ಶ್ರೀಮತಿ ರೂಪಾ ಹಾಸನ
ಮನುಷ್ಯ ಪ್ರಕೃತಿಯ ಒಂದು ಅದ್ಭುತ ಸೃಷ್ಟಿ. ಅವನ ಅಂಗಾಂಗ ರಚನೆ ಅದರ ಕಾರ್ಯವಿಧಾನ, ವಂಶಾಭಿವೃದ್ಧಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಇದನ್ನೆಲ್ಲಾ ಇಷ್ಟು ಅಚ್ಚುಕಟ್ಟಾಗಿ ಹೇಗೆ ಜೋಡಿಸಲಾಗಿದೆ! ಎಂದು ಅಚ್ಚರಿಯಾಗದೇ ಇರಲಾರದು. ಯಾವುದೇ ಜೀವಿಯ ಕಾಮದ ಮೂಲ ಉದ್ದೇಶ ಸಂತಾನಾಭಿವೃದ್ಧಿ. ಗಂಡು-ಹೆಣ್ಣುಗಳ ಸಮ್ಮಿಲನದಿಂದ ಮನುಷ್ಯ ಸಂತತಿ ಈ ಭೂಮಿಯ ಮೇಲೆ ಬೆಳೆಯುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಣ್ಣು ಮತ್ತು ಗಂಡುಗಳಿಬ್ಬರಿಗೂ ತಮ್ಮದೇ ಆದ ವಿಶಿಷ್ಟ ಪಾತ್ರಗಳಿವೆ.
ಜನಸಂಖ್ಯೆಯಲ್ಲಿ ಅಪರಿಮಿತ ಹೆಚ್ಚಳವಾಗಿ ಜನರಿಗೆ ಆಹಾರವನ್ನು, ಮೂಲಭೂತ ಸೌಕರ್ಯವನ್ನೂ ಒದಗಿಸಲಾಗದೇ ಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳು ಇಂದು ನೆನ್ನೆಯದಲ್ಲ. ಅದರಲ್ಲೂ ಭಾರತ ಸಧ್ಯಕ್ಕೆ ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾಗಿದೆ. ಭಾರತದಲ್ಲಿ ಈಗ ೧,೧೫೦, ೦೦೦,೦೦೦ (೧.೧೫ ಬಿಲಿಯನ್ ಜನರಿದ್ದೇವೆ. ೨೦೩೦ ರ ಹೊತ್ತಿಗೆ ೧.೫೩ ಬಿಲಿಯನ್ ಆಗುವ ಸಾಧ್ಯತೆ ಇದೆ ಎಂದು ಒಂದು ಸಂಶೋಧನಾ ವರದಿ ಹೇಳುತ್ತದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ೩೫೦ ಮಿಲಿಯನ್ ಇದ್ದ ನಮ್ಮ ಜನಸಂಖ್ಯೆ ಅಗಾಧವಾಗಿ, ಹೆದರಿಸುವಷ್ಟು ವೇಗದಲ್ಲಿ ಬೆಳೆಯುತ್ತಿದೆ. ಇದರ ವೇಗ ಹೀಗೆ ಮುಂದುವರೆದರೆ ಸಧ್ಯ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾವನ್ನೂ ಕೆಲವೇ ದಶಕಗಳಲ್ಲಿ ಹಿಂದಿಕ್ಕುವ ಸಾಧ್ಯತೆ ಇದೆ. ಈಗ್ಯೆ ಮೂರು ದಶಕಗಳ ಹಿಂದೆಯೇ ಎಚ್ಚೆತ್ತುಕೊಂಡ ಚೀನಾ ಕುಟುಂಬಕ್ಕೊಂದೇ ಮಗುವೆಂಬ ಕಡ್ಡಾಯ ಕಾನೂನು ತಂದು ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದುಕೊಂಡಿದೆ. ನಮ್ಮದು ಬಹು ಸಂಸ್ಕೃತಿಗಳ, ವೈವಿಧ್ಯಗಳ, ಜಾತಿ-ಧರ್ಮಗಳ ದೇಶವಾಗಿರುವುದರಿಂದ ಇಂತಹ ಕಡ್ಡಾಯ ಕಾನೂನು ತರಲು ಸಾಧ್ಯವಾಗಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಲವಂತದಿಂದ, ಅಸೂಕ್ಷ್ಮವಾಗಿ ಸಾವಿರಾರು ಜನರಿಗೆ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿ ಅವರ ಭಾವನೆಗಳ ಮೇಲೆ ಅತ್ಯಾಚಾರವೆಸಗಿದ್ದು ಭಾರತ ಇತಿಹಾಸದ ಕಪ್ಪು ಚುಕ್ಕೆಯಾಗಿ ದಾಖಲಾಗಿದೆ. ಇದೆಲ್ಲಾ ನಾಗರಿಕ ಜಗತ್ತಿನ, ವಾಸ್ತವದ ಒಂದು ಮುಖವಷ್ಟೇ. ಪ್ರಕೃತಿಯ ನೀತಿಗೆ ಇನ್ನೊಂದೇ ಮುಖವಿದೆ.
