ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್
ದಶಕಗಳ ಕಾಲ ಕರ್ನಾಟಕಕ್ಕೆ ಸಲ್ಲಬೇಕಾದ ಕಾವೇರಿ ನದಿಯ ನೀರಿನ ಪಾಲನ್ನು ಕಬಳಿಸುತ್ತಲೇ ಬಂದ ತಮಿಳುನಾಡು ಅಂತಿಮವಾಗಿ ೨-೫-೧೯೯೦ ರಂದು ರಚಿತವಾದ ಕಾವೇರಿ ನ್ಯಾಯ ಮಂಡಳಿಯ ಮುಂದೆಯೂ ತನ್ನ ವಿತಂಡ ವಾದವನ್ನೇ ಮುಂದಿಡತೊಡಗಿತು. ೩೧-೫-೧೯೭೨ ರಂದು ಇದ್ದಂತೆ ಅಂದರೆ ನ್ಯಾಯ ಮಂಡಳಿ ರಚನೆಯಾದ ದಿನಾಂಕದಿಂದ ೧೮ ವರ್ಷಗಳ ಹಿಂದಿನ ಲೆಕ್ಕಾಚಾರವನ್ನು ಪರಿಗಣಿಸಬೇಕೆಂದು ಹೇಳತೊಡಗಿತ್ತು. ೧೯೭೨ ರಲ್ಲಿ ೧೯೨೪ ರ ಬ್ರಿಟೀಷರ ಕಾಲದ ಕರಾಳ ಒಪ್ಪಂದ ಊರ್ಜಿತವಾಗಿತ್ತೆಂಬುದೇ ತಮಿಳುನಾಡಿನ ವಾದವಾಗಿತ್ತು. ಅಂತೆಯೇ ೧೯೭೨ ರ ಹಿಂದೆ ಇದ್ದಂತೆ ಕರ್ನಾಟಕ ತಾನು ಬಳಸಿದ್ದ ಅಥವಾ ತಾನು ಸಂಗ್ರಹ ಮಾಡಿದ್ದ ನೀರಿನ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರನ್ನು ೧೯೯೦ ರ ನಂತರವೂ ಸಂಗ್ರಹ ಮಾಡದಂತೆ ನಿರ್ಬಂಧಿಸಬೇಕೆಂದೂ, ತಮಿಳುನಾಡು ಮತ್ತು ನ್ಯಾಯ ಮಂಡಳಿಯ ಅನುಮತಿಯನ್ನು ಪಡೆಯದೇ ಕರ್ನಾಟಕವು ಯಾವುದೇ ಹೊಸ ನೀರಾವರಿ ಯೋಜನೆಗಳನ್ನೂ ಕೈಗೆತ್ತಿಕೊಳ್ಳದಂತೆ ನಿರ್ಬಂಧಿಸಬೇಕೆಂದೂ ಒತ್ತಾಯಿಸಿತು. ಈಗಾಗಲೇ ಕರ್ನಾಟಕದಲ್ಲಿ ನಿರ್ಮಾಣ ಹಂತದಲ್ಲಿರುವ ಹಲವಾರು ನೀರಾವರಿ ಯೋಜನೆಗಳನ್ನು ಮುಂದುವರೆಸದಂತೆಯೂ ನಿರ್ಬಂಧಿಸುವಂತೆ ನ್ಯಾಯ ಮಂಡಳಿಯ ಮುಂದೆ ತನ್ನ ವಾದವನ್ನು ಮಂಡಿಸಿತ್ತು. ಅಲ್ಲದೆ ತನಗೆ ತುರ್ತಾಗಿ ನೀರಿನ ಅವಶ್ಯಕತೆ ಇರುವುದರಿಂದ ಮಧ್ಯಂತರ ಅದೇಶ ನೀಡಿ ತಮಿಳುನಾಡಿಗೆ ಮತ್ತು ಪಾಂಡಿಚೆರಿ ರಾಜ್ಯಗಳಿಗೆ ೩೦೨ ಟಿ.ಎಮ್.ಸಿ.ಗಳಷ್ಟು ನೀರನ್ನು ಕರ್ನಾಟಕದ ಜಲಾಶಯಗಳಿಂದ ಬಿಡಿಸಬೇಕೆಂದು ಆಗ್ರಹಿಸಿತು. ಅದಕ್ಕೆ ಮಾನದಂಡವಾಗಿ ೨೫ ವರ್ಷಗಳಷ್ಟು ಹಿಂದಿನ ಲೆಕ್ಕಾಚಾರವನ್ನು ನೀಡಿ ಅದರಂತೆ ಪ್ರತೀ ತಿಂಗಳೂ ಇಂತಿಷ್ಟು ಎಂಬಂತೆ ನೀರು ಬಿಡಬೇಕೆಂದು ತನ್ನ ವಾದದಲ್ಲಿ ಒತ್ತಾಯಿಸಿತು. ಆದರೆ ಕರ್ನಾಟಕ ತಮಿಳುನಾಡಿನ ಈ ವಾದವನ್ನು ತೀರ್ವವಾಗಿ ವಿರೋಧಿಸಿ, ಅಂತರ ರಾಜ್ಯ ಜಲಕಾಯ್ದೆಯ ಅನ್ವಯ ನ್ಯಾಯಮಂಡಳಿಗೆ ಮಧ್ಯಂತರ ಅದೇಶವನ್ನು ಹೊರಡಿಸುವಂತಹ ಯಾವುದೇ ಅಧಿಕಾರವೂ ಇಲ್ಲವೆಂದು ತನ್ನ ವಾದದಲ್ಲಿ ಪುಷ್ಟೀಕರಿಸಿತು. ತಮಿಳುನಾಡು ಹಾಗೂ ಪಾಂಡಿಚೆರಿ ರಾಜ್ಯಗಳು ಸಲ್ಲಿಸಿರುವ ಬೇಡಿಕೆ ವಾಸ್ತವತೆಯಿಂದ ಕೂಡಿಲ್ಲವೆಂಬುದನ್ನೂ ಅಂಕಿ ಅಂಶಗಳನ್ನು ನಿಖರವಾಗಿ ನೀಡುವುದರ ಮೂಲಕ ವಾದಿಸಿತ್ತು. ತಾನು ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳು ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿಕ್ಕಾಗಿರುವುದರಿಂದ, ಅದಕ್ಕೆ ತನ್ನ ಪಾಲಿನ ನೀರನ್ನಷ್ಟೇ ಬಳಸಿಕೊಂಡು ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿರುವುದರಿಂದ ತಮಿಳುನಾಡಿಗೆ ಈ ಯೋಜನೆಗಳನ್ನು ವಿರೋಧಿಸಲು ಯಾವುದೇ ಸಕಾರಣವಿಲ್ಲವೆಂದೂ ವಾದಿಸಿತು. ಕರ್ನಾಟಕದ ವಾದದಲ್ಲಿದ್ದ ಸತ್ಯಾಸತ್ಯತೆಯ ಅಂಶಗಳನ್ನು ಮನಗಂಡ ನ್ಯಾಯ ಮಂಡಳಿಯು ಮಧ್ಯಂತರ ಅದೇಶವನ್ನು ನೀಡುವುದು ತನ್ನ ವ್ಯಾಪ್ತಿಯಲ್ಲಿ ಬಾರದಿರುವುದರಿಂದ ತಮಿಳುನಾಡು ಮತ್ತು ಪಾಂಡಿಚೆರಿ ರಾಜ್ಯಗಳ ಅರ್ಜಿಗಳನ್ನು ವಜಾಗೊಳಿಸಿತ್ತು.
