಟ್ರು. ಸಣ್ಣ ಅಲ್ಲಿಂದ ಗೌಡ್ರ ತೋಟದ್ ಕಡೀಕ್ ಬಂದ. ಗೌಡ್ರು ಅಷ್ಟೊತ್ಗೆ ಕಾಯಿ ಕೆದಗಿಸಿ ಮನೆ ಕಡಿಕೆ ಹೊರಟಿದ್ರು. ’ಗೌಡ್ರೇ ಹಣ್ ಕಾಯಿಗೆ ನಂಗೊಂದು ಕಾಯಿ ಕೊಡೀ’ ಅಂತ ಸಣ್ಣ ಕೇಳಿದ್ದಕ್ಕೆ ಅಲ್ಲೊಂದು ಬಾಗಿದ್ದ ತೆಂಗಿನ ಮರ ತೋರ್ಸಿ ’ಆ ಮರದಿಂದ ನೀನೇ ಕಾಯಿ ಕೆಡಿಕಳಪ್ಪಾ’ ಅಂದು ಹೋದ್ರು. ಸಣ್ಣ ಆ ಮರದ ಹತ್ರ ಹೋದ. ಅದನ್ನ್ ಹತ್ತಿದ. ಇನ್ನೇನು ಕಾಯಿ ಕೀಳಬೇಕು ಅನ್ನುವಷ್ಟರಲ್ಲಿ ಕೈ ಜಾರಿ ತೆಂಗಿನ ಮರದ ಮೊಟ್ಟೆ ಹಿಡಿದು ಜೋತಾಡತೊಡಗಿದ. ಆ ಮರದ ಕೆಳಗಡೆ ಒಂದು ಭಾರೀ ಬಾವಿ ಇತ್ತು. ಮಳೆ ಬಂದು ಅದರ ತುಂಬಾ ಚನ್ನಾಗಿ ನೀರು ತುಂಬಿತ್ತು. ಸಣ್ಣ ’ನನ್ನನ್ ಇಳಿಸ್ಕಳ್ರಪ್ಪಾ’ ಅಂತ ಕೂಗಿದ.
ತೋಟದ ಪಕ್ಕದ ದಾರಿಲಿ ಒಬ್ಬ ಅಜ್ಜ ಎತ್ತಿಡ್ಕೊಂಡು ಹೋಗ್ತಾ ಇದ್ದ. ಸಣ್ಣ ಕೂಗದನ್ನ್ ಕೇಳಿ ಯಾವ್ದೋ ದೆವ್ವ ಇರಬೇಕು ಅಂತ ಒಡೆಬಿದ್ ಓಡ್ದ. ’ಅಜ್ಜೋ ಅಜ್ಜಾ...ಬಾರಪ್ಪಾ ನಾನ್ ಕಣಪ್ಪಾ ಸಣ್ಣಾ’ ಅಂತ ಸಣ್ಣ ಕೂಗಿದ ಮೇಲೆ ಆ ಅಜ್ಜ ಬಾವಿತಕೆ ಬಂದು ಅವ್ನ ಎತ್ತನ್ನು ನಿಲ್ಲಿಸ್ಕಂಡು ಅದರ ಮ್ಯಾಲೆ ನಿಂತುಕೊಂಡು ಸಣ್ಣನ ಕಾಲು ಹಿಡಕೊಂಡ. ಅಜ್ಜನ ಕಾಲು ಎತ್ತಿಗೆ ಒತ್ತಿದಂಗಾಗಿ ಎತ್ತು ಆ ಕಡೆ ಓಡಿಬಿಡ್ತು. ತೆಂಗಿನ ಮರದ ಮೊಟ್ಟೆ ಹಿಡಕಂಡು ಸಣ್ಣ, ಸಣ್ಣನ ಕಾಲು ಹಿಡಕಂಡು ಅಜ್ಜ ಇಬ್ಬರೂ ನೇತಾಡ್ತಿದ್ರು. ಮತ್ತೆ ಆ ಕಡಿಕೆ ಯಾರೋ ಬರೋ ಸದ್ದಾಯ್ತು. ಚಾಮರಾಜನಗರದ ಸಾಹೇಬ್ರು ಕುದ್ರೆ ಮ್ಯಾಲೆ ಕೂತು ಬರ್ತಾ ಇದ್ರು. ಇವರಿಬ್ಬರೂ ಸಾಹೇರನ್ನ ಜೋರಾಗಿ ಕರೆದು ನಮ್ಮನ್ ಇಳಿಸ್ಕಳಿ ಅಂತ ಕೇಳಿಕಂಡ್ರು. ಸಾಹೇಬರು ಅವ್ರ ಕುದುರೆ ಮ್ಯಾಲೆ ನಿಂತು ಅಜ್ಜನ ಕಾಲು ಹಿಡಿದುಕೊಂಡ್ರು. ಕುದುರೆ ಬಾವಿಯೊಳಗಿದ್ದ ನೀರು ನೋಡಿ ಗಾಬರಿ ಬಿದ್ದೋಯ್ತು. ಒಂದೇ ನೆಗ್ತಕ್ಕೆ ಹಾರಿಕಂಡು ಆ ಕಡೆ ಹೋಗಿಬಿಡ್ತು. ಈ ಕಡೆ ತೆಂಗಿನ ಮೊಟ್ಟೆ ಹಿಡ್ಕಂಡು ಸಣ್ಣ, ಸಣ್ಣನ ಕಾಲ್ ಹಿಡ್ಕಂದು ಅಜ್ಜ, ಅಜ್ಜನ ಕಾಲ್ ಹಿಡ್ಕಂಡು ಸಾಹೇಬ್ರು ನೇತಾಡ್ತಾ ಇದ್ರು. ಕೆಳಗಡೆ ತುಂಬಿರೋ ಬಾವಿ ನೋಡಿ ಸಾಹೇಬ್ರಿಗೆ ಭಾಳಾ ಭಯ ಆಯ್ತು. ಹೆಂಡ್ತಿ ಮಕ್ಳು ಎಲ್ಲ ನೆನಪಿಗೆ ಬಂದ್ರು. ’ಸಣ್ಣಾ ಮರನ ಗಟ್ಟಿಗ್ ಹಿಡ್ಕಂಡಿದ್ರೆ ನಾನು ನಿಂಗೆ ನೂರು ರುಪಾಯಿ ಕೊಡ್ತಿನಿ’ ಅಂದ್ರು. ಅದ್ಕೆ ಆ ಅಜ್ಜ ’ಗಟ್ಟಿಗ್ ಹಿಡ್ಕಳ್ಳಾ. ನಾನೂ ನಿಂಗೆ ನೂರು ರುಪಾಯ್ ಕೊಡ್ತಿನಿ’ ಅಂದ. ಸಣ್ಣಂಗೆ ಕುಶಿನೋ ಕುಶಿ. ನನ್ ತಾವ ನೂರು ರುಪಾಯ್, ಸಾಹೇಬ್ರು ಕೊಡದು ನೂರು ರುಪಾಯ್, ಅಜ್ಜ ಕೊಡದು ನೂರು ರುಪಾಯ್...ಎಲ್ಲಾ ಸೇರ್ಸಿ ಇಷ್ಟಾಯ್ತದೆ...ಅಂತ ಎರದೂ ಕೈ ಬಿಟ್ಟು ಎಣಿಸ್ದ. ಮೂರು ಜನ ಗುರಿ ತಪ್ದೆ ಬಾವಿ ಒಳಿಕೇ ಬಿದ್ರು. ಸಣ್ಣೀ ಮನೆ ಕಡೆ ಇನ್ನೂ ಕಾಯ್ತಾ ಅವ್ಳೆ. ಸಣ್ಣ ಇನ್ನೂ ಎದ್ ಬಂದಿಲ್ಲ.
