(ಪುಟ ೧೧) ಯಾಕ್ ಹಿಂಗ್ ಬಡದಾಡ್ತೀ ತಮ್ಮಾ ಮಾಯಾ ನೆಚ್ಚೀ...?!

ಬೇಲಾ ಮರವ೦ತೆ
 
ಅವತ್ತು ಸಾನ್ ಓಸೆಯ ಪಬ್ಲಿಕ್ ಲೈಬ್ರರಿಯೊಂದಕ್ಕೆ ಹೋಗಿದ್ದೆ. ನಮ್ಮೂರಿನಲ್ಲು ಒಂದು ಪಬ್ಲಿಕ್ ಲೈಬ್ರರಿ ಇತ್ತು, ಆದರೆ ಅದರ ಹತ್ತಿರ ಯಾವತ್ತೂ ಹೋಗಿರಲಿಲ್ಲ. ’ಅಲ್ಲಿ ಪುಂಡ ಹುಡುಗರ ಕಾಟ ತುಂಬ ಜಾಸ್ತಿ. ಲೈಬ್ರರಿ ಒಳಗೆ ಹೋಗಿ ಪುಸ್ತಕ ಹುಡುಕುವುದೂ ಕಷ್ಟ. ನಮಗೆ ಬೇಕಾದ ಯಾವ ಪುಸ್ತಕಾನೂ ಯಾವತ್ತೂ ಟೈಮ್ ಗೆ ಸರಿಯಾಗಿ ಸಿಗಲ್ಲ, ಲೈಬ್ರೇರಿಯನ್ ಫ್ರೆಂಡ್ ಆಗಿದ್ರೆ ಮಾತ್ರ ಸ್ವಲ್ಪ ಪರವಾಗಿಲ್ಲ’ ಅಂತ ನಮ್ಮ ಸ್ನೇಹಿತರೊಬ್ಬರು ಹೇಳಿದ್ದು ಕೇಳಿದ್ದೆ. ಅದು ಬಿಟ್ಟರೆ ನಮ್ಮ ಕಾಲೇಜಿನ ಲೈಬ್ರರಿಯೊಂದಿತ್ತು; ಸಾವಿರ ಜನ ವಿದ್ಯಾರ್ಥಿಗಳಿಗೆ ಒಂದು ಲೈಬ್ರರಿ. ನಲವತ್ತು ಜನ ಒಟ್ಟಿಗೆ ಬಂದರೆ ಕೂರಲು ಅಲ್ಲಿ ಜಾಗ ಇರುತ್ತಿರಲಿಲ್ಲ. ನಮ್ಮ ತರಗತಿಯಲ್ಲಿ ಚಿಗುರೊಡೆಯುತ್ತಿದ್ದ ಪ್ರೇಮಕಥೆಗಳ ನಾಯಕ-ನಾಯಕಿಯರು, ಅವರ ಹತ್ತಿರದ ಸ್ನೇಹಿತರು ಮಾತ್ರ ಪದೇ ಪದೇ ಲೈಬ್ರರಿಗೆ ಹೋಗಿ ಅಲ್ಲಿ ಪಿಸುಮಾತಿನ ಸಂಭಾಷಣೆ, ಕಂಬೈನ್ಡ್ ಸ್ಟಡಿ ಅದು ಇದು ನಡೆಸುವುದನ್ನು ಕೇಳಿದ್ದೆ. ಲೈಬ್ರರಿಗಳು ಎಂದರೆ ಇಷ್ಟೇ ಎಂದುಕೊಂಡಿದ್ದೆ. ನಾವು ಓದುವ ಪುಸ್ತಕಗಳು ಲೈಬ್ರರಿಯ ಅಗತ್ಯ ಇಲ್ಲದೆಯೇ ಸುಲಭವಾಗಿ ಸಿಗ್ತಾ ಇದ್ದದ್ದರಿಂದ, ಅಕಸ್ಮಾತ್ ಪುಸ್ತಕ ಬೇಕಾದರೂ ಅಪ್ಪ-ಚಿಕ್ಕಪ್ಪ-ಅಕ್ಕ ಇವರೆಲ್ಲರ ಸಹಾಯದಿಂದ ಕೆಲಸ ನಡೆಯುತ್ತಿದ್ದುದರಿಂದ ನಾನು ಲೈಬ್ರರಿಯಿಂದ ದೂರವಾಗಿ ಓದಿದ್ದೆ.
 
ಬೆಳಿಗ್ಗೆ ಸ್ಮಿತಾ ಫೋನ್ ಮಾಡಿ ’ಬಾ ಬೇಲಾ ನಾನು ತಂದಿದ್ದ ಬುಕ್ಸ್ ರಿಟರ್ನ್ ಮಾಡಬೇಕು, ತುಂಬಾ ದಿನ ಆಗಿದೆ. ನೀನೂ ಲೈಬ್ರರಿ ನೋಡಿದ ಹಾಗಾಗುತ್ತೆ. ಹಾಗೇ ಅಲ್ಲಿ ಯಾವ ದಿನ ವಾಲಂಟೀರ್ ಮಾಡಬಹುದು ಅಂತ ಕೇಳಿಕೊಂಡು ಬರೋಣ’ ಎಂದಿದ್ದರು. ಸ್ಮಿತಾರೊಂದಿಗೆ ಹೋಗಿ ನೋಡಿದಾಗ ನನಗೆ ಆಶ್ಚರ್ಯ!! ಆ ಕಟ್ಟಡ ಯಾವುದೋ ದೊಡ್ಡ ಕಂಪನಿಯ ಆಫೀಸಿನಂತಿತ್ತು. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಅತ್ಯಂತ ಸ್ವಚ್ಚ, ಸುಸಜ್ಜಿತ ಮತ್ತು ಪುಸ್ತಕಗಳ ಸಮುದ್ರ. ಕಟ್ಟಡದ ಒಳ ಹೊಕ್ಕಂತೆ ಎಲ್ಲವೂ ಎಲ್ಲರೂ ನಿಶ್ಯಬ್ದ. ತಮ್ಮ ಪುಸ್ತಕದ ಪ್ರಪಂಚದಲ್ಲಿ ಮಗ್ನ. ಅಲ್ಲಿನ ರಿಸೆಪ್ಶನ್ ನಲ್ಲಿ ಕುಳಿತಿದ್ದಾಕೆ ಕೂಡಾ ಯಾವುದೋ ಪುಸ್ತಕದಲ್ಲಿ ಮಗ್ನರಾಗಿದ್ದರು. ಸ್ಮಿತಾ ಅವರು ಕಡ ಪಡೆದಿದ್ದ ಸುಮಾರು ಹದಿನೈದು ಪುಸ್ತಕಗಳನ್ನು-ಎರಡು ಮೂರು ಡಿವಿಡಿ ಗಳನ್ನು ಹಿಂದಿರುಗಿಸಿದರು. ಅಷ್ಟು ಪುಸ್ತಕಗಳೂ ಇವರಿಗೆ ಒಟ್ಟಿಗೆ ಹೇಗೆ ದೊರೆಯಿತು ಅಂತ ನನಗೆ ಆಶ್ಚರ್ಯ.
 