ಈ ಜನಸಂಖ್ಯಾ ಸ್ಪೋಟಕ್ಕೆದುರಾಗಿ ಪ್ರಕೃತಿ ಸದ್ದಿಲ್ಲದೇ ಮನುಕುಲಕ್ಕೆ ತನ್ನ ಪ್ರತಿಕಾರವೆಸಗಲು ಪ್ರಾರಂಭಿಸಿದ್ದಾಳೆ. ಮನುಷ್ಯನ ಮಿತಿಮೀರಿದ ಆಸೆ, ಅಸಹಜ ನಡವಳಿಕೆ, ಹೆಚ್ಚಿದ ಜನಸಂಖ್ಯೆಯ ಪರಿಣಾಮದಿಂದ ಕುಸಿಯುತ್ತಿರುವ ಮನುಷ್ಯನ ಆರೋಗ್ಯದ ಗುಣಮಟ್ಟ, ಕಲುಷಿತಗೊಳ್ಳುತ್ತಿರುವ ಪರಿಸರ... ಹೀಗೆ ಹಲವಾರು ಕಾರಣಗಳಿಂದ ಗಂಡು-ಹೆಣ್ಣಿನ ಸಂತಾನೋತ್ಪತ್ತಿಯ ಕಾರ್ಯ ಕುಂಠಿತಗೊಳ್ಳುತ್ತಿದೆ. ಗಂಡಿನಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಚಲನೆಯ ಸಾಮಥ್ರ್ಯ ಕಡಿಮೆಯಾಗುತ್ತಿದೆ. ಆದರೆ ಇತ್ತೀಚೆಗೆ ಆತಂಕಕ್ಕೀಡು ಮಾಡಿರುವ ಮುಖ್ಯ ಸಮಸ್ಯೆ ಎಂದರೆ, ಹೆಣ್ಣಿನಲ್ಲಿ ಸ್ತ್ರೀ ಹಾರ್ಮೋನುಗಳ ಉತ್ಪತ್ತಿಯಲ್ಲಿನ ಏರುಪೇರು ಮತ್ತು ಅವಳಲ್ಲಿ ಪುರುಷ ಹಾರ್ಮೋನುಗಳ ಹೆಚ್ಚಳದಿಂದಾಗಿ, ಗರ್ಭಧಾರಣೆಗೆ ಸಂಬಂಧಿಸಿದ ಹಲವು ತೊಂದರೆಗಳನ್ನು ಆಕೆ ಎದುರಿಸುತ್ತಿದ್ದಾಳೆ. ಆಕೆಯಲ್ಲಿ ಅಂಡಾಣು ಉತ್ಪಾದನೆ ಕಡಿಮೆಯಾಗುತ್ತಿದೆ. ಗರ್ಭಪಾತಗಳು ಹೆಚ್ಚಾಗುತ್ತಿವೆ. ಅವಳಲ್ಲಿ ನಿರ್ದಿಷ್ಟ ಕಾರಣವಿಲ್ಲದೇ ಸ್ತ್ರೀತ್ವದ ಹಾರ್ಮೋನಿಗೆ ಬದಲಾಗಿ ಪುರುಷ ಹಾರ್ಮೋನುಗಳು ಉತ್ಪತ್ತಿಯಾಗುತ್ತಿರುವ ಸಮಸ್ಯೆಗೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ [ಪಿ.ಸಿ.ಒ.ಎಸ್] ಎಂದು ಹೆಸರಿಸಲಾಗಿದೆ. ಇದೊಂದು ನಿರ್ನಾಳ ಗ್ರಂಥಿಗಳ ಸಮಸ್ಯೆ. ಇದು ಪ್ರಕೃತಿ ಹೆಣ್ತನಕ್ಕೆ ಒಡ್ಡಿರುವ ಸವಾಲು ಎಂದೇ ವೈದ್ಯ ಲೋಕ ಪರಿಗಣಿಸಿದೆ.