(ಸಂಗ್ರಹ)
ಕಲೆಯಾಗಿ-ಕಥೆಯಾಗಿ ನಮ್ಮ ಜಾನಪದದಲ್ಲಿ, ಜನಪದರ ಜೀವನದಲ್ಲಿ ಹಾಸುಹೊಕ್ಕಾಗಿರುವ ಕೆಲವು ಅಭ್ಯಾಸಗಳನ್ನು, ವಸ್ತುಗಳನ್ನು ಆಯಾಮದ ಓದುಗರಿಗಾಗಿ ಪರಿಚಯಿಸಿಕೊಡಲಿದ್ದೇವೆ. ಒಂದೂರಂತೆ ಅಂಕಣದಲ್ಲಿ ಕಥೆಗಳೊಂದಿಗೆ ನೆಂಚಿಕೊಳ್ಳಿ. |
'ಅಕ್ಕಂದಿರಿಗೆ' 'ಪಚ್ಚೆ'ಯಿಡುವ ದ್ರಾವಿಡ ಆಚರಣೆ-ಒಂದು ಪರಿಚಯ
ಚಿತ್ರ-ಲೇಖನ ಜಿ.ಶ್ರೀನಿವಾಸಯ್ಯ
ಚಿತ್ರ-ಲೇಖನ-ಜಿ.ಶ್ರೀನಿವಾಸಯ್ಯ.
ಮನುಷ್ಯರನ್ನು ಭೂತಗಳು, ಕ್ಷುದ್ರದೇವತೆಗಳು ಕಾಡಿ ಹಿಂಸಿಸುವ ನಂಬಿಕೆ ಜನಪದರಲ್ಲಿ ಸಾಮಾನ್ಯ, ಅಂತಹ ಕ್ಷುದ್ರದೇವತೆಗಳನ್ನು ಜನಪದರು ಅಗ್ಗರ್ಲು. ಅಗ್ಗಾರ್ಲು, ಅಗ್ಗಾರು ಎಂಬೆಲ್ಲ ಹೆಸರುಗಳಿಂದ ಕರೆಯುವರು. ಈ ಅಗ್ಗಾರ್ಲು ಎನ್ನುವುದು 'ಅಕ್ಕಗಾರು' ಎಂಬುದರ ಜಾನಪದ ರೂಪ. ತೆಲುಗಿನಲ್ಲಿ ಅಕ್ಕಗಾರು ಎಂದರೆ ಅಕ್ಕನವರು ಎಂದು. ಹಾಗಾದರೆ ಆ ಅಕ್ಕನವರಾರು? ಎಂಬ ಪ್ರಶ್ನೆ ಮೂಡುತ್ತದೆ. ಸಪ್ತ ಮಾತೃಕೆಯರನ್ನು ಏಳು ಜನ ಅಕ್ಕನವರೆಂದು ಕರೆಯಲಾಗುತ್ತದೆ. ಅಲ್ಲದೆ ಇವರನ್ನು ಜಕ್ಕಿಣಿಯರೆಂದೂ ಕರೆಯುವರು.
ಹೀಗೆ ನಂಬಲ್ಪಡುವ ಕ್ಷುದ್ರದೇವತೆಗಳಲ್ಲಿ ಎರಡು ವಿಧವಿರುತ್ತದೆ. ಒಂದು ಅಗ್ಗಾರ್ಲು ಮತ್ತೊಂದು ಮುನೇಶ್ವರ. ಇವು ಸಾಮಾನ್ಯವಾಗಿ ನಡು ಮಧ್ಯಾಹ್ನದ ಹೊತ್ತಿನಲ್ಲಿ ಆಗಸದಲ್ಲಿ ಓಡಾಡುತ್ತವೆಂದು, ಏಕಾಂಗಿಯಾಗಿ ಓಡಾಡುವವರನ್ನು, ತಮಗೆ ಬೇಕಾದವರನ್ನು ಹಿಡಿದು ಹಿಂಸಿಸುತ್ತವೆಂದು ನಂಬಿಕೆ. ಪ್ರತಿ ಗ್ರಾಮದ ಹೊರಭಾಗದಲ್ಲಿ ನೇರಳೆ, ಮಾವು, ಆಲ ಮತ್ತು ಬೇವಿನ ಗುಂಡು ತೋಪುಗಳಲ್ಲಿ ಈ ಅಕ್ಕನವರು ನೆಲೆಸಿರುತ್ತವೆಂದು ಜನ ಭಾವಿಸುತ್ತಾರೆ. ಅಂತಹ ಸ್ಥಳಗಳಲ್ಲಿ ಜನ ಸಂಚಾರ ಕಡಿಮೆಯಿರುತ್ತದೆ. ಅಲ್ಲಿಗೆ ಯಾರೂ ಹೋಗುವುದಿಲ್ಲ. ಇಂತಹ ಸ್ಥಳಗಳಲ್ಲಿ ಸಮಯವಲ್ಲದ ಸಮಯದಲ್ಲಿ ಓಡಾಡಿದಾಗ ಯಾರಿಗಾದರೂ ಅಕ್ಕಗಾರು ಗಾಳಿ ಸೋಕಿದರೆ ತೀವ್ರತರವಾದ ಜ್ವರ, ಕೈಕಾಲುನೋವು, ಕಣ್ಣುರಿ, ವಾಂತಿ ಬೇದಿ ಕಾಣಿಸಿಕೊಂಡು ಆ ವ್ಯಕ್ತಿಯು ಅಸ್ವಸ್ಥನಾಗುವನು ಎಂಬುದು ಜನಪದರಲ್ಲಿನ ನಂಬಿಕೆ. ಈ ಅಸ್ವಸ್ಥತೆ ಯಾವುದೇ ಔಷಧಿಗೂ ವಾಸಿಯಾಗುವುದಿಲ್ಲ; ಆಗ ತಿಳಿದಿರುವವರು "ಅಗ್ಗಾರ್ಲು ಸೋಕಿರಬಹುದು ಆಯಮ್ಮನಿಗೆ 'ಮೀದು' ಕಟ್ಟಿ"ಯೆಂದು ಹೇಳುವರು.
’ಮೀದು’ ಕಟ್ಟುವುದು
ಮುಗ್ಧವಾದ ಮದುವೆಯಾಗದ ಹುಡುಗನನ್ನು ಕರೆಯುವರು. ಅವನಿಗೆ ಮೂರು ಪ್ರಕಾರದ ಧಾನ್ಯಗಳನ್ನು, ಒಂದು ಅರಿಶಿನದ ಕೊಂಬನ್ನು, ಒಂದು ತಂಬಿಗೆಯನ್ನು, ಊದುಬತ್ತಿಯನ್ನು ಕೊಟ್ಟು ಹತ್ತಿರದ ಬಾವಿಗೋ ಆಥವಾ ಕುಂಟೆಯ ಹತ್ತಿರ ಕಳಿಸುವರು. ಆ ಹುಡುಗ ಆ ಬಾವಿ ಅಥವಾ ಕುಂಟೆಯಲ್ಲಿ ಕೈಕಾಲು ಮುಖ ತೊಳೆಕೊಳ್ಳುವನು. ತಂಬಿಗೆಯನ್ನು ತೊಳೆಯುವನು. ಆ ತಂಬಿಗೆಯ ತುಂಬಾ ನೀರನ್ನು ತೆಗೆದುಕೊಳ್ಳುವನು. ಅಲ್ಲೇ ಕಲ್ಲಿನ ಮೇಲೆ ಅರಿಶಿನವನ್ನು ಉಜ್ಜಿ ಗಂಧ ತೆಗೆದು ಒಂದು ಬಿಳಿ ಬಟ್ಟೆಯನ್ನು ಹಳದಿಗೊಳಿಸುವನು. ಅದರಲ್ಲಿ ಮೂರು ಪ್ರಕಾರದ ಧಾನ್ಯಗಳನ್ನು ಹಾಕಿಕಟ್ಟುವನು. ಅದನ್ನು ತಂಬಿಗೆಯ ಬಾಯಿಗೆ ಕಟ್ಟಿ ಊದುಬತ್ತಿ ಉರಿಸಿ ಪೂಜಿಸುವನು. ಅವರ ಮನೆದೇವರಿಗೆ, ಅಕ್ಕನರನ್ನು ಕುರಿತು ಪೂಜಿಸುವನು. ಹರಿಕೆಯನ್ನು ಹೊತ್ತುಕೊಳ್ಳುವನು. ಅಲ್ಲಿಂದ ಯಾರನ್ನೂ ಮಾತನಾಡದೇ ನೇರವಾಗಿ ಮನೆಗೆ ಬರುವನು. ರೋಗಿಯು ಹೆಂಗಸಾಗಿದ್ದರೇ ಆಕೆಯ ಎಡಗೈಗೂ, ಗಂಡಸಾಗಿದ್ದರೇ ಅವನ ಬಲಗೈಗೂ ಆ ಮೀದನ್ನು ಆಕಾಶ ಭೂಮಿಗೂ ನೀವಳಿಸಿ ಕಟ್ಟುವನು. ಆ ತಂಬಿಗೆಯಲ್ಲಿನ ನೀರನ್ನು ಮೂರು ಸಾರಿ ಕುಡಿಸುವನು. ಆ ವ್ಯಕ್ತಿಯನ್ನು ಅಸ್ವಸ್ಥಗೊಳಿಸಿರುವುದು ನಿಜವಾದ ಅಕ್ಕನವರಾಗಿದ್ದರೇ ಆ ಮೀದು ಕೆಂಪು ಬಣ್ಣಕ್ಕೆ ಬರುತ್ತದೆಂದೂ ಮತ್ತು ಆ ಮೀದಿನ ಕೆಂಪು ಬಣ್ಣವನ್ನನುಸರಿಸಿ ಅಕ್ಕನವರ ತೀವ್ರತೆಯನ್ನು ಜನ ನಂಬುತ್ತಿದ್ದರು.