ಆದರೆ ಕರ್ನಾಟಕದ ಪಾಲಿನ ನೀರನ್ನು ಕಬಳಿಸಲು ಸಂಚು ನಡೆಸುವಲ್ಲಿ ನಿಪುಣರಾಗಿದ್ದ ತಮಿಳುನಾಡಿನ ರಾಜಕಾರಣಿಗಳು ಕೇಂದ್ರ ಸರ್ಕಾರದ ಮೇಲೆ ಸತತ ಒತ್ತಾಯ ತಂದು ಪ್ರಕರಣವನ್ನು ಸುಪ್ರೀಂ ಕೋರ್ಟಿನಲ್ಲಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಸುಪ್ರೀಂ ಕೋರ್ಟು ಈ ಎರಡೂ ರಾಜ್ಯಗಳ ವಿಶೇಷ ಅರ್ಜಿಗಳನ್ನು ಮನ್ನಿಸಿ ನೀಡಿದ ತೀರ್ಪಿನ ಅನ್ವಯ ೨೫-೬-೧೯೯೧ ರಂದು ನ್ಯಾಯ ಮಂಡಳಿ ತನ್ನ ಮಧ್ಯಂತರ ಅದೇಶವನ್ನು ಹೊರಡಿಸಿತ್ತು. ಅದರ ವಿವರಗಳು ಇಂತಿವೆ.
೧. ಪ್ರತೀ ವರ್ಷ ಜೂನ್ ತಿಂಗಳಿನಿಂದ ಮುಂದಿನ ವರ್ಷದ ಮೇ ತಿಂಗಳವರೆಗೆ ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆಗೆ ೨೦೫ ಟಿ.ಎಮ್.ಸಿ ನೀರನ್ನು ಕರ್ನಾಟಕವು ತನ್ನ ಜಲಾಶಯಗಳಿಂದ ಬಿಡುಗಡೆ ಮಾಡಬೇಕು.
೨. ಪ್ರತೀ ತಿಂಗಳೂ ಇಂತಿಷ್ಟು ಪ್ರಮಾಣದಲ್ಲಿಯೇ ನೀರು ಬಿಡಬೇಕೆಂದು ನ್ಯಾಯ ಮಂಡಳಿಯೇ ನಿರ್ಧರಿಸಿತು.
೩. ಹಾಗೆ ಬಿಡುವಂತಹ ನೀರು ನಾಲ್ಕು ಸಮಾನ ಕಂತುಗಳಲ್ಲಿ ಮೆಟ್ಟೂರು ಜಲಾಶಯವನ್ನು ತಲುಪಬೇಕು.
೪. ಯಾವುದೇ ವಾರದಲ್ಲಿ ನಿರ್ದಿಷ್ಟ ಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಬಿಟ್ಟರೆ ಅದರ ಉಳಿಕೆಯ ನೀರನ್ನು ಮುಂದಿನ ವಾರ ಬಿಡಬೇಕು.
೫. ಕರ್ನಾಟಕವು ತನ್ನ ನೀರಾವರಿ ಪ್ರದೇಶದ ವಿಸ್ತೀರ್ಣವನ್ನು ೧೧.೨ ಲಕ್ಷ ಎಕರೆಗಳಿಗಷ್ಟೇ ಸೀಮಿತಗೊಳಿಸಬೇಕು.
೬. ತಮಿಳುನಾಡು ಪಾಂಡಿಚೆರಿಗೆ ೬ ಟಿ.ಎಮ್.ಸಿ. ನೀರು ಬಿಡಬೇಕು.
೭. ಮಧ್ಯಂತರ ಅದೇಶವು ನ್ಯಾಯಮಂಡಳಿ ನೀಡುವಂತಹ ಅಂತಿಮ ಅದೇಶ ಬರುವವರೆಗೂ ಜಾರಿಯಲ್ಲಿರುತ್ತದೆ.
ಈ ಮಧ್ಯಂತರ ಆದೇಶ ಕರ್ನಾಟಕದ ಪಾಲಿಗೆ ಮತ್ತೊಮ್ಮೆ ಮರ್ಮಾಘಾತವನ್ನುಂಟುಮಾಡಿತ್ತು. ಈ ಆದೇಶ ಕಾನೂನು ಮತ್ತು ತಾಂತ್ರಿಕ ದೋಷಗಳಿಂದ ಕೂಡಿದೆಯೆಂದು ಕರ್ನಾಟಕ ಬಲವಾಗಿ ಇವತ್ತಿಗೂ ಪ್ರತಿಪಾದಿಸುತ್ತಾ ಬಂದಿದೆ. ಈ ಆದೇಶ ಯಾವುದೇ ಸಮರ್ಥನೆ ಇಲ್ಲದೆಯೇ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸೂಕ್ತ ಪರಿಹಾರ ನೀಡದೇ ಹಾಗೂ ನಿರ್ಣಾಯಕ ಕಾನೂನು ವಿವರಗಳನ್ನು ಪರಿಗಣಿಸದೇ ಹೊರಡಿಸಿದ್ದಾಗಿದೆ. ಇದು ಜಲವಿವಾದ ಕಾಯಿದೆಗೆ ಅನುಗುಣವಾಗಿರಲಿಲ್ಲ; ಕಾವೇರಿ ನದಿ ಕಣಿವೆಯ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಒಟ್ಟು ಪ್ರಮಾಣ, ಆಯಾ ಪ್ರದೇಶಗಳಿಗೆ ಬೇಕಾದ ನೀರಿನ ಅವಶ್ಯಕತೆ, ಬಳಕೆ ಹಾಗೂ ಇತರ ವಿವರಗಳನ್ನು ಗಣನೆಗೆ ತೆಗೆದುಕೊಳ್ಳದೇ ನ್ಯಾಯಮಂಡಳಿಯು ತನಗೆ ಇಷ್ಟ ಬಂದಂತೆ, ತಮಿಳುನಾಡಿಗೆ ಅನುಕೂಲವಾಗುವುದಕ್ಕೇ ನೀಡಿದ್ದ ಆದೇಶವಾಗಿತ್ತು. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ಪಾದನೆಯಾಗುತ್ತಿದ್ದ ನೀರಿನ ಪ್ರಮಾಣವನ್ನು ಈ ಆದೇಶದಲ್ಲಿ ಪರಿಗಣಿಸಿರಲಿಲ್ಲ. ನೀರಿನ ಬಿಡುಗಡೆಗಾಗಿ ನಿಗದಿಪಡಿಸಿದ್ದ ವೇಳಾಪಟ್ಟಿಯು ಅವಾಸ್ತವವಾದುದಾಗಿತ್ತು. ಎರಡೂ ರಾಜ್ಯಗಳ ನೀರಾವರಿ ಅಗತ್ಯಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಈ ಆದೇಶದಿಂದ ವಿಫಲವಾಗಿತ್ತು.