ಸ್ಮಿತಾ ಲೈಬ್ರರಿಯ ಪ್ರತೀ ರೂಮು, ಸ್ಟಡಿ ಹಾಲ್, ಕೋನ ಕೋನಗಳನ್ನೂ ತೋರಿಸುತ್ತಾ ಟೂರ್ ಗೈಡ್ ಥರ ವಿವರಿಸುತ್ತಿದ್ದರು. ನಾವು ಹೋದ ದಿನ ಅಲ್ಲಿನ ಒಂದು ಕೋಣೆಯಲ್ಲಿ ೨-೩ ವರ್ಷದ ಮಕ್ಕಳಿಗೆ ’ಸ್ಟೋರಿ  ರೀಡಿಂಗ್’ ನಡೆಯುತ್ತಿತ್ತು. ಅಮ್ಮಂದಿರು ಮನೆಯಿಂದ ತಂದಿದ್ದ ಬಣ್ಣ ಬಣ್ಣದ ಹಾಸುಗಳನ್ನು ಹಾಸಿಕೊಂಡು ಬೆಣ್ಣೆಯ ಮುದ್ದೆಗಳಂತಿದ್ದ ಮುದ್ದು ಮಕ್ಕಳನ್ನು ಅಲ್ಲಿ ಕೂರಿಸಿಕೊಂಡು ಕಾಲು ಚಾಚಿ ರಿಲ್ಯಾಕ್ಸ್ಡ್ ಆಗಿ ಕೂತಿದ್ದರು. ಕೆಲವು ಮಕ್ಕಳು ತಮ್ಮ ತಳ್ಳುಗಾಡಿಯಲ್ಲೇ ಕೂತು ಕಥೆ ಓದುತ್ತಿದ್ದವರನ್ನು ಮಿಕ ಮಿಕ ನೋಡುತ್ತಿದ್ದವು. ಇನ್ನು ಕೆಲವು ಆಕೆಗೆ ಬೆನ್ನು ಹಾಕಿ ಇನ್ನೊಂದು ಕೂಸಿನ ಜೊತೆಯೋ, ಅಮ್ಮನ ಕಾರ್ ಕೀ ಜೊತೆಯೊ ಆಟವಾಡಿಕೊಳ್ಳುತ್ತಿದ್ದವು. ಒಟ್ಟಿನಲ್ಲಿ ಪರೀಕ್ಷೆಗೆ ಕೂರಿಸಿದಂತೆ ಕೂರಿಸಿ ಕಥೆ ಕೇಳಿಸುವುದಕ್ಕಿಂತ ಅವುಗಳ ಕಿವಿ ಮೇಲೆ ಕಥೆ-ಭಾಷೆ ಬೀಳಲಿ ಎಂಬ ಉದ್ದೇಶದಲ್ಲಿ ಓದುವಾಕೆ ಸ್ಪಷ್ಟವಾಗಿ, ರಾಗವಾಗಿ, ಕೈಬಾಯಿ ಅಲ್ಲಾಡಿಸುತ್ತಾ ಓದುತ್ತಿದ್ದರು. ಮಕ್ಕಳಿಗಿಂತ ತಾಯಂದಿರೇ ಕಥೆಯನ್ನು ಆನಂದಿಸುತ್ತಿದ್ದರು.
 
ಅದು ಪುಟ್ಟ ಸಿಟಿಯೊಂದರ ಪಬ್ಲಿಕ್ ಲೈಬ್ರರಿ. ಆದರೆ ನಾನು ಎಲ್ಲಿಯೂ ನೋಡದಷ್ಟು ವರ್ಗಗಳ ಪುಸ್ತಕಗಳು ಅಲ್ಲಿದ್ದವು. ಬಾಲರು, ಮಕ್ಕಳು, ಹದಿಹರೆಯದವರು, ಹುಡುಗಿಯರು, ಹುಡುಗರು, ಸಲಿಂಗಿಗಳು, ವಯಸ್ಕರು, ಕುರುಡರು..ಬರೀ ವಯಸ್ಸಷ್ಟೇ ಅಲ್ಲ. ಪ್ರತೀ ವಯೋಮಾನದವರಿಗೂ ಇಪ್ಪತ್ತು, ಮೂವತ್ತು, ಎಣಿಕೆಗೆ ಬರದ ವಿಷಯಗಳಲ್ಲಿ ಪುಸ್ತಕಗಳು ಲಭ್ಯವಿದ್ದವು. ನಾನು ಮೊದಲ ದಿನ ತುಂಬಾ ಆಶ್ಚರ್ಯದಿಂದ ಇಡೀ ಲೈಬ್ರರಿ ಸುತ್ತಿ ಫ್ರೆಂಚ್ ಆರ್ಕಿಟೆಕ್ಚರ್, ಮಿಡ್ಲ್ ಈಸ್ಟರ್ನ್ ಪೊಯೆಟ್ರಿ, ಮಿಲ್ಸ್ ಅಂಡ್ ಬೂನ್ಸ್, ಸ್ಟಾಕ್ ಮಾರ್ಕೆಟ್ ಫಾರ್ ಡಮ್ಮೀಸ್, ಇಟಾಲಿಯನ್ ಕುಕಿಂಗ್, ನ್ಯಾನೋ ಟೆಕ್ನಾಲಜಿ...ಹೀಗೇ ಕೈಗೆ ಸಿಕ್ಕ, ಆಸಕ್ತಿ ಹುಟ್ಟಿದ ಏಳೆಂಟು ಪುಸ್ತಕಗಳನ್ನು, ಸಿನೆಮಾ ಡಿವಿಡಿಗಳನ್ನು, ಇನ್ನು ನನಗೆ ಯಾವತ್ತೂ ಪುಸ್ತಕಗಳೇ ಸಿಗುವುದಿಲ್ಲವೇನೋ ಎಂಬ ದುರಾಸೆಯಲ್ಲಿ ಬಾಚಿಕೊಂಡು ಬಂದೆ. ನನ್ನ ಕಾರ್ಡ್ ನಲ್ಲಿ ಏನು ಬೇಕಾದ್ರೂ ತಗೋ..ನನಗೆ ಒಂದು ತಿಂಗಳು ಬುಕ್ಸ್ ನಿಂದ ರೆಸ್ಟ್ ಬೇಕು ಎಂದ ಸ್ಮಿತಾ ನನ್ನನ್ನು ನೋಡುತ್ತಾ ಹಿಂದೆ ಎಲ್ಲೋ ಈ ರೀತಿ ಆಡುವವಳನ್ನು ನೋಡಿದ ಹಾಗಿದೆ ಎಂಬಂತಿದ್ದರು.
 
