ಬಿಪಿ ತೈಲ ಸೋರಿಕೆ ೬ ತಿಂಗಳ ನಂತರ-ಮುಂದಾಗಲಿರುವ ದುರಂತ
ಗಲ್ಫ್ ಆಫ್ ಮೆಕ್ಸಿಕೋ ನಲ್ಲಿ ಬಿಪಿಯ ಬೇಜಾವಾಬ್ದಾರಿತನ-ದುರಾಸೆಯಿಂದ ಮಿಲಿಯನ್ ಗಟ್ಟಲೆ ಕಚ್ಚಾ ತೈಲ ಸೋರಿ ಈಗ ಆರು ತಿಂಗಳಾದವು. ಬಿಪಿ ಡೀಪ್ ವಾಟರ್ ಹೊರೈಜನ್ ಎಂಬ ಬಾಯಿ ಸಿಡಿಸಿಕೊಂಡಿದ್ದ ತೈಲ ಬಾವಿಗೆ ಈಗ ಭದ್ರ ಮುಚ್ಚಳ ಹಾಕಿದ್ದೇನೆ ಎಂದು ಹೇಳಿಕೊಂಡಿದೆ. ಗಲ್ಫ್ ಆಫ್ ಮೆಕ್ಸಿಕೋ ನ ಸುಮಾರು ---ಮೈಲಿಗಳಷ್ಟು ತೀರದಲ್ಲಿ ಎಲ್ಲೆಂದರಲ್ಲಿ ಬಂದು ಒಟ್ಟು ಸೇರಿದ್ದ ಕಚ್ಚಾ ತೈಲದ ಕ್ಲೀನ್ ಅಪ್ ಕೆಲಸವನ್ನು ಚನ್ನಗಿ ನಿಭಾಯಿಸುತ್ತೇನೆ ಎಂತಲೂ ಆಣೆ ಮಾಡಿತ್ತು. ದೊಡ್ಡ ದೊಡ್ಡ ಕಾರ್ಪೋರೇಷನ್ ಗಳಿಗೆ ಹೀಗೆ ಇಲ್ಲಿ ಆಣೆ ಮಾಡಿ ಹಾಗೆ ಆಕಡೆ ತಿರುಗಿ ತುಪ್ಪೆಂದು ಉಗಿಯುವುದು ದಿನನಿತ್ಯದ ವಿಷಯ ಬಿಡಿ.
ಕಚ್ಚಾ ತೈಲದಲ್ಲಿ ಮುಳುಗಿ ಉಸಿರುಕಟ್ಟಿ ಸಾಯುತ್ತಿದ್ದ ಎಷ್ಟೋ ಪ್ರಾಣಿಗಳು, ಕಲ್ಮಶವಾದ ಸಮುದ್ರ, ಹಾಳು ಸುರಿದುಕೊಂಡ ತೀರಗಳ ಚಿತ್ರವನ್ನು ಪ್ರಪಂಚಾದ್ಯಂತದ ಮಾಧ್ಯಮ ಪ್ರಕಟಿಸಿತ್ತು. ಮಲಿನವಾದ ತೀರಗಳಲ್ಲಿ ಸೆಕ್ಯುರಿಟಿ ಗಾರ್ಡ್ ತಂಡಗಳನ್ನು ನೇಮಿಸಿ, ಜನ, ಮಾಧ್ಯಮದವರು ಬರದಂತೆ ತಡೆಯಲು ಬಿಪಿ ಹರ ಸಾಹಸ ಪಟ್ಟಿತ್ತು. ತೀರದಲ್ಲಿ ಗಲೀಜು ಕಂಡರೆ ತಾನೇ ತನ್ನ ಇಮೇಜು ದಿನ ನಿತ್ಯ ಹಾಳಾಗುವುದು?! ಅದು ಕಾಣದಿದ್ದರೆ...ಎಲ್ಲವೂ ಸರಿ ಹೋಯಿತೆಂದು ಸಾಧಿಸಬಹುದು ಎಂದು ಬಿಪಿ ಒಬಾಮಾ ಸರ್ಕಾರದ ಒಪ್ಪಿಗೆ ಪಡೆದು ರಾಸಾಯನಿಕಗಳನ್ನು (ಕೆಮಿಕಲ್ ಡಿಸ್ಪರ್ಸೆಂಟ್) ಉಪಯೋಗಿಸಿ ಸಮುದ್ರದ ನೀರಿನಲ್ಲಿ ತೀರದಲ್ಲಿ ತೇಲುತ್ತಿದ್ದ ಕಚ್ಚಾ ತೈಲವನ್ನು ರಾಸಾಯನಿಕವಾಗಿ ಕರಗಿಸಲು ಪ್ಲಾನ್ ಮಾಡಿತು. ತನ್ನ ದಂಡು, ಅಮೆರಿಕಾದ ನೌಕಾ ದಳದ ಕೋಸ್ಟಲ್ ಗಾರ್ಡ್, ತೈಲ ಸೋರಿಕೆಯಿಂದ ಉದ್ಯಮ-ಜೀವನ ಕಳೆದುಕೊಂಡು ಏನು ಕೆಲಸ ಸಿಕ್ಕರೂ ಬದುಕಿಗೆ ಸಾಕು ಎಂದು ಹತಾಶರಾಗಿರುವ ಆ ಪ್ರದೇಶದ ಜನರನ್ನು ಕಟ್ಟಿಕೊಂಡು ’ಸ್ವಚ್ಚತಾ ಕಾರ್ಯ’ ಶುರು ಮಾಡಿತು. ಸಾವಿರಾರು ಗ್ಯಾಲನ್ ಗಟ್ಟಲೆ ಕೆಮಿಕಲ್ ಗಳನ್ನು ಹೆಲಿಕಾಪ್ಟರ್, ವಿಮಾನ, ಹಡಗುಗಳ ಮೂಲಕ ಸ್ಪ್ರೇ ಮಾಡಿತು. ನೀರ ಮೇಲೆ ತೇಲುತ್ತಿದ್ದ-ಕಾಣುತ್ತಿದ್ದ ತೈಲ ನಿಧಾನಕ್ಕೆ ಮಾಯವಾಗತೊಡಗಿತು. ಅತ್ತ, ವಾಶಿಂಗ್ಟನ್ ನಲ್ಲಿ ಬಿಪಿ ಮಧ್ಯಂತರ ಚುನಾವಣೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಸೆನೇಟರ್ ಗಳನ್ನು, ಕಾಂಗ್ರೆಸ್ ಸದಸ್ಯರನ್ನು ಶಿಷ್ಟವಾಗಿ, ವ್ಯವಸ್ಥಿತವಾಗಿ ಕೊಳ್ಳತೊಡಗಿತು. ಆ ಕಡೆ ಹೆಚ್ಚು ಪೊಲಿಟಿಕಲ್ ಮಿಕಗಳು ಜೇಬಿಗೆ ಬಿದ್ದಂತೆ, ಈ ಕಡೆ ’ಕೆಲಸ ಸಾಂಗವಾಗಿ ನಡೆಯುತ್ತಿದೆ...ಇನ್ನು ನಾನು ವರ್ಕ್ ಫೋರ್ಸ್ ಕಮ್ಮಿ ಮಾಡಿಕೊಳ್ಳುತ್ತೇನೆ’ ಎಂದು ಸ್ವಚ್ಚತಾ ಕೆಲಸಕ್ಕೆಂದು ಕೆಲಸಕ್ಕೆ ತೆಗೆದುಕೊಂಡಿದ್ದವರಿಗೆ ಕೈ ಕೊಡಲಾರಂಭಿಸಿತು.
ಈಗ ಗಲ್ಫ್ ಆಫ್ ಮೆಕ್ಸಿಕೋ ತೀರದ ಜನ ದಿಕ್ಕೆಟ್ಟಿದ್ದಾರೆ. ಅವರ ಗೋಳನ್ನು ಕೇಳಲು-ಪ್ರಸರಿಸಲು ಯಾವ ದೊಡ್ಡ ಟಿವಿ ಚಾನೆಲ್ ಗಳೂ ಬರುತ್ತಿಲ್ಲ. ಅವರೆಲ್ಲ ಸಡನ್ ಆಗಿ ಬಿಪಿ ತೈಲ ಸೋರಿಕೆ ಪ್ರಕರಣ ಕುರಿತಂತೆ ಕಿವುಡರೂ-ಮೂಕರೂ ಆಗಿಬಿಟ್ಟಿದ್ದಾರೆ. ಇತ್ತ ಜನ ಬಿಪಿ ಬಳಸಿದ್ದ ರಾಸಾಯನಿಕಗಳನ್ನು ಹಗಲು ರಾತ್ರಿ ಉಸಿರಾಡಿ ಅತೀವ ಆರೋಗ್ಯ ಹಾನಿಗೆ ಒಳಗಾಗುತ್ತಿದ್ದಾರೆ. ಸಾವುಗಳಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಹೆಸರು ಹೇಳಿಕೊಂಡು ಮುಂದೆ ಬಂದು ಸತ್ಯದ ವಿವರಣೆ ಕೊಡುತ್ತಿಲ್ಲ. ಆದರೂ ಸತ್ಯ ಹೊರಬರುತ್ತಿದೆ.
ಬಿಪಿ ಗಲ್ಫ್ ಆಫ್ ಮೆಕ್ಸಿಕೋನಲ್ಲಿ ಕಚ್ಚಾ ತೈಲ ಸ್ವಚ್ಚ ಮಾಡಲು ಬಳಸಿದ ಡಿಸ್ಪರ್ಸೆಂಟ್ ಗಳು ಕೆಲಸ ಮಾಡುವುದು ಹೀಗೆ: ಡಿಸ್ಪರ್ಸೆಂಟ್ ಗಳು ಪೆಟ್ರೋಲಿಯಂ ಡಿಸ್ಟಿಲೇಟ್ಸ್ ಮತ್ತು ಬ್ಯುಟೋಕ್ಸಿಎಥೆನಾಲ್ ಗಳೆಂಬ ಕೆಲವು ಕರಗಿಸುವ ರಾಸಾಯನಿಕಗಳಿಂದ ಮಾಡಲ್ಪಟ್ಟಿರುತ್ತವೆ. ಅವು ನೀರ ಮೇಲೆ ತೇಲುತ್ತಿರುವ ಕಚ್ಚಾ ತೈಲವನ್ನು ಸೇರಿ ಅದನ್ನು ಸಣ್ಣ ಸಣ್ಣ ಕಣಗಳಾಗಿ ಒಡೆಯುತ್ತವೆ. ಕಣವಾಗುವ ತೈಲ ನಿಧಾನವಾಗಿ ಸಮುದ್ರದ ತಳ ಸೇರುತ್ತದೆ. ಅಲ್ಲಿ, ಬ್ಯಾಕ್ಟೀರಿಯಾಗಳು ಆ ಕಣಗಳನ್ನು ಮತ್ತಷ್ಟು ಸರಳವಾಗಿ ಒಡೆದು ಅವು ನೀರಿನಲ್ಲಿ ಸಂಪೂರ್ಣವಾಗಿ ಕರಗುವಂತೆ ಮಾಡುತ್ತವೆ. ಇದು ಗೊತ್ತಿರುವ ಮತ್ತು ಬಿಪಿ ಮಾರಾಟಮಾಡುತಿರುವ ವೈಜ್ನಾನಿಕ ವಿವರಣೆ. ಬ್ಯುಟೋಕ್ಸಿಎಥೆನಾಲ್ ಒಂದು ಹಾನಿಕಾರಕ ರಾಸಾಯನಿಕ. ಇದು ರಕ್ತ, ಯಕೃತ್ ಸಮಸ್ಯೆಗಳಿಗೆ ಕಾರಣವಾಗುವುದರ ಜೊತೆಗೆ ವಾಂತಿ-ಬೇಧಿ, ದೇಹವನ್ನು ನಿರ್ಜಲೀಕರಿಸುವಂತೆಯೂ ಮಾಡುತ್ತದೆ.