ಮಧ್ಯಂತರ ತೀರ್ಪಿನ ತಾಂತ್ರಿಕ ಲೋಪದೋಷಗಳೆಂದರೆ;
ಹತ್ತು ವರ್ಷಗಳ ಹಿಂದಿನ ನೀರಿನ ಹರಿವನ್ನು ಆಧರಿಸಿ ತಮಿಳುನಾಡಿಗೆ ನೀರುಬಿಡುವುದು ಯಾವ ಕಾರಣಕ್ಕೂ ನ್ಯಾಯ ಸಮ್ಮತವಲ್ಲ. ಅಲ್ಲದೆ ಕರ್ನಾಟಕದ ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣಕ್ಕೂ, ನ್ಯಾಯಮಂಡಳಿ ನಿಗದಿಪಡಿಸಿರುವ ನೀರಿನ ಪ್ರಮಾಣಕ್ಕೂ ಅಗಾಧವಾದ ವ್ಯತ್ಯಾಸವಿದೆ. ಕರ್ನಾಟಕದ ಜಲಾಶಯಗಳಲ್ಲಿ ನೀರು ಇರಲಿ, ಇಲ್ಲದಿರಲಿ ತಮಿಳುನಾಡಿಗೆ ಒಟ್ಟು ೨೦೫ ಟಿ.ಎಮ್.ಸಿ ನೀರನ್ನು ಬಿಡಲೇಬೇಕೆಂದು ಮಧ್ಯಂತರ ಅದೇಶದಲ್ಲಿ ಹೇಳಲಾಗಿತ್ತು. ಮಳೆ ಹೆಚ್ಚು ಬಿದ್ದ ವರ್ಷಗಳಲ್ಲಿ ನೀರು ಬಿಡುವುದಕ್ಕೆ ಸಮಸ್ಯೆ ಇಲ್ಲದಿದ್ದರೂ ಮಳೆ ಬಾರದ ವರ್ಷಗಳಲ್ಲಿಯೂ ೨೦೫ ಟಿ.ಎಮ್.ಸಿ ನೀರು ಬಿಡುವುದು ಕರ್ನಾಟಕಕ್ಕೆ ನುಂಗಲಾರದ ತುತ್ತಾಗಿತ್ತು. ಅದರಲ್ಲಿಯೂ ಪ್ರತೀ ತಿಂಗಳು ಇಂತಿಷ್ಟೇ ಪ್ರಮಾಣದಲ್ಲಿ ನೀರು ಬಿಡಬೇಕೆಂಬ ಅವಾಸ್ತವ-ಅಸಾಧ್ಯವಾದ ಅಂಶದಿಂದಾಗಿ ಆ ತಿಂಗಳಿನಲ್ಲಿ ಕರ್ನಾಟಕದ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣಕ್ಕೂ, ತಮಿಳುನಾಡಿಗೆ ಬಿಡಬೇಕಿದ್ದ ನೀರಿನ ಪ್ರಮಾಣಕ್ಕೂ ಬಹಳ ವ್ಯತ್ಯಾಸವಿತ್ತು. ಒಂದು ವೇಳೆ ಕರ್ನಾಟಕದ ಜಲಾಶಯಗಳಿಗೆ ಹೆಚ್ಚುವರಿ ನೀರು ಹರಿದು ಬಂದಲ್ಲಿ ಅದನ್ನು ಮುಂಚಿತವಾಗಿಯೇ ತನ್ನ ಲೆಕ್ಕದಲ್ಲಿ ಬಿಡುವಂತಿಲ್ಲ ಅದನ್ನು ಸಂಗ್ರಹಿಸಿಟ್ಟುಕೊಂಡು ತಮಿಳುನಾಡಿಗೆ ನಿಗದಿ ಪಡಿಸಿದ ತಿಂಗಳಿನಲ್ಲಿಯೇ ಬಿಡಬೇಕಿತ್ತು.
ಕರ್ನಾಟಕದಲ್ಲಿನ ನೀರಾವರಿ ಪ್ರದೇಶವನ್ನು ೧೧.೨ ಲಕ್ಷ ಎಕರೆಗಳಿಗೆ ಸೀಮಿತಗೊಳಿಸಿದ್ದರಿಂದ ನಮ್ಮ ಇತರೆ ನೀರಾವರಿ ಯೋಜನೆಗಳು ಕಾರ್ಯಗತವಾಗುವಂತಿರಲಿಲ್ಲ. ರಾಜ್ಯಗಳ ಯಥಾಸ್ಥಿತಿಯನ್ನು ಕಾಯ್ದಿಡುವ ಹಾಗೂ ರಾಜ್ಯಗಳ ನಡುವೆ ಸಮತೋಲನವನ್ನು ಕಾಪಾಡುವಂತಹ ವಿಶಾಲ ಅಧಾರದ ಮೇಲೆ ರಚಿತವಾಗಿರುವ ನ್ಯಾಯಮಂಡಳಿಯು ಮಧ್ಯಂತರ ಅದೇಶದಿಂದಾಗಿ ತನ್ನ ಮೂಲ ತತ್ವಗಳಿಗೆ ತಿಲಾಂಜಲಿ ಇಟ್ಟಿತ್ತು. ಕಾವೇರಿ ಕಣಿವೆಯಲ್ಲಿ ಲಭ್ಯವಾಗುವ ಒಟ್ಟು ನೀರು, ಅದರಲ್ಲಿ ರಾಜ್ಯಗಳ ಪಾಲು, ಅವುಗಳ ಉಪಯೋಗ ಮತ್ತು ಅಗತ್ಯತೆಗಳನ್ನು ಮನಗಾಣದೇ ನೀಡಿದಂತಹ ಮಧ್ಯಂತರ ನಿರ್ದೇಶನದಂತೆ ನೀರನ್ನು ಬಿಡುವುದಂತೂ ಸಾಧ್ಯವೇ ಅಲ್ಲದ ಮಾತು.