ಒಂದು ವೇಳೆ ರೋಗಿಯು ಗುಣಮುಖನಾಗದಿದ್ದರೇ ಹತ್ತಿರದ ಕೊರವಂಜಿಯನ್ನು 'ಸಗಿಣ' (ಕಣಿ) ಕೇಳಲು ಭೇಟಿಯಾಗುತ್ತಿದ್ದರು. ಇಲ್ಲವೆ ಸಂತೆಯಲ್ಲಿ ಕೊರವಂಜಿಯ ಹತ್ತಿರ 'ಗೆದ್ದಿ' ಕೇಳುತ್ತಿದ್ದರು. ಆ ಕೊರವಂಜಿ ಧಾನ್ಯಗಳನ್ನು ಮುಟ್ಟಿ ರಾಗಬದ್ದವಾಗಿ ಇಂತಹ ದಿಕ್ಕಿನಲ್ಲೇ ಇಂತಹ ಸಮಯದಲ್ಲೇ ಎಂದು ತಿಳಿಸುವಳು. ಪೀಡಿಸಿತ್ತಿರುವದು ಅಕ್ಕನವರೇ, ಜಕ್ಕಿಣಿಯೇ, ಭೂತ-ಪ್ರೇತವೇ, ಹಾಗಿದ್ದರೆ ಅದು ಎಂತಹ ಅಕ್ಕನವರು ಎಂಬುದನ್ನು ತಿಳಿಸುವಳು. ಅಲ್ಲದೇ ಪರಿಹಾರವನ್ನೂ ಹೇಳುವಳು. ಅಕ್ಕಗಾರು ಹಿಡಿದಿರುವುದು ಎಂದಾದರೆ ಎರಡು ಕಾಲಿನ ಪ್ರಾಣಿಯನ್ನು ಬಲಿ ನೀಡುವಂತೆಯೂ, ಮುನೇಶ್ವರನು ಹಿಡಿದಿದ್ದರೇ ನಾಲ್ಕು ಕಾಲಿನ ಪ್ರಾಣಿಯನ್ನು 'ಪಚ್ಚೆಯಿಟ್ಟು' ಬಲಿ ನೀಡಬೇಕೆಂದು ತಿಳಿಸುತ್ತಾಳೆ. ಅಲ್ಲದೆ ಯಾವ ವಾರ, ಯಾವ ಸ್ಥಳದಲ್ಲಿ ಹಚ್ಚೆಯಿಡಬೇಕು ಎಂಬುದನ್ನು ತಿಳಿಸುತ್ತಾಳೆ.