ಗಲ್ಫ್ ಆಫ್ ಮೆಕ್ಸಿಕೋನ ನೂರಾರು ನಿವಾಸಿಗಳು ಮೂರು ನಾಲ್ಕು ತಿಂಗಳುಗಳಿಂದ ಉಸಿರಾಟದ ತೊಂದರೆಗಳು, ಚರ್ಮದ ಮೇಲೆ ಬಗೆಬಗೆಯ ತುರಿಕೆ-ಕಜ್ಜಿಗಳನ್ನು, ಎದೆ ಉರಿತ, ಕಿವಿಯಿಂದ ರಕ್ತ ಬರುತ್ತಿರುವ ಸಮಸ್ಯೆಗಳನ್ನು ದಾಖಲು ಮಾಡಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿಲ್ಲ, ಅವರಲ್ಲಿ ಹೆಚ್ಚಿನವರಿಗೆ ಉದ್ಯಮ-ಕೆಲಸ ಇಲ್ಲ. ಹಾಗಾಗಿ ’ಹೆಲ್ತ್ ಇನ್ಶೂರೆನ್ಸ್’ ಇಲ್ಲ! ಹೆಲ್ತ್ ಇನ್ಶೂರೆನ್ಸ್ ಇಲ್ಲದಿದ್ದರೆ ಡಾಕ್ಟರರೂ ಸಿಗುವುದಿಲ್ಲ, ಹೆಲ್ತೂ ಇಲ್ಲ! ಅಮೆರಿಕಾದ ಇನ್ನೊಂದು ಕಾರ್ಪೋರೇಟ್ ದುರಂತ ಈ ಹೆಲ್ತ್ ಕೇರ್ ಪಾಲಿಸಿಯ ಕಥೆ. ಅದನ್ನು ಮತ್ತೆ ಮಾತಾಡೋಣ.
ರಿಕಿ ಆಟ್, ಈಕೆ ಅಮೆರಿಕಾದ ಖ್ಯಾತ ಮರೀನ್ ಬಯಾಲಜಿಸ್ಟ್. ಹಿಂದೆ ಅಲಸ್ಕಾದಲ್ಲಿ ಎಕ್ಸಾನ್ ತೈಲ ಕಂಪನಿ ಕಾರಣವಾಗಿದ್ದ ತೈಲ ಸೋರಿಕೆಯಲ್ಲಿ ವ್ಯಕ್ತಿಗತವಾಗಿ ಕಷ್ಟ ಅನುಭವಿಸಿದ್ದವರು. ಅವರು ಕಳೆದ ಐದು ತಿಂಗಳಿನಿಂದ ಗಲ್ಫ್ ಆಫ್ ಮೆಕ್ಸಿಕೋನಲ್ಲಿ ತಂಗಿ ಡಾಕ್ಯುಮೆಂಟರಿಯೊಂದಕ್ಕೆ ಸಂದರ್ಶನ ನೀಡಿ ತಾವು ದಿನನಿತ್ಯ ಗಲ್ಫ್ ಆಫ್ ಮೆಕ್ಸಿಕೋನಲ್ಲಿ ನೋಡಿದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ರಿಕಿ ತಾವು ಖುದ್ದಾಗಿ ಹಲವಾರು ಶವಗಳ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಪಾಲ್ಗೊಂಡದ್ದಾಗಿ ತಿಳಿಸುತ್ತಾರೆ. ಹಾನಿಕಾರಕ, ಸ್ಟ್ರಾಂಗ್ ರಾಸಾಯನಿಕಗಳನ್ನು ಉಸಿರಾಡಿದ್ದರಿಂದ ಕೆಲವು ದೇಹಗಳಲ್ಲಿನ ಶ್ವಾಸಕೋಶಗಳು ಚಿಕ್ಕದಾಗಿ ಸಂಕುಚಿತಗೊಂಡಿದ್ದಾಗಿ, ಮತ್ತೆ ಕೆಲವರ ಉಸಿರಾಟದ ವ್ಯವಸ್ಥೆ (ಅಪ್ಪರ್ ರೆಸ್ಪರೇಟರಿ ಸಿಸ್ಟಮ್) ಸಂಪೂರ್ಣ ಕರಗಿಹೋಗಿದ್ದಾಗಿಯೂ ತಿಳಿಸುತ್ತಾರೆ. "ಗಲ್ಫ್ ಆಫ್ ಮೆಕ್ಸಿಕೋನ ಎಷ್ಟೋ ಸಂಸಾರಗಳು ಊರು ಬಿಟ್ಟಿವೆ. ಈಗ ಅಲ್ಲಿ ಉಳಿದಿರುವ ಜನರಲ್ಲಿ ಹೆಚ್ಚು ಎಲ್ಲರೂ ಒಂದಲ್ಲಾ ಒಂದು ರೀತಿಯ ಉಸಿರಾಟದ ತೊಂದರೆ, ಚರ್ಮವ್ಯಾಧಿಯಿಂದ ಬಳಲುತ್ತಿದ್ದಾರೆ. ಅಲ್ಲಿನ ವೈದ್ಯರು ಅವರಿಗೆ ನಾಲ್ಕೈದು ಸುತ್ತುಗಳ ಆಂಟಿಬಯಾಟಿಕ್ಸ್ ಕೊಟ್ಟು ಸುಮ್ಮನಾಗುತ್ತಿದ್ದಾರೆ. ಯಾಕೆಂದರೆ ಆ ವೈದ್ಯರಿಗೆ ವಿಷಯುಕ್ತ ರಾಸಾಯನಿಕಗಳಿಂದ ಉಂಟಾದ ಕಾಯಿಲೆಗಳನ್ನು ಗುಣಪಡಿಸುವ ಅಭ್ಯಾಸ, ತರಬೇತಿ ಇಲ್ಲ. ಜನರಿಗೆ ನಿಪುಣ ವೈದ್ಯರಿರುವ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಅವರಿಗೆ ಇನ್ಶೂರೆನ್ಸ್ ಇಲ್ಲ...ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಇದು ಇವತ್ತಿಗೆ ಮುಗಿಯುವುದಲ್ಲ...ಈ ಆರೋಗ್ಯದ ಸಮಸ್ಯೆ ಇನ್ನು ಮುಂದೆ ದೊಡ್ಡದಾಗಿ ಕಾಡಲಿದೆ...ಬಹಳ ಸಾವುಗಳಿಗೆ ಕಾರಣವಾಗಲಿದೆ...ಇದರಲ್ಲಿ ಬಿಪಿಯದ್ದಷ್ತೇ ಅಲ್ಲ. ಅದನ್ನು ಈಗ ವಹಿಸಿಕೊಂಡಿರುವ ಅಮೆರಿಕಾದ ಅಧ್ಯಕ್ಷರಿಗೆ, ವಿಷಯವನ್ನು ಮುಚ್ಚಿಡುತ್ತಿರುವ ಮಾಧ್ಯಮದವರಿಗೆ ಇದು ಛೀಮಾರಿಯ ವಿಷಯ" ಎನ್ನುತ್ತಾರೆ.
ಜನರ ಬವಣೆ ಮಾತನಾಡುವುದಕ್ಕೆ ರಿಕಿಯಂತ ಒಬ್ಬಿಬ್ಬರಾದರೂ ಇದ್ದಾರೆ. ಆದರೆ ಜಲಚರಗಳ ಕಥೆ? ಈಗಾಗಲೇ ಅಸಂಖ್ಯಾತ ಡಾಲ್ಫಿನ್ ಮರಿಗಳು, ಕದಲಾಮೆಗಳು, ಬಗೆಬಗೆಯ ಮೀನುಗಳು, ಪಕ್ಷಿಗಳು ಸತ್ತು ದದ ಸೇರಿವೆ ಅಥವಾ ರಾಸಾಯನಿಕದಲ್ಲಿ ಕರಗಿಹೋಗಿವೆ. ಬಿಪಿ ಇನ್ನೂ ಪ್ರತಿಯೊಂದು ತೀರವನ್ನು ಖಾಸಗಿ ಸೆಕ್ಯುರಿಟಿ ಗಾರ್ಡ್ ಗಳನ್ನಿಟ್ಟು ಪಹರೆ ಮಾಡುತ್ತಿದೆ. ರಾತ್ರಿ ಹೊತ್ತು ದಡಕ್ಕೆ ತೇಲಿ ಬರುವ ಸತ್ತ ಪ್ರಾಣಿಗಳ ತಲೆಯನ್ನು ಬೆಳಗಿನಷ್ಟರಲ್ಲಿ ಕತ್ತರಿಸಲಾಗಿರುತ್ತದೆ. ತಲೆ ಇಲ್ಲದ ಪ್ರಾಣಿಗಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಬಾರದೆಂಬ ಒಂದು ನಿಯಮವನ್ನು ಬಿಪಿ ಹೀಗೆ ದುರುಪಯೋಗ ಮಾಡಿಕೊಳ್ಳುತ್ತಿದೆ.
ತಿಂಗಳುಗಳಿಂದ ಗಲ್ಫ್ ಆಫ್ ಮೆಕ್ಸಿಕೋನಲ್ಲಿ ನೆಲೆ ನಿಂತಿರುವ ಯುವ ಪತ್ರಕರ್ತರು, ಸತ್ಯ ಶೋಧಕರು, ಛಾಯಾಚಿತ್ರಗಾರರು, ಪರಿಸರವಾದಿಗಳು ಬಿಪಿಯ ಹಣದ ಅಬ್ಬರದ ಮುಂದೆ ಸಣ್ಣದಾಗಿಯಾದರೂ ಹೋರಾಟ ಮುಂದುವರಿಸಿದ್ದಾರೆ. ಒಬಾಮ ತನ್ನನ್ನು ಆರಿಸಿದ್ದ ಬಹುಸಂಖ್ಯಾತರ ನಿರೀಕ್ಷೆಯನ್ನು ಹುಸಿಗೊಳಿಸಿ ಹಳೇ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಬಿಪಿ ಇನ್ನೆಲ್ಲೋ ಬಾವಿ ತೋಡುತ್ತಿದೆ. ದೇಶದ ಎಕಾನಮಿ ತನ್ನದೇ ಗುಂಡಿ ತೋಡಿಕೊಳ್ಳುತ್ತಿದೆ. ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿರುವ ಅಮೆರಿಕನ್ ಜನ ಸಾಮಾನ್ಯ ಎಲ್ಲಿ ಮೊರೆ ಹೋಗುವುದು...ಯಾರನ್ನು ದೂಷಿಸುವುದು ತಿಳಿಯದೆ ದಿಕ್ಕುಗೆಟ್ಟಿದ್ದಾನೆ.
ಕುಲಾಂತರಿ ತಳಿ-ನೀವೇ ನೋಡಿ! |
ಭಾಗ-೪
ಜೆನೆಟಿಕಲಿ ಮಾಡಿಫೈಡ್ ತಳಿಗಳ ಬಗ್ಗೆ ಆಹಾರ ಧಾನ್ಯಗಳ ಬಗ್ಗೆ ರಾಬರ್ಟ್ ಕೆನ್ನರ್ ಎಂಬ ನಿರ್ದೇಶಕ ಆರು ವರ್ಷಗಳ ಕಾಲ ಕೆಲಸ ಮಾಡಿ, ಸಂಶೋಧನೆ-ಅಧ್ಯಯನ-ಪರಿಶೀಲನೆ ನಡೆಸಿ ಫುಡ್ ಇಂಕ್ (Food, Inc.) ಎಂಬ ಡಾಕ್ಯುಮೆಂಟರಿಯೊಂದನ್ನು ನಿರ್ದೇಶಿಸಿದರು. ಅಮೆರಿಕಾದ ಆಹಾರದ ’ಕೈಗಾರಿಕೆ’ಯ ನಗ್ನ ಸತ್ಯಗಳನ್ನು ಆದಷ್ಟು ಡೀಸೆಂಟ್ ಆಗಿ ಬಿಂಬಿಸಿದ್ದರು. ಇವತ್ತು ಅಮೆರಿಕಾದಲ್ಲಿ ಅತಿ ದೊಡ್ಡ ಖಾಯಿಲೆಯಾಗಿ ಕೈಮೀರುವ ಹಂತಕ್ಕೆ ಬಂದಿರುವ ಒಬೆಸಿಟಿ ಅಥವಾ ಸ್ಥೂಲ ಕಾಯತ್ವಕ್ಕೆ ಜೆನೆಟಿಕಲಿ ಮಾಡಿಫೈಡ್ ಆಹಾರವೂ ಮುಖ್ಯ ಕಾರಣ ಎಂದು ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು. ಫುಡ್ ಇಂಕ್ ಕಲಿತವರಿಗೆ, ಆಸಕ್ತರಿಗೆ, ಡಾಕ್ಯುಮೆಂಟರಿ ನೋಡಲು ಸಮಯ, ವ್ಯವಧಾನ ಇರುವವರಿಗೆ ಮಾತ್ರ ಸಹಾಯವಾಯಿತು. ತಲುಪಬೇಕಾದವರನ್ನು ತಲುಪಲಿಲ್ಲ. ಸರಕಾರ ಕಿವುಡು ಮೂಕಾಗೇ ಉಳಿಯಿತು. ಮಾಡುವ ಡಾಕ್ಯುಮೆಂಟರಿ, ಚಲನಚಿತ್ರಗಳಿಗೆಲ್ಲಾ ಸರ್ಕಾರ ಪ್ರತಿಕ್ರಿಯಿಸುವುದೇ? ಅದೂ ಅಮೆರಿಕನ್ ಸರ್ಕಾರ? ಉಹುಂ. ಆಹಾರದ ಇಂಡಸ್ಟ್ರಿಯನ್ನು ತಮ್ಮ ಹತೋಟಿ, ಹದ್ದುಬಸ್ತಿನಲ್ಲಿಟ್ಟಿರುವವರು ಅತಿ ದೊಡ್ಡ ಕಾರ್ಪೊರೇಷನ್ಗಳು. ಅವರ ಶಕ್ತಿ ಅಪಾರ. ಆಹಾರದ ವಿಷಯದಲ್ಲಿ ಸರ್ಕಾರ ಏನಾದರೂ ಬದಲಾವಣೆಗೆ ಕೈ ಹಾಕಿದರೆ ಅದು ಗಡಗಡನೆ ಅಲ್ಲಾಡುವುದು ಖಂಡಿತ. ಇದು ಅಮೆರಿಕಾದ ಸರ್ಕಾರದ ಪರಿಸ್ತಿತಿ. ಪ್ರಪಂಚಕ್ಕೆಲ್ಲಾ ಕಾಡಿ, ಕಜೆ ಮಾಡಿ, ಬೇಡದ ಪಾಡುಕೊಡುವ ಅಮೆರಿಕಾ ಸರ್ಕಾರಕ್ಕೆ ತನ್ನದೇ ಆದ ಯಾವ ಅಸ್ತಿತ್ವವೂ ಇಲ್ಲ. ಅದು ಕಾರ್ಪೊರೇಷನ್ ಗಳ ಕೈಗೊಂಬೆ. ಈಗ ನಾವು ಮಲ್ಟಿ ನ್ಯಾಷನಲ್ ಕಂಪನಿಗಳೆಂದು ಕರೆದು ಮಣೆ ಹಾಕುತ್ತಿರುವ ಕಂಪನಿಗಳೂ ಈ ಕಾರ್ಪೊರೇಷನ್ ನ ಸಣ್ಣ ಸಣ್ಣ ಬೇರುಗಳೇ. ನಮ್ಮ ನಿಮ್ಮಂತಹ ಕೋಟ್ಯಾಂತರ ಜನ, ಪ್ರಪಂಚದ ಮೂಲೆ ಮೂಲೆಗಳಿಂದ ಇವುಗಳಿಗೆ ದುಡಿದೇ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ನಾವೂ ಅದರ ಕಣಗಳೇ. ಆದರೆ ಅದರ ಉದ್ದೇಶ ನಮ್ಮದಾಗಬಾರದು. ನಮ್ಮ ಉದ್ದೇಶ ಕೊಲ್ಲುವುದೋ, ಕಬಳಿಸುವುದೋ, ಬಲಿಯಾಗುವುದೋ ಆಗಬಾರದು.
ಪ್ರಕೃತಿಯ ಪ್ರತಿಯೊಂದು ಕಣಕ್ಕೂ (particle) ಅದರದ್ದೇ ಜೀವ, ಐಡೆಂಟಿಟಿ ಇರುತ್ತದೆ. ನಮ್ಮದೇ ದೇಹದ ಒಂದಷ್ಟು ಪುಟಾಣಿ ಕಣಗಳು ನಮ್ಮ ವಿರುದ್ಧ ಸೆಡ್ಡು ಹೊಡೆದಾಗ ದೇಹಕ್ಕೆ ಇಲ್ಲದ ಅನಾರೋಗ್ಯ ಬರುತ್ತದೆ. ಅದೇ ರೀತಿಯಲ್ಲೇ, ನಾವು, ಪ್ರತಿಯೊಬ್ಬರೂ, ಸೆಡ್ಡು ಹೊಡೆದ ಒಂದು ಪುಟ್ಟ ಕಣದಂತಾಗಬೇಕು. ನಮ್ಮ ಹೋರಾಟ ನಮ್ಮ ಸ್ವಸ್ತ ಬದುಕಿಗಾಗಿ ಆಗಬೇಕು. ನಮ್ಮ ಮಕ್ಕಳ, ನಮ್ಮ ಭೂಮಿಯ, ನಮ್ಮ ಜೀವನದ ಒಳಿತಿಗಾಗಿ ಆಗಬೇಕು...ಎಲ್ಲವೂ ಒಂದು ಕಣದಿಂದಲೇ, ಒಂದು ಮನದಿಂದಲೇ ಶುರುವಾಗಬೇಕು.
|
|