ದಾರಿಯುದ್ದಕ್ಕೂ ಅಬ್ಬ ಅದೆಷ್ಟಿದೆ ಅಲ್ವಾ...ವಾವ್ ಕಾವ್ ಕಾವ...! ಲೈಬ್ರರಿಯದ್ದೇ ಗುಣಗಾನ ಮಾಡಿಕೊಂಡು ಹೊಸದಾಗಿ ಸಿಕ್ಕ ಸಂಪತ್ತನ್ನು ಮನೆಗೆ ತಂದೆ. ಆ ಪುಸ್ತಕವನ್ನು ಕೈಯ್ಯಲ್ಲಿ ಮೊದಲು ಹಿಡಿದಾಗ ಇದನ್ನು ಓದಲೇಬೇಕು ಎನ್ನುವ ತವಕ ಮನೆಗೆ ಬಂದಾಗ ಮಾಯವಾಗಿತ್ತು! ಹೌದು. ನನ್ನಂತ ಸೋಮಾರಿಗಳ ಪರಿಯೇ ಹಾಗೆ. ಅದು ಕಂಡಾಗ ಅದು ನನಗೆ ಬೇಕು, ನಾನು ಅದನ್ನು ಅರೆದು ಕುಡಿದು ಜೀರ್ಣಿಸಿಕೊಂಡೇ ಬಿಡಬೇಕೆನಿಸುವ ಉತ್ಸಾಹ ಅದು ನಮ್ಮದಾದಮೇಲೆ ಟುಸ್ಸ್ ಎಂದಿರುತ್ತದೆ. "ಹೇಗೂ ಮನೆಗೆ ಬಂದಿದೆಯಲ್ಲಾ...ಇನ್ನೆರೆಡು ದಿನ ಬಿಟ್ಟು ಓದ್ತಿನಿ ಬಿಡು.." ನನಗೆ ನಾನೇ ಸಮಾಧಾನ ತಂದುಕೊಳ್ಳುತ್ತೇನೆ.
 
ಆದರೂ ಅವತ್ತು ಬೇರೆ ಏನೂ ಕೆಲಸ ಇರಲಿಲ್ಲವಾದ್ದರಿಂದ ’ಅ ಗೈಡ್ ಟು ಫ್ರೆಂಚ್ ಆರ್ಕಿಟೆಕ್ಚರ್’ ಪುಸ್ತಕದ ಚಿತ್ರ ನೋಡುತ್ತಾ ಕುಳಿತೆ. ಆ ಚಿತ್ರಗಳನ್ನು ತೆಗೆದಿದ್ದ  ಛಾಯಾಚಿತ್ರಗಾರರ ಕಣ್ಣಿನ ದೃಷ್ಟಿ ನನಗೆ ಏಕೆ ಬಾರದು...ಆಹಾ ಆ ಮೂಲೆಯಿಂದ ತೆಗೆದ್ರೆ ಇಷ್ಟು ಚನ್ನಾಗಿರುತ್ತೆ ಅಂತ ಅವನಿಗೆ ಹೇಗೆ ಗೊತ್ತಾಯ್ತು...ಹೀಗೇ ನನ್ನ ಯೂಸ್ ಲೆಸ್ ಲಹರಿಯಲ್ಲಿದ್ದೆ.  ಫೋನ್ ರಿಂಗ್ ಆಯಿತು. ಬಹುಷಃ ಪ್ರಶಾಂತ್ ಇರಬಹುದು ಎಂದು ಫೋನ್ ತೆಗೆದುಕೊಂಡೆ.
 
 ’ಹನೀ...ಕ್ಯಾನ್ ಐ ಟಾಕ್ ಟು ಯೂ ಫೋರ್ ಅ ಸೆಕೆಂಡ್?...’ ಅತ್ತಲಿಂದ ಸುಂದರವಾದ ದನಿ! ತೀರಾ ಮುದುಕಿಯೂ ಅಲ್ಲದ, ವಯಸ್ಕ ಮಹಿಳೆಯದೂ ಅಲ್ಲದ ದನಿ. ಒಂಥರಾ ಮುದ್ದಾಗಿತ್ತು. ಪ್ರಶಾಂತವಾಗಿತ್ತು. ಅವಸರ ಇರಲಿಲ್ಲ. ಮಾರಾಟ ಮಾಡುವವರ ನಾಟಕ ಇರಲಿಲ್ಲ. ಲಾಲಿಯಂತಿತ್ತು. ಹಿಪ್ನೊಟೈಜ್ ಮಾಡುವಂತೆ! ಆ ದನಿಗೆ ’ನೋ’ ಹೇಳಲಾಗಲಿಲ್ಲ. ನನಗೆ ಏನೂ ಕೆಲಸವಿರಲಿಲ್ಲ. ಈ ಅಜ್ಜಿಯಿಶ್ ದನಿ ಏನಾದರೂ ಚನ್ನಾಗಿರುವ ಮಾತಾಡಿದರೆ ಕೇಳಿದರೆ ಏನು ಎನ್ನುವ ಮೂಡಿನಲ್ಲಿದ್ದೆನೋ ಏನೋ? "ಯೆಸ್...ಹೂ ಇಸ್ ದಿಸ್?...ನಾನು ಆ ದನಿಯ ಸ್ಲೋ ರಿದಮ್ ಅನ್ನೇ ಅನುಸರಿಸಿ ಕೇಳಿದೆ. "ವೆಲ್ ವೆಲ್ ವೆಲ್...ಮೈ ಹಾರ್ಟ್ ಸೇಸ್ ಐ ಹ್ಯಾವ್ ಸಮ್ ವನ್ ಸ್ಪೆಷಲ್ ಹಿಯರ್..." ಎಂದರು ಆ ಮಾದಕಿ ಅಜ್ಜಿ. (ಮಾದಕಿ ಅನ್ನುವ ಪದವಿಲ್ಲ ಅಂತ ಗೊತ್ತು. ಆದರೆ ಪ್ರತೀ ಬಾರಿ ಆಕೆಯ ಮಾದಕ ದನಿ, ಮಾದಕತೆ ಅದೂ ಇದೂ ಅನ್ನುವುದಕ್ಕಿಂತ ಸಿಂಪಲ್ಲಾಗಿ ’ಮಾದಕಿ’ ಎಂದು ಬಿಡೋಣ ಅಂತ. ಭಾಷಾ ಪಂಡಿತರು ಮನ್ನಿಸಿಬಿಡಿ)
 