ತಮಿಳುನಾಡಿನ ಒತ್ತಾಸೆಯಂತೆ ಕಾವೇರಿ ನ್ಯಾಯಮಂಡಳಿ ನೀಡಿದ ಮಧ್ಯಂತರ ಅದೇಶದಿಂದಾಗಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನಡೆದ ಚಳುವಳಿಗಳು ಐತಿಹಾಸಕವಾದವು. (ಕಾವೇರಿ ನೀರಿನ ನ್ಯಾಯಯುತವಾದ ಪಾಲಿಗಾಗಿ ದಶಕಗಳಿಂದ ಇತ್ತೀಚಿನವರೆಗೆ ನಡೆದಂತಹ ಕಾವೇರಿ ಚಳವಳಿಯ ಇತಿಹಾಸವನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗುವುದು) ಈ ಆದೇಶವನ್ನು ವಿರೋಧಿಸಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಾರೆಕೊಪ್ಪ ಬಂಗಾರಪ್ಪನವರು ೬-೭-೧೯೯೧ ರಂದು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಎರಡೂ ಸದನಗಳಲ್ಲಿ ಕೈಗೊಂಡ ಅವಿರೋಧ ನಿರ್ಣಯ ಐತಿಹಾಸಿಕವಾದುದು. ಈ ನಿರ್ಣಯದಂತೆ ಸುಗ್ರೀವಾಗ್ನೆಯನ್ನು ಅಂದಿನ ಬಂಗಾರಪ್ಪನವರ ಸರ್ಕಾರ ಹೊರಡಿಸಿತ್ತು.
ಸುಗ್ರೀವಾಗ್ನೆಯ ಸಾರಾಂಶವೆಂದರೆ "ಕಾವೇರಿ ನ್ಯಾಯಮಂಡಳಿಯು ಜಲ ವಿವಾದದ ಬಗ್ಗೆ ೨೫-೬-೧೯೯೧ ರಂದು ಹೊರಡಿಸಿರುವ ಮಧ್ಯಂತರ ಅದೇಶವು ರಾಜ್ಯದ ಜನತೆಯ ಹಿತಾಸಕ್ತಿಗೆ ಮಾರಕವಾಗಿರುತ್ತದೆ. ಈ ಆದೇಶ ನ್ಯಾಯಮಂಡಳಿಯ ಅಧಿಕಾರದ ವ್ಯಾಪ್ತಿಗೆ ಮೀರಿದುದಾಗಿದೆ. ಅಲ್ಲದೆ ವಾಸ್ತವಾಂಶ, ಕಾನೂನು ಅಂಶ ಮತ್ತು ಪ್ರಾಯೋಗಿಕ ಅಂಶಗಳಿಗೆ ಅನುಗುಣವಾಗಿಲ್ಲದಿರುವುದರಿಂದ ಈ ಆದೇಶವನ್ನು ಸರ್ಕಾರ ತಿರಸ್ಕರಿಸಬೇಕೆಂದು ಸದನವು ಅವಿರೋಧವಾಗಿ ಒತ್ತಾಯಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವು ಜಲನೀತಿಯನ್ನು ರೂಪಿಸುವವರೆಗೂ ಹಾಗೂ ೧೯೫೬ ರ ಅಂತರರಾಜ್ಯ ಜಲ ಕಾನೂನಿಗೆ ಸೂಕ್ತ ತಿದ್ದುಪಡಿ ತರುವವರೆಗೆ ಮತ್ತು ನ್ಯಾಯಮಂಡಳಿಗೆ ಸ್ಪ್ರಸ್ಟವಾದ ಮಾರ್ಗಸೂಚಿಗಳನ್ನು ನೀಡುವವರೆಗೂ ನ್ಯಾಯಮಂಡಳಿಯ ಮುಂದೆ ಇರುವಂತಹ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದ ಎಲ್ಲಾ ನಡಾವಳಿಗಳನ್ನೂ ಸ್ಥಗಿತಗೊಳಿಸಬೇಕೆಂದೂ ಈ ಸದನವು ಅವಿರೋಧವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ".
ನ್ಯಾಯಾಧಿಕರಣದ ಆದೇಶದ ವಿರುದ್ಧ ವಿಧಾನ ಮಂಡಲದಲ್ಲಿ ಹೀಗೊಂದು ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳುವುದೇನೂ ಸುಲಭದ ಮಾತಲ್ಲ. ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಗೊಳಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿರಲಿಲ್ಲ. ಆದರೂ ಅಧಿಕಾರಕ್ಕೆ ಅಂಟಿಕೊಳ್ಳುವುದಕ್ಕಿಂತ ರಾಜ್ಯದ ಹಿತವೇ ಮುಖ್ಯವೆಂದು ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ದಿಟ್ಟತನ ಮೆರೆದಿದ್ದರು.
ಬಂಗಾರಪ್ಪನವರಂತ ಇಂತಹ ಗಂಡೆದೆಯ ಧೈರ್ಯವನ್ನು ಮುಂದೆ ಕರ್ನಾಟಕದಲ್ಲಿ ಸರಕಾರ ನಡೆಸಿದ ಯಾವ ಮುಖ್ಯ ಮಂತ್ರಿಯೂ ತೋರದಿದ್ದುದು ಕರ್ನಾಟಕದ ದುರಂತವೆನ್ನಬಹುದು. ನಂತರದ ಮುಖ್ಯಮಂತ್ರಿಗಳೆಲ್ಲಾ ತಮ್ಮ ಸ್ವಾರ್ಥಕ್ಕಾಗಿ ಕುರ್ಚಿಯನ್ನುಳಿಸಿಕೊಳ್ಳುವ ಸಲುವಾಗಿ ತಮಿಳುನಾಡಿಗೆ ಧಾರಾಕಾರವಾಗಿ ನೀರನ್ನು ಹರಿಸಿದ್ದರು. ೬-೭-೧೯೯೧ ರಂದು ಬಂಗಾರಪ್ಪನವರ ಸರ್ಕಾರ ತನ್ನ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೂ ಸಹ ತಮಿಳುನಾಡಿನ ಮರ್ಜಿಗೊಳಗಾದ ಕೇಂದ್ರ ಸರ್ಕಾರವು ಕರ್ನಾಟಕದ ನ್ಯಾಯಯುತವಾದ ನಿರ್ಣಯಗಳಿಗೆ ಯಾವುದೇ ತೆರನಾದ ಪರಿಹಾರವನ್ನು ಸೂಚಿಸುವುದಿಲ್ಲ.
ಅಂತಿಮ ಅದೇಶವೂ ಅನ್ಯಾಯದ್ದೇ...
ಹೀಗೆ ಕಾವೇರಿ ನ್ಯಾಯ ಮಂಡಳಿ ನೀಡಿದ ಮಧ್ಯಂತರ ತೀರ್ಪು ೧೬ ವರ್ಷಗಳ ಕಾಲ ಕರ್ನಾಟಕವನ್ನು ಹಿಂಡಿ ಹಿಪ್ಪೆ ಮಾಡಿತ್ತು. ೫-೨-೨೦೦೭ ರಂದು ನ್ಯಾಯ ಮಂಡಳಿ ಮಧ್ಯಂತರ ಅದೇಶಕ್ಕಿಂತಲೂ ಮಾರಕವಾದ ಅಂತಿಮ ಅದೇಶವನ್ನು ನೀಡಿ ಕರ್ನಾಟಕವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ಹಿಂದೆ ಬ್ರಿಟೀಷರ ಅಧಿಪತ್ಯವಿದ್ದಾಗ ಕರ್ನಾಟಕದ ಮೇಲೆ ಹೇರಲ್ಪಟ್ಟ ೧೮೯೨ ಹಾಗೂ ೧೯೨೪ ರ ಒಪ್ಪಂದಗಳು ಮತ್ತು ೧೯೯೧ ರ ಮಧ್ಯಂತರ ಆದೇಶಗಳ ವಿಸ್ತ್ರತ ರೂಪದಂತಿದೆ ೫-೨-೨೦೦೭ ರಲ್ಲಿ ನೀಡಿರುವ ಅಂತಿಮ ಅದೇಶ. ಈ ಆದೇಶದ ಅನ್ವಯ ಇದೀಗ ಕರ್ನಾಟಕ ತಮಿಳುನಾಡಿಗೆ ಬಿಡುಗಡೆ ಮಾಡಬೇಕಿರುವ ನೀರಿನ ಪ್ರಮಾಣ ೧೯೨ ಟಿ.ಎಮ್.ಸಿ.ಗಳು. ಮಧ್ಯಂತರ ಅದೇಶದಲ್ಲಿ ಬಿಡಬೇಕಿದ್ದುದು ೨೦೫ ಟಿ.ಎಮ್.ಸಿ.ಗಳಾಗಿತ್ತು. ಈ ಅಂತಿಮ ಆದೇಶದಿಂದ ೧೩ ಟಿ.ಎಮ್.ಸಿ.ಗಳು ಕಡಿಮೆಯಾಯಿತೆಂದು ನಿಮಗನಿಸಿರಬಹುದು. ಆದರೆ ಈ ಹಿಂದೆ ಕರ್ನಾಟಕದಿಂದ ಬಿಡಲಾಗುವ ನೀರನ್ನು ಮೆಟ್ಟೂರು ಜಲಾಶಯದ ಬಳಿ ಅಳೆಯಲಾಗುತ್ತಿತ್ತು. ಅಂತಿಮ ಆದೇಶದಲ್ಲಿ ನೀರನ್ನು ಗಡಿ ಪ್ರದೇಶವಾದ ಬಿಳಿಗುಂಡ್ಲುವಿನಲ್ಲಿ ಅಳೆಯಬೇಕಿತ್ತು. ಹೀಗೆ ಬಿಳಿಗುಂಡ್ಲುವಿನಲ್ಲಿ ಅಳೆಯಬೇಕಿದ್ದರಿಂದ ಅಲ್ಲಿಂದ ಮೆಟ್ಟೂರು ಜಲಾಶಯದವರೆಗೆ ದೊರೆಯುವ ನೀರಿನ ಪ್ರಮಾಣ ೨೫ ಟಿ.ಎಮ್.ಸಿ.ಗಳು ಹೆಚ್ಚುವರಿಯಾಗಿ ತಮಿಳುನಾಡಿಗೆ ದೊರೆಯುತ್ತದೆ. ಅಂದರೆ ಕರ್ನಾಟಕದಿಂದ ತಮಿಳುನಾಡಿಗೆ ಬಿಡಲಾಗುವ ನೀರಿನ ಪ್ರಮಾಣ ೨೧೭ ಟಿ.ಎಮ್.ಸಿ.ಗಳು. ಮಧ್ಯಂತರ ಅದೇಶಕ್ಕಿಂತಲೂ ೧೨ ಟಿ.ಎಮ್.ಸಿ. ಹೆಚ್ಚು ನೀರನ್ನು ಕರ್ನಾಟಕ ಬಿಡಬೇಕಾಗಿದೆ.
ಕಾವೇರಿ ನದಿ ಕಣಿವೆಯ ಒಟ್ಟು ನೀರಿನ ಪ್ರಮಾಣದಲ್ಲಿ ಅಂತಿಮ ಅದೇಶದ ಪ್ರಕಾರ ತಮಿಳುನಾಡಿಗೆ ನಿಗದಿ ಪಡಿಸಿದ ನೀರಿನ ಪಾಲು ೪೧೯ ಟಿ.ಎಮ್.ಸಿ.ಗಳು. ಆದರೆ ಕರ್ನಾಟಕಕ್ಕೆ ನಿಗದಿಯಾದ ನೀರಿನ ಪ್ರಮಾಣ ೨೭೦ ಟಿ.ಎಮ್.ಸಿ.ಗಳಷ್ಟೇ. ಆದರೆ ವಾಸ್ತವವಾಗಿ ತಮಿಳುನಾಡಿಗೆ ದೊರಕುವ ನೀರಿನ ಪ್ರಮಾಣ ೬೭೫ ಟಿ.ಎಮ್.ಸಿಗಳಾಗಿದೆ. ಅದರ ವಿವರ ಹೀಗಿದೆ.
೧. ಕರ್ನಾಟಕದಿಂದ ಬಿಡುಗಡೆಯಾಗುವ ನೀರಿನ ಪ್ರಮಾಣ - ೧೯೨ ಟಿ.ಎಮ್.ಸಿ.
೨. ಬಿಳಿಗೊಂಡ್ಲು ಮತ್ತು ಮೆಟ್ಟೂರು ನಡುವೆ ದೊರೆಯುವ ನೀರು - ೨೫ ಟಿ.ಎಮ್.ಸಿ.
೩. ಮೆಟ್ಟೂರಿನಿಂದ ಕೆಳಭಾಗದಲ್ಲಿನ ನೀರಿನ ಪ್ರಮಾಣ - ೨೫೮ ಟಿ.ಎಮ್.ಸಿ.
೪. ತಮಿಳುನಾಡಿನ ಭಾಗದ ಅಂತರ್ಜಲ - ೧೫೮ ಟಿ.ಎಮ್.ಸಿ.
೫. ನದಿ ಮುಖಜ ಭೂಮಿಯ ಭಾಗದ ಮಳೆಯಿಂದ - ೫೦ ಟಿ.ಎಮ್.ಸಿ.
ಒಟ್ಟು - ೬೭೫ ಟಿ.ಎಮ್.ಸಿ.ಗಳು.
ಮೇಲೆ ತಿಳಿಸಿದಂತೆ ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶದ ಅನ್ವಯ ತಮಿಳುನಾಡಿಗೆ ದೊರಕುವಂತಹ ನೀರಿನ ಒಟ್ಟು ಪ್ರಮಾಣ ೬೭೫ ಟಿ.ಎಮ್.ಸಿ.ಗಳು. ಆದರೆ ಎಲ್ಲಾ ಮೂಲಗಳಿಂದಲೂ ಕರ್ನಾಟಕವು ೨೭೦ ಟಿ.ಎಮ್.ಸಿಯಷ್ಟು ನೀರನ್ನಷ್ಟೇ ಬಳಸಿಕೊಳ್ಳಬೇಕೆಂದು ಇದೇ ನ್ಯಾಯ ಮಂಡಳಿ ನಿಗದಿ ಪಡಿಸಿದೆ. ೬೭೫ ಟಿ.ಎಮ್.ಸಿ ನೀರಿಗೂ ಕೇವಲ ೨೭೦ ಟಿ.ಎಮ್.ಸಿ ನೀರಿಗೂ ಎಂಥಾ ಅಜಗಜಾಂತರ ವ್ಯತ್ಯಾಸವಿದೆ ನೋಡಿ. ಇದಿಷ್ಟೇ ಅಲ್ಲದೆ ನ್ಯಾಯ ಮಂಡಳಿಯ ಅದೇಶದಂತೆ ಕೇರಳ ರಾಜ್ಯಕ್ಕೆ ನಿಗದಿಪಡಿಸಿರುವ ನೀರಿನ ಪ್ರಮಾಣವಾದ ೩೦ ಟಿ.ಎಮ್.ಸಿ ನೀರೂ ಸಹ ಕೇರಳ ರಾಜ್ಯವು ಉಪಯೋಗಿಸಿಕೊಳ್ಳುವವರೆಗೂ ತಮಿಳುನಾಡಿಗೆ ಸಲ್ಲುತ್ತದೆ. ಆಲದೆ ಪರಿಸರ ಸಂರಕ್ಷಣೆಗಾಗಿ ನಿಗದಿ ಪಡಿಸಿರುವ ೧೦ ಟಿ.ಎಮ್.ಸಿ. ಹಾಗೂ ಸಮುದ್ರಕ್ಕೆ ಸೇರುವಂತಹ ನೀರಿನ ಪ್ರಮಾಣವಾದ ೪ ಟಿ.ಎಮ್.ಸಿ.ಗಳೂ ತಮಿಳುನಾಡಿಗೆ ಸಲ್ಲುವ ಪಾಲೇ.
ತಮಿಳುನಾಡಿಂದ ವ್ಯರ್ಥವಾಗಿ ಸಮುದ್ರಕ್ಕೆ ಸೇರುವ ನೀರು
ತಮಿಳುನಾಡು ದಶಕಗಳಿಂದಲೂ ಕಾವೇರಿ ನೀರನ್ನು ವ್ಯರ್ಥವಾಗಿ ಸಮುದ್ರಕ್ಕೆ ಬಿಡುವ ದುರಭ್ಯಾಸವನ್ನು ರೂಡಿಯಲ್ಲಿಟ್ಟುಕೊಂಡಿದೆ. ಸಕಾಲದಲ್ಲಿ ಮಳೆಬಿದ್ದು ಅತಿವ್ರಷ್ಟಿ ಆದಾಗ ದೊರಕುವಂತಹ ನೀರಿನ ಪ್ರಮಾಣವೇ ೩೨೮ ಟಿ.ಎಮ್.ಸಿ ಗಳಷ್ಟಾಗುತ್ತದೆ. ದುರಂತವೆಂದರೆ ತಮಿಳುನಾಡು ಈ ಹೆಚ್ಚುವರಿ ನೀರನ್ನು ಸಂಗ್ರಹಿಸಿಡುವಂತಹ ಕಾರ್ಯಕ್ಕೆ ಮುಂದಾಗದೇ ಬಹುತೇಕ ನೀರನ್ನು ಸಮುದ್ರಕ್ಕೆ ಬಿಡುವುದಲ್ಲದೇ ಮಳೆಬಾರದ ಸಂಧರ್ಭದಲ್ಲಿ ಕರ್ನಾಟಕವನ್ನು ನೀರಿಗಾಗಿ ಒತ್ತಾಯಿಸುವುದನ್ನು ಪರಿಪಾಠ ಮಾಡಿಕೊಂಡಿದೆ. ತಮಿಳುನಾಡಿನಿಂದ ಸಮುದ್ರಕ್ಕೆ ಸೇರುವ ನೀರಿನ ಪ್ರಮಾಣದ ಬಗ್ಗೆ ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮದಡಿ ನೀಡಿದ ವರದಿ ಮತ್ತು ಕಾವೇರಿ ಸತ್ಯಶೋಧನಾ ಸಮಿತಿಗಳು ನೀಡಿರುವ ಅಂಕಿ ಅಂಶಗಳು ಎಂಥವರನ್ನೂ ಗಾಬರಿಗೊಳಿಸುತ್ತದೆ. ಪ್ರತೀ ವರ್ಷ ತಮಿಳುನಾಡಿನಿಂದ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರಿನ ಪ್ರಮಾಣ ೩೪೦ ಟಿ.ಎಮ್.ಸಿ. ಗಳು. ಅದರ ವಿವರ ಇಂತಿದೆ.
೧. ಕೊಲೆರೂನ್ ಕೆಳ ಅಣೆಕಟ್ಟೆಯಿಂದ ಹರಿದುಹೋಗುವ ನೀರು - ೧೦೨ ಟಿ.ಎಮ್.ಸಿ.
೨. ಟೈಲ್ ಎಂಡ್ ರೆಗ್ಯುಲೇಟರುಗಳಿಂದ ಆಗುವಂತಹ ಸೋರಿಕೆ- ೮೮ ಟಿ.ಎಮ್.ಸಿ
೩. ನದಿ ಮುಖಜ ಭೂಮಿಯ ಅಂತರ್ಜಲ - ೧೫೦ ಟಿ.ಎಮ್.ಸಿ.
ಒಟ್ಟು - ೩೪೦ ಟಿ.ಎಮ್.ಸಿ.ಗಳು.
ಈ ಅಂಕಿ ಅಂಶಗಳು ಕರ್ನಾಟಕ ರಾಜ್ಯ ನೀಡಿದ್ದಲ್ಲ; ವಿಶ್ವ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮದಡಿ ನಡೆಸಿದಂತಹ ಸಮೀಕ್ಷೆಯಿಂದ ನೀಡಲ್ಪಟ್ಟಿದ್ದು. ವಿಪರ್ಯಾಸವೆಂದರೆ ಕಾವೇರಿ ನ್ಯಾಯ ಮಂಡಳಿ ಕರ್ನಾಟಕಕ್ಕೆ ನಿಗದಿ ಪಡಿಸಿರುವ ನೀರಿನ ಪ್ರಮಾಣ ೨೭೦ ಟಿ.ಎಮ್.ಸಿ.ಗಳಾದರೆ ತಮಿಳುನಾಡು ವ್ಯರ್ಥವಾಗಿ ಸಮುದ್ರಕ್ಕೆ ಬಿಡುತ್ತಿರುವ ನೀರಿನ ಪ್ರಮಾಣವೇ ೩೪೦ ಟಿ.ಎಮ್.ಸಿ.ಗಳು. ಅಂದರೆ ಕರ್ನಾಟಕದ ನೀರಾವರಿ ಯೋಜನೆಗಳಿಗೆ ನಿಗದಿಪಡಿಸಿರುವ ನೀರಿನ ಪ್ರಮಾಣಕ್ಕಿಂತಲೂ ೭೦ ಟಿ.ಎಮ್.ಸಿ.ಗಳಷ್ಟು ಅಧಿಕ ನೀರನ್ನು ತಮಿಳುನಾಡು ಸಮುದ್ರಕ್ಕೆ ವ್ಯರ್ಥವಾಗಿ ಬಿಡುತ್ತಿದೆ. ಕರ್ನಾಟಕಕ್ಕೆ ಕಾವೇರಿ ನ್ಯಾಯಮಂಡಳಿಯಿಂದಾಗಿರುವ ಭಾರೀ ಮೋಸದ ಪ್ರಮಾಣವು ಎಷ್ಟೊಂದು ಘೋರವಾಗಿದೆಯಲ್ಲವೇ?
ಕರ್ನಾಟಕವು ತನ್ನ ನೀರಾವರಿ ಪ್ರದೇಶವನ್ನು ೧೮.೮೫ ಲಕ್ಷ ಎಕರೆಗಳಿಗೆ ಸೀಮಿತಗೊಳಿಸಬೇಕೆಂದು ಹೇಳಿರುವ ನ್ಯಾಯಮಂಡಳಿ ತಮಿಳುನಾಡಿಗೆ ಮಾತ್ರ ೨೪.೭೧ ಲಕ್ಷ ಎಕರೆಗಳಿಗೆ ಅನುಮತಿಯಿತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳೂ ತಲಾ ೨೯ ಲಕ್ಷ ಎಕರೆಗಳಷ್ಟು ಪ್ರದೇಶವನ್ನು ನೀರಾವರಿ ಅಭಿವೃದ್ದಿಗಾಗಿ ನ್ಯಾಯಾಧಿಕರಣವನ್ನು ಒತ್ತಾಯಿಸಿದ್ದವು. ಆದರೆ ನ್ಯಾಯಮಂಡಳಿ ಕರ್ನಾಟಕ್ಕಿಂತ ೬ ಲಕ್ಷ ಎಕರೆಯಷ್ಟು ಹೆಚ್ಚು ನೀರಾವರಿ ಪ್ರದೇಶವನ್ನು ತಮಿಳುನಾಡಿಗೆ ಬಳುವಳಿಯಾಗಿ ನೀಡಿದೆ. ಕಾವೇರಿ ನದಿ ನೀರಿನ ಒಟ್ಟು ಪ್ರಮಾಣದಲ್ಲಿ ಶೇ. ೫೩ ರಷ್ಟು ಕಾಣಿಕೆ ನೀಡುವ ಕರ್ನಾಟಕಕ್ಕೆ ೧೮.೮ ಲಕ್ಷ ಎಕರೆಯಾದರೆ ಶೇ.೩೧ ರಷ್ಟು ನೀರನ್ನಷ್ಟೇ ಒದಗಿಸುವ ತಮಿಳುನಾಡಿಗೆ ೨೪.೭೧ ಲಕ್ಷ ಎಕರೆಗೆ ಮಂಜೂರಾತಿ ಮಾಡಿದೆ. ಈ ಅಂತಿಮ ಅದೇಶವು ಸ್ವಾತಂತ್ರ್ಯ ಪೂರ್ವದ ೧೮೯೨, ೧೯೨೪ ರ ಹಾಗೂ ೧೯೯೧ ರ ಮಧ್ಯಂತರ ಆದೇಶಗಳಿಗಿಂತ ತೀರಾ ಭಿನ್ನವಾಗಿಲ್ಲವೆಂದೇ ಹೇಳಬಹುದಾಗಿದೆ.
ಮತ್ತೊಂದು ಅನ್ಯಾಯದ ವಿಷಯವೆಂದರೆ ಇಂತಿಷ್ಟು ನೀರನ್ನು ಇಷ್ಟು ಎಕರೆಗಳಿಗೆ ಬಳಸಿಕೊಳ್ಳಬೇಕೆಂದು ನಿಗದಿ ಪಡಿಸಿರುವುದರಲ್ಲಿಯೂ ನ್ಯಾಯಮಂಡಳಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ತಾರತಮ್ಯವನ್ನು ತೋರಿದೆ. ೧ ಟಿ.ಎಮ್.ಸಿ.ನೀರಿನಲ್ಲಿ ತಮಿಳುನಾಡು ೬,೩೨೦ ಎಕರೆಗೆ ನೀರುಣಿಸಬಹುದೆಂದು ಹೇಳಿರುವ ಮಂಡಳಿ ಅಷ್ಟೇ ಪ್ರಮಾಣದ ನೀರನ್ನು ಕರ್ನಾಟಕ ಮಾತ್ರ ೭,೫೪೦ ಎಕರೆಗಳಿಗೆ ಬಳಸಬೇಕೆಂದು ನಿಗದಿಪಡಿಸಿದೆ. ಅಂದರೆ ೧ ಟಿ.ಎಮ್.ಸಿ ನೀರಿನಲ್ಲಿ ತಮಿಳುನಾಡಿನಲ್ಲಿ ನೀರಾವರಿಯಾಗುವ ಪ್ರದೇಶಕ್ಕಿಂತಲೂ ೧,೨೨೦ ಎಕರೆಯಷ್ಟು ಹೆಚ್ಚು ಪ್ರದೇಶವನ್ನು ಕರ್ನಾಟಕ ನೀರಾವರಿಗೊಳಿಸಬೇಕಿದೆ. ಹೀಗೆ ಕಾವೇರಿ ನ್ಯಾಯಮಂಡಳಿ ನೀಡಿರುವ ತೀರ್ಪಿನ ಪ್ರತಿಯೊಂದು ಪ್ಯಾರಾದಲ್ಲಿಯೂ ಕರ್ನಾಟಕಕ್ಕೆ ಮಾರಕವಾಗುವಂತಹ ಅಂಶಗಳೇ ತುಂಬಿಕೊಂಡಿವೆ.
ಪ್ರಪಂಚದ ಯಾವ ಮೂಲೆಯಲ್ಲಿಯೂ ನೀರು ಹಂಚಿಕೆಯ ವಿಷಯದಲ್ಲಿ ನದಿ ಜನ್ಯ ಪ್ರದೇಶದ ಜನರಿಗೆ ಅನ್ಯಾಯವೆಸಗುವ ತೀರ್ಪನ್ನು ನೀಡಲಾಗಿಲ್ಲ. ಅಂತರ ರಾಜ್ಯ ಜಲವಿವಾದದಲ್ಲಾಗಲೀ, ಅಂತರರಾಷ್ಟ್ರ ಜಲವಿವಾದದಲ್ಲಾಗಲೀ ನದಿ ಜನ್ಯ ಪ್ರದೇಶದ ಜನತೆಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದೆಂಬ ನಿಯಮಗಳಿವೆ. ದುರಂತವೆಂದರೆ ಕರ್ನಾಟಕದ ಪಾಲಿಗೆ ಇಂತಹ ಯಾವ ನಿಯಮಗಳು ಪ್ರಯೋಜನಕ್ಕೆ ಬಾರದಾಗಿವೆ. ಒಟ್ಟಿನಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ, ನಂತರ ಆಧುನಿಕ ಭಾರತದ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿಯೂ ಕಾವೇರಿ ಜಲವಿವಾದದಲ್ಲಿ ಶೋಷಣೆಗೊಳಗಾಗುತ್ತಿರುವುದು ಕರ್ನಾಟಕವೇ ಎಂಬುದಂತೂ ಐತಿಹಾಸಿಕ ಸತ್ಯ. ಇಂತಹ ಅನ್ಯಾಯವಾಗಲು ನಮ್ಮ ರಾಜಕಾರಣಿಗಳೇ ಬಹುತೇಕ ಕಾರಣರಾಗಿದ್ದಾರೆ. ತಮಿಳುನಾಡಿನಲ್ಲಿ ಅಲ್ಲಿಯ ಪ್ರಾದೇಶಿಕ ರಾಜಕೀಯ ಪಕ್ಷಗಳದ್ದೇ ಅಧಿಪತ್ಯವಾಗಿದೆ.
ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಅದನ್ನು ತಮಗನುಕೂಲವಾಗುವಂತೆ ಮಣಿಸಿಕೊಳ್ಳುವಲ್ಲಿ ತಮಿಳು ರಾಜಕಾರಣಿಗಳು ಸಿದ್ದಹಸ್ತರು. ಬಲವಂತವಾಗಿಯೋ, ಬ್ಲಾಕ್ ಮೇಲ್ ತಂತ್ರದಿಂದಲೋ ತಮ್ಮ ರಾಜ್ಯಕ್ಕೆ ಅನುಕೂಲವನ್ನು ಅವರು ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ಕರ್ನಾಟಕದ ರಾಜಕಾರಣಿಗಳು ಒಂದಿಲ್ಲೊಂದು ರಾಷ್ಟೀಯ ಪಕ್ಷದ ಬಾಲ ಬಡುಕರಾಗಿರುವುದರಿಂದ ಆ ಪಕ್ಷದ ರಾಷ್ಟ್ರ ನಾಯಕರ ಮರ್ಜಿಗನುಗುಣವಾಗಿಯೇ ವರ್ತಿಸುವಂತವರು. ಕೇಂದ್ರ ನಾಯಕರಿಂದ ನಮ್ಮ ನಾಡಿಗೆ ಒಳಿತು ಮಾಡಿಸಿಕೊಳ್ಳುವಲ್ಲಿ ತೋರಬೇಕಾದ ಬದ್ಧತೆ-ಜಾಣ್ಮೆಯೂ ಇವರಿಗಿಲ್ಲ, ಇನ್ನು ಬಲವಂತದಿಂದ ಕೆಲಸಮಾಡಿಸಿಕೊಳ್ಳುವ ಧೈರ್ಯ-ತಾಕತ್ತಂತೂ ಮೊದಲೇ ಇಲ್ಲ. ಎಲ್ಲಿವರೆಗೆ ಕನ್ನಡದ ರಾಜಕಾರಣಿಗಳು ಬಾಲಬುಡುಕತನ ರಾಜಕಾರಣವನ್ನು ಬಿಟ್ಟು ಸ್ವಾಭಿಮಾನದ ರಾಜಕಾರಣಿಗಳಾಗುವುದಿಲ್ಲವೋ ಅಲ್ಲಿವರೆಗೂ ಕರ್ನಾಟಕಕ್ಕೆ ನೆಲ,ಜಲ,ಗಡಿ ವಿಷಯಗಳಲ್ಲಿ ಅನ್ಯಾಯವಾಗುವುದು ತಪ್ಪಿದ್ದಲ್ಲ.
|