ಅಂಗಳ      ಹಾಡು ಹಕ್ಕಿ
Print this pageAdd to Favorite


ಬಿಂದಾಸ್ ಪ್ಯಾರಿಸ್

ಟೋನಿ
 
ಬೆಳಿಗ್ಗೆ ಬೇಗನೇ ಎದ್ದು ರೆಡಿಯಾಗಬೇಕೆಂದು ರಾತ್ರಿ ನಾವು ಹೋಟೆಲಿನ ರೂಮಿನೊಳಕ್ಕೆ ಹೋಗುವ ಮುಂಚೆಯೇ ಜ್ಯೂಜರ್ ಲುನ್ ವಾಲಾ ನಮ್ಮನ್ನು ಎಚ್ಚರಿಸಿದ್ದ. ಇಂದು ಅರ್ಧ ದಿನ ನಾವು ಪ್ರಯಾಣದಲ್ಲೇ ಕಳೆದಿದ್ದೆವು. ನಮ್ಮನ್ನು ಕರೆತಂದಿದ್ದ ಇಂಗ್ಲೆಂಡಿನ ಚಾಲಕ ಆಲಿಸ್ಟರ್ ನಮ್ಮನ್ನು ಪ್ಯಾರಿಸ್ಸಿನಲ್ಲಿ ಇಳಿಸಿದ ನಂತರ ತಾನು ಲಂಡನ್ನಿಗೆ ಹಿಂದಿರುಗುತ್ತಿರುವುದಾಗಿ ಹೇಳಿದವ ತನ್ನ ಇಷ್ಟು ವರ್ಷದ ಸರ್ವಿಸಿನಲ್ಲಿ ಫ್ರಾನ್ಸಿಗೆ ಬರುತ್ತಿರುವುದು ಇದು ಎರಡನೇ ಬಾರಿ ಮಾತ್ರ, ತನಗೆ ಪ್ಯಾರಿಸ್ ಇಷ್ಟವಾಗುವುದಿಲ್ಲೆಂದೂ ಬೇರೆ ಯಾರೂ ಡ್ರೈವರ್ ಗಳು ಇರದ ಕಾರಣ ತಾನು ಬರಬೇಕಾಯಿತೆಂದೂ ಹೇಳಿದ. ಪ್ಯಾರಿಸ್ ಎಂದರೇ ಹುಚ್ಚೆದ್ದು ಕುಣಿಯುವ, ಪ್ಯಾರಿಸ್ಸನ್ನು ಒಮ್ಮೆಯಾದರೂ ನೋಡಬೇಕೆನ್ನುವವರೇ ಜಗತ್ತಿನಲ್ಲಿ ಹೆಚ್ಚಿರುವಾಗ ಈತ ಪ್ಯಾರಿಸ್ ಇಷ್ಟವಿಲ್ಲವೆನ್ನುತ್ತಾನಲ್ಲಾ ಅದಕ್ಕೆ ಕಾರಣವಾದರೂ ಏನೆಂದು ಕುತೂಹಲದಿಂದ ಅವನನ್ನು ಸಂಜೆ ಮಾತಿಗೆಳೆದಿದ್ದೆ.
 
ಅದಕ್ಕಾತ ಈ ಫ್ರೆಂಚರಿಗೆ ಶಿಸ್ತು ಎನ್ನುವುದೇ ಇಲ್ಲವೆಂದೂ ಇವರು ಬಹಳ ಸ್ವೇಚ್ಚಾ ಪ್ರವ್ರತ್ತಿಯ ಜನರೆಂದೂ, ನಾವು ಬ್ರಿಟೀಷರು ಇವರನ್ನು ಇಷ್ಟಪಡುವುದಿಲ್ಲವೆಂದಿದ್ದ. ಇಲ್ಲಿಯ ಟ್ರಾಫಿಕ್ಕಿನಲ್ಲಿ ಬಸ್ ಚಾಲನೆ ಮಾಡುವುದೆಂದರೆ ತನಗೆ ಹಿಂಸೆಯಾಗುವುದೆಂದ. ಇಂಗ್ಲೆಂಡಿನಲ್ಲಿರುವುದು ರೈಟ್ ಹ್ಯಾಂಡ್ ಡ್ರೈವಿಂಗ್ ವಾಹನಗಳು. ಅಲ್ಲಿ ವಾಹನಗಳು ರಸ್ತೆಯ ಎಡಭಾಗದಲ್ಲಿ ಚಲಿಸುತ್ತವೆ. ಈ ಫ್ರಾನ್ಸಿನಲ್ಲಿ ಲೆಫ್ಟ್ ಹ್ಯಾಂಡ್ ಡ್ರೈವಿಂಗ್ ವಾಹನಗಳೇ ಹೆಚ್ಚು. ಇಲ್ಲಿನ ವಾಹನ ಸಂಚಾರದ ನಿಯಮದಂತೆ ಇಲ್ಲಿಯ ವಾಹನಗಳೆಲ್ಲಾ ಬಲಭಾಗದಲ್ಲಿ ಚಲಿಸುತ್ತವೆಯಾದರಿಂದ ಇಲ್ಲಿ ವಾಹನ ಚಲಾಯಿಸುವುದೂ ಒಮ್ಮೊಮ್ಮೆ ತನಗೆ ಪ್ರಯಾಸವಾಗುವುದೆಂದ. ಅದು ನಿಜವೂ ಕೂಡ. ಆತ ಇಂಗ್ಲೆಂಡಿನಲ್ಲಿ ರಸ್ತೆಯ ಎಡಭಾಗದಲ್ಲಿ ಬಸ್ ಓಡಿಸಿದ್ದವ, ಇಂಗ್ಲೆಂಡಿನ ಗಡಿ ದಾಟಿದ ನಂತರ ಧಿಡೀರನೇ ರಸ್ತೆಯ ಬಲಭಾಗದಲ್ಲಿ ಓಡಿಸಬೇಕಾಗಿತ್ತು. ಇದು ಎಂಥಾ ನುರಿತ ಚಾಲಕರಿಗೂ ಕೆಲವೊಮ್ಮೆ ಯಡವಟ್ಟಾಗುವಂತದ್ದೇ. ಅಲ್ಲದೆ ಪ್ಯಾರಿಸ್ಸಿನ ಟ್ರಾಫಿಕ್ಕಿನಲ್ಲಿ ಆತನಿಗೆ ಕಿರಿಕಿರಿಯಾಗುವುದು ಸಹಜವೇ. ಆತನದ್ದೇ ಆದ ಟೆಕ್ನಿಕಲ್ ಪ್ರಾಬ್ಲಮ್ ಹೇಳಿದ ಆಲಿಸ್ಟರ್ ಅಂತೂ ನಮ್ಮನ್ನು ಪ್ಯಾರಿಸ್ಸಿನಲ್ಲಿ ಒಗಾಯಿಸಿ ಈ ದೇಶದ ಸಹವಾಸವೇ ಸಾಕೆನ್ನುವಂತೆ ನಮಗೆಲ್ಲರಿಗೂ ವಿದಾಯ ಹೇಳಿ ಇಂಗ್ಲೆಂಡಿಗೆ ಹಿಂದಿರುಗಿದ್ದ.
 