’ಅಗ್ಗಾರ್ಲು’ ಪೀಡಿಕೆಯ ಪರಿಹಾರವಾಗಿ ಕುಂಬಾರನು ಮಾಡಿರುವ ಅಲಂಕಾರಮಯ ಕುದುರೆಗಳನ್ನು ಇಂತಹ ಗುಂಡು ತೋಪುಗಳಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲ್ಪಟ್ಟಿರುತ್ತದೆ. ರೋಗಿಯು ಕೊರವಂಜಿ ಹೇಳಿದ ದಿನದಂದು ಅಂತಹ ಕಡೆಗೆ ಹಚ್ಚೆ ಸಾಮಾನುಗಳೊಂದಿಗೆ ಹೆಡಿಗೆಯನ್ನು ಹೊತ್ತುಕೊಂಡು ಹೋಗುವ ವಾಡಿಕೆಯಿದೆ. ಅಲ್ಲದೆ ಕೈಯಾರೆ ಅಮದನ್ನ(ನೈವೇದ್ಯ) ಮತ್ತು ಅಮದಿನ ಎಲೆಯನ್ನು ತಯಾರಿಸಿ ಆಕೆಯನ್ನು ಪೂಜಿಸಿ ಬಲಿ ನೀಡಿ ಬರುವರು.
ರೋಗಿ ಮತ್ತು ಜೊತೆಗೊಬ್ಬರು ನಡೆಸುವ ಪೂಜಾ ಕಾರ್ಯ ಕೂಡಾ ಮತ್ತೊಂದಿದೆ. ಕೆಲವರು ಹೊಳೆ ಅಥವಾ ಕುಂಟೆಯ ರೇವಿನಲ್ಲಿ ಈ ’ದ್ಯಾವರನ್ನ’ ಮಾಡುತ್ತಾರೆ. 'ಓವಿಳಾಕು' (ಎಕ್ಕಲಸೊಪ್ಪು)ವಿನಿಂದ ಚಪ್ಪರ ಹಾಕಿ, ಗುಡಿಕಟ್ಟಿ ಅದರಲ್ಲಿ ಏಳು (ಸಪ್ತ ಮಾತೃಕೆಯರಿಗಾಗಿ) ಕಲ್ಲುಗಳನ್ನಿಡುವರು. ಅಲ್ಲಿಗೆ ಪಚ್ಚೆ ಸಾಮಾನುಗಳನ್ನೂ ದವಸ ಧಾನ್ಯಗಳನ್ನೂ ಹೆಡಿಗೆಯಲ್ಲಿ ತೆಗೆದುಕೊಂಡು ಹೋಗಿರುತ್ತಾರೆ. ಅಲ್ಲಿಯೇ ಒಲೆಯಿಟ್ಟು 'ಅಮದನ್ನ' (ನೈವೇದ್ಯ) ಮಾಡಿ, ಪಚ್ಚೆ ಸಾಮಾನುಗಳಿಂದ ದೇವರನ್ನು ಪೂಜಿಸುವರು. ಏಳು ನಿಂಬೆ ಹಣ್ಣುಗಳನ್ನು, ಗಾಜೂ, ಓಲೆಗರಿಯನ್ನಿಟ್ಟು ಕೋಳಿಯನ್ನು ಬಲಿ ಕುಯ್ಯುವರು. ಅದರ ರಕ್ತವನ್ನು ಅಮದನ್ನಕ್ಕೆ ಸುರಿದು ದ್ಯಾವರಿಗೆ ನಮಸ್ಕರಿಸಿ ಮನೆಗೆ ಬರುವರು. ಹೀಗೆ ಮಾಡಿದ ಅನಂತರ ಕಾಯಿಲೆ ವಾಸಿಯಾಗುವುದು ಎಂಬುದು ಜನಪದರ ನಂಬಿಕೆ. ಒಂದು ವೇಳೆ ಈ ರೀತಿ ಮಾಡದಿದ್ದರೇ ವ್ಯಕ್ತಿಯು ಕ್ಷೀಣಿಸುತ್ತಾ ಒಂದು ದಿನ ಸಾಯುತ್ತಾನೆ ಎಂಬುದೂ ಅವರ ನಂಬಿಕೆ.
ಈ ಮೇಲಿನ ಆಚರಣೆಯು ಅಪ್ಪಟ ದ್ರಾವಿಡ ಸಂಸ್ಕೃತಿಯ ಮಾತೃದೇವತಾ ಆರಾಧನೆಯ ಪಳಿಯುಕೆಯಂತೆ ಇಂದಿಗೂ ಆಚರಣೆಯಲ್ಲಿದ್ದು ಜನಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. |