"ವಾಟ್ ಈಸ್ ಯುವರ್ ಲವ್ಲಿ ನೇಮ್ ಡಿಯರ್...?"
"ಬೇಲಾ".
"ಓಹ್ ಬೆಲ್ಲಾ! ವಾಟ್ ಅ ಸ್ವೀಟ್ ನೇಮ್! ಸೋ ಯುರೋಪಿಯನ್!". ನನಗೆ ಬೇಲಾ ಅಂದರೆ ಅರ್ಥ ಗೊತ್ತಿತ್ತು. ಬೆಲ್ಲ ಅಂದರೂ ಕನ್ನಡದಲ್ಲಿ ಅರ್ಥ ಗೊತ್ತಿತ್ತು. ಆದರೆ ನಮ್ಮ ಬೆಲ್ಲ ಯುರೋಪಿನಲ್ಲೂ ಬೆಲ್ಲವೇನಾ?!! ಆ ಅಜ್ಜಿಯ ಮಾತು ಕೇಳಿ ಆಶ್ಚರ್ಯ! ಇಷ್ಟು ವರ್ಷ ಏನು ಇಂಗ್ಲಿಷ್ ಕಲಿತೆ ನಾನು ಅಂತ ಬೈದುಕೊಂಡೆ.
 
"ಬೆಲ್ಲಾ...ಈಸಂಟ್ ಲೈಫ್ ಅ ವೆರಿ ಹಾರ್ಶ್ ಥಿಂಗ್? ವಿ ಆರ್ ಆಲ್ವೇಸ್ ಆನ್ ದ ಗೋ!! ದೇರ್ ಈಸ್ ಸೋ ಮಚ್ ನಾಯ್ಸ್, ಫೆಟೀಗ್ ಅಂಡ್ ಸ್ಟ್ರೆಸ್!!! ಈಸ್ ಇಟ್ ನಾಟ್ ಡಿಯರ್?" ಅಜ್ಜಿ ಹೆಚ್ಚು ಕಡಿಮೆ ಹಾಡುತ್ತಿದ್ದರು. ನಾನು ರಿಸೀವರ್ ಹಿಡಿದುಕೊಂಡು ಪುಟ್ಟ ಹುಡುಗಿಯಂತೆ ತಲೆಯಾಡಿಸುತ್ತಾ "ಯೆಸ್" ಅಂದೆ. ಆ ಮಾದಕಿ ಮುದುಕಿ ನನ್ನನ್ನು ಸಂಪೂರ್ಣ ಬುಟ್ಟಿಗೆ ಹಾಕಿಕೊಂಡಿದ್ದರು.
"ದೆನ್ ಟೆಲ್ ಮಿ ಡಿಯರ್...ಹೌ ಡು ಯು ವಾಂಟ್ ಟು ರೆಸ್ಟ್?..." ನಾನು ಹೇಗೆ ವಿಶ್ರಮಿಸಲು ಬಯಸುತ್ತೇನೆ? ಈ ಪ್ರಶ್ನೆಗೆ ನನಗೆ ಆಗ ಉತ್ತರ ಹೊಳೆಯಲಿಲ್ಲ. ಆದರೆ ಮಿದುಳು ಕೆಲಸ ಮಾಡಿತು. ಓಹೋ ಬಹುಷಃ ಹಾಸಿಗೆ ಮಾರುವವಳಿರಬೇಕು ಅನಿಸಿತು. ಆಕೆ ನಾನು ಉತ್ತರ ಕೊಡುವುದನ್ನೂ ಕಾಯಲಿಲ್ಲ. ಈ ಹುಡುಗಿ ಸೀರಿಯಸ್ಸಾಗಿ ಯೋಚನೆ ಮಾಡುತ್ತಿದ್ದಾಳೆ ಅಂತ ಅವಳಿಗೂ ಗೊತ್ತಾಗಿರಬೇಕು.
 
"ಬೆಲ್ಲಾ ಡಿಯರ್...ವಿ ಆಲ್ ವಾಂಟ್ ಟು ರೆಸ್ಟ್ ಪೀಸ್ ಫುಲಿ....ವಿ ವಾಂಟ್ ಟು ಹಿಯರ್ ದ ಓಶನ್ ಬ್ರೀಜ್ ವೆನ್ ವಿ ರೆಸ್ಟ್...ವಿ ಆಲ್ ವಾಂಟ್ ಟು ರೆಸ್ಟ್ ಕವರ್ಡ್ ಗ್ರೀನ್...." ಅವರು ಮುಂದುವರಿಯುತ್ತಿದ್ದಂತೇ ಈಕೆ ಯಾವುದೋ ಹೋಟೆಲ್ ನ ವೆಕೇಷನ್ ಪ್ಯಾಕೇಜ್ ಮಾರುತ್ತಿದ್ದಾರೆ ಅಂತ ಅರ್ಥವಾಗಿತ್ತು.
 