೧೯೩೦ ರಲ್ಲಿಯೇ ಈ ಸಮಸ್ಯೆಯನ್ನು ಪತ್ತೆ ಹಚ್ಚಿದ್ದರೂ ಇದಕ್ಕೆ ಕಾರಣವನ್ನು ಇದುವರೆವಿಗೂ ಕಂಡುಹಿಡಿಯಲಾಗಿಲ್ಲ. ಈ ಸಮಸ್ಯೆಯು ನಿರ್ದಿಷ್ಟ ರೋಗಲಕ್ಷಣವನ್ನು ಹೊಂದಿಲ್ಲದ ಕಾರಣ ಇದನ್ನು ಪತ್ತೆ ಹಚ್ಚಲು ಅನೇಕ ವೈದ್ಯವಿಧಾನಗಳನ್ನು ಪ್ರಯೋಗಿಸಬೇಕಿದೆ. ಜೊತೆಗೆ ಇದಕ್ಕೆ ನಿರ್ದಿಷ್ಟವಾದ ಯಾವುದೇ ಒಂದು ಚಿಕಿತ್ಸಾಕ್ರಮವೂ ಇಲ್ಲ. ಪ್ರಾರಂಭದಲ್ಲಿ ಈ ಸಮಸ್ಯೆಯಿಂದ ಬಳಲುವ ಮಹಿಳೆಯರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದು, ಇಂದು ಜಗತ್ತಿನಾದ್ಯಂತಾ ಶೇಕಡ ೧೦ ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.
ಈ ಸಮಸ್ಯೆ ಇರುವ ಮಹಿಳೆಯರಲ್ಲಿ ಸ್ತ್ರೀ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ಏರುಪೇರಾಗಿ ಅಂಡಾಣು ಬೆಳವಣಿಗೆ ಮತ್ತು ಬಿಡುಗಡೆಗೆ ತೊಂದರೆಯುಂಟಾಗುತ್ತದೆ. ಜೊತೆಗೆ ಪುರುಷ ಹಾರ್ಮೋನುಗಳಾದ ಟೆಸ್ಟೆಸ್ಟಿರೋನ್ ಹಾಗೂ ಆಂಡ್ರೋಜನ್ ಅಂಶ ಹೆಚ್ಚಾಗಿ, ಮಹಿಳೆಯರಲ್ಲಿ ಪುರುಷನಂತೆ ಮುಖ ಹಾಗೂ ಮೈ-ಕೈಗಳ ಮೇಲೆ ರೋಮ ಬೆಳೆಯುವುದು, ಗಂಡಿನಂತೆ ತಲೆಗೂದಲು ಉದುರುವುದು, ಹೆಚ್ಚು ಮೊಡವೆಗಳು ಬರುವುದು...ಇತ್ಯಾದಿ ಸಮಸ್ಯೆಗಳ ಜೊತೆಗೆ ವಿಪರೀತದ ಬೊಜ್ಜು ಬರುವುದು, ಮಾಸಿಕ ಸ್ರಾವದಲ್ಲಿ ಏರುಪೇರಾಗುವುದು, ಬಂಜೆತನ ಕಾಣಿಸಿಕೊಳ್ಳುವುದು, ಗರ್ಭಿಣಿಯಾದರೂ ಗರ್ಭಸ್ರಾವ, ಗರ್ಭಪಾತಗಳಂತಾ ತೊಂದರೆಗಳು ಉಂಟಾಗುತ್ತವೆ. ಇದಕ್ಕೆ ಸ್ಥೂಲವಾಗಿ, ಮಹಿಳೆಯರಲ್ಲಿ ಅತೀ ಹೆಚ್ಚಾದ ಕೊಬ್ಬಿನಾಂಶದ ಆಹಾರ ಸೇವನೆ, ಧೂಮಪಾನ-ಮದ್ಯಪಾನದ ಅಭ್ಯಾಸ, ಯಾವುದೇ ರೀತಿಯ ವ್ಯಾಯಾಮ ಇಲ್ಲದಿರುವುದು, ನಗರದ ಆಧುನಿಕ ಜೀವನ ಕ್ರಮ ಮತ್ತು ಮುಖ್ಯವಾಗಿ ಒತ್ತಡದ ಬದುಕಿನ ಪದ್ಧತಿಗಳು ಕಾರಣವೆಂದು ಹೇಳಲಾಗುತ್ತಿದ್ದರೂ ಈ ಸಮಸ್ಯೆಗೆ ನಿರ್ದಿಷ್ಟ ಕಾರಣವನ್ನು ಇನ್ನೂ ಸಂಶೋಧಿಸಬೇಕಿದೆ.