ನಾನು ಮಲಗುವಾಗ ಆತ ಹೇಳಿದ್ದ ಮಾತುಗಳನ್ನೇ ಮೆಲುಕು ಹಾಕತೊಡಗಿದ್ದೆ. ಬ್ರಿಟೀಷರಿಗೂ, ಫ್ರೆಂಚರಿಗೂ ಸ್ವಭಾವ, ನಡತೆಯಲ್ಲಿ, ಆಲಿಸ್ಟರ್ ಹೇಳಿದಂತೆ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದಿತ್ತು. ಮಾತನಾಡುವುದೂ ಸಹ ಪ್ಯಾರಿಸ್ಸಿನಲ್ಲಿ ಫ್ರೆಂಚ್ ಭಾಷೆಯಲ್ಲಿಯೇ. ಅಲ್ಲಿದ್ದ ಎರಡು ದಿನದಲ್ಲಿ ಪ್ರವಾಸಿಗರನ್ನು ಹೊರತು ಪಡಿಸಿ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದ ಫ್ರೆಂಚರು ಕಂಡುಬರಲಿಲ್ಲ. ಅಲ್ಲಿಯ ವ್ಯಾಪಾರ ವಹಿವಾಟೆಲ್ಲವೂ ಫ್ರೆಂಚಿನಲ್ಲೇ. ನನಗಂತೂ ಈ ಫ್ರೆಂಚರು ಇವರ ಕಣ್ಣಳತೆಯ ದೂರದಲ್ಲಿದ್ದ ಬ್ರಿಟನ್ ಹಾಗೂ ಅವರ ಇಂಗ್ಲಿಷ್ ಭಾಷೆಯ ಪರಮ ದ್ವೇಷಿಗಳಂತೆ ಕಂಡು ಬಂದರು. ನಾವು ತಂಗಿದ್ದ ಹೋಟೆಲಿನ ರೆಸೆಫ್ಷನಿಸ್ಟ್ ಗಳು ಮಾತಾಡುತ್ತಿದ್ದುದೂ ಹರಕು ಮುರುಕು ಇಂಗ್ಲಿಷಿನಲ್ಲಿಯೇ. ನಾವು ಭಾರತೀಯರು ನಮ್ಮ ಮಾತೃ ಭಾಷೆಯನ್ನು ಮರೆತು ಇಂಗ್ಲಿಷನ್ನು ತಲೆಮೇಲೆ ಹೊತ್ತು ಮೆರೆಸುತ್ತಿದ್ದರೆ ಇಲ್ಲಿ ಯೂರೋಪಿನಲ್ಲಿ ಅದರ ಗಂಧ ಗಾಳಿಯೇ ಗೊತ್ತಿಲ್ಲದಂತೆ ವರ್ತಿಸುತ್ತಿದ್ದವರೇ ಎಲ್ಲೆಡೆ ಕಂಡು ಬಂದರು.
 
ಬೆಳಿಗ್ಗೆ ೫ ಗಂಟೆಗೇ ಮೊಬೈಲಿನಲ್ಲಿ ಅಲಾರ್ಮ್ ಇಟ್ಟಿದ್ದರಿಂದ ಕೂಡಲೇ ಎದ್ದಿದ್ದ ಗುರುಬಸಪ್ಪನವರು ನನ್ನನ್ನೂ ಏಳಿಸಿದ್ದರು. ಕಿಟಕಿ ತೆಗೆದು ನೋಡಿದರೆ ಹೊರಗೆ ಆಗಲೇ ಸೂರ್ಯ ಉದಯಿಸಿದ್ದ ಕಂಡು ಮೊಬೈಲಿನ ಟೈಮೇನಾದರೂ ಸ್ಲೋ ಆಗಿ ನಾವು ಎದ್ದಿರುವುದು ತಡವಾಗಿರಬಹುದಾ, ಜ್ಯೂಜರ್ ಹೇಳಿದ್ದ ಒಂದು ’ಪಿ’-ಪಂಚ್ಯುಯಾಲಿಟಿ ಎಕ್ಕುಟ್ಟಿಹೋಯಿತೆಂದುಕೊಳ್ಳುತ್ತಾ ನಾನು ಪ್ರೊಫೆಸರ್ ಪರಸ್ಪರ ಮುಖ ನೋಡಿಕೊಂಡೆವು. ನನಗೆ ವಾಚು ಕಟ್ಟುವ ಅಭ್ಯಾಸವೇ ಇಲ್ಲದಿದ್ದುದರಿಂದ ಪ್ರೊಫೆಸರರ ವಾಚಿನಲ್ಲಿ ಟೈಮ್ ನೋಡಿದರೆ ಅದರಲ್ಲೂ ಸರಿಯಾಗಿ ೫ ಗಂಟೆ ತೋರಿಸುತ್ತಿತ್ತು. ಹೊರಗೆ ಬಂದು ನೋಡಿದರೆ ಯಾರ ರೂಮಿನ ಬಾಗಿಲೂ ತೆಗೆದಿರಲಿಲ್ಲ. ಎಲ್ಲಾ ನಮ್ಮನ್ನು ಬಿಟ್ಟು ರೈಟ್ ಹೇಳಿಬಿಟ್ಟರಾ ಎಂದುಕೊಳ್ಳುತ್ತಾ ರಿಸೆಪ್ಷನಿಸ್ಟ್ ಬಳಿ ಹೋದರೆ ಅಲ್ಲಿಯೂ ಯಾರೂ ಇರಲಿಲ್ಲ. ಅಲ್ಲಿಯ ಗಡಿಯಾರವೂ ೫ ಗಂಟೆ ತೋರಿಸುತ್ತಿದ್ದುದರಿಂದ ಸರಿಯಾದ ಸಮಯಕ್ಕೇ ಎದ್ದಿದ್ದೇವೆಂಬುದು ಖಾತ್ರಿಯಾಗಿ ಸಮಾಧಾನ ಪಟ್ಟೆವು. ಯೂರೊಪಿನಲ್ಲಿ ಹಗಲು ದೀರ್ಘವಾಗಿದ್ದು ಬೆಳಿಗ್ಗೆ ೪ ಗಂಟೆಗೆಲ್ಲಾ ಬೆಳಗಾದರೆ ಸಂಜೆ ೯ ಗಂಟೆಯಾದರೂ ಸೂರ್ಯನ ಬೆಳಕಿರುತ್ತಿದ್ದುದು ನಂತರ ನಮಗರಿವಾಗಿತ್ತು. ಲಂಡನ್ನಿನಲ್ಲಿದ್ದಾಗ ಬೆಳಿಗ್ಗೆಯೇ ಮಳೆ ಬರುತ್ತಿದ್ದರಿಂದ ನಮಗೆ ಗೊತ್ತಾಗಿರಲಿಲ್ಲ. ಆದರೆ ಇಂದು ಪ್ಯಾರಿಸ್ಸಿನ ಬೆಳ್ಳಂಬೆಳಗ್ಗೆಯ ೫ ಗಂಟೆಯ ಬಿಸಿಲು ನಮ್ಮನ್ನು ಬೇಸ್ತು ಬೀಳಿಸಿತ್ತು.
 
ಸರಿಯಾಗಿ ೬ ಗಂಟೆಗೆ ಜ್ಯೂಜರ್ ವೇಕ್ ಅಪ್ ಕಾಲ್ ಕೊಟ್ಟು ಗುಡ್ ಮಾರ್ನಿಂಗ್ ಅಂದಿದ್ದ. ಸ್ನಾನ ಮಾಡಿ ಸೊಂಟಕ್ಕೆ ನಮ್ಮ ಹಿಂದಿನ ಅಜ್ಜಿಯರು ತಗಲಾಕಿಕೊಳ್ಳುತ್ತಿದ್ದ ಕಡ್ಡಿಪುಡಿ ಚೀಲದಂತೆಯೇ ಇದ್ದ ಪಾಸ್ ಪೋರ್ಟ್ ಪೌಚ್ ಅನ್ನು ತಗಲಾಕಿಕೊಂಡೆವು. ಪಾಸ್ ಪೋರ್ಟ್ ಅನ್ನು ಸದಾ ನಿಮ್ಮ ಬಳಿಯೇ ಇಟ್ಟುಕೊಂಡಿರಬೇಕೆಂದು ಜ್ಯೂಜರ್ ಹೇಳಿದ್ದ. ನಿನ್ನೆ ನಾವು ಇಂಗ್ಲೆಂಡ್ ಗಡಿ ದಾಟಿ ಫ್ರಾನ್ಸ್ ದೇಶದ ಗಡಿಗೆ ಕಾಲಿಡುವಾಗ ಅಲ್ಲಿಯ ಚೆಕ್ ಪೋಸ್ಟ್ ನಲ್ಲಿ ಬಸ್ಸನ್ನು ನಿಲ್ಲಿಸಿದ್ದರು. ನಿಮ್ಮ ನಿಮ್ಮ ಪಾಸ್ ಪೋರ್ಟ್ ಅನ್ನು ಕೈನಲ್ಲಿ ಇಟ್ಟುಕೊಳ್ಳಿರೆಂದು ಜ್ಯೂಜರ್ ಹೇಳಿ ಕೆಳಗಿಳಿದು ಹೋದ. ಲಂಡನ್ನಿನ ಏರ್ ಪೋರ್ಟ್ ನಲ್ಲಿ ಪರಿಶೀಲಿಸಿದಂತೆಯೇ ಇಲ್ಲಿಯೂ ಪರಿಶೀಲಿಸಿ ಅದಿನ್ಯಾವ ತಲೆತಿನ್ನುವ ಪ್ರಶ್ನೆ ಕೇಳುತ್ತರೋ ಎಂದು ಯೋಚಿಸುತ್ತಲೇ ನಾವೆಲ್ಲಾ ಬಸ್ಸಿನಿಂದ ಕೆಳಗಿಳಿಯಲು ಸಿದ್ದರಾದೆವು. ನಾವು ಪೈಪೋಟಿಗಿಳಿದವರಂತೆ ಬಾಗಿಲ ಬಳಿ ಹೋಗಿ ಕೆಳಗಿಳಿಯಬೇಕೆನ್ನುವಷ್ಟರಲ್ಲಿ ಅದಾಗಲೇ ಕೆಳಗಿಳಿದು ಹೋಗಿದ್ದ ಜ್ಯೂಜರ್ ಏನೋ ಅನಾಹುತನಾದವನಂತೆ ಓಡೋಡಿ ಬಂದವನೇ ಯಾರೂ ಕೆಳಗಿಳಿಯಬೇಡಿ ಎಲ್ಲಾ ನಿಮ್ಮ ನಿಮ್ಮ ಸೀಟುಗಳಲ್ಲಿಯೇ ಕೂತುಕೊಳ್ಳಿರೆಂದು ಒಂದೇ ಉಸಿರಲ್ಲಿ ಬಡಬಡಿಸಿದ್ದ. ನಾಮುಂದು ತಾಮುಂದು ಎಂದು ಕೆಳಗಿಳಿಯಲು ಬಾಗಿಲ ಬಳಿ ಹೋಗಿದ್ದ ನಾವೆಲ್ಲಾ ಏನೋ ಯಡವಟ್ಟಾಗಿರಬಹುದೆಂದು ಸರಸರನೆ ಹಿಂದಿರುಗಿ ಸೀಟಿನಲ್ಲಿ ಕೂತಿದ್ದೆವು. ಬಸ್ಸಿನೊಳಗೆ ಬಂದ ಜ್ಯೂಜರ್ ’ನಾನು ನಿಮ್ಮ ಪಾಸ್ ಪೊರ್ಟ್ ಅನ್ನು ಕೈನಲ್ಲಿ ಇಟ್ಟುಕೊಳ್ಳಿರೆಂದು ಹೇಳಿದ್ದಷ್ಟೇ ನೀವ್ಯಾಕೆ ಕೆಳಗಿಳಿದಿರಿ’ ಎಂದು ರೇಗಿದ್ದ. ನಮ್ಮಲ್ಲಿದ್ದವರೊಬ್ಬರು ತಮ್ಮ ಪಾಸ್ ಪೋರ್ಟ್ ಅನ್ನು ಸೊಂಟಕ್ಕೆ ತಗಲಾಕಿಕೊಳ್ಳದೇ ಮರೆತು ಅದನ್ನು ಲಗೇಜ್ ಬ್ಯಾಗಿನಲ್ಲಿಟ್ಟುಬಿಟ್ಟಿದ್ದರು. ಅದು ಬಸ್ಸಿನ ಲಗೇಜ್ ತುಂಬುವ ಜಾಗದಲ್ಲಿದ್ದರಿಂದ ಡ್ರೈವರ್ ಗೆ ಹೇಳಿ ಅದನ್ನು ಪಡೆಯಲು ಎದ್ದು ಹೊರಟಿದ್ದರು. ಅವರು ಇಳಿಯಲು ಮುಂದಾದದ್ದೇ ತಡ ಉತ್ತರ ಭಾರತೀಯರು ತಾವೂ ಇಳಿಯಬೇಕೆಂದೇ ತಿಳಿದು ಮೇಲೆ ಎದ್ದಿದ್ದರು. ಅವರೆಲ್ಲಾ ಸಿದ್ದರಾದದ್ದು ನೋಡಿ ನಾವುಗಳೂ ಕೆಳಗಿಳಿಯಲು ಮುನ್ನುಗ್ಗಿದ್ದೆವು. ಲಗೇಜು ಕಂಪಾರ್ಟ್ ನಿಂದ ಪಾಸ್ ಪೋರ್ಟ್ ತಗೊಂಡು ಬಂದ ಆಸಾಮಿಗೆ ಜ್ಯೂಜರ್ ರೇಗಿದ್ದ.
 
ಫ್ರಾನ್ಸ್ ದೇಶದ ತಪಾಸಣೆ ಅಧಿಕಾರಿ ಬಸ್ಸಿನೊಳಕ್ಕೇ ಬಂದು ನಮ್ಮ ಪಾಸ್ ಪೋರ್ಟ್ ಗಳನ್ನು ತೆಗೆದುಕೊಂಡು ವೆಲ್ ಕಮ್ ಟು ಫ್ರಾನ್ಸ್ ಎಂದು ಹೇಳಿ ಕೆಳಗಿಳಿದುಹೋದ. ಹತ್ತು ನಿಮಿಷದ ನಂತರ ಜ್ಯೂಜರ್ ಇಮಿಗ್ರೇಷನ್ ಸೀಲು ಹಾಕಿದ್ದ ಪಾಸ್ಪೋರ್ಟ್ಟನ್ನು ನಮಗೆ ಹಿಂದಿರುಗಿಸಿದ. ಪಾಸ್ ಪೋರ್ಟ್ ಅನ್ನು ಜತೆಯಲ್ಲಿಯೇ ಇಟ್ಟುಕೊಳ್ಳುವುದು ಅನಿವಾರ್ಯವೆಂದು ನಮಗೆಲ್ಲಾ ನಿನ್ನೆಯೇ ಮನವರಿಕೆಯಾಗಿತ್ತು. ೭ ಗಂಟೆಗೆಲ್ಲಾ ತಿಂಡಿ ತಿಂದು ರೆಡಿಯಾದೆವು. ಇಂದು ಮೊದಲು ಪ್ಯಾರಿಸ್ ನಗರದ ಸೈಟ್ ಸೀಯಿಂಗ್ ಎಂದೂ ನಂತರ ಡಿಸ್ನಿ ಲ್ಯಾಂಡ್ ಗೆ ಹೋಗುವುದಾಗಿ ಜ್ಯೂಜರ್ ಹೇಳಿದ. ಡಿಸ್ನಿ ಲ್ಯಾಂಡ್ ನೋಡುವುದು ಅವರವರ ಇಷ್ಟಕ್ಕೆ ಬಿಟ್ಟದ್ದಾಗಿತ್ತು. ಅದಕ್ಕೆ ೭೫ ಯೂರೋಗಳನ್ನು ಪ್ರತ್ಯೇಕವಾಗಿ ಕೊಡಬೇಕಿತ್ತು. ನಿನ್ನೆ ಮಧ್ಯಾಹ್ನವೇ ಲಂಡನ್ನಿನಿಂದ ಬರುವಾಗ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕಾಗಿರುವುದರಿಂದ ಡಿಸ್ನಿ ಲ್ಯಾಂಡ್ ನೋಡಲು ಬರಲಿಚ್ಚಿಸುವವರಿಂದ ಜ್ಯೂಜರ್ ಹಣ ವಸೂಲಿ ಮಾಡಿದ್ದ. ಇಂದು ದಿನವಿಡೀ ಅತ್ಯಂತ ಬ್ಯುಸಿ ಷೆಡ್ಯೂಲೆಂದು ಹೇಳಿ ಎಲ್ಲರೂ ಸಮಯಕ್ಕೆ ಸರಿಯಾಗಿ ಸಿದ್ದರಾಗಿರಬೇಕೆಂದ.
 
೯ ಗಂಟೆಗೆ ನಮ್ಮ ಪ್ಯಾರಿಸ್ ನಗರ ಪ್ರದಕ್ಷಿಣೆ ಆರಂಭವಾಯಿತು. ಇಂದು ಬೇರೊಂದು ಬಸ್ ಬಂದಿತ್ತು. ಈ ಬಸ್ ಚಾಲಕ ಡ್ರೈವಿಂಗ್ ಸೀಟಿನಿಂದ ಎದ್ದು ನಿಂತು ತನ್ನ ಹೆಸರು ರೋದಿಕ್ವಿಚ್ ಎಂದೂ ಎಲ್ಲರೂ ನನ್ನನ್ನು ಆರ್ ಎಂದೇ ಕರೆಯುವುದರಿಂದ ನೀವುಗಳೂ ನನ್ನನ್ನು ಆರ್ ಅಂತಲೇ ಕರೆಯಬೇಕೆಂದು ಅಪ್ಪಣೆ ಮಾಡಿದ. ನಮಗೂ ಆತನ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಾಧ್ಯವಿರದಿದ್ದರಿಂದ ಅಲ್ಲದೆ ಆರ್ ಎನ್ನುವುದು ಬಹಳ ಸುಲಭವಾಗಿದ್ದರಿಂದ ’ಎಸ್ ಎಸ್’ ಎಂದೆವು. ಆತ ಹಾಲೆಂಡ್ ದೇಶದವ. ಇನ್ನೂ ಯುವಕ. ನಮ್ಮ ಪ್ರವಾಸದ ಕೊನೆವರೆಗೂ ಆತನದೇ ಬಸ್ ಎಂದೂ, ಆತನೇ ನಮಗಿನ್ನು ದಾರಿಯುದ್ದಕ್ಕೂ ಸಾರಥಿ ಕಮ್ ಗೈಡ್ ಎಂದೂ ಜ್ಯೂಜರ್ ಹೇಳಿದ. ಇಂತಹ ಮಹತ್ವವಾದ ಕೆಲಸವನ್ನು ನಿಭಾಯಿಸುವ ವ್ಯಕ್ತಿಯನ್ನ ಅವನಿಚ್ಚೆಯಂತೆಯೇ ಆರ್ ಎಂದು ಕರೆಯುವುದೇ ಒಳ್ಳೆಯದೆನಿಸಿತ್ತು. ಭಾರತದಿಂದ ಹೋದ ಪ್ರವಾಸಿಗರು ತಲೆಗೊಬ್ಬರಂತೆ ತಮಗಿಷ್ಟ ಬಂದಂತೆ ಆತನ ಹೆಸರನ್ನು ಕರೆಯುವುದನ್ನು ಕೇಳಿ ಅವನಿಗೆ ರೋಸತ್ತಿ ತನ್ನನ್ನು ಆರ್ ಎಂದಷ್ಟೇ ಕರೆಯಿರೆಂದು ಕೇಳುತ್ತಿರಬಹುದೆಂದು ನನಗನಿಸಿತು. ಇಷ್ಟಕ್ಕೂ ಆತನೇ ನಮ್ಮ ಮುಂದಿನ ಗೈಡ್ ಎಂದೂ ಜ್ಯೂಜರ್ ಹೇಳಿದ್ದರಿಂದ ಆರ್ ನನ್ನು ಅವನ ಪೂರ್ಣ ಹೆಸರು ಕರೆಯಲು ಹೋಗಿ ಅದು ಯಡವಟ್ಟಾಗಿ ಆತನಿಗೆ ಸಿಟ್ಟು ಬಂದು ಯೂರೋಪಿನ ಸ್ಥಳಗಳ ಮಹಿಮೆಯ ಬಗ್ಗೆ ವಿವರಿಸದಿದ್ದರೆ ನಮಗೇ ನಷ್ಟವಾಗುತ್ತಿದ್ದುದರಿಂದ ಅವನನ್ನು ಆರ್ ಎಂದೇ ಕರೆಯುವುದು ಸೂಕ್ತವೆನಿಸಿತು.
 
ಜ್ಯೂಜರ್ ನನ್ನು ನಮ್ಮಲ್ಲಿದ್ದ ಕೆಲವರು ಜ್ಯೂಸ್ ಎಂದೇ ಕರೆಯತೊಡಗಿದ್ದರು ಆತ ನಿನ್ನೆ ತನ್ನ ಪರಿಚಯ ಮಾಡಿಕೊಳ್ಳುವಾಗ ’ಜ್ಯೂಸ್’ ನೆನೆಸಿಕೊಂಡರೆ ನನ್ನ ಹೆಸರು ನಿಮ್ಮ ನೆನಪಿನಲ್ಲಿರುತ್ತದೆಂದು ಹೇಳಿದ್ದ. ಆದರೆ ಕೆಲವರು ಆತನನ್ನು ’ಜ್ಯೂಸ್’ ಎಂದೇ ಕರೆಯತೊಡಗಿದ್ದರು. ಅವರ ನಾಲಿಗೆ ಹೊರಳುವುದು ಕಷ್ಟವಾಗಬಹುದೆಂದು ತಿಳಿದವನಂತೆ ಜ್ಯೂಜರ್ ’ಜ್ಯೂಸ್’ ಎಂದೇ ಕರೆದರೂ ಬೇಸರಿಸಿಕೊಳ್ಳದೇ ಪ್ರತಿಕ್ರಿಯಿಸತೊಡಗಿದ್ದ. ಈ ಬಸ್ ಚಾಲಕನನ್ನು ರೋದಿಕ್ವಿಚ್ ಎಂದು ಕರೆಯುವುದಂತೂ ಕೆಲವರಿಗೆ ಸಾಧ್ಯವಾಗದ ಕಾರಣ ಅವನು ತನ್ನನ್ನು ’ಆರ್’ ಎಂದು ಕರೆಯಿರಿ ಎಂದದ್ದಕ್ಕೆ ಖುಷಿ ಪಟ್ಟಿದ್ದರು. ಜ್ಯೂಜರ್ ಮೊದಲು ಪ್ಯಾರಿಸ್ ಸೈಟ್ ಸೀಯಿಂಗ್, ನಂತರ ಡಿಸ್ನಿ ಪಾರ್ಕ್, ಡಿಸ್ನಿ ಸ್ಟುಡಿಯೋ, ಅಲ್ಲಿಂದ ಹಿಂದಿರುಗಿ ಸಂಜೆ ಸಿಯಾನ್ ನದಿಯಲ್ಲಿ ಕ್ರೂಸ್ನಲ್ಲಿ ಸುತ್ತಿಸುವುದಾಗಿಯೂ, ನಂತರ ರಾತ್ರಿ ಲಿಡೋ ಶೋಗೆ ಇಷ್ಟವಿರುವವರು ಬರಬಹುದೆಂದೂ ಇಂದಿನ ಕಾರ್ಯಕ್ರಮಗಳ ವಿವರ ನೀಡಿದ. ಮೊದಲು ನಮಗೆ ನೀಡಿದ್ದ ಈ ಯೂರೋಪ್ ಪ್ರವಾಸದ ಬಗೆಗಿನ ಮಾಹಿತಿಯಲ್ಲಿ ನಾವು ಇಂದು ನೋಡಲಿದ್ದ ಸ್ಥಳಗಳನ್ನು ಎರಡು ದಿನದಲ್ಲಿ ತೋರಿಸುವ ಬಗ್ಗೆ ನಮೂದಿಸಲಾಗಿತ್ತು ಆದರೆ ಇಂದು ಅವಸರವಾಗಿ ನಾವು ಒಂದೇ ದಿನದಲ್ಲಿ ಅವೆಲ್ಲವನ್ನೂ ನೋಡಬೇಕಾಗಿತ್ತು. ಅದಕ್ಕೆ ಕಾರಣ ಐಸ್ ಲ್ಯಾಂಡ್ ದೇಶ.
 
ಹಾಗಂತ ಐಸ್ ಲ್ಯಾಂಡ್ ದೇಶವೇನೂ ನಮ್ಮ ಪ್ರವಾಸದ ಪಟ್ಟಿಯಲ್ಲಿರಲಿಲ್ಲ. ಆದರೆ ಆ ದೇಶದಲ್ಲಾದ ಪ್ರಾಕೃತಿಕ ವಿಕೋಪದಿಂದಾಗಿ ನಮ್ಮ ಪ್ರವಾಸವೂ ಉಲ್ಟಾ ಆಗಿತ್ತು. ನಮ್ಮ ಪ್ರವಾಸೀ ಕಂಪನಿ ಥಾಮಸ್ ಕುಕ್ ನವರು ನಮಗೆ ನೀಡಿದ್ದ ಬ್ರೋಷರ್ ನಲ್ಲಿದ್ದಂತೆ ನಾವು ಬೆಂಗಳೂರಿನಿಂದ ಹೊರಟು ರೋಮ್ ತಲುಪಬೇಕಿತ್ತು. ಯೂರೋಪಿನಲ್ಲಿ ನಮ್ಮ ಪ್ರವಾಸ ಮೊದಲು ಆರಂಭವಾಗಬೇಕಿದ್ದುದು ರೋಮ್ ನಿಂದ. ಆದರೆ ನಮ್ಮ ಪ್ರವಾಸ ನಿಗದಿಯಾಗಿದ್ದ ತಾರೀಖಿನಿಂದ ೧೫ ದಿನಗಳು ಮುಂದೂಡಲ್ಪಟ್ಟಿತ್ತು. ಅದಕ್ಕೆ ಕಾರಣ ಇದ್ದಕ್ಕಿದ್ದಂತೆ ಐಸ್ ಲ್ಯಾಂಡಿನಲ್ಲಿ ಸಿಡಿದಿದ್ದ ಜ್ವಾಲಾಮುಖಿ ಇಡೀ ಯುರೋಪಿನಾದ್ಯಂತ ವಿಮಾನ ಪ್ರಯಾಣವನ್ನೇ ಏರು ಪೇರು ಮಾಡಿದ್ದು. ಅದರ ಪರಿಣಾಮವಾಗಿಯೇ ನಮ್ಮ ಪ್ರವಾಸವೂ ೧೫ ದಿನಗಳ ಕಾಲ ಮೂಂದೂಡಲ್ಪಟ್ಟಿತ್ತು. (ನಾನು ಯೂರೋಪ್ ಪ್ರವಾಸ ಮಾಡಲು ಅಕ್ಕನ ಪ್ರಯತ್ನದ ಜತೆಗೆ ಈ ಜ್ವಾಲಾಮುಖಿಯೂ ಪ್ರಮುಖ ಕಾರಣವಾಗಿತ್ತು. ಇದರಿಂದಾಗಿಯೇ ನನಗೆ ವೀಸಾ ದೊರೆತಿದ್ದಂತೂ ಸತ್ಯ. ಈ ವೀಸಾಯಣದ ಬಗ್ಗೆ ಮುಂದೆ ವಿವರಿಸುವೆ) ಈ ಜ್ವಾಲಾಮುಖಿಯ ಪರಿಣಾಮವಾಗಿ ಯೂರೋಪಿನತ್ತ ಹೋಗಿ ಬರಬೇಕಿದ್ದ ವಿಮಾನಗಳ ಹಾರಾಟದಲ್ಲಿ ಏರುಪೇರಾಗಿತ್ತು. ಅದರಿಂದಾಗಿ ನಾನು ಯೂರೋಪ್ ನೋಡಲು ಸಾಧ್ಯವಾಗಿತ್ತಲ್ಲದೆ ನಮ್ಮ ಪ್ರವಾಸವೂ ಉಲ್ಟಾ ಆಗಿತ್ತು. ರೋಮ್ ನಿಂದ ಆರಂಭಗೊಂಡು ಲಂಡನ್ನಿನಲ್ಲಿ ಅಂತ್ಯವಾಗಬೇಕಿದ್ದ ನಮ್ಮ ಪ್ರವಾಸ ಲಂಡನ್ನಿನಿಂದ ಆರಂಭವಾಗಿ ರೋಮ್ ನಲ್ಲಿ ಅಂತ್ಯವಾಗಲಿತ್ತು. ಇದರಿಂದಾಗಿ ಆರಂಭದ ಎರಡು ಮೂರು ದಿನದ ಪ್ರವಾಸದ ಸಮಯ ಹೊಂದಾಣಿಕೆಯಲ್ಲಿ ವ್ಯತ್ಯಾಸವಾಗಿದ್ದರಿಂದ ನಮಗೆ ಲಂಡನ್ ನಗರವನ್ನು ಅವಸರವಸರವಾಗಿ ಬಸ್ಸಿನಲ್ಲಿಯೇ ಸುತ್ತಿಸಿದ್ದರು. ಇದನ್ನು ತಿಳಿಯದ ಕೆಲವು ಶಾಪಿಂಗ್ ಪ್ರಿಯರು ಲಂಡನ್ನಿನಲ್ಲಿ ಶಾಪಿಂಗ್ ಮಾಡಲು ಅನುವು ಮಾಡಿಕೊಡದಿದ್ದರಿಂದ ತಮ್ಮ ಯೂರೋಪ್ ಪ್ರವಾಸವೇ ವ್ಯರ್ಥವಾಯಿತೆಂಬಂತೆ ಜ್ಯೂಜರಿನಿಗೆ ತಲಾ ಒಂದೊಂದು ಮಾತಾಡಿದ್ದರು. ಅದೆಲ್ಲೋ ಐಸ್ ಲ್ಯಾಂಡಿನಲ್ಲೆದ್ದಿದ್ದ ಜ್ವಾಲಾಮುಖಿಯಿಂದಾಗಿ ಇಲ್ಲಿ ಈ ನಿರಪರಾಧಿ ಜ್ಯೂಜರ್ ತಪ್ಪಿತಸ್ಥನಾಗಿದ್ದ.
 
ಹಾಲೆಂಡಿನ ಚಾಲಕ ಕಮ್ ಗೈಡ್ ’ಆರ್’ ನ ಸಾರಥ್ಯದಲ್ಲಿ ನಮ್ಮ ಪ್ಯಾರಿಸ್ ನಗರದೆಡೆಗಿನ ಪಯಣ ಆರಂಭವಾಯಿತು. ಬಸ್ಸು ಪ್ಯಾರಿಸ್ ನಗರದ ಹತ್ತಿರ ಬಂದ ಕೂಡಲೇ ಜ್ಯೂಜರ್ ಒಬ್ಬ ಮಹಿಳೆಯನ್ನು ಬಸ್ಸಿಗೆ ಹತ್ತಿಸಿಕೊಂಡ. ನಮ್ಮ ಊರಿನಂತೆಯೇ ಇಲ್ಲಿಯೂ ಪ್ಯಾಸೆಂಜರುಗಳನ್ನು ಹತ್ತಿಸಿಕೊಳ್ಳುತ್ತಾರಲ್ಲ! ಎಂದು ನನಗಾಶ್ಚರ್ಯವಾಯಿತು. ಮಹಿಳೆ ಬಸ್ಸಿನೊಳಗೆ ಬಂದಕೂಡಲೇ ಆಕೆ ಗೈಡ್ ಎಂದೂ ನಮಗೆ ಪ್ಯಾರಿಸ್ ನಗರದ ಬಗ್ಗೆ ವಿವರಣೆ ನೀಡಲಿದ್ದಾರೆಂದೂ ಜ್ಯೂಜರ್ ಹೇಳಿದ. ಆಕೆ ಮೈಕ್ ಕೈಗೆತ್ತಿಕೊಂಡು ನನ್ನ ಹೆಸರು ಅನಿತಾ...ನನಗೆ ಭಾರತೀಯರೆಂದರೆ ತುಂಬಾ ಇಷ್ಟವೆಂದೂ ನಿಮಗೆ ಪ್ಯಾರಿಸ್ ನಗರದ ಬಗ್ಗೆ ಸಂಪೂರ್ಣ ವಿವರ ತಿಳಿಸುವುದಾಗಿ ಹೇಳಿಕೊಂಡಳು. ಆಕೆಯ ಹೆಸರು ಅನಿತಾ ಅಂದದ್ದು ಕೇಳಿ ಆಕೆ ಭಾರತೀಯಳಿರಬೇಕೆಂದು ತಿಳಿದು ನಾವು ಸೀಟಿನಿಂದೆದ್ದು ಅವಳನ್ನು ನೋಡಿದೆವು. ಅವಳನ್ನು ಯಾವ ಆಂಗಲ್ಲಿನಿಂದ ನೋಡಿದರೂ ಭಾರತೀಯಳಂತೆ ಕಂಡು ಬರಲಿಲ್ಲ. ಬಹುಶ ಭಾರತೀಯರಿಗೆ ಫ್ರೆಂಚ್ ಹೆಸರು ಅರ್ಥವಾಗುವುದಿಲ್ಲವೆಂದು ಆಕೆ ನಮಗೆ ಅನಿತಾ ಎಂದು ಹೇಳಿರಬಹುದೆಂದು ಊಹಿಸಿಕೊಂಡೆ. ಜ್ಯೂಜರ್ ನಮಗೆ ನಮ್ಮ ಚಾಲಕ ಆರ್ ನನ್ನೇ ನಮ್ಮ ಪ್ರವಾಸದುದ್ದಕ್ಕೂ ಗೈಡ್ ಆಗಿರುತ್ತಾನೆಂದು ಬೆಳಿಗ್ಗೆಯಷ್ಟೇ ಹೇಳಿದ್ದ. ಈಗ ಇದ್ಯಾರೋ ಹೆಂಗಸನ್ನತ್ತಿಸಿಕೊಂಡು ಗೈಡ್ ಎನ್ನುತ್ತಾನಲ್ಲಾ ಎಂಬ ಆಶ್ಚರ್ಯದಿಂದ ಅವನನ್ನು ಇಬ್ಬರು ಗೈಡ್ ಗಳಾ ಎಂದು ಕೇಳಿದೆ. ಅದಕ್ಕಾತ ಆಯಾ ನಗರದಲ್ಲಿ ಅಲ್ಲಿಯ ಸ್ಥಳೀಯ ಗೈಡ್ ಗಳನ್ನು ತೆಗೆದುಕೊಳ್ಳಬೇಕೆಂಬುದು ಅಲ್ಲಿಯ ನಿಯಮವೆಂದ.
 
ಪ್ಯಾರಿಸ್ ನಗರ ಸಮೀಪವಾಗುತ್ತಿದ್ದಂತೆಯೇ ನಮ್ಮನ್ನು ಸ್ವಾಗತಿಸಿದ್ದು ರಸ್ತೆ ಬದಿಯಲ್ಲಿ ಬೆಳ್ಳಂಬೆಳಿಗ್ಗೆಯೇ ಪರಸ್ಪರ ಅಪ್ಪಿಕೊಂಡು ಚುಂಬಿಸುತ್ತಾ ನಿಂತಿದ್ದ ಯುವಜೋಡಿಗಳು. ಪ್ಯಾರಿಸ್ ನಗರದ ಸಿಗ್ನಲ್ಲುಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದ್ದವು. ರಸ್ತೆ ದಾಟುವಾಗ ತಮಗೆ ಗ್ರೀನ್ ಸಿಗ್ನಲ್ಲು ಸಿಗುವವರೆಗೂ ಸಮಯ ವೇಸ್ಟ್ ಮಾಡುವುದೇಕೆಂಬಂತೆ ಜೋಡಿಗಳು ಚುಂಬನದಲ್ಲಿ ನಿರತರಾಗುತ್ತಿದ್ದರು. ಮೊದಮೊದಲು ಇದು ನಮಗೆ ಕುತೂಹಲವಾಗಿ ಕಂಡಿತ್ತಾದರೂ ಎತ್ತ ನೋಡಿದರೂ ಮುತ್ತಿಡುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಈ ಪ್ಯಾರಿಸ್ಸಿನ ಬಿಂದಾಸ್ ಪ್ರವೃತ್ತಿಯ ಜನರ ಅರಿವಾಗಿತ್ತು.
 
ಪ್ಯಾರಿಸ್ ನಗರ ಪ್ರದಕ್ಷಿಣೆಯೂ ಲಂಡನ್ನಿನ ಪ್ರದಕ್ಷಿಣೆಯಂತೆಯೇ ಇತ್ತು. ಅದೇ ನಮ್ಮ ಹಳ್ಳಿ ಜಾತ್ರೆಯ ಬಯಾಸ್ಕೋಪಿನ ’ಬಾಂಬೆ ನೋಡಿ, ಕಲ್ಕತ್ತಾ ನೋಡಿ!’ ಎಂಬಂತಾ ವಿವರಣೆ ಲಂಡನ್ನಿನಂತೆ ಇಲ್ಲಿಯೂ ಪುನರಾವರ್ತನೆಯಾಯಿತು. ಅಲ್ಲಿ ಥೇಮ್ಸ್ ನದಿಯ ಅಡ್ಡಡ್ಡಕ್ಕೆ ನಮ್ಮನ್ನು ಸುತ್ತಿಸಿದಂತೆ ಈ ಪ್ಯಾರಿಸ್ಸಿನಲ್ಲಿ ಸಿಯಾನ್ ನದಿಯ ಅಡ್ಡಡ್ಡಕ್ಕೆ ನಮ್ಮನ್ನು ಸುತ್ತಿಸಿದ್ದೇ ಸುತ್ತಿಸಿದ್ದು. ಪ್ಯಾರಿಸ್ ನಗರ ಸಿಯಾನ್ ನದಿಯುದ್ದಕ್ಕೂ ಉತ್ತರ ದಕ್ಷಿಣಕ್ಕೆ ಇಬ್ಬಾಗವಾಗಿ ಹರಡಿಕೊಂಡಿತ್ತು. ಅಲ್ಲಿ ಪುರಾತನ ಕಟ್ಟಡಗಳು ನೋಡಲಿಕ್ಕೆ ಅದ್ಭುತವಾಗಿ ಕಾಣುತ್ತಿದ್ದವು. ಇಂಗ್ಲೀಷರಂತೆಯೇ ಫ್ರೆಂಚರೂ ಸಾಮ್ರಾಜ್ಯಶಾಹಿ ಪ್ರವೃತ್ತಿಯವರೇ. ಇದರಿಂದಾಗಿಯೇ ಈ ಎರಡೂ ದೇಶಗಳ ಮಧ್ಯೆ ಇತಿಹಾಸದಲ್ಲಿ ಅನೇಕ ಯುದ್ದಗಳಾಗಿದ್ದುದು. ಫ್ರೆಂಚರದ್ದು ಸ್ವಾಬಾವಿಕವಾಗಿ ಬಂಡೇಳುವ ಸ್ವಭಾವವಾಗಿತ್ತು. ಅರಸೊತ್ತಿಗೆಯನ್ನು ಕಿತ್ತು ಹಾಕಲು ಅವರು ನಡೆಸಿದ್ದ ಕ್ರಾಂತಿ ಐತಿಹಾಸಿಕವಾದುದು. ಇತಿಹಾಸದ ವಿಧ್ಯಾರ್ಥಿಯಾಗಿದ್ದ ನಾನು ಪದವಿಯಲ್ಲಿ ಯೂರೋಪಿನ ಚರಿತ್ರೆಯನ್ನೇ ಐಚ್ಚಿಕ ವಿಷಯವನ್ನಾಗಿ ಆರಿಸಿಕೊಂಡಿದ್ದರಿಂದ ಆಧುನಿಕ ಯೂರೋಪಿನ ಇತಿಹಾಸದ ಬಗ್ಗೆ ತಿಳಿದುಕೊಂಡಿದ್ದೆ. ಪ್ಯಾರಿಸ್ಸಿನ ಸುತ್ತ ಎತ್ತ ಸುತ್ತಾಡಿದರೂ ಐಫಲ್ ಟವರ್ ಎದ್ದು ಕಾಣುತ್ತಿತ್ತು. ಪ್ಯಾರಿಸ್ಸಿನಲ್ಲಿ ೧೪೦೦ ಅತ್ಯಂತ ಹಳೆಯ ಕಟ್ಟಡಗಳು ಈಗಲೂ ಸುಸಜ್ಜಿತ ಸ್ಥಿತಿಯಲ್ಲಿರುವುದಾಗಿ ಹೇಳಿದ ಗೈಡ್ ಅನಿತಾ ಅಲ್ಲಿಯ ಕಟ್ಟಡಗಳ ವಿವರಗಳನ್ನು ಮೈಕಿನಲ್ಲಿ ವಿವರಿಸುತ್ತಿದ್ದಳು. ನಾವು ೩೬೦ ಡಿಗ್ರಿಯಲ್ಲಿ ತಿರುಗುತ್ತಾ ಅವುಗಳನ್ನು ಕಣ್ಣು ತುಂಬಿಸಿಕೊಂಡೆವು. ಕಾನ್ಕಾರ್ಡೆ ವೃತ್ತದಲ್ಲಿ ಬಸ್ ನಿಲ್ಲಿಸಿ ನಮಗೆ ಫೋಟೊ ತೆಗೆಯಲು ಸ್ವಲ್ಪ ಹೊತ್ತು ಸಮಯ ನೀಡಲಾಯಿತು. ಲಂಡನ್ನಿನಂತೆಯೇ ಇಲ್ಲಿಯೂ ಅವಸರದಿಂದ ನಗರ ಸುತ್ತಾಡಿದ್ದೆವು.
 
ಪ್ಯಾರಿಸ್ ನಗರದಲ್ಲಿ ನಡೆದು ಸುತ್ತಾಡುವುದೇ ಮಜವಾಗಿತ್ತು. ಈ ನಗರ ವಿಶ್ವ ಫ್ಯಾಷನ್ ಕೇಂದ್ರವೆನಿಸಿತ್ತು. ಒಂದರ್ಥದಲ್ಲಿ ಫ್ಯಾಷನ್ನಿನ ಜನ್ಮ ಸ್ಥಳ ಈ ಪ್ಯಾರಿಸ್. ಹದಿಹರೆಯದ ಯುವಕ ಯುವತಿಯರ ಕೈನಲ್ಲಿ ಸಿಗರೇಟಿರುವುದು ಸಾಮಾನ್ಯವಾಗಿತ್ತು. ತಂದೆ ತಾಯಿ ಜತೆಗಿದ್ದ ಪಡ್ಡೆಗಳೂ ಸಿಗರೇಟಿನ ದಮ್ ಎಳೆಯುತ್ತಿದ್ದರು. ಕಾನ್ಕಾರ್ಡೆ ಸರ್ಕಲ್ ನಲ್ಲಿ ನಾವು ಸುತ್ತಾಡುತ್ತಿದ್ದಾಗ ಯುವಜೋಡಿಯೊಂದು ಎಡಬಿಡದೇ ಚುಂಬಿಸುತ್ತಾ ರಸ್ತೆ ಬದಿಯಲ್ಲಿ ನಿಂತುಬಿಟ್ಟಿತ್ತು. ಅವರು ಜಗತ್ತಿನ ಪರಿವೆಯೇ ಇಲ್ಲದವರಂತೆ ಚುಂಬಿಸುತ್ತಿದ್ದನ್ನು ಕಂಡ ರಾಜೇಗೌಡರು "ಇದೇನ್ರೀ...ಇವರು ಇನ್ನೆಲ್ಲೂ ಜಾಗ ಸಿಗದವರಂತೆ ಹಿಂಗೆ ರಸ್ತೆ ಬದೀಲೇ ನಿಂತಿದ್ದಾರಲ್ಲಾ! ನಮ್ಮೂರಲ್ಲಾಗಿದ್ರೆ ನಾಲ್ಕು ಬಾರಿಸಿ ಓಡಿಸುತ್ತಿದ್ದೆವು. ಇಲ್ಲಿ ಯಾರೂ ಕೇಳುವವರೇ ಇಲ್ವಲ್ಲ" ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಈ ಫ್ರೆಂಚರದ್ದು ಮೂಲತಃ ಬಂಡಾಯದ ಸ್ವಭಾವವೆಂಬುದು ಅವರ ವರ್ತನೆಯಿಂದಲೇ ಅರ್ಥವಾಗುತ್ತಿತ್ತು. ಒಂಥರಾ ಡೋಂಟ್ ಕೇರ್ ಸಂಸ್ಕೃತಿಯ ಸರದಾರರು ಈ ಜನ. ಹಾಗೆಯೇ ಸಾಹಸ ಪ್ರವೃತ್ತಿಯವರು; ಶತಮಾನಗಳ ಹಿಂದೆಯೇ ಬಂಡಾಯದ ಮನೋಭಾವವನ್ನು ಬೆಳೆಸಿಕೊಂಡವರು.
 
೧೭೮೯ ರಲ್ಲಿ ನಡೆದ ಫ್ರಾನ್ಸಿನ ಮಹಾಕ್ರಾಂತಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿನ ಸ್ವಾತಂತ್ರ್ಯ ಚಳುವಳಿಗಳಿಗೆ ಬುನಾದಿ ಹಾಕಿಕೊಟ್ಟಿತ್ತು. ನೆಪೋಲಿಯನ್ ನಂತಹ ಮಹಾನ್ ಸಾಹಸಿ ಹುಟ್ಟಿದ ದೇಶವಿದು. ನಾವು ಇಲ್ಲಿ ನೆಪೋಲಿಯನ್ ಬೊನಾಪಾರ್ಟೆ ಹೆಸರಿನ ಮಿಲಿಟರಿ ಶಾಲೆಯನ್ನು ಕಂಡೆವು. ಇಲ್ಲಿನ ಮೈದಾನದಲ್ಲಿ ಯುವ ಸೈನಿಕರಿಗೆ ತರಬೇತಿಯನ್ನು ನೀಡಲಾಗುತ್ತಿತ್ತು. ಸೈನಿಕ ಸಮವಸ್ತ್ರವನ್ನು ಧರಿಸಿದ್ದ ಯುವಕರು ಅತ್ಯಂತ ಶಿಸ್ತುಬದ್ದ ಹೆಜ್ಜೆಗಳಾಕುತ್ತಿದ್ದರು. ಇಲ್ಲಿ ಜನ ಮಾತಾಡುವುದು ಫ್ರೆಂಚ್ ಭಾಷೆಯಾದರೂ ಶಿಕ್ಷಣ ನೀಡುವುದು ಲ್ಯಾಟಿನ್ ಭಾಷೆಯಲ್ಲೆ ಎಂದು ಗೈಡ್ ಅನಿತಾ ಹೇಳಿದಾಗ ಆಶ್ಚರ್ಯವಾಯಿತು. ಕಾಲೇಜಿನ ದಿನಗಳಿಂದಲೂ ಪ್ಯಾರಿಸ್ಸನ್ನು ನೋಡಬೇಕೆಂದುಕೊಂಡಿದ್ದವ ನಾನು. ಜಗತ್ತಿನ ಯಾವ ದೇಶವನ್ನು ನೋಡದಿದ್ದರೂ ಫ್ರಾನ್ಸ್ ಅನ್ನು ನೋಡಲೇಬೇಕೆಂದು ಕಾಲೇಜು ದಿನಗಳಲ್ಲಿ ಅನ್ನಿಸಿತ್ತು. ಅಷ್ಟರ ಮಟ್ಟಿಗೆ ನಾವು ಓದಿದ್ದ ಫ್ರಾನ್ಸಿನ ಮಹಾಕ್ರಾಂತಿ ನಮ್ಮ ಮೇಲೆ ಪರಿಣಾಮ ಬೀರಿತ್ತು. ಆದರೆ ಇಲ್ಲೀಗ ಸ್ವೇಚ್ಚಾಚಾರಿ ಸೆಕ್ಸ್ ಮಹಾಕ್ರಾಂತಿಯೇ ಎಲ್ಲೆಂದರಲ್ಲಿ ನಮ್ಮ ಕಣ್ಣಿಗೆ ಕಾಣತೊಡಗಿತ್ತು. ಶತಮಾನಗಳ ಹಿಂದೆಯೇ ನಿರ್ಮಾಣವಾದ ಸುಂದರ ಪ್ಯಾರಿಸ್ ನಗರವನ್ನು ಇನ್ನಷ್ಟು ಹೊತ್ತು ಸುತ್ತಾಡಬೇಕೆಂಬ ಆಸೆ ನಮ್ಮದಾಗಿತ್ತು. ಆದರೆ ಇಂದು ಭಾನುವಾರವಾಗಿರುವುದರಿಂದ ಡಿಸ್ನಿ ಪಾರ್ಕ್ ನಲ್ಲಿ ಹೆಚ್ಚಿನ ಜನ ಸೇರುವುದರಿಂದ ಅಲ್ಲಿಗೆ ಬೇಗ ಹೋಗಿ ಟಿಕೆಟ್ ತೆಗೆದುಕೊಳ್ಳಬೇಕೆಂದು ಹೇಳಿದ ಜ್ಯೂಜರ್ ನಮ್ಮನ್ನು ಬೇಗನೆ ಬಸ್ ಹತ್ತಿಸಿಬಿಟ್ಟಿದ್ದ. ಜತೇಲಿದ್ದ ರಾಜೇಗೌಡರು ಡಿಸ್ನಿ ಪಾರ್ಕ್ ನೋಡಲು ಅತ್ಯಂತ ಉತ್ಸುಕರಾಗಿದ್ದರು. ಅಲ್ಲಿ ಟಿಕೆಟ್ ಸಿಗದಿದ್ದರೆ ನಮಗೇ ಭಯಂಕರ ನಷ್ಟವೆಂದ ಗೌಡರು ಅರ್ಜೆಂಟಾಗಿ ಬಸ್ ಏರಿದ್ದರು. ಹಾಗೆ ಅತೀವ ಖುಷಿಯಿಂದ ಡಿಸ್ನಿ ಪಾರ್ಕ್ ಗೆ ಬಂದ ರಾಜೇಗೌಡರು ಅಲ್ಲಿ ದೀರ್ಘದಂಡ ನಮಸ್ಕಾರ ಮಾಡಿದ್ದು ಕಂಡು ನಮಗೆಲ್ಲಾ ಆಶ್ಚರ್ಯವಾಗಿತ್ತು!
 
(ಮುಂದುವರೆಯುವುದು)