"ಬೆಲ್ಲಾ ವಿ ಹ್ಯಾವ್ ಅ ಸ್ಪೆಷಲ್ ಪ್ಲಾಟ್ ಜಸ್ಟ್ ಫಾರ್ ಯೂ...ಡಿಯರ್! ಇಫ್ ಯೂ ಆಕ್ಟ್ ಟುಡೇ ಯು ವಿಲ್ ನಾಟ್ ರಿಗ್ರೆಟ್" ಎಂದರು. ಕೊಂಡುಕೊಳ್ಳುವ ಆಸಕ್ತಿ ನನಗಿರಲಿಲ್ಲ. ನನ್ನ ಹತ್ತಿರ ಈ ಥರ ಫೋನಿನಲ್ಲಿ ಮಾರಾಟ ಮಾಡುವವರು ಕೇಳುವ ಕ್ರೆಡಿಟ್ ಕಾರ್ಡ್ ಗಳೂ ಇರಲಿಲ್ಲ. ನಮ್ಮ ಬ್ಯಾಂಕಿನ ಡೆಬಿಟ್ ಕಾರ್ಡ್ ಒಂದು ಮಾತ್ರ ಇತ್ತು. ಅದನ್ನು ಜೋಪಾನವಾಗಿ ನೋಡಿಕೋ ಅಂತ ಪ್ರಶಾಂತ ಎಚ್ಚರಿಸಿದ್ದ. ಒಟ್ಟಿನಲ್ಲಿ ನನಗೆ ಇನ್ನೂ ಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲ. ಅದನ್ನು ಚನ್ನಾಗಿ ಉಪಯೋಗಿಸಿಕೊಳ್ಳುವುದನ್ನು ಕಲಿತಿದ್ದೆ.
 
"ಮೈ ಹಸ್ಬೆಂಡ್ ಈಸ್ ನಾಟ್ ಹೋಮ್...ಸಂಜೆ ಮೇಲೆ ಕಾಲ್ ಮಾಡ್ತಿರಾ.." ಕೇಳಿದೆ.
"ಓಹ್...ಯು ಹ್ಯಾವ್ ಅ ಹಸ್ಬೆಂಡ್! ನೀನು ಇವತ್ತು ತೀರ್ಮಾನ ಮಾಡಿದರೆ ಅವನಿಗೂ ಒಂದು ಪ್ಲಾಟ್ ಕೊಡುತ್ತೇವೆ. ನೀವು ಇಬ್ಬರಿರುವುದರಿಂದ ಒಂದು ಕೊಂಡರೆ ಇನ್ನೊಂದನ್ನು ಅರ್ಧ ಬೆಲೆಗೆ ಕೊಡುತ್ತೇವೆ..." ಅಜ್ಜಿ ಅದೇ ಸಮಾಧಾನದಲ್ಲಿ ಮುಂದುವರೆದಿದ್ದರು.
ಇದೇನಿದು?! ಟಿಕೆಟ್ ಅಂತಿಲ್ಲ...ರೂಮ್ ಅಂತಿಲ್ಲ...ಹೋಗಲೀ ಯಾವ ಸಾಮಾನುಗಳ ಪ್ರಸ್ತಾಪನೂ ಮಾಡ್ತಿಲ್ಲ...ಪ್ಲಾಟ್ ಪ್ಲಾಟ್ ಎನ್ನುತ್ತಿದ್ದರಲ್ಲಾ...ಫ್ಲ್ಯಾಟ್ ಮಾರುತ್ತಿದ್ದಾರಾ? ಸೈಟು ಮಾರುತ್ತಿದ್ದಾರಾ? ಅದೂ ಹೀಗೆ ಫೋನ್ ನಲ್ಲಿ..." ಅಂತ ಅಲೋಚನೆ ಬಂತು.
’ಎಲ್ಲಿ ಪ್ಲಾಟ್ ಕೊಡ್ತೀರಿ?’ ಕೇಳಿಬಿಟ್ಟೆ. ನಾನು ನನ್ನ ದಡ್ಡತನವನ್ನು ಒಂಚೂರು ಕಮ್ಮಿ ಮಾಡಿಕೊಳ್ಳಲಿಕ್ಕೆ, ಕುತೂಹಲ ತಣಿಸಿಕೊಳ್ಳಲಿಕ್ಕೆ ಕೇಳುತ್ತಿದ್ದ ಪ್ರಶ್ನೆಗಳಿಂದಾಗಿ ಆ ಅಜ್ಜಿಗೆ ಇವಳು ನಿಜವಾದ ಆಸಕ್ತಿ ಇರೋ ಗಿರಾಕಿ ಎನ್ನಿಸಿದ್ದಿರಲೂ ಬೇಕು.
 
"ಡಿಯರ್...ಸ್ಕೈ ಲಾನ್ ಮೆಮೋರಿಯಲ್ ಪಾರ್ಕ್ ನಲ್ಲಿರುವ...ಗಾರ್ಡನ್ ಆಫ್ ಮೆಮೊರೀಸ್ ಲಾನ್ ನಲ್ಲಿ ಈಗ ಸ್ಪಾಟ್ ಖಾಲಿ ಇದೆ. ಅದು ಹಾಫ್ ಮೂನ್ ಬೇ ಗೆ ತುಂಬಾ ಹತ್ತಿರ ಇದೆ....ಬಹಳ ಡಿಮಾಂಡ್ ಇರೋ ಜಾಗ..." ಎಂದರು. ಮೆಮೋರಿಯಲ್ ಪಾರ್ಕ್ ಅಂತ ಕೇಳಿ ನನಗೆ ಗಾಬರಿ! "ಸರಿಯಾಗಿ ಕೇಳಿಸಿಕೊಂಡೆನಾ? ಅಥ್ವಾ ಬೇರೇನಾದ್ರೂ ಹೇಳಿದರಾ ಈ ಮಾದಕಿ?" ನಾನು ಸೀರಿಯಸ್ಸಾಗಿ ಕನ್ ಫ್ಯೂಸ್ ಆಗಿಬಿಟ್ಟೆ.
"ನೀವು ಮೆಮೋರಿಯಲ್ ಪಾರ್ಕ್ ಬಗ್ಗೆ ಮತಾಡುತ್ತಿದ್ದೀರಾ??!" ಅರ್ಥವಾಗದೆ ಆಕೆಯನ್ನು ಕೇಳಿದೆ.
"ಯು ಹರ್ಡ್ ಇಟ್ ಕರೆಕ್ಟ್ ಡಿಯರ್!...ಈಗ ನಾವು ಸ್ಪೆಷಲ್ ಸೇಲ್ ಮಾಡುತ್ತಿದ್ದೇವೆ. ಈ ಅವಕಾಶ ನಿನ್ನ ಮನೆ ಬಾಗಿಲು ತಟ್ಟಿದೆ..ಯು ಆರ್ ರಿಯಲೀ ಲಕ್ಕೀ...!!" ಮಾದಕಿ ಹೇಳಿದ್ದು ಕೇಳಿ ನನಗೆ ದಿಗ್ಬ್ರಾಂತಿ.
 
ಕೆಲವು ದಿನಗಳ ಹಿಂದೆ ಹೀಗೇ ಒಂದು ಸಂಜೆ ಪ್ರಶಾಂತನೊಂದಿಗೆ ಡ್ರೈವ್ ಗೆ ಹೋಗಿದ್ದಾಗ ಒಂದೆರಡು ಸುಂದರವಾಗಿದ್ದ ಪಾರ್ಕ್ ಗಳನ್ನು ಕಂಡಿದ್ದೆ. ಪೇಂಟ್ ಹೊಡೆದಷ್ಟು ಹಚ್ಚ ಹಸಿರು ಬಣ್ಣದ ಹುಲ್ಲುಹಾಸಿನ ಮಧ್ಯ ಮಧ್ಯ ೪-೫ ಅಡಿಗಳಿಗೊಂದರಂತೆ ನೆಲಕ್ಕೆ ಬಣ್ಣ ಬಣ್ಣದ ಹೂ ಗುಚ್ಛ ಸಿಕ್ಕಿಸಿದ್ದರು. ಜನರಿರಲಿಲ್ಲ. ಯಾರೂ ಮಕ್ಕಳು ಮರಿಗಳು ಆಟವಾಡುತ್ತಿರಲಿಲ್ಲ. ಜೋಕಾಲಿ ಅಥವಾ ಜಾರುಬಂಡೆಗಳೂ ಇರಲಿಲ್ಲ. ಇದ್ಯಾವ ಥರದ ಪಾರ್ಕ್ ಅಂತ ನನ್ನ ಟ್ಯೂಬ್ ಲೈಟ್ ತಲೆಗೆ ಹೊಳೆಯಲಿಲ್ಲ. ಪ್ರಶಾಂತನನ್ನು ಕೇಳಿದ್ದೆ. ಮೆಮೋರಿಯ ಪಾರ್ಕ್ ಅಂದರೆ ಇಲ್ಲಿನ ಸ್ಮಶಾನ. ಇಲ್ಲಿ ಹೂಗುಚ್ಛ ಸಿಕ್ಕಿಸಿರುವ ಪ್ರತಿಯೊಂದು ಜಾಗದಲ್ಲೂ ಒಬ್ಬೊಬ್ಬರ ಅಸ್ಥಿ ಅಥವಾ ಕಾಫಿನ್ ಇರುತ್ತೆ, ಪ್ರತೀ ವಾರವೂ ಮೆಮೋರಿಯಲ್ ಪಾರ್ಕ್ ಗಳನ್ನು ಮೇಂಟೇನ್ ಮಾಡುವವರು ಆಯಾ ಗತ ವ್ಯಕ್ತಿಯ ಮರಣೋತ್ತರ ಆಸೆಗಳಂತೆ ಅವನಿರುವ ಜಾಗದಲ್ಲಿ ಪ್ರತೀ ವಾರ ಫ್ರೆಶ್ ಹೂವುಗಳನ್ನೋ  ಅಥವಾ ವರ್ಷಕ್ಕೊಮ್ಮೆ ನಕಲಿ ಹೂವನ್ನೋ ಇಡುತ್ತಾರೆ ಅಂತ ತಿಳಿಸಿದ್ದ. ಅವುಗಳಲ್ಲೂ ಹಲವಾರು ವಿಧ ಇರುತ್ತೆ. ನಮ್ಮಂತೆಯೇ ಕೆಲವರಲ್ಲಿ ಹೂಳುವ, ಕೆಲವರಲ್ಲಿ ದಹಿಸುವ ಸಂಪ್ರದಾಯ ಇರುತ್ತೆ ಅಂತ ವಿವರಿಸಿದ್ದ. ಮರ್ಲಿನ್ ಮನ್ರೋ ಸತ್ತ ದಿನದಿಂದ ಇವತ್ತಿನವರೆಗೂ ಅವಳ ಸ್ಮಾರಕದ ಮೇಲೆ ಪ್ರತೀ ದಿನ ಒಂದೊಂದು ಕೆಂಪು ಗುಲಾಬಿಯನ್ನು ಇಡುತ್ತಾರೆಂತಲೂ, ಅದು ಅವಳ ವಿಶ್ ಆಗಿತ್ತು ಅಂತಲೂ ಹೇಳಿದ್ದ. ಅವತ್ತು ಅಷ್ಟನ್ನು ಬಿಟ್ಟು ಬೇರೆ ತಿಳಿಯುವ ಕುತೂಹಲವೂ ನನಗಿರಲಿಲ್ಲ. ಆದರೆ ನಿಜವಾಗಲೂ ಆ ಮೆಮೋರಿಯಲ್ ಪಾರ್ಕ್ ಗಳ ಅಂದ ಚಂದದ ಜೊತೆಗೆ ನಮ್ಮೂರಿನ ಸ್ಮಶಾನದ ಚಿತ್ರಗಳನ್ನು ಹೋಲಿಸಿ ನೋಡಿದ್ದೆ.
 
ಬದುಕಿದ್ದಾಗ, ಇಲ್ಲಿಯವರಿಗೆ, ಒಮ್ಮೆ ಸುಂದರವಾದ ತಂಗಾಳಿ ಬೀಸುವ ಹುಲ್ಲು ಹಾಸಿನ ಮೇಲೆ ಹಾಗೇ ವೇಸ್ಟ್ ಆಗಿ ಕುಳಿತು ಕಡಲೆ ಕಾಯಿ ಬಿಡಿಸಿಕೊಂಡು ತಿನ್ನುವ ಅಥವಾ ಮೈ ಚೆಲ್ಲಿ ಮಲಗಿಕೊಳ್ಳುವ ಅದೃಷ್ಟವೇ ಇರದಿರಬಹುದು. ಆದರೆ ಕೊನೆಯಲ್ಲಿ ಮಲಗಿದಾಗ ನಿಜವಾಗಿಯೂ ಐಷಾರಮದ ನಿದ್ರೆ. ನಮ್ಮೂರಲ್ಲಿ, ಆತ ಎಷ್ಟೇ ಶ್ರೀಮಂತನಾದರೂ, ಎಷ್ಟೇ ಹಮ್ಮು ಬಿಮ್ಮಿಂದ ಬದುಕಿದ್ದರೂ ಕೊನೆಗೆ ಮಲಗುವಾಗ ಮಿಕ್ಕೆಲ್ಲರಂತೆಯೇ ಅದೇ ಮಣ್ಣಿನಲ್ಲೇ. ಅವನಿಗೆ ಸಮುದ್ರ ತೀರದಲ್ಲಿ ಮಲಗುವ ಅದೃಷ್ಟ ಇರಲಾರದು. ಇಲ್ಲಿನ ಮೆಮೋರಿಯ ಪಾರ್ಕ್ ಗಳನ್ನು ನೋಡಿದಾಗ ನಾನೂ ಅಲ್ಲಿ ಒಂದು ನಿಮಿಷ ಕೂತು ಬರಲೇ ಎಂದು ಕರೆಯುವ ಪ್ರಶಾಂತತೆ, ಸೌಂದರ್ಯ. ನಮ್ಮೂರಲ್ಲಿ ಸ್ಮಶಾನಗಳನ್ನು ನೋಡಿದಾಗ ಏನೋ ಕಸಿವಿಸಿ, ಕದಡುವಿಕೆ...ಆಲೋಚನೆಯಿಂದ ಮತ್ತೆ ಮನೆಗೆ ಬಂದೆ.
 
"ಎಷ್ಟು ಬೆಲೆ ಅದಕ್ಕೆ?" ಮಾದಕಿಯನ್ನು ಕೇಳಿದೆ.

"ಸೀ ನನಗೆ ಗೊತ್ತಿತ್ತು ನೀನು ಸ್ಮಾರ್ಟ್ ಪರ್ಸನ್ ಅಂತ...ಒಂದು ಪ್ಲಾಟ್ ಗೆ ಇಪ್ಪತೈದು ಸಾವಿರ ಡಾಲರ್. ನೀನು ಈಗಲೇ ಡಿಸೈಡ್ ಮಾಡಿದರೆ ನಿನ್ನ ಗಂಡನ ಪ್ಲಾಟ್ ಅನ್ನು ಅದರ ಅರ್ಧ ಬೆಲೆಗೆ ಕೊಡುತ್ತೇವೆ. ದ ಪ್ಲೇಸ್ ಈಸ್ ವರ್ತ್ ಎವೆರಿ ಪೆನ್ನಿ ಡಿಯರ್...ನೀನು ಮೊದಲು ಸ್ವಲ್ಪ ಪ್ರೀಮಿಯಮ್ ಹಣ ಕಟ್ಟಿ ನಂತರ ಇನ್ನು ಹತ್ತುವರ್ಷದವರೆಗೂ ಪ್ರತೀ ತಿಂಗಳೂ ಇಷ್ಟಿಷ್ಟು ಹಣ ಕಟ್ಟಬಹುದು...ನೀವು ಸತ್ತಾಗ ನಿಮ್ಮ ಮಕ್ಕಳು, ಬಂಧುಗಳಿಗೆ ನಿಮ್ಮ ಅಂತ್ಯಸಂಸ್ಕಾರ ಮಾಡಲು ತುಂಬಾ ಹಣ ಖರ್ಚಾಗುತ್ತೆ ಅಂತ ನಿಮಗೂ ಯೋಚನೆ ಇರೋದಿಲ್ಲ...ಅವರಿಗೂ ನಿಮ್ಮಿಂದ ಹಣ ಖರ್ಚಾಗುತ್ತಿದೆ ಅಂತ ಬೇಜಾರಿರೋದಿಲ್ಲ..." ಮಾದಕಿ ಅದೇ ಪ್ರಶಾಂತತೆ, ಸುಂದರ ದನಿ, ರಾಗ, ರಿದಮ್ ನಲ್ಲಿ ಮಾತನಾಡುತ್ತಿದ್ದರು. ಈ ಅಜ್ಜಿಗೆ ಡೆಫನೆಟ್ಲೀ ಒಂದು ಪ್ಲಾಟ್ ಕಮ್ಮಿ ಬೆಲೆಯಲ್ಲಿ ಸಿಕ್ಕಿರಬಹುದು ಎಂದುಕೊಂಡೆ...ನನಗೆ ಇನ್ನು ಕೇಳುವ ಮನಸ್ಸಿರಲಿಲ್ಲ.
"ಸಾರಿ. ಐ ಆಮ್ ನಾಟ್ ಇಂಟರೆಸ್ಟೆಡ್. ಥಾಂಕ್ಯೂ ಸೋ ಮಚ್!" ಅಜ್ಜಿಯ ಉತ್ತರಕ್ಕೆ ಕಾಯದೆ ಲೈನ್ ಡಿಸ್ಕನೆಕ್ಟ್ ಮಾಡಿದೆ.
 
ನನಗೆ ಇಪ್ಪತ್ಮೂರು ವರ್ಷ. ಮದುವೆಯಾಗಿ ಇನ್ನೂ ತಿಂಗಳುಗಳು. ಈಗ ತಾನೇ ಬದುಕಿನ ಸೌಂದರ್ಯಕ್ಕೆ, ಮ್ಯಾಜಿಕ್ ಗೆ ಅಥವಾ ಅದರ ಆಟಗಳಿಗೆ ಕಣ್ಣುತೆರೆಯುತ್ತಿದ್ದೇನೆ...ಪ್ರತೀ ನೋಟವೂ ನನಗೆ ಅಚ್ಚರಿ, ಬೆರಗು. ಇಲ್ಲಿ ನೋಡಿದರೆ ಈ ಅಜ್ಜಿ ನೀನು ಸಾಯುವ ಜಾಗ ಎಲ್ಲಿರಬೇಕು ಅಂತ ಈಗಲೇ ನಿರ್ಧಾರ ಮಾಡಿಕೊಂಡು ಬಿಡು. ಇದು ನಿನಗೆ ಸಿಗುತ್ತಿರುವ ಬೆಸ್ಟ್ ಆಫರ್ ಎನ್ನುತ್ತಿದ್ದಾಳೆ. ಇನ್ನೂ ಪ್ರಪಂಚಕ್ಕೇ ಬರದ ನನ್ನ ಮಕ್ಕಳಿಗೆ ಹಣ ಉಳಿಸುವ, ತಲೆನೋವು ಕೊಡದಂತೆ ನನ್ನ ಅಂತ್ಯಕ್ರಿಯೆಯನ್ನು ಪ್ಲಾನ್ ಮಾಡಿಕೊಂಡು ಬಿಡಬೇಕಂತೆ. ಅಂತ್ಯ ಕ್ರಿಯೆಯನ್ನೂ ಮಾಡದಿದ್ದರೆ ಇನ್ನೇನಾದರೂ ಮಾಡುತ್ತಾರೆ ಅವರು? ನನಗೆ ಸಿಟ್ಟೇ ಬಂತು. ಪಾಪಿ! ನನ್ನ ಗಂಡನಿಗೂ ಅರ್ಧ ಬೆಲೆಯಲ್ಲಿ ಸ್ಮಶಾನದ ಪ್ಲಾಟ್ ಕೊಡುತ್ತೇನೆ ಎನ್ನುತ್ತಿದ್ದಾಳೆ! ಇದ್ಯಾವ ರೀತಿಯ ಸಂಸ್ಕೃತಿಗೆ ಕಾಲಿಟ್ಟಿದ್ದೇನೆ??! ಮಾದಕಿಯ ಆ ಕರೆ ನನ್ನ ವಯಸ್ಸನ್ನು ಇನ್ನೊಂದು ವರ್ಷ ಹೆಚ್ಚಿಸಿತ್ತು. ನಮ್ಮೂರಿನಲ್ಲಿ ನಮ್ಮ ವಯಸ್ಸಿನವರು ಅಥವಾ ವಯಸ್ಕರೇ ನಾವು ಸತ್ತಾಗ ಇಲ್ಲಿ ಹೂತು ಹಾಕಿ ಅಥವಾ ಅಲ್ಲಿ ದಹನ ಮಾಡಿ ಅಂತೇನಾದರೂ ಅಂದರೆ ಹತ್ತಿರದಲ್ಲಿ ಅದನ್ನು ಕೇಳಿದವರೆಲ್ಲರೂ "..ಅದೇನಂಥ ಮಾತಾಡ್ತಿಯಾ!! ಒಳ್ಳೆದೇನೂ ಬರಲ್ವ ನಿನಗೆ? ಬದುಕಿ ಬಾಳಬೇಕಾದವ್ರು ಹಂಗೆಲ್ಲಾ ಮಾತಡಬಾರದು...ಬಿಡ್ತು ಬಿಡ್ತು ಅನ್ನು..." ಅಂತ ಗಾಳಿ ಬಿಡಿಸುವಂತೆ ಬೈಯ್ಯುತ್ತಿದ್ದರು. ಇಲ್ಲಿ ಇವರು ನೀನು ಹೇಗೆ ಬದುಕ್ತೀಯೋ ಬದುಕಿಕೋ...ಅದು ನಿನ್ನ ಹಣೆಬರ. ಅದರೆ ಸತ್ತಮೇಲಂತೂ ಸಮುದ್ರ ತೀರದ ಗಾಳಿ, ಅಲೆಗಳ ಸದ್ದು ಕೇಳಿಕೊಂಡು ತಣ್ಣಗೆ-ಸಮಾಧಾನವಾಗಿ ಮಲಗಿರಬಹುದು ಅನ್ನುತ್ತಾರೆ...
 
"ಯಾಕಿಂಗ್ ಬಡ್ದಾಡ್ತೀ ತಮ್ಮಾ ಮಾಯ ನೆಚ್ಚೀ ಸಂಸಾರ ನೆಚ್ಚೀ
ನೀನ್ಹೋದ ಗಳಿಗೆ ತಮ್ಮಾ ಕಣ್ಣಾ ಮುಚ್ಚೀ ಮಣ್ಣಾ ಮುಚ್ಚೀ..." ಯಾಕೋ ಆ ಹಾಡು ನೆನಪಾಯಿತು.

ಸತ್ತಾಗ ಎಲ್ಲರೂ ಸೇರುವುದು-ಕರಗುವುದು ಒಂದೇ ಮಣ್ಣು...ಎಲ್ಲರೂ ಅಲ್ಲಿ ಒಂದೇ ಎಂಬ ತತ್ವವನ್ನೇ ಕೇಳಿ ಬೆಳೆದಿದ್ದೆ. ಈಗ ಸತ್ತ ಮೇಲೆ ಎಲ್ಲಿ ಕರಗಬೇಕು, ಅಲ್ಲಲ್ಲಾ...ಎಲ್ಲಿ ಮಲಗಬೇಕು, ಯಾವ ಹೂವಿನ ಅಲಂಕಾರ ಬೇಕು, ಯಾವ ತಂಗಾಳಿಯ ಜೋಜೋ ಕೇಳಬೇಕು ಎಂದು ಪ್ಲಾನ್ ಮಾಡುವ ಫಜೀತಿಯ ಆಪ್ಶನ್ ಕೂಡಾ ನಮಗೇ ಗಂಟುಬಿದ್ದಿರುತ್ತೆ...ಕಣ್ಣೂ ಮುಚ್ಚಿದರೂ ಮಾಯೆಯ ಕೈಬಿಡದ ಜೀವನ ಇಲ್ಲಿಯದು ಎನಿಸಿತು...ಕಲ್ಚರ್ ಮತ್ತೊಮ್ಮೆ ಕರೆಂಟು ಹೊಡೆದಿತ್ತು. ಸುಧಾರಿಸಿಕೊಳ್ಳಲು ಕೂತೆ.  

(ಮುಂದುವರಿಯುವುದು)