ಈ ಸಮಸ್ಯೆ ಹೆಚ್ಚಾಗಿ ನಗರ ಪ್ರದೇಶದ ಹೆಣ್ಣು ಮಕ್ಕಳನ್ನು ಕಾಡುತ್ತಿರುವುದು, ಆಧುನಿಕ ಜೀವನ ವಿಧಾನದ ಬದಲಾವಣೆಯ ಕಡೆಗೆ ಬೊಟ್ಟು ಮಾಡಿ ತೋರುತ್ತಿದೆ. ಮಹಿಳೆಯ ಬದಲಾದ ಸಾಮಾಜಿಕ, ಕೌಟುಂಬಿಕ, ವೈಯಕ್ತಿಕ ಬದುಕಿನ ಪದ್ಧತಿ ಮತ್ತು ಅವಳ ಸ್ಥಾನಮಾನ, ತನ್ಮೂಲಕ ಅವಳ ಬದಲಾದ ಗುಣ ಸ್ವಭಾವಗಳೂ, ಅತೀ ಒತ್ತಡದ ಜೀವನ ಕ್ರಮ ಈ ಸಮಸ್ಯೆಗೆ ಮುಖ್ಯ ಕಾರಣವೆಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹೇಳುತ್ತಿದ್ದಾರೆ. ಈ ಕುರಿತು ಮನಃಶಾಸ್ತ್ರೀಯ ನೆಲೆಯಲ್ಲಿಯೂ ಹೆಚ್ಚಿನ ಸಂಶೋಧನೆಗಳಾದರೆ, ಮಹಿಳೆಯ ಕುರಿತ ನಮ್ಮ ಇದುವರೆಗಿನ ಸಿದ್ಧಾಂತಗಳು, ತಿಳುವಳಿಕೆಗಳೇ ತಲೆಕೆಳಗಾಗುವ ಪ್ರಸಂಗಗಳು ಬರಬಹುದು. ಈ ಸಮಸ್ಯೆಗೆ ಔಷಧಿಗಳಿಗಿಂತಾ ಹೆಚ್ಚಾಗಿ ಸರಿಯಾದ ಜೀವನ ಕ್ರಮದ ನಿರ್ವಹಣೆಯೇ ಅಂದರೆ ನಿಯಮಿತವಾದ, ಕೊಬ್ಬಿನಂಶವಿರದ ಆಹಾರ ಸೇವನೆ, ಸೂಕ್ತವಾದ ವ್ಯಾಯಾಮ, ಮಾನಸಿಕ ಒತ್ತಡ ನಿವಾರಣಾ ಕ್ರಮಗಳ ಅನುಸರಣೆಯೇ ಸ್ವಲ್ಪ ಮಟ್ಟಿಗಿನ ಈ ಸಮಸ್ಯೆಯ ನಿಯಂತ್ರಣಕ್ಕೆ ಪರಿಹಾರಗಳು ಎಂದು ವೈದ್ಯರು ಹೇಳುವುದನ್ನು ಕೇಳಿದಾಗ ಪ್ರಕೃತಿಯ ಮುಂದೆ ನಾವು ಎಷ್ಟು ದುರ್ಬಲರು ಎಂದು ಅರಿವಾಗುತ್ತದೆ.
ತಾಯ್ತನವೇ ತಮ್ಮ ಸಾಧನೆಗೆ, ಏಳ್ಗೆಗೆ ಅಂಟಿದ ಶಾಪವೆಂದು ಒಂದು ಸ್ತ್ರೀ ಸಮೂಹ ಭಾವಿಸುತ್ತಿದೆ. ಹಾಗೇ ತಮಗೆ ಮಕ್ಕಳ ಬಂಧನವೇ ಬೇಡವೆಂದು ಒಂದು ಯುವ ಸಮೂಹ ಯೋಚಿಸುತ್ತಿದೆ. ಇದರ ಮಧ್ಯೆಯೇ ತಮ್ಮ ಬದುಕು ಸಾರ್ಥಕಗೊಳ್ಳಲು ಒಂದಾದರೂ ಮಗುವಿರಬೇಕೆಂದು ಯೋಚಿಸುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಮಾನವ ತನ್ನ ಮಿತಿಯನ್ನು ಅರ್ಥಮಾಡಿಕೊಳ್ಳದೇ ಸ್ವಾರ್ಥಿಯಾದಷ್ಟೂ ಅವನ ಅತಿಗಳನ್ನು ತಡೆಯಲು, ಸೃಷ್ಟಿಯ ಸಮತೋಲನವನ್ನು ಕಾಪಾಡಲು ಪ್ರಕೃತಿ ಸದ್ದಿಲ್ಲದೇ ತನ್ನ ತಂತ್ರ ಹೂಡುತ್ತಲೇ ಇರುತ್ತದೆ. ಅದನ್ನು ಎದುರಿಸಲು ನಾವು ಹೊಸ ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಲೇ ಇರಬೇಕಾಗುತ್ತದೆ.