ಮಾರ್ಚ್ ನಲ್ಲಷ್ಟೇ ೭.೦ ಮ್ಯಾಗ್ನಿಟ್ಯೂಡ್ ನ ಭೂಕಂಪವೊಂದರಿಂದ, ಸೆಪ್ಟೆಂಬರ್ ನಲ್ಲಿ ಸುನಾಮಿಯ ಬೆದರಿಕೆಯಿಂದ ಸುಧಾರಿಸಿಕೊಳ್ಳುತ್ತಿದ್ದ ಇಂಡೊನೇಷಿಯಾ ಅಕ್ಟೋಬರ್ ೨೬-೨೭ ರ ೪೮ ಗಂಟೆಗಳಲ್ಲಿ ಮೆರಾಪಿ ಜ್ವಾಲಾಮುಖಿಯ ಸಿಡಿತ, ಪಾಪುವ ಪ್ರಾಂತ್ಯದ ೭.-೬.೬ ಮ್ಯಾಗ್ನಿಟ್ಯೂಡ್ ನ ಎರಡು ಭೂಕಂಪ ಮತ್ತು ಮೆಂಟವೈ ದ್ವೀಪದ ಸುನಾಮಿಯಿಂದ ತತ್ತರಿಸಿದೆ. ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ, ಲಕ್ಷಾಂತರ ಜನ ಮನೆ ಮಾರು ಕಳೆದುಕೊಂಡಿದ್ದಾರೆ.
ನೈಸರ್ಗಿಕ ವಿಕೋಪಗಳಿಂದ ಸಾವು ನೋವುಗಳಾಗುವುದು ದಿನ ನಿತ್ಯದ ಸುದ್ದಿಯಂತಾಗಿಬಿಟ್ಟಿದೆ. ನೈಸರ್ಗಿಕ ವಿಕೋಪಕ್ಕೆ ನಾವು ಏನೂ ಮಾಡಲಾಗುವುದಿಲ್ಲ. ಪ್ರಾಣಿಪಕ್ಷಿಗಳು-ಜನ ಸತ್ತರೆ ಸಾಯುತ್ತಾರೆ, ನನ್ನ ದೇಶ ಕೈಲಾದ ನೆರವು ಕಳಿಸುತ್ತದೆ ಎಂದು ಸುಮ್ಮನಾಗಿ ಬಿಡುತ್ತೇವೆ. ಹೌದು. ನಾನು ಜನ ಸಾಮಾನ್ಯ. ನಾನೇನು ತಾನೇ ಮಾಡಬಲ್ಲೆ? ಅಸಹಾಯಕತೆ ಮತ್ತು ಅಷ್ಟೇ ನನ್ನಿಂದಾಗುವುದು ಎಂಬ ಧೋರಣೆಯಲ್ಲಿ ಜನ ಸುಮ್ಮನಾಗಿ ಬಿಡುತ್ತಾರೆ. ಒಂದಷ್ಟು ಜನ ಬರೆದುಕೊಂಡೋ, ಅಂತರ್ರಾಷ್ಟ್ರೀಯ ನೆರವಿನ ಸಂಸ್ಥೆಗಳಿಗೆ ನಮಗಾದ ಹಣ ಸಹಾಯ ಮಾಡಿಯೋ ಸುಮ್ಮನಾಗುತ್ತಾರೆ. ಆದರೆ ’ಡಾಕ್ಟರ್ಸ್ ವಿತೌಟ್ ಬೋರ್ಡರ್ಸ್’ ನ ಸುಂದರ ಮನಸ್ಸುಗಳು ಪ್ರವಾಹ ಪೀಡಿತ ಪಾಕಿಸ್ತಾನದಲ್ಲಿ, ಕಾಲಾ ಅಜಾರ್ ಪ್ಯಾರಸೈಟ್ ಪೀಡಿತ ಸೂಡಾನ್ ನ ಪ್ರಾಂತ್ಯಗಳಲ್ಲಿ, ಹೈಟಿಯ ಮಲೇರಿಯಾ ಗ್ರಸ್ತ ಜಾಗಗಳಲ್ಲಿ, ಇಂಡೊನೇಷಿಯಾದ ಜ್ವಾಲಾಮುಖಿಯ ಧೂಳಿನಡಿಯಲ್ಲಿ ಸದ್ದಿಲ್ಲದೇ ತಮ್ಮ ಕಾಯಕ ಮಾಡುತ್ತಾರೆ. ೧೯೭೧ ರಲ್ಲಿ ಫ್ರೆಂಚ್ ಡಾಕ್ಟರ ಪುಟ್ಟ ತಂಡವೊಂದರಿಂದ ಶುರುವಾದ ಈ ಸಂಸ್ಥೆಯ ಜೀವಾಳ ಇದಕ್ಕಾಗಿ ಕೆಲಸ ಮಾಡುವ ಕಾಯಕ ತಪಸ್ವಿಗಳು.
ಇವರೆಲ್ಲರೂ ಮನುಷ್ಯರೇ. ಆದರೆ ಅಸಾಮಾನ್ಯ ಮನಸ್ಸಿನವರು, ಮನೋಭಾವದವರು. ಅವರಿಗೆ ತಮ್ಮ ತುಡಿಯುವ ಮನಸ್ಸಿಗೆ ಅಗ್ನಿ ಹಚ್ಚಿ ರಾಕೆಟ್ ಥರದಲ್ಲಿ ಎಲ್ಲಿಗೆ ಬೇಕೋ ಅಲ್ಲಿಗೇ ಹೋಗಿ, ತಾವು ಮಾಡಲಾಗುವ ಕೆಲಸವನ್ನು, ಸಹಾಯವನ್ನು ಅಚ್ಚುಕಟ್ಟಾಗಿ ಮಾಡಿಬರುವ ಹುಚ್ಚು, ಅದಮ್ಯ ಪ್ರೀತಿ. ನಾಳೆ ನಾವೂ ಸಹಾಯ ಮಾಡಬಹುದು ಎಂದು ತಮ್ಮ ಕೈಲಾಗುವುದನ್ನು ಮಾಡಲು ಎಂದೂ ಕಾಣದ ನಾಳೆಗಳಿಗೆ ಕಾಯುವ ಕೋಟ್ಯಾಂತರ ಕಳ್ಳ ಮನಸ್ಸುಗಳ ತಲೆತರಿಯುವಂತಹ ಉತ್ಸಾಹ, ಪ್ರಾಮಾಣಿಕತೆ, ತೇಯುವಿಕೆ. ಕಡಿಮೆಯೆಂದರೂ ವಿಶ್ವದಾದ್ಯಂತ ೨೭,೦೦೦ ಮಂದಿಯ ತಂಡವನ್ನು ಹೊಂದಿರುವ ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ ಸಂಸ್ಥೆ ವಿಶ್ವ ಮುಕ್ಕಾಲು ಪಾಲು ದೇಶಗಳಲ್ಲಿ ವರ್ಷವಿಡೀ ನಿರಂತರ ಕೆಲಸ ಮಾಡುತ್ತದೆ. ನೈಸರ್ಗಿಕ ವಿಕೋಪಗಳಾಗಿ ಅಸಂಖ್ಯಾತ ಜನರಿಗೆ ವೈದ್ಯಕೀಯ ಅಗತ್ಯ ಬೇಕಾದಾಗ, ಬಡ ರಾಷ್ಟ್ರಗಳಲ್ಲಿ ದಿನನಿತ್ಯದ ವೈದ್ಯಕೀಯ ಪರೀಕ್ಷೆಗಾಗಿ, ಸಾಂಕ್ರಾಮಿಕ ರೋಗಗಳು ಮೇರೆ ಮೀರಿದಾಗ, ರಾಜಕೀಯ ದಂಗೆ ಗಲಭೆಗಳಾದ ಜಾಗಗಳಲ್ಲಿ ತನ್ನ ಟೆಂಟು ಕಟ್ಟಿ ನೋವಿಗೊಳಗಾದವರಿಗೆ ಶುಶ್ರೂಷೆ ಮಾಡುತ್ತದೆ.
ಜನರನ್ನು, ಅವರ ಹಿತವನ್ನು, ಜೀವನವನ್ನು ಕಾಪಾಡುವುದೇ ನಮ್ಮ ಧರ್ಮವೆಂದು ಡಂಗುರ ಬಡಿದುಕೊಂಡು ದೇವರ, ದಿಂಡರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಳ್ಳುವ ರಾಜಕಾರಣಿಗಳು ಗಲಭೆ ನಿಂತು-ಶಾಂತಿ ನೆಲೆಸಿ-ಜಾಗ ಸೇಫ್ ಆದಮೇಲೆ, ಮಲೇರಿಯಾದ ಅಪಾಯ ತಪ್ಪಿದ ಮೇಲೆ, ಜ್ವಾಲಮುಖಿಯ ಧೂಳನ್ನು ವ್ಯಾಕ್ಯೂಮ್ ಕ್ಲೀನ್ ಮಾಡಿದ ಮೇಲೆ ಮುಖ ತೋರಿಸುತ್ತಾರೆ. ಕರ್ಚೀಪು ಹಿಂಡಿ ನೀರು ಸುರಿಸುತ್ತಾರೆ. ಆದದ್ದಾಯಿತು. ಎಷ್ಟು ಪರಿಹಾರ ಸ್ಯಾಂಕ್ಷನ್ ಮಾಡಿಸಬಹುದೋ ನೋಡುತ್ತೇವೆ ಎನ್ನುತ್ತಾರೆ. ಅದು ಇಂಡೋನೇಷಿಯಾ ಇರಲಿ, ಇಂಡಿಯಾ ಇರಲಿ, ಅಮೆರಿಕಾ ಆಗಿರಲಿ...ಎಲ್ಲ ಕಡೆ ಸಾರ್ವತ್ರಿಕ. ಜನ, ಅವರ ಜೀವನ ಬೇರೆ. ರಾಜಕಾರಣ, ರಾಜಕಾರಣಿಗಳ ಜೀವನ ಬೇರೆ.
ಆದರೆ ಈ ಸಂಸ್ಥೆ ಹಾಗಲ್ಲ. ಅಗತ್ಯ ಬಿದ್ದ ಎಲ್ಲ ಕಡೆ ಕೆಲಸ ಮಾಡುತ್ತದೆ. ಇಲ್ಲಿನ ನರ್ಸ್ ಗಳು, ವೈದ್ಯರು, ಆಡಳಿತದವರು ಪ್ರೀತಿ, ಸಹಾನುಭೂತಿ, ಕರುಣೆ, ಮಿತೃತ್ವ, ಭ್ರಾತೃತ್ವದ ಮಿಡಿತಕ್ಕೆ ನುಡಿಯುತ್ತಾರೆ. ತಮಗಾಗಬಹುದಾದ ಅನಾಹುತಗಳ ಅರಿವಿದ್ದೇ, ಅದಕ್ಕೆಲ್ಲಾ ತಯಾರಾಗಿಯೇ ಕಣಕ್ಕಿಳಿಯುತ್ತಾರೆ. ಅವರು ಮಾಡುವ ಕಾಯಕಕ್ಕೆ ಅವರಿಗೆ ಗಂಟುಗಟ್ಟಲೆ ಹಣ ಸಿಗುವುದಿಲ್ಲ. ಆದರೆ ಬಂಡಿಗಟ್ಟಲೆ ಪ್ರೀತಿ, ನೋವಿಂದ ನರಳಿದ ಜನರ ಸಮಾಧಾನದ ನಿಟ್ಟುಸಿರು, ಹಾರೈಕೆಗಳು ಸಿಗುತ್ತವೆ. ಅಷ್ಟು ಸಾಕು ಆ ಮಹಾನುಭಾವರಿಗೆ. ಅವರಿಗೆ ನಮ್ಮ ನಮನ